ಅಂಕಣಗಳು

ನಾವು ಅಪ್ಡೇಟ್ ಆಗುವುದು ಎಲ್ಲಾ ಹೂಡಿಕೆಗಿಂತ ಮೊದಲು ಮಾಡಬೇಕಾದ ಹೂಡಿಕೆ! (ಹಣಕ್ಲಾಸು)

ರಂಗಸ್ವಾಮಿ ಮೂಕನಹಳ್ಳಿ

ನೀವು ಹೂಡಿಕೆ ಮಾಡಬಹುದಾದ ಅತ್ಯುತ್ತಮ ಆಸ್ತಿ ಈ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು 'ನೀವು'. ಕನ್ನಡದಲ್ಲಿ ಒಂದು ಆಡು ಮಾತಿದೆ, ' ಮಾಡಿದ ಕೆಲಸ ನೋಡದೆ ಹೋಯ್ತು ' ಎನ್ನುವುದು ಆ ಮಾತು. ಇದರ ಅರ್ಥ ಬಹಳ ಸರಳ. ನಾವು ಯಾವುದೇ ಕೆಲಸವನ್ನ ಅದೆಷ್ಟೇ ಶ್ರದ್ದೆ ಮತ್ತು ಅಚ್ಚುಕಟ್ಟಾಗಿ ಮಾಡಿರಲಿ, ಅದನ್ನ ಪದೇ ಪದೇ ನೋಡದೆ ಹೋದರೆ ಅದು ಕಸವಾಗಿ ಮಾರ್ಪಾಡಾಗಲು ಬಹಳ ಸಮಯ ಬೇಕಾಗುವುದಿಲ್ಲ. 

ಇದನ್ನ ಮಾರುಕಟ್ಟೆಗೆ ಹೋಲಿಕೆ ಮಾಡಿ ನೋಡಿದರು ಫಲಿತಾಂಶ ಅದೇ ಸಿಗುತ್ತದೆ. ಉದಾಹರಣೆಗೆ ನೀವು ಹೂಡಿಕೆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಬೆಸ್ಟ್ , ಅತ್ಯುತ್ತಮ ಎನ್ನಿಸಿಕೊಂಡ ಷೇರಿನ ಮೇಲೆ ಹೂಡಿಕೆ ಮಾಡಿರುತ್ತೀರಿ ಆದರೆ ವರ್ಷಾನುಗಟ್ಟಲೆ ಅದನ್ನ ನೋಡದೆ ಹಾಗೆ ಬಿಟ್ಟು ಬಿಟ್ಟರೆ ಅದು ಕುಸಿತ ಕಂಡಿರಬಹುದು ,  ಅಥವಾ  ಮಾರುಕಟ್ಟೆಯಲ್ಲಿ ಅದಕ್ಕಿಂತ ಉತ್ತಮ ಷೇರು ಬಂದಿರಬಹುದು , ಅಥವಾ ನೀವು ಕೊಂಡ ಅಂದಿನ ಅತ್ಯುತ್ತಮ  ಷೇರು ಮುಂಬರುವ ದಿನಗಳಲ್ಲಿ ತನ್ನ ಪ್ರಸ್ತುತತೆ ಕಾಯ್ದುಕೊಳ್ಳದೆ ಇರಬಹುದು. ಹೀಗೆ ಸಾಧ್ಯತೆಗಳ ಪಟ್ಟಿ ದೊಡ್ಡದ್ದು. ಹೀಗಾಗಿ ಕೊಂಡ ನಂತರ ಅದನ್ನ ಸದಾ ಗಮನಿಸುತ್ತಿರಬೇಕು. ಇದರ ಅರ್ಥ ನಾವು ಸದಾ ಅಪ್ಡೇಟ್ ಆಗುತ್ತಿರಬೇಕು. 

ಮಾರುಕಟ್ಟೆಯಲ್ಲಿ ಆಗುತ್ತಿರುವ ಸಣ್ಣ ಪುಟ್ಟ ಬದಲಾವಣೆಗಳ ಮೇಲೆ ಸದಾ ಒಂದು ಕಣ್ಣಿಟ್ಟಿರಬೇಕು. ಅದಕ್ಕೆ ಮಾರುಕಟ್ಟೆ ತಜ್ಞರು ಒಂದು ಮಾತು ಹೇಳುತ್ತಾರೆ , ಎಲ್ಲಾದರೂ ಹೂಡಿಕೆ ಮಾಡುವ ಮೊದಲು ನಿನ್ನ ಮೇಲೆ ಸಮಯವನ್ನ ಹೂಡಿಕೆ ಮಾಡಿಕೊಳ್ಳಬೇಕು ಎಂದು. ಆ ಮೂಲಕ ನಾವು ಸಿದ್ಧರಾಗಿದ್ದರೆ ಉಳಿದದ್ದು ಸಮಯದ ಆಟ. ಕಲಿಕೆಯೊಂದೇ ನಿರಂತರ. ಕಲಿತವನೇ ಸರದಾರ.

ಪ್ರೈಸ್ ಅಥವಾ ಬೆಲೆ ನೀವು ಕೊಡುವುದು. ವ್ಯಾಲ್ಯೂ ಅಥವಾ ಮೌಲ್ಯ ನಿಮಗೆ ಸಿಗುವುದು. ಹೀಗಾಗಿ ಕೊಟ್ಟ ಬೆಲೆಗೆ ತಕ್ಕ ಮೌಲ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ಹೂಡಿಕೆದಾರನ ಹಕ್ಕು. ಹಕ್ಕು ಮತ್ತು ಭಾದ್ಯತೆ ಮರೆತಿರುವ ಮಾರುಕಟ್ಟೆಯಲ್ಲಿ ಇದನ್ನ ಸದಾ ನೆನಪಿಟ್ಟುಕೊಳ್ಳಬೇಕು:

ನೀವು ಇಷ್ಟಪಟ್ಟು , ನಂಬಿಕೆಯಿಟ್ಟು ಒಂದು ಷೇರಿನ ಮೇಲೆ ಹೂಡಿಕೆ ಮಾಡುವುದಕ್ಕೂ , ಮಾರುಕಟ್ಟೆಯ ಅಬ್ಬರಕ್ಕೆ ಸಿಲುಕಿ ಕೊಳ್ಳುವುದಕ್ಕೂ ಭಾರಿ ವ್ಯತ್ಯಾಸವಿದೆ. ಇದು ಹೇಗೆ ಎಂದರೆ ನೀವು ಇಷ್ಟಪಟ್ಟು ಹೂಡಿಕೆ ಮಾಡಿದರೆ ಅದು ಖರೀದಿ. ನೀವು ಖರೀದಿಸಿದ್ದು. ಅದೇ ಅಬ್ಬರಕ್ಕೆ ಸಿಲುಕಿ ಮಾಡಿದ ಹೂಡಿಕೆ ನಿಮಗೆ ಬೇರೆ ಯಾರೋ ಮಾರಾಟ ಮಾಡಿದ ಹಾಗೆ. ನಿಮಗೆ ಅರ್ಥವಾಯ್ತು ಎಂದುಕೊಳ್ಳುವೆ. ನಾವು ಇಷ್ಟ ಪಟ್ಟು ಕೊಂಡರೆ ಅದು ಖರೀದಿ ನಾವು ಇಷ್ಟಪಡದೆ ಕೂಡ ಕೊಂಡರೆ ಅದು ಖರೀದಿಯಲ್ಲ , ಇತರರು ನಿಮಗೆ ಅದನ್ನ ಮಾರಿದ್ದಾರೆ ಎಂದರ್ಥ. ಮುಕ್ಕಾಲು ಪಾಲು ಅಧ್ಯಯನ ಮಾಡಿ ಕೊಂಡ ಷೇರಿಗೆ ತಕ್ಕ ಮೌಲ್ಯ ಸಿಕ್ಕಿರುತ್ತದೆ. ಮಾರುಕಟ್ಟೆಯ ಆರ್ಭಟದಲ್ಲಿ ಕೊಂಡ ಷೇರಿಗೆ ತಕ್ಕ ಮೌಲ್ಯ ಸಿಕ್ಕಿರುತ್ತದೆಯೇ ಎನ್ನುವುದು ಪ್ರಶ್ನೆ. 

ಮಾರುಕಟ್ಟೆಯಲ್ಲಿ ಒಂದು ವರ್ಗ ಸದಾ ಹೆಚ್ಚು ಲಾಭ ಮಾಡುವುದು ಹೇಗೆ ಎನ್ನುವುದರಲ್ಲೇ ಮಗ್ನವಾಗಿರುತ್ತದೆ. ಹೀಗಾಗಿ ಕೊಳ್ಳುವ ಅಥವಾ ಮಾರುವ ಮುನ್ನಾ ಎಚ್ಚರ ವಹಿಸುವುದು ಉತ್ತಮ. ಏಕೆಂದರೆ ನಾವು ಕೊಟ್ಟ ಬೆಲೆಗೆ ತಕ್ಕ ಮೌಲ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು. ಹಾಗೆಯೇ ಇಲ್ಲದ ಮೌಲ್ಯಕ್ಕೆ ಮಾರದೆ ಇರುವುದು ಭಾದ್ಯತೆ , ಹಕ್ಕು ಮತ್ತು ಭಾದ್ಯತೆ ಮರೆತಿರುವ ಮಾರುಕಟ್ಟೆಯಲ್ಲಿ ಇದನ್ನ ಸದಾ ನೆನಪಿಟ್ಟುಕೊಳ್ಳಬೇಕು. ಮೋಸ ಮಾಡುವುದು ಎಷ್ಟು ತಪ್ಪೋ ಹಾಗೆಯೇ ಮೋಸ ಹೋಗುವುದು ಕೂಡ ತಪ್ಪು . ಯಾ ಸುಪ್ತೇಷು ಜಾಗ್ರತ -  ಸದಾ ಜಾಗ್ರತ ಸ್ಥಿತಿಯಲ್ಲಿರಬೇಕು

ಸ್ಟಾಕ್ ಅಥವಾ ಷೇರಿಗೆ ನೀವು ಉಲ್ಲೇಖಿತ ಸಂಸ್ಥೆಯ ಉಲ್ಲೇಖಿತ ಮೌಲ್ಯದ ಮಾಲೀಕರು ಎನ್ನುವುದು ತಿಳಿದಿರುವುದಿಲ್ಲ !! ಸೊ ಬಿಸಿನೆಸ್ ನಲ್ಲಿ ಭಾವನೆ ಬಿಗ್ , ಬಿಗ್ ನೋ !!

ಎರಡು ದಶಕಕ್ಕೂ ಹೆಚ್ಚಿನ ಹಣಕಾಸು ಸಲಹೆಗಾರನ ವೃತ್ತಿಯಲ್ಲಿ ಸಾವಿರಾರು ಜನರನ್ನ ಕಾಣುವ ಭಾಗ್ಯ ನನ್ನದು. ಹಲವಾರು ಜನ ತಾವು ಕೊಂಡ ಷೇರಿನ ಜೊತೆಗೆ , ಸಂಸ್ಥೆಯ ಜೊತೆಗೆ ಭಾವನಾತ್ಮಕ ಸಂಬಂಧವನ್ನ ಬೆಸೆದುಕೊಂಡು ಬಿಡುತ್ತಾರೆ. ಮಾರುಕಟ್ಟೆಯಲ್ಲಿ ಷೇರಿನ ಬೆಲೆ ಎಲ್ಲಾ ದಾಖಲೆಯನ್ನ ಮೀರಿ ಹೊಸ ದಾಖಲೆ ಬರೆಯುತ್ತಿರುವ ಸಮಯದಲ್ಲಿ ಕೂಡ ಷೇರನ್ನ ಮಾರಿ ಹಣ ಮಾಡಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಅಯ್ಯೋ ಕಳೆದ ಹತ್ತು ವರ್ಷದಿಂದ ಇಟ್ಟು ಕೊಂಡಿದ್ದೇನೆ ಹೇಗೆ ಮಾರುವುದು ಎನ್ನುವುದು ಇವರ ಮಾತು. ತಮ್ಮ ಬಳಿ ಇರುವ ಪೆನ್ನು , ಮೊಬೈಲ್ ಕೊನೆಗೆ ಪುಟಾಣಿ ಡೈರಿ ಪುಸ್ತಕ ಹೀಗೆ ಬಹಳ ವರ್ಷದಿಂದ ಜೊತೆಗಿದ್ದ ಜೀವವಿಲ್ಲದ ವಸ್ತುಗಳ ಜೊತೆಗೂ ಭಾವನಾತ್ಮಕವಾಗಿ ಅನೇಕರು ಬೆಸೆದು ಕೊಂಡು ಬಿಡುತ್ತಾರೆ. ಇದನ್ನ ಪೂರ್ಣವಾಗಿ ತಪ್ಪು ಎಂದು ಹೇಳಲು ಬಾರದಿದ್ದರೂ ಅವರಿಗೆ ಒಂದು ಸಣ್ಣ ಕಿವಿ ಮಾತು ಹೇಳಲೇಬೇಕು ನೋಡಿ ನೀವು ಕೊಂಡ ಸ್ಟಾಕ್ ಅಥವಾ ಷೇರಿಗೆ ನೀವು ಉಲ್ಲೇಖಿತ ಸಂಸ್ಥೆಯ ಉಲ್ಲೇಖಿತ ಮೌಲ್ಯದ ಮಾಲೀಕರು ಎನ್ನುವುದು ತಿಳಿದಿರುವುದಿಲ್ಲ, ಅದೊಂದು ಕೇವಲ ಪೇಪರ್ ತುಂಡು !! ಆ ಪೇಪರ್ ಮೇಲೆ ಎಲ್ಲಿಯ ತನಕ ನಿಮ್ಮ ಹೆಸರು ಬರೆದಿರುತ್ತದೆ ಅಲ್ಲಿಯ ತನಕ ನೀವು ಅಲ್ಲಿನ ಉಲ್ಲೇಖಿತ ಮೌಲ್ಯದ ಮಾಲೀಕರು ಅಷ್ಟೇ , ಹೂಡಿಕೆ ಮಾಡುವುದು ಸರಿಯಾದ ಸಮಯ ಬಂದಾಗ ಅದನ್ನ ಮಾರಿ ಇನ್ನೊಂದು ಕಡೆ ಹೂಡಿಕೆ ಮಾಡುವುದಕ್ಕೆ , ಇದೊಂದು ನಿಲ್ಲದ ಪ್ರಕ್ರಿಯೆ . ಹೀಗಾಗಿ ಕೊಳ್ಳುವ ಸಮಯ ಮತ್ತು ಮಾರುವ ಸಮಯದಲ್ಲಿ ಇಂತಹ ಭಾವನೆಗಳಿಗೆ ಬಿಗ್ ಬಿಗ್ ನೋ , ಏಕೆಂದರೆ ಮಾರುವ ಅಥವಾ ಕೊಳ್ಳುವ ನಿರ್ಧಾರ ಕೆಲವು ದಿನಗಳ ಕಾಲ ಅತ್ತಿತ್ತ ಆದರೂ ಅದು ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇವಲ ಷೇರು ಮಾರುಕಟ್ಟೆ ಮಾತ್ರ ಎಂದಲ್ಲ , ಯಾವುದೇ ಬಿಸಿನೆಸ್ ನಲ್ಲಿ ಭಾವನೆಗಳಿಗೆ ಜಾಗವಿಲ್ಲ. ಇರಲು ಕೂಡದು ಎನ್ನುವ ಸತ್ಯ ತಿಳಿದಿರಲಿ.

ನಿಮಗೆ ಎಲ್ಲಾ ರೂಲ್ಸ್ ಯಾರು ಕೂಡ ಹೇಳಿಕೊಡಲು ಸಾಧ್ಯವಿಲ್ಲ. ಕೆಲವು ಸ್ವತಃ ಕಲಿಯಬೇಕು, ಕೆಲವು ಕಲಿಯಲಾಗದೆ ಉಳಿದವುಗಳ ಬಗ್ಗೆ ಹೆಚ್ಚು ಚಿಂತಿಸಬಾರದು:

ಯಶಸ್ಸಿಗೆ ಒಂದು ಸಿದ್ದ ಸೂತ್ರವಿಲ್ಲ. ಹತ್ತಾರು ಸೂತ್ರಗಳ ಮಿಶ್ರಣ ಯಶಸ್ಸು ತಂದು ಕೊಟ್ಟಿರುತ್ತದೆ. ಅದೇ ಹತ್ತಾರು ಸೂತ್ರಗಳ ಮಿಶ್ರಣ ಮತ್ತೊಮ್ಮೆ ಅಷ್ಟೇ ದೊಡ್ಡ ಮಟ್ಟದ ಗೆಲುವನ್ನ ತಂದುಕೊಡುತ್ತದೆ ಎಂದು ಕೂಡ ಹೇಳಲು ಬಾರದು. ಸಮಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಈ ಮಿಶ್ರಣದಲ್ಲಿ ಕೂಡ ಬದಲಾವಣೆ ಆಗುತ್ತಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಶಸ್ಸು ಕಾಣಲು ಸಿದ್ದ ಸೂತ್ರವಿಲ್ಲ ಎಂದದ್ದು. ಮಾರುಕಟ್ಟೆ ಪರಿಣಿತರು ತಮ್ಮ ಅನುಭವದ ಆಧಾರದ ಮೇಲೆ ಸಾಕಷ್ಟು ಸೂತ್ರಗಳನ್ನ ನೀಡಿದ್ದಾರೆ. ಅವುಗಳನ್ನ ಮನನ ಮಾಡಿಕೊಂಡು ಮಾರುಕಟ್ಟೆ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಹೀಗೆ ಅನುಭವ ಪಡೆಯುತ್ತ ಹೋದಂತೆಲ್ಲ ನಮ್ಮದೇ ಆದ ಸಿದ್ದಾಂತ , ಸೂತ್ರಗಳನ್ನ ಕೂಡ ಕಂಡುಕೊಳ್ಳಬಹುದು. ಮಾರುಕಟ್ಟೆ ಪಂಡಿತರು ಹೇಳಿದ ಸೂತ್ರಕ್ಕಿಂತ ಸ್ವತಃ ಅನುಭವದ ಸೂತ್ರ ವಿಭಿನ್ನವಾಗಿರಬಹುದು. ಅದು ನಮಗೆ ಗೆಲುವನ್ನ ಕೂಡ ತಂದುಕೊಡಬಹುದು, ಹೀಗಾಗಿ ಎಲ್ಲವನ್ನೂ ಯಾರೋ ಹೇಳಿರಲೇ ಬೇಕೆಂದಿಲ್ಲ , ಬಹಳಷ್ಟು ಸ್ವತಃ ಕಲಿಯಬಹುದು.

ಕೊನೆಗೂ ಬದುಕೆಂದರೆ ಇಷ್ಟೇ ನೋಡಿ , ನೀವೆಷ್ಟೇ ಕಷ್ಟಪಟ್ಟರೂ ಒಂದಲ್ಲ ಒಂದು ಅಂಶ ಮಿಸ್ ಆಗಿಯೇ ಹೋಗುತ್ತದೆ. ಹೀಗೆ ತಿಳಿಯಲಾಗದ ಅಥವಾ ಮಿಸ್ ಆದ ವಿಷಯದ ಬಗ್ಗೆ ಕೂಡ ಹೆಚ್ಚು ತಲೆ ಕೆಡಸಿಕೊಳ್ಳಬಾರದು. ಸ್ವಸ್ಥ ಮನ ಗೆಲ್ಲುವುದೆಲ್ಲವನ್ನ ಎನ್ನುವ ತತ್ವದ ಆಧಾರದ ಮೇಲೆ ಬದುಕನ್ನ ಸಾಗಿಸಬೇಕು. ಮಾರುಕಟ್ಟೆಯಲ್ಲಿನ ಗೆಲುವಿಗೆ ಸಂತನ ಮನಸ್ಥಿತಿ ಕೂಡ ಇರಬೇಕು.

ಮಾರ್ಕೆಟ್ ವೈಜ್ಞಾನಿಕವಲ್ಲ ಅದು ಸಾಮಾಜಿಕ ವಿಜ್ಞಾನ:

ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಆಲ್ಗರಿದಮ್ ಉಪಯೋಗಿಸಿ ಷೇರುಗಳ ಮೇಲೆ ಹೂಡಿಕೆ ಮಾಡುವ ಪರಿಪಾಠ ಹೆಚ್ಚುತ್ತಿದೆ. ಇಲ್ಲಿ ಮನುಷ್ಯನ ಭಾವನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಲ್ಲೇನಿದ್ದರೂ ಲೆಕ್ಕಾಚಾರ , ಇದು ಹೀಗಾದರೆ , ಅದು ಹೀಗಾದರೆ , ಆಗ ಏನಾಗಬಹುದು ? ಎನ್ನುವ ಗಣಿತದ ಸಂಭಾವ್ಯತೆಗಳ ಲೆಕ್ಕಾಚಾರ. ಇದರಿಂದ ಆಗುವ ದೊಡ್ಡ ಲಾಭ ನಿಖರತೆ , ಮಷೀನ್ ತನಗೆ ಹೇಳಿದ್ದ ಚಾಚೂ ತಪ್ಪದೆ ಮಾಡುತ್ತದೆ. ಕೆಲವೊಮ್ಮೆ ಅದೇ ಜಾಗದಲ್ಲಿ ಮನುಷ್ಯ ಇದಿದ್ದರೆ ಲೆಕ್ಕಾಚಾರ ಬೇರೆ ಯಾಗುತ್ತಿತ್ತು, ಏಕೆಂದರೆ ಅವನು ಚಿಂತಿಸಬಲ್ಲ. ಇದರಿಂದ ಆಗುವ ದೊಡ್ಡ ನಷ್ಟ,  ವಿಶೇಷ ಅಥವಾ ಹೊಸ ಸನ್ನಿವೇಶಕ್ಕೆ ಮಷೀನ್ ಸಿದ್ಧವಿಲ್ಲದೆ ಇರುವುದು. ಅದರಲ್ಲಿ ಅದೇನು ಕೋಡ್ ಮಾಡಿ ಫೀಡ್ ಮಾಡಿರುತ್ತಾರೆ ಅಷ್ಟೇ , ಅದಕ್ಕೆ ಮೀರಿದ ಪರ್ಯಾಯ ಚಿಂತನೆ ಅದಕ್ಕಿಲ್ಲ. ಮಾರುಕಟ್ಟೆ ಪರಿಪೂರ್ಣವಾಗಿ ವೈಜ್ಞಾನನಿಕ ತಳಹದಿಯಲ್ಲಿ ಇದ್ದಿದ್ದರೆ ಆಗ ಯಾರಿಗೂ ನಷ್ಟವಾಗುವ ಪ್ರಶ್ನೆಯೇ ಇಲ್ಲ , ಎಲ್ಲವೂ ಸದಾ ಕಾಲ ಲಾಭದಲ್ಲಿ ಇರಲು ಹೇಗೆ ಸಾಧ್ಯ ? ಏರಿಳಿತ ಇದ್ದೆ ಇರಬೇಕು. ಅದು ಇದೆ. ಹೀಗಾಗಿ ಮಾರುಕಟ್ಟೆ ಕೂಡ ಬದುಕಿನ ಇತರ ಮಜಲುಗಳಂತೆ ಸಾಮಾಜಿಕ ವಿಜ್ಞಾನ. ಅದು ಪೂರ್ಣ ವಿಜ್ಞಾನವಲ್ಲ. ಹೀಗಾಗಿ ನೀವೆಷ್ಟೇ ದೊಡ್ಡ ಮಟ್ಟದ ತಂತ್ರಜ್ಞಾನ ಬಳಸಿಕೊಂಡರೂ ಎಲ್ಲಿಯವರೆಗೆ ಹ್ಯೂಮನ್ ಎಲಿಮೆಂಟ್ ಇರುತ್ತದೆ ಅಲ್ಲಿಯವರೆಗೆ ಮಾರುಕಟ್ಟೆಯ ಆಸೆ , ಭಯದಿಂದ ಮುಕ್ತವಾಗಲು ಸಾಧ್ಯವಿಲ್ಲ. ಇದನ್ನ ಅರಿತು ಮಾರುಕಟ್ಟೆಗೆ ಧುಮುಕುವುದರಲ್ಲಿ ಜಾಣತನವಿದೆ.

ಕೊನೆಮಾತು: ಷೇರು ಮಾರುಕಟ್ಟೆ ಎನ್ನುವುದು ಸಮುದ್ರವಿದ್ದಂತೆ ನನಗೆ ಗೊತ್ತು ಎನ್ನುವುದು ಬೊಗಸೆಯಲ್ಲಿ ನೀರು ತಂದಂತೆ ! ಹೀಗಾಗಿ ಕಲಿಕೆಯೊಂದೇ ಸದಾ ನಾವು ಜಪಿಸಬೇಕಾಗಿರುವ ಮಂತ್ರ. ನಾವು ಕೌಶಲ್ಯ

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

SCROLL FOR NEXT