ಭದ್ರವಿದ್ದರೆ ಕುಡಿಕೆ ವಿದೇಶಿ ಪೌರತ್ವದಲ್ಲೂ ಮಾಡಬಹದು ಹೂಡಿಕೆ!
ಕಳೆದ ಹತ್ತು ವರ್ಷದಲ್ಲಿ ಬದುಕು ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಬದಲಾವಣೆ ಕಂಡಿದೆ. ಇದು ಎಲ್ಲಾ ವಲಯಕ್ಕೂ ಅನ್ವಯಿಸುತ್ತದೆ. ಹಿಂದೆಲ್ಲ ಹೂಡಿಕೆ ಎಂದರೆ ಷೇರು, ರಿಯಲ್ ಎಸ್ಟೇಟ್ ಇತ್ಯಾದಿಗಳಿಗೆ ಸೀಮಿತವಾಗಿತ್ತು. ಅಸಂಖ್ಯಾತ ಜನ ಬ್ಯಾಂಕಿನಲ್ಲಿ ಉಳಿಸಿದ ಮತ್ತು ನಿಗದಿತ ವೇಳೆಗೆ ಠೇವಣಿ ಇಟ್ಟ ಹಣವನ್ನು ಕೂಡ ಹೂಡಿಕೆ ಎಂದು ಕೊಂಡಿದ್ದಾರೆ. ಇದೀಗ ವಿತ್ತ ಪ್ರಪಂಚದ ವ್ಯಾಖ್ಯಾನಗಳು ಬದಲಾಗಿವೆ . ಕಳೆದ ಹತ್ತು ವರ್ಷದಿಂದ ಬಳಷ್ಟು ದೇಶಗಳು ತಮ್ಮ ದೇಶದಲ್ಲಿ ವಿದೇಶಿಯರು ಬಂದು ಹಣವನ್ನ ಹೂಡಿಕೆ ಮಾಡಿದರೆ ಅವರಿಗೆ ರೆಸಿಡೆನ್ಸಿ ಪರ್ಮಿಟ್ ಕೊಡುತ್ತಿವೆ.
ಇನ್ನು ಕೆಲವೊಂದು ನಿಬಂಧನೆಗಳನ್ನ ಅಥವಾ ಹೆಚ್ಚು ಹಣವನ್ನ ಹೂಡುವುದರಿಂದ ಆ ದೇಶದ ಪೌರತ್ವ ಕೂಡ ಕೊಡುತ್ತಿದ್ದಾರೆ. ಮೊದಲೇ ಹೇಳಿದಂತೆ ಇವೆಲ್ಲಾ ಕಳೆದ ಒಂದು ದಶಕದಿಂದ ನೆಡೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಎರಡು ವರ್ಷದಿಂದ ಇದು ಜಗತ್ತಿನ ಶ್ರೀಮಂತರ ನಡುವೆ ಹೆಚ್ಚು ಪ್ರಖ್ಯಾತಿ ಪಡೆಯುತ್ತಾ ಬಂದಿದೆ. ಇದಕ್ಕೆ ಕಾರಣಗಳು ಹಲವು ಇವುಗಳಲ್ಲಿ ಪ್ರಮುಖವಾದವು ಹೀಗಿವೆ.
- ಬ್ರೆಕ್ಸಿಟ್ ನಂತರ ಜಗತ್ತಿನ ವಿತ್ತ ಪ್ರಪಂಚ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಚರಿತ್ರೆಯ ಪ್ರಕಾರ ಬ್ರಿಟನ್ ಮತ್ತು ಅಮೇರಿಕಾ ಆರ್ಥಿಕವಾಗಿ ಕುಸಿದಾಗೆಲ್ಲ ಅವರು ಯಾವುದಾರೊಂದು ದೇಶದ ಮೇಲೆ ಕಾಲುಕೆರೆದು ಯುದ್ಧ ಮಾಡುತ್ತಾರೆ. ಜಗತ್ತಿನಲ್ಲಿ ಅಶಾಂತಿ ಮತ್ತು ಅಸ್ಥಿರತೆಯನ್ನ ಸೃಷ್ಟಿಸುತ್ತಾರೆ. ಭಯದ ವಾತಾವರಣದಲ್ಲಿ ಮದ್ದು ಗುಂಡುಗಳ ಮಾರಾಟ ಕೂಡ ಬಹಳ ಹೆಚ್ಚಾಗುತ್ತದೆ. ಈ ರೀತಿಯ ಅಸ್ಥಿರ ಸಮಾಜದ ಭಯ ಮುಂದುವರಿಯುತ್ತಿರುವ ಅಥವಾ ಹಿಂದುಳಿದ ದೇಶದಲ್ಲಿ ವಾಸಿಸುತ್ತಿರುವ ಹಣವಂತ ಜನರನ್ನ ಪ್ರಸಿದ್ಧ ಮತ್ತು ಮುಂದುವರೆದ ದೇಶದ ಸಿಟಿಜನ್ ಶಿಪ್ ನಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸುತ್ತದೆ.
- ಟ್ರಂಪ್ ಜಯ ಕೂಡ ಬಹಳಷ್ಟು ಅಸ್ಥಿರತೆಯನ್ನ ಹುಟ್ಟಿಹಾಕಿದೆ, ಇದರ ಜೊತೆಗೆ ಸಿರಿಯಾ ದೇಶದಲ್ಲಿನ ಅರಾಜಕತೆ, ಟರ್ಕಿಯಲ್ಲಿನ ವಾತಾವರಣ ಇವೆಲ್ಲವೂ ಇಂತಹ ಹೂಡಿಕೆಯ ಬೇಡಿಕೆಯನ್ನ ಹೆಚ್ಚಿಸುತ್ತಿವೆ.
- ಡಿಮೋನಿಟೈಸೇಷನ್ ನಂತರ ಭಾರತದಲ್ಲಿನ ಹೈ ನೆಟ್ ವರ್ತ್ ಇಂಡಿವಿಜುಯಲ್ ಗಳಲ್ಲಿ ಕೂಡ ಒಂದು ಸಣ್ಣ ನಡುಕ ಶುರುವಾಗಿದೆ. ಇದು ಅಪರೋಕ್ಷವಾಗಿ ಇಂತಹ ಹೂಡಿಕೆಗಳನ್ನ ಹೆಚ್ಚು ಜನಪ್ರಿಯಗೊಳಿಸುತ್ತವೆ.
- ಭಾರತ, ಚೀನಾ, ಆಫ್ರಿಕಾದ ಹಲವು ದೇಶಗಳಲ್ಲಿ ವಾಸಿಸುವ ಸಾಹುಕಾರ ಜನರಲ್ಲಿ ಬೇರೆ ದೇಶದ ಪೌರತ್ವ ಹೊಂದಿರುವುದನ್ನ 'ಸ್ಟೇಟಸ್ ಸಿಂಬಲ್' ಎನ್ನುವಂತೆ ಕೂಡ ಕಾಣಲಾಗುತ್ತದೆ ಇನ್ನೊಂದಷ್ಟು ಜನರಿಗೆ ಈ ರೀತಿಯ ಪೌರತ್ವ ಪಡೆಯುವುದರಿಂದ ವೀಸಾ ರಗಳೆ ಇರುವುದಿಲ್ಲ ಜೊತೆಗೆ ಬಿಸಿನೆಸ್ ಕೂಡ ಆ ದೇಶದೊಂದಿಗೆ ಬಹಳ ಸರಾಗವಾಗಿ ಮಾಡಬಹದು ಎನ್ನುವ ಲೆಕ್ಕಾಚಾರದ ಹೂಡಿಕೆ ಕೂಡ ಆಗಿದೆ.
ಕಾರಣಗಳೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಹೂಡಿಕೆ ಬಹಳ ಸದ್ದು ಮಾಡುತ್ತಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಹೇಳುತ್ತೇನೆ. 2015 ರಲ್ಲಿ ಸ್ವಿಟ್ಸರ್ಲ್ಯಾಂಡ್ ಜಗತ್ತಿನಲ್ಲಿರುವ ಶ್ರೀಮಂತರಿಂದ ಗಳಿಸಿದ ಮೊತ್ತ 7 ಬಿಲಿಯನ್ ಅಮೆರಿಕನ್ ಡಾಲರ್! ಈ ಮೊತ್ತ ವರ್ಷದಿಂದ ವರ್ಷಕ್ಕೆ 20 ಪ್ರತಿಶತ ಹೆಚ್ಚಳ ಕಾಣುತ್ತಿದೆ ಎನ್ನುತ್ತದೆ ಅಂಕಿ-ಅಂಶ. ಅಂದರೆ ಇಂತಹ ಹೂಡಿಕೆ ಎಷ್ಟು ಪ್ರಸಿದ್ಧ ಎನ್ನುವುದನ್ನ ಇದು ತೋರಿಸುತ್ತಿದೆ. ಗಮನಿಸಿ ಜಗತ್ತಿನ ಜನಸಂಖ್ಯೆಯ 1 (ಒಂದು )ಪ್ರತಿಶತ ಜನರನ್ನ ಗ್ಲೋಬಲ್ ರಿಚ್ ಎಂದು ಕರೆಯಲಾಗುತ್ತದೆ. ಇಂತಹ ಹೂಡಿಕೆ ಹೆಚ್ಚಾಗುತ್ತಿರುವುದು ಇವರಿಂದ.
“Jus Pecuniae” ಅಂದರೆ ಸಿಟಿಜನ್ ಶಿಪ್ ಬೈ ಇನ್ವೆಸ್ಟ್ಮೆಂಟ್ ಎನ್ನುವ ಅರ್ಥ ಕೊಡುತ್ತದೆ. ಇನ್ನೊಂದು ಗೋಲ್ಡನ್ ವೀಸಾ ಅಂದರೆ ಇದರಿಂದ ಪರ್ಮನೆಂಟ್ ರೆಸಿಡೆನ್ಸಿ ಸಿಗುತ್ತದೆ. ಪೌರತ್ವ ನಿಧಾನವಾಗಿ ಪಡೆದುಕೊಳ್ಳಬೇಕು. ಇದನ್ನ ಹೀಗೆ ವಿಭಾಗಿಸಬಹದು.
ಸಿಟಿಜನ್ ಶಿಪ್ ಬೈ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್ (CIP): ಈ ದಾರಿಯಲ್ಲಿ ಪೌರತ್ವ ಬಹುಬೇಗ ಸಿಗುತ್ತದೆ. ಇದೊಂದು ಫಾಸ್ಟ್ ಟ್ರ್ಯಾಕ್ ಸೇವೆ ಇದ್ದ ಹಾಗೆ. ಸರಕಾರ ವಿಧಿಸುವ ಹಣವನ್ನ ಕೊಟ್ಟರೆ ಅಲ್ಲಿಗೆ ಮುಗಿಯಿತು. ಎರಡು ತಿಂಗಳ ಅವಧಿಯಲ್ಲಿ ಆ ದೇಶದ ಪೌರತ್ವ ಸಿಗುತ್ತದೆ. ಅಲ್ಲದೆ ಇದು ಮುಂದಿನ ಸಂತಾನಕ್ಕೆ ವರ್ಗಾವಣೆ ಕೂಡ ಆಗುತ್ತದೆ. ಅಂದರೆ ಒಮ್ಮೆ ಪೌರತ್ವ ಪಡೆದ ಕುಟುಂಬದಲ್ಲಿ ಅಲ್ಲಿ ನೆಲಸಿದ ನಂತರ ಹುಟ್ಟುವ ಮಕ್ಕಳಿಗೂ ಪೌರತ್ವ ಸಿಗುತ್ತದೆ.
ರೆಸಿಡೆನ್ಸಿ ಬೈ ಇನ್ವೆಸ್ಟ್ಮೆಂಟ್ ಪ್ರೋಗ್ರಾಮ್ (RIP): ಇದು ಸ್ವಲ್ಪ ಸಮಯ ಬೇಡುವ ವಿಧಾನ. ಇಲ್ಲಿ ಹೂಡಿಕೆಯ ಮೊತ್ತ ಕೂಡ ಕಡಿಮೆ ಇರುತ್ತದೆ. ಇದು ಕೇವಲ ಅಲ್ಲಿ ಉಳಿದುಕೊಳ್ಳಲು ನೀಡುವ ಪರವಾನಿಗೆ. ಪೌರತ್ವವನ್ನ ಪಡೆದುಕೊಳ್ಳಲು ಆಯಾ ದೇಶದಲ್ಲಿ ಏನು ನಿಬಂಧನೆಗಳಿವೆ ಅವುಗಳನ್ನ ಪಾಲಿಸಬೇಕಾಗುತ್ತದೆ.
ಈ ರೀತಿಯ CIP ಅಥವಾ RIP ಮಾರ್ಗದಲ್ಲಿ ಹೂಡಿಕೆಯನ್ನ ಮಾಡಬಹದು ಎನ್ನುವುದು ತಿಳಿಯಿತು. ಸರಿ ಹಣವನ್ನ ಎಲ್ಲಿ ಅಥವಾ ಯಾವುದರ ಮೇಲೆ ಹೂಡಿಕೆ ಮಾಡಬೇಕು ಎನ್ನುವ ವಿಷಯವನ್ನ ಕೂಡ ತಿಳಿದುಕೊಳ್ಳೋಣ.
ಡೊನೇಷನ್ ಅಥವಾ ದೇಣಿಗೆ: ಪೌರತ್ವ ನೀಡುತ್ತೇವೆ ಎಂದು ಹೇಳುವ ದೇಶಗಳ ಸರಕಾರಕ್ಕೆ ಆಯಾ ದೇಶಗಳು ವಿಧಿಸುವ ಹಣವನ್ನ ಒಂದು ಬಾರಿ ನೀಡುವುದರ ಮೂಲಕ ಪೌರತ್ವ ಪಡೆಯಬಹದು. ಉದಾಹರಣೆಗೆ ಸ್ಪೇನ್ ದೇಶ ಐದು ಲಕ್ಷ ಯುರೋ ಹಣವನ್ನ ನೀಡಿದರೆ ಪೌರತ್ವ ನೀಡುತ್ತೇವೆ ಎನ್ನುತ್ತದೆ ಎಂದುಕೊಳ್ಳಿ. ಆಗ ಈ ಹಣವನ್ನ ಸರಕಾರದ ಬೊಕ್ಕಸಕ್ಕೆ ದೇಣಿಗೆ ರೂಪದಲ್ಲಿ ನೀಡಿ ನೀವು ಅಲ್ಲಿನ ಪೌರತ್ವ ಪಡೆಯಬಹದು. ಹತ್ತು ವರ್ಷದ ನಂತರ ನಿಮಗೆ ಅದು ಬೇಡವೆನಿಸಿದರೆ ಪೌರತ್ವವನ್ನ ವಾಪಸ್ಸು ನೀಡಬಹದು. ಆಗ ಹಣವನ್ನ ವಾಪಸ್ಸು ಮಾಡುವ ಸೌಕರ್ಯ ಕೂಡ ಇಲ್ಲಿದೆ.
ರಿಯಲ್ ಎಸ್ಟೇಟ್: ಬಹಳಷ್ಟು ಯೂರೋಪಿಯನ್ ರಾಷ್ಟ್ರಗಳ ಆರ್ಥಿಕತೆ ಕುಸಿದಿರುವುದಕ್ಕೆ ಕಾರಣ ರಿಯಲ್ ಎಸ್ಟೇಟ್. ಇದನ್ನ ಪುನರ್ಜ್ಜೀವನಗೊಳಿಸುವ ಉದ್ದೇಶ ಕೂಡ ಅಲ್ಲಿನ ಸರಕಾರಗಳಿಗಿದೆ ಹೀಗಾಗಿ ಇದರ ಮೇಲೆ ಹೂಡಿಕೆ ಮಾಡಿದರೆ ಪೌರತ್ವ ಅಥವಾ ರೆಸಿಡೆನ್ಸಿ ನೀಡುವುದಾಗಿ ಇಲ್ಲಿನ ದೇಶಗಳು ಹೇಳುತ್ತಿವೆ.
ಗವರ್ನಮೆಂಟ್ ಬಾಂಡ್ಸ್: ಸರಕಾರಗಳು ಹೊರಡಿಸುವ ಸಾಲ ಪತ್ರಗಳನ್ನ ಕೊಳ್ಳುವುದು ಕೂಡ ಇನ್ನೊಂದು ರೀತಿಯ ಹೂಡಿಕೆಯ ವಿಧಾನ. ನಿಗದಿತ ಹಣವನ್ನ ಆಯಾ ಸರಕಾರ ಹೊರಡಿಸುವ ಸಾಲ ಪತ್ರದಲ್ಲಿ ಹೂಡಿಕೆ ಮಾಡಿ ಪೌರತ್ವ ಅಥವಾ ರೆಸಿಡೆನ್ಸಿ ಪರ್ಮಿಟ್ ಪಡೆಯಬಹದು.
ಸಿಟಿಜನ್ ಶಿಪ್ ಮತ್ತು ರೆಸಿಡೆನ್ಸಿ ಪರ್ಮಿಟ್ ನಡುವಿನ ವ್ಯತ್ಯಾಸವನ್ನ ತಿಳಿದುಕೊಳ್ಳೋಣ ನಂತರ ಯಾವ ದೇಶದ ಮೇಲಿನ ಹೂಡಿಕೆ ಉತ್ತಮ ಎನ್ನುವುದನ್ನ ಕೂಡ ಒಂದಷ್ಟು ತಿಳಿದುಕೊಳ್ಳೋಣ. ಸಿಟಿಜನ್ ಶಿಪ್ ಎಂದರೆ ಅದೊಂದು ಖಾಯಂ ವಾಸಿಸಲು ನೀಡುವ ಅನುಮತಿ ಇದರಿಂದ ನೀವು ಅಲ್ಲಿನ ಪ್ರಜೆ ಎಂದು ಪರಿಗಣಿಸಲ್ಪಡುತ್ತಿರಿ. ನೀವು ಅಲ್ಲೇ ವಾಸಿಸಬೇಕು ಎನ್ನುವ ನಿಯಮವಿಲ್ಲ. ಒಮ್ಮೆ ಅಲ್ಲಿನ ಸಿಟಿಜನ್ ಶಿಪ್ ಸಿಕ್ಕರೆ ಮುಗಿಯಿತು ನಂತರ ನೀವು ಬೇಕಾದರೆ ಮರಳಿ ನಿಮ್ಮ ದೇಶದಲ್ಲಿ ವಾಸಿಸಬಹದು. ರೆಸಿಡೆನ್ಸಿ ಪರ್ಮಿಟ್ ನಲ್ಲಿ ನೀವು ಯಾವ ದೇಶದ ಪರ್ಮಿಟ್ ಪಡೆದಿರುತ್ತೀರಿ ಅಲ್ಲಿಯೇ ವಾಸಿಸಬೇಕು. ಸಾಮಾನ್ಯವಾಗಿ 3 ಅಥವಾ 6 ತಿಂಗಳಿಗಿಂತ ಹೆಚ್ಚಿನ ಸಮಯ ನೀವು ಆ ದೇಶದಿಂದ ಹೊರಗೆ ವಾಸಿಸಲು ಅನುಮತಿ ಇರುವುದಿಲ್ಲ. ನಂತರ ಅಲ್ಲಿನ ಕಟ್ಟುಪಾಡುಗಳನ್ನ ಪೂರ್ಣಗೊಳಿಸಿದರೆ ಮಾತ್ರ ಸಿಟಿಜನ್ ಶಿಪ್ ಸಿಗುತ್ತದೆ.
ಸಿಟಿಜನ್ ಶಿಪ್ ಇರಲಿ ಅಥವಾ ರೆಸಿಡೆನ್ಸಿ ಇರಲಿ ಹೂಡಿಕೆಗೆ ಯಾವ ದೇಶ ಬೆಸ್ಟ್?
ಯೂರೋಪಿನಲ್ಲಿ ಇಂಗ್ಲೆಂಡ್, ಪೋರ್ಚುಗಲ್, ಮೊಲ್ಡೋವ, ಐರ್ಲೆಂಡ್, ಸ್ಪೇನ್, ಬೆಲ್ಜಿಯಂ, ಮಾಲ್ಟಾ, ಸೈಪ್ರಸ್, ನೆದರ್ಲ್ಯಾಂಡ್, ಸ್ವಿಟ್ಸರ್ಲ್ಯಾಂಡ್, ಲಾಟಿವಿಯ, ಹಂಗರಿ, ಬುಲ್ಗರಿಯ, ಗ್ರೀಸ್, ಇಟಲಿ, ಫ್ರಾನ್ಸ್ ದೇಶಗಳು ಈ ರೀತಿಯ ಒಂದು ಪ್ರೋಗ್ರಾಮ್ ಘೋಷಣೆ ಮಾಡಿವೆ. ಗಮನಿಸಿ ದೇಶದಿಂದ ದೇಶಕ್ಕೆ ಹೂಡಿಕೆಯ ಹಣದಲ್ಲಿ ಬದಲಾವಣೆಯಾಗುತ್ತದೆ.
ಇನ್ನು ಕೆರಿಬಿಯನ್ ನಲ್ಲಿ ಸಂತ ಲೂಸಿಯಾ, ಡೊಮಿನಿಕಾನ, ಗ್ರೆನಡಾ, ಸಂತ ಕೀಟ್ಸ್, ಅಂತಿಗುವ ಮತ್ತು ಬಾರ್ಬುಡ. ದೇಶಗಳು ಈ ರೀತಿಯ ಹೂಡಿಕೆಗೆ ಮುಕ್ತವಾಗಿರುವ ದೇಶಗಳು.
ಇವಲ್ಲದೆ, ಅಮೇರಿಕಾ, ಕೆನಡಾ ಮತ್ತು ಫಿಜಿ ದೇಶಗಳು ಕೂಡ ಇಂತಹ ಒಂದು ಹೂಡಿಕೆಯನ್ನ ಸ್ವಾಗತಿಸುವ ದೇಶಗಳು. ಈ ಎಲ್ಲಾ ದೇಶಗಳು ಹೂಡಿಕೆಯ ಹಣವನ್ನ ನಿಗದಿಪಡಿಸಿವೆ. ಇದು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಬದಲಾವಣೆ ಹೊಂದುತ್ತದೆ. ಆ ದೇಶದ ರಾಜಕೀಯ, ಸಾಮಾಜಿಕ ಸ್ಥಿತಿಗತಿ ಮತ್ತು ಆ ದೇಶದ ಪಾಸ್ಪೋರ್ಟ್ ಎಷ್ಟು ಬಲಿಷ್ಠ ಎನ್ನುವುದರ ಮೇಲೆ ಹೂಡಿಕೆಯ ಮೊತ್ತ ನಿರ್ಧಾರವಾಗುತ್ತದೆ.
ಕೊನೆ ಮಾತು: ಜಗತ್ತಿನಲ್ಲಿ ಎಲ್ಲಿ ಎಷ್ಟೇ ಅಸ್ಥಿರತೆ ಉಂಟಾಗಲಿ ಜಗತ್ತಿನ ಒಂದು ಪ್ರತಿಶತ ಗ್ಲೋಬಲ್ ರಿಚ್ ಜನರಿಗೆ ಅದರ ಬವಣೆ ಮಾತ್ರ ತಟ್ಟುವುದಿಲ್ಲ. ಅವರೆಲ್ಲಾ ತಮಗೆ ಬೇಕಾದ ಒಂದು ಜಾಗವನ್ನ ಅಥವಾ ದೇಶವನ್ನ ನಿರ್ಧರಿಸಿ ಅಲ್ಲಿ ಮತ್ತದೆ ಐಷಾರಾಮಿ ಜೀವನದಲ್ಲಿ ತೊಡಗುತ್ತಾರೆ. ವಿಪರ್ಯಾಸವೆಂದರೆ ಜಗತ್ತಿನ ಅಸ್ಥಿರತೆಗೆ, ಆರ್ಥಿಕ ಕುಸಿತಕ್ಕೆ ಇವರೇ ಕಾರಣ. ಜಗತ್ತಿನಾದ್ಯಂತ ಬಡವ ಅಥವಾ ಬಡ ಮಧ್ಯಮವರ್ಗ ಮಾತ್ರ ತತ್ವ ಸಿದ್ದಂತಾದ ಹೆಸರಲ್ಲಿ ರಸ್ತೆ ಬದಿಯ ಹೆಣಗಳಾಗುತ್ತಾರೆ. ಇದನ್ನ ತಪ್ಪಿಸಲು ಆರ್ಥಿಕ ಸಾಕ್ಷರಾಗುವುದೊಂದೇ ಮಾರ್ಗ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics