ಷೇರು ಮಾರುಕಟ್ಟೆ- ಅಮಿತ್ ಶಾ (ಸಂಗ್ರಹ ಚಿತ್ರ) online desk
ಅಂಕಣಗಳು

Amit Shah ಹೇಳಿದ್ದಾರೆ ಜೂನ್ ನಲ್ಲಿ Share Market ಜಿಗಿತ ಕಾಣುತ್ತಂತೆ! ಸೆಂಟಿಮೆಂಟ್ ಕೆಲಸ ಮಾಡುತ್ತಾ? (ಹಣಕ್ಲಾಸು)

ಈಗಿರುವ ಕೇಂದ್ರ ಸರಕಾರ ಜೂನ್ 4 ರಂದು ಪುನರಾಯ್ಕೆಯಾದರೆ ಖಂಡಿತ ಷೇರು ಮಾರುಕಟ್ಟೆ ಜಿಗಿತ ಕಾಣುತ್ತದೆ. (ಹಣಕ್ಲಾಸು 412)

ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಬಹಳ ಚಲಾವಣೆಯಲ್ಲಿದೆ. ಕೇಂದ್ರ ಸರಕಾರದ ಗೃಹ ಮಂತ್ರಿ ಅಮಿಶ್ ಶಾ ಜೂನ್ 4 ರ ಚುನಾವಣೆ ಫಲಿತಾಂಶದ ನಂತರ ಷೇರು ಮಾರುಕಟ್ಟೆ ಪುಟಿದೇಳುತ್ತದೆ. ಇವತ್ತು ಯಾರೆಲ್ಲಾ ಹೂಡಿಕೆ ಮಾಡಿದ್ದೀರಿ ಅವರೆಲ್ಲರೂ ಲಾಭವನ್ನು ಗಳಿಸಲಿದ್ದೀರಿ ಎನ್ನುವ ಮಾತನ್ನು ಆಡಿದ್ದಾರೆ ಎನ್ನುವುದು ಆ ಸುದ್ದಿ.

ಇಂದಿನ ಡೀಪ್ ಫೇಕ್ ಯುಗದಲ್ಲಿ ಅಮಿತ್ ಶಾ ಅವರು ಅದನ್ನು ಹೇಳಿದ್ದರೂ ಅದನ್ನು ಪೂರ್ಣವಾಗಿ ನಂಬುವ ಸ್ಥಿತಿಯಲ್ಲಿ ಪೂರ್ಣ ಸಮಾಜವಿಲ್ಲ ಎನ್ನುವುದು ನಿಜಕ್ಕೂ ಖೇದಕರ. ಈ ಸುದ್ದಿ ಅಂತಲ್ಲ ಎಲ್ಲಾ ಸುದ್ದಿಗಳ ಕಥೆಯಿದು. ಇರಲಿ, ಅಲ್ಲದೆ ಈ ವಿಡಿಯೋ ತುಣುಕು ಯಾವ ಸಮಯದಲ್ಲಿ, ಯಾವ ಸಂದರ್ಭಕ್ಕೆ ಹೇಳಿದ್ದು ಎನ್ನುವ ನಿಖರತೆ ಕೂಡ ಇಲ್ಲ. ಇಂದಿಗೆ ಎಲ್ಲರೂ ಯಾವುದು ಲಾಭದಾಯಕ ಅಷ್ಟು ಅಂಶವನ್ನು ಮಾತ್ರ ಪ್ರಸಾರ ಮಾಡುತ್ತಾರೆ. ಮಾತಿನ ಪೂರ್ಣ ಅರ್ಥ ತಿಳಿಯಬೇಕಾದರೆ ಮಾತಿನ ಹಿಂದೆ ಮುಂದೆ ಕೂಡ ತಿಳಿದುಕೊಂಡಿರಬೇಕಾದ ಅವಶ್ಯಕತೆ ಇದೆ. ಆದರೆ ಅಷ್ಟೊಂದು ತಾಳ್ಮೆ ಇಂದು ನಮ್ಮಲ್ಲಿ ಇಲ್ಲವಾಗಿದೆ.

ಅಮಿಶ್ ಶಾ ಅವರು ಆ ರೀತಿ ಹೇಳಿದ್ದಾರೆ ಅಥವಾ ಇಲ್ಲ ಎನ್ನುವುದು ಇಂದಿನ ಬರಹದ ಪ್ರಾಮುಖ್ಯತೆಯಲ್ಲ. ಮನುಷ್ಯನ ಸೆಂಟಿಮೆಂಟ್ ಹೇಗೆ ಕೆಲಸ ಮಾಡುತ್ತದೆ ಎನ್ನುವದನ್ನು ಹೇಳುವುದಷ್ಟೇ ಉದ್ದೇಶ. ಗಮನಿಸಿ ನೋಡಿ, ಈಗಿರುವ ಕೇಂದ್ರ ಸರಕಾರ ಜೂನ್ 4 ರಂದು ಪುನರಾಯ್ಕೆಯಾದರೆ ಖಂಡಿತ ಷೇರು ಮಾರುಕಟ್ಟೆ ಜಿಗಿತ ಕಾಣುತ್ತದೆ. ಈ ಮಾತನ್ನು ಅಮಿತ್ ಶಾ ಅವರು ಹೇಳಿದರೂ ಹೇಳದಿದ್ದರೂ ಜಿಗಿತ ಕಾಣುವುದು ಸತ್ಯ. ಇದಕ್ಕೆ ಕಾರಣ ಮನುಷ್ಯನ ಭಾವನೆ. ಅರ್ಥಾತ್ ಸೆಂಟಿಮೆಂಟ್.

ನಾವು ಫಂಡಮೆಂಟಲ್ ಅನಾಲಿಸಿಸ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕೇಳಿದ್ದೇವೆ, ತಿಳಿದುಕೊಂಡಿದ್ದೇವೆ. ಜೊತೆಗೆ ತಿಳಿದುಕೊಳ್ಳುವುದು ಇನ್ನೂ ಬಹಳಷ್ಟಿದೆ. ಇವೆರಡರ ಜೊತೆಗೆ ಇನ್ನೊಂದು ಅತ್ಯಂತ ಮುಖ್ಯವಾದ ಅಂಶ ಮನುಷ್ಯನ ಭಾವನೆ! ಮನುಷ್ಯನ ಭಾವನೆ ಹೇಗೆ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ, ಬೀರುತ್ತದೆ ಎನ್ನುವುದನ್ನ ತಿಳಿದುಕೊಳ್ಳುವ ರೀತಿಗೆ ಸೆಂಟಿಮೆಂಟಲ್ ಅನಾಲಿಸಿಸ್ ಎನ್ನಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಾರುಕಟ್ಟೆಯನ್ನ ಪ್ರಬಲವಾಗಿ ಹಿಡಿದಿಡುವ ಎರಡು ಅಂಶಗಳೆಂದರೆ: 1) ಭಯ 2) ಆಸೆ.

ಇಂದು ಜಗತ್ತನ್ನ ಹಿಡಿದು ನಿಲ್ಲಿಸಿರುವ ಹತ್ತಾರು ಅಂಶಗಳಲ್ಲಿ ಇವುಗಳೂ ಕೂಡ ಮುಖ್ಯವಾದವು, ಆದರೆ ನಾವು ಕೇವಲ ಷೇರು ಮಾರುಕಟ್ಟೆಯ ವಿಷಯಕ್ಕೆ ಬಂದರೆ ಆಗ ನಿಸ್ಸಂಕೋಚವಾಗಿ ಭಯ ಮತ್ತು ಆಸೆ ಇವೆರೆಡು ಮಾರುಕಟ್ಟೆಯನ್ನ ಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬಿಡುತ್ತವೆ. ಎಷ್ಟರಮಟ್ಟಿಗೆ ಎಂದರೆ ಈ ಮಟ್ಟದ ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಬೇಕಿತ್ತೆ? ಎನ್ನುವಷ್ಟರ ಮಟ್ಟಿಗೆ! ಹಾಗೆಂದು ಅವುಗಳು ಬೇಡವೆಂದೋ, ಅಥವಾ ಅವುಗಳು ಪ್ರಮುಖವಲ್ಲವೆಂದೂ ಹೇಳುತ್ತಿಲ್ಲ. ಅವುಗಳು ತಮ್ಮ ಸ್ಥಾನದಲ್ಲಿ ಅತಿ ಮುಖವಾದವುಗಳೇ ಅದರಲ್ಲಿ ಸಂಶಯ ಬೇಡ. ಆದರೆ ಕೆಲವೊಂದು ನ್ಯೂಸ್, ಕೆಲವೊಂದು ವಿಚಾರ ಅಥವಾ ಸಣ್ಣ ಗಾಸಿಪ್ ಎಲ್ಲಾ ಅನಾಲಿಸಿಸ್ ಗಳನ್ನ ನೆಲ ಕಚ್ಚಿಸಿ ಬಿಡುತ್ತವೆ. ಇದಕ್ಕೆ ಮುಖ್ಯ ಕಾರಣ ಮನುಷ್ಯನ ಮೆದುಳು. ಆಶ್ಚರ್ಯ ಎನ್ನಿಸುತ್ತದೆ ಅಲ್ಲವೇ? ಮನುಷ್ಯನ ಮೆದುಳು ಎರಡು ರೀತಿಯಲ್ಲಿ ಕೆಲಸ ಮಾಡಲು ಮಾತ್ರ ಸ್ವಾಭಾವಿಕವಾಗಿ ತಯಾರಿರುತ್ತದೆ.

1. ಫೈಟ್ - ಹೋರಾಟ ಮಾಡುವುದಕ್ಕೆ, ಸಾವು-ಬದುಕಿನ ನಡುವಿನ ಆಯ್ಕೆ ಬಂದಾಗ ಹೋರಾಟ ಮಾಡಬೇಕು ವಿಧಿಯಿಲ್ಲ. ಹೀಗಾಗಿ ಮನುಷ್ಯನ ಮನಸ್ಸು ಹೋರಾಟಕ್ಕೆ ಸಿದ್ಧವಿರುತ್ತದೆ.

2. ಫ್ಲೈಟ್ - ಹಾರಿ ಹೋಗುವುದು ಅಥವಾ ಓಡಿ ಹೋಗುವುದು, ಸಮಸ್ಯೆಯನ್ನ ಎದುರಿಸಲಾಗದೆ ಓಡಿ ಹೋಗುವುದು. ಇದು ಮನುಷ್ಯನ ಅತ್ಯಂತ ಸಹಜವಾದ ಗುಣ. ಹೆಚ್ಚು ನಷ್ಟವಿಲ್ಲದೆ ಓಡಲು ಮಾರ್ಗ ಸಿಕ್ಕರೆ ಬಹುತೇಕರು ಇದೆ ಮಾರ್ಗವನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಸಂಘರ್ಷ ಕೂಡ ಮನುಷ್ಯನ ಕಡೆಯ ಆಯ್ಕೆ.

ಹೀಗೆ ಮನುಷ್ಯನ ಅತಿ ಸಹಜವಾದ ಈ ಗುಣಗಳನ್ನ ಮೆಟ್ಟಿ ನಿಲ್ಲಲು ಪ್ರಯತ್ನಪೂರ್ವಕವಾಗಿ ಬದಲಾವಣೆಯನ್ನ ಮಾಡಿಕೊಳ್ಳಬೇಕು. ನಮ್ಮ ಮೆದುಳಿಗೆ ಬೇರೆ ರೀತಿಯ, ಪರ್ಯಾಯ ಚಿಂತನೆಯನ್ನ ಕಲಿಸಬೇಕು. ಆಗ ಮಾತ್ರ ಷೇರು ಮಾರುಕಟ್ಟೆಯಲ್ಲಿ ಜಯ ಗಳಿಸಬಹುದು. ಗಮನಿಸಿ ಬೇರೆಲ್ಲಾ ಅನಾಲಿಸಿಸ್ ಗಳು ಒಂದು ಹಂತದಲ್ಲಿ ಕೆಲಸಕ್ಕೆ ಬಾರದೆ ಉಸ್ಸಪ್ಪ ಎಂದು ಬಸವಳಿದು ನಿಂತಾಗ ತಲೆ ಕಾಯುವುದು ಈ ಸೆಂಟಿಮೆಂಟಲ್ ಅನಾಲಿಸಿಸ್, ಸಾಮಾನ್ಯಜ್ಞಾನ ಮತ್ತು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ತಾಳ್ಮೆ. ಈ ಗುಣಗಳನ್ನ ಬೆಳಸಿಕೊಳ್ಳದೆ ಬೇರೆ ಅನಾಲಿಸಿಸ್ಗಳು ಮಾತ್ರ ಜಯವನ್ನ ಒದಗಿಸಿ ಕೊಡುತ್ತವೆ ಎಂದರೆ ಅದು ಸುಳ್ಳಾಗುತ್ತದೆ.

ಎಲ್ಲಾ ತಲ್ಲಣಗಳಿಗಿಂತ ಈ ಭಾವನಾತ್ಮಕ ತಲ್ಲಣ ಮಾರುಕಟ್ಟೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನ ಬೀರುತ್ತದೆ. ಕೆಲವೊಮ್ಮೆ ಅದು ಕೇವಲ ಕೆಲವೇ ತಾಸುಗಳ ಮಟ್ಟಿಗೆ ಇರುತ್ತದೆ, ಕೆಲವೊಮ್ಮೆ ದಿನ, ವಾರ. ಇವುಗಳನ್ನ ಮೆಟ್ಟಿ ನಿಲ್ಲುವ ತಾಳ್ಮೆ ಮತ್ತು ಧೈರ್ಯವನ್ನ ಹೂಡಿಕೆದಾರ ಬೆಳೆಸಿಕೊಂಡಿದ್ದೆ ಆದರೆ ಷೇರು ಮಾರುಕಟ್ಟೆಯ ಹೂಡಿಕೆಯಿಂದ ನಷ್ಟವಾಯ್ತು ಎಂದು ಬೇರೆಯವರ ಮುಂದೆ ಹೇಳಿಕೊಂಡು ತಿರುಗುವ ಪ್ರಮೇಯ ಎಂದಿಗೂ ಬರುವುದಿಲ್ಲ.

ಇರಲಿ ಸಾಮಾನ್ಯವಾಗಿ ಕಾಯುವ ತಾಳ್ಮೆ ಇಲ್ಲದ ಅಥವಾ ಧೈರ್ಯ ಕೂಡ ತೋರದ ಅತಿ ಸಾಮಾನ್ಯ ಹೂಡಿಕೆದಾರ ಇಂತಹ ಸಂದರ್ಭದಲ್ಲಿ ಹೆಚ್ಚಿನ ನಷ್ಟವಿಲ್ಲದೆ ಅಥವಾ ನಷ್ಟವನ್ನೇ ಮಾಡಿಕೊಳ್ಳದೆ ಮಾರುಕಟ್ಟೆಯಿಂದ ಹೊರಹೋಗಲು ಒಂದಷ್ಟು ಮಾರ್ಗಗಳಿವೆ. ಅವೆಂದರೆ:

  • ಪುಟ್/ಕಾಲ್ ರೇಶ್ಯು ಅಥವಾ ಅಪ್ಷನ್: ನಿಗದಿತ ಮೊತ್ತಕ್ಕೆ ನಿಗದಿತ ಷೇರು ಅಥವಾ ಸೆಕ್ಯುರಿಟೀಸ್ ಟ್ರೇಡ್ ಮಾಡುವುದಕ್ಕೆ ಪುಟ್ ಅಥವಾ ಕಾಲ್ ಅಪ್ಷನ್ ಎನ್ನಲಾಗುತ್ತದೆ. ಗಮನಿಸಿ ಇದು ಒಂದು ಮಾರ್ಗವೇ ಹೊರತು ಇದು ಕಡ್ಡಾಯವಲ್ಲ. ಹೂಡಿಕೆದಾರ ಬಯಸಿದರೆ ಮಾತ್ರ ಇದನ್ನ ಬಳಸಿಕೊಳ್ಳಬಹುದು. ಪುಟ್ ಅಪ್ಷನ್ ಎಂದರೆ ನಿಗದಿತ ದಿನಕ್ಕೆ, ನಿಗದಿತ ಬೆಲೆಗೆ ಮಾರುವ ಆಯ್ಕೆ. ಅಂದರೆ ಮಾರುಕಟ್ಟೆಯಲ್ಲಿ ಸತತವಾಗಿ ಬೆಲೆ ಕುಸಿತವಾಗುತ್ತಿದ್ದರೆ ಹೆಚ್ಚಿನ ನಷ್ಟವನ್ನ ತಪ್ಪಿಸಲು, ಇದಕ್ಕಿಂತ ಬೆಲೆಯಲ್ಲಿ ಕುಸಿತವಾದರೆ ಆಟೋಮ್ಯಾಟಿಕ್ ಆಗಿ ಮಾರುವ ಒಂದು ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಎನ್ನಬಹುದು. ಹೇಳಿದ ಇದು ಯಾವಾಗ ಬೇಕಾದರೂ ಆಗಬಹುದು. ನಾವು ನಮೂದಿಸಿರುವ ಬೆಲೆ ಟಚ್ ಆದ ತಕ್ಷಣ ಇದು ಕಾರ್ಯ ನಿರ್ವಹಿಸುತ್ತದೆ. ಕಾಲ್ ಅಪ್ಷನ್ ನಲ್ಲಿ ನಮೂದಿತ ಬೆಲೆಗಿಂತ ಕಡಿಮೆಯಾದರೆ ಅಥವಾ ಹೆಚ್ಚಾಗುತ್ತಿದ್ದಾರೆ ಅದನ್ನ ಕೊಳ್ಳುವಂತೆ ಸೂಚನೆಯನ್ನ ನೀಡುವ ಅವಕಾಶವಿರುತ್ತದೆ. ಇವುಗಳನ್ನ ಬಳಸಿಕೊಂಡು ಹೆಚ್ಚಿನ ಲಾಭವನ್ನ ಮಾಡಿಕೊಳ್ಳಬಹುದು , ನಷ್ಟವನ್ನ ಕಡಿಮೆ ಮಾಡಿಕೊಳ್ಳಬಹುದು .

  • ವೋಲ್ಟಾಲಿಟಿ ಇಂಡೆಕ್ಸ್: ಗಮನಿಸಿ ಮಾರುಕಟ್ಟೆಯಲ್ಲಿ ಬಹುತೇಕ ಬಾರಿ ನೆಗಟಿವ್ ಕೋ ರಿಲೇಷನ್ ಇರುತ್ತದೆ. ಅಂದರೆ ಗಮನಿಸಿ ವೋಲ್ಟಾಲಿಟಿ ಸೂಚ್ಯಂಕ ಮಾರುಕಟ್ಟೆ ಕುಸಿತ ಅಥವಾ ಬೆಲೆ ಕುಸಿತವಾದಾಗ ಹೆಚ್ಚುತ್ತದೆ, ಬೆಲೆಯಲ್ಲಿ ಹೆಚ್ಚಳ, ಮಾರುಕಟ್ಟೆ ಸುಧಾರಿಸಿಕೊಂಡರೆ ಆಗ ವೋಲ್ಟಾಲಿಟಿ ಇಂಡೆಕ್ಸ್ ಕುಸಿಯುತ್ತದೆ. ಇವುಗಳನ್ನ ಗಮನಿಸುತ್ತಾ ತಮಗೆ ಹೊಂದುವ ನಿರ್ಧಾರವನ್ನ ಹೂಡಿಕೆದಾರರು ಮಾಡಬಹುದು.

  • ವ್ಯತಿರಿಕ್ತ ಸೂಚ್ಯಂಕಗಳು: ಗ್ರಾಹಕನ, ಹೂಡಿಕೆದಾರನ ಮನಸ್ಥಿತಿ ಯಾವಾಗಲೂ ಒಂದೇ ತೆರನಾಗಿ ಇರುವುದಿಲ್ಲ. ಅಸೆಟ್ ಪೊಸಿಷನ್ ಹೇಗಿದೆ ಎನ್ನುವುದರ ಮೇಲೆ contrarian ಅಂದರೆ ವ್ಯತಿರಿಕ್ತ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಾಧ್ಯತೆ ಅಪಾರವಾಗಿರುತ್ತದೆ. ಹೀಗಾಗಿ ಇಂತಹ ಗ್ರಾಹಕರ, ಹೂಡಿಕೆದಾರರ ಸೆಂಟಿಮೆಂಟ್ ಅವರ ಪೊಸಿಶನಿಂಗ್ ಗಳನ್ನ ಅರ್ಥ ಮಾಡಿಕೊಂಡು ಸೂಚನೆ ನೀಡುವ AI ಪ್ಲಾಟ್ಫಾರ್ಮ್ ಗಳು ಇಂದು ಲಭ್ಯವಿವೆ. ಇವುಗಳನ್ನ ಬಳಸಿಕೊಂಡು ಲಾಭ ಅಥವಾ ನಷ್ಟದ ಲೆಕ್ಕಾಚಾರ ಹೂಡಿಕೆದಾರ ಮಾಡಿಕೊಳ್ಳಬಹುದು ಮತ್ತು ಅದಕ್ಕೆ ತಕ್ಕಂತೆ ನಿರ್ಧಾರಗಳನ್ನ ತೆಗೆದುಕೊಳ್ಳಬಹುದು.

ಕೊನೆಮಾತು: ಪ್ರಾರಂಭದಲ್ಲಿ ಹೇಳಿದಂತೆ ಮಾರುಕಟ್ಟೆಯನ್ನ ನಿಜಾರ್ಥದಲ್ಲಿ ಆಳುವುದು ಭಯ ಮತ್ತು ಆಸೆ. ಹೆಚ್ಚು ಗಳಿಸಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಆಸೆ, ಕಳೆದುಕೊಡು ಬಿಟ್ಟರೆ, ಹೂಡಿಕೆ ಮಾಯವಾದರೆ, ನಷ್ಟವಾದರೆ ಎನ್ನುವ ಭಯ ಇವೆರೆಡೂ ಮಾರುಕಟ್ಟೆಯನ್ನ ತನ್ನ ಕಬಂಧ ಬಾಹುಗಳಿಂದ ಅಪ್ಪಿ ಹಿಡಿದಿರುವ ಅಂಶಗಳು. ಇವೆರೆಡು ಯಾವಾಗ ಪ್ರಾಮುಖ್ಯತೆಯನ್ನ ಪಡೆಯುತ್ತವೆ ಆಗ ಬೇರೆಲ್ಲಾ ಜ್ಞಾನವೂ ಮಂಕಾಗುತ್ತದೆ. ಅಲ್ಲೇನಿದ್ದರೂ ಭಾವನೆಗಳದ್ದೇ ಸಾಮ್ರಾಜ್ಯ. ಹೀಗಾಗಿ ಭಾವನೆಗಳ ಮೇಲೆ ಒಂದಷ್ಟು ನಿಯಂತ್ರಣ ಹೇರಿದರೆ, ಸಮಯಕ್ಕೆ ತಕ್ಕಂತೆ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗುಣವನ್ನ ಬೆಳಸಿಕೊಂಡರೆ ಮತ್ತು ಇದರ ಜೊತೆಗೆ ತಾಳ್ಮೆ ಎನ್ನುವ ಅಸ್ತ್ರವೂ ಜೊತೆಯಾದರೆ ಷೇರು ಮಾರುಕಟ್ಟೆ ವಿಜ್ಞಾನವಾಗಿ ಪರಿವರ್ತನೆಯಾಗುತ್ತದೆ, ಇಲ್ಲದ ಪಕ್ಷದಲ್ಲಿ ಅದೊಂದು ಗೊಂದಲಗಳ ಗೂಡಾಗಿ ಮಾರ್ಪಾಡಾಗುತ್ತದೆ. ಸತ್ಯವೇನು ಗೊತ್ತೇ? ಅದನ್ನ ಗೊಂದಲದ ಗೂಡಾಗಿಸುವುದು ಅಥವಾ ವಿಜ್ಞಾನವಾಗಿ ಮಾರ್ಪಡಿಸವುದು ಕೂಡ ಮತ್ತದೇ ಮನುಷ್ಯನ ಭಾವನೆ!

ಒಂದು ಸಣ್ಣ ಸುದ್ದಿ ಅಥವಾ ಸೋಶಿಯಲ್ ಮೀಡಿಯಾ ಕಾಮೆಂಟ್ ಕೂಡ ಷೇರಿನ ಬೆಲೆಯನ್ನ ನಿರ್ಧಸಿರಬಲ್ಲದು ಎಂದರೆ ನಿಮಗೆ ಷೇರು ಪೇಟೆಯ ಏರಿಳಿತದ ಸಣ್ಣ ಪರಿಚಯವಾಯಿತು ಎಂದುಕೊಳ್ಳುವೆ. ಅಮಿತ್ ಶಾ ಹೇಳಿದ್ದರೋ ಇಲ್ಲವೋ ಎನ್ನುವುದನ್ನು ಬದಿಗಿಡಿ, ಹಣವಿದ್ದರೆ ಷೇರು ಮಾರುಕಟ್ಟೆಯಲ್ಲಿ ತಕ್ಷಣ ಹೂಡಿಕೆ ಮಾಡಿ. ಜೂನ್ ರ ನಂತರ ಷೇರು ಮಾರುಕಟ್ಟೆಯಲ್ಲಿನ ಆ ಕ್ಷಣದ ಜಿಗಿತವನ್ನು ಲಾಭವಾಗಿಸಿಕೊಳ್ಳಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT