ಆರದ ಮೋಹ, ತೀರದ ದಾಹ; ಬಂಗಾರ, ಬಂಗಾರ! 
ಅಂಕಣಗಳು

ಆರದ ಮೋಹ, ತೀರದ ದಾಹ; ಬಂಗಾರ., ಬಂಗಾರ!

ಬಂಗಾರ, ಬೆಳ್ಳಿ, ತಾಮ್ರ ದಂತೆ ಒಂದು ಲೋಹ, ಅದರೆ ಹೊಡಿಕೆದಾರರಿಗೆ ಚಿನ್ನದ ಮೇಲೆ ಎಲ್ಲಕಿಂತ ಹೆಚ್ಚು ಮೋಹ ಏಕೆ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏಕಿಷ್ಟು ಸದ್ದು?

ಬಂಗಾರ, ಸಾಮಾನ್ಯ ಜನರ ಭಾಷೆಯಲ್ಲಿ ಗೋಲ್ಡ್! ಈ ಗೋಲ್ಡ್ ಮೇಲಿನ ಮೋಹ ನಮ್ಮಲ್ಲಿ ಬಹಳ ಹೆಚ್ಚು. ಈ ನಮ್ಮ ಹಳದಿ ಲೋಹದ ಬಗೆಗಿನ ವಿಶೇಷ ಒಲವು ಒಂದು ಗ್ರಾಂ ಚಿನ್ನಕ್ಕೆ ಮೂರುವರೆ ಸಾವಿರದ ತನಕ ಬೆಲೆ ಏರಿತ್ತು!  ಇಂದು ಎರಡು ಸಾವಿರದ ಒಂಬೈನೂರರ ಗಡಿಯಲ್ಲಿದೆ.
ಬಂಗಾರ, ಬೆಳ್ಳಿ, ತಾಮ್ರ ದಂತೆ ಒಂದು ಲೋಹ, ಅದರೆ ಹೊಡಿಕೆದಾರರಿಗೆ ಚಿನ್ನದ ಮೇಲೆ ಎಲ್ಲಕಿಂತ ಹೆಚ್ಚು ಮೋಹ ಏಕೆ? ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏಕಿಷ್ಟು ಸದ್ದು? ಏಕೆ ಇದರ ಬೆಲೆ ಮಾರುಕಟ್ಟೆಯಲ್ಲಿ ಇಷ್ಟೊಂದು ಏರಿಳಿತ ಕಾಣುತ್ತೆ? ಕಡಿಮೆ ಆದರೆ ಒಳ್ಳೆಯದೇ ಅಲ್ಲವೇ? ನಾವು ಹೆಚ್ಚು ಖರೀದಿಸಬಹುದು, ಹೀಗೆ ನೂರಾರು ವಿಚಾರ ನಿಮ್ಮ ತಲೆಯಲ್ಲಿ ಹೊಕ್ಕು ಕೆಲಕ್ಷಣ ನಿಮ್ಮ ಚಿಂತನೆಗೆ ಹಚ್ಚಿರಬಹುದು.  ಬನ್ನಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಏಕೆ ಇಷ್ಟು ಮಹತ್ವ ಪಡೆದಿದೆ, ಈ ಮಹತ್ವ ಎಂದಿನಿಂದ ಸಿಕ್ಕಿತು,ಇಂದಿನ ಇದರ ಸ್ಥಿತಿ, ಮುಂದಿನ ಇದರ ಗತಿ ಇವುಗಳ ನೋಡೋಣ.
ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದಲ್ಲ, ಕ್ರಿಸ್ತ ಪೂರ್ವ 5 ನೆ ಶತಮಾನದಲ್ಲಿ ಇಂದಿನ ಟರ್ಕಿ ದೇಶಕ್ಕೆ ಸೇರಿದ ಲಿಡಿಯದಲ್ಲಿ ಕೊಡು ಕೊಳ್ಳುವಿಕೆಯ ಮಾಧ್ಯಮವಾಗಿ ಉಪಯೋಗಿಸುತ್ತಿದ್ದರು, ನಾಣ್ಯ ಎಷ್ಟು ತೂಕ ಹೊಂದಿದೆ ಎನ್ನುವುದರ ಮೇಲೆ ಅದರ ಮೌಲ್ಯ ನಿರ್ಧಾರ ಆಗ್ತಾ ಇತ್ತು. 19 ನೆ ಶತಮಾನದಲ್ಲಿ ಜಗತ್ತಿನ ಬಹು ಪಾಲು ದೇಶಗಳು ತಮ್ಮ ಕರೆನ್ಸಿ ಮೌಲ್ಯವನ್ನು ಚಿನ್ನದೊಂದಿಗೆ ಹೋಲಿಕೆ ಮಾಡುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಣಿಕೆ ಕಷ್ಟವಾಯ್ತು, ವ್ಯಾಪಾರ, ವಹಿವಾಟಿಗೆ ಹೊರಡುವ ನಾವಿಕರು ನೂರಾರು ಕೆಜಿ ಚಿನ್ನವ ಸಾಗಿಸುವುದು ಸುಲುಬದ ಕೆಲಸವಾಗಿರಲಿಲ್ಲ, ಜೊತೆಗೆ ಕಳ್ಳ-ಕಾಕರರ ಭಯ ಬೇರೆ, ಹೀಗಾಗಿ ಪೇಪರ್ ಮೇಲೆ ಮೌಲ್ಯ ಮುದ್ರಿಸಿ ತೊಡಗಿದರು, ಇಂತಹ ಪೇಪರ್ ಕೊಟ್ಟು ಅಷ್ಟೇ ಮೌಲ್ಯದ ಚಿನ್ನ ಪಡೆಯುವ ಅವಕಾಶ ಕಲ್ಪಿಸಲಾಯಿತು, ಚಿನ್ನವನ್ನು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸಾಗಿಸುವುದು ಇದರಿಂದ ತಪ್ಪಿತು. ಯಾವ ದೇಶ ಅತಿ ಹೆಚ್ಚು ಬಂಗಾರ ಹೊಂದಿದೆಯೋ ಆ ದೇಶ ಹೆಚ್ಚು ಶ್ರೀಮಂತ ದೇಶ ಎಂದು ಪರಿಗಣಿಸಲಾಗುತಿತ್ತು. 1870 ರಿಂದ 1914ರ ವರೆಗೆ ಚಿನ್ನ ವಹಿವಾಟಿನ ಮೂಲವಾಗಿತ್ತು. ಮೊದಲನೇ ಮಹಾಯುದ್ಧದ ನಂತರ, ಸಾಂಬಾರು ಪದಾರ್ಥ , ಬೆಳ್ಳಿ, ತಾಮ್ರಗಳು ಕೂಡ ನಾಣ್ಯದ ಮೌಲ್ಯ ಅಳೆಯುವ ಸಾಧನಗಳಾಗಿ ಉಪಯೋಗಿಸಲ್ಪಟವು, ಇಂಗ್ಲೆಂಡ್ ಹಾಗು ಅದರ ಸಾಮಂತ ದೇಶಗಳು ಮಾತ್ರ ಬಂಗಾರವನ್ನು ಮೌಲ್ಯ ಅಳೆಯುವ ಸಾಧನವನ್ನಾಗಿ ಬಳಸುತ್ತಿದ್ದವು. 1854ರಲ್ಲಿ ಪೋರ್ಚುಗಲ್, 1871 ರಲ್ಲಿ ಜೆರ್ಮನಿ ಹೀಗೆ ಎಲ್ಲರೂ ಬಂಗಾರದ ಹಿಂದೆ ಬಿದ್ದರು. ಒಂದು ಗ್ರಾಂ ಚಿನ್ನಕೆ ಇಷ್ಟು ಬೆಲೆ ಎಂದು ನಿಗದಿಪಡಿಸಿದರು. ಅಮೇರಿಕಾ ಆ ದಿನಗಳಲ್ಲಿ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿತ್ತು.
ಎರಡನೇ ಮಹಾಯುದ್ಧದ ನಂತರ ಜಗತ್ತಿನ ಎಲ್ಲ ದೇಶಗಳು ತಮ್ಮ ಕರೆನ್ಸಿ ಮೌಲ್ಯ ಅಮೆರಿಕಾದ ಡಾಲರ್ ಮೌಲ್ಯದೊಂದಿಗೆ ತುಲನೆ ಮಾಡಿ ನಿಗದಿ ಮಾಡಲು ಶುರು ಮಾಡಿದರು, ಅಂದಿಗೆ ಜಗತ್ತಿನ ಅತಿ ಹೆಚ್ಚು ಬಂಗಾರ ಹೊಂದಿದ ದೇಶವಾಗಿದ್ದ ಅಮೇರಿಕಾಗೆ ಅನಾಯಾಸವಾಗಿ ಒದಗಿದ ಪಟ್ಟ ಅದು. ಒಂದು ಔನ್ಸ್ (28.34ಗ್ರಾಂ ) ಗೆ 3೦ ಡಾಲರ್ ಬೆಲೆ ಕಟ್ಟಲಾಗಿತ್ತು, ಬೆಲೆ ಏರಿಕೆ ಕಂಡು ಅದು 45 ಡಾಲರ್ ಆದಾಗ ಎಲ್ಲರೂ ಅದರ ಲಾಭ ಪಡೆಯಲು ತಮ್ಮಲಿದ್ದ ಪತ್ರ (ಕರೆನ್ಸಿ ನೋಟ್) ಕೊಟ್ಟು ಚಿನ್ನ ಪಡೆಯಲು ಹವಣಿಸಿದರು, ಇರದ ಚಿನ್ನ ತರುವುದಾದರೂ ಎಲ್ಲಿಂದ? ಮೌಲ್ಯ ಹೆಚ್ಚಿದ್ದು ಕಾಲ್ಪನಿಕ, ಇದ್ದ ಬಂಗಾರ ಮೊಟ್ಟೆ ಇಟ್ಟಿರಲಿಲ್ಲ, ಬಂಗಾರದ ಒಟ್ಟು ಮೊತ್ತ ಇದ್ದಷ್ಟೇ ಇತ್ತು, ನೋಟು ಕೊಟ್ಟು ಬಂಗಾರ ಬೇಕು ಎನ್ನುವರ ಸಂಖ್ಯೆ ಹೆಚ್ಚುತ್ತಾ ಹೋಯಿತು, 1971 ರಲ್ಲಿ ಕೊನೆಗೆ ಅಂದಿನ ಅಮೇರಿಕಾ ಅಧ್ಯಕ್ಷ ನಿಕ್ಸನ್, ಬಂಗಾರದೊಂದಿಗೆ ಡಾಲರ್ ಮೌಲ್ಯವನ್ನ ನಿರ್ಧರಿಸುವ ನಿಲುವನ್ನು ತೆಗೆದು ಹಾಕುತ್ತಾನೆ.
ನೂರು ಡಾಲರ್ ಎಂದು ಮುದ್ರಿಸಿರುವ ಪೇಪರ್ ಕೊಟ್ಟರೆ ಇಂದು ನಮಗೆ ಚಿನ್ನದ ಕಿಲುಬು ಕೂಡ ಸಿಗುವುದಿಲ್ಲ, ನಿಕ್ಸನ್ ಅಂದಿಗೆ ಎದುರಾದ ಸಮಸ್ಯೆ ಬಗೆಹರಿಸಿದರು, ಹೂಡಿಕೆದಾರರು ತಮ್ಮ ಕೈಲಿದ್ದ ಮೌಲ್ಯವಿಲ್ಲದ ಪೇಪರ್ ನಂಬಲೇ ಇಲ್ಲ! ವಿಪರ್ಯಾಸ ನೋಡಿ ಜಗತ್ತಿನಲ್ಲಿ ಅನತಿ ಕಾಲದಿಂದಲೂ ಕೇವಲ ಕೆಲವು ಜನ ಮಾಡುವ ತಪ್ಪುಗಳಿಗೆ, ಕಪ್ಪ ಕೊಡುವುದು ಜನ ಸಮಾನ್ಯ ಮಾತ್ರ!  ಜಾಗತಿಕ ಮಾರುಕಟ್ಟೆಯಲ್ಲಿ ಇಂದಿಗೂ ಚಿನ್ನ ಏಕೆ ಪ್ರಸ್ತುತ ಎನ್ನುವುದು ಬುದ್ದಿವಂತ ಓದುಗ ಗ್ರಹಿಸಿರುತ್ತಾನೆ ಎಂದು ಭಾವಿಸುವೆ.
ಸರಿ, ಹೀಗಿರುವಾಗ ಚಿನ್ನದ ಮೌಲ್ಯ ಏರಿಳಿತ ಕಾಣುವುದೇಕೆ?
  • ಗಮನಿಸಿ, ಚಿನ್ನದ ಮೌಲ್ಯವನ್ನು ಇಂದಿಗೂ ಡಾಲರ್ ನಲ್ಲಿ ಅಳೆಯುತ್ತೇವೆ, ಡಾಲರ್ ಮೌಲ್ಯ ಹೆಚ್ಚಿದರೆ ಚಿನ್ನದ ಮೌಲ್ಯ ಕುಸಿಯುತ್ತೆ, ಚಿನ್ನ ಸಂಗ್ರಹಿಸಿ ಇಡಲು ಹಣ ಖರ್ಚು ಮಾಡುತ್ತಿರಿ, ಇದರಿಂದ ಯಾವುದೇ ಬಡ್ಡಿ, ಅಥವಾ ವೃದ್ದಿ ಇಲ್ಲ, ಇದೊಂದು ಮಾನಸಿಕ ಧೈರ್ಯ ಕೊಡುವ ಹೂಡಿಕೆ ಅಷ್ಟೇ, ಹೆಚ್ಚಿದ ಡಾಲರ್ ಮೌಲ್ಯ ನಿಮ್ಮ ಸಂಗ್ರಹಣ ಖರ್ಚು ಹೆಚ್ಚಿಸುತ್ತೆ, ಹೀಗಾಗಿ ಹೂಡಿಕೆದಾರ ಇದರಲ್ಲಿ ನಿರಾಸಕ್ತಿ ತೋರಿಸುತ್ತಾನೆ, ನಮಗೆಲ್ಲಾ ಗೊತ್ತಿರುವಂತೆ ಡಿಮ್ಯಾಂಡ್ ಇಲ್ಲದೆ ಸಪ್ಲೈ ಮೌಲ್ಯ ಕಳೆದು ಕೊಳ್ಳುತ್ತದೆ. ಇದು ಅಂತರರಾಷ್ಟ್ರೀಯ ಮಟ್ಟದ ಕಥೆ. ನೋಡಿ ಚಿನ್ನದ ಬೆಲೆ ಅಲ್ಲಿ ಕುಸಿದರೂ ರುಪಾಯಿಲ್ಲಿ ಕುಸಿಯುವುದಿಲ್ಲ. ಏಕೆಂದರೆ ಡಾಲರ್ ಎದುರು ನಮ್ಮ ರುಪಾಯಿ ಮೌಲ್ಯ ಕೂಡ ಕುಸಿಯುತ್ತದೆ. ಹೀಗಾಗಿ ಚಿನ್ನಕ್ಕೆ ನಾವು ತೆರುವ ಬೆಲೆ ಮಾತ್ರ ಹೆಚ್ಚು ಕಡಿಮೆ ಅಷ್ಟೇ ಇರುತ್ತದೆ. 
  • ಅಮೇರಿಕಾ ತನ್ನ ಕುಸಿದ ಮಾರುಕಟ್ಟೆಯ ಪುನರ್ ಜೀವನಗೊಳಿಸುವ ಉದ್ದೇಶದಿಂದ ತನ್ನ ಸಾಲ ಪತ್ರ (ಡೆಟ್ ಬಾಂಡ್) ದ ಮೇಲೆ ಹೆಚ್ಚಿನ ಬಡ್ಡಿ (ಇಂಟರೆಸ್ಟ್) ಕೊಡುವ ಆಮಿಷ ಒಡ್ಡಿದೆ, ಹಣಕಾಸಿನ ಆಟದಲ್ಲಿ ನಿಯಮಗಳ ಸೃಷ್ಟಿಸುವ ಅಮೆರಿಕ, ಹೇಗಾದರೂ ತನ್ನ ಡೆಟ್ ಬಾಂಡ್ ಮಾರಬೇಕೆನ್ನುವ ದರ್ದಿಗೆ ಬಿದ್ದಿದೆ, ಹೆಚ್ಚಿನ ಬಡ್ಡಿಯ ಆಸೆಗೆ ಹೂಡಿಕೆದಾರ ಡೆಟ್ ಬಾಂಡ್ ಗಳ ಕಡೆ ಮುಖ ಮಾಡಿರುವುದು, ಬಂಗಾರ ಬೆಲೆ ಇಳಿಯಲು ಇನ್ನೊಂದು ಕಾರಣ. ಸನ್ನಿವೇಶ ಇದಕ್ಕೆ ವಿರುದ್ಧವಾದರೆ ಬಂಗಾರದ ಬೆಲೆ ಏರಿಕೆ ಕಾಣುತ್ತದೆ. 
  • ಇಂದಿಗೂ ಇನ್ನೂ ಸ್ಥಿರತೆ ಕಾಣದ ಯುರೋ ವಲಯ, ಅಲ್ಲಿನ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡಲು ಇದ್ದ ಪ್ರಮುಖ ಕಾರಣ. ಗಮನಿಸಿ ವಿಶ್ವದಾದಂತ್ಯ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುತ್ತಾರೆ ಆದರೆ ಪರಿಸ್ಥಿತಿ ತೀರಾ ಡೋಲಾಯಮಾನವಾಗಿದ್ದಾಗ ಅವರು ಚಿನ್ನದ ಮೇಲಿನ ಹೂಡಿಕೆಯನ್ನ ಬಯಸುತ್ತಾರೆ. ಜಗತ್ತು ಅಸ್ಥಿರವಾದಷ್ಟೂ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತದೆ. ಪರಿಸ್ಥಿತಿ ತಿಳಿಯಾದಷ್ಟೂ ಹೂಡಿಕೆದಾರರು ಬೇರೆ ಬೇರೆ ಅವಕಾಶಗಳ ಬಗ್ಗೆಯೂ ಗಮನಹರಿಸುತ್ತಾರೆ. ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆ ಕೂಡ ಇದರೊಂದಿಗೆ ನಂಟು ಹೊಂದಿದೆ. 
  • ಅಮೇರಿಕಾ ದೇಶಕ್ಕೆ ಸೆಡ್ಡು ಹೊಡೆದು ಇಲ್ಲಿ ತನಕ ಹೋರಾಟ ಕೊಟ್ಟು ಇದ್ದುದರಲ್ಲೇ ಗೆದ್ದಿರುವುದು ಚೀನಾ ದೇಶ, ಇದು ತನ್ನ ಕರೆನ್ಸಿ ಯುಆನ್ (YUAN ) ನನ್ನು ರಿಸರ್ವ್ ಕರೆನ್ಸಿ ಮಾಡಲು ನಿರ್ಧರಿಸಿತ್ತು, ಅಂದರೆ ಡಾಲರ್ ಗೆ ಪರ್ಯಾಯ ಜಾಗತಿಕ ಕರೆನ್ಸಿ!, ಇದು ಸಾಧ್ಯವಾಗುವುದು ಜಗತ್ತಿನ ಎಲ್ಲಾ ದೇಶಗಳ ವಿಶ್ವಾಸಗಳಿಸಿದರೆ ಮಾತ್ರ,ಹೆಚ್ಚಿನ ಗೋಲ್ಡ್ ರಿಸೆರ್ವ್ ವಿಶ್ವಾಸ ಗಳಿಸಲು ಸಹಕಾರಿ, ಚೀನಾ ಹೆಚ್ಚು ಚಿನ್ನ ಖರೀದಿಸಲು ಅಣಿಯಾಗಿತ್ತು, ಆದರೆ ಅದದ್ದೇ ಬೇರೆ, ಚೀನಾದ ಹೂಡಿಕೆದಾರರು ಎಷ್ಟು ಕೊಬ್ಬಿ ಬೆಳೆದಿದ್ದಾರೆ ಎಂದರೆ ಚೀನಾ ಸರಕಾರ ತನ್ನೆಲ್ಲಾ ಪ್ರಯತ್ನದ ನಡುವೆ ಮಾರುಕಟ್ಟೆ ಕುಸಿತ ತಪ್ಪಿಸಲಾಗಿಲ್ಲ,  ಕಳೆದೆರಡು ವರ್ಷದಲ್ಲಿ ಷೇರು ಮಾರುಕಟ್ಟೆಯಲ್ಲಿ ಕರಗಿ ಹೋದ ಸಂಪತ್ತು 3.2 ಟ್ರಿಲಿಯನ್ ಡಾಲರ್, ಅದು ಎಷ್ಟು ದೊಡ್ಡದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಕೊಡುತ್ತೇನೆ, ಭಾರತದ ಷೇರು ಮಾರುಕಟ್ಟೆಯ ಒಟ್ಟು ಮೊತ್ತದ ಎರಡರಷ್ಟು! ಅಂದಾಜು ಆಯಿತೆ? ನಮ್ಮ ದೇಶದ ಒಟ್ಟು ಷೇರು ಮಾರುಕಟ್ಟೆಯ ಎರಡರಷ್ಟು ಅವರು ಹಣ ಕಳೆದು ಕೊಂಡರು ಎಂದರೆ ಅವರ ಮಾರುಕಟ್ಟೆ ಎಷ್ಟು ದೊಡ್ಡದಿರಬಹುದು! ಹೀಗಾಗಿ, ಡಾಲರ್ ಗೆ ಪರ್ಯಾಯ ತನ್ನ ಕರೆನ್ಸಿ ವಿಶ್ವದ ಮುಂದಿಡುವ ಚೀನಾ ದೇಶದ ಆಸೆ ಸಧ್ಯಕ್ಕೆ ಈಡೇರುವ ಲಕ್ಷಣಗಳಿಲ್ಲ, ಹೀಗಾಗಿ ಹೆಚ್ಚು ಚಿನ್ನ ಖರೀದಿಸುವ ತನ್ನ ನಿಲುವಿನಿಂದ ಚೀನಾ ಹಿಂದೆಸರಿದದ್ದು ಕೂಡ ಚಿನ್ನದ ಬೆಲೆ ಇನ್ನಷ್ಟು ಏರಿಕೆಯಾಗದಂತೆ ತಡೆದಿದೆ. 
ಹೋಗಲಿ ಬಿಡಿ ಆದದ್ದು ಒಳ್ಳೆಯದೇ ಆಯಿತು, ನಾವು ಹೆಚ್ಚು ಖರೀದಿಸಬಹುದು ಎಂದು ನೀವು ಹಿಗ್ಗುವಂತಿಲ್ಲ, ಏಕೆ? ಬನ್ನಿ ಚಿನ್ನದ ಬೆಲೆ ಕುಸಿತ ಹೇಗೆ ಒಂದು ದೇಶದ ಅರ್ಥಿಕ ಸ್ಥಿತಿಯ ಅಲ್ಲೋಲಕಲ್ಲೋಲ ಮಾಡುತ್ತೆ ನೋಡೋಣ.
2013 ರ ಅಂಕಿ ಅಂಶದ ಪ್ರಕಾರ ಭಾರತ ದೇಶ ಒಂದರಲ್ಲಿ ಚಿನ್ನಕೆ ಸಂಬಂಧಿಸಿದ ವಹಿವಾಟು 40 ಬಿಲಿಯನ್ ಅಮೆರಿಕಾ ಡಾಲರ್. ಗಮನಿಸಿ ಒಂದು ಬಿಲಿಯನ್ 6500 ಕೋಟಿ ರುಪಾಯಿ ಅಂದರೆ 2 ಲಕ್ಷ 60 ಸಾವಿರ ಕೋಟಿ ರುಪಾಯಿ ವ್ಯವಹಾರ. 2013 ರಲ್ಲಿ ಭಾರತದ ರಕ್ಷಣಾ ಬಜೆಟ್ 38 ಬಿಲಿಯನ್ ಡಾಲರ್ ಎಂದರೆ ಈ ಉದ್ದಿಮೆಯ ಮಹತ್ವ ಅರಿವಾದೀತು. 2018 ರಲ್ಲಿ ಈ ಮೊತ್ತ 31 ಬಿಲಿಯನ್ ಡಾಲರ್. ಡಿಮಾನಿಟೈಸೇಷನ್ ಸ್ವಲ್ಪ ಮಟ್ಟಿಗಾದರೂ ಚಿನ್ನದ ಮೇಲಿನ ನಮ್ಮ ಹುಚ್ಚು ವ್ಯಾಮೋಹಕ್ಕೆ ಕಡಿವಾಣ ಹಾಕಿದೆ. 
ಇಂದು ಗಲ್ಲಿಗಲ್ಲಿಗೆ ಎರಡೋ ಮೂರೋ ಗೋಲ್ಡ್ ಲೋನ್ ಕೊಡುವ ಸಂಸ್ಥೆಗಳಿವೆ, ಪ್ರಖ್ಯಾತ ನಟರು, ಸಮಾಜದ ಗಣ್ಯರು ಇದರ ರಾಯಭಾರಿಗಳು, ಇಂತಹ ಸಂಸ್ಥೆಗಳು ಹೆಚ್ಚು ವಹಿವಾಟು ನಡೆಸಬೇಕೆಂಬ ಆತುರದಲ್ಲಿ ಆಭರಣದ ಮೌಲ್ಯದ 80 ಕೆಲವೊಮ್ಮೆ 90 ಭಾಗ ಸಾಲ ಕೊಡುತ್ತಾರೆ. ಚಿನ್ನದ ಬೆಲೆ ಕುಸಿತ ಹೀಗೆ ಮುಂದುವರಿದು, ಹಲವು ತಿಂಗಳು ಚೇತರಿಕೆ ಕಾಣದಿದ್ದರೆ, ಉದ್ಯಮ ಸಂಕಟಕ್ಕೆ ಸಿಲುಕುತ್ತದೆ, ಉದಾಹರಣೆ ಸಮೇತ ನೋಡಣ.
ಜನವರಿ 2015, ಗುಂಡಪ್ಪನಿಗೆ ಅರ್ಜೆಂಟ್ ಹಣ ಬೇಕಿತ್ತು. ಗೋಲ್ಡ್ ಲೋನ್ ಕೊಡುವ ಸಂಸ್ಥೆಗೆ ಹೋದ, ಚಿನ್ನದ ಬೆಲೆ 28ಸಾವಿರ ಹತ್ತು ಗ್ರಾಂಗೆ, ತನ್ನ ಬಳಿ ಇದ್ದ 100 ಗ್ರಾಂ ಚಿನ್ನ ಒತ್ತೆ ಇಟ್ಟು ಪಡೆದದ್ದು ಎರಡು ಲಕ್ಷ ಇಪ್ಪತು ನಾಲ್ಕು ಸಾವಿರ (ಎರಡು ಲಕ್ಷ ಎಂಬತ್ತು ಸಾವಿರದ ಎಂಬತ್ತು ಭಾಗ), ಇಂದು ಚಿನ್ನದ ಬೆಲೆ 23 ಸಾವಿರ ಪ್ರತಿ ಹತ್ತು ಗ್ರಾಂ ಗೆ, ಅಂದರೆ ೧೦೦ ಗ್ರಾಂ ಚಿನ್ನದ ಬೆಲೆ ಎರಡು ಲಕ್ಷ ಮೂವತ್ತು ಸಾವಿರ, ಆತ ಪಡೆದ ಸಾಲದ ಮೊತ್ತದ ಅಜೂಬಾಜು, ಗುಂಡಪ್ಪ ಬಡ್ಡಿ ಏಕೆ ಕಟ್ಟುತ್ತಾನೆ? ನನ್ನ ಕೈಲಿ ಆಗೋಲ್ಲ ಚಿನ್ನ ನೀವೇ ಇಟ್ಕೋಳಿ ಸ್ವಾಮಿ ಎನ್ನುವ ಸಾಧ್ಯತೆ ಹೆಚ್ಚು. ಹೀಗಾದ್ರೆ ಗೋಲ್ಡ್ ಲೋನ್ ಕೊಡುವ ಈ ಸಂಸ್ಥೆಗಳ ಗತಿಯೇನು?
ಕಡಿಮೆಯಾದರೆ ಒಂದು ಕಥೆ, ಜಾಸ್ತಿಯಾದರೂ ಅದರಿಂದ ಅನಾಹುತ ತಪ್ಪಿದ್ದಲ್ಲ. ಜಗತ್ತಿನ ಹೂಡಿಕೆದಾರ ಅಳೆದು ತೂಗಿ ಚಿನ್ನದ ಮೇಲಿನ ಹೂಡಿಕೆ ಮಾಡುತ್ತಿದ್ದರೆ ಭಾರತದಲ್ಲಿ ಮಾತ್ರ ಬೇರೆಯದೇ ಕಥೆ. ಇಲ್ಲಿ ಚಿನ್ನಕ್ಕೂ ನಾವು ಮಾನಸಿಕ ಮೌಲ್ಯ ಕಟ್ಟುತ್ತೇವೆ. ಹೀಗಾಗಿ ಒಂದು ಅಂದಾಜಿನ ಪ್ರಕಾರ ಭಾರತೀಯ ಮನೆಗಳಲ್ಲಿ ಇರಬಹುದಾದ ಒಟ್ಟು ಚಿನ್ನದ ತೂಕ 24 ಸಾವಿರ ಟನ್! ಅಂದರೆ 800 ಬಿಲಿಯನ್ ಡಾಲರ್ ಮೌಲ್ಯ!!. ಎರಡು ಲಕ್ಷ ಮೌಲ್ಯದ ಚಿನ್ನ ಖರೀದಿಸಲು ಪಾನ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಹೀಗಿದ್ದೂ 2020ಕ್ಕೆ ಮತ್ತೆ ಚಿನ್ನಕ್ಕೆ ಸಂಬಂಧಿಸಿದ ವಹಿವಾಟು 40 ಬಿಲಿಯನ್ ಡಾಲರ್ ಮುಟ್ಟುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತದೆ ಅಂಕಿಅಂಶ. 
ಕೊನೆ ಮಾತು: ನಾವು ಚಿನ್ನದ ಮೇಲಿನ ಮೋಹ ಬಿಡದೆ ಕೊಂಡಷ್ಟೂ ಅಮೇರಿಕಾ ಇನ್ನಷ್ಟು ಬಲಿಷ್ಠವಾಗುತ್ತದೆ. ಗಮನಿಸಿ ಗೋಲ್ಡ್ ಡೆಪಾಸಿಟ್ ಬ್ಯಾಂಕಿನಲಿದ್ದರೆ ಆಗ ನಾವು ಅಮೆರಿಕಾಗಿಂತ ಬಲಿಷ್ಠರಾಗಲು ಸಾಧ್ಯ. ಆದರೆ ನಮ್ಮ ದೇಶದಲ್ಲಿ ಆಗಿರುವುದೇನು ಗೊತ್ತೇ? ನಮ್ಮ ಬ್ಯಾಂಕ್ಗಳಲ್ಲಿ ಇರುವ ಚಿನ್ನ 560ಟನ್. ಆದರೆ ಬಿಡಿಯಾಗಿ ದೇಶದ ಜನರ ಬಳಿ ಇರುವ ಚಿನ್ನ 24 ಸಾವಿರ ಟನ್. ಆಕಸ್ಮಾತ್ ಇದು ಉಲ್ಟಾ ಆಗಿದ್ದರೆ!! ಅಂದರೆ ಬ್ಯಾಂಕ್ಗಳ ಬಳಿ 24 ಸಾವಿರ ಟನ್ ಚಿನ್ನದ ಡೆಪಾಸಿಟ್ ಇದಿದ್ದರೆ ನಮ್ಮ ಆರ್ಥಿಕ ಚಿತ್ರಣವೇ ಬೇರೆಯಾಗಿರುತ್ತಿತ್ತು. ಕೇವಲ ನಮ್ಮ ಮಾನಸಿಕ ಧೈರ್ಯಕ್ಕೆ ಚಿನ್ನ ಕೊಳ್ಳುವುದು ಬಿಡಬೇಕು. ಹೆಚ್ಚೆಚ್ಚು ಗೋಲ್ಡ್ ಬಾಂಡ್ ಖರೀದಿ ದೇಶದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಇದು ಮದುವೆಗೂ, ಶುಭ ಸಮಾರಂಭಕ್ಕೂ ಚಿನ್ನ ಖರೀದಿಸುವ ಭಾರತೀಯ ನಾಗರಿಕನಿಗೆ ತಿಳಿಯುವುದೆಂದು?
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video