Heat rash PTI
ಅಂಕಣಗಳು

ಬೇಸಿಗೆ ಕಾಲದಲ್ಲಿ ಕಾಡುವ ಉಷ್ಣದ ಗುಳ್ಳೆಗಳು (ಕುಶಲವೇ ಕ್ಷೇಮವೇ)

ಬೇಸಿಗೆ ಕಾಲ ಈಗಷ್ಟೇ ಶುರುವಾಗುತ್ತಿದೆ. ಬಿಸಿಲು ನಿಧಾನಕ್ಕೆ ಹೆಚ್ಚಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ದಿನೇ ದಿನೇ ಧಗೆ ಏರುತ್ತಿದೆ. ಇದರ ಪರಿಣಾಮವಾಗಿ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಬಾಯಾರಿಕೆಯಾಗುವ ಜೊತೆಗೆ ಮೈಯಿಂದ ವಿಪರೀತ ಬೆವರು ಬರುತ್ತದೆ.

ಬೇಸಿಗೆ ಕಾಲ ಈಗಷ್ಟೇ ಶುರುವಾಗುತ್ತಿದೆ. ಬಿಸಿಲು ನಿಧಾನಕ್ಕೆ ಹೆಚ್ಚಾಗುತ್ತಿದೆ. ಮಧ್ಯಾಹ್ನದ ಸಮಯದಲ್ಲಿ ದಿನೇ ದಿನೇ ಧಗೆ ಏರುತ್ತಿದೆ. ಇದರ ಪರಿಣಾಮವಾಗಿ ಉಷ್ಣತೆ ಹೆಚ್ಚಾಗುತ್ತಿದ್ದಂತೆ ಬಾಯಾರಿಕೆಯಾಗುವ ಜೊತೆಗೆ ಮೈಯಿಂದ ವಿಪರೀತ ಬೆವರು ಬರುತ್ತದೆ. ಕೆಲವೊಮ್ಮೆ ಬೆವರಿನ ಜೊತೆಗೆ ವಾತಾವರಣದ ಧೂಳು ಮತ್ತು ಕೊಳೆ ಸೇರಿ ಕೊಂಡು ಸೆಖೆ ಅಥವಾ ಉಷ್ಣದ ಗುಳ್ಳೆಗಳು ಉಂಟಾಗುತ್ತವೆ.

ಉಷ್ಣದ ಗುಳ್ಳೆಗಳು ಮೂಡುವ ಲಕ್ಷಣಗಳು

ದೇಹದಲ್ಲಿ ಕೈ, ಕಾಲು, ತೋಳು ಹೀಗೆ ಯಾವುದೇ ಭಾಗದಲ್ಲಿ ಉಷ್ಣದ ಗುಳ್ಳೆಗಳು ಉಂಟಾಗಬಹುದು. ಬಿಸಿಲು ಹೆಚ್ಚಿದಂತೆ ಚರ್ಮದ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿ ಗುಳ್ಳೆಗಳು ಉರಿಯುತ್ತವೆ. ಹಿರಿಕಿರಿಯರೆಲ್ಲರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಇದು. ಸುಡು ಬಿಸಿಲಿನ ನಡುವೆ ಉಷ್ಣದ ಗುಳ್ಳೆಗಳು, ಚರ್ಮದ ಉರಿ ಹಾಗೂ ತುರಿಕೆ ತೊಂದರೆ ಕೊಡುತ್ತವೆ.

ಉಷ್ಣದ ಗುಳ್ಳೆಗಳಿಗೆ ಮನೆಮದ್ದು

  • ಎರಡು-ಮೂರು ವೀಳ್ಯದ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಲ್ಪ ಬಿಸಿ ಮಾಡಿ ಮೇಲೆ ಕೆಲವು ಹನಿಗಳಷ್ಟು ಹರಳೆಣ್ಣೆ ಹಾಕಿ ಉಷ್ಣದ ಗುಳ್ಳೆಗಳು ಉಂಟಾಗಿರುವ ಜಾಗದಲ್ಲಿ ಸ್ವಲ್ಪ ಹೊತ್ತು ಇಡಬೇಕು. ಇದರಿಂದ ಉರಿಯು ಶಮನವಾಗುತ್ತದೆ. ಹಾಗೇ ವೀಳ್ಯದ ಎಲೆಗಳ ರಸ ತೆಗೆದುಕೊಂಡು ಉಷ್ಣದ ಗುಳ್ಳೆಗಳ ಮೇಲೆ ಹಚ್ಚಿ ಒಂದೆರಡು ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು.

  • ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಅದನ್ನು ಉಂಡೆ ಮಾಡಿ ಅಥವಾ ಸ್ವಚ್ಛವಾಗಿರುವ ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲೆ ನೆನೆಸಿ ಉಷ್ಣದ/ಬೆವರು ಗುಳ್ಳೆಗಳನ್ನು ನಿಧಾನವಾಗಿ ಸ್ವಚ್ಚಮಾಡಿಕೊಳ್ಳಬೇಕು. ಗುಳ್ಳೆಗಳ ಮೇಲೆ ತೆಳುವಾಗಿ ಹರಳೆಣ್ಣೆ/ಕೊಬ್ಬರಿ ಎಣ್ಣೆ ಹಚ್ಚಿದರೂ ಸಮಸ್ಯೆ ಉಪಶಮನ ಸಾಧ್ಯ. ಹೀಗೆ ಬೇವಿನ ಎಣ್ಣೆಯನ್ನೂ ಬಳಸಬಹುದು.

  • ಹರಳೆಣ್ಣೆಗೆ ನಂಜು ನಿರೋಧಕ ಶಕ್ತಿ ಇದೆ. ಹತ್ತಿಯನ್ನು ಹರಳೆಣ್ಣೆಯಲ್ಲಿ ನೆನೆಸಿ ಅದನ್ನು ಗುಳ್ಳೆಯ ಮೇಲೆ ಇಡುತ್ತಾ ಬರಬೇಕು.

  • ಬೆಚ್ಚಗಿರುವ ನೀರಿಗೆ ಕಲ್ಲು ಉಪ್ಪು ಬೆರೆಸಿ ಸ್ವಲ್ಪ ಹೊತ್ತು ಸ್ನಾನ ಮಾಡಿದರೆ ಚರ್ಮದ ಸೋಂಕು ಕಡಿಮೆಯಾಗುತ್ತದೆ. ಉಷ್ಣದ ಗುಳ್ಳೆಗಳಾಗಿದ್ದರೆ ಕ್ರಮೇಣ ಮಾಯವಾಗುತ್ತವೆ.

  • ಗುಳ್ಳೆಗಳು ಉರಿದಾಗ ಅಥವಾ ಅವುಗಳಿಂದ ಕಿರಿಕಿರಿಯಾದರೆ ಹಿಸುಕಬಾರದು ಮತ್ತು ಹೆಚ್ಚು ಕೆರೆದುಕೊಳ್ಳಬಾರದು. ಹಾಗೆ ಮಾಡಿದರೆ ಅವುಗಳು ಮತ್ತಷ್ಟು ಹರಡುವ ಸಾಧ್ಯತೆ ಇದೆ.

  • ಕರ್ಪೂರವನ್ನು ಬೇವಿನ ಎಣ್ಣೆಯ ಜೊತೆಗೆ ಸೇರಿಸಿ ಗುಳ್ಳೆಗಳ ಮೇಲೆ ಹಚ್ಚಿ ಸ್ವಲ್ಪ ಕಾಲ ಬಿಟ್ಟರೂ ಸರಿಯೇ.

  • ಅಲೋವೆರಾ ಅಥವಾ ಲೋಳೆಸರ ಚರ್ಮದ ಎಲ್ಲಾ ಸಮಸ್ಯೆಗಳಿಗೂ ಮದ್ದು. ಅಲೋವಿರಾದ ರಸ ತೆಗೆದು ಅದಕ್ಕೆ ಉರಿಯೂತ ನಿವಾರಕ ಅರಸಿನವನ್ನು ಬೆರೆಸಿ ಬಾಧಿತ ಭಾಗಕ್ಕೆ ಹಗುರಾಗಿ ಹಚ್ಚಬೇಕು. ಇದು ಸೂಕ್ಷ್ಮಾಣುಜೀವಿಗಳನ್ನು ನಿವಾರಿಸುತ್ತದೆ. ಪ್ರತಿ ದಿನ 1-2 ಬಾರಿ ಈ ರೀತಿ ಮಾಡಿದರೆ ಬಹುಬೇಗ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಇದು ಚರ್ಮದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

  • ತುಳಸಿ ರಸ, ಅರಿಷಿಣ ಮತ್ತು ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದನ್ನು ಪ್ರತಿ ದಿನ ಉಷ್ಣದ ಗುಳ್ಳೆಗಳಿಗೆ ಹಚ್ಚಿದರೆ ಸಮಸ್ಯೆಗಳು ದೂರವಾಗುತ್ತದೆ.

ಬಿಸಿಲು ಗುಳ್ಳೆಗಳಿಗೆ ಪರಿಹಾರ

ಉಷ್ಣದ ಗುಳ್ಳೆಗಳಿಗೆ ಉತ್ತಮ ಪರಿಹಾರವೆಂದರೆ ಚರ್ಮವನ್ನು ನೀರಿನಿಂದ ತೊಳೆದು ಸ್ವಚ್ಛವಾಗಿರಿಸುವುದು. ಹೊರಗೆ ಹೋದಾಗ ಅಥವಾ ಕೆಲವೊಮ್ಮೆ ಮನೆಯಲ್ಲಿ ಇದ್ದಾಗಲೂ ದಿನವು ತಣ್ಣೀರಿನಿಂದ ಸ್ನಾನ ಮಾಡಿ ಚರ್ಮವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಬಹಳ ಉತ್ತಮ. ದಿನವೂ ಬಳಕೆ ಮಾಡುವ ಟವೆಲ್ ಮತ್ತು ಬಟ್ಟೆ ಸ್ವಚ್ಛವಾಗಿರಬೇಕು. ಮೃದುವಾಗಿರುವ ಕಾಟನ್ ಟವೆಲ್ಲನ್ನು ಬಳಸಬೇಕು. ಯಾವಾಗಲೂ ಒಂದು ಕರ್ಚೀಫನ್ನು ಇಟ್ಟುಕೊಂಡು ಅದನ್ನು ಸ್ವಚ್ಛವಾದ ನೀರಿನಲ್ಲಿ ಅದ್ದಿ ಮುಖ, ಕುತ್ತಿಗೆ ಮತ್ತು ಕುತ್ತಿಗೆಯ ಭಾಗವನ್ನು ಒರೆಸಿಕೊಳ್ಳಬೇಕು.

ಬಿಸಿಲು ಗುಳ್ಳೆಗಳು ಬರದಂತೆ ತಡೆಯಲು ಕೆಲವು ಸಲಹೆ...

ಬೇಸಿಗೆ ಕಾಲದಲ್ಲಿ ನೀರನ್ನು ಸಾಕಷ್ಟು ಕುಡಿಯಬೇಕು. ಚರ್ಮದ ಆರೋಗ್ಯಕ್ಕೆ ನೀರು ಬಹಳ ಸಹಕಾರಿ. ಕಲವರು ಮನೆಯಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ತಣ್ಣನೆಯ ನೀರನ್ನು ಕುಡಿಯುತ್ತಾರೆ. ಇದು ಬಹಳ ಉತ್ತಮ. ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿ ಅದಕ್ಕೆ ಸುತ್ತಲೂ ತಣ್ಣೀರು ಬಟ್ಟೆಕಟ್ಟಿ ನೀರನ್ನು ತಂಪು ಮಾಡಿ ಕುಡಿಯುತ್ತಾರೆ. ಇದು ಒಳ್ಳೆಯದೇ. ಆದರೆ ಫ್ರಿಜ್ಜಿನಲ್ಲಿ ನೀರನ್ನು ಕೂಲ್ ಮಾಡಿ ಅತಿಯಾಗಿ ಕುಡಿಯುವುದು ಒಳ್ಳೆಯದಲ್ಲ. ಈ ಬಗ್ಗೆ ಎಚ್ಚರದಿಂದಿರಬೇಕು. ತಂಪು ಪಾನೀಯಗಳು ಮತ್ತು ಐಸ್ ಕ್ರೀಮನ್ನು ಹೆಚ್ಚಾಗಿ ತಿನ್ನಬಾರದು. ಜೊತೆಗೆ ಲಾವಂಚದ ಬೇರನ್ನು ಸ್ವಚ್ಛ ಮಾಡಿ ಅದನ್ನು ನೀರಿಗೆ ಹಾಕಿ ಆ ನೀರನ್ನು ನಿಯಮಿತವಾಗಿ ಸೇವಿಸಬೇಕು.

ಬೇಸಿಗೆ ಕಾಲದಲ್ಲಿ ಸಿಹಿ ತಿನಿಸುಗಳ ಸೇವನೆಯನ್ನು ಕಡಿಮೆ ಮಾಡಬೇಕು. ಅತಿಯಾಗಿ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಸಂಸ್ಕರಿಸಿದ ಆಹಾರಗಳು, ಹೆಚ್ಚಾಗಿ ಕರಿದ/ಹುರಿದ ಮತ್ತು ಅತಿ ಮಸಾಲೆಯುಕ್ತ ಆಹಾರಗಳನ್ನು ಅಂದರೆ ಚೌಚೌ, ಮಸಾಲೆಪುರಿ, ಪಾನಿಪುರಿ, ಗೋಬಿ ಮಂಚೂರಿಯನ್ ತಿನಿಸುಗಳನ್ನು ಬೇಸಿಗೆ ಕಾಲದಲ್ಲಿ ಮಿತವಾಗಿ ಸೇವಿಸಬೇಕು. ಮಾಂಸಾಹಾರ ಸೇವನೆಯೂ ಮಿತವಾಗಿರಬೇಕು.

ಬಿಸಿಲು ಹೆಚ್ಚಾಗಿರುವ ದಿನಗಳಲ್ಲಿ ಬಿಗಿಯಾದ ಮತ್ತು ಕಡು ಬಣ್ಣದ ಬಟ್ಟೆಗಳನ್ನು ಧರಿಸುವ ಬದಲು ಹತ್ತಿ ಬಟ್ಟೆ ಧರಿಸಿದರೆ ಅದು ಬೆವರು ಮತ್ತು ಹಾನಿಕಾರಕ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಅಷ್ಟರಮಟ್ಟಿಗೆ ಬಿಸಿಲು ಗುಳ್ಳೆಗಳನ್ನು ಬರದಂತೆ ತಡೆಯುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT