ಇತ್ತಿಚಿನ ವರ್ಷಗಳಲ್ಲಿ ಜಗತ್ತು ಅತ್ಯಂತ ವೇಗವಾಗಿ ಸ್ಪರ್ಧಾತ್ಮಕವಾಗುತ್ತಿದೆ. ಇಪ್ಪತ್ತು ವರ್ಷಗಳ ಹಿಂದಿಗೂ ಈಗಿನ ಪರಿಸ್ಥಿತಿಗೂ ಎಂತಹ ವ್ಯತ್ಯಾಸ! ವಿಶ್ವಕ್ಕೆ ನಮ್ಮ ಸಮಾಜವು ತೆರೆದುಕೊಳ್ಳುತ್ತಿದ್ದಂತೆ ಸ್ಪರ್ಧೆ ಎಂಬುದು ಜಾಗತಿಕ ಮಟ್ಟಕ್ಕೆ ಏರಿತು. ಐಐಟಿ ಎನ್ ಐ ಟಿ ಯಂತಹ ಸಂಸ್ಥೆಗಳಲ್ಲಿ ಸೀಟುಗಳಿಗಾಗಿ ಬೇಡಿಕೆ ಹೆಚ್ಚಿತು. ಉತ್ತಮ ಗುಣಮಟ್ಟದ ಸ್ಥಳೀಯ ಕಾಲೇಜುಗಳಲ್ಲಿಯೂ ನೂಕುನುಗ್ಗಲು ಹೆಚ್ಚಾಗುತ್ತಿದೆ. ಅದೆಷ್ಟರ ಮಟ್ಟಿಗೆ ಎಂದರೆ ಕಾಲೇಜಿನ ಪ್ರವೇಶಕ್ಕೆ ಲಕ್ಷಾಂತರ ಹಣ ಸುರಿಯುವಷ್ಟು ಮತ್ತು ಮಂತ್ರಿಮಹೋದಯರಿಂದ ಶಿಫಾರಸು ಪತ್ರ ತರುವಷ್ಟು!
ಪ್ರವೇಶ ಪಡೆದ ನಂತರ ಕಾಲೇಜಲ್ಲದೇ ಟ್ಯೂಷನ್ ಗಳಲ್ಲೂ ಸಹ ಮಕ್ಕಳು ಸಮಯ ಕಳೆಯಬೇಕಾಗುತ್ತದೆ. ಈ ಟ್ಯೂಷನ್ ಗಳಿಗಾಗಿ ಪೋಷಕರು ಲಕ್ಷಾಂತರ ವ್ಯಯಿಸುತ್ತಾರೆ. ಒಮ್ಮೆ ಪಿಯುಸಿ ಸೇರಿದರೆ ಮಕ್ಕಳಿಗೆ ರಜೆ ಎಂಬುದೇ ಇರುವುದಿಲ್ಲ. ಪ್ರತಿದಿನ ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಕಳೆಯುವುದಲ್ಲದೇ ನಾಲ್ಕು ಗಂಟೆಗಳ ಕಾಲ ಟ್ಯೂಷನ್ ಗಳಲ್ಲಿ ಕಳೆಯಬೇಕಾಗುತ್ತದೆ. ಶನಿವಾರ ಭಾನುವಾರ ಮತ್ತು ರಜಾ ದಿನಗಳಲ್ಲಿ ದಿನಕ್ಕೆ ಆರು ಗಂಟೆಗಳ ಕಾಲ ಟ್ಯೂಷನ್ ಇರುತ್ತದೆ. ಕಾಲೇಜಿನ ಟೆಸ್ಟ್ ಗಳಲ್ಲದೇ ಟ್ಯೂಷನ್ ನ ಟೆಸ್ಟ್ ಗಳಲ್ಲಿಯೂ ಸಹ ಪಾಲ್ಗೊಳ್ಲಬೇಕಾಗಿರುವುದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚುತ್ತದೆ. ಇದಕ್ಕಾಗಿ ಟ್ಯೂಷನ್ ಮತ್ತು ಕಾಲೇಜುಗಳಲ್ಲಿ ಕಳೆಯುವ ಸಮಯವಲ್ಲದೇ ಓದಿಕೊಳ್ಳಲೂ ಸಹ ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಸಮಯ ಕಳೆಯಬೇಕಾಗುತ್ತದೆ. ದಿನಕ್ಕೆ ಹನ್ನೆರಡರಿಂದ ಹದಿನಾರು ತಾಸುಗಳ ಪರಿಶ್ರಮವನ್ನು ವಿದ್ಯಾರ್ಥಿಗಳು ಮಾಡುತ್ತಾರೆ.
ಕರ್ನಾಟಕದ ವಿದ್ಯಾರ್ಥಿಗಳು ಎರಡು ರೀತಿಯ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಒಂದು ತಮ್ಮ ಸಹಪಾಠಿಗಳ ಜೊತೆಗಿನದು. ಇದು ಆರೋಗ್ಯಕರ ಸ್ಪರ್ಧೆ. ಇನ್ನೊಂದು ಅನಾರೋಗ್ಯಕರ ಸ್ಪರ್ಧೆ. ಇಡೀ ಇಂಡಿಯಾದೊಂದಿಗೆ ನಡೆಸಬೇಕಾದುದು. ಮಾತ್ರ ಪರಿಶ್ರಮದ ಮೇಲೆ ಅವಲಂಬಿತವಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಅನಾರೋಗ್ಯಕರ ಸ್ಪರ್ಧೆಯ ಬಗ್ಗೆ ಹೆಚ್ಚಿನ ಅರಿವಿಲ್ಲ. ಈ ಸ್ಪರ್ಧೆ ಇಂಡಿಯಾದ ಇತರ ಭಾಗದಿಂದ ಬರುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡಯಲು ಎಲ್ಲ ರೀತಿಯ ವಾಮಮಾರ್ಗಗಳನ್ನು ಬಳಸಲಾಗುತ್ತಿದೆ. ಉತ್ತರ ಭಾರತ ಮತ್ತು ಆಂಧ್ರ ಭಾಗದ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸುವುದೇ ಇಲ್ಲ. ಕಡೆಯ ಒಂದು ತಿಂಗಳಿನಲ್ಲಿ ಅವಸರದಲ್ಲಿ ಪ್ರಾಯೋಗಿಕ ತರಗತಿಗಳನ್ನು ನಿರ್ವಹಿಸಿ ಕೈತೊಳೆದುಕೊಳ್ಲಲಾಗುತ್ತದೆ. ಪರೀಕ್ಷೆಗಳಲ್ಲಿ ಅನೈತಿಕ ರೀತಿಯಲ್ಲಿ ಪಾಸು ಮಾಡಿಸಲಾಗುತ್ತದೆ. ಪ್ರಾಯೋಗಿಕ ತರಗತಿಗಳ ಬದಲು ವರ್ಷ ಪೂರ್ತಿ ಪರೀಕ್ಷೆಗೆ ತಯಾರಿಗಳು, ಜೆ ಇ ಇ, ಐ ಇಇಇ ಪ್ರವೇಶ ಪರೀಕ್ಷೆಗಳಿಗಾಗಿ ಕೋಚಿಂಗ್ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥ ಮಾಡಿಸುವುದಕ್ಕಿಂತ ಅಂಕಗಳಿಸಲು ತಕ್ಕಂತೆ ತಯಾರುಗೊಳಿಸಲಾಗುತ್ತದೆ.
ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಮ್ಮ ವಿದ್ಯಾರ್ಥಿಗಳು ಹಗಲಿರುಳು ಕಷ್ಟಪಟ್ಟು ಓದುತ್ತಿದ್ದರೆ ಅನೇಕ ನೈತಿಕ ಮಾರ್ಗಗಳಿಂದ ಹಣವುಳ್ಳ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸಲಾಗುತ್ತಿದೆ. ಓದದೆಯೂ ಒಳ್ಳೆಯು ಕಾಲೇಜುಗಳಲ್ಲಿ ಇವರಿಗೆ ಸೀಟು ಸಿಗುತ್ತಿದೆ. ಇತ್ತೀಚೆಗೆ ಅನೇಕ ಬಲಿಗಳನ್ನು ಪಡೆದ ವ್ಯಾಪಂ ಹಗರಣ ಇದಕ್ಕೊಂದು ಸಾಕ್ಷಿ . ಇದೊಂದು ದೇಶದಾದ್ಯಂತ ದೊಡ್ಡ ಮಾಫಿಯಾ ಆಗಿ ಬೆಳೆಯುತ್ತಿದೆ. ಈ ಶಿಕ್ಷಣ ಮಾಫಿಯಾ ಎಂಬುದು ದೇಶದ ಮುನ್ನಡೆಗೆ ಅತ್ಯಂತ ಅಪಾಯಕಾರಿಯಾದುದು!