ಅಂಕಣಗಳು

ಏಕಾದಶಿ ಉಪವಾಸ ; ಹಾಗೆಂದರೇನು?

ಅಂಬರೀಶ ರಾಜ; ಏಕಾದಶಿ ವ್ರತವನ್ನು ಜಗತ್ ಪ್ರಸಿದ್ಧ ಮಾಡಿದ ಕೀರ್ತಿವಂತ. ವೈಷ್ಣವ ಶಕ್ತಿಯನ್ನು ಜಾಹೀರು ಮಾಡಿದ ಪರಮ ವೈಷ್ಣವ.

ಮಾರನೆಯ ಬೆಳಿಗ್ಗೆ ಸ್ನಾನಾನ್ಹಿಕೆಗಳನ್ನು ಮುಗಿಸಿ ರಾಜ ಸಭೆಗೆ ಬಂದಾಗ, ಮಹಾರಾಜರು ಭಂಡಾರದಲ್ಲಿದ್ದಾರೆಂದೂ, ಅಲ್ಲಿಗೇ ಕೌತ್ಸನನ್ನು ಕರೆತರಬೇಕೆಂದು ಆಙ್ಞೆಯಾಗಿದೆಯೆಂದೂ ಭಟರು ಹೇಳಿದರು. ಹೋಗಿ ನೋಡಿದರೆ, ಭಂಡಾರದ ಮಧ್ಯದಲ್ಲಿ ಆಳೆತ್ತರಕ್ಕೆ ಬಿದ್ದಿರುವ ನಾಣ್ಯಗಳ ರಾಶಿ. ಛಾವಣಿಯಲ್ಲಿ ದೊಡ್ಡ ರಂಧ್ರ. ಅಗಲ ಮುಖದ ರಘು ಹೇಳಿದ,  ಪೂಜ್ಯರೇ, ನಿನ್ನೆ ನಿಮ್ಮನ್ನು ಕಳಿಸಿದ ಮೇಲೆ, ನಾವು ಸೇನಾಧಿಪತಿಗೆ ಸೇನೆ ಸಿದ್ಧ ಪಡಿಸಲು ಆದೇಶ ಕೊಟ್ಟೆವು; ಕುಬೇರನ ಅಲಕಾವತಿಯ ಮೇಲೆ ದಂಡೆತ್ತಿ ಅವನನ್ನು ಸೋಲಿಸಿ, ಸ್ವರ್ಣ ಸಂಪಾದಿಸಲು. ಮಧ್ಯರಾತ್ರಿಯ ಹೊತ್ತಿಗೆ ಧನಾಧಿಪತಿಯ ದೂತ ಬಂದು ಹೇಳಿದ;  ನಿನ್ನ ಸಂಕಲ್ಪಕ್ಕೆ ನಮ್ಮ ರಾಜರು ಮೆಚ್ಚಿದ್ದಾರೆ. ನೀನು ನುಡಿದಂತೆ ಧಾಳಿ ಮಾಡುವವನೇ. ಆದರೆ ಆ ಸಾಹಸ ಬೇಡ. ನೀನು ಧರ್ಮಾತ್ಮ. ಜಗತ್ತು ಕಂಡರಿಯದ ದಾನಿ. ಶುದ್ಧ ಚರಿತ. ಕಾಕುತ್ಸ್ಥ ವಂಶೋದ್ಧವ. ಹೀಗಾಗಿ ನಿನ್ನ ಕೊಪ್ಪರಿಗೆಯಲ್ಲಿ ಚಿನ್ನದ ಮಳೆ ಸುರಿಸುತ್ತೇನೆ, ಯುದ್ಧೋದ್ಯಮವನ್ನು ನಿಲ್ಲಿಸು.  ಮುನಿಗಳೇ, ಹೀಗೆ ಹೇಳಿ ಹೋದ ಮೇಲೆ ಛಾವಣಿಯಲ್ಲಿ ರಂಧ್ರವಾಗಿ ಚಿನ್ನದ ಮಳೆಯೇ ಸುರಿದು ಹೋಯಿತು. ಎಷ್ಟು ಹಣ ಬೇಕೋ ಅಷ್ಟು ಒಯ್ಯಿರಿ ಈ ಚಿನ್ನದ ರಾಶಿಯಿಂದ. 
                                           *************
ರಘುಪುತ್ರ ಪ್ರವೃದ್ಧ. ಅವನ ಮಗ ಶಂಖಣ. ಶಂಖಣನ ಮಗ ಅಗ್ನಿವರ್ಣ. ಇವನ ಮಗ ಶೀಘ್ರಗ. ಶೀಘ್ರಗನ ಮಗ ಮರು. ಮರುವಿನ ಮಗ ಪ್ರಶುಶ್ರಕ. ಇವರಾರೂ ತಮ್ಮ ಹಿಂದೆ ಗಮನಾರ್ಹ ಚರಿತ್ರೆಗಳನ್ನು ಬಿಡಲಿಲ್ಲ. ಇವನ ಮಗನೇ ಅಂಬರೀಶ. ಏಕಾದಶಿ ವ್ರತವನ್ನು ಜಗತ್ ಪ್ರಸಿದ್ಧ ಮಾಡಿದ ಕೀರ್ತಿವಂತ. ವೈಷ್ಣವ ಶಕ್ತಿಯನ್ನು ಜಾಹೀರು ಮಾಡಿದ ಪರಮ ವೈಷ್ಣವ. 
ದೂರ್ವಾಸರು ಮಹಾನ್ ಶಿವಭಕ್ತರು. ಅಷ್ಟೇಕೆ ? ಅದು ಮೇಲ್ನೋಟಕ್ಕೆ. ನಿಜವಾಗಿ ಅವರು ರುದ್ರಾಂಶ ಸಂಭೂತರು. ಅಷ್ಟೇ ಅಲ್ಲ, ಅವರದು ಮಾನಸಿಕ ಅದ್ವೈತ. ತ್ರಿಮೂರ್ತಿಗಳಲ್ಲಿ ಯಾರಲ್ಲಿಯೂ ಬೇಧ ಮಾಡದ ದೊಡ್ಡ ಬುದ್ಧಿ. ಎಷ್ಟೆಂದರೂ ಉಳಿದಿಬ್ಬರ ಅಂಶಸಂಭೂತರು, ಅವರ ಸೋದರರಲ್ಲವೇ? ಕೇಳಿದ್ದರವರು ಅಂಬರೀಶನ ವ್ರತವನ್ನು; ಏಕಾದಶಿ ವ್ರತವನ್ನು. ಆ ವ್ರತಾಚರಣೆ ಕೇವಲ ಕೆಲವರಲ್ಲಿ ಮಾತ್ರ ಇತ್ತು. ಅದನ್ನು ವಿಸ್ತರಿಸಬೇಕಿತ್ತು; ಅದರ ಪೂಜ್ಯತೆಯನ್ನು ಜನರಿಗೆ ತಿಳಿಸಬೇಕಿತ್ತು .
ಉತ್ತಮ ವ್ರತವಾಗಿತ್ತು ಅದು; ಮೂರು ಕಾರಣಗಳಿಂದ. ಒಂದು, ಆರೋಗ್ಯ ದೃಷ್ಟಿಯಿಂದ ತಿಂಗಳಿಗೊಮ್ಮೆಯಾದರೂ ಜೀರ್ಣಾಂಗಗಳಿಗೆ ವಿಶ್ರಾಂತಿ ಕೊಡುವುದು ಒಳ್ಳೆಯದು. ಏಕಾದಶಿ ವ್ಯಾಜದಿಂದ ಕೈಗೂಡುತ್ತದೆ ಅದು. ದೈನಂದಿನ ವೃತ್ತಿಯ ಸಾತತ್ಯದಿಂದ, ವ್ಯವಹಾರದ ಒತ್ತಡದಿಂದ ಆಗಾಗ್ಗೆ ವಿರಾಮ ಒಳ್ಳೆಯದು, ಅದು ಎರಡನೆಯ ಕಾರಣ. ಸದಾ ಕೆಲಸ-ಕೆಲಸ , ಅಥವ ಹಣ-ಹಣ ಎನ್ನುವುದಕ್ಕಿನ್ನ ಏಕಾದಶಿ ಉಪವಾಸ ಮಾಡುವುದು ಮನೋಜಾಗ್ರತೆಗೆ ಒಳ್ಳೆಯ ಮಾರ್ಗ. ಮೂರನೆಯದೇ ವಿಷ್ಣುಪ್ರೀತಿ. ಶಿವರಾತ್ರಿ ಶಿವನಿಗೆ ಪ್ರಿಯವಾದಂತೆ, ವಿಷ್ಣುವಿಗೆ ಏಕಾದಶಿ. ಇದಾದ ಎರಡನೆಯ ದಿನವೇ ತ್ರಯೋದಶಿ. ಅಂದೇ ಪ್ರದೋಷ ಪೂಜೆ. ಪರಮೇಶ್ವರನ ಪವಿತ್ರ ಪರ್ವ. ಇತ್ತ ಏಕಾದಶಿ, ಅತ್ತ ಶಿವರಾತ್ರಿ; ಎರಡೂ ತಿಂಗಳಿಗೊಮ್ಮೆ ವಿಜೃಂಭಣೆ. 
ಏಕಾದಶಿಯ ವೈಶಿಷ್ಟ್ಯ ಹನ್ನೊಂದು ಇಂದ್ರಿಯಗಳಿಗೆ ಸಂಬಂಧಿಸಿದ್ದು. ಐದು ಕರ್ಮೇಂದ್ರಿಯ, ಐದು ಙ್ಞಾನೇಂದ್ರಿಯಗಳೊಟ್ಟಿಗೇ ಮನಸ್ಸೂ ಸೇರಿ ಹನ್ನೊಂದು ಇಂದ್ರಿಯಗಳಿಗೆ ಉಪವಾಸ ಮಾಡಿಸುವುದು. ಉಪವಾಸವೆಂದರೆ ಊಟ ಮಾಡದ್ದು, ಆಹಾರ ಸೇವಿಸದ್ದು, ಎಂಬುದು ಪರಿಧಿ ನಿರೂಪಣೆ. ಅಂದು ಅಲ್ಪಾಹಾರ-ಮಿತಾಹಾರ ಅಪೇಕ್ಷಣೀಯ. ಬಟ್ಟಲುಪ್ಪಿಟ್ಟು ತಿಂದು, ಲೋಟ ಲೋಟ ಖೀರು ಕುಡಿದು, ಗೊನೆ ಗೊನೆ ಹಣ್ಣನ್ನು ಮುಗಿಸುವುದನ್ನು ಉಪವಾಸ ಎಂದು ಕರೆಯುವುದಿಲ್ಲ. ಅಂತೆಯೇ ತೊಟ್ಟು ನೀರೂ ಕುಡಿಯದೇ ಜೀವಾತ್ಮನನ್ನು ಹಿಂಸಿಸುವುದೂ ಉಪವಾಸವಲ್ಲ. ಕಡಿಮೆ ಸ್ವೀಕರಿಸಿ, ಮನಸ್ಸಿನಲ್ಲಿ ವಿಷ್ಣುವನ್ನು ಕೇಂದ್ರೀಕರಿಸುವುದು ಅಪೇಕ್ಷಣೀಯ. ಕಣ್ಣು ನೋಡುವುದು ವಿಷ್ಣುಮೂರ್ತಿಯನ್ನು, ಕಿವಿ ಕೇಳುವುದು ಹರಿ ಕೀರ್ತನೆಯನ್ನು, ಬಾಯಿ ನುಡಿಯುವುದು ಮಾಧವ ಮಂತ್ರವನ್ನು.... ಹೀಗೆ ಸರ್ವವೂ ನಾರಾಯಣ ಮಯವಾದರೆ ಅದು ಏಕಾದಶಿ ವ್ರತಾಚರಣೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ವೃತ್ತಿ ನಿರತರಾಗಿದ್ದು ಗೆಳೆಯರೊಡನೆ ಹರಟೆ-ಕಿತ್ತಾಟದಲ್ಲಿದ್ದು, ಊರೆಲ್ಲ ಸುತ್ತುತ್ತಿದ್ದು.... ಇಷ್ಟೆಲ್ಲ ದೈನಂದಿನ ಕ್ರಿಯೆಗಳಲ್ಲೇ ಮಗ್ನವಾಗಿದ್ದು, ಕೇವಲ ಊಟ ಮಾಡುವುದಿಲ್ಲ ಎಂಬುದು ಉಪವಾಸದ ಉದ್ದಿಶ್ಯ ಸಾಧನೆ ಅಲ್ಲ. ಹೀಗೆ ಏಕಾದಶ ಇಂದ್ರಿಯಗಳಿಗೂ ನಿಜವಾದ ಉಪವಾಸ ಮಾಡಿಸುತ್ತಿದ್ದ ಮಹಾರಾಜ ಅಂಬರೀಶ. ಅವನ ದೀಕ್ಷೆಯ ಪರೀಕ್ಷೆಗೆ ಬಂದು, ಅವನನ್ನು ಕದಲಿಸುವ ನಾಟಕವಾಡಿ, ನಿಜಭಕ್ತನನ್ನು ನಾರಾಯಣ ಸಲಹುವನೆಂದು ವಿಶ್ವಕ್ಕೆ ಸಾರಿದ ಮಹಾನುಭಾವರೇ ರುದ್ರಾಂಶ ಸಂಭೂತ ದೂರ್ವಾಸರು. 
                                              ***********
ರಾಮಾಯಣದಲ್ಲಿ ಕೊಟ್ಟ ಪಟ್ಟಿಯಂತೆ ಅಂಬರೀಶನ ಮಗ ನಹುಶ, ಹಾಗೂ ಆತನ ಮಗ ಯಯಾತಿ, ಇವರಿಬ್ಬರೂ ಚಂದ್ರವಂಶದ ರಾಜರೆಂದು ಪ್ರಖ್ಯಾತಿ. ಮಹಾಭಾರತದಲ್ಲವರ ಖ್ಯಾತಿ, ಕಥೆ  ಬಹುಪಾಲು ಈ ಹೆಸರುಗಳು ಪ್ರಕ್ಷೇಪವಿದ್ದಾತು. ಅಥವ ಆ ಹೆಸರಿನವರೇ ಇಲ್ಲೂ ಇದ್ದಿರಬಹುದು. ಇದೇ ನಿಜವಾದರೆ ಸನಾಮರನಕ ಇವರಲ್ಲ. ಮುಂದಿನ ಮಹಾರಾಜ ನಾಭಾಗ. ಈತನ ವಿಶೇಷವಿರುವುದು ಮೊಮ್ಮೊಗನ ತಾತನೆಂಬ ಹೆಗ್ಗಳಿಕೆಯಲ್ಲಿ. ಮೊಮ್ಮಗನನ್ನು ಮಾತನಾಡಿಸುವ ಮುನ್ನ ಮಗನ ಹೆಸರನ್ನಾದರೂ ಹೇಳಬಾರದೆ? ಆತನೇ ಅಜ ಮಹಾರಾಜ. ಈತನ ಹೆಂಡತಿ ಇಂದುಮತಿ. ವಾಸ್ತವವಾಗಿ ಈಕೆ ಶಪ್ತ ಗಂಧರ್ವೆ. ಮಹರ್ಷಿಯ ತಪೋಭಂಗವಾಗಿ ಅವ ಸಿಟ್ಟುಗೊಂಡು ಶಪಿಸಿದ; ಭೂಮಿಯಲ್ಲಿ ಹುಟ್ಟೆಂದು. ಹಾಗೆ ಹುಟ್ಟಿ ಕೈ ಹಿಡಿದದ್ದು ಅಜ ಮಹಾರಾಜನನ್ನು. ಪ್ರಸವಿಸಿದ್ದು ಪುರುಷೋತ್ತಮರ ಅಪ್ಪನನ್ನು. ನಾರದರ ಪುಣ್ಯಕಾರ್ಯಗಳು ಹಲವಿದ್ದರೂ, ಅವರ ಹೂಮಾಲೆ ಮಾಡಿದ ಮಹಾಕಾರ್ಯವೆಂದರೆ ಈ ಇಂದುಮತಿಯ ಶಾಪ ವಿಮೋಚನೆ. ವಿಮೋಚನೆಯ ಮಾರ್ಗ ಇದ್ದದ್ದೇ ಹಾಗೆ. ನಾರದರ ಪುಷ್ಪಮಾಲಿಕಾ ಸ್ಪರ್ಶವಾದಾಗ ಇಂದುಮತಿಗೆ ಪೂರ್ವಜನ್ಮ ಪ್ರಾಪ್ತಿ. ಹಾಗೆ ತಾನು ಮತ್ತೆ ದೇವಲೋಕಕ್ಕೆ ಹೊರಡುವ ಮುನ್ನ ಮಾಡಿದ ಮಹತ್ಕಾರ್ಯವೆಂದರೆ ಮಗನನ್ನು ಹೆತ್ತು ಗಂಡನಿಗೆ ಕೊಟ್ಟದ್ದು. ಆ ಸುತನೇ, ಆ ಇಂದುಮತಿ ಪುತ್ರನೇ, ಆ ಅಜಮಹಾರಾಜನ ಮಗನೇ ನಮ್ಮ ಕಥಾನಾಯಕ ಶ್ರೀರಾಮ ಚಂದ್ರರ ಪಿತಾಶ್ರೀ. ಆತನೇ ದಶರಥ ಮಹಾರಾಜ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