ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈ ಜಯವನ್ನು ನಾವು ಹೇಗೆ ನೋಡಬೇಕು?

Srinivasa Murthy VN
Updated On : 30 May 2014, 12:53 pm

ನರೇಂದ್ರ ಮೋದಿ ಪಾಕಿಸ್ತಾನದ ವಿಷಯದಲ್ಲಿ ಅಚ್ಚರಿಯ ನಡೆ ಇಟ್ಟರು ಎಂಬ ಪ್ರಶಂಸೆ ಸಂದಾಯವಾಗಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫರೂ ಬರುವುದಕ್ಕಾಗಲೀ, ಬಂದ ಮೇಲಾಗಲೀ ಕ್ಯಾತೆ ತೆಗೆಯದೆ ಆಶ್ಚರ್ಯವನ್ನೇ ಹುಟ್ಟುಹಾಕಿದರು. ಇವೆಲ್ಲವಕ್ಕೂ ಪ್ರಧಾನಿ ಮೋದಿಯವರಿಗೆ ಹೊಗಳಿಕೆ ಸಲ್ಲುತ್ತಿರುವ ಗಳಿಗೆಯಲ್ಲಿ ಪಾಕಿಸ್ತಾನವು ಅವರ ಜಯವನ್ನು ಹೇಗೆ ನೋಡುತ್ತಿದೆ ಎಂಬುದು ಮುಖ್ಯವಾಗುತ್ತದೆ. ಈ ಲೇಖನವನ್ನು ಬರೆದವರು ಪಾಕಿಸ್ತಾನದ ರಾಯಭಾರಿ ಆಗಿದ್ದವರು. ಆ ದೇಶದ ವಿದೇಶ ನೀತಿ ಕುರಿತ ಪ್ರಮುಖ ಅಭಿಪ್ರಾಯ ನಿರೂಪಕರೂ ಹೌದು. ಹೀಗಾಗಿ ಇವರ ಬರಹ ಪ್ರಾತಿನಿಧಿಕವಾಗಿ ಪಾಕಿಸ್ತಾನದ ತಲ್ಲಣಗಳನ್ನು ನಮ್ಮೆದುರು ತೆರೆದಿಡುತ್ತದೆ. ಮೋದಿ ಮತ್ತು ಬಿಜೆಪಿ ಬಗ್ಗೆ ಪೂರ್ವಗ್ರಹಗಳಿರುವುದು ಈ ಬರವಣಿಗೆಯಲ್ಲಿ ನಿಮಗೆ ಗೋಚರಿಸಬಹುದು. ಅಂತೆಯೇ, ಜಿಹಾದಿ ಗುಂಪುಗಳು ಭಾರತದ ವಿಷಯದಲ್ಲಿ ಪ್ರಚೋದನಕಾರಿಯಾಗಿ ನಡೆದುಕೊಳ್ಳದಂತೆ ನೋಡಿಕೊಳ್ಳಬೇಕಿದೆ ಎಂಬ ಹೆದರಿಕೆಯ ಧ್ವನಿಯನ್ನೂ ಇಲ್ಲಿ ಗುರುತಿಸಬಹುದು. ಪಾಕಿಸ್ತಾನದ ಬೌದ್ಧಿಕ ವರ್ಗವು ಮೋದಿ ಯುಗದ ಬಗ್ಗೆ ಹೊಂದಿರುವ ಭಾವನೆಗಳು ನಮಗೆ ತಿಳಿದಿರಬೇಕು ಎಂಬ ಕಾರಣಕ್ಕೆ ಈ ಲೇಖನ..

ಮೋದಿ ಎಂಬ ಶಕ್ತಿ, ವಿರೋಧಿ ಪಕ್ಷಗಳನ್ನೆಲ್ಲ ಕೆಳಕ್ಕೆ ಕೆಡವಿ ಐತಿಹಾಸಿಕ ಗೆಲುವುನ್ನು ಸಾಧಿಸಿದೆ. 543 ಲೋಕಸಭಾ ಸ್ಥಾನಗಳಲ್ಲಿ 282 ಸ್ಥಾನಗಳನ್ನು ತನ್ನದಾಗಿಸಿಕೊಂಡು ಭಾರತದಲ್ಲೀಗ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗೇ ಒಕ್ಕೂಟಗಳ ಒತ್ತಡಕ್ಕೆ ಮಣಿದು ಕಠಿಣ ಒಪ್ಪಂದಗಳಿಗೆ ಒಪ್ಪಿಕೊಳ್ಳುವ ಅನಿವಾರ್ಯತೆಯಂತೂ ಆ ಸರ್ಕಾರಕ್ಕೆ ಎದುರಾಗುವ ಸಾಧ್ಯತೆ ಇಲ್ಲ. ಎನ್‌ಡಿಎ ಒಕ್ಕೂಟ ಒಟ್ಟಾರೆ 336 ಸ್ಥಾನಗಳನ್ನು ಗೆದ್ದಿರುವುದರಿಂದ, ನರೇಂದ್ರ ಮೋದಿಯವರಿಗೆ ಕಠಿಣ ನೀತಿಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಚುನಾವಣಾ ಪ್ರಚಾರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹಾದಿ ಸುಗಮವಾಗಿದೆ. ಕಾಂಗ್ರೆಸ್ ಪಕ್ಷವಂತೂ ನಲವತ್ನಾಲ್ಕು ಸ್ಥಾನ ಪಡೆದು ನೆಲಕಚ್ಚಿದೆ. ಆ ಪಕ್ಷದ ನೇತೃತ್ವದಲ್ಲಿ ಯುಪಿಎ ಒಕ್ಕೂಟಕ್ಕೆ ಒಟ್ಟಾರೆ ಗಳಿಸಲು ಸಾಧ್ಯವಾಗಿದ್ದು 58 ಸ್ಥಾನಗಳನ್ನಷ್ಟೆ.
ಈ ಬಾರಿಯ ಲೋಕಸಭೆಯಲ್ಲಿ ಮುಸಲ್ಮಾನರ ಪ್ರಾತಿನಿಧ್ಯ ಕೇವಲ 24 ಸ್ಥಾನಗಳಿಗಷ್ಟೇ ಸೀಮಿತವಾಗಿದೆ(4.4 ಪ್ರತಿಶತದಷ್ಟು), ಹಿಂದಿನ ಸರ್ಕಾರದಲ್ಲಿ ಆ ಸಂಖ್ಯೆ 30 ಸ್ಥಾನಗಳಷ್ಟಿತ್ತು. 1952ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಸಂಖ್ಯೆಯಲ್ಲಿ ಮುಸಲ್ಮಾನರಿಗೆ ಜಾಗ ಸಿಕ್ಕಿದೆ.(ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ 15 ಪ್ರತಿಶತ ಮುಸಲ್ಮಾನರಿದ್ದಾರೆ) 1984ರ ನಂತರ ಇದೇ ಮೊದಲ ಬಾರಿಗೆ ಪಕ್ಷವೊಂದು ಸ್ವಂತ ಬಲದ ಮೇಲೆ ಸರ್ಕಾರ ರಚಿಸಿದೆ. ಇನ್ನು ಬಿಜೆಪಿಯಂಥ ಹಿಂದೂ ರಾಷ್ಟ್ರವಾದಿ ಪಕ್ಷದ ಈ ಗೆಲುವು ಬಲಕ್ಕೆ ವಾಲುತ್ತಿರುವ ಭಾರತದ ಸಂಕೇತವಾಗಿದೆ. ನರೇಂದ್ರ ಮೋದಿಯವರ ಈ ಭಾರೀ ಗೆಲುವಿನ ಅಂತರಾರ್ಥವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಮೊದಲು ಬಿಜೆಪಿಯ ಸಿದ್ಧಾಂತ ಮತ್ತು ದಕ್ಷಿಣ ಏಶಿಯಾದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧವನ್ನು ರಚಿಸಹೊರಟಿರುವ ಈ ವ್ಯಕ್ತಿಯ ಗುಣವೆಂಥದ್ದು ಎನ್ನುವುದನ್ನೂ ತಿಳಿದುಕೊಳ್ಳಬೇಕಾಗುತ್ತದೆ. ಈ ಅಂಶಗಳನ್ನು ಪಾಕಿಸ್ತಾನದ ಕಾರ್ಯತಂತ್ರ ಗುರಿಗಳು ಮತ್ತು ಅನಿವಾರ್ಯತೆಗಳ ಪಕ್ಕದಲ್ಲಿಟ್ಟು ನೋಡಿ, ನಮ್ಮ ನೀತಿ ನಿರೂಪಕರಿಗೆ ಮಾರ್ಗದರ್ಶನ ನೀಡಬೇಕಿದೆ.
ಬಲಪಂಥೀಯ ಹಿಂದೂ ರಾಷ್ಟ್ರೀಯತಾವಾದಿ ಪಕ್ಷವಾಗಿರುವ ಬಿಜೆಪಿ, ಹಿಂದುತ್ವ ಸಿದ್ಧಾಂತ ಮತ್ತು ಹಿಂದೂ ರಾಷ್ಟ್ರೀಯತಾವಾದಕ್ಕೆ ಮರುಹುಟ್ಟುಕೊಡಲು ಕಟಿಬದ್ಧವಾಗಿದೆ. 1923ರಲ್ಲಿ ಹಿಂದುತ್ವ ಎನ್ನುವ ಪದವನ್ನು ಮೊಟ್ಟ ಮೊದಲು ಹುಟ್ಟುಹಾಕಿದ ವಿನಾಯಕ ದಾಮೋದರ್ ಸಾವರ್ಕರ್, 'ಹಿಂದುತ್ವ: ಹಿಂದು ಎಂದರೆ ಯಾರು?" ಎನ್ನುವ ಕಿರುಹೊತ್ತಿಗೆಯಲ್ಲಿ ಹೇಳಿರುವಂತೆಯೇ ಆ ಸಿದ್ಧಾಂತ ಹಿಂದು ರಾಷ್ಟ್ರೀಯತಾವಾದಕ್ಕೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳಿಗೂ ಅನ್ವಯವಾಗುತ್ತದೆ. ಅಂದರೆ, ಭಾರತೀಯ ಸಂಸ್ಕೃತಿಯನ್ನು ಹಿಂದೂ ಮೌಲ್ಯಗಳ ಹಿನ್ನೆಲೆಯಲ್ಲೇ ಉಲ್ಲೇಖಿಸುತ್ತದೆ ಹಿಂದುತ್ವ. ಮತ್ತು ಆ ಸಿದ್ದಾಂತ ಇಡೀ ಉಪಖಂಡವನ್ನು ಹಿಂದುಗಳ ಮಾತೃಭೂಮಿ ಎಂದು ಪರಿಗಣಿಸುತ್ತದೆ. ಮುಸ್ಲಿಂ ಆಕ್ರಮಣಕಾರರಿಂದ ಹಿಂದುಗಳ ತುಳಿತವಾಗಿದ್ದು, ಅಂಥ ಆಕ್ರಮಣಗಳಿಂದ ಉಂಟಾದ ಪ್ರಭಾವವನ್ನು ತಲೆಕೆಳಗು ಮಾಡಬೇಕು ಎಂದೂ ಕರೆಕೊಡುತ್ತದೆ.  ಹಿಂದುತ್ವ ಎನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಸಿದ್ಧಾಂತವಾಗಿದೆ. ಭಾರತದ ಮುಸಲ್ಮಾನರು ಮತ್ತು ಇನ್ನುಳಿದ ಅಲ್ಪಸಂಖ್ಯಾತರಿಗೆ ಈ ಸಿದ್ಧಾಂತ ಯಾವ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನುವುದನ್ನು ತಿಳುದುಕೊಳ್ಳಬೇಕಾದರೆ, 1938ರಲ್ಲಿ ಆರ್‌ಎಸ್‌ಎಸ್‌ನ ಮಹೋನ್ನತ ನಾಯಕ ಮ.ಸ. ಗೊಳವಾಲ್ಕರ್ ಬರೆದ "We, or Our Nation Defined'' ಎನ್ನುವ ಕೃತಿಯನ್ನು ಓದಬೇಕು. ಅದರಲ್ಲವರು, "ಭಾರತದಲ್ಲಿರುವ ಅನ್ಯಧರ್ಮೀಯರು ಹಿಂದೂ ಸಂಸ್ಕೃತಿ ಅಥವಾ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಹಿಂದೂ ಧರ್ಮವನ್ನು ಗೌರವಿಸಬೇಕು. ಹಿಂದೂಯೇತರರಿಗೆಂದೇ ವಿಶೇಷ ಸವಲತ್ತುಗಳನ್ನು ನೀಡಬಾರದು" ಎಂದು ಹೇಳುತ್ತಾರೆ.
ಇವೆಲ್ಲದರವುಗಳಿಂದಾಗಿಯೇ ಮುಸಲ್ಮಾನರಿಂದ ಇಸ್ಲಾಂನ ತತ್ವಕ್ಕೆ ಮತ್ತು ತಮ್ಮ ಸಾಂಸ್ಕೃತಿಕ ಮೌಲ್ಯಗಳಿಗೆ ಅನುಗುಣವಾಗಿ ತಮ್ಮ ಬದುಕನ್ನು ನಡೆಸಲು ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರದ ಬೇಡಿಕೆ ಹುಟ್ಟಿಕೊಂಡಿತು. ಇದೇನೇ ಇದ್ದರೂ ಈ ಕಾರಣಕ್ಕಾಗಿ ತನ್ನಲ್ಲಿರುವ ಅಲ್ಪಸಂಖ್ಯಾತರೊಂದಿಗಿನ ತನ್ನ ನಡವಳಿಕೆಯನ್ನು ಪಾಕಿಸ್ತಾನ ಸಮರ್ಥಿಸಿಕೊಳ್ಳುವಂತಿಲ್ಲ. ನಮ್ಮ ಸಂವಿಧಾನದಲ್ಲಿ ಸೂಚಿಸಿರುವಂತೆ ಅವರೂ ಎಲ್ಲಾ ಮೂಲಭೂತ ಹಕ್ಕುಗಳಿಗೆ ಅರ್ಹರಾಗಿರುತ್ತಾರೆ.  ನರೇಂದ್ರ ಮೋದಿ 1971ರಿಂದಲೂ ಆರ್‌ಎಸ್‌ಎಸ್‌ನ ಭಾಗವಾಗಿದ್ದಾರೆ ಮತ್ತು ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಈ ಸಿದ್ಧಾಂತ ಅಕ್ಷರಶಃ ಗೋಚರಿಸಿದ್ದು 2002ರ ಗುಜರಾತ್ ಗಲಭೆಯ ವೇಳೆ. ಆ ಸಮಯದಲ್ಲಿ ಮೋದಿ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಮೋದಿ ತಾವು ಆ ಹತ್ಯಾಕಾಂಡಕ್ಕೆ ಕಾರಣರಲ್ಲ ಎಂದು ಹೇಳುತ್ತಾ ಬಂದಿದ್ದಾರೆ.  ಇನ್ನು ಬಿಜೆಪಿಯ ಚುನಾವಣಾ ಭರವಸೆಗಳಲ್ಲಿ ರಾಮಮಂದಿರ ನಿರ್ಮಾಣದಂಥ ವಿಷಯಗಳು, ಭಾರತೀಯ ಸಂವಿಧಾನದ ಆರ್ಟಿಕಲ್ 370ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು(ಸ್ವಾಯತ್ತ ಅಧಿಕಾರವನ್ನು) ನಿಲ್ಲಿಸಬೇಕು ಮತ್ತು ಭಾರತದ ಪರಮಾಣು ಕಟ್ಟುಪಾಡುಗಳ ಪುನವಿರ್ಮರ್ಶೆಯಾಗಬೇಕು ಎನ್ನುವ ಸಂಗತಿಗಳಿವೆ. ಆದರೆ ಈ ಅಂಶಗಳ ಆಂತರ್ಯದಲ್ಲಿ ಆಂತರಿಕ ಕಲಹ ಮತ್ತು ಪಾಕಿಸ್ತಾನದೊಂದಿಗಿನ ತಿಕ್ಕಾಟದ ಬೀಜಗಳಿವೆ. ಈ ಕಾರಣಕ್ಕಾಗಿಯೇ...ಆರ್‌ಎಸ್‌ಎಸ್‌ನ ತತ್ವ ಮತ್ತು ರಾಜಕೀಯವನ್ನು ಅಳವಡಿಸಿಕೊಂಡಿರುವ ಮೋದಿ ತೀವ್ರಗಾಮಿಯಾಗಿ ರೂಪಾಂತರವಾಗುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಬಹುದು. ಇನ್ನು ಅವರು ಎಲ್ಲರನ್ನೂ ಒಳಗೊಂಡ ರಾಜಕೀಯ ನಡೆಸುವುದು ಅನುಮಾನವೇ. ಸರಳವಾಗಿ ಹೇಳಬೇಕೆಂದರೆ, ಪಾಕಿಸ್ತಾನದ ದೃಷ್ಟಿಗೆ ಅಟಲ್ ಬಿಹಾರಿ ವಾಜಪೇಯಿ ಹೇಗೆ "Right man in the wrong party' ಎಂದು ಗೋಚರಿಸಿದರೋ, ನರೇಂದ್ರ ಮೋದಿ wrong man in the wrong party ಎಂಬಂತೆ ಕಾಣಿಸುತ್ತಿದ್ದಾರೆ. ಹಾಗಾಗೇ ಅವರು ಮನಮೋಹನ್ ಸಿಂಗ್ ಸರ್ಕಾರದಂತೆ ಪಾಕಿಸ್ತಾನದೆಡೆಗೆ ಮೃದು ಧೋರಣೆ ತಾಳುತ್ತಾರೆ ಎನ್ನುವ ಸಾಧ್ಯತೆ ತೀರಾ ಕಡಿಮೆ.  ಇನ್ನೊಂದೆಡೆ ನರೇಂದ್ರ ಮೋದಿ ಮತ್ತು ನವಾಜ್ ಷರೀಫ್ ತಮ್ಮ ದೇಶಗಳ ಅಭಿವೃದ್ಧಿಗಾಗಿ ಬದ್ಧರಾಗಿರುವುದರಿಂದ ಅವರುಗಳು ಪ್ರಯತ್ನಪಟ್ಟರೆ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಯ ಮಾರ್ಗ ಸುಲಭವಾಗಿದೆ ಎನ್ನುವುದಂತೂ ಸತ್ಯ. ಈ ಎರಡು ರಾಷ್ಟ್ರಗಳು ಆರ್ಥಿಕ ಪ್ರಗತಿಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕೆಂದರೆ, ಶಾಂತಿಯುತ ವಾತಾವರಣದ ಅಗತ್ಯವಿರುತ್ತದೆ. ಆದರೆ ಪಾಕಿಸ್ತಾನ ಮತ್ತು ಭಾರತದ ಸಂಬಂಧದಲ್ಲಿ ದೀರ್ಘಕಾಲೀನ ಬಿಕ್ಕಟ್ಟು ನಿರ್ಮಾಣವಾಗಿದೆ ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಇದಕ್ಕೆಲ್ಲ ದಕ್ಷಿಣಾ ಏಶ್ಯಾದಲ್ಲಿನ ಭಾರತದ ಬಿಗಿಪಟ್ಟು ಮತ್ತು ಕಾಶ್ಮೀರದ ವಿಷಯದಲ್ಲಿ ಅದರ ಧೋರಣೆ ಕಾರಣ. ಈ ಎಲ್ಲಾ ಸಂಗತಿಗಳಿಂದಾಗಿ ದಶಕಗಳಿಂದ ದ್ವಿಪಕ್ಷೀಯ ಸಂಬಂಧ ಎನ್ನುವುದು ಜಾಳು ಜಾಳಾಗಿಯೇ ಇದೆ. ಮುಂದೆಯೂ ಅದು ದುರ್ಬಲವಾಗಿಯೇ ಇರಲಿದೆಯೇನೋ?  
ನರೇಂದ್ರ ಮೋದಿಯವರ ಹಿನ್ನೆಲೆ, ಬಿಜೆಪಿ ನೀಡಿರುವ ಭರವಸೆಗಳು ಮತ್ತು ಪ್ರಬಲ ಹಿಂದುವಾದವನ್ನು ನಾವಿಲ್ಲಿ ಮರೆಯಬಾರದು. ಹಾಗಾಗೇ ಪಾಕಿಸ್ತಾನಿಗಳು ಯಾವುದೇ ಸಾಹಸ ಅಥವಾ ಪ್ರಚೋದನಾಕಾರಿ ಚಟುವಟಿಕೆಗಳಲ್ಲಿ ತೊಡಗಬಾರದು. ಇನ್ನು ನಮ್ಮಲ್ಲಿರುವ ಹಲವಾರು ಜಿಹಾದಿ ಸಂಘಟನೆಗಳ ಮೇಲೆ ಹಿಡಿತ ಸಾಧಿಸಿ ಅವು ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಕ್ಕಟ್ಟು ತಂದೊಡ್ಡದಂತೆ ಎಚ್ಚರಿಕೆ ವಹಿಸಬೇಕಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನಾವು ನಮ್ಮ ದೇಶದ ಆಂತರಿಕ ಐಕ್ಯತೆ, ಸ್ಥಿರತೆ ಮತ್ತು ಭದ್ರತೆಯನ್ನು ಗಟ್ಟಿಯಾಗಿಸಬೇಕಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಭಾರತದೊಂದಿಗೆ ಸಂಬಂಧ ಸ್ಥಾಪನೆಯ ಹೊಸ ಸಾಧ್ಯತೆಗಳನ್ನು ಹುಡುಕುವಾಗಲೂ, ಎದುರಾಗಬಹುದಾದ ಕೆಟ್ಟ ಸನ್ನಿವೇಶಕ್ಕೂ ಸಿದ್ಧರಾಗಿರಬೇಕು. ದುರ್ದೈವವೆಂದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕಾದ ಈ ಪ್ರಮುಖ ಸಮಯದಲ್ಲಿ, ಸರ್ಕಾರ ಮತ್ತು ಮಿಲಿಟರಿ ಮುಸುಕಿನ ಗುದ್ದಾಟದಲ್ಲಿ ತೊಡಗಿವೆ.

-ಜಾವೆದ್  ಹುಸೇನ್,
ಪಾಕಿಸ್ತಾನದ ನಿವೃತ್ತ ರಾಯಭಾರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement