ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತಕ್ಕೆ ಈಗ ಸಾರ್ಕ್ ರಾಷ್ಟ್ರಗಳಿಗೆಲ್ಲ ನಾಯಕನಾಗುವ ಸಮಯ

ನವದೆಹಲಿಯಲ್ಲಿ ನಡೆದಿದ್ದು ಕೇವಲ ಔಪಚಾರಿಕ ಪ್ರಮಾಣ ವಚನ ಸಮಾರಂಭವಾಗಿರಲಿಲ್ಲ.

Srinivasa Murthy VN
Updated On : 30 May 2014, 1:49 am

ಮೇ 26ರಂದು ನವದೆಹಲಿಯಲ್ಲಿ ನಡೆದಿದ್ದು ಕೇವಲ ಔಪಚಾರಿಕ ಪ್ರಮಾಣ ವಚನ ಸಮಾರಂಭವಾಗಿರಲಿಲ್ಲ. ಅಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯಿಂದ ನಿಯೋಜಿಸಿದ ಅನೌಪಚಾರಿಕ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನವೂ ಆಗಿತ್ತು. ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಧಾನಿಯಾಗಿ ಮನಮೋಹನಸಿಂಗ್ ಮಾಡಲಾಗದ್ದನ್ನು ಮೋದಿ ಸುಲಭದಲ್ಲಿ ಮಾಡಿದ್ದರು. ಸಾರ್ಕ್ ರಾಷ್ಟ್ರಗಳೆಲ್ಲ ಒಂದಾಗಿ ಅಭಿವೃದ್ಧಿ ಪಥದಲ್ಲಿ ಜೋರಾಗಿ ನಡೆಯಬೇಕಾದ ಅಗತ್ಯವನ್ನು ಶೀಘ್ರದಲ್ಲಿ ತಿಳಿಸಿದ ಮೋದಿಯಿಂದ ವಿಶಿಷ್ಟವಾದ, ಅಷ್ಟೇ ಪರಿಣಾಮಕಾರಿಯಾದ ಪಥಸಂಚಲನ.
ಮೇ 27ರಂದು ಪ್ರಧಾನಿ ಮೋದಿ ಪಾಕಿಸ್ತಾನದ ಪ್ರಧಾನಿ, ಬಾಂಗ್ಲಾದೇಶದ ಸ್ಪೀಕರ್, ಆಫ್ಘಾನಿಸ್ತಾನದ ಅಧ್ಯಕ್ಷ, ನೇಪಾಳದ ಪ್ರಧಾನಿ ಮತ್ತು ಶ್ರೀಲಂಕಾದ ಅಧ್ಯಕ್ಷರುಗಳ ಜತೆಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಹಾಗೆ ನೋಡಿದರೆ ಸಾರ್ಕ್‌ನ ತಳಹದಿಯಾದ ಚಾರ್ಟರ್ ಪ್ರಕಾರ ಅದರ ಶೃಂಗಸಭೆಗಳಲ್ಲಾಗಲಿ, ಇತರ ಕಲಾಪಗಳಲ್ಲಾಗಲೀ ದ್ವಿಪಕ್ಷೀಯ ವಿಷಯಗಳ ಚರ್ಚೆಗೆ ಅವಕಾಶವೇ ಇಲ್ಲ. ಬಹುಪಕ್ಷೀಯ ವಿಷಯಗಳ ಚರ್ಚೆಗೆ ಮಾತ್ರ ಅಲ್ಲಿ ಅನುವು ಮಾಡಿಕೊಡಲಾಗಿದೆ. ಆದರೆ 2014 ನವೆಂಬರ್ ತಿಂಗಳಿನಲ್ಲಿ ನೇಪಾಳದ ರಾಜಧಾನಿಯಲ್ಲಿ ಜರುಗಲಿರುವ ಸಾರ್ಕ್ ಶೃಂಗಸಭೆಗೆ ಮೋದಿ ಈಗಾಗಲೇ ಸಿದ್ಧತೆ ಮಾಡಿಕೊಂಡಂತಿದೆ. ಆಗ ನಡೆಯಲಿರುವ ಬಹುಪಕ್ಷೀಯ ಚರ್ಚೆಗಳಿಗೆ ಬೇಕಾದ ಹೋಮ್ ವರ್ಕ್ ಅನ್ನು ಭಾರತದ ಪ್ರಧಾನಿ ಈಗಾಗಲೇ ಆರಂಭಿಸಿದ್ದು ವಿಶೇಷ. ಕೆಲವು ಸಾರ್ಕ್ ಮುಖಂಡರುಗಳ ನಾಡಿ ಮಿಡಿತವನ್ನು ಮೋದಿ ಪರೀಕ್ಷಿಸಿ ಬಿಟ್ಟಿದ್ದಾರೆ.
