ಡಿಕೆ ಶಿವಕುಮಾರ್  online desk
ಅಂಕಣಗಳು

CM ಪಟ್ಟಕ್ಕಾಗಿ ಭವಿಷ್ಯದ ಸಮರಕ್ಕೆ DK Shivakumar ಶಸ್ತ್ರಾಭ್ಯಾಸ! (ಸುದ್ದಿ ವಿಶ್ಲೇಷಣೆ)

ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಆಗ್ರಹಿಸಿ ಆರಂಭವಾದ ಕೂಗು ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಆರಂಭದ ಹಂತಕ್ಕೆ ಬಂದು ಮುಟ್ಟಿದೆ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಬಣ ಕಿತ್ತಾಟಕ್ಕೆ ಇದೀಗ ಅಧಿಕೃತ ಸ್ವರೂಪ ಸಿಕ್ಕಿದೆ.

“ಯುದ್ಧ ಇನ್ನೂ ಬಹಳ ಮುಂದಿದೆ. ಈಗ ನಡೆಯುತ್ತಿರುವುದು ಏನಿದ್ದರೂ ಬರೀ ಶಸ್ತ್ರಾಭ್ಯಾಸ. ಮತ್ತು ರಣ ತಂತ್ರ ಹೆಣೆಯುವ ಕೆಲಸ.”

ರಾಜ್ಯ ಕಾಂಗ್ರೆಸ್ ನಲ್ಲಿ ಆರಂಭವಾಗಿರುವ ಕಿತ್ತಾಟದ ಬಗ್ಗೆ  ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಆಗ್ರಹಿಸಿ ಆರಂಭವಾದ ಕೂಗು ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಆರಂಭದ ಹಂತಕ್ಕೆ ಬಂದು ಮುಟ್ಟಿದೆ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಬಣ ಕಿತ್ತಾಟಕ್ಕೆ ಇದೀಗ ಅಧಿಕೃತ ಸ್ವರೂಪ ಸಿಕ್ಕಿದೆ.

ಹಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ನಿಜವಾದ ಯುದ್ಧ ಆರಂಭವಾಗೇ ಬಿಟ್ಟಿತಾ ಎಂದು ಬೆಳವಣಿಗೆಗಳ ಆಳಕ್ಕಿಳಿದು ನೋಡಿದರೆ ಇಲ್ಲ ಇದಿನ್ನೂ ಪೂರ್ವ ತಯಾರಿ ಅಷ್ಟೆ, ಮುಂದೆ ಮಹಾ ಸಮರ ನಡೆಯಲು ಸಮಯ ಇದೆ ಎಂಬ ಚಿತ್ರಣ ಸಿಗುತ್ತದೆ. ಒಂದಂತೂ ಸ್ಪಷ್ಟ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ನೇಮಕ ಮಾಡುವಂತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ. ಶಿವಕುಮಾರ್ ಅವರನ್ನು ಕೆಳಗಿಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಸಚಿವರಲ್ಲಿ ಕೆಲವರು ಎಬ್ಬಿಸಿದ್ದ ಕೂಗಿಗೆ ಇಷ್ಟು ದಿನ ರಕ್ಷಣಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೀಗ ದಿಢೀರನೆ ಎದ್ದು ಮಹಾ ಸಮರಕ್ಕೆ ಶಂಖ ಊದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋದರ ಡಿ.ಕೆ.ಸುರೇಶ್ ಸೋಲು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಳಗಾವಿ ಸೇರಿದಂತೆ ಆಯ್ದ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ತಾನೇ ಖುದ್ದು ಆಸಕ್ತಿ ವಹಿಸಿ ಟಿಕೆಟ್ ಕೊಡಿಸಿದ್ದ ಪಕ್ಷದ ಅಭ್ಯರ್ಥಿಗಳ ಸೋಲಿನ ನಂತರ ಕೆಲವು ಕಾಲ ಮೌನಕ್ಕೆ ಶರಣಾಗಿದ್ದರು. ಈ ನಡವಳಿಕೆ ಕಂಡು ಪಕ್ಷದೊಳಗೇ ಇರುವ ಅವರ ರಾಜಕೀಯ ವಿರೋಧಿಗಳು ಸರ್ಕಾರ- ಪಕ್ಷದಲ್ಲಿ ಅವರ ಪ್ರಭಾವ ತಗ್ಗಿಸಲು ಹೆಚ್ವುವರಿ ಉಪ ಮುಖ್ಯಮಂತ್ರಿಗಳ ನೇಮಕ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಹಿರಂಗ ಬೇಡಿಕೆ ಇಡುವ ಮೂಲಕ ಪ್ರತ್ಯಕ್ಷ ಸಮರ ಸಾರಿರುವುದು ಈಗಾಗಲೇ ಬಹಿರಂಗಗೊಂಡಿರುವ ಅಂಶ.

ಆದರೆ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಸಂದರ್ಭದಲ್ಲಿ ವಿಶ್ವ ಒಕ್ಕಲಿಗರ ಸಂಸ್ಥಾನದ ಪೀಠಾಧಿಪತಿ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಬಹಿರಂಗ ವೇದಿಕೆಯಲ್ಲಏ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಒಕ್ಕಲಿಗ ಸಮಾಜದ ಪ್ರಮುಖ ನಾಯಕರೂ ಆದ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಔದಾರ್ಯ ತೋರಬೇಕೆಂದು ಹೇಳಿದ್ದು ಮಾತ್ರ ತೀರಾ ಅನಿರೀಕ್ಷಿತ. ಇಂಥದೊಂದು ಹೇಳಿಕೆ ಅದೂ ಸರ್ಕಾರಿ ಸಮಾರಂಭದಲ್ಲಿ ಸ್ವಾಮೀಜಿಯವರೊಬ್ಬರಿಂದ ಬರುತ್ತದೆ ಎಂಬ ನಿರೀಕ್ಷೆಯೇ ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಇರಲಿಲ್ಲ. ಹಾಗಾಗೇ ಇಡೀ ಸಮಾರಂಭದಲ್ಲಿ ನೆರೆದಿದ್ದ ಎಲ್ಲರೂ ಅರೆಕ್ಷಣ ಕಕ್ಕಾಬಿಕ್ಕಿ ಆಗಿದ್ದಂತೂ ಸತ್ಯ. ಸರ್ಕಾರವೇ ವ್ಯವಸ್ಥೆಗೊಳಿಸಿದ್ದ ಸಮಾರಂಬವೊಂದರಲ್ಲಿ ಒಂದು ಸಮುದಾಯದ ಧಾರ್ಮಿಕ ಮುಖಂಡರೊಬ್ಬರು ಈ ರೀತಿ ಸ್ಥಾನ ತ್ಯಜಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದು ಬಹುಶಃ ಇದೇ ಮೊದಲು. ಈ ಹೇಳಿಕೆ ಮಾತ್ರ ಬೇರೆಯದೇ ಗಂಭೀರ ಪರಿಣಾಮ ಬೀರಿದೆ.

ಮುಖ್ಯವಾಗಿ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಒಕ್ಕಲಿಗ ಸಮುದಾಯದ ಸ್ವಾಮೀಜಿಯವರಾದರೂ ಅವರನ್ನು ಸಮುದಾಯದಲ್ಲಿ ಭಕ್ತಿ ಗೌರವಗಳ ಹೊರತಾಗಿ ಪ್ರಬಲವಾಗಿ ಬೆಂಬಲಿಸುವವರ ಸಂಖ್ಯೆ ಹೆಚ್ಚೇನೂ ಇಲ್ಲ. ಸಮುದಾಯದಲ್ಲಿ ಆದಿಚುಂಚನಗಿರಿ ಪೀಠದ ಜಗದ್ಗುರುಗಳೇ ಅಸಂಖ್ಯ ಭಕ್ತ ಗಣ ಹೊಂದಿದ್ದು, ಆ ಪೀಠ ರಾಜ್ಯದಾಚೆಗೂ ಪ್ರಬಲವಾಗಿದೆ. ಹಾಗಿದ್ದರೂ ಯಾವುದೇ ಪಕ್ಷ, ಸಮುದಾಯದವರೇ ಆದರೂ ಯಾವುದೇ ವ್ಯಕ್ತಿಗಳ ಬೆಂಬಲಕ್ಕೆ ನಿಂತಿಲ್ಲ. ದಶಕಗಳ ಹಿಂದೆ ಮೀಸಲಾತಿ ನಿಗದಿ ವಿಚಾರದಲ್ಲಿ ಸಮುದಾಯದ ಹಿತಾಸಕ್ತಿಗೆ ಅನ್ಯಾಯವಾದಾಗ ಒಮ್ಮೆಈ ಮಠದ  ಹಿಂದಿನ ಪೀಠಾಧಿಪತಿಗಳು ಸರ್ಕಾರದ ವಿರುದ್ಧ ಬಹಿರಂಗವಾಗಿ ಸಿಡಿದೆದ್ದಿದ್ದು ಉಂಟು. ಈಗಿನ ಪೀಠಾಧಿಪತಿಗಳು ರಾಜಕಾರಣದ ಹಿತಾಸಕ್ತಿಗಳಿಂದ ದೂರ ಉಳಿದಿದ್ದಾರೆ.

ಸ್ವಾಮೀಜಿಯವರ ಅಭಿಪ್ರಾಯ ಸ್ವಂತದ್ದೇ?
ಇಷ್ಟಕ್ಕೂ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರು ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ನಿಜಕ್ಕೂ ಅವರ ಸ್ವಂತದ್ದೇ ಆಗಿತ್ತೆ? ಎಂಬುದರ ಬಗ್ಗೆ ಅನುಮಾನ ತುಂಬಿದ ಚರ್ಚೆಗಳು ಈಗ ಆರಂಭವಾಗಿವೆ. ಹಿಂದೊಮ್ಮೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆದಿ ಚುಂಚನಗಿರಿ ಪೀಠಕ್ಕೆ ಪರ್ಯಾಯ ಸಂಸ್ಥಾನ ಕಟ್ಟುವ ಸಲುವಾಗಿ ಬಹುತೇಕ ಅಜ್ಞಾತವಾಗಿದ್ದ ಇದೇ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಬಳಸಿಕೊಂಡು ಒಂದಷ್ಟು ಕಾಲ ಹೋರಾಟ ನಡೆಸಿದರಾದರೂ ಚುಂಚನಗಿರಿ ಮಠದ ವಿಚಾರದಲ್ಲಿ ಸಮುದಾಯದ ನಿಷ್ಠೆ ಬದಲಾಗಲಿಲ್ಲ. ಕಡೆಗೆ ಗೌಡರೇ ಶರಣಾದರು. ಇದು ಇತಿಹಾಸ.

ಈಗ ಇದೇ ಸ್ವಾಮೀಜಿ ಏಕಾ ಏಕಿ ಬಹಿರಂಗ ಸಭೆಯಲ್ಲೇ ತಮ್ಮ ಸಮುದಾಯದ ನಾಯಕ ಡಿ.ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವಂತೆ ಆಗ್ರಹಿಸಿದ ಮಾತುಗಳು ನಿಜವಾಗಿಯೂ ಅವರದ್ದಾ ಅಥವಾ ಅವರ ಮಾತುಗಳ ಹಿಂದೆ ಈ ಪಟ್ಟಕ್ಕಾಗಿ ಹಂಬಲಿಸುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಧ್ವನಿ ಇದೆಯಾ ಎಂಬುದೇ ಈಗ ಚರ್ಚೆಯ ಅಂಶ. ಮುಖ್ಯಮಂತ್ರಿ ಬದಲಾವಣೆ ವಿಚಾರ ಏನಿದ್ದರೂ ಪಕ್ಷದ ಹೈಕಮಾಂಡ್ ಗೆ ಸೇರಿದ್ದು ಎಂದು ಕಡ್ಡಿ ಮುರಿದಂತೆ ಸಿದ್ರರಾಮಯ್ಯ ಹೇಳೀದ್ದಾರೆ. ಅವರ ಬೆಂಬಲಲಿಗ ಸಚಿವ ಕೆ.ಎನ್ ರಾಜಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವಾಮೀಜಿಯವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ಅದೇನೇ ಇರಲಿ. ಸ್ವಾಮಿಜಿಯವರ ಹೇಳಿಕೆ ಒಕ್ಕಲಿಗ ಸಮುದಾಯವನ್ನೆ ಬಡಿದೆಬ್ಬಿಸಿದೆ.

“ಹೌದು ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್ ನಲ್ಲಿ ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು. ಈಗ ಮತ್ತೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದಾರೆ ಪದವಿ ಬಿಟ್ಟುಕೊಟ್ಟರೆ ತಪ್ಪೇನು? ಅಂಥೊಂದು ಔದಾರ್ಯ ಪ್ರದರ್ಶಿಸಲಿ‘’ ಎಂಬ ಚರ್ಚೆಗಳು ಬಿರುಸಾಗಿವೆ.

ಸದ್ಯದಲ್ಲೇ ಚೆನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಟ್ಟ ಈ ಕ್ಷೇತ್ರವನ್ನು ಗೆಲ್ಲುವುದು ಶಿವಕುಮಾರ್ ಗೆ ಪ್ರತಿಷ್ಠೆಯ ಪ್ರಶ್ನೆ. ಆ ಮೂಲಕ ಸಮುದಾಯದ ಮೇಲೆ ತಮ್ಮ ಹಿಡಿತವನ್ನು ಮರು ಸ್ಥಾಪಿಸುವುದು ಆ ಮೂಲಕ ದೇವೇಗೌಡರ ಕುಟುಂಬಕ್ಕೆ ಸಮಾನಾಂತರವಾಗಿ ತಾನೂ ಒಕ್ಕಲಿಗರ ನಾಯಕ ಎಂದು ಬಿಂಬಿಸಿಕೊಳ್ಳುವುದು ಅವರ ಸದ್ಯದ ಗುರಿ.

ಶಿವಕುಮಾರ್ ಏನೇ ಹೇಳಲಿ ಈ ಕ್ಷೇತ್ರದಿಂದ ಅವರ ಸೋದರ ಡಿ.ಕೆ. ಸುರೇಶ್ ಅಥವಾ ಕುಟುಂಬದವರೊಬ್ಬರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಸುರೇಶ್ ಗೆ 85 ಸಾವಿರ ಮತಗಳು ಬಂದಿತ್ತಲ್ಲದೇ ಲೀಡ್ ಸಹ ದೊರಕಿತ್ತು. ಚೆನ್ನಪಟ್ಟಣದಲ್ಲಿ ಸುರೇಶ್ ಅಭ್ಯರ್ಥಿಯಾದರೆ ಗೆಲುವು ಸುಲಭ. ಆ ಕಾರಣಕ್ಕಾಗೇ ಚುನಾವಣೆ ಘೋಷಣೆ ಆಗುವ ಮೊದಲೇ ಅಖಾಡಕ್ಕಿಳಿದು ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಈ ಮೊದಲು ಸ್ವಯಂ ಶಿವಕುಮಾರ್ ಅವರೇ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಇತ್ತಾದರೂ ಅದನ್ನು ಅವರು ನಿರಾಕರಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಸೋಲುವುದು ಅವರಿಗೆ ಬೇಕಾಗಿದೆ.

ಭಿನ್ನ ಸಚಿವರ ವಿರುದ್ಧ ಕ್ರಮಕ್ಕೆಒತ್ತಡ?

ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಪದೇ ಪದೇ ನೀಡುತ್ತಿರುವ ಹೇಳಿಕೆಗಳಿಂದ ತೀವ್ರ ಆಕ್ರೋಶಕ್ಕೀಡಾಗಿರುವ ಶಿವಕುಮಾರ್ ಈ ಹೇಳಿಕೆಗಳನ್ನು ನೀಡುತ್ತಿರುವ ಸಚಿವರುಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಆ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಬಹುದು ಜತೆಗೇ ಶಿಸ್ತು ಉಲ್ಲಂಘಿಸಿದರೆ ಪಕ್ಷದ ಹೈಕಮಾಂಡ್ ಎಂಥದೇ ದೊಡ್ಡ ನಾಯಕರಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನೂ ಈ ಮೂಲಕ ಸಿದ್ದರಾಮಯ್ಯ ಅವರಿಗೂ ತಲುಪಿಸಿದಂತಾಗುತ್ತದೆ. ಹಾಗೂ ಆ ಸಚಿವರು ತಮ್ಮ ಹೇಳಿಕೆ ಮುಂದುವರಿಸಿದ್ದೇ ಆದಲ್ಲಿ ಸಚಿವ ಪದವಿಯಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ತಮ್ಮ ಹಿತಾಸಕ್ತಿ ರಕ್ಷಣೆಗಾಗಿ ಅಂಥದೊಂದು ಕ್ರಮಕ್ಕೆ ಸಿದ್ದರಾಮಯ್ಯ ಮುಂದಾಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬರಲೂ ಬಹುದು. ಇದು ಡಿ.ಕೆ.ಶಿವಕುಮಾರ್ ಲೆಕ್ಕಾಚಾರ.

ಡಿಕೆಶಿ ಗುಪ್ತ ವರದಿಯಯಲ್ಲೇನಿದೆ?

ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಿದ್ಧಪಡಿಸಿ ಹೈಕಮಾಂಡ್ ಗೆ ಸಲ್ಲಿಸಿರುವ ಶಿವಕುಮಾರ್ ಒಟ್ಟು ಎಂಟಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಹಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ ಇದೇ ಸಮುದಾಯಗಳ ಮತದಾರರು ಈ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ಬಿಜೆಪಿ  ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ನೀಡಲು ಪಕ್ಷದ ಕೆಲವು ಹಿರಿಯ ನಾಯಕರ ನಿಗೂಢ ನಡಳಿಕೆಗಳೇ ಕಾರಣ ಎಂಬ ಅಂಶವನ್ನು ಈ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಆ ಮೂಲಕ ನೇರಾಗಿ ಸಿದ್ದರಾಮಯ್ಯ ಅವರತ್ತ ಗುರಿ ಇಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಅಹಿಂದ ಮತಗಳು ಬಿಜೆಪಿ ಅಭ್ಯರ್ಥಿ ಪರವಾಗಿ ಕ್ರೂಢೀಕರಣ ವಾಗಿರುವುದು ಇದಕ್ಕೆ ಪಕ್ಷದ ಕೆಲವು ಮುಖಂಡರೇ ನಡೆಸಿದ ಕುತಂತ್ರ ಕಾರಣ ಎಂದೂ ಉಲ್ಲೇಖಿಸಿದ್ದಾರೆ. ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪ್ರತ್ಯೇಕ ವರದಿ ಸಿದ್ಧಪಡಿಸಿ ಹೈಕಮಾಂಡ್ ಗೆ ಸಲ್ಲಿಸಿದ್ದು ಒಕ್ಕಲಿಗ ಮತಗಳು ಕೈತಪ್ಪಿ ಹೋಗಿದ್ದು ವಿಶ್ವಾಸಾರ್ಹ ನಾಯಕತ್ವದ ವೈಫಲ್ಯ ಕಾರಣ ಎಂಬ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಈ ಬೆಳವಣಿಗೆಗಳು ಒಂದು ಕಡೆಯಾದರೆ. ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಸಚಿವ ಸತೀಶ ಜಾರಕಿಹೊಳಿ ಪಕ್ಷದ ವರಿಷ್ಠರನ್ನಷ್ಠೇ ಅಲ್ಲ ಬಿಜೆಪಿಯ ರಾಷ್ಟ್ರೀಯ ನಾಯಕರನ್ನೂ ಭೇಟಿಯಾದ ಸುದ್ದಿಗಳಿವೆ. ಕಾಂಗ್ರೆಸ್ ನಲ್ಲಿ ನಡೆದಿರುವ ಕುರ್ಚಿ ಕಾದಾಟದಿಂದ ಹೈಕಮಾಂಡ್ ಪೇಚಿಗೆ ಸಿಕ್ಕಿರುವುದಂತೂ ನಿಜ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT