ಅಂಕಣಗಳು

ಹಳೆಯ ನೀರು ಹೋಗಿ ಹೊಸ ನೀರು ಹರಿಯುವುದು ಪ್ರಕೃತಿ ಧರ್ಮ . ಹಣ್ಣೆಲೆ ಬಿದ್ದು ಚಿಗುರು ಮರ ತುಂಬುವುದು ಸಹಜ ಕ್ರಿಯೆ

"ಮಹಾಜನರೇ, ಮಹಾ ಪ್ರಭುಗಳು ತಮ್ಮನ್ನು ಹಲವಾರು ವರ್ಷಗಳಿಂದ ಪಾಲಿಸುತ್ತಿರುವುದೂ, ತಮ್ಮನ್ನು ಮಕ್ಕಳಂತೆ ಪೋಷಿಸುತ್ತಿರುವುದೂ ವೇದ್ಯ. ಮಹಾರಾಜರು ವಾಜಪೇಯ, ಪೌಂಡರೀಕ, ಪ್ರಜಾಹರ್ಷ,

"ಮಹಾಜನರೇ, ಮಹಾ ಪ್ರಭುಗಳು ತಮ್ಮನ್ನು ಹಲವಾರು ವರ್ಷಗಳಿಂದ ಪಾಲಿಸುತ್ತಿರುವುದೂ, ತಮ್ಮನ್ನು ಮಕ್ಕಳಂತೆ ಪೋಷಿಸುತ್ತಿರುವುದೂ ವೇದ್ಯ. ಮಹಾರಾಜರು ವಾಜಪೇಯ, ಪೌಂಡರೀಕ, ಪ್ರಜಾಹರ್ಷ, ಧಾನ್ಯವೃದ್ಧಿ, ಅಶ್ವಿನೀ ಅನುಗ್ರಹ, ಕ್ಷಾಮಯಮ, ವೈರಿಕ್ಷಯ, ಸುವರ್ಣಸಂತುಷ್ಠಿ, ಯುದ್ಧಜಯ... ಇತ್ಯಾದಿ ನೂರಾರು ಯಾಗಗಳನ್ನು ಅಯೋಧ್ಯೆಯ ಅಭಿವೃದ್ಧಿಗಾಗಿ ಮಾಡುತ್ತಲೇ ಬಂದಿದ್ದಾರೆ. ಇವೆಲ್ಲ ತಮಗೂ ಗೊತ್ತಿದೆ. ಅಂತಹ ಒಂದು ಯಾಗ ಪುತ್ರಕಾಮೇಷ್ಟಿಯಲ್ಲೇ ಸಾಕ್ಷಾತ್ ಪ್ರಾಜಾಪತ್ಯ ಪುರುಷನೇ ಪಾಯಸ ಪ್ರದಾನ ಮಾಡಲಾಗಿ ಮಹಾರಾಜರಿಗೆ ನಾಲಕ್ಕು ಮಕ್ಕಳು ಅನುಗ್ರಹಿತರಾದದ್ದೂ ತಮಗೆ ತಿಳಿದದ್ದೇ. ಈಗೊಂದು ವರ್ಷದ ಹಿಂದೆ ಆ ನಾಲ್ವರಿಗೂ ವಿವಾಹಗಳಾಗಿ ಎಲ್ಲರೂ ಸುಖದಿಂದಿರುವುದೂ ತಮಗೆಲ್ಲ ಅರ್ಥವಾಗಿರುವುದೇ! ಈ ಸಂತಸದ ಕಾಲದಲ್ಲಿ ಚಕ್ರವರ್ತಿಗಳು ತಮ್ಮ ಮುಂದೆ ಒಂದು ಮಹತ್ತರ ವಿಷಯವನ್ನು ಮಂಡಿಸುವ ಸಲುವಾಗಿ ಈ ಪ್ರಜಾಪ್ರತಿನಿಧಿ ಸಭೆಯನ್ನು ಆಮಂತ್ರಿಸಿದ್ದಾರೆ!"
ಮಾತು ಮುಗಿಸಿ ಸುಮಂತ್ರ ಹಿಂದಕ್ಕೆ ಸರಿದ. ಗಂಭೀರ ಕಂಠದಿಂದ ದಶರಥ ಮಾತು ಆರಂಭಿಸಿದ. "ಮಹಾಜನರೇ, ಮಾಂಡಲಿಕರೇ, ಪ್ರಜಾಪ್ರತಿನಿಧಿಗಳೇ, ನಿಮಗೆಲ್ಲ ನಮಸ್ಕಾರ. ಬಹುಪಾಲು ಇದು ನನ್ನ ಕೊನೆಯ ಸಭೆ ಎನಿಸುತ್ತಿದೆ. "ಜನರು ವಿಚಲಿತರಾದರು. "ಛೇ ಛೇ" ಎಂದರು, "ಇಲ್ಲ, ಇಲ್ಲ" ಎಂದರು. ಮಹಾರಾಜ ಮುಂದುವರಿಸಿದ. "ಕಾಲದ ಪ್ರಭಾವವೇ ಅಂತಹುದು! ಯಾರನ್ನು ಬಿಟ್ಟಿದೆ ಅದು? ಇತ್ತೀಚಿಗೆ ನನಗೆ ಹಿಂದಿದ್ದ ಹುಮ್ಮಸ್ಸು ಉಳಿದಿಲ್ಲ. ಮುದಿತನ ನನ್ನನ್ನು ಆಕ್ರಮಿಸುತ್ತಿದೆ. ಇಲ್ಲಿವರೆಗೆ ಮಾಡಿರುವ ಸೇವೆ ಸಾಕೆನಿಸುತ್ತಿದೆ. ಹಿಂದಿನ ವರ್ಷ ಹಿಂದಕ್ಕೆ ಸರಿದೇ ಹೊಸವರ್ಷ ನಗುತ್ತದೆ. ಹಳೆನೀರು ಹೋಗಿ ಹೊಸನೀರು ಹರಿಯುವುದು ಪ್ರಕೃತಿಧರ್ಮ. ಹಣ್ಣೆಲೆ ಬಿದ್ದು ಚಿಗುರು ಮರ ತುಂಬುವುದು ಸಹಜ ಕ್ರಿಯೆ. ಅಂತೇ ವೃದ್ಧನಾದ ನಾನು, ನನ್ನ ಔರಸಪುತ್ರ ಶ್ರೀರಾಮನಿಗೆ ಸಿಂಹಾಸನವನ್ನು.... "ಮಾತು ಮುಗಿಯುವ ಮುನ್ನವೇ ಜನರು ಚಪ್ಪಾಳೆ ತಟ್ಟತೊಡಗಿದರು. ಎಲ್ಲರೂ ಈ ವಾರ್ತೆಯನ್ನು ಸಂಭ್ರಮಿಸಿದರು. "ಶ್ರೀರಾಮರಿಗೆ ಜಯವಾಗಲಿ. ಅಯೋಧ್ಯೆಗೆ ಜಯವಾಗಲಿ. ದಶರಥನಿಗೆ ಜಯವಾಗಲಿ" ಹರ್ಷೋದ್ಗಾರಗಳು ವೃದ್ಧಿಸಿದುವು. ಚಪ್ಪಾಳೆ ನಿಲ್ಲುತ್ತಲೇ ಇಲ್ಲ! ದಶರಥನಿಗೆ ಇದು ಅನಿರೀಕ್ಷಿತ. ತಾನು ವಿಶ್ರಮಿಸುತ್ತಿದ್ದೇನೆಂದು ಘೋಷಿಸಿದರೆ ಜನರು ವಿರೋಧಿಸುತ್ತಾರೆಂದು ಎಣಿಸಿದ್ದರೆ... ಇದೇನು ಜನ ಸ್ವಾಗತಿಸುತ್ತಿದ್ದಾರೆ. ಕೊಂಚ ಅಪ್ರತಿಭನಾದ. ಮಗನನ್ನು ಒಪ್ಪಿಕೊಂಡದ್ದಕ್ಕೆ ಒಳಗೆ ಸಂತೋಷವೇ! ಆದರೂ ಇಷ್ಟು ಬೇಗ ತನ್ನನ್ನು ಬಿಡಬಹುದೆಂದು ಎಣಿಸಿರಲೇ ಇಲ್ಲ. ಕೊಂಚ ನೊಂದವನಂತೇ ನುಡಿದ. "ಇದೇನಿದು? ನಾನು ನಿರ್ಗಮಿಸುತ್ತೇನೆನ್ನುತ್ತಿದ್ದಂತೆಯೇ ಒಪ್ಪುತ್ತಿದ್ದೀರಲ್ಲ? ನಾನು ಸತ್ಯಧರ್ಮಗಳಿಂದ ರಾಜ್ಯವಾಳುತ್ತಿರುವಾಗ ನೀವು ಹೀಗೆ ರಾಮ ರಾಜನಾಗಲೆಂದು ಬಯಸುತ್ತಿರುವುದು ನನಗೆ ಸಂದೇಹವಾಗಿದೆ. ನನ್ನ ಆಳ್ವಿಕೆಯ ಬಗ್ಗೆಯೇ ನಿಮಗೆ ಅತೃಪ್ತಿಯೇನೋ ಎಂದೆನಿಸುತ್ತಿದೆ. " 
( ಶೃತೈವ ವಚನಂ ಯನ್ಮೇ ರಾಘವಂ ಪತಿಮಿಚ್ಛತ
ರಾಜಾನಃ ಸಂಶಯೋ ಯಂಮೇ ಕಿಮಿದಂಬ್ರೂತ ತತ್ವತಃ
ಕಥಂ ನ ಮಯಿ ಧರ್ಮೇಣ ಪೃಥಿವೀಂ ಅನುಶಾಸತಿ
ಭವಂತೋ ದ್ರಷ್ಟುಂ ಇಚ್ಛಂತಿ ಯುವರಾಜಂ ಮಮಾತ್ಮಜಂ )
ಕೊಂಚ ಹೊತ್ತು ಮೌನ ಆವರಿಸಿತು. ಭೌಮ ದೇಶದ ಮಾಂಡಲಿಕನೆದ್ದು ನಮಸ್ಕರಿಸಿ ನುಡಿದ, "ಮಹಾರಾಜರೇ ಮನ್ನಿಸಿ. ನಿಮಗೆ ನೋವು ಉಂಟು ಮಾಡುವುದು ನಮ್ಮ ಉದ್ದಿಶ್ಯವಲ್ಲ. ತಮ್ಮ ಮಗನ ಹೆಸರು ಕೇಳುತ್ತಿದ್ದಂತೆಯೇ ನಮಗೆ ಸಂತೋಷ ಉಕ್ಕಿ ಆ ಪ್ರದರ್ಶನವಾಯಿತು. "ದಶರಥ ಗಮನವಿಟ್ಟು ಕೇಳತೊಡಗಿದ. "ಶ್ರೀರಾಮರು ನಮಗೆಲ್ಲ ಮೆಚ್ಚು. ಅದಕ್ಕೆ ಕಾರಣ ಆತನ ಪ್ರಶಾಂತ ನಡತೆ. ಸಾಮಾನ್ಯವಾಗಿ ನಾವು ದೊಡ್ಡವರನ್ನು, ರಾಜ ವರ್ಗದವರನ್ನು ಮೊದಲು ಮಾತನಾಡಿಸಬೇಕು. ಆದರೆ ಶ್ರೀರಾಮರು ಇದಕ್ಕೆ ತದ್ವಿರುದ್ಧ. ನಮ್ಮನ್ನು ಕಾಣುತ್ತಿದ್ದಂತೆಯೇ ಅವರೇ ಮೊದಲು ಮಾತನಾಡಿಸುತ್ತಾರೆ. ಅತ್ಯಂತ ಮೃದುವಾಗಿ ಸಂಭಾಷಿಸುತ್ತಾರೆ. ತನಗೆ ಅಹಿತವಾಗಿ ಯಾರಾದರೂ ಹೇಳಿದರೂ ಅದನ್ನು ನಯವಾಗಿ ತಿದ್ದುತ್ತಾರಾಗಲೀ ಪರಷುವಾಕ್ಯವನ್ನು ಬಳಸಿದವರೇ ಅಲ್ಲ. ನಾವ್ಯಾರಾದರೂ ನೂರು ತಪ್ಪು ಮಾಡಿದರೂ ಅದನ್ನು ನೆನಪಿನಲ್ಲೇ ಇಡುವುದಿಲ್ಲ. ಆದರೆ ಅಕಸ್ಮಾತ್ ನಮ್ಮಿಂದ ಒಂದು ಪುಟ್ಟ ಸಹಾಯವಾಗಿದ್ದರೆ, ಅದನ್ನು ನೂರು ಬಾರಿ ಹೇಳುತ್ತಿರುತ್ತಾರೆ. ಗುಣಗಣಿಗಳಿಗೆ, ಙ್ಞಾನವೃದ್ಧರಿಗೆ, ಮುದುಕರಿಗೆ ಅವರು ಎಂದೂ ಮಾನ್ಯತೆಯನ್ನು ಕೊಡುತ್ತಾರೆ. ಇದರೊಡನೆ ಎಷ್ಟೇ ಕಾರ್ಯಗಳಿದ್ದರೂ ಅಸ್ತ್ರ-ಶಸ್ತ್ರಗಳ ಅಭ್ಯಾಸವನ್ನೆಂದೂ ತಪ್ಪಿಸುವುದೇ ಇಲ್ಲ. 
(ಸ ತು ನಿತ್ಯಂ ಪ್ರಶಾಂತಾತ್ಮಾ ಮೃದು ಪೂರ್ವಂಚ ಭಾಷತೇ
ಉಚ್ಯಮಾನೋಪಿ ಪರುಷಂ ನ ಉತ್ತರಂ ಪ್ರತಿಪದ್ಯತೇ
ಕಥಂಚಿದುಪಕಾರೇಣ ಕೃತೇನ ಏಕೇನ ತುಷ್ಯತಿ
ನಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ
ಶಿಲವೃದ್ಧೈರ್ಙ್ಞಾನವೃದ್ಧೈರ್ವಯೋವೃದ್ಧೈಶ್ಚ ಸಜ್ಜನೈಃ
ಕಥಯನ್ನಾಸ್ತವೈ ನಿತ್ಯಂ ಅಸ್ತ್ರ ಯೋಗ್ಯಾಂತರೇಷ್ವಪಿ) " 
ಧರ್ಮಪುರಿಯ ರಾಜ ಎದ್ದು ನಿಂತು ವಂದಿಸಿ ನುಡಿದ; "ಮಹಾರಾಜರೇ ನಿಮ್ಮ ಮಕ್ಕಳು ಮಹಾ ಬುದ್ಧಿವಂತರು. ತುಂಬ ಮೃದುವಾಗಿ ಮಾತನಾಡುತ್ತಲೇ ಎಲ್ಲರನ್ನೂ ಗೆಲ್ಲುತ್ತಾರೆ. ಅತ್ಯಂತ ಪ್ರಿಯವಾಗಿ ಮಾತನಾಡಿ ಎದುರಾಳಿಯನ್ನು ಸೋಲಿಸುತ್ತಾರೆ. ಬಹು ದೊಡ್ಡ ಪರಾಕ್ರಮಿ. ಹಾಗಿದ್ದರೂ ಎಂದೂ ಜಂಬ ಕೊಚ್ಚಿಕೊಳ್ಳುವುದಿಲ್ಲ. ಯಾರಾದರೂ ಸುಳ್ಳು ಹೇಳಿದರೆ ತಕ್ಷಣ ಹಿಡಿದುಬಿಡುತ್ತಾರೆ. ಹರಟೆ ಹೊಡೆಯುವುದರಲ್ಲಿ ಆಸಕ್ತಿಯೇ ಇಲ್ಲ. ಗುರು-ಹಿರಿಯರಲ್ಲಿ ಪೂಜ್ಯಬುದ್ಧಿ. ಪ್ರಜೆಗಳೆಂದರೆ ಪ್ರಾಣ; ಪ್ರಜೆಗಳಿಗೂ ಶ್ರೀರಾಮರೆಂದರೆ ಪಂಚಪ್ರಾಣ." 
(ಬುದ್ಧಿಮಾನ್ ಮಧುರಾಭಾಷೀ ಪೂರ್ವಭಾಷೀ ಪ್ರಿಯಂವದಾ
ವೀರ್ಯವಾನ್ ನ ಚ ವೀರ್ಯೇಣ ಮಹತಾಸ್ವೇನ ವಿಸ್ಮಿತಃ
ನ ಚ ಅನೃತ ಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ
ಅನುರಕ್ತಃ ಪ್ರಜಾಭಿಷ್ಚ ಪ್ರಜಾಶ್ಚಾಪ್ಯನುರಂಜತೇ)
ಅಯೋಧ್ಯಾ ಧರ್ಮ ಪರಿಷತ್‌ನ ಶ್ರೀಕಂಠ ಶಾಸ್ತ್ರಿಗಳು ಎದ್ದು ನಿಂತರು.... 
pavagadaprakashrao@gmail.com  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್