ಸಾರ್ಕ್ (ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋಆಪರೇಷನ್) ಹುಟ್ಟುವಾಗಲೇ ವಿಳಂಬವಾಗಿತ್ತು. ಬೆಳೆಯುವಾಗ ಇನ್ನಷ್ಟು ವಿಳಂಬ. ಸಾರ್ಕ್ ರಾಷ್ಟ್ರಗಳ ಮುಖಂಡರಾಗಿ ಮೋದಿ ಬೆಳಗುವಾಗ ವಿಳಂಬವಾಗದಿರಲೆಂಬುದು ಅಭಿವೃದ್ಧಿ ಪಥಕ್ಕೆ ಪೂರಕವಾದ ದೃಷ್ಟಿಯುಳ್ಳ ಎಲ್ಲ ಪ್ರಾಮಾಣಿಕ ಹಾರೈಕೆಯಾಗಿದೆ. ಸಾರ್ಕ್ ರಾಷ್ಟ್ರಗಳ ಅಭಿವೃದ್ಧಿಯ ಸಾಧ್ಯತೆಯನ್ನು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಂದೋ ಗುರುತಿಸಲಾಗಿದೆ. ಈ ರಾಷ್ಟ್ರಗಳಿಗೆ ಈಗ ಭಾರತ ನಾಯಕತ್ವ ನೀಡಬೇಕಾಗಿದೆ.
28 ರಾಷ್ಟ್ರಗಳ ಸದಸ್ಯತ್ವವುಳ್ಳ ಯುರೋಪ್ ಒಕ್ಕೂಟ, ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ರಾಷ್ಟ್ರಗಳ ಬೃಹತ್ ಸದಸ್ಯತ್ವ ಹೊಂದಿದ ನಾಪ್ಟಾ ಮತ್ತು ಕೆಲವು ಏಷಿಯನ್ ರಾಷ್ಟ್ರಗಳ ಸದಸ್ಯತ್ವವುಳ್ಳ ಏಪ್ಯಾನ್ ವ್ಯಾಪಾರ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಪರಸ್ಪರ ಸಹಕರಿಸಿಕೊಳ್ಳುವ ಧೋರಣೆಯುಳ್ಳ ಪ್ರಾದೇಶಿಕ ಶಕ್ತಿಗಳು- ಈ ಎಲ್ಲ ಶಕ್ತಿಗಳ ಸವಾಲನ್ನು ಎದುರಿಸುವ ಉದ್ದೇಶದೊಂದಿಗೆ ಸಾರ್ಕ್ 1985 ಡಿಸೆಂಬರ್ 8ರಂದು ನೇಪಾಳದ ಕಠ್ಮಂಡುವಿನಲ್ಲಿ ವಿದ್ಯುಕ್ತವಾಗಿ ಹುಟ್ಟಿಕೊಂಡಿತು. ಇದರ ಜನನದ ಹಿಂದೆ ಧೀರ್ಘವಾದ ಹೆರಿಗೆ ನೋವು. ಜನನದ ನಂತರ ನೋವಿನ ಪರಿಣಾಮ ಬಹಳ ವರ್ಷ ಉಳಿದುಕೊಂಡಿದೆ!
70ರ ದಶಕದ ಉತ್ತರಾರ್ಧದ ವಿದ್ಯಮಾನಗಳು ನೆನಪಾಗುತ್ತವೆ. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ರಫ್ತು-ಆಮದು ಸುಂಕಗಳ ತಡೆಗೋಡೆಯಿಲ್ಲದ ವ್ಯಾಪಾರಿ ವಲಯ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಪರಸ್ಪರ ವಿಶ್ವಾಸಗಳ ಸೃಷ್ಟಿಗಾಗಿ ದೀರ್ಘಕಾಲ ಮಾತುಕತೆ ನಡೆಸಿದವು. 1981 ಏಪ್ರಿಲ್ ತಿಂಗಳಿನಲ್ಲಿ ಕೊಲಂಬೋದಲ್ಲಿ ಏಳು ರಾಷ್ಟ್ರಗಳ ಪ್ರತಿನಿಧಿಗಳು ಭೇಟಿಯಾಗಿದ್ದು ಈಗ ಇತಿಹಾಸ. ಆಗಿನ ಬಾಂಗ್ಲಾದೇಶದ ಅಧ್ಯಕ್ಷ ಝಿಯಾ ರೆಹಮಾನ್ ವ್ಯಾಪಾರ ಅಭಿವೃದ್ಧಿ ವಿಷಯಗಳೊಂದಿಗೆ ಭದ್ರತೆಯ ಪ್ರಸ್ತಾಪವನ್ನು ಮಾಡಿದಾಗ ಭಾರತ ಮತ್ತು ಪಾಕಿಸ್ತಾನ ಸಂಶಯ ದೃಷ್ಟಿ ತಾಳಿದ್ದವು. ದಕ್ಷಿಣ ಏಷ್ಯಾದಲ್ಲಿ ತನ್ನ ವಿದೇಶಿ ವ್ಯಾಪಾರ -ವಹಿವಾಟುಗಳನ್ನು ಬೆಳೆಸಿಕೊಂಡು ಭಾರತ ಪಾಕಿಸ್ತಾನದ ವಿರುದ್ಧ ಸಣ್ಣ ಸಣ್ಣ ರಾಷ್ಟ್ರಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಸಿದೆ ಎಂಬುದು ಪಾಕಿಸ್ತಾನದ ಪ್ರತಿನಿಧಿಗಳ ಅನುಮಾನ. ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಆರ್ಥಿಕ- ಪ್ರಾಬಲ್ಯ ವೃದ್ಧಿಸಿಕೊಳ್ಳಲು ಭಾರತ ಮುಂದಾಗಬಹುದೆಂಬ ಶಂಕೆ- ಪಾಕಿಸ್ತಾನವನ್ನು ಕಾಡುತ್ತಿತ್ತು. ಸಂದೇಹದ ಪ್ರವೃತ್ತಿಯಿಂದಾಗಿ ಅಭಿವೃದ್ಧಿ ಕುಂಠಿತಗೊಳ್ಳುವ ಸಾಧ್ಯತೆಯನ್ನು ಈಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಮೇ 27ರ ಪತ್ರಿಕಾಗೋಷ್ಠಿಯಲ್ಲಿ ನವದೆಹಲಿಯಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇದು ಮೋದಿ ಇಟ್ಟ ದಿಟ್ಟ ಹೆಜ್ಜೆಯಿಂದ ಸಾಧ್ಯವಾಗಿದೆ.
ಅನುಮಾನ, ಸಂಶಯಗಳ ದಿನಗಳು ಉರುಳುತ್ತಿದ್ದಂತೆ 1983ರಲ್ಲಿ ಮುಂದಾಲೋಚನೆಗೆ ಹೆಸರಾದ ಆಗಿನ ವಿದೇಶಾಂಗ ಸಚಿವ ಪಿ.ವಿ. ನರಸಿಂಹರಾವ್ ದೊಡ್ಡ ಕಸರತ್ತು ಮಾಡಿದರು. ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ-ಹೀಗೆ ಏಳು ರಾಷ್ಟ್ರಗಳ ಪ್ರತಿನಿಧಿಗಳನ್ನು ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಸೇರಿಸುವಲ್ಲಿ ಯಶಸ್ವಿಯಾದರು. ಸಾರ್ಕ್‌ನ ಘೋಷಣೆಯಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ, ಟೆಲಿಕಮ್ಯುನಿಕೇಷನ್, ಹವಾಮಾನ ಅಧ್ಯಯನ, ಆರೋಗ್ಯ ಮತ್ತು ಜನಸಂಖ್ಯಾ ನಿಯಂತ್ರಣ ಮತ್ತು ಉತ್ಪಾದಕತೆಗಳಂಥ ಐದು ಮಹತ್ತರ ರಂಗಗಳನ್ನೊಳಗೊಂಡ ಸಮಗ್ರ ಕ್ರಿಯಾ ಯೋಜನೆಗೆ ತಾತ್ವಿಕವಾಗಿ ಏಳು ರಾಷ್ಟ್ರಗಳ ಒಪ್ಪಿಗೆ. ಈ ಐದೂ ರಂಗಗಳಲ್ಲಿ ಈಗ ಭಾರತ ಉಳಿದೆಲ್ಲ ಸಾರ್ಕ್ ದೇಶಗಳಿಗಿಂತ ಹೆಚ್ಚಿನ ಸಾಧನೆ ಮಾಡಿದೆ. ಮೋದಿ ಪ್ರಧಾನಿಯಾಗಿ ಸುಭದ್ರ ಸರ್ಕಾರ ರಚನೆಯಾಗಿರುವಾಗ ಈ ಐದು ರಂಗಗಳಲ್ಲಿ ಭಾರತದ ಮಾರ್ಗದರ್ಶನದೊಂದಿಗೆ ಇತರ ಸಾರ್ಕ್ ದೇಶಗಳು ಮುನ್ನಡೆಯಬೇಕಾಗಿದೆ. ಸಾರ್ಕ್ ವಿಸ್ತೃತಗೊಂಡಿದ್ದು 2007ರಲ್ಲಿ. ಆಫ್ಘಾನಿಸ್ತಾನದ ಸಾರ್ಕ್‌ನ ಸದಸ್ಯತ್ವವನ್ನು ಆ ವರ್ಷ ಆಗಿನ ಭಾರತದ ಪ್ರಧಾನಿ ಮನಮೋಹನಸಿಂಗ್ ದೆಹಲಿಯಲ್ಲಿ ಘೋಷಿಸಿದ್ದರು. ಏಷ್ಯಾ ಖಂಡದ ಮಧ್ಯ ಭಾಗದಲ್ಲಿರುವ ದೊಡ್ಡ ದೇಶವೊಂದು ಸೇರಿದ್ದರಿಂದ ಸಾರ್ಕ್ ರಾಜಕೀಯವಾಗಿ ಬೆಳೆದಿದೆ. ಈಗ ಅದು ಆರ್ಥಿಕವಾಗಿ ಬಲಾಢ್ಯವಾಗಬೇಕು.
ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸಾರ್ಕ್ ರಾಜತಾಂತ್ರಿಕ ಸಂಬಂಧ ಹೊಂದಿದ್ದು, ಯುರೋಪ್‌ನ ಒಕ್ಕೂಟ, ವಿಶ್ವಸಂಸ್ಥೆ ಮತ್ತಿತರ ಪ್ರಾದೇಶಿಕ ಒಕ್ಕೂಟಗಳು ಸಾರ್ಕ್‌ನ ಶೃಂಗಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ನಿರೀಕ್ಷಕರನ್ನು ಕಳಿಸುತ್ತವೆ. ಇದು ಸಾರ್ಕ್‌ನ ರಾಜಕೀಯ ಮಹತ್ವಕ್ಕೆ ಇನ್ನೊಂದು ಸಾಕ್ಷಿ. ಸಾರ್ಕ್ ರಾಷ್ಟ್ರಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಪಾಶ್ಚಾತ್ಯ ರಾಷ್ಟ್ರಗಳ ಸಮಾಜ ವಿಜ್ಞಾನಗಳ ಸಂಶೋಧಕರು ಮಾರುಹೋದ ನಿದರ್ಶನಗಳು ಅನೇಕ. ಅರ್ಥಶಾಸ್ತ್ರದ ನೊಬೆಲ್ ಪಾರಿತೋಷಕ ವಿಜೇತ ಗುನ್ಹಾರ್ ಮಿರ್ಡಾಲ್ ಬರೆದ ಏಷಿಯನ್ ಡ್ರಾಮಾ (1968) ಭಾರತದ ಸಾಮಾಜಿಕ ವೈಶಿಷ್ಟ್ಯತೆಯ ಮೆರುಗನ್ನು ಸೆರೆ ಹಿಡಿದಿದೆ. ಇಂಥ ರಾಷ್ಟ್ರದ ನಾಯಕತ್ವದಲ್ಲಿ ಸಾರ್ಕ್ ಅಭಿವೃದ್ಧಿಯತ್ತ ದಾಪುಗಾಲು ಹಾಕುವಂತಾಗಬೇಕು.
ಸಾರ್ಕ್‌ನ ಉದ್ದೇಶಗಳು ಅದರ ಚಾರ್ಟರಿನಲ್ಲಿ ಮೊಳೆತು ಚಿಗುರಿವೆ. ದಕ್ಷಿಣ ಏಷ್ಯಾದಲ್ಲಿ ಜನರ ಕ್ಷೇಮಾಭಿವೃದ್ಧಿಯನ್ನು ಹೆಚ್ಚಿಸುವುದು, ಆರ್ಥಿಕ- ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಾಧಿಸುವುದು, ದಕ್ಷಿಣ ಏಷ್ಯಾದ ನಾಗರೀಕರಲ್ಲಿ ಸ್ವಾವಲಂಬನೆಯ ಭಾವನೆ ಬೆಳೆಸುವುದು, ಸಾರ್ಕ್ ರಾಷ್ಟ್ರಗಳ ಸಮಸ್ಯೆಗಳನ್ನು ಅರಿತುಕೊಳ್ಳಲು ಬೇಕಾದ ಸಾಂಸ್ಥಿಕ ವ್ಯವಸ್ಥೆಯನ್ನು ನಿರ್ಮಿಸುವುದು, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳಲ್ಲಿ ಸಹಕಾರದ ವರ್ಧನೆ, ಸಾರ್ಕ್ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಮತ್ತು ಸಾರ್ಕ್ ಉದ್ದೇಶಗಳನ್ನೇ ಹೊಂದಿದ ವಿಶ್ವದ ಇತರ ಒಕ್ಕೂಟಗಳೊಂದಿಗೆ ಸಹಕರಿಸುವುದು-ಹೀಗೆ ಒಟ್ಟಾರೆ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ ಮತ್ತು ಅಪ್ರತ್ಯಕ್ಷವಾಗಿ ಪೂರಕವಾದ ಉದ್ದೇಶಗಳನ್ನು ಸಾರ್ಕ್‌ನ ಶೃಂಗಸಭೆಗಳಲ್ಲಿ ಚರ್ಚಿಸಲಾಗುತ್ತಿದೆ.
ಸಾರ್ಕ್‌ನ ಪ್ರಗತಿ ಈ ತನಕ ಗಮನಾರ್ಹವಾಗಿಲ್ಲ. ಕಾರಣ ಸಾರ್ಕ್ ರಾಷ್ಟ್ರಗಳಲ್ಲಿ ಶತ ಶತಮಾನಗಳಿಂದ ಬೇರೂರಿ ನಿಂತ ಬಡತನ. ಜತೆಗೆ ಇತ್ತೀಚಿನ ವರ್ಷಗಳಲ್ಲಿ ತೀವ್ರತೆ ಪಡೆದ ಭಯೋತ್ಪಾದಕರ ಕೃತ್ಯಗಳು. ಕಳೆದ ಮೇ 27ರಂದು ನವಾಜ್ ಷರೀಫ್‌ರೊಂದಿಗೆ ಮಾತುಕತೆ ಮಾಡುವಾಗ ಪ್ರಧಾನಿ ಮೋದಿ ಭಯೋತ್ಪಾದಕತೆಯನ್ನು ನಿಗ್ರಹಿಸುವ ಆವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಈ ತನಕ ಕೆಲವು ಸಾರ್ಕ್ ಶೃಂಗ ಸಭೆಗಳಲ್ಲಿ ಭಯೋತ್ಪಾದಕತೆಯಿಂದಾದ ಅನಾಹುತಗಳ ಬಗೆಗೆ ಚರ್ಚೆ ನಡೆದಿವೆಯೆಂಬ ಸಂಗತಿಯನ್ನು ಮೋದಿ ಖಂಡಿತ ಗಮನಿಸಿದ್ದಾರೆ.
ಸಾರ್ಕ್ ರಾಷ್ಟ್ರಗಳು ಪರಸ್ಪರ ವಿಶ್ವಾಸದೊಂದಿಗೆ ವ್ಯವಹರಿಸಿದರೆ ರಕ್ಷಣಾ ವೆಚ್ಚವನ್ನು ಕಡಿತಗಳಿಸಿಕೊಂಡು ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಬಹುದು. ಬಡತನ ನಿರ್ಮೂಲನ ಮತ್ತು ನಿರುದ್ಯೋಗ ಸಮಸ್ಯೆಯ ನಿವಾರಣೆಗೆ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು. ಸಾರ್ಕ್ ರಾಷ್ಟ್ರಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಬೇಕಾದ ಕ್ರಿಯಾ ಯೋಜನೆ  ರೂಪಿಸಬಹುದು. ಜಲಸಂಪತ್ತಿನ ಸಮರ್ಪಕ ಬಳಕೆಗಾಗಿ ಸಹಕಾರಿ ತತ್ವವುಳ್ಳ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಸಾರ್ಕ್ ರಾಷ್ಟ್ರಗಳು ಮೈ ಕೊಡವಿಕೊಂಡು ಎದ್ದು ನಿಂತರೆ ಚೀನಕ್ಕೊಂದು ತಡೆಗೋಡೆ ಹುಟ್ಟಲಿದೆ. ಸಾರ್ಕ್ ದೇಶಗಳಿಗೆ ಬೇಕಾದ ಅಭಿವೃದ್ಧಿಪರ ಮುಂದಾಳತ್ವ ನೀಡಲು ಭಾರತ ಸಜ್ಜಾಗುತ್ತಿದೆ.

-ಪ್ರೊ. ಜಿ.ವಿ. ಜೋಶಿ, ನಿಟ್ಟೆ
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement