(ಸಾಂಕೇತಿಕ ಚಿತ್ರ) online desk
ಅಂಕಣಗಳು

ಹೂಡಿಕೆಯಲ್ಲಿ ಅಪಾಯ ಗ್ರಹಿಸುವುದು ಹೇಗೆ? (ಹಣಕ್ಲಾಸು)

ಇಲ್ಲಿ ಹೇಳಿರುವ ಒಂದಷ್ಟು ಅಂಶಗಳನ್ನು ಬಳಸಿಕೊಂಡು ಅಪಾಯವೆಷ್ಟು, ಅದರಿಂದ ಬರುವ ಲಾಭವೆಷ್ಟು, ಆ ಮಟ್ಟದ ಅಪಾಯ ಎದುರಿಸುವುದು ಸಿಗುವ ಲಾಭಕ್ಕೆ ಸಮನಾಗಿದೆಯೇ? ಹೀಗೆ ಲೆಕ್ಕಾಚಾರ ಮಾಡಿ ಮುಂದುವರಿಯುವುದು ಉತ್ತಮ. (ಹಣಕ್ಲಾಸು-417)

ಅಪಾಯವನ್ನು ಮನಗಾಣಲು ಅಂದರೆ ಇಷ್ಟರ ಮಟ್ಟಿಗೆ ಅಪಾಯ ಎದುರಾಗುವ ಸಾಧ್ಯತೆಯಿದೆ ಎನ್ನುವುದನ್ನು ಕೇವಲ ಊಹೆಗಳಿಂದ ಮಾಡಲು ಸಾಧ್ಯವಿಲ್ಲ. ಇಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ.

  1. ಸ್ಟ್ಯಾಂಡರ್ಡ್ ಡೀವಿಯೇಶನ್ (standard deviation): ಹೂಡಿಕೆದಾರರು ಹೂಡಿಕೆಯಲ್ಲಿ ಇರಬಹುದಾದ ಸಂಭಾವ್ಯ ಅಪಾಯವನ್ನು ಗ್ರಹಿಸಲು ಈ ವಿಧಾನವನ್ನು ಅನುಸರಿಸುತ್ತಾರೆ. ಮೂಲ ಬೆಲೆಯಿಂದ ಎಷ್ಟು ಏರಿಕೆ ಕಂಡಿತು ಮತ್ತು ಎಷ್ಟು ಇಳಿಕೆ ಕಂಡಿತು ಎನ್ನುವುದರ ಆಧಾರದ ಮೇಲೆ ಸ್ಟ್ಯಾಂಡರ್ಡ್ ಡೀವಿಯೇಶನ್ ನಿರ್ಧಾರವಾಗುತ್ತದೆ. ಉದಾಹರಣೆಗೆ ರಾಮ ಮತ್ತು ಭೀಮ ಎನ್ನುವ ಎರಡು ಸಂಸ್ಥೆಗಳ ಷೇರಿನ ಬೆಲೆ 100 ರೂಪಾಯಿ ಇದ್ದು, ವರ್ಷದ ನಂತರ ಎರಡೂ ಸಂಸ್ಥೆಗಳ ಷೇರಿನ ಬೆಲೆ 120 ರೂಪಾಯಿ ಎಂದುಕೊಳ್ಳೋಣ. ಅಂದರೆ ಎರಡೂ ಸಂಸ್ಥೆಗಳು 20 ಪ್ರತಿಶತ ಏರಿಕೆಯನ್ನು ಕಂಡಿವೆ. ಮೊದಲ ನೋಟಕ್ಕೆ ಎರಡೂ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿವೆ, ಎರಡೂ ಒಂದೇ ಫಲಿತಾಂಶ ನೀಡಿವೆ, ಹೀಗಾಗಿ ಎರಡರಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿದರೂ ಓಕೆ ಎನ್ನಿಸುತ್ತದೆ. ಗಮನಿಸಿ ಸ್ಟ್ಯಾಂಡರ್ಡ್ ಡೀವಿಯೇಶನ್ ಕೆಲಸಕ್ಕೆ ಬರುವುದು ಇಂತಹ ಸಮಯದಲ್ಲಿ! ರಾಮ ಸಂಸ್ಥೆ ಷೇರಿನ ಬೆಲೆ ಹೆಚ್ಚು ಎಂದಾಗ 120 ಕಡಿಮೆ ಎಂದಾಗ 90 ರೂಪಾಯಿ ಎಂದುಕೊಳ್ಳೋಣ. ಅದೇ ಭೀಮ ಸಂಸ್ಥೆ ಷೇರು ಹೆಚ್ಚು ಇದ್ದಾಗ 140 ಇದ್ದು ಕಡಿಮೆಯಾದಾಗ 80 ರೂಪಾಯಿ ಇತ್ತು ಎಂದುಕೊಳ್ಳಿ. ಈಗ ಹೇಳಿ ನೀವು ಯಾವ ಸಂಸ್ಥೆಯಲ್ಲಿ ಹೂಡಿಕೆ ಮಾಡುತ್ತೀರಾ? ಸ್ಟ್ಯಾಂಡರ್ಡ್ ಡೀವಿಯೇಶನ್ ಇಂತಹ ಸೂಕ್ಷ್ಮ ವಿಷಯವನ್ನು ಅಭ್ಯಯಸಿಯುತ್ತದೆ. ರಾಮ ಸಂಸ್ಥೆ ತನ್ನ ಮೂಲ ಬೆಲೆಯಿಂದ ಹೆಚ್ಚಿನ ಡೀವಿಯೇಶನ್ಗೆ ಒಳಗಾಗಿಲ್ಲ. ಆದರೆ ಭೀಮ ಸಂಸ್ಥೆ ಡೀವಿಯೇಶನ್ ಹೆಚ್ಚು. ಮೊದಲ ನೋಟಕ್ಕೆ ಎರಡೂ ಒಂದೇ ಅನ್ನಿಸಿದರೂ ರಾಮ ಸಂಸ್ಥೆ ಭೀಮ ಸಂಸ್ಥೆಗಿಂತ ಉತ್ತಮ, ಏಕೆಂದರೆ ಇದರಲ್ಲಿ ಏರಿಳಿತ ಕಡಿಮೆ ಹೀಗಾಗಿ ಅಪಾಯ ಕಡಿಮೆ.

  2. ಬೀಟಾ (beta): ಬೀಟಾ ಎನ್ನುವುದು ಸಿಸ್ಟಮ್ಯಾಟಿಕ್ ರಿಸ್ಕ್. ಅಂದರೆ ಪೂರ್ಣ ಮಾರುಕಟ್ಟೆಯ ಏರಿಳಿತವನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ. ಕೇವಲ ಒಂದೋ ಅಥವಾ ಎರಡೂ ಸಂಸ್ಥೆಗಳ ಫಲಿತಾಂಶವನ್ನು ಗಣನೆಗೆ ತೆಗೆದುಕೊಳ್ಳದೆ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲಾ ಸಂಸ್ಥೆಗಳ ಫಲಿತಾಂಶದ ಆಧಾರದ ಸೂಚ್ಯಂಕವನ್ನು ಇದು ಗಣನೆಗೆ ತೆಗೆದುಕೊಳ್ಳುತ್ತದೆ. ಉದಾಹರಣೆಗೆ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ. ಗಮನಿಸಿ ಇಲ್ಲಿ ಬೀಟಾ ಸಂಖ್ಯೆಯನ್ನು ಸದಾ 1 ಎಂದು ನಿರ್ಧರಿಸಲಾಗುತ್ತದೆ. ಎಲ್ಲಾ ಷೇರುಗಳು, ಸೆಕ್ಯುರಿಟೀಸ್ಗಳು ಮಾರುಕಟ್ಟೆಯ ಬೀಟಾ ರೇಖೆಯಲ್ಲಿ ಸಾಗುತ್ತವೆ. ಹೀಗಾಗಿ ಯಾವುದೇ ಸೆಕ್ಯುರಿಟೀಸ್ ಸಂಖ್ಯೆ 1 ಕ್ಕಿಂತ ಹೆಚ್ಚಿದ್ದರೆ ಆಗ ಅದು ಮಾರುಕಟ್ಟೆಯ ಸ್ಥಿತಿಗಿಂತ ಹೆಚ್ಚು ವೊಲಟೈಲ್, ಏರಿಳಿತವುಳ್ಳದ್ದು , ಹೆಚ್ಚು ಅಪಾಯಕಾರಿ ಎಂದು ವಿಂಗಡಿಸಬಹುದು. ಅದೇ ಸೆಕ್ಯುರಿಟೀಸ್ ಸಂಖ್ಯೆ 1 ಕ್ಕಿಂತ ಕಡಿಮೆಯಿದ್ದರೆ, ಆಗ ಮಾರುಕಟ್ಟೆಯ ಅಪಾಯಕ್ಕಿಂತ ಕಡಿಮೆ ಅಪಾಯಕಾರಿ ಎನ್ನಿಸಿಕೊಳ್ಳುತ್ತದೆ.

  3. ಅಲ್ಫಾ (Alpha ): ಎಲ್ಲಾ ಅಪಾಯಗಳನ್ನು ಗಣನೆಗೆ ತೆಗೆದುಕೊಂಡು ಸಿಕ್ಕ ಲಾಭಂಶವನ್ನು ಅಲ್ಫಾ ಎನ್ನಲಾಗುತ್ತದೆ. ಉದಾಹರಣೆಗೆ ಸೆನ್ಸೆಕ್ಸ್ ವಾರ್ಷಿಕ 15 ಪ್ರತಿಶತ ಲಾಭವನ್ನು ಅಥವಾ ರಿಟರ್ನ್ ತಂದುಕೊಟ್ಟಿದೆ ಎಂದರೆ ಮತ್ತು ಅದೊಂದು ಬೆಂಚ್ ಮಾರ್ಕ್ ರಿಟರ್ನ್ ಎಂದುಕೊಂಡರೆ ಆಗ ಆ 15 ಪ್ರತಿಶತವನ್ನು ಅಲ್ಫಾ ಎನ್ನಲಾಗುತ್ತದೆ. ಯಾವುದೋ ಒಬ್ಬ ಫಂಡ್ ಮ್ಯಾನೇಜರ್ ಅಥವಾ ಫಂಡ್ ಮ್ಯಾನೇಜ್ಮೆಂಟ್ ಸಂಸ್ಥೆ ಬೆಂಚ್ ಮಾರ್ಕ್ 15 ಪ್ರತಿಶತಕ್ಕಿಂತ ಹೆಚ್ಚಿನ ಲಾಭವನ್ನು ಅಂದರೆ ಉದಾಹರಣೆಗೆ 18 ಪ್ರತಿಶತ ಲಾಭವನ್ನು ಮಾಡಿಕೊಟ್ಟರೆ, ಆಗ ನಾವು ಆ ಫಂಡ್ ಮ್ಯಾನೇಜ್ಮೆಂಟ್ ಸಂಸ್ಥೆ ಅಥವಾ ಮ್ಯಾನೇಜರ್ ಕ್ಷಮತೆಯನ್ನು ಅಲ್ಫಾ 3 ಎನ್ನುತ್ತೇವೆ. ಅಂದರೆ ಗಮನಿಸಿ ಬೆಂಚ್ ಮಾರ್ಕ್ ರಿಟರ್ನ್ 15, ಅದನ್ನು ಮೀರಿ ಸಿಕ್ಕಿದ ರಿಟರ್ನ್ 18, ಇವೆರಡರ ನಡುವಿನ ವ್ಯತ್ಯಾಸ 3. ಹೀಗಾಗಿ ಫಂಡ್ ಮ್ಯಾನೇಜರ್ ಅಥವಾ ಸಂಸ್ಥೆಗಳ ಕ್ಷಮತೆಯನ್ನು ಅಳೆಯಲು, ಅಲ್ಲಿ ಹೂಡಿಕೆ ಮಾಡಬೇಕೆ ಬೇಡವೇ ಎನ್ನುವುದನ್ನು ಅರಿಯಲು ಅಲ್ಫಾ ಸಹಾಯ ಮಾಡುತ್ತದೆ.

ರಿಟರ್ನ್ ಅಥವಾ ಫಲಿತಾಂಶ:

ನಾವು ಮಾಡಿದ ಕೆಲಸಕ್ಕೆ ಸಿಕ್ಕ ಉತ್ತರವನ್ನು ಫಲಿತಾಂಶ ಎನ್ನಬಹುದು. ಅದು ಲಾಭ ಅಥವಾ ನಷ್ಟ ಯಾವುದಾದರೂ ಆಗಿರಬಹುದು. ಅಪಾಯವನ್ನು ಡಿಫೈನ್ ಮಾಡುವುದು ಕಷ್ಟ ಏಕೆಂದರೆ ಅದು ಯಾವ ರೂಪದಲ್ಲಿರುತ್ತದೆ, ಬರುತ್ತದೆ ಎಂದು ಊಹಿಸುವುದು ಕಷ್ಟ. ಆದರೆ ರಿಟರ್ನ್ಸ್ ವಿಷಯದಲ್ಲಿ ಹಾಗಲ್ಲ, ಇಲ್ಲಿರುವ ಸಂಭಾವ್ಯತೆ ಮೂರು.

  1. ನಾವು ಮಾಡಿದ ಕೆಲಸ ಲಾಭವನ್ನು ನೀಡುತ್ತದೆ.

  2. ನಾವು ಮಾಡಿದ ಕೆಲಸ ನಷ್ಟವನ್ನು ಉಂಟು ಮಾಡುತ್ತದೆ.

  3. ಲಾಭ ನಷ್ಟ ಎರಡೂ ಇಲ್ಲದ ಬ್ರೇಕ್ ಈವನ್ ಸ್ಥಿತಿ ತಲುಪಿ ಇನ್ನಷ್ಟು ಸಮಯ ಬೇಡುತ್ತದೆ.

ಹೀಗಾಗಿ ನಾವು ಹೆಚ್ಚು ಯೋಚಿಸಬೇಕಿರುವುದು ಅಪಾಯದ ಬಗ್ಗೆ, ಕೆಲಸವನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಫಲಿತಾಂಶ ಇವುಗಳ ಮೂರ್ತರೂಪವಷ್ಟೆ. ಮೇಲಿನ ಸಂಭಾವ್ಯತೆಯಲ್ಲಿ ಮೊದಲ ಸಂಭಾವ್ಯತೆ ಅಂದರೆ ನಾವು ಮಾಡಿದ ಕೆಲಸ ಲಾಭವನ್ನು ಕೊಟ್ಟರೆ ಆಗ ಅದು ಎಷ್ಟು ಲಾಭಂಶ ತಂದುಕೊಟ್ಟಿತು ಎನ್ನುವುದನ್ನು ಅಳೆಯುವುದಕ್ಕೆ ಬೇರೆ ವಿಧಗಳಿವೆ.

ರಿಟರ್ನ್ ಗಳಲ್ಲಿ ಹಲವು ವಿಧ ಅವುಗಳಲ್ಲಿ ಮುಖ್ಯವಾಗಿ:

  • ಸಂಪೂರ್ಣ ಲಾಭ: ನಮ್ಮ ಹೂಡಿಕೆಯ ಮೇಲೆ ಎಷ್ಟು ಹಣ ಬರುತ್ತದೆ ಅದನ್ನು ಸಂಪೂರ್ಣ ಲಾಭ ಎನ್ನಲಾಗುತ್ತದೆ. ಅಂದರೆ ಗಮನಿಸಿ 100 ರೂಪಾಯಿ ಹೂಡಿಕೆ ಆರು ತಿಂಗಳ ನಂತರ 120 ರೂಪಾಯಿ ಸಿಕ್ಕರೆ ಆ 20 ರೂಪಾಯಿಯನ್ನು ಸಂಪೂರ್ಣ ಲಾಭ ಎನ್ನಲಾಗುತ್ತದೆ. 20 ಪ್ರತಿಶತ ಲಾಭ ಎನ್ನಬಹುದು.

  • ವಾರ್ಷಿಕ ರಿಟರ್ನ್ ಅಥವಾ ಆನ್ಯುವಲ್ ರಿಟರ್ನ್: ಸಂಪೂರ್ಣ ಲಾಭವನ್ನು ವರ್ಷಕ್ಕೆ ತೆಗೆದುಕೊಂಡರೆ ಅದನ್ನು ವಾರ್ಷಿಕ ಲಾಭ ಎನ್ನಬಹುದು. ಆ ಲೆಕ್ಕಚಾರಾದಲ್ಲಿ ವಾರ್ಷಿಕ ಲಾಭ 40 ಅಥವಾ 40 ಪ್ರತಿಶತವಾಗುತ್ತದೆ.

  • ಕಂಪೌಂಡೆಡ್ ಆನ್ಯುವಲ್ ಗ್ರೋಥ್ ರೇಟ್ (CAGR ): ಇದೊಂದು ರೇಟ್ ಆಫ್ ರಿಟರ್ನ್. ಅಂದರೆ ಪ್ರಾರಂಭದ ಹೂಡಿಕೆ ಅಂತ್ಯದಲ್ಲಿ ನಿಗದಿತ ಮೌಲ್ಯವನ್ನು ಹೊಂದಲು ಎಷ್ಟು ಪ್ರತಿಶತ ಬೆಳವಣಿಗೆ ಕಾಣಬೇಕು ಎನ್ನುವುದನ್ನು ಇದು ತೋರಿಸುತ್ತದೆ. ಇಲ್ಲಿ ವರ್ಷದಿಂದ ವರ್ಷಕ್ಕೆ ಬಂದ ಲಾಭವನ್ನು ಮರು ಹೂಡಿಕೆ ಮಾಡಲಾಗುತ್ತದೆ. ಇದನ್ನು ಸುಲಭವಾಗಿ ಲೆಕ್ಕಾಚಾರ ಮಾಡಲು ಕೆಳಗಿನ ಫಾರ್ಮುಲಾ ಬಳಸಬಹುದು.

CAGR=((BV/EV)n1−1)×10

EV=Ending value

BV=Beginning value

n=Number of years

cagr ಕ್ಯಾಲ್ಕುಲೇಟರ್: ಇದನ್ನು ಬಳಸಿ ಕೂಡ ಹೂಡಿಕೆ ಮಾಡುವುದು ಸರಿಯೇ ತಪ್ಪೇ ಎನ್ನುವುದನ್ನು ಕಂಡುಕೊಳ್ಳಬಹುದು. ನಿಮಗೆ ಗೊತ್ತಿರಲಿ. ನೀವು ಕೊಂಡ ಮನೆ ನಿಗದಿತ ಸಮಯದಲ್ಲಿ ದುಪ್ಪಟ್ಟಾಗಿದ್ದರೂ ಅದು ಅಂತಹ ವಿಶೇಷವೇನಲ್ಲ ಎನ್ನುವುದನ್ನು ಈ ಲೆಕ್ಕಾಚಾರದ ಮೂಲಕ ತಿಳಿದುಕೊಳ್ಳಬಹುದು. ಮನೆ ಮಾನಸಿಕ ನೆಮ್ಮದಿಗೆ ಮಾಡುವ ಹೂಡಿಕೆ.

IRR-ಇಂಟರ್ನಲ್ ರೇಟ್ ಆಫ್ ರಿಟರ್ನ್: ಇದೊಂದು ಎಲ್ಲಾ ಕ್ಯಾಶ್ ಫ್ಲೋಗಳನ್ನೂ ಪರಿಗಣಿಸಿ ನೆಟ್ ಪ್ರೆಸೆಂಟ್ ವ್ಯಾಲ್ಯೂವನ್ನು ಪೂರ್ಣವಾಗಿ ಸೊನ್ನೆಗೆ ತರುವ ಡಿಸ್ಕೌಂಟ್ ರೇಟ್ ಮೆಥಡ್. ಅಂದರೆ ಹೆಚ್ಚು ಕಡಿಮೆ ಒಂದೇ ರೀತಿಯ ಬಂಡವಾಳ ಬೇಡುವ ಅವಕಾಶಗಳಲ್ಲಿ ಯಾವುದು ಹೆಚ್ಚು IRR ನೀಡುತ್ತದೆ ಅದನ್ನು ಪರಿಗಣಿಸಲಾಗುತ್ತದೆ.

ಕೊನೆ ಮಾತು: ಇಂದಿನ ದಿನ ಅಪಾಯವಿಲ್ಲದ ಕ್ಷೇತ್ರವಿಲ್ಲ. ಹಾಗೆಂದು ಯೋಚಿಸಿದಡೆ ಧುಮುಕುವುದು ಕೂಡ ತರವಲ್ಲ. ಹೀಗಾಗಿ ಮೇಲೆ ಹೇಳಿರುವ ಒಂದಷ್ಟು ಅಂಶಗಳನ್ನು ಬಳಸಿಕೊಂಡು ಅಪಾಯವೆಷ್ಟು, ಅದರಿಂದ ಬರುವ ಲಾಭವೆಷ್ಟು, ಆ ಮಟ್ಟದ ಅಪಾಯ ಎದುರಿಸುವುದು ಸಿಗುವ ಲಾಭಕ್ಕೆ ಸಮನಾಗಿದೆಯೇ? ಹೀಗೆ ಲೆಕ್ಕಾಚಾರ ಮಾಡಿ ಮುಂದುವರಿಯುವುದು ಉತ್ತಮ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT