ಆರೋಪಿಯನ್ನು ಸೈತಾನನಂತೆ ನೋಡುವುದಕ್ಕೂ ಮೊದಲು..
ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಲ್ಪಟ್ಟಿದ್ದ ಗುಲ್ಬರ್ಗದಲ್ಲಿ 1996ರ ಸುಮಾರಿಗೆ ಶಿಶುಕಾಮದ ಪ್ರಕರಣ ಮೇರೆ ಮೀರಿತ್ತು. ತಾಂಡಾಗಳ ಬಡ ಹೆಣ್ಣು ಮಕ್ಕಳನ್ನು ಅಪಹರಿಸಿ ನೆರೆ ರಾಜ್ಯಗಳಿಗೆ ಸಾಗಾಟ ಮಾಡಿ ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳುವ ಅಮಾನವೀಯ ಘಟನೆ ದಿನೇ ದಿನೇ ನಾಡಿನ ಜನರನ್ನು ಅಸಹಾಯಕರಂತೆ ಅಣುಕಿಸುವ ಹಂತ ತಲುಪಿತ್ತು. ಆಗ ಅಲ್ಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯುವ ಅಧಿಕಾರಿಯನ್ನು ಸರ್ಕಾರ ನಿಯೋಜಿಸಿತ್ತು. ಆತ ವೃತ್ತಿಯಿಂದ ವೈದ್ಯ. ಆಂಧ್ರ ಮೂಲದ ಪರಿಶಿಷ್ಟ ಜಾತಿಗೆ ಸೇರಿದವ. ಬಡವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದಲೇ ಕಷ್ಟಪಟ್ಟು ಐಪಿಎಸ್ ಪಾಸ್ ಮಾಡಿ ಖಾಕಿ ತೊಟ್ಟಿದ್ದ. ಮೇಲಾಗಿ ಮೃದು ಹೃದಯಿ; ಆದರೆ ಮಾತು ಒರಟು. ದಂಡ ಸಂಹಿತೆಯ ವಿಧಿಗಳನ್ನು ತೀರಾ ಎಕ್ಸಟ್ರೀಂ ಎನ್ನುವಷ್ಟರ ಮಟ್ಟಿಗೆ ಪಾಲಿಸುವಾತ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಆತ ಶಿಶುಕಾಮದ ಜಾಲವನ್ನು ಗುಲ್ಬರ್ಗ ಸುತ್ತಲಿನ ಪ್ರದೇಶದಲ್ಲಿ ತಹಬದಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ. ಆದರೆ ಅದೇ ಅಧಿಕಾರಿ ಈಗ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಅದು ಏತಕ್ಕೆ? ಬೆಂಗಳೂರಿನ ಕಾಫಿ ಶಾಪ್ ಒಂದರಲ್ಲಿ ಯುವತಿಯೊಬ್ಬರ ಭಾವಚಿತ್ರವನ್ನು ತಮ್ಮ ಮೊಬೈಲ್ನಿಂದ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರೀಕರಿಸಿದರು ಎಂಬ ಕಾರಣಕ್ಕೆ! ಎಸ್ಪಿಯಾಗಿದ್ದಾಗ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸುವುದನ್ನು ತಡೆಯಲು ಹಗಲು-ರಾತ್ರಿ ದುಡಿದು ಹೀರೋ ಆದವನೇ ಈಗ ಸ್ತ್ರೀ ಶೋಷಣೆ ಎಸಗಿದ ಖಳನಾಯಕ.
ಕಳೆದ ಎರಡು ದಿನಗಳಿಂದ ಈ ಕಾರಣಕ್ಕಾಗಿ ಮಾಧ್ಯಮದ ಗಮನ ಸೆಳೆದಿರುವ ಕೆಎಸ್ಆರ್ಪಿ ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರ ವೃತ್ತಾಂತವಿದು. ರವೀಂದ್ರನಾಥ್ ಮಹಿಳೆಯ ಫೋಟೋ ತೆಗೆದಿದ್ದಾರೆಯೇ? ಅಥವಾ ಅವರ ವೃತ್ತಿ ಬದುಕನ್ನು ಮುಗಿಸುವುದಕ್ಕೆ ರೂಪಿಸದೇ ಸಂಚೇ ಇದು? ಎಂಬುದನ್ನು ಚರ್ಚಿಸುವುದಾಗಲೀ, ಅಥವಾ ಅವರ ಹಳೆ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ಕ್ಲಿನ್ ಚಿಟ್ ನೀಡುವ ಪ್ರಯತ್ನವಾಗಲಿ ಇದಲ್ಲ. ಆದರೆ ಇಲಾಖೆಯಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ರವೀಂದ್ರನಾಥ್ ಹೀಗೆ ಮಾಡಿದರು ಎಂಬುದು ಮಾತ್ರ ಸದ್ಯಕ್ಕಂತೂ ಜೀರ್ಣಿಸಿಕೊಳ್ಳುವುದಕ್ಕೆ ಆಗದ ಸಂಗತಿ.
ಸಾಮಾನ್ಯವಾಗಿ ಸ್ತ್ರೀ ಕೇಂದ್ರಿತ ಅಪರಾಧ ಪ್ರಕರಣಗಳಲ್ಲಿ ಸಮಾಜ ನಂಬುವುದು ಮಹಿಳೆ ನೀಡುವ ಹೇಳಿಕೆಯನ್ನೇ. ಭಾರತದಂಥ ದೇಶದಲ್ಲಿ ಅದು ಒಪ್ಪಿತವೇ. ಏಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯ ತೀವ್ರ. ಹೆಚ್ಚಿನ ಸಂದರ್ಭದಲ್ಲಿ ಶೋಷಣೆಗೊಳಗಾದ ಮಹಿಳೆಯೂ ಅದನ್ನು ಬಹಿರಂಗಪಡಿಸಲು ಮುಂದಾಗುವುದಿಲ್ಲ. ಎಲ್ಲೋ ಒಂದೆರಡು ಪ್ರಕರಣಗಳಲ್ಲಿ ಧೈರ್ಯ ತೋರಬಹುದು. ನ್ಯಾಯ ಸಿಗಬಹುದು. ಉಳಿದಂತೆ ದಾಖಲಾಗುವ ಸ್ತ್ರೀ ಕೇಂದ್ರೀತ ಅಪರಾಧಗಳು ಪುರುಷ ಶೋಷಣೆಗೆ, ದ್ವೇಷ ತೀರಿಸಿಕೊಳ್ಳುವುದಕ್ಕೆ ಬಳಕೆಯಾಗುವುದು ಹೆಚ್ಚು ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ಸಿಆರ್ಬಿ ) ದಾಖಲೆಗಳು ಹೇಳುತ್ತವೆ. ಆದರೆ ಈ ಪ್ರಕರಣ ಅದಕ್ಕೆ ತೀರಾ ವಿರುದ್ಧ. ಇಲ್ಲಿ ನೊಂದ ಮಹಿಳೆಗೆ ಅಪರಾಧಿ ಯಾರು ಎಂಬುದು ಗೊತ್ತಿಲ್ಲ. ನಿಮ್ಮ ಭಾವಚಿತ್ರವನ್ನು ಈತ ತೆಗೆಯುತ್ತಿದ್ದಾನೆ ಎಂದು ಮೂರನೆಯ ವ್ಯಕ್ತಿ ಹೇಳಿದ ನಂತರವೇ ಜಾಗೃತರಾದವರು. ಇದರ ಜತೆಗೆ ಅಪರಾಧಿ ಸ್ಥಾನದಲ್ಲಿ ನಿಂತ ವ್ಯಕ್ತಿಯೂ ಅಷ್ಟೇ ಜವಾಬ್ದಾರಿಯುತ. ಮೇಲಾಗಿ ಕಾನೂನು ಪರಿಪಾಲಕ. ಮಾತ್ರವಲ್ಲ ಪ್ರಕರಣ ದಾಖಲಾದ ನಂತರ ತನಿಖೆಗೆ ಸಹಕರಿಸುವುದಕ್ಕಾಗಿ ವೃತ್ತಿಗೆ ರಾಜೀನಾಮೆ ಕೊಟ್ಟು, ನನ್ನನ್ನು ಬಂಧಿಸಿ ವಿಚಾರಣೆ ಮಾಡಿ ಎಂದು ಮಾತೃ ಇಲಾಖೆಗೆ ಸವಾಲು ಹಾಕುತ್ತಿದ್ದಾರೆ. ಸಂಚಿನ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಎರಡೇ ದಿನದಲ್ಲಿ ಈ ಪ್ರಕರಣ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಗೋಜಲುಗಳನ್ನು ಸೃಷ್ಟಿಸಿದೆ.
'ತನಿಖೆಯಿಂದ ಸತ್ಯ ಬಹಿರಂಗವಾಗುತ್ತದೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ' ಎಂದು ದಂಡ ಪ್ರಕ್ರಿಯೆ ಅನ್ವಯ ಪೊಲೀಸರು ತನಿಖೆ ಮಾಡುವಾಗ ನೀಡುವ ಸಾಮಾನ್ಯ ಹೇಳಿಕೆ. ಅದೇ ರೀತಿ ಅಪರಾಧ ವರದಿಗಾರಿಕೆಯಲ್ಲಿ 'ಆಫ್ ದಿ ರೆಕಾರ್ಡ್' ಮಾಹಿತಿ ಕಲೆ ಹಾಕುವುದು ವರದಿಗಾರನ ಪ್ರವೃತ್ತಿ. ಇವೆರಡೂ ಮಾರ್ಗದಲ್ಲಿ ಸಂಚರಿಸಿದಾಗಲೂ ಈ ಪ್ರಕರಣದಲ್ಲಿ ಲಭಿಸುತ್ತಿರುವುದು 'ಪ್ರತಿಕೂಲ' ಸತ್ಯಗಳೇ.
ಈ ದೇಶದ ಕಾನೂನು ಪ್ರಕಾರ ತನಿಖೆಯ ಅಂತಿಮ ಉದ್ದೇಶ ಸತ್ಯವನ್ನು ಬಹಿರಂಗಪಡಿಸುವುದು. ಆದರೆ ಸತ್ಯ ಮಾತ್ರ ಯಾವಾಗಲೂ ಕಾನೂನಿನ ಅಡಿಯಲ್ಲಿ ಅಡಗಿರುತ್ತದೆ. ಪೊಲೀಸ್ ಪರಿಭಾಷೆಯಲ್ಲಿ ಒಂದು ಪ್ರಕರಣದಲ್ಲಿ ಮೇಲ್ನೋಟದ ಸತ್ಯ (ಪ್ರೈಮಾಫೆಸಿ) ಮತ್ತು ನ್ಯಾಯಾಲಯದಲ್ಲಿ ಸಾಬೀತಾಗುವ ಸತ್ಯ ಬೇರೆ. ಆದರೆ ರವೀಂದ್ರನಾಥ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕಾಣುವ ಸತ್ಯ ಹಾಗೂ ಅದಕ್ಕೆ ವಿಧಿಸಲ್ಪಡುವ ಶಿಕ್ಷೆಗಾಗಿ ನಿಗದಿ ಪಡಿಸುವ ಕಾನೂನು ವಿಧಿಗಳು ತೀರಾ ವಿರುದ್ಧ. ಜತೆಗೆ ಆರೋಪಿ ಸ್ಥಾನದಲ್ಲಿ ನಿಂತಿರುವ ವ್ಯಕ್ತಿಯ ಟ್ರ್ಯಾಕ್ ರೆಕಾರ್ಡ್ ಕೂಡಾ!
ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ರವೀಂದ್ರನಾಥ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 354ರ ಅನ್ವಯ ಪ್ರಕರಣ ದಾಖಲಿಸಿದ್ದಾರೆ. (ಔಟರೇಜಿಂಗ್ ದಿ ಮಾಡೆಸ್ಟಿ ಆಫ್ ಎ ವುಮೆನ್) ಅಂದರೆ ಇದು ದೈಹಿಕ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ. ಸರಳವಾಗಿ ಹೇಳಬೇಕೆಂದರೆ ಅಸಭ್ಯತನ. ಆಗ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಆರೋಪ ಮಾಡಿದವಳ ಮೈ ಮುಟ್ಟಿ ಅಸಭ್ಯತನ ಪ್ರದರ್ಶಿಸಬೇಕು. ಆದರೆ ದೂರು ನೀಡಿದ ಮಹಿಳೆ ತನ್ನ ಮೈ ಮುಟ್ಟಿದ್ದಾರೆ ಎಂದು ರವೀಂದ್ರನಾಥ್ ವಿರುದ್ಧ ಆರೋಪಿಸಿಲ್ಲ. ತೆಗೆದಿರುವುದು ಆಕ್ಷೇಪಾರ್ಹ ಭಾವಚಿತ್ರ. ಒಂದೋ ಇದಕ್ಕೆ ಮಾಹಿತಿ ತಂತ್ರಜ್ಞಾನ ಕಾಯಿದೆ ಅನ್ವಯ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಸಾರ್ವಜನಿಕ ಕ್ಷೇತ್ರದಲ್ಲಿ ಅಸಭ್ಯವಾಗಿ ವರ್ತಿಸಿದ ವಿಧಿಯನ್ನು ಅನ್ವಯಿಸಬೇಕು. ಆದರೆ ಇದ್ಯಾವುದು ಆಗಿಲ್ಲ. ನೇರವಾಗಿ ಸೆಕ್ಷನ್ 354 ಹಾಕಲಾಗಿದೆ. ಇದಕ್ಕೆ ಕಾರಣ ಪ್ರೈಮಾಫೆಸಿ. ಏಕೆಂದರೆ ಪೊಲೀಸರು ವಶಪಡಿಸಿಕೊಂಡಿರುವ ರವೀಂದ್ರನಾಥ್ ಅವರ ಮೊಬೈಲ್ನಲ್ಲಿ ಮಹಿಳೆಯ ಎರಡು ಭಾವಚಿತ್ರವಿದೆ. ಅಲ್ಲಿಗೆ ರವೀಂದ್ರನಾಥ್ ವಿರುದ್ಧದ ಆರೋಪದಲ್ಲಿ ಮೇಲ್ನೋಟದ ಸತ್ಯಾಂಶವಿದೆ. ಆದರೆ ಈ ಮೇಲ್ನೋಟದ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಘಟನೆ ನಂತರ ರವೀಂದ್ರನಾಥ್ ತೋರಿಸುತ್ತಿರುವ ವರ್ತನೆ (ಕಂಡಕ್ಟ್ ) ಮತ್ತು ಅವರ ಪೂರ್ವ ಚಾರಿತ್ರ್ಯ ಅಡ್ಡಿಯುಂಟು ಮಾಡುತ್ತಿದೆ. ಈ ಘಟನೆಯ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ, ರವೀಂದ್ರನಾಥ್ ತಮ್ಮ ವೃತ್ತಿಗೆ ರಾಜೀನಾಮೆ ನೀಡಲು ನಿರ್ಧರಿಸಿದರು. ತಾನು ಆರೋಪಿ ಸ್ಥಾನದಲ್ಲಿದ್ದೇನೆ ಎಂಬ ಕಾರಣಕ್ಕೆ ಇಲಾಖೆ ವಾಹನವನ್ನು ಬಳಸದೇ ಆಟೋದಲ್ಲಿ ಘಟನಾ ಸ್ಥಳಕ್ಕೆ ತೆರಳಿದರು. ನಂತರ ಅಲ್ಲಿಂದ ಹಿಂದಿನ ದಿನ ತಮ್ಮನ್ನು ಪೊಲೀಸರು ಕರೆದೊಯ್ದ ಠಾಣೆಗೆ ಬಂದು ನನ್ನನ್ನು ಬಂಧಿಸಿ ತನಿಖೆ ನಡೆಸಿ. ಬಂಧನ ಶಿಕ್ಷೆಯಲ್ಲ. ತನಿಖೆಯ ಒಂದು ಭಾಗ ಎಂದರು. ನನಗೆ ನ್ಯಾಯ ಸಿಗದಿದ್ದರೂ ಚಿಂತೆಯಿಲ್ಲ. ನೊಂದ ಮಹಿಳೆಗೆ ನ್ಯಾಯ ಸಿಗಲಿ. ಈ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತನ್ನಿ ಎಂದು ಮಾಧ್ಯಮದ ಎದುರೇ ಗೋಳಾಡಿದರು. ತನಿಖೆಗೆ ತನ್ನ ಹುದ್ದೆ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಮಧ್ಯಾಹ್ನದ ಹೊತ್ತಿಗೆ ವೃತ್ತಿಗೆ ರಾಜೀನಾಮೆ ನೀಡಿ ಇನ್ನೊಬ್ಬ ಅಧಿಕಾರಿಯ ವಿರುದ್ಧ ಸಂಚಿನ ಆರೋಪ ಮಾಡಿದರು.
ಈ ಹಂತದಲ್ಲಿ ಮೊದಲು ಉಲ್ಲೇಖಿಸಿದ 'ಆಫ್ ದಿ ರೆಕಾರ್ಡ್' ಮಾಹಿತಿಯ ಎಳೆ ಮುಖ್ಯವಾಗುತ್ತದೆ. ಈ ಘಟನೆ ನಡೆದಿರುವುದು ಸೋಮವಾರ ಬೆಳಗ್ಗೆ 10.45ಕ್ಕೆ. ಕನ್ನಿಂಗ್ ಹ್ಯಾಂ ರಸ್ತೆಯ ಆಸ್ಪತ್ರೆಯಲ್ಲಿ ವೈದ್ಯ ಪರೀಕ್ಷೆಗೆ ಬಂದಿದ್ದ ರವೀಂದ್ರನಾಥ್ ಸಮೀಪದ ಕಾಫಿ ಶಾಪ್ಗೆ ಹೋಗಿದ್ದಾರೆ. ಈ ಹಿಂದೆ ಎಂಎಸ್ಐಎಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರವೀಂದ್ರನಾಥ್ ಇದೇ ಕಾಫಿ ಶಾಪ್ಗೆ ಆಗಾಗ ಹೋಗುತ್ತಿದ್ದರು. ಘಟನೆ ನಡೆದ ದಿನ ರವೀಂದ್ರನಾಥ್ ಎದುರಿಗೆ ಇಬ್ಬರು ಮಹಿಳೆಯರಿದ್ದರು. ಆಗ ರವೀಂದ್ರನಾಥ್ ಅವರ ಫೋಟೋ ತೆಗೆದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅವರು ಇಲ್ಲ ಎಂದಿದ್ದಾರೆ. ಆಗ ಶ್ರೀಧರ್ ಎನ್ನುವ ವ್ಯಕ್ತಿ ಮಧ್ಯಪ್ರವೇಶಿ ಆರೋಪಿಯ ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡಿದ್ದಾರೆ. ನಂತರ ಗಲಾಟೆ ನಡೆದು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿನ ಸಬ್ಇನ್ಸ್ಪೆಕ್ಟರ್ ರವೀಂದ್ರನಾಥ್ ಬಟ್ಟೆ ಬಿಚ್ಚಿಸಿ ಹಲ್ಲೆ ನಡೆಸಿದ್ದಾರೆ. ನಾನು ಐಪಿಎಸ್ ಅಧಿಕಾರಿ ಎಂದು ಗುರುತಿನ ಪತ್ರ ತೋರಿಸಿದರೂ ಲಾಕಪ್ನಲ್ಲಿ ಕೂರಿಸಲಾಗಿದೆ. ಆಮೇಲೆ ಸತ್ಯ ಗೊತ್ತಾದ ನಂತರ ಪರಸ್ಪರ ಒಡಂಬಡಿಕೆ ನಡೆದಿದೆ. ಆದರೆ ರವೀಂದ್ರನಾಥ್ ವಿರುದ್ಧ ರಾತ್ರಿ ಹೊತ್ತಿಗೆ ಪ್ರಕರಣ ದಾಖಲಾಗಿದೆ. ಒಡಂಬಡಿಕೆ ಸಂದರ್ಭದಲ್ಲಿ ರವೀಂದ್ರನಾಥ್ ಎಡಿಜಿಪಿ ದರ್ಜೆ ಅಧಿಕಾರಿ ಎಂಬುದು ಬಹಿರಂಗವಾಗಿದೆ. ಆದರೆ ದೂರಿನಲ್ಲಿ ಅಪರಿಚಿತ ವ್ಯಕ್ತಿ ಎಂದಿದೆ. ಮೇಲಾಗಿ ದೂರು ಕೊಟ್ಟವರು ಮಾಜಿ ಪತ್ರಕರ್ತೆ. ಮರುದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅವರ ದೂರು ಪ್ರತಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಿಂದ ತೊಂದರೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾದರೆ ದೂರಿನಲ್ಲಿ ಏಕೆ ಅಪರಿಚತ ವ್ಯಕ್ತಿ ಎಂದು ನಮೂದಿಸಿದರು? ಮೈ ಮುಟ್ಟಿಲ್ಲ ಎಂದಿರುವಾಗ ಪೊಲೀಸರು 354 ಹಾಗೂ 506 ಸೆಕ್ಷನ್ ಏಕೆ ಹಾಕಿದರು? ಈ ಪ್ರಕರಣದಲ್ಲಿ ಮಹಿಳೆಗೆ ಸಹಾಯ ಮಾಡಿದ ಶ್ರೀಧರ್ ಎಂಬ ವ್ಯಕ್ತಿ ನಂತರ ಏಕೆ ನಿಗೂಢವಾಗಿ ಮರೆಯಾದರು ಎಂಬ ಪ್ರಶ್ನೆ ಸಹಜ.
ಪೊಲೀಸ್ ಪರಿಭಾಷೆಯಲ್ಲೇ ಹೇಳುವುದಾದರೆ ಕಾನೂನು ಅದರದ್ದೇ ಕ್ರಮ ತೆಗೆದುಕೊಳ್ಳುತ್ತದೆ. ಸತ್ಯ ಬಹಿರಂಗವಾಗುತ್ತದೆ. ಆದರೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಒಡಂಬಡಿಕೆಯಾದ ನಂತರ ರಾತ್ರಿ ದೂರು ದಾಖಲಾಗುವವರೆಗೆ ಏನೇನಾಯ್ತು ಎಂಬುದೂ ಬಹಿರಂಗವಾಗಬೇಕಲ್ಲವೇ? ರವೀಂದ್ರನಾಥ್ ಆರೋಪಿಸುವ ಸಂಚು ಇಲ್ಲಿಂದಲೇ ಆರಂಭವಾಗಿರಬಹುದಲ್ಲವೇ? ಈ ಎಲ್ಲ ಅನುಮಾನಗಳು ಸಹಜ. ಏಕೆಂದರೆ ಐಪಿಎಸ್ ವೃತ್ತಿ ಮಾತ್ಸರ್ಯಕ್ಕೆ ಘಟಾನುಘಟಿ ಅಧಿಕಾರಿಗಳೇ ಬಲಿಯಾಗಿದ್ದಾರೆ. ಅದೇನೆ ಇರಲಿ. ಈ ಪ್ರಕರಣದಲ್ಲೂ ಲಾ ವಿಲ್ ಟೇಕ್ ಇಟ್ಸ್ ಓನ್ ಕೋರ್ಸ್. ಅಲ್ಲಿಯವರೆಗೆ ಕಾಯೋಣ.
-ರಾಘವೇಂದ್ರ ಭಟ್
ಕನ್ನಡಪ್ರಭ, rythmraghu@gmail.com