ಜಂತುಹುಳುಗಳ ಸಮಸ್ಯೆ ಒಂದು ಸಾಮಾನ್ಯ ಸೂಕ್ಷ್ಮಾಣುಜೀವಿ ಸೋಂಕು. ಮಕ್ಕಳಲ್ಲಿ ಈ ಸಮಸ್ಯೆ ಸಾಧಾರಣವಾಗಿ ಕಂಡುಬರುತ್ತದೆ. ಕೆಲವೊಮ್ಮೆ ವಯಸ್ಕರಲ್ಲಿಯೂ ಇದು ಕಾಣಿಸಿಕೊಳ್ಳುತ್ತದೆ.
ಜಂತುಹುಳು (ಇಂಗ್ಲೀಷಿನಲ್ಲಿ ರೌಂಡ್‌ವರ್ಮ್ಸ್/ಇಂಟಸ್ಟೈನಲ್ ವರ್ಮ್ಸ್) ಮಾನವರಲ್ಲಿ ಕಂಡುಬರುವ ಪರಾವಲಂಬಿ ಜೀವಿಗಳು. ಇವು ಪ್ರಾಣಿಗಳನ್ನೂ ಕಾಡುತ್ತವೆ.
ನೀರು ಕಲುಷಿತವಾಗಿರುವ ಮತ್ತು ಸ್ವಚ್ಛತೆ ಇಲ್ಲದಿರುವ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಜಂತುಹುಳುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಪರಾವಲಂಬಿ ಜೀವಿಗಳು ಸಾಮಾನ್ಯವಾಗಿ ಮಲಿನ ಆಹಾರ ಅಥವಾ ನೀರನ್ನು ಸೇವಿಸಿದಾಗ ಅಥವಾ ಮಲಿನ ಮಣ್ಣಿನೊಂದಿಗೆ ನೇರ ಸಂಪರ್ಕವಾದಾಗ ದೇಹವನ್ನು ಪ್ರವೇಶಿಸುತ್ತವೆ. ಈ ಸಮಸ್ಯೆ ಕಾಣಿಸಿಕೊಂಡಾಗ ರೋಗನಿರೋಧಕ ಶಕ್ತಿ ದಿನ ಕಳೆದಂತೆ ಕಡಿಮೆಯಾಗುತ್ತದೆ. ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ವರದಿಗಳ ಪ್ರಕಾರ ಪ್ರಪಂಚದ ಶೇಕಡಾ 24ರಷ್ಟು ಜನರಲ್ಲಿ ಜಂತುಹುಳ ಬಾಧೆ ಇದೆ.
ಜಂತುಹುಳು ಸೋಂಕಿನ ಲಕ್ಷಣಗಳು ಸೋಂಕಿನ ಪ್ರಕಾರ ಮತ್ತು ತೀವ್ರತೆಯ ಆಧಾರದಲ್ಲಿ ಬದಲಾಗುತ್ತವೆ. ಈ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಹೊಟ್ಟೆ ನೋವು, ಅಜೀರ್ಣ, ತೂಕ ಇಳಿಕೆ ಮತ್ತು ದೈಹಿಕ ದುರ್ಬಲತೆಗಳು ಸೇರಿವೆ. ಜೊತೆಗೆ ವಾಕರಿಕೆ ಮತ್ತು ವಾಂತಿ ಅಥವಾ ಅತಿಸಾರ, ಆಯಾಸ, ನಿರ್ಜಲೀಕರಣ, ಆಗಾಗ್ಗೆ ಮೂತ್ರ ವಿಸರ್ಜನೆ, ಹೊಟ್ಟೆಯ ಉಬ್ಬುವಿಕೆ, ಚರ್ಮ ಕೆಂಪಾಗಿ ಕಿರಿಕಿರಿ, ತುರಿಕೆ ಮತ್ತು ಮಲದೊಂದಿಗೆ ರಕ್ತ ಹೋಗುವ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ರಾತ್ರಿ ಪದೇ ಪದೇ ಎಚ್ಚರವಾಗುವುದು, ಗಾಢವಾಗಿ ನಿದ್ರೆ ಬಾರದಿರುವುದು ಜಂತುಹುಳುಗಳು ಇರುವ ಮತ್ತೊಂದು ಲಕ್ಷಣ. ಈ ಹುಳುಗಳು ಮೊಟ್ಟೆ ಇಡುವ ಸಂದರ್ಭಗಳಲ್ಲಿ ವಿಷಕಾರಿ ರಾಸಾಯನಿಕಗಳು ರಕ್ತ ಸೇರಿ, ಮೆದುಳಿನವರೆಗೂ ಸಂಚರಿಸಿ, ಆರೋಗ್ಯದಲ್ಲಿ ವ್ಯತ್ಯಯ ಉಂಟುಮಾಡುತ್ತವೆ. ಇದರಿಂದ ನಿದ್ರೆ ದೂರವಾಗುತ್ತದೆ, ಮಾನಸಿಕ ತಳಮಳ, ಮೂಡ್ ವ್ಯತ್ಯಯ ಮುಂತಾದವು ಸಾಮಾನ್ಯವಾಗುತ್ತವೆ.
ತೀವ್ರತರ ಪ್ರಕರಣಗಳಲ್ಲಿ ಪೋಷಕಾಂಶಗಳ ಕೊರತೆ, ಮತ್ತು ಜಂತುಹುಳು ಶ್ವಾಸಕೋಶಕ್ಕೆ ಸಾಗಿದರೆ ಶ್ವಾಸಕೋಶದ ಸಮಸ್ಯೆಗಳನ್ನು ಉಂಟುಮಾಡಬಹುದು. ಮಕ್ಕಳಿಗೆ ಇದು ಹೆಚ್ಚು ಹಾನಿಕಾರಕ. ದೀರ್ಘಕಾಲದವರೆಗೆ ಈ ಸೋಂಕು ಕಾಡಿದರೆ ಅವರ ಬೆಳವಣಿಗೆಯ ಮತ್ತು ಬೌದ್ಧಿಕ ಸಾಮರ್ಥ್ಯದ ಮಟ್ಟ ಕಡಿಮೆಯಾಗುತ್ತದೆ. ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೂ ಕುಂಠಿತವಾಗುತ್ತದೆ. ಅವರು ಸೇವಿಸಿದ ಆಹಾರದಲ್ಲಿನ ಪೋಷಕಾಂಶವನ್ನು ದೇಹ ಹೀರಿಕೊಳ್ಳಲು ತೊಂದರೆಯಾಗುತ್ತದೆ.
ಮಕ್ಕಳಲ್ಲಿ ಪದೇ ಪದೇ ಹೊಟ್ಟೆ ನೋವು, ಮಲಬದ್ಧತೆ, ಹಸಿವಿಲ್ಲದಿರುವುದು ಅಥವಾ ಅಜೀರ್ಣದಂಥ ಸಮಸ್ಯೆಗಳು ಕಂಡುಬಂದರೆ ವೈದ್ಯರು ಮೊದಲು ಜಂತು ಹುಳು ನಿರ್ಮೂಲನೆಗೆ ಮಾತ್ರೆ/ಔಷಧಿ ಕೊಡುತ್ತಾರೆ.
ಆಯುರ್ವೇದ ಔಷಧಿಯಾಗಿ ಮಕ್ಕಳಿಗೆ ವಾಯುವಿಡಂಗಡ ಕಷಾಯವನ್ನು ತಯಾರಿಸಿ ಹದಿನೈದು ದಿನಗಳ ಕಾಲ ಬೆಳಗ್ಗೆ ಒಂದು ಚಮಚ ಮತ್ತು ರಾತ್ರಿ ಒಂದು ಚಮಚ ಆರು ತಿಂಗಳುಗಳಿಗೊಮ್ಮೆ ನೀಡಬೇಕು. ವಯಸ್ಕರಿಗೆ ವಾಯುವಿಡಂಗಾರಿಷ್ಟ/ವಿಡಂಗಾಸವ ಎಂಬ ಔಷಧಿಯನ್ನು ಮೂರು ಚಮಚ ಎರಡು ಬಾರಿ ನೀರು ಬೆರೆಸಿ ಊಟದ ನಂತರ ಸೇವಿಸಬೇಕು. ಗ್ರಂಧಿಗೆ ಅಂಗಡಿಯಲ್ಲಿ ಸಿಗುವ ವಾಯುವಿಳಂಗವನ್ನು ತಂದು ಒಂದು ಲೋಟ ನೀರಿಗೆ ಐದು ಗ್ರಾಮಿನಷ್ಟು ವಾಯುವಿಳಂಗವನ್ನು ಕುಟ್ಟಿ ಹಾಕಿ ನೀರಿಗೆ ಕಷಾಯ ತಯಾರಿಸಿ ಹದಿನೈದು ದಿನಕ್ಕೊಮ್ಮೆ ಕುಡಿಯಬಹುದು. ಮಕ್ಕಳಿಗಾದರೆ ಇದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ಕುಡಿಸಬೇಕು. ಅರ್ಧ ಚಮಚ ಈ ಪುಡಿಗೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಮಕ್ಕಳಿಗೆ ಕೊಡಬಹುದು. ಇದೇ ರೀತಿಯಲ್ಲಿ ಒಂದು ಚಮಚ ಪುಡಿಯನ್ನು ಸೇವಿಸಬಹುದು.
ಜಂತುಹುಳುಗಳ ಸಮಸ್ಯೆಯನ್ನು ತಡೆಗಟ್ಟಲು ಕುಂಬಳಕಾಯಿ ಬೀಜಗಳು, ಅರಿಶಿನ, ಬೆಳ್ಳುಳ್ಳಿ, ಲವಂಗ, ತೆಂಗಿನಕಾಯಿ, ಪಪಾಯಾ ಮತ್ತು ಕ್ಯಾರೆಟ್ಟುಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕು ಏಕೆಂದರೆ ಈ ಪದಾರ್ಥಗಳಲ್ಲಿ ಸೂಕ್ಷ್ಮಾಣಿಜೀವಿ ವಿರೋಧಿ ಗುಣಗಳಿವೆ. ದಿನವೂ ಪೌಷ್ಟಿಕ ಮತ್ತು ಸಮತೋಲನ ಆಹಾರ ಸೇವನೆ, ವಾತಾವರಣ ಮತ್ತು ವೈಯಕ್ತಿಕ ಸ್ಚಚ್ಛತೆಯ ಪಾಲನೆ ಹಾಗೂ ದೈಹಿಕವಾಗಿ ಸದೃಢವಾಗಿರಲು ಬಿರುಸಿನ ನಡಿಗೆ, ಜಾಗಿಂಗ್ ಅಥವಾ ವ್ಯಾಯಾಮಗಳನ್ನು ಮಾಡುವ ರೂಢಿ ಇಟ್ಟುಕೊಂಡರೆ ಉತ್ತಮ.
ಮಣ್ಣಿನಿಂದ ಹರಡುವ ಸೂಕ್ಷ್ಮಾಣುಜೀವಿಗಳು ಭಾರತದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿವೆ. ಜಂತುಹುಳು ಸೋಂಕು ಒಂದರಿಂದ ಹದಿನಾಲ್ಕು ವಯಸ್ಸಿನ ಸುಮಾರು 220 ಮಿಲಿಯನ್ ಭಾರತೀಯ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂಧ ಪ್ರತಿ ವರ್ಷದ ಫೆಬ್ರವರಿ 10 ರಂದು ಭಾರತ ಸರ್ಕಾರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸುತ್ತದೆ. ದೇಶಾದ್ಯಂತ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಮತ್ತು ಜಂತುಹುಳು ನಿವಾರಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಒಂದು ಪ್ರಮುಖ ಹೆಜ್ಜೆಯಾಗಿದೆ.
ಮಕ್ಕಳಲ್ಲಿ ಹುಳುವಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸರ್ಕಾರ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ಶಾಲೆಗಳಲ್ಲಿ ನೀಡುತ್ತಿವೆ. ಜೊತೆಗೆ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರೂ ಪಾಲಿಸುವಂತೆ ಹಲವಾರು ಸ್ವಚ್ಛತಾ ಕ್ರಮಗಳನ್ನು ಪ್ರಕಟಿಸಿದೆ. ಅವುಗಳೆಂದರೆ:
ಹೊರಗೆ ಮಲವಿಸರ್ಜನೆ ಮಾಡಬೇಡಿ; ಬದಲಾಗಿ, ಯಾವಾಗಲೂ ಶೌಚಾಲಯವನ್ನು ಬಳಸಿ.
ಯಾವಾಗಲೂ ಉಗುರುಗಳನ್ನು ಚಿಕ್ಕದಾಗಿ ಮತ್ತು ಅಂದವಾಗಿ ಕತ್ತರಿಸಿ.
ಮನೆಯ ಒಳಗೆ ಮತ್ತು ಹೊರಗಿನ ವಾತಾವರಣವನ್ನು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಿ.
ಯಾವಾಗಲೂ ಚಪ್ಪಲಿ ಹಾಕಿಯೇ ಹೊರಗೆ ಹೋಗಬೇಕು.
ಯಾವಾಗಲೂ ಸುರಕ್ಷಿತ ಆಹಾರವನ್ನು ಸೇವಿಸಿ ಮತ್ತು ಶುದ್ಧ ನೀರನ್ನು ಕುಡಿಯಿರಿ.
ಆಹಾರವನ್ನು ಸೇವಿಸುವಾಗ ಕೈಗಳನ್ನು ಚೆನ್ನಾಗಿ ತೊಳೆದೇ ಸೇವಿಸಬೇಕು.
ಆಹಾರವನ್ನು ಎಂದಿಗೂ ತೆರೆದ ಪಾತ್ರೆಗಳಲ್ಲಿ ಗಾಳಿಯಲ್ಲಿ ಹಾಗೆಯೇ ಇಡಬಾರದು. ಮುಚ್ಚಿಯೇ ಇಡಬೇಕು.
ಹಣ್ಣುಗಳು ಮತ್ತು ತರಕಾರಿಗಳನ್ನು ಯಾವಾಗಲೂ ಶುದ್ಧ ನೀರಿನಲ್ಲಿ ತೊಳೆದೇ ಸೇವಿಸಬೇಕು.
ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com