ಅಂಕಣಗಳು

ಚೆಲುವಿಗೆ ಕುಂದು ತರುವ ಬಂಗು ಅಥವಾ ಮೆಲಾಸ್ಮಾ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ಒಂದು ದಿನ ನನ್ನ ಕ್ಲಿನಿಕ್ಕಿಗೆ ಮಧ್ಯ ವಯಸ್ಕ ಮಹಿಳೆಯೊಬ್ಬರು ಬಂದು “ಡಾಕ್ಟರ್, ಕಳೆದ ಕೆಲವು ದಿನಗಳಿಂದ ಮುಖದಲ್ಲಿ ಅಲ್ಲಲ್ಲಿ ಕಲೆ ಕಾಣಿಸಿಕೊಳ್ಳುತ್ತಿದೆ. ಏನಾದರೂ ಚರ್ಮದ ಸಮಸ್ಯೆ ಇದೆಯಾ ನೋಡಿ. ಇದಕ್ಕೇನು ಪರಿಹಾರ?” ಎಂದು ತೋರಿಸಿದರು. ಅವರ ಮುಖವನ್ನು ಪರೀಕ್ಷೆ ಮಾಡಿದೆ. ಚರ್ಮದ ಬಣ್ಣ ಬಿಳಿಯದ್ದಾಗಿದ್ದರೂ ಕಲೆಗಳು ಎದ್ದು ಕಾಣುವಂತೆ ಇದ್ದವು. ಕೆಲವಡೆ ಕಲೆಗಳು ಕಪ್ಪು ಬಣ್ಣಕ್ಕೆ ಕೂಡ ತಿರುಗುತ್ತಿದ್ದುದು ಕಂಡುಬಂತು. ಇದು ಬಂಗು (ಮೆಲಾಸ್ಮಾ) ಎಂದು ತಿಳಿಯಿತು. ಬಂಗಿನ ಸಮಸ್ಯೆ ಕುರಿತು ಮಾತನಾಡಿ ಅವರಿಗೆ ಪರಿಹಾರ ಹೇಳಿ ಕಳಿಸಿದೆ. 

ಬಂಗು ಅಥವಾ ಮೆಲಾಸ್ಮಾ ಎಂದರೇನು?

ನಮ್ಮ ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕವಾಗಿ ಉತ್ಪಾದನೆ ಆಗುವುದರಿಂದ ಅತಿವರ್ಣಕಾರಕತೆ (ಹೈಪರ್ ಪಿಗ್ಮೆಂಟೇಶನ್) ಉಂಟಾಗುತ್ತದೆ. ಇದಕ್ಕೆ ನಾವು ಬಂಗು ಎಂದು ಕರೆಯುತ್ತೇವೆ. ಬಂಗಿನಿಂದ ಚರ್ಮ ಕಪ್ಪು ಬಣ್ಣಕ್ಕೆ ತಿರುತ್ತದೆ. ಬಂಗು ಮುಖದ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮುಖದ ಚೆಲುವಿಗೆ ಕುಂದುಂಟಾಗುತ್ತದೆ. ಜೊತೆಗೆ ಕಿರಿಕಿರಿಯೂ ಆಗುವುದು ಸಹಜವೇ ಆಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಇದು ಕರೆಯದೇ ಬರುವ ಅತಿಥಿಯಿದ್ದಂತೆ. ಕ್ರಮೇಣ ಮೆಲನಿನ್ ಬಂಗಿನ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ.

ಮೆಲಾಸ್ಮಾ ಬರಲು ಕಾರಣಗಳೇನು?

ಸರಳವಾಗಿ ಹೇಳಬೇಕೆಂದರೆ ಬಂಗು ಸಾಧಾರಣ ಮಧ್ಯವಯಸ್ಕರ ಹಣೆ, ಗಲ್ಲದ ಮೇಲೆ ಬೀಳುವ ಕಪ್ಪು ಕಲೆ. ಚರ್ಮದ ಮೇಲಿನ ಕಲೆ ಅಲ್ಲ, ಒಳಗಿನ ಕಲೆ. ಬಂಗು ಬರಲು ಕಾರಣ ಒಂದಲ್ಲ. ಸೂರ್ಯನ ಪ್ರಖರ ಬಿಸಿಲಿಗೆ ಚರ್ಮವನ್ನು ನಿರಂತರವಾಗಿ ಒಡ್ಡಿದರೆ, ದೇಹದಲ್ಲಿ ಹಾರ್ಮೋನುಗಳ ಬದಲಾವಣೆ/ಏರುಪೇರು ಮತ್ತು ಕೆಲವೊಮ್ಮೆ ಅನುವಂಶೀಯತೆಯಿಂದಲೂ ಬರಬಹುದು. ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ, ಪುರುಷರಲ್ಲಿಯೂ ಇದು ಕಾಣಿಸಿಕೊಳ್ಳಬಹುದು. ಆಗಾಗ ಕಲರ್ ಡೈ ಮಾಡಿಕೊಳ್ಳುವುದರಿಂದ ಮತ್ತು ಪದೇ ಪದೇ ಮೇಕಪ್ ಮಾಡಿಕೊಂಡಾಗ ಆ ರಸಾಯನಿಕಗಳಲ್ಲಿ ಇರುವ ಚರ್ಮಕ್ಕೆ ಆಗದಿರುವ ಪದಾರ್ಥಗಳು ಚರ್ಮಕ್ಕೆ ಹಾನಿ ಮಾಡಿದಾಗ ಬಂಗು ಬರುತ್ತದೆ. ಋತುಬಂಧ (ಮೆನೊಪಾಸ್) ಸಮಯದಲ್ಲಿ ಮತ್ತು ಗರ್ಭಿಣಿಯರಲ್ಲಿ ಇದು ಕಾಣಿಸಿಕೊಳ್ಳಬಹುದು. 
ಈ ಸಮಸ್ಯೆ ಪರಿಹಾರಕ್ಕೆ ಹಲವಾರು ಮನೆಮದ್ದುಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ. 

ನಮಗಿಂತ ಹಿಂದಿನವರು ಪ್ರತಿದಿನ ಮುಖಕ್ಕೆ ತಪ್ಪದೇ ಅರಸಿನವನ್ನು ಹಚ್ಚುತ್ತಿದ್ದರು. ಅದು ಕೇವಲ ಸೌಭಾಗ್ಯಕ್ಕೆ ಮಾತ್ರವಲ್ಲ ಇಂತಹ ಚರ್ಮದ ಮೇಲೆ ಬರುವ ಕಲೆಗಳನ್ನು ಕೂಡಾ ತಡೆಗಟ್ಟುತ್ತಿತ್ತು. ಇಂದೂ ಕೂಡ ಅರಶಿನ ಕೊಂಬು, ಕಹಿಬೇವಿನ ಕಡ್ಡಿ, ಹಸುವಿನ ಹಳೇ ತುಪ್ಪದಲ್ಲಿ ತೇದು ಹಚ್ಚಿದರೆ ಎಲ್ಲಾ ಕಲೆಗಳೂ ಮಂಗಮಾಯವಾಗುತ್ತದೆ. 

ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚು ಬಿಸಿಲಿಗೆ ಹೋಗಬಾರದು. ಹೊರಗೆ ಹೋಗಲೇಬೇಕಾದ ಪ್ರಸಂಗ ಬಿದ್ದರೆ ಛತ್ರಿಯನ್ನು ಕೊಂಡೊಯ್ಯಲೇಬೇಕು. ಬಿರುಬೇಸಿಗೆ ಮಾತ್ರವಲ್ಲ, ಇತರ ಕಾಲದಲ್ಲೂ ಕೂಡ. ಜೊತೆಗೆ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಬೇಕು. 

ಕಾಲಕಾಲಕ್ಕೆ ಚರ್ಮವನ್ನು ಒಳ್ಳೆಯ ಮಾಯಿಶ್ಚರೈಸರ್ ಕ್ರೀಮನ್ನು ಬಳಸಿ ರಕ್ಷಿಸಿಕೊಳ್ಳಬೇಕು. ಮಮೆಯಲ್ಲಿಯೇ ಬಾದಾಮಿ ಎಣ್ಣೆ 1 ಚಮಚ, 1 ಚಮಚ ತುಪ್ಪ ಮತ್ತು ಲೋಳೆಸರ (ಅಲೋವೇರಾ) ತಿರುಳು ಸೇರಿಸಿ ಬೆರಸಿಟ್ಟು ಮಾಯಿಶ್ಚರೈಸರ್ ತಯಾರಿಸಬಹುದು. ಇದನ್ನ ಪ್ರತಿವಾರ ತಯಾರಿಸಿ ಇಟ್ಟುಕೊಳ್ಳಬಹುದು. 

ಪ್ರತಿದಿನ ಸೇವಿಸುವ ಆಹಾರದ ಬಗ್ಗೆಯೂ ಗಮನವನ್ನು ಕೊಡಬೇಕು. ಪುಷ್ಟಿಕರವಾದ ಮೊಳಕೆ ಬಂದ ಧಾನ್ಯಗಳು, ಹಸಿರು ತರಕಾರಿಗಳು, ಸಿರಿಧಾನ್ಯಗಳು, ಬೀಸಿದ ಸಿರಿಧಾನ್ಯಗಳ ಹಿಟ್ಟಿನ ರೊಟ್ಟಿ, ಚಪಾತಿ, ಮೊಸರು, ಮಜ್ಜಿಗೆ ಹಾಗೂ ಭರಪೂರ ನೀರನ್ನು ಕೂಡಾ ಕುಡಿಯಬೇಕು. ಇದರಿಂದ ರಕ್ತ ಶುದ್ಧಿಯಾಗುವುದು. ಇದರಿಂದ ಚರ್ಮಕ್ಕೂ ಹಿತ. ತಾಜಾ ಹಣ್ಣುಗಳ ಸೇವನೆ ಬಹಳ ಮುಖ್ಯ. ಆಯಾ ಋತುಮಾನಕ್ಕೆ ತಕ್ಕಂತೆ ದೊರಕುವ ಮಾವು, ಬಾಳೆ, ಕಿತ್ತಲೆ ಮೊದಲಾದ ಹಣ್ಣುಗಳನ್ನು ನಿಯಮಿತವಾಗಿ ತಿನ್ನಬೇಕು. 

ಕಿತ್ತಲೆ ಹಣ್ಣನ್ನು ಸಾಕಷ್ಟು ತಿಂದರೆ ಒಳ್ಳೆಯದು. ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಅರೆದು ಆ ಪೇಸ್ಟನ್ನು ಮುಖಕ್ಕೆ ನಿರಂತರವಾಗಿ ಒಂದೆರಡು ತಿಂಗಳು ಕಾಲ ಹಚ್ಚುತ್ತಾ ಬಂದರೆ ಒಳ್ಳೆಯ ಪರಿಣಾಮ ಸಾಧ್ಯ.  ಎರಡು ಚಮಚ ಮೊಸರಿನಲ್ಲಿ ಒಂದು ಸ್ಪೂನ್ ಜೇನುತುಪ್ಪ ಬೆರೆಸಿಟ್ಟು ಮುಖಕ್ಕೆ ಲೇಪಿಸಿ ಸ್ವಲ್ಪ ಹೊತ್ತು ಕಾದನಂತರ ತೊಳೆದುಕೊಳ್ಳಿ. ಹೀಗೆ ಒಂದು ತಿಂಗಳು ಮಾಡಿದರೆ ಬಂಗು ಮಚ್ಚೆಗಳು ನಿವಾರಣೆಯಾಗುವುದು.  ಸಾಮಾನ್ಯವಾಗಿ ರಸ್ತೆಯ ಬದಿಯಲ್ಲಿ ಬೆಳೆಯುವ ತಂಗಡಿ ಹೂವನ್ನು ತಂದು ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಕಾಲಕ್ರಮೇಣ ಬಂಗು ನಿವಾರಣೆಯಾಗುತ್ತದೆ ಮುಖದ ಕಾಂತಿ ಹೆಚ್ಚಿಸುತ್ತದೆ. ಜೊತೆಗೆ ಮುಖದ ಕಲೆಗಳು ಸಹ ನಿವಾರಣೆಯಾಗುತ್ತವೆ.

ಲೋಳೆಸರ (ಅಲೋವೇರಾ) ಮುಖದ ಸೌಂದರ್ಯ ಹೆಚ್ಚಿಸುವ ನೈಸರ್ಗಿಕ ಮದ್ದು. ಬಂಗಿನ ಸಮಸ್ಯೆ ಇರುವವರು ಅಲೋವೇರಾ ರಸವನ್ನು ಮುಖಕ್ಕೆ ಹಚ್ಚುವುದರಿಂದ ಈ ಸಮಸ್ಯೆ ಮಾಯವಾಗುತ್ತದೆ. ದಿನ ರಾತ್ರಿ ಮಲಗುವ ಮುನ್ನ ಶುದ್ಧವಾದ ಅಲೋವೇರಾವನ್ನು ಕಲೆಯ ಭಾಗಕ್ಕೆ ಹಚ್ಚಿ. ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹಾಗೆಯೇ ಪಪ್ಪಾಯ ಮತ್ತು ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ ಬೆರೆಸಿ ಪ್ರತಿನಿತ್ಯ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಬೇಕು.

ಒಂದು ಬಟ್ಟಲಿಗೆ ಸ್ವಲ್ಪ ಹಾಲನ್ನು ಹಾಕಿ ಅದಕ್ಕೆ ಜೇನುತುಪ್ಪ ಅದರಲ್ಲಿ ಹತ್ತಿಯ ಉಂಡೆಯನ್ನು ನೆನೆಸಿ. ದಿನಕ್ಕೆ ಎರಡು ಬಾರಿ ಹಾಲಿನಲ್ಲಿ ನೆಂದ ಹತ್ತಿ ಉಂಡೆಯನ್ನು ಮುಖದ ಮೇಲಿನ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಕಲೆಗಳು ದೂರಾಗುತ್ತವೆ. ಈ ಮನೆಮದ್ದುಗಳನ್ನು ಮಾಡಿಯೂ ಸಮಸ್ಯೆ ಇದ್ದರೆ ತಡಮಾಡದೇ ತಕ್ಷಣ ವೈದ್ಯರನ್ನು ಕಾಣಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

SCROLL FOR NEXT