ವಿತ್ತ ಜಗತ್ತಿನ 2025ರ ಮುನ್ನೋಟ online desk
ಅಂಕಣಗಳು

ಮುನ್ನೋಟ 2025: ಹೊಸ ವರ್ಷ ಜಾಗತಿಕ ವಿತ್ತ ಜಗತ್ತಿನ ಮುಂದೆ ಹೊತ್ತು ತರಲಿದೆ ಸವಾಲು ಮತ್ತು ಅವಕಾಶ! (ಹಣಕ್ಲಾಸು)

ಈ ವರ್ಷ ಕೂಡ ಎಂದಿನಂತೆ ಅಸ್ಥಿರತೆ ಚಿಟಿಕೆ ಹೆಚ್ಚಾಗಿರಲಿದೆ. ಏರಿಳಿತಗಳು ಇಲ್ಲದಿದ್ದರೆ ಹೊಸ ಅವಕಾಶಗಳು ಸೃಷ್ಟಿಯಾಗುವುದಿಲ್ಲ. ಹೀಗಾಗಿ ಕುಸಿತದ ಜೊತೆ ಜೊತೆಗೆ ಈ ವರ್ಷವೂ ಕೂಡ ಅವಕಾಶಗಳು ನಮ್ಮೆದುರು ತೆರೆದುಕೊಳ್ಳಲಿದೆ. ಅಂತಹ ಅವಕಾಶವನ್ನು ನಮ್ಮದಾಗಿಸಿಕೊಳ್ಳಬೇಕಿದೆ. (ಹಣಕ್ಲಾಸು-442)

ಪ್ರತಿ ವರ್ಷದ ಕೊನೆಯಲ್ಲಿ ಮುಂದಿನ ವರ್ಷದಲ್ಲಿ ವಿತ್ತ ಜಗತ್ತಿನಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆಗಳನ್ನು ಗಮನಿಸುವುದು ಹಣಕ್ಲಾಸು ಅಂಕಣದಲ್ಲಿ ತಪ್ಪದೆ ಪಾಲಿಸಕೊಂಡು ಬಂದಿರುವ ಅಂಶವಾಗಿದೆ.

ನಾವು ಇನ್ನೊಂದು ವರ್ಷವನ್ನು ಸಹ ಕಳೆದು, 2025 ಕ್ಕೆ ಸಿದ್ಧತೆ ನಡೆಸುತ್ತಿರುವ ಈ ವೇಳೆಯಲ್ಲಿ 2025 ರಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಕೂಡ ಒಂದಷ್ಟು ಗಮನ ಹರಿಸೋಣ. ನೆನಪಿರಲಿ ಇಂದು ಜಗತ್ತು ಒಂದು ಪುಟಾಣಿ ಹಳ್ಳಿ ಇದ್ದಂತೆ! ಹೀಗಾಗಿ ಮುಖ್ಯವಾಗಿ ಅಮೇರಿಕಾ, ಚೀನಾ, ಯೂರೋಪಿಯನ್ ಯೂನಿಯನ್ ಗಳಲ್ಲಿ ಆಗುವ ಬದಲಾವಣೆ ಭಾರತದ ಮೇಲೂ ಪರಿಣಾಮವನ್ನು ಬೀರುತ್ತದೆ.

ಈ ವರ್ಷ ಕೂಡ ಎಂದಿನಂತೆ ಅಸ್ಥಿರತೆ ಚಿಟಿಕೆ ಹೆಚ್ಚಾಗಿರಲಿದೆ. ಏರಿಳಿತಗಳು ಇಲ್ಲದಿದ್ದರೆ ಹೊಸ ಅವಕಾಶಗಳು ಸೃಷ್ಟಿಯಾಗುವುದಿಲ್ಲ. ಹೀಗಾಗಿ ಕುಸಿತದ ಜೊತೆ ಜೊತೆಗೆ ಈ ವರ್ಷವೂ ಕೂಡ ಅವಕಾಶಗಳು ನಮ್ಮೆದುರು ತೆರೆದುಕೊಳ್ಳಲಿದೆ. ಅಂತಹ ಅವಕಾಶವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ಅಮೇರಿಕಾ ಆರ್ಥಿಕತೆ ಮುಂದಿದೆ ದೊಡ್ಡ ಸವಾಲು

ನಿಮಗೆಲ್ಲಾ 2024 ರಲ್ಲಿ ಆದ ವಿದ್ಯಮಾನಗಳ ಅರಿವಿರುತ್ತದೆ. ಅಮೇರಿಕಾ ದೇಶ ತೀವ್ರ ಹಣದುಬ್ಬರದಿಂದ ಬಳಲುತ್ತಿದೆ. ಇದರ ಪರಿಣಮವಾಗಿ ಅಲ್ಲಿನ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರವನ್ನು ಮೂರು ಬಾರಿ ಕಡಿತ ಗೊಳಿಸಿತು. ಹೀಗಿದ್ದೂ ಕೂಡ ಅಮೆರಿಕಾದ ಹಣದುಬ್ಬರ ಕಡಿಮೆಯಾಗಲಿಲ್ಲ. ಹೀಗಾಗಿ 2025 ರಲ್ಲಿ ಇನ್ನೆರೆಡು ಬಾರಿ ಬಡ್ಡಿದರವನ್ನು ಕಡಿತಗೊಳಿಸುವ ಸಾಧ್ಯತೆಯಿದೆ. 2024 ರ ಕೊನೆಯಲ್ಲಿ ಗೆದ್ದು ಬಂದಿರುವ ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಚೀನಾ ದೇಶದ ಪದಾರ್ಥಗಳ ಮೇಲೆ 60 ಪ್ರತಿಶತದ ವರೆಗೂ ತೆರಿಗೆ ವಿಧಿಸುವ ತೀರ್ಮಾನವನ್ನು ಹೊರಹಾಕಿದ್ದಾರೆ.

ಚೀನಾವನ್ನು ಹದ್ದುಬಸ್ತಿನಲ್ಲಿ ಇಡುವ ಇವರ ಈ ನಡೆ ಅಮೇರಿಕಾ ದೇಶದಲ್ಲಿ ಇನ್ನಷ್ಟು ಹಣದುಬ್ಬರವನ್ನು ಏರಿಸುತ್ತದೆ. ಇಲ್ಲವೇ ಬೇಡಿಕೆಯನ್ನು ಕುಸಿಯುವಂತೆ ಮಾಡುತ್ತದೆ. ಹಣದುಬ್ಬರ ಮತ್ತು ಬೇಡಿಕೆ ಕುಸಿತ ಒಂದು ದೇಶವನ್ನು ಆರ್ಥಿಕ ಹಿಂಜರಿತಕ್ಕೆ ದೂಡುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಹಲವಾರು ಸಂಸ್ಥೆಗಳು ಅಮೆರಿಕಾದ ಅಭಿವೃದಿ ಸೂಚ್ಯಂಕ 1. 9 ರಿಂದ 2.2 ಪ್ರತಿಶತ ಇರಲಿದೆ ಎಂದು ಹೇಳಿವೆ. ಟ್ರಂಪ್ ಅಮೇರಿಕಾ ಮೊದಲು ಎನ್ನುವ ನಿಲುವಿಗೆ ಬದ್ಧರಾಗಿದ್ದಾರೆ. ಚೀನಾದ ಜೊತೆಗೆ ಭಾರತದ ವಿರುದ್ಧ ಕೂಡ ಅವರು ತೆರಿಗೆ ಯುದ್ಧವನ್ನು ಆರಂಭಿಸಿದ್ದಾರೆ. ಜಾಗತಿಕವಾಗಿ ಹೊಸ ಟ್ರೇಡ್ ವಾರ್ ಗೆ ಇದು ಮುನ್ನಡಿಯಾಗಬಹುದು. ಅಮೇರಿಕಾ ಮುಂದೆ 2025 ಕ್ಕೆ ಮುಖ್ಯವಾಗಿ ಮೂರು ಅಂಶಗಳ ಮೇಲೆ ಹಿಡಿತ ಸಾಧಿಸಬೇಕಿದೆ.

  1. ಫೀಸ್ಕಲ್ ಡೆಫಿಸಿಟ್ 3 ಪ್ರತಿಶತ ಕಡಿಮೆ ಮಾಡುವುದು .

  2. ಜಿಡಿಪಿ ಅಭಿವೃದ್ಧಿಯನ್ನು 3 ಪ್ರತಿಶತಕ್ಕೆ ಏರಿಸುವುದು

  3. ಪ್ರತಿ ದಿನ 3 ಮಿಲಿಯನ್ ಕಚ್ಚಾ ತೈಲವನ್ನು ಹೆಚ್ಚಾಗಿ ಉತ್ಪಾದಿಸುವುದು.

ಚೀನಾ ತನ್ನ ಆಂತರಿಕ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ:

ಅಮೇರಿಕಾ ದೇಶದಲ್ಲಿ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ಹಿಡಿದ ನಂತರ ಚೀನಾ ದೇಶದ ವಿರುದ್ಧ ಟ್ರೇಡ್ ವಾರ್ ಶುರು ಮಾಡಿದ್ದಾರೆ. 2017 ರಲ್ಲಿ ಇದೆ ಟ್ರಂಪ್ ಚೀನಾವನ್ನು ಮಣಿಸಲು ಆಗಿರಲಿಲ್ಲ. ಇಂದಿಗೆ ಚೀನಾ ದೇಶದ ಕಥೆ ಕೂಡ ಬೇರೆಯಾಗಿದೆ. ಚೀನಾದಲ್ಲಿ ರಿಯಲ್ ಎಸ್ಟೇಟ್ ಕುಸಿತದ ಪ್ರಭಾವ ಬಹಳ ಹೆಚ್ಚಾಗಿದೆ. ಚೀನಾ ತನ್ನ ಡೊಮೆಸ್ಟಿಕ್ ಬೇಡಿಕೆಯನ್ನು ಗಣನೀಯವಾಗಿ ಏರಿಸಿಕೊಂಡಿದೆ.

ಆದರೂ ಅಮೇರಿಕಾ ಟ್ರೇಡ್ ಶುರು ಮಾಡಿದ ಹಿನ್ನಲೆಯಲ್ಲಿ ಚೀನಾ ಮಾತುಕತೆಗೆ ಮುಂದಾಗಿದೆ. ಚೀನಾ ತನ್ನ ಬಿಗುಮಾನ ಬಿಡದೆ ಹೋದರೆ ಅಮೇರಿಕಾ ದೇಶದ ಜೊತೆಗೆ ಟ್ರೇಡ್ ಡೆಫಿಸಿಟ್ ಉಂಟಾಗುತ್ತದೆ. ಇದು ಚೀನಾದ ಆರ್ಥಿಕತೆಗೆ ಒಳ್ಳೆಯದಲ್ಲ. ಕಳೆದ ನಾಲ್ಕು ವರ್ಷದಿಂದ ನಲುಗುತ್ತಿರುವ ಚೀನಾದ ಎಕಾನಮಿಗೆ ಇದು ಬಹಳ ದೊಡ್ಡ ಪೆಟ್ಟು ನೀಡುತ್ತದೆ. ಹಾಗೆಂದು ಅಮೇರಿಕಾ ಬಲಿಷ್ಠವಾಗಿದೆ ಎಂದಲ್ಲ. ಇಂದಿಗೆ ಎರಡೂ ದೇಶಗಳೂ ಕೂಡ ಮಾತುಕತೆಗೆ ಕೂರಬೇಕು. ಅಡ್ವಾಂಟೇಜ್ ಅಮೇರಿಕಾಗೆ ಎನ್ನಬಹುದು.

ಯೂರೋಪಿಯನ್ ಯೂನಿಯನ್:

ಈ ವರ್ಷ ಯೂರೋಪಿಯನ್ ಯೂನಿಯನ್ ನಲ್ಲಿ ಹಣದುಬ್ಬರ ಕಡಿಮೆಯಾಗಲಿದೆ. ಹಣದುಬ್ಬರ ಸೊನ್ನೆಯ ಸನಿಹಕ್ಕೆ ಬರಲಿವೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲ. ಹಣದುಬ್ಬರ ಅಲ್ಪ ಪ್ರಮಾಣದಲ್ಲಿ ಇದ್ದಾಗ ಮಾತ್ರ ಎಕಾನಾಮಿಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಿವಿಧ ಏಜೆನ್ಸಿ ನೀಡುವ ರೇಟಿಂಗ್ ಪ್ರಕಾರ 1.5 ರಿಂದ 1.8 ಪ್ರತಿಶತ ಅಭಿವೃದ್ಧಿ ಕಾಣುತ್ತದೆ ಎಂದು ಹೇಳಲಾಗಿದೆ. ಇಷ್ಟು ವರ್ಷಗಳ ಕಾಲ ಯೂರೋಪಿಯನ್ ಯೂನಿಯನ್ ನ ಆಧಾರ ಸ್ಥಂಭದಂತಿದ್ದ ಜೆರ್ಮನಿಯ ಗ್ರೋಥ್ ರೇಟ್ 0.2 ಪ್ರತಿಶತ ಎನ್ನುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯನ್ನು ಅಕ್ಷರಂಶ ಆಳುತ್ತಿದ್ದ ಜರ್ಮನ್ ಕಾರು ಉತ್ಪಾದಕರು ಚೀನಾ ಮತ್ತು ಅಮೇರಿಕಾ ದೇಶದ ಕಾರು ಉತ್ಪಾದಕರಿಗೆ ಮಾರುಕಟ್ಟೆ ಷೇರು ಬಿಟ್ಟುಕೊಡುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಯೂರೋಪಿಯನ್ ಯೂನಿಯನ್ ಜರ್ಮನಿಯ ಸಹಾಯಕ್ಕೆ ಬರಬೇಕಾದ ಸಂದರ್ಭ 2025 ರಲ್ಲಿ ಬರಲಿದೆ.

ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತೆ ಕಂಡರೂ ರಷ್ಯಾವನ್ನು ನಿರ್ಲಕ್ಷಿಸುವಂತಿಲ್ಲ:

ರಷ್ಯಾ ದೇಶ ನಿಲ್ಲದ ಯುದ್ಧದ ಕಾರಣ ತನ್ನ ಆರ್ಥಿಕತೆಯನ್ನು ಉತ್ತಮಗೊಳಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಕಚ್ಚಾ ತೈಲ ಉತ್ಪಾದನೆಯ ವಿಷಯದಲ್ಲಿ ಒಂದಷ್ಟು ಜಾಗತಿಕ ಆಟವನ್ನು ರಷ್ಯಾ ಕೂಡ ಆಡಬಹುದು. ಇದರ ಜೊತೆಗೆ ಬ್ರಿಕ್ಸ್ ಒಕ್ಕೂಟದ ಮೂಲಕ ಹೊಸ ಗ್ಲೋಬಲ್ ಕರೆನ್ಸಿ ತರುವ ಯೋಚನೆ ಮಾಡಬಹುದು. ಗ್ಲೋಬಲ್ ಕರೆನ್ಸಿ ಮಟ್ಟಕ್ಕೆ ಅಲ್ಲದಿದ್ದರೂ ಬ್ರಿಕ್ಸ್ ಒಕ್ಕೊಟದಲ್ಲಿ ಮತ್ತು ಆಫ್ರಿಕನ್ ಒಕ್ಕೂಟದ ನಡುವೆ ವಹಿವಾಟು ನಡೆಸಲು ಈ ಕರೆನ್ಸಿ ಬಳಕೆಯಾದರೂ ಸಾಕು. ಅದು ಡಾಲರ್ಗೆ ಬಹುದೊಡ್ಡ ಪೆಟ್ಟು ನೀಡುತ್ತದೆ. 2025 ರಲ್ಲಿ ಬ್ರಿಕ್ಸ್ ಕರೆನ್ಸಿ ಬರುವ ಸಾಧ್ಯತೆ ಸದ್ಯದ ಮಟ್ಟಿಗೆ ಕಡಿಮೆ. ಆದರೆ ಜಾಗತಿಕ ರಾಜಕೀಯ ತೆಗೆದುಕೊಳ್ಳುವ ತಿರುವುಗಳ ಮೇಲೆ ಸಂಭಾವ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಪೆಕ್ ದೇಶಗಳಲ್ಲಿ ಕೂಡ ರಷ್ಯಾ ದೇಶಕ್ಕೆ ಉತ್ತಮ ಬಾಂಧ್ಯವವಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಇದು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಇಲ್ಲವಾಗಿದೆ.

ಅಡ್ವಾಂಟೇಜ್ ಭಾರತ:

ಜಾಗತಿಕ ಅಸ್ಥಿರತೆಗಳ ನಡುವೆಯೂ ಭಾರತ ಜಗತ್ತಿನ ಹಾಟ್ ಫೆವರೇಟ್ ದೇಶ. 2025 ರಲ್ಲಿ ಕೂಡ ಗ್ರೋಥ್ ರೇಟ್ 6.2 ರಿಂದ 6.7 ಪ್ರತಿಶತದ ವರೆಗೂ ಇರಲಿದೆ ಎಂದು ಹಲವಾರು ರೇಟಿಂಗ್ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. 2024 ರಲ್ಲಿ ಭಾರತದ ಇಂಡಸ್ಟ್ರಿಲ್ ಪ್ರೊಡಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದರೂ ಜಾಗತಿಕ ತಲ್ಲಣಗಳ ನಡುವೆ ಭಾರತದ ಸಾಧನೆ ಶ್ಲಾಘನೀಯ. ಭಾರತದ ಫಾರಿನ್ ಎಕ್ಸ್ಚೇಂಜ್ ರಿಸೆರ್ವ್ ಸರ್ವಕಾಲಿಕ ಏರಿಕೆ ಕಂಡು ಜಗತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಚೀನಾ, ಜಪಾನ್ ಮತ್ತು ಸ್ವಿಸ್ ದೇಶಗಳು ಭಾರತಕ್ಕಿಂತ ಈ ಲೆಕ್ಕಾಚಾರದಲ್ಲಿ ಮುಂದಿವೆ. ಸ್ವಿಸ್ ದೇಶದಲ್ಲಿ ನೆಗಟಿವ್ ಇಂಟರೆಸ್ಟ್ ರೇಟ್ ಸನ್ನಿವೇಶ ಏರ್ಪಟ್ಟಿದೆ. ಜಪಾನ್ ಈಗಷ್ಟೆ ಅದರಿಂದ ಹೊರಬರುತ್ತಿದೆ. ಈ ಅಂಶಗಳನ್ನು ಮತ್ತು ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಯುದ್ಧಗಳು, ರಾಜಕೀಯ ಬದಲಾವಣೆಗಳು, ಹೆಚ್ಚುತ್ತಿರುವ ಅಸ್ಥಿರತೆಯನ್ನು ಗಮನಕ್ಕೆ ತೆಗೆದುಕೊಂಡರೆ 2024 ರಲ್ಲಿ ಭಾರತದ ರಿಪೋರ್ಟ್ ಕಾರ್ಡ್ ಉತ್ತಮವಾಗಿತ್ತು ಎನ್ನಲು ಅಡ್ಡಿಯಿಲ್ಲ. ಮತ್ತೆ ಇವೇ ಅಂಶಗಳು ಇನ್ನಷ್ಟು ತೀವ್ರ ಗತಿಯನ್ನು ಪಡೆದುಕೊಂಡರೂ ಕೂಡ ಭಾರತದ ರಿಪೋರ್ಟ್ ಕಾರ್ಡ್ ಬೇರೆಲ್ಲಾ ದೇಶಗಳಿಗಿಂತ ಉತ್ತಮವಾಗಿರಲಿವೆ.

2025 ರಲ್ಲಿ ಮತ್ತೊಮ್ಮೆ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಬಹುದು ಎನ್ನುವ ಮಾತುಗಳು ಆರ್ಥಿಕ ವಲಯದಲ್ಲಿ ಗಿರಕಿ ಹೊಡೆಯುತ್ತಿವೆ. ಹಾಗೊಮ್ಮೆ ಇದು ನಿಜವಾದರೂ ಮತ್ತು ಅದು ಜಗತ್ತಿಗೆ ಗೊತ್ತಾಗಲು ಸಮಯ ಬೇಕಾಗುತ್ತದೆ. ಜೂನ್ , ಜುಲೈ 2025 ರ ವರೆಗೆ ಆರ್ಥಿಕ ಹಿಂಜರಿತದ ಮಾತುಗಳನ್ನು ಕೇಳಲು ಸಾಧ್ಯವಿಲ್ಲ. ಟ್ರಂಪ್ ತೆಗೆದುಕೊಳ್ಳುವ ಹಲವು ನಿರ್ಧಾರಗಳ ಮೇಲೆ ಇದು ಅವಲಂಬಿತವಾಗಿದೆ.

ಹೋಗುವ ಮುನ್ನ: ಅಮೇರಿಕಾ ದೇಶದಲ್ಲಿ ಬಡ್ಡಿದರವನ್ನು 2025 ರಲ್ಲೂ ಕಡಿಮೆ ಮಾಡುವ ಸಾಧ್ಯತೆಯಿದೆ. ಭಾರತದಲ್ಲಿ ಕೂಡ ಬಡ್ಡಿದರವನ್ನು ಕಡಿಮೆ ಮಾಡಬೇಕು. ಇಂಡಸ್ತ್ರೀಯಲ್ ಗ್ರೋಥ್ ಮತ್ತು ಪ್ರೊಡಕ್ಷನ್ ಕುಸಿತಕ್ಕೆ ಬಡ್ಡಿ ದರ ಕಾರಣ ಎನ್ನುವ ಮಾತುಗಳನ್ನು ನಾವು ಕೇಳುತ್ತಿದ್ದೇವೆ. ಆದರೆ ಭಾರತ ಸರಕಾರ ಮತ್ತು ಆರ್ಬಿಐ ಬಡ್ಡಿದರವನ್ನು ಕಡಿಮೆ ಮಾಡಬಾರದು. ಸಮಸ್ಥಿತಿ ಕಾಯ್ದುಕೊಳ್ಳಬೇಕು. ಆದರೆ ಭಾರತದ ಹೊಸ ಆರ್ಬಿಐ ಗವರ್ನರ್ ಬಡ್ಡಿ ಕಡಿಮೆ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಭಾರತದಲ್ಲಿ ಡೆಟ್ ಇನ್ನಷ್ಟು ಚೀಪ್ ಆಗಲಿದೆ. ಈ ಕಾರಣದಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕೂಡ ಹೆಚ್ಚಾಗಲಿದೆ. ಒಂದು ಕೋನದಿಂದ ಇದು ಉತ್ತಮ ಎನ್ನಿಸಿದರೂ, ಬಡ್ಡಿದರದ ಏರಿಕೆ ಇಳಿಕೆ ಎನ್ನುವುದು ಎರಡು ಅಲುಗಿನ ಕತ್ತಿಯಂತೆ ಇನ್ನೊಂದೆಡೆ ನೋವು ಕೂಡ ಉಂಟು ಮಾಡಲಿದೆ. ಒಟ್ಟಾರೆ ಭಾರತದ ಆರ್ಥಿಕತೆ ಸದ್ಯಕ್ಕೆ ಸುಭದ್ರ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT