ಅತ್ತ ಬಂದ ಪುರೋಹಿತನೊಬ್ಬನನ್ನು ಕೇಳಿದ ಸುಮಾಲಿ ಆ ಪಟ್ಟಣದ ರಾಜನ ಬಗ್ಗೆ. ಆ ತ್ರಿಪುಂಡ್ರಧಾರಿ ವೃದ್ಧ, ಸುಮಾಲಿಯನ್ನು ದಿಟ್ಟಿಸಿ ನೋಡಿ ಹೇಳಿದ; "ಈ ಊರಿಗೆ ಹೊಸಬರೇ?" "ಹೀಗೇ ಪ್ರವಾಸ ಮಾಡುತ್ತಾ ಇತ್ತ ಬಂದೆವು. ನೋಡಲು ಸುಂದರ ನಗರ. ಲಕ್ಷ್ಮಿಯೇ ಕುಳಿತು ವಿಶ್ರಮಿಸುತ್ತಿದ್ದಾಳೋ, ಅಥವಾ ಇದೇ ಲಕ್ಷ್ಮೀ ನಿವಾಸವೋ ಎಂಬ ಸಂದೇಹ ಬಂತು. ಅದಕ್ಕಾಗಿ ವಿಚಾರಿಸಿದೆ. "ಸುಮಾಲಿಯ ಉತ್ತರ. ಆ ಮುದುಕ ಪಂಡಿತ, ರಾಜನ ಬಗ್ಗೆ ಕೇಳಿದರೆ, ಅವನ ಅಪ್ಪ ಹುಟ್ಟಿದ ಚರಿತ್ರೆಯನ್ನೇ ಹೇಳತೊಡಗಿದ. "ಈ ನಮ್ಮ ರಾಜನಿಗಿನ್ನ ಅವನ ಅಪ್ಪ ಹುಟ್ಟಿದ್ದೇ ಒಂದು ವಿಚಿತ್ರ; ಒಂದು ಆಕಸ್ಮಿಕ. "ಕಥೆ ಹೇಳ ತೊಡಗಿದ ಆ ಅಜ್ಜ.
ಬ್ರಹ್ಮ ಮಾನಸ ಪುತ್ರರಲ್ಲಿ ಒಬ್ಬಾತ ಪುಲಸ್ತ್ಯ. ಆತನಿಗೊಮ್ಮೆ ನಿರಾತಂಕವಾಗಿ ತಪ ಮಾಡಬೇಕೆಂಬ ಆಲೋಚನೆ. ಗೆಳೆಯ ತೃಣಬಿಂದು ಮಹರ್ಷಿಯಲ್ಲಿ ಕೇಳಿದ; ಯಾವುದಾದರೂ ಸೂಕ್ತ ಪ್ರಶಾಂತ ತಾಣಕ್ಕೆ. "ಎಲ್ಲಿಯಾದರೂ ಏಕೆ ಹೋಗಬೇಕು ? ನಮ್ಮ ಆಶ್ರಮದ ಪಕ್ಕದಲ್ಲೇ ಒಂದು ವಿಶಾಲವಾದ ಪರ್ಣಕುಟಿಯಿದೆ. ಮಳೆಗಾಲದಲ್ಲಿ ಬಿಡಿ ಸನ್ಯಾಸಿಗಳು ಬಂದು ಅಲ್ಲಿ ನಿಲ್ಲುತ್ತಾರೆ. ಉಳಿದಂತೆ ಅದು ಖಾಲಿ. ಮಾವು, ಹಲಸು, ದ್ರಾಕ್ಷಿ, ಕಿತ್ತೀಳೆ, ಇತ್ಯಾದಿ ಹಣ್ಣು ತುಂಬಿದ ಮರಗಳಿವೆಯಪ್ಪಾ. ತಲೆ ಮೇಲೆ ಮಂಕರಿ - ಮಂಕರಿ ತೆಂಗು ಹೊತ್ತ ಕಲ್ಪವೃಕ್ಷಗಳಿವೆ. ತಿಳಿನೀರಿನ ಒಂದು ಝರಿಯಿದೆ. ನವಿಲುಗಳ ಕೇಕಾರವಾ, ಹಾವು, ಮುಂಗುಸಿಗಳು, ಜಿಂಕೆ, ಕೋತಿ, ಕೋಣಗಳು ಹೀಗೇ ಪ್ರಕೃತಿಯ ನಡುವೆ ನೀವು ಎಲ್ಲವನ್ನೂ ಮರೆತು ಶಾಂತ ಮನಸ್ಕರಾಗಿರುತ್ತೀರಿ. ಮಧ್ಯಾಹ್ನಕ್ಕೆ ವಟು ಒಬ್ಬನ ಹತ್ತಿರ ನಿಮಗೊಂದಷ್ಟು ಆಹಾರ ಕಳಿಸುತ್ತೇನೆ. ಮತ್ತಿನ್ನೇನು ಬೇಕು ನಿಮಗೆ?"
ಪುಲಸ್ತ್ಯ ಆನಂದವಾಗಿ ಆ ಕುಟಿಯಲ್ಲಿ ಕುಳಿತ. ನಿಜ, ಅದು ಶಾಂತ ಕಾನನವೇ; ಸೊಗಸಾಗಿದೆ. ನಾಳಿನಿಂದ ಆರಂಭ ಮಾಡೋಣವೆಂದು ನಿಶ್ಚಯಿಸಿದ. ಸಂಕಲ್ಪಿಸಿದಂತೆಯೇ ಶುರುವೂ ಆಯಿತು. ಆದರೆ ಬಹುಶಃ ಸಂಜೆಯ ವೇಳೆಗೆ ಕೇಕಾರವವಲ್ಲ, ಕಾಮಿನಿಯ ಕಂಠಮಾಧುರ್ಯ; ಬಳೆಗಳ ಸದ್ದು. ಯಾರ ಹಂಗೂ ಇಲ್ಲದೆ, ಯಾರ ಅಡೆತಡೆಯೂ ಇಲ್ಲದೆ ಕುಮಾರಿಯರ ನಗುವಿನ ಅಲೆ. ಬಾಯಿಗೆ ಬಂದ ಹರಟೆ. ಕೂಗಾಟ, ಓಡಾಟ, ಜೂಟಾಟ. ಏನಿದೀ ಗದ್ದಲ! ಕದಡಿದ ಕೊಳವಾಯಿತಲ್ಲ ವನ ! ಅತ್ತ ಬಂದ ಕನ್ಯೆಯರನ್ನು ಕಂಡು ಕನಲಿದ ಪುಲಸ್ತ್ಯ. ಯಾರೂ ಬರಬಾರದೆಂದು ಗುಡುಗಿದ. ಭೀತ ಭಾಮಿನಿಯರು ಮಾತನಾಡದೇ ಹಿಂದಿರುಗಿದರು.
ಮರುದಿನದ ಆನ್ಹೀಕ ಮುಗಿಸಿ ಕಣ್ಮುಚ್ಚಿ ಧ್ಯಾನಾಸಕ್ತನಾಗುವ ಹೊತ್ತಿಗೆ ಸರಿಯಾಗಿ ಹಿಂದಿನ ದಿನದ ಪುನರಾವರ್ತನೆ. ನಿಜಕ್ಕೂ ಸಿಟ್ಟುಗೊಂಡ ಋಷಿ, ಬರುತ್ತಿದ್ದ ಹುಡುಗಿಯರನ್ನು ಕಂಡು ಶಪಿಸಿಯೇ ಬಿಟ್ಟ. "ಎಲ್ಲಾದರೂ ತೊಲಗಿ ಅತ್ತ, ಇನ್ನೆರಡು ಘಂಟೆಗಳ ನಂತರ ಇಲ್ಲಿ ಯಾರೇ ಇದ್ದರೂ ಅವರು ಗರ್ಭವತಿಯರಾಗುತ್ತರೆ, ಹುಶಾರ್! " ಓಡಿಬಿಟ್ಟರು ಎಲ್ಲರೂ. " ಒಳ್ಳೇ ಶಾಪವನ್ನೇ ಕೊಟ್ಟೆ, ಯಾವುದಕ್ಕೆ ಬಗ್ಗದಿದ್ದರೂ ಹೆಣ್ಣು ಹೆದರುವುದು ಗುಪ್ತ ಬಸುರಿಗೆ. ಇನ್ನು ತಾಪತ್ರಯವೇ ಇಲ್ಲ. "
ಅಳುತ್ತಾ ಮುಂದೆ ನಿಂತ ಮಗಳನ್ನು ಕಂಡು ತೃಣಬಿಂದುವಿಗೆ ಅಚ್ಚರಿ. ನಿನ್ನೆ ತಾನೇ ತಾತನ ಮನೆಯಿಂದ ಬಂದಳು, ಬೆಳಗೆದ್ದು ಏನೀ ಅಳು? ಬಿಕ್ಕುತ್ತ ಹೇಳಿದ ಮಗಳ ಕಥೆ ಕೇಳಿ ಹೊಟ್ಟೆ ಕಡೆ ನೋಡಿದರೆ ಅದು ಕೊಂಚ ಉಬ್ಬಿದಂತಿದೆ. ತಿಂಗಳ ಕಾಲ ಮನೆಯಲ್ಲಿರದೇ ಅಜ್ಜಿಯ ಮನೆಗೆ ಹೋಗಿದ್ದಳು ಗೋ. ಅವಳ ಹೆಸರಿನಂತೆಯೇ ಅತಿ ಮುಗ್ಧ, ಮೃದು ಸ್ವಭಾವ. ಬೆಳಗೆದ್ದು ತಮ್ಮ ತೋಟ ನೋಡಲು ಹೋಗಿ ನೆಪಮಾತ್ರದ ಕಡ್ಡಿ ಬಾಗಿಲು ತೆರದು ಅಡಿ ಇಡುತ್ತಿದ್ದಂತೆಯೇ ಹೊಟ್ಟೆಯಲ್ಲೇನೋ ಓಡಾಟ. ಹೆದರಿಕೊಂಡು ವಾಪಸ್ಸು ಬಂದಳು. ತಾಯಿ ಮನೆಯಲ್ಲಿಲ್ಲ, ಅಪ್ಪನಲ್ಲೇ ಅಳುತ್ತಾ ತನಗೇನೋ ಆಗುತ್ತಿರುವ ಒದ್ದಾಟ ಹೇಳಿದಳು !!
" ಏನಯ್ಯಾ ಇದು? ಸ್ನೇಹಿತನೆಂದು ಆಶ್ರಯವಿತ್ತರೆ ನನ್ನ ಮಗಳಿಗೇ ಬಸಿರು ಮಾಡಿದ್ದೀಯಲ್ಲಾ, ಇದು ನ್ಯಾಯವೇ? " ಮಿತ್ರನ ಆರ್ಭಟ ಕೇಳಿ ಪುಲಸ್ತ್ಯನಿಗೆ ದಿಗ್ಭ್ರಮೆ. ಏನಿದು ತನ್ನ ಪಾಡಿಗೆ ತಾನಿದ್ದರೆ, ವಿವಾಹವೇ ಆಗಬಾರದು, ಸ್ತ್ರೀ ಸ್ಪರ್ಶವೇ ಬೇಕಿಲ್ಲ ಎಂದಿದ್ದರೆ ಏನೀ ಆಪಾದನೆ? ಕೊಂಚ ಕಾಲ ಕಳೆದಮೇಲೆ ಎಲ್ಲ ತಿಳಿಯಾಯಿತು. ಪ್ರವೇಶಿಸಿದವರು ಗರ್ಭವತಿಯರಾಗಬೇಕೆಂಬ ತನ್ನ ಶಾಪ, ಗೊತ್ತಿರದೇ ಗೋ ಪ್ರವೇಶ, ತಕ್ಷಣವೇ ಅವಳಿಗೆ ಗರ್ಭಾಧಾನ.
ತಡಮಾಡದೇ ತೃಣಬಿಂದು ಮಗಳ ಕೈಯ್ಯನ್ನು ಪುಲಸ್ತ್ಯನ ಕೈಯ್ಯಲ್ಲಿಟ್ಟು ಹೇಳಿದ, " ಇಂದಿನಿಂದಿವಳು ನಿನ್ನ ಧರ್ಮಪತ್ನಿ. ನೀನಿವಳ ಗಂಡ. " ಹೊರಕ್ಕೆ ಹೊರಟೇ ಬಿಟ್ಟ ಮಿತ್ರ. ಪುಲಸ್ತ್ಯ ಅನಿರೀಕ್ಷಿತ ಅಂಗನೆಗೆ ಪತಿಯಾಗಿಯೇ ಬಿಟ್ಟ. 'ಏನೋ ಮಾಡಲು ಹೋಗಿ ಏನೋ ಆಗಿದೆ. ನಾನು ನೈಷ್ಠಿಕ ಬ್ರಮ್ಹಚಾರಿಯಾಗಿಯೇ ಉಳಿಯಬೇಕು, ವಿವಾಹವೆಂಬುದು ಹತ್ತಿರ ಸುಳಿಯಲೇ ಕೂಡದು, ಕೇವಲ ತಪಸ್ವಿಯಾಗಿರಬೇಕು, ನಾರದರಿಗೆ ಮಾತ್ರ ಈ ಪಟ್ಟವೇಕೆ? ನಾನೂ ಅಂತೆಯೇ ಶುದ್ಧ (?) ವಾಗಿರಬೇಕು ಎಂಬ ತೀರ್ಮಾನ ಈಗ ಏನಾಯಿತು? ಹಾಗಾದರೆ ನಮ್ಮದೇನೂ ನಡೆಯದೆ? ನಮಗೇನೂ ಗೊತ್ತಿಲ್ಲದೇ ನಾವು ಯಾವುದೋ ಸೂತ್ರಕ್ಕೆ ಸಿಕ್ಕಿದ್ದ ಗಾಳಿಪಟವಾಗುತ್ತೇವಲ್ಲ! ಎಲ್ಲಾ ಬಿಟ್ಟು ಇಲ್ಲಿಗೇಕೆ ಬಂದೆ? ತೃಣಬಿಂದುವೇಕೆ ಇಲ್ಲಿರ ಹೇಳಿದ? ಕನ್ಯೆಯರೇಕೆ ಗಲಾಟೆ ಮಾಡಿದರು? ಈಗ ಈ ಹಿಂದು ಮುಂದೆ ಅರಿಯದ ಹೆಣ್ಣಿನ ಕೈ ಹಿಡಿದು ನಿಂತಿದ್ದೇನೆ. ತಲೆ ಕೊಡಹಿ ಮುಗ್ಧೆಯೊಡನೆ ಕುಟೀರ ಹೊಕ್ಕ ಪುಲಸ್ತ್ಯ. ಕಾಲ ಸರಿಯಿತು, ಮಗುವೂ ಹುಟ್ಟಿತು, ನಾಮಕರಣ ಮಾಡಬೇಕೀಗ. ತಾನು ವೇದ ಪಠಿಸುತ್ತಿದ್ದಾಗ ಗೋ ಬಂದಿದ್ದಳು; ಕೇಳಿದ್ದಳು; ಗರ್ಭವತಿಯಾದಳು. ವೇದ ವಿಶೃಶ್ರುತವಾಗುತ್ತಿದ್ದ ಕಾರಣ ಅದರಿಂದಾಗಿ ಹುಟ್ಟಿದ ತಮ್ಮ ಮಗನಿಗೆ ವಿಶ್ರವಸ್ ಎಂದೇ ಹೆಸರಿಟ್ಟರು.
(ಯಸ್ಮಾತ್ತು ವಿಶ್ರುತೋ ವೇದಸ್ತ್ವಯೈಶೋ ಅಧ್ಯಯತೋ ಮಮಾ/
ತಸ್ಮಾತ್ ಸ ವಿಶ್ರವಾನಾಮ ಭವಿಷ್ಯತಿ ನ ಸಂಶಯಃ ) (......ಮುಗಿದಿಲ್ಲ )
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics