ಎಸ್ ಎಂ ಕೃಷ್ಣ-ಮನ್ ಮೋಹನ್ ಸಿಂಗ್  online desk
ಅಂಕಣಗಳು

ಪ್ರಧಾನಿ ಪಟ್ಟ SM Krishna ಅವರ ಕೈಜಾರಿದ್ದೇಕೆ !? (ಸುದ್ದಿ ವಿಶ್ಲೇಷಣೆ)

ಸುಮಾರು ಎರಡು ದಶಕದ ಹಿಂದೆ ದೇಶದ ಪ್ರಧಾನಿ ಹುದ್ದೆಗೆ ಅವರ ಹೆಸರು ಕಾಂಗ್ರೆಸ್ ಪಡಸಾಲೆಗಳಲ್ಲಿ ಚರ್ಚೆ ಆಗಿತ್ತು ಎಂಬುದು ಬಹುಶಃ ಎಲ್ಲೂ ಹೆಚ್ಚು ಸುದ್ದಿ ಆಗಿರಲಿಲ್ಲ.

ಅದೊಂದು ಸನ್ನಿವೇಶ.ಕನ್ನಡಿಗರೊಬ್ಬರು ಮತ್ತೆ ಪ್ರಧಾನಿ ಅಗುವ ಅವಕಾಶ ಒದಗಿ ಬಂದಿತ್ತು.ಆದರೆ ರಾಜಕಾರಣದ ಲೆಕ್ಕಾಚಾರಗಳು ತೆಲಕೆಳಗಾದ ಕಾರಣ ಆ ಸುಸಂದರ್ಭ ಕೈತಪ್ಪಿ ಹೋಯಿತು.

ಮೊನ್ನೆ ತಾನೆ ಇಹಲೋಕ ತ್ಯಜಿಸಿದ ಕರ್ನಾಟಕ ಕಂಡ ಸಜ್ಜನ ನೇತಾರ , ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ(ಎಸ್.ಎಂ.ಕೃಷ್ಣ) ಇದೀಗ ರಾಜಕೀಯ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದ್ದಾರೆ. ಒಬ್ಬ ಉತ್ತಮ ರಾಜಕೀಯ ನಾಯಕನನ್ನು ನಾಡು ಕಳೆದುಕೊಂಡಿದೆ.

ಆದರೆ ಸುಮಾರು ಎರಡು ದಶಕದ ಹಿಂದೆ ದೇಶದ ಪ್ರಧಾನಿ ಹುದ್ದೆಗೆ ಅವರ ಹೆಸರು ಕಾಂಗ್ರೆಸ್ ಪಡಸಾಲೆಗಳಲ್ಲಿ ಚರ್ಚೆ ಆಗಿತ್ತು ಎಂಬುದು ಬಹುಶಃ ಎಲ್ಲೂ ಹೆಚ್ಚು ಸುದ್ದಿ ಆಗಿರಲಿಲ್ಲ.

90 ರ ದಶಕದ ಕೊನೆಯಲ್ಲಿ ದಿಲ್ಲಿ ರಾಜಕಾರಣ ಬಿಟ್ಟು ಬಂದು ಕೆಪಿಸಿಸಿ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕೃಷ್ಣ ನಿರೀಕ್ಷೆಯಂತೆ 1999 ರಲ್ಲಿ ಮುಖ್ಯಮಂತ್ರಿಯಾದರಷ್ಟೇ ಅಲ್ಲ ರಾಜ್ಯಾಡಳಿತಕ್ಕೆ ಹೊಸ ಮೆರಗು ನೀಡಿದರು. ಆ ಮೂಲಕ ಇಂಗ್ಲಿಷ್ ಮಾಧ್ಯಮಗಳಿಂದ ನಂಬರ್ ಒನ್ ಮುಖ್ಯಮಂತ್ರಿ ಎಂಬ ಬಿರುದಾವಳಿಗೂ ಪಾತ್ರವಾದರು. ಹೊಸ ಕಾರ್ಯಕ್ರಮಗಳ ಮೂಲಕ ಆಡಳಿತಕ್ಕೆ ಚುರುಕು ಕೊಟ್ಟ ಅವರು ಜನಪ್ರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

2004 ರಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಪ್ರಧಾನಿ ಅಭ್ಯರ್ಥಿ ಕುರಿತು ಚರ್ಚೆ ನಡೆದಿದ್ದ ಸಂದರ್ಭದಲ್ಲಿ ಕೃಷ್ಣ ಅವರ ಹೆಸರೂ ಚರ್ಚೆಯಾಗಿತ್ತು. ಇದಕ್ಕೆ ಕಾರಣ ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರು ನೀಡಿದ ಕೆಲವೊಂದು ಜನ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವ ಕರ್ನಾಟಕದತ್ತ ತನ್ನ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿದ್ದು ಬಹು ದೊಡ್ಡ ಕೊಡುಗೆ. ಈ ಕಾರಣಗಳಿಗಾಗಿಯೇ ಅವರು ದಿಲ್ಲಿ ಮಟ್ಟದಲ್ಲೂ ಜನಪ್ರಿಯರಾಗಿದ್ದಷ್ಟೇ ಅಲ್ಲ ರಾಷ್ಟ್ರೀಯ ನಾಯಕರ ಗಮನವನ್ನೂ ಸೆಳೆದಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಾಳೇಯದಲ್ಲಿ ಚರ್ಚೆಯಾದ ಇನ್ನೊಂದು ಹೆಸರು ಎಂದರೆ ಆರ್ಥಿಕ ತಜ್ಞರಾಗಿ ತಮ್ಮ ನೀತಿಗಳ ಮೂಲಕ ದೇಶದ ಗಮನ ಸೆಳೆದಿದ್ದ ಡಾ. ಮನಮೋಹನ ಸಿಂಗ್ ಅವರು.

ಕೃಷ್ಣ ಅವರ ಹೆಸರು ಪ್ರಧಾನಿ ಪಟ್ಟಕ್ಕೆ ಚರ್ಚೆ ಆಗಿದ್ದರ ಬಗ್ಗೆ ಡಾ. ಮನಮೋಹನ್ ಸಿಂಗ್ ಅವರೇ ಪತ್ರಿಕಾ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದರೆ ಈ ಎಲ್ಲವೂ ತಲೆ ಕೆಳಕಾಗಿದ್ದು ಮುಖ್ಯಮಂತ್ರಿಯಾಗಿ ಅವರು ಇಟ್ಟ ಅದೊಂದು ತಪ್ಪು ಹೆಜ್ಜೆ. ತಮ್ಮ ಸರ್ಕಾರದ ಐದು ವರ್ಷದ ಅವಧಿ ಪೂರ್ಣಗೊಳ್ಳಲು ಇನ್ನೂ ಸುಮಾರು ಆರು ತಿಂಗಳು ಇರುವಂತೆಯೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗುವ ನಿರ್ಧಾರ ಕೈಗೊಂಡರು. ಈ ನಿರ್ಧಾರಕ್ಕೆ ಪಕ್ಷದ ವೇದಿಕೆಯಲ್ಲಿ ಸಹೋದ್ಯೋಗಿ ಸಚಿವರಿಂದಲೇ ವಿರೋಧ ವ್ಯಕ್ತವಾದಾಗ ತಮ್ಮ ಚಾಕಚಕ್ಯತೆ ಬಳಸಿ ಅವರೆಲ್ಲರನ್ನು ಕೃಷ್ಣ ಸುಮ್ಮನಾಗಿಸಿದ್ದರು.

ತಮ್ಮ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ಯೋಜನೆ, ಸ್ತ್ರೀ ಶಕ್ತಿ ಸಂಘಗಳನ್ನು ಆರಂಭಿಸಲು ಉತ್ತೇಜನ ನೀಡುವ ಮೂಲಕ ಮಹಿಳಾ ಸ್ವಾವಲಂಬನೆಗೆ ಉತ್ತೇಜನ ನೀಡಿದ್ದು, ಬೆಂಗಳೂರು ನಗರವನ್ನು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿಸುವ ಮೂಲಕ ಯುವ ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆಯ ಆಶಾ ಕಿರಣ ತುಂಬಿದ್ದು, ಮಂದಗತಿಯಲ್ಲಿ ಸಾಗಿದ್ದ ಕೃಷ್ಣಾ ಕೊಳ್ಳದ ಯೋಜನೆ ಕಾಮಗಾರಿಗಳಿಗೆ ಅನುದಾನ ನೀಡಿ ಚುರುಕುಗೊಳ್ಳುವಂತೆ ಮಾಡಿದ್ದು ಹೀಗೆ ಹತ್ತು ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ತಮ್ಮ ಸರ್ಕಾರ ಜನಪ್ರಿಯತೆಯ ಉತ್ತುಂಗದಲ್ಲಿದೆ ಎಂದೇ ಭಾವಿಸಿದ್ದ ಕೃಷ್ಣ, ಈ ಎಲ್ಲ ಕಾರ್ಯಕ್ರಮಗಳನ್ನು ಮೆಚ್ಚಿ ಜನ ತಮಗೆ ಮತ್ತೆ ಬಹುಮತ ನೀಡುತ್ತಾರೆ ಎಂದೇ ನಂಬಿದ್ದರು. ಆದರೆ ಹೀಗೆ ಪ್ರಚಂಡ ಆತ್ಮ ವಿಶ್ವಾಸದಿಂದ ಚುನಾವಣೆಗೆ ಹೋದ ಕಾಂಗ್ರೆಸ್ ಪಕ್ಷಕ್ಕೆ ದಯನೀಯ ಸೋಲು ಆಘಾತ ತಂದಿದ್ದಂತೂ ನಿಜ.

ಹಾಗೆಯೇ ಬಿದ್ದವನ ಮೇಲೆ ಮೇಲಿಂದ ಮೇಲೆ ಕಲ್ಲು ಎಸೆದರು ಎಂಬಂತೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಹೊಣೆಯನ್ನು ಪಕ್ಷದೊಳಗಿದ್ದ ಕೆಲವು ನಾಯಕರೇ ಕೃಷ್ಣರ ಮೇಲೆ ಹೊರಿಸಿ ತೃಪ್ತರಾದರು. ಇದೇ ವೇಳೆ ಕರ್ನಾಟಕದಲ್ಲಿ ಪಕ್ಷಕ್ಕೆ ಆದ ಸೋಲಿನಿಂದ ಕಂಗೆಟ್ಟ ಹೈಕಮಾಂಡ್ ಕೃಷ್ಣ ಅವರನ್ನು ದೂರ ಇರಿಸಿ ಡಾ. ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಕಟ್ಟಿ ಕೈತೊಳೆದುಕೊಂಡಿತು.

ಒಬ್ಬ ರಾಜಕೀಯ ನಾಯಕ ಎಷ್ಟೇ ಬುದ್ಧಿವಂತ, ಜನಾನುರಾಗಿಯಾದರೂ ರಾಜಕೀಯ ಪರಿಸ್ಥಿತಿಗಳ ಲೆಕ್ಕಾಚಾರದಲ್ಲಿ ಆತ್ಮ ವಿಶ್ವಾಸ ಪ್ರದರ್ಶಿಸಲು ಹೋಗಿ ಮುಗ್ಗರಿಸಿದರೆ ಪರಿಣಾಮ ಏನಾದೀತು ಎಂಬುದಕ್ಕೆ ರಾಜ್ಯ ರಾಜಕಾರಣದಲ್ಲಿ ನಡೆದ ಈ ಘಟನೆ ಒಂದು ನಿದರ್ಶನ. ಮುಂದೆ ಕಾಲ ಚಕ್ರದಲ್ಲಿ ಕೃಷ್ಣ ರಾಜ್ಯಪಾಲರಾದರು, ರಾಜ್ಯಸಭೆ ಸದಸ್ಯರೂ ಆಗಿ ಕೇಂದ್ರದಲ್ಲಿ ವಿದೇಶಾಂಗ ಇಲಾಖೆಯಂತಹ ಮಹತ್ವದ ಖಾತೆಯ ಸಚಿವರಾಗಿಯೂ ಕೆಲಸ ನಿರ್ವಹಿಸಿದರು. ಆವತ್ತು ಅವರ ಲೆಕ್ಕಾಚಾರ ಫಲಿಸಿ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಬಹುಮತ ಗಳಿಸಿದ್ದಿದ್ದರೆ ರಾಷ್ಟ್ರ ರಾಜಕಾರಣದ ಚಿತ್ರಣವೇ ಬದಲಾಗುವ ಸಾಧ್ಯತೆಗಳಿತ್ತು. ದೇವೇಗೌಡರ ನಂತರ ಮತ್ತೊಬ್ಬ ಕನ್ನಡಿಗ ಪ್ರಧಾನಿಯಾದ ಪ್ರಶಂಸೆ ಕರ್ನಾಟಕದ್ದಾಗಿರುತ್ತಿತ್ತು. ಆದರೆ ನಡೆದದ್ದು ಬೇರೆ. ನಾಯಕತ್ವ ಮತ್ತು ರಾಜಕೀಯ ಅಧಿಕಾರದ ಅವಕಾಶಗಳ ಕುರಿತಂತೆ ಹೇಳುವುದಾದರೆ , ಪದವಿ ಅಥವಾ ಅಧಿಕಾರ ಎನ್ನುವುದು ಯಾವುದೇ ಹೋರಾಟ, ಮತ್ತು ಹೆಚ್ಚಿನ ಶ್ರಮ ಇಲ್ಲದೇ ಕೃಷ್ಣರಿಗೆ ದೊರಕಿವೆ ಎಂದೇ ಹೇಳಬಹುದು.

1989 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ವೀರೇಂದ್ರ ಪಾಟೀಲರ ನಾಯಕತ್ವದಲ್ಲಿ ಪ್ರಚಂಡ ಜಯ ಸಾಧಿಸಿ ಬಹುಮತ ಗಳಿಸಿದಾಗ ಕೃಷ್ಣ ರಿಗೆ ಮುಖ್ಯಮಂತ್ರಿ ಆಗುವ ಆಸೆ ಇತ್ತಾದರೂ ಅದು ಕೈಗೂಡಲಿಲ್ಲ. ರಾಜಕೀಯ ಲೆಕ್ಕಾಚಾರ ಮತ್ತು ನಾಯಕತ್ವದ ಕಾರಣಗಳಿಗಾಗಿ ಆ ಹುದ್ದೆ ವಿರೇಂದ್ರ ಪಾಟೀಲರ ಪಾಲಾಯಿತು. ಹೀಗಾಗಿ ಅವರು ವಿಧಾನ ಸಭೆಯ ಸ್ಪೀಕರ್ ಸ್ಥಾನಕ್ಕೇ ತೃಪ್ತಿಪಟ್ಟುಕೊಳ್ಳುವಂತಾಯಿತು. ಅಲ್ಲೂ ಕೃಷ್ಣ ತಮ್ಮ ಛಾಪನ್ನು ಒತ್ತಿದರು. ಸದನದ ಕಲಾಪ ಚೇತೋಹಾರಿ ಆಗಿರುವಂತೆ ನೋಡಿಕೊಂಡರು. ಅಧಿವೇಶನ ನಡೆಯುವ ಸಂದರ್ಭದಲ್ಲಿ ಯಾರಾದರೂ ವಿಧಾನಸಭೆಯ ಸದಸ್ಯರ ಜನ್ಮದಿನ ಸಂದರ್ಭ ಇದ್ದರೆ ಸದನದಲ್ಲಿ ಅದನ್ನು ಅನೌಪಚಾರಿಕವಾಗಿ ಪ್ರಸ್ತಾಪಿಸಿ ಆ ಸದಸ್ಯರಿಗೆ ಹೂಗುಚ್ಚ ನೀಡಿ ಜನ್ಮ ದಿನದ ಶುಭ ಕೋರುವ ಪರಿಪಾಠವನ್ನು ಆರಂಭಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಬೇಕಾದ ಶಾಸಕರು ಆಕಸ್ಮಾತ್ ಗೈರು ಹಾಜರಾದರೆ ಅವರ ಗೈರು ಹಾಜರಿಯನ್ನು ಪ್ರಸ್ತಾಪಿಸಿ ನವಿರಾದ ಮಾತುಗಳಲ್ಲೇ ಛೇಡಿಸಿ ಎಚ್ಚರಿಸುವ ಸಂಪ್ರದಾಯವನ್ನು ರೂಡಿಗತ ಮಾಡಿದ ಪರಿಣಾಮ ಪ್ರಶ್ನೋತ್ತರ ಅವಧಿಯಷ್ಟೇ ಅಲ್ಲ, ಉಳಿದ ಅವಧಿಯಲ್ಲೂ ಸದಸ್ಯರು ಕಲಾಪದಿಂದ ದೂರ ಉಳಿಯದೇ ಸದನಕ್ಕೆ ಹಾಜರಾಗುವ ಮೂಲಕ ಕರ್ತವ್ಯ ಪಾಲಿಸುವ ಕೆಲಸಕ್ಕೆ ಚುರುಕು ನೀಡಿದರು. ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಸದನದಲ್ಲಿ ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಬೇಕಾಗಿದ್ದ ಪ್ರತಿಪಕ್ಷದ ಸಾಲಿನಲ್ಲಿದ್ದ ಹಿರಿಯ ಶಾಸಕರೊಬ್ಬರು ಗೈರು ಹಾಜರಾಗಿದ್ದರು. ಪ್ರಶ್ನೆ ಕೇಳಲು ಆ ಸದಸ್ಯರ ಹೆಸರು ಕರೆದಾಗ ಆ ಸದಸ್ಯರ ಗೈರು ಹಾಜರಿಯನ್ನು ಪ್ರಸ್ತಾಪಿಸಿ `ಓಹೋ ಶಿವರಾತ್ರಿ ಇನ್ನೂ ಮುಗಿದಿಲ್ಲ ಅಂತ ಕಾಣುತ್ತೆ’ ಎಂದು ಸೌಮ್ಯ ಮಾತುಗಳಲ್ಲೇ ಕುಟುಕಿ ಇಡೀ ಸದನ ಕ್ಷಣಕಾಲ ನಗೆಗಡಲಲ್ಲಿ ತೇಲಲು ಕಾರಣರಾದರು. ರಾಜಕೀಯವಾಗಿ ಅಷ್ಟೇನೂ ಮಹತ್ವದಲ್ಲದ ಸಭಾಧ್ಯಕ್ಷರ ಸ್ಥಾನದ ಘನತೆಯನ್ನೂ ಎತ್ತಿ ಹಿಡಿದಿದ್ದಷ್ಟೇ ಅಲ್ಲ ಆ ಅಧಿಕಾರವನ್ನು ಬಳಸಿ ಸದನದ ಕಲಾಪದಲ್ಲಿ ಚೈತನ್ಯ ತುಂಬುವಂತೆ ಮಾಡಿದ್ದು ನೆನಪಿನಲ್ಲ ಉಳಿಯುವ ಸಂಗತಿ.

ಮಂಡ್ಯ ದ ನೆಲಕ್ಕೆ ಒಂದು ರೀತಿಯ ದೇಸೀ ಸೊಗಡಿನ ಒರಟುತನವಿದೆ. ಹಾಗಾಗಿ ಅಲ್ಲಿನ ಕನ್ನಡ ಬಾಷೆ ಜನರ ನಡವಳಿಕೆಯೂ ಮೇಲ್ನೋಟಕ್ಕೆ ತೀರಾ ಒರಟು ಎನಿಸುತ್ತದೆ. ಆದರೆ ಕೃಷ್ಣ ಇದೇ ನೆಲದಿಂದ ಬಂದವರಾದರೂ ಅವರ ನಡವಳಿಕೆಯಲ್ಲಿ ಆ ಮಣ್ಣಿನ ಸೊಗಡು ಇರಲಿಲ್ಲ. ಅವರದ್ದು ಶುದ್ಧ ನಾಜೂಕು ವರ್ತನೆ. ಇದರಿಂದ ಅವರು ದೇಶದ ಗಮನ ಸೆಳೆದರೆಂಬುದೇನೋ ನಿಜ. ಆದರೆ ಸ್ಥಳೀಯವಾಗಿ ಅವರೊಬ್ಬ ನೆಲದ ನಾಯಕ ಅನ್ನಿಸಲೇ ಇಲ್ಲ. ಆ ವಿಚಾರದಲ್ಲಿ ಹೇಳುವುದಾದರೆ ದೇವೇಗೌಡರು ಪ್ರಧಾನಿ ಪಟ್ಟಕ್ಕೇರಿದರೂ ಶುದ್ಧ ಹೊಳೆ ನರಸೀಪುರದ ಮಣ್ಣಿನ ಮಗನಾಗೇ ಛಾಪು ಮೂಡಿಸಿದ್ದಾರೆ. ಅಧಿಕಾರದಲ್ಲಿ ಉನ್ನತ ಸ್ಥಾನಗಳಿಗೆ ಏರಿದರೂ ಗೌಡರು ಎಂದಿಗೂ ತಮ್ಮ ರಾಜಕಾರಣ ಮತ್ತು ಸಂಸ್ಕೃತಿಯ ಬೇರುಗಳು ಸಡಿಲವಾಗಲು ಬಿಡಲಿಲ್ಲ. ಇದೇ ಕಾರಣಕ್ಕೆ ಅವರನ್ನು ಈಗಲೂ ಮಣ್ಣಿನ ಮಗ ಎಂದೇ ಗುರುತಿಸಲಾಗುತ್ತಿದೆ. ಆದರೆ ಕೃಷ್ಣ ಅವರಿಗೆ ಸ್ವಂತ ಜಿಲ್ಲೆಯಲ್ಲೇ ಅವಕಾಶಗಳು ಇದ್ದರೂ ಸ್ಥಳೀಯ ರಾಜಕಾರಣದ ನಿರ್ಣಾಯಕ ಘಟ್ಟಗಳಲ್ಲಿ ಅವರು ಅಂತರ ಕಾಪಾಡಿಕೊಂಡದ್ದು ಆಶ್ಚರ್ಯದ ಸಂಗತಿ. ಆ ಮಟ್ಟಿಗೆ ಆ ಜಿಲ್ಲೆಯಲ್ಲಿ ಇನ್ನೊಬ್ಬ ನಾಯಕರಾಗಿದ್ದ ಮಾಜಿ ಸಂಸದ ಜಿ. ಮಾದೇಗೌಡರು ನೆನಪಾಗುತ್ತಾರೆ. ಕೃಷ್ಣ ಅವರಿಗಎ ಹೋಲಿಸಿದರೆ ತಿರಾ ತದ್ವಿರುದ್ಧ ನಡವಳಿಕೆಯ ಮಾದೇಗೌಡರು ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಇನ್ನಿತರೆ ನೆಲ ಜಲದ ವಿವಾದಗಳು ಬಂದಾಗ ಹೋರಾಟದ ಕಣಕ್ಕೆ ಧುಮುಕುತ್ತಿದ್ದರು. ಇಡೀ ಜಿಲ್ಲೆ ಅವರ ಒಂದೇ ಒಂದು ಕರೆಗೆ ಚಳವಳಿಗೆ ಧುಮುಕುತ್ತಿತ್ತು.

ಪಕ್ಷ ರಾಜಕಾರಣವನ್ನೂ ಮೀರಿ ನಿಂತ ಸ್ವಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಮಾದೇಗೌಡರು ತಮಗೆ ಸರಿ ಕಂಡ ವಿಚಾರಗಳನ್ನು ನಿರ್ಭಿಡೆಯಿಂದ ಸರ್ಕಾರಕ್ಕೆ ,ಆಡಳಿತದ ವಿವಿಧ ಸ್ಥರಗಳಲ್ಲಿರುವ ನಾಯಕರಿಗೆ ಚಾಟಿ ಬೀಸಿದಂತೆ ಹೇಳುತ್ತಿದ್ದರು.ಆ ಕಾರಣಕ್ಕಾಗೇ ಅವರು ರೈತನಾಯಕರಾಗಿ ವಿಜೃಂಬಿಸಿದರು. ಅಂಥದೊಂದು ಭಯ ಮಿಶ್ರಿತ ಗೌರವವೂ ಅವರ ಬಗ್ಗೆ ಸರ್ಕಾರಗಳಿಗಿತ್ತು. ಲೋಕಸಭೆ , ವಿಧಾನಸಭೆಯಲ್ಲಿ ಕಾರ್ಯ ನಿರ್ವಹಿಸಿದ್ದರೂ ಅವರಲ್ಲಿ ಮಂಡ್ಯದ ನೆಲದ ಸೊಗಡು ಮಾಯವಾಗಿರಲಿಲ್ಲ.

ಕೃಷ್ಣ ಅವರು ವಿವಿಧ ಅಧಿಕಾರ ಸ್ಥಾನಗಳನ್ನು ನಿರ್ವಹಿಸಿದರೂ ಜನ ಸಾಮಾನ್ಯರ ಜತೆ ಅವರ ಒಡನಾಟ ತೀರಾ ಕಡಿಮೆ ಇತ್ತು. ಹೀಗಾಗಿ ಅವರೊಬ್ಬ ನಾಯಕ ಹೌದಾದರೂ ಈ ನೆಲದ ನಾಯಕರಾಗಿ ಚಿಮ್ಮಲಿಲ್ಲ. ಬಹುಶಃ ಇದಕ್ಕೆ ಅವರು ಬೆಳೆದ ಶೈಕ್ಷಣಿಕ ಪರಿಸರವೂ ಕಾರಣ ಇದ್ದಿರಬಹುದು.

ವೀರಪ್ಪ ಮೊಯ್ಲಿಯವರು ರಾಜ್ಯದ ಮುಖ್ಯಮಂತ್ರಿಯಾದಾಗ ಸ್ಪೀಕರ್ ಸ್ಥಾನ ತೊರೆದು ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದ ಕೃಷ್ಣ, ಮುಖ್ಯಮಂತ್ರಿಗೆ ಇರುವಂತೆ ತಮಗೂ ಪ್ರತ್ಯೇಕ ಸಚಿವಾಲಯ,ಕಾರ್ಯದರ್ಶಿ ಇನ್ನಿತರೆ ಸೌಲಭ್ಯಗಳಿಗೆ ಪಟ್ಟು ಹಿಡಿದರು. ಆ ಕಾಲಕ್ಕೆ ಅದೊಂದು ವಿವಾದವೇ ಆಗಿತ್ತು. ಕಡೆಗೂ ಅವರ ಹಿರಿತನ, ಆಗ್ರಹಕ್ಕೆ ಮಣಿದ ವೀರಪ್ಪ ಮೊಯ್ಲಿ ಐಎಸ್ ಅಧಿಕರಿಯೊಬ್ಬರನ್ನು ಕಾರ್ಯದರ್ಶಿಯಾಗಿ ನೇಮಿಸುವ ಮೂಲಕ ಸಚಿವಾಲಯ ಸೃಷ್ಟಿಸಿದರು.

ವಿದ್ಯುತ್ ಮತ್ತು ನೀರಾವರಿಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದ ಕೃಷ್ಣ ಅವಕಾಶ ಸಿಕ್ಕಾಗಲೆಲ್ಲ ಪರೋಕ್ಷವಾಗಿ ವ್ಯಗ್ಯ ಮಾತುಗಳಲ್ಲೇ ಮುಖ್ಯಮಂತ್ರಿ ಕುರಿತಾಗಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದುದೂ ಉಂಟು. ಅಧಿಕಾರದ ಒಂದು ಹಂತದಲ್ಲಿ ಸಂಪುಟದಲ್ಲಿ ಮತ್ತೊಬ್ಬ ಹಿರಿಯ ಸಚಿವರಾಗಿ ಕಂದಾಯ ಖಾತೆ ನಿರ್ವಹಿಸುತ್ತಿದ್ದ ಎಂ. ರಾಜಶೇಖರ ಮೂರ್ತಿಯವರ ಜತೆಗೂಡಿ ಮೊಯ್ಲಿ ವಿರುದ್ಧ ಭಿನ್ನಮತದ ಬಂಡಾಯದ ಕಹಳೆ ಮೊಳಗಿಸಿದರು. ಇದು ಪರಾಕಾಷ್ಠೆಯ ಹಂತ ಮುಟ್ಟಿತೆಂದುಕೊಳ್ಳುವಷ್ಟರಲ್ಲೇ ಮಖ್ಯಮಂತ್ರಿ ವಿರುದ್ಧದ ತಮ್ಮ ಯುದ್ಧವನ್ನು ಇದ್ದಕ್ಕಿದ್ದಂತೆ ಹಿಂತೆಗೆದುಕೊಂಡು ಕದನ ವಿರಾಮ ಘೋಷಿಸುವ ಮೂಲಕ ರಾಜಕೀಯ ವಲಯದಲ್ಲಿ ಆಶ್ಚರ್ಯಕ್ಕೆ ಕಾರಣರಾದರು.ಇದಕ್ಕೆ ಕಾರಣವೂ ಇತ್ತು. ಸ್ವಯಂ ದಿಲ್ಲಿಯಲ್ಲಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಪಿ.ವಿ ನರಸಿಂಹ ರಾಯರು ಮುಖ್ಯಮಂತ್ರಿ ಮೊಯ್ಲಿ ಬೆನ್ನಿಗೆ ಬೆಂಬಲವಾಗಿ ನಿಂತಿದ್ದರಿಂದ ಭಿನ್ನಮತೀಯ ಚಟುವಟಿಕೆ ಫಲ ಕೊಡಲಿಲ್ಲ. ಮುಂದೆ ರಾಜಶೇಖರ ಮೂರ್ತಿ ಒಂಟಿಯಾದರು. ಆ ಕಾಲಕ್ಕೆ ಕೃಷ್ಣ ಅವರ ಬೆಂಬಲಕ್ಕೆ ಕಾಂಗ್ರೆಸ್ ನ ಗಣನೀಯ ಶಾಸಕರ ಬೆಂಬಲವೂ ಇತ್ತು.

ರಾಜಕೀಯ ಬದುಕಿನುದ್ದಕ್ಕೂ ಹಲವು ಅಧಿಕಾರ ಸ್ಥಾನಗಳನ್ನು ನಿರ್ವಹಿಸಿದರೂ ಸಜ್ಜನಿಕೆಯ ನಡವಳಿಕೆಯನ್ನು ಮರೆಯಲಿಲ್ಲ. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎದುರಾದ ಅನೇಕ ಅಗ್ನಿ ಪರೀಕ್ಷೆಗಳನ್ನು ಮೌನವಾಗೇ ಎದುರಿಸಿ ಗೆದ್ದರು. ಎಲ್ಲೂ ಸಂಯಮ ಕಳೆದುಕೊಳ್ಳಲಿಲ್ಲ. ಇಂತಹ ಕೆಲವು ಗುಣಗಳೇ ಅವರ ನೆನಪನ್ನು ಜೀವಂತವಾಗಿರಿಸಿದೆ. ಒಂದು ವೇಳೆ ಆವತ್ತು ಕೃಷ್ಣ ಅವರ ಲೆಕ್ಕಾಚಾರ ಫಲಿಸಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದರೆ ಅವರಿಗೆ ಪ್ರಧಾನಿ ಆಗುವ ಅವಕಾಶದ ಬಾಗಿಲು ತೆರೆಯುತ್ತಿತ್ತೇನೋ… ಆದರೂ ಸಿಕ್ಕ ಅಧಿಕಾರದ ಅವಕಾಶಗಳನ್ನು ಬಳಸಿಕೊಂಡು ಇಡೀ ರಾಜ್ಯ ನೆನಪಿಸುವಂತಹ ಕೆಲಸಗಳನ್ನು ಮಾಡಿದರು. ನಾಯಕರು ಮರೆಯಾಗಬಹುದು. ಅವರ ಕೆಲಸಗಳು, ಸಾಧನೆಗಳು ಹೆಸರಾಗಿ, ಹಸಿರಾಗಿ ಉಳಿಯುತ್ತವೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕನ್ನಡ ಕಲಿಯಲು ಯತ್ನ, ಎಲ್ಲಾ ಭಾಷೆ, ಸಂಪ್ರದಾಯಗಳ ಬಗ್ಗೆ ಗೌರವ ಇದೆ: ರಾಷ್ಟ್ರಪತಿ ಮುರ್ಮು

ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಜಕೀಯ, ಆದ್ರೂ ಯಾವುದೇ ಲಾಭ ಆಗುವುದಿಲ್ಲ: ಸಿಎಂ ಸಿದ್ದರಾಮಯ್ಯ

DKS ನಟ್ಟು ಬೋಲ್ಟು ಹೇಳಿಕೆ ಕಿತಾಪತಿಗೆ ಸಾಧು ಕೋಕಿಲ ಕಾರಣ; ದರ್ಶನ್ ಸ್ನೇಹದ ಬಗ್ಗೆ ನಟ ಸುದೀಪ್ ಹೇಳಿದ್ದೇನು?

Indian Stock Market: GDP ವರದಿ ಎಫೆಕ್ಟ್; ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ ಲಾಭ!

'Vote chori' ಮಾಹಿತಿಯ ಹೈಡ್ರೋಜನ್ ಬಾಂಬ್ ಬರ್ತಾ ಇದೆ.. PM Modi ಮುಖ ಕೂಡ ತೋರಿಸಲಾಗಲ್ಲ: Rahul Gandhi

SCROLL FOR NEXT