ಎಚ್ ಡಿ ಕುಮಾರಸ್ವಾಮಿ - ಬಿಎಸ್ ಯಡಿಯೂರಪ್ಪ ಹಾಗೂ ನಿಖಿಲ್ ಕುಮಾರಸ್ವಾಮಿ Photo | Nagaraja Gadekal
ಅಂಕಣಗಳು

ಉಪ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ? (ಸುದ್ದಿ ವಿಶ್ಲೇಷಣೆ)

ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ ಎಂಬ ನಾಣ್ಣುಡಿಯನ್ನು ಶಿವಕುಮಾರ್ ಆಗಾಗ್ಗೆ ಹೇಳುತ್ತಿರುತ್ತಾರೆ. ಚನ್ನಪಟ್ಟಣ ಕ್ಷೇತ್ರದಲ್ಲೂ ಅದನ್ನು ಅವರೇ ಮಾಡಿ ತೋರಿಸಿದ್ದಾರೆ.

ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆಯಾ?

ಉಪ ಸಮರಕ್ಕೆ ಅಭ್ಯರ್ಥಿಗಳ ನಾಮ ಪತ್ರಗಳ ಸಲ್ಲಿಕೆ ಆರಂಭವಾಗಿರುವ ಹಂತದಲ್ಲಿ ಈ ಪ್ರಶ್ನೆ ತಲೆ ಎತ್ತಿದೆ. ಸಾಮಾನ್ಯವಾಗಿ ಉಪ ಚುನಾವಣೆಗಳು ಆಳುವ ಸರ್ಕಾರಗಳ ಭವಿಷ್ಯವನ್ನು ನಿರ್ಧರಿಸಿದ ಅಥವಾ ಬದಲಾಯಿಸಿದ ಉದಾಹರಣೆಗಳು ಇಲ್ಲ. ಸಾರ್ವತ್ರಿಕ ಚುನಾವಣೆಗಳಲ್ಲಿ ಚರ್ಚೆಯಾಗುವ ವಿಚಾರಗಳೇ ಬೇರೆ, ಉಪ ಚುನಾವಣೆಗಳಲ್ಲಿ ಪ್ರಕಟವಾಗುವ ಫಲಿತಾಂಶಗಳೇ ಬೇರೆ.

ಹೀಗಾಗಿ ಸರ್ಕಾರದ ಅಸ್ತಿತ್ವವನ್ನು ಬದಲಾಯಿಸುವ ಮಹತ್ವದ ರಾಜಕೀಯ ವಿದ್ಯಮಾನಗಳೇನೂ ಈ ಚುನಾವಣೆಯ ನಂತರ ಸಂಭವಿಸುವುದಿಲ್ಲ. ಹೆಚ್ಚೆಂದರೆ ರಾಜ್ಯರಾಜಕಾರಣದಲ್ಲಿ ಒಂದಷ್ಟು ಬದಲಾವಣೆಯ ವಿದ್ಯಮಾನಗಳು ಸಂಭವಿಸಬಹುದು.ಆದರೆ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ವಿದ್ಯಮಾನಗಳು ನಡೆಯುವ ಸಾಧ್ಯತೆಗಳು ಇಲ್ಲ.

ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 136 ಕಾಂಗ್ರೆಸ್ ಶಾಸಕರ ಬೆಂಬಲವಿದೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಏನೇ ಬದಲಾವಣೆಯಾದರೂ ಅದರಿಂದ ಸರ್ಕಾರ ಪತನವಾಗುತ್ತದೆ ಎಂದು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಆದರೆ ಅಂಥದೊಂದು ಬದಲಾವಣೆಗೆ ಉಪ ಚುನಾವಣೆ ಮುನ್ನಡಿ ಬರೆಯಲಿದೆ ಎಂಬುದನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.

ಮೂರರ ಪೈಕಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಾಜ್ಯ ರಾಜಕಾರಣಕ್ಕೊಂದು ಕುತೂಹಲದ ತಿರುವು ನೀಡುವ ನಿರೀಕ್ಷೆ ಇದೆ. ಏಕೆಂದರೆ ಇದು ಎರಡು ಪಕ್ಷಗಳ ನಡುವಿನ ಪ್ರತಿಷ್ಠೆಯ ಕದನ ಎನ್ನುವುದಕ್ಕಿಂತ ಹೆಚ್ಚಾಗಿ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ಹಿತಾಸಕ್ತಿಯ ಜಿದ್ದಾಜಿದ್ದಿ ಹೋರಾಟವಾಗೇ ರೂಪಿತವಾಗಿದೆ. ಆ ಕಾರಣಕ್ಕಾಗೇ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಚನ್ನಪಟ್ಟಣ ಕ್ಷೇತ್ರವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಸೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಷ್ಠೆಯ ಸವಾಲಾಗಿ ಸ್ವೀಕರಿಸಿದ್ದಾರೆ. ಮತ್ತೊಂದು ಕಡೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೂ ಈ ಕ್ಷೇತ್ರ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವಾಗಿ ಪರಿಣಮಿಸಿದೆ. ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಕದ ಮಂಡ್ಯದಿಂದ ಲೋಕಸಭೆಗೆ ಆಯ್ಕೆಯಾದ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈಗ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ –ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇಲ್ಲಿ ನಿಖಿಲ್ ಗೆದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅವರ ರಾಜಕೀಯ ಅಸ್ತಿತ್ವ ಉಳಿಯುತ್ತದೆ.

ಮತ್ತೊಂದು ಕಡೆ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲೇಬೇಕಿದೆ. ಪಕ್ಷದ ಅಭ್ಯರ್ಥಿ ಇಲ್ಲಿ ಗೆದ್ದರೆ ದೇವೇಗೌಡರ ಕುಟುಂಬದ ವಿರುದ್ಧದ ಅವರ ರಾಜಕೀಯ ಹೋರಾಟ ಒಂದು ನಿರ್ಣಾಯಕ ಘಟ್ಟ ತಲುಪಿದಂತಾಗುತ್ತದೆ. ಈ ಕಾರಣಕ್ಕಾಗೇ ಅವರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ.

ಬದಲಾದ ನಿಲುವು ತಂದ ಅಚ್ಚರಿ:

ರಾಜಕಾರಣ ಎಂಬುದು ಸಾಧ್ಯತೆಗಳ ಕಲೆ ಎಂಬ ನಾಣ್ಣುಡಿಯನ್ನು ಶಿವಕುಮಾರ್ ಆಗಾಗ್ಗೆ ಹೇಳುತ್ತಿರುತ್ತಾರೆ. ಚನ್ನಪಟ್ಟಣ ಕ್ಷೇತ್ರದಲ್ಲೂ ಅದನ್ನು ಅವರೇ ಮಾಡಿ ತೋರಿಸಿದ್ದಾರೆ. ಈ ಮೊದಲು ಬಿಜೆಪಿ ಟಿಕೆಟ್ ವಂಚಿತರಾಗುವ ಸೂಚನೆಗಳಿದ್ದ ಮಾಜಿ ಸಚಿವ ಸಿ.ಪಿ ಯೋಗೀಶ್ವರ್ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆ. ಶಿವಕುಮಾರ್ ಅವರ ಸೋದರ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂದೇ ನಂಬಲಾಗಿತ್ತು. ಅಂಥದೊಂದು ನಿರ್ಧಾರ ಚುನಾವಣೆ ಪ್ರಕ್ರಿಯೆ ಆರಂಭವಾಗುವರೆಗೂ ಇದ್ದುದು ನಿಜ. ಆದರೆ ಕಡೇ ಗಳಿಗೆಯಲ್ಲಿ ಆದ ಬದಲಾವಣೆಗಳು ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ತಂತ್ರವನ್ನು ಬದಲಿಸಲು ಕಾರಣವಾಯಿತು.

ಹಾಗೆ ನೋಡಿದರೆ ಯೋಗೀಶ್ವರ್ ಕಾಂಗ್ರೆಸ್ ಸೇರುವ ವಿಚಾರದಲ್ಲಿ ತೆರೆಮರೆಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರಯತ್ನ ನಡೆಸಿದ್ದೂ ಸತ್ಯ. ಆದರೆ ಈ ಪ್ರಯತ್ನಗಳನ್ನು ಅರಿಯುವಲ್ಲಿ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರನ್ನು ಆಗ್ರಹಿಸಿ ಬೆಂಬಲಿಸಿದ್ದ ರಾಜ್ಯ ಬಿಜೆಪಿ ಮುಖಂಡರು ವಿಫಲರಾದರು.

ಯೋಗೀಶ್ವರ್ ಗೆ ಬಿಜೆಪಿ ಟಿಕೆಟ್ ನೀಡುವ ವಿಚಾರದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಶಾಸಕರಾದ ಡಾ. ಅಶ್ವತ್ಥನಾರಾಯಣ, ಅರವಿಂದ ಬೆಲ್ಲದ, ಬಸವನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಹಲವು ಮುಖಂಡರು ದಿಲ್ಲಿಯ ವರಿಷ್ಠರ ಮೇಲೆ ಒತ್ತಡ ಹೇರಿದ್ದೇನೋ ಹೌದು. ಇದಕ್ಕೆ ಕಾರಣವೂ ಇತ್ತು. ಪಕ್ಷದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸರಿ ಸಮನಾಗಿ ಅಸ್ತಿತ್ವ ಹೊಂದಲು ಪ್ರಯತ್ನ ನಡೆಸುತ್ತಿರುವ ಈ ಎಲ್ಲ ಮುಖಂಡರಿಗೆ ಅಡ್ಡವಾಗಿದ್ದು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರೂ ಆದ ಕುಮಾರಸ್ವಾಮಿ.

ಮಂಡ್ಯ ದಿಂದ ಲೋಕಸಭೆ ಚುನಾವನೆ ಕಣಕ್ಕೆ ಇಳಿಯುವ ಮುನ್ನವೇ ಬಿಜೆಪಿಯ ದಿಲ್ಲಿ ನಾಯಕತ್ವದ ಬಳಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ತಮ್ಮ ಪಕ್ಷಕ್ಕೇ ಬಿಟ್ಟುಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದು ಆ ಷರತ್ತಿನ ಆಧಾರದಲ್ಲೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು ಎಂಬುದು ಅವರ ಪಕ್ಷದ ಮೂಲಗಳು ನೀಡುವ ಮಾಹಿತಿ. ಎರಡು ತಿಂಗಳ ಮೊದಲೇ ಯೋಗೀಶ್ವರ್ ಕಾಂಗ್ರೆಸ್ ಸೇರುವ ಪ್ರಯತ್ನದಲ್ಲಿರುವ ಸುಳಿವನ್ನು ಕುಮಾರಸ್ವಾಮಿ ದಿಲ್ಲಿ ಬಿಜೆಪಿ ನಾಯಕತ್ವಕ್ಕೆನೀಡಿದ್ದರು. ಆದರೆ ಅದರ ಸೂಕ್ಷ್ಮತೆ ರಾಜ್ಯ ಬಿಜೆಪಿ ನಾಯಕರಿಗೆ ಅರಿವಾಗಲಿಲ್ಲ. ಬಿಜೆಪಿಯಲ್ಲಿರುವ ಅಶೋಕ್, ಅಶ್ವತ್ಥನಾರಾಯಣ, ಸಿ.ಟಿ.ರವಿ ಮೊದಲಾದ ಮುಖಂಡರಿಗೆ ಕುಮಾರಸ್ವಾಮಿ ಮೈತ್ರಿ ರಾಜಕಾರಣವನ್ನು ಮುಂದಿಟ್ಟುಕೊಂಡು ಪ್ರಾಬಲ್ಯ ಸಾಧಿಸುತ್ತಿರುವುದು ಸಹಿಸಲಾರದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲೇ ಅವರು ಯೋಗೀಶ್ವರ್ ಅವರನ್ನು ಬೆಂಬಲಿಸುವ ಮೂಲಕ ಉಪ ಚುನಾವಣೆಯ ಟಿಕೆಟ್ ಕದನದಲ್ಲಿ ಕುಮಾರಸ್ವಾಮಿಯನ್ನು ಹಿಮ್ಮೆಟ್ಟಿಸುವ ತಂತ್ರ ಮಾಡಿದರಾದರೂ ಅದಕ್ಕೆ ಹೈಕಮಾಂಡ್ ನಿಂದ ಸ್ಪಂದನೆ ಸಿಕ್ಕಲಿಲ್ಲ.

ಇನ್ನು ಕಾಂಗ್ರೆಸ್ ನಲ್ಲಿ ಈ ಮೊದಲು ಸೋದರ ಡಿ.ಕೆ.ಸುರೇಶ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಡಿ.ಕೆ.ಶಿವಕುಮಾರ್ ತಯಾರಿ ನಡೆಸಿದ್ದು ನಿಜ. ಅದಕ್ಕೆ ಕಾರಣವೂ ಇತ್ತು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿ.ಕೆ.ಸುರೇಶ್ ಚುನಾವಣೆಯಲ್ಲಿ ಸೋತರೂ ಚನ್ನಪಟ್ಟಣ ವಿಧಾನಸಭಾ ಕ್ಷೆತ್ರದಲ್ಲಿ ಅವರಿಗೆ 89 ಸಾವಿರ ಮತಗಳು ಬಂದಿದ್ದವು. ಹೀಗಾಗಿ ಸರ್ಕಾರದ ಸಾಧನೆ ಸ್ವಂತ ಚರ್ಚಸ್ಸು ಮತ್ತಿತರೆ ಸಂಗತಿಗಳು ಸುರೇಶ್ ಅಭ್ಯರ್ಥಿಯಾದರೆ ಗೆಲವು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರವೇನೋ ಇತ್ತು. ಮತ್ತೊಂದು ಕಡೆ ಕಾಂಗ್ರೆಸ್ ನಲ್ಲೇ ಇರಬಹುದಾದ ಗುಪ್ತ ಶತ್ರಗಳ ಭಯವೂ ಇತ್ತು. ಸುರೇಶ್ ಗೆದ್ದರೆ ಪರವಾಗಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅದರಿಂದ ತಮ್ಮ ಭವಿಷ್ಯದ ರಾಜಕಾರಣವೇ ಮಸುಕಾಗಬಹುದೆಂಬ ಆತಂಕವೂ ಶಿವಕುಮಾರ್ ಗಿತ್ತು.

ಇಂತಹ ಸನ್ನಿವೇಶದಲ್ಲೇ ಅವರು ಉರುಳಿಸಿದ ರಾಜಕೀಯ ದಾಳ ಯೋಗೀಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆದು ತರಲು ಸಹಕಾರಿ ಆಯಿತು. ಶತಾಯ ಗತಾಯ ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗುವ ಹಂಬಲದಲ್ಲಿರುವ ಯೋಗೀಶ್ವರ್ ಗೆ ಅಲ್ಲಿ ನೆಲೆಯೂರಲು ಅಡ್ಡಿಯಾಗಿದ್ದು ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ. ಒಮ್ಮಲೇ ಇಬ್ಬರು ಶತ್ರಗಳನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡುವುದು ಕಷ್ಟ ಎನಿಸಿದ್ದರಿಂದ ಅನಿವಾರ್ಯವಾಗಿ ಅವರು ಶಿವಕುಮಾರ್ ಜತೆ ರಾಜಿ ಆದರು. ಮತ್ತೊಂದು ಕಡೆ ಕುಮಾರಸ್ವಾಮಿ ವಿರುದ್ಧದ ಯುದ್ಧಕ್ಕೆ ಸಮರ್ಥ ಸೇನಾಧಿಪತಿ ಕಾಂಗ್ರೆಸ್ ಗೂ ಬೇಕಾಗಿತ್ತು. ಸುರೇಶ್ ಅವರನ್ನು ನಿಲ್ಲಿಸಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದಕ್ಕಿಂತ ಯೋಗೀಶ್ವರ್ ರನ್ನು ಬೆಂಬಲಿಸಿದರೆ ಅದರಿಂದ ದೂರಗಾಮಿ ಲಾಭ ಇರುವುದನ್ನು ಅರ್ಥಮಾಡಿಕೊಂಡ ಶಿವಕುಮಾರ್, ಅವರನ್ನೇ ಕಣಕ್ಕಿಳಿಸುವ ಮೂಲಕ ಕುಮಾರಸ್ವಾಮಿಗೆ ಎದಿರೇಟು ನೀಡಿದ್ದಾರೆ.

ಪ್ರಬಲ ಶಕ್ತಿ:

ಇದುವರೆಗೆ ನಡೆದಿರುವ ಆರು ಚುನಾವಣೆಗಳಲ್ಲಿ ಯೋಗೀಶ್ವರ್ ಪಡೆದಿರುವ ಮತಗಳನ್ನು ಲೆಕ್ಕ ಹಾಕಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಅವರಿಗೆ ವ್ಯಕ್ತಿಗತ ಪ್ರಾಬಲ್ಯ ಇರುವುದು ಸಾಬೀತಾಗುತ್ತದೆ. ಇದರ ಜತೆಗೆ ತನ್ನ ವರ್ಚಸ್ಸು, ಕಾಂಗ್ರೆಸ್ ಶಕ್ತಿಯೂ ಸೇರಿದರೆ ಅವರು ಗೆಲ್ಲುವುದು ಸುಲಭ. ಒಮ್ಮೆ ಯೋಗೀಶ್ವರ್ ಇಲ್ಲಿ ಗೆದ್ದರೆ ಗ್ರಾಂತರ ಲೋಕಸಭಾ ಕ್ಷೆತ್ರದ ವ್ಯಾಪ್ತಿಯಷ್ಟೇ ಅಲ್ಲ ಬೆಂಗಳೂರು ಸರಹದ್ದಿನಿಂದ ಕುಮಾರಸ್ವಾಮಿ ರಾಜಕಾರಣ ಕೊನೆಗೊಂಡಂತಾಗುತ್ತದೆ ಆ ಮೂಲಕ ರಾಜಕೀಯವಾಗಿ ಒಬ್ಬ ಪ್ರಬಲ ಶತ್ರು ಇಲ್ಲದಂತಾಗುತ್ತದೆ ಎಂಬುದು ಶಿವಕುಮಾರ್ ಲೆಕ್ಕಾಚಾರ.

ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿಟ್ಟಿನಲ್ಲಿ ಮಾತುಕತೆ ನಡೆದಾಗ ಚುನಾವಣೆಯಲ್ಲಿ ಗೆದ್ದರೆ ತನ್ನನ್ನು ಮಂತ್ರಿ ಮಾಡಬೇಕೆಂಬ ಷರತ್ತನ್ನು ಯೋಗೀಶ್ವರ್ ಮುಂದಿಟ್ಟಿದ್ದಾರೆ ಎನ್ನಲಾಗಿದ್ದು ಅದರ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಕಾಂಗ್ರೆಸ್ ನಾಯಕತ್ವದಿಂದ ಬಂದಿಲ್ಲ. ನಿಖಿಲ್ ಗೆ ಇದು ಮೂರನೇ ಚುನಾವಣೆ. ಈಗಾಗಲೇ ಹಿಂದಿನ ಎರಡು ಚುನಾವಣೆಗಳಲ್ಲಿ ಅವರು ಸೋತಿದ್ದಾರೆ. ಹಾಗೆ ನೋಡಿದರೆ ಈ ಕ್ಷೇತ್ರದಲ್ಲಿ ಜೆಡಿಎಸ್ ಗೂ ಪ್ರಬಲವಾದ ಅಸ್ತಿತ್ವ ಇದೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಬಹು ಸಂಖ್ಯಾತ ಒಕ್ಕಲಿಗ ಸಮುದಾಯದಲ್ಲಿ ಗೌರವ ಭಾವನೆ ಇಂದಿಗೂ ಬಲವಾಗಿ ಇರುವುದು ಇದಕ್ಕೆ ಕಾರಣ. ಹೀಗಾಗಿ ಮೊಮ್ಮಗನನ್ನ ಚುನಾವಣೆಯಲ್ಲಿ ಗೆಲ್ಲಿಸುವ ಸಲುವಾಗಿ ಹಿರಿಯರಾದ ದೇವೇಗೌಡರೇ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ಚನ್ನಪಟ್ಟಣದಲ್ಲಿ ನೆಲೆ ನಿಂತರೂ ಆಶ್ಚರ್ಯ ಏನೂ ಇಲ್ಲ.

ಕ್ಷೇತ್ರದಲ್ಲಿ ಮುಸ್ಲಿಮರ ಮತಗಳೂ ಅಧಿಕ ಸಂಖ್ಯೆಯಲ್ಲಿವೆ. ಅವೆಲ್ಲ ಸದ್ಯದ ಸ್ಥಿತಿಯಲ್ಲಿ ಇಡುಗಂಟಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬರುವ ಸಾಧ್ಯತೆಗಳು ಹೆಚ್ಚು. ಒಕ್ಕಲಿಗರ ಮತಗಳ ಪೈಕಿ ಹೆಚ್ಚು ಭಾಗ, ಮುಸ್ಲಿಮರ ಮತಗಳು ಅಧಿಕ ಸಂಖ್ಯೆಯಲ್ಲಿ ಬಂದರೆ ಜತೆಗೇ ಅಲ್ಲಲ್ಲಿ ಚದುರಿದಂತೆ ಇರುವ ಹಿಂದುಳಿದವರು ಇತರ ವರ್ಗಗಳ ಮತಗಳು ಕಾಂಗ್ರೆಸ್ ಗೆ ಬಂದರೆ ಗೆಲವು ಸುಲಭ ಎಂಬುದು ಶಿವಕುಮಾರ್ ಲೆಕ್ಕಾಚಾರ. ಸುರೇಶ್ ಬದಲು ಯೋಗೀಶ್ವರ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಕಾಂಗ್ರೆಸ್ ನಲ್ಲಿರುವ ಶಿವಕುಮಾರ್ ವಿರೋಧಿ ಗುಂಪು ಸಹಾ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವ ಸನ್ನಿವೇಶ ಎದುರಾಗಿದೆ. ಈ ಎಲ್ಲ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ರಾಜಕೀಯವಾಗಿ ಮಹತ್ವ ಎನಿಸಿದೆ.

ಬೊಮ್ಮಾಯಿ ವಿರುದ್ಧ ಪಂಚಮಸಾಲಿಗಳ ಸಿಟ್ಟು?

ಇನ್ನುಳಿದಂತೆ ಸಂಡೂರಿನಲ್ಲಿ ಸಂಸದ ತುಕಾರಾಮ್ ಅವರ ಪತ್ನಿಯನ್ನೇ ಕಾಂಗ್ರೆಸ್ ಕಣಕ್ಕಿಳಿಸಿದೆ. ಅಲ್ಲಿ ಅಂಥ ವಿರೋಧವೇನೂ ಇದ್ದಂತಿಲ್ಲ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಅತೃಪ್ತಿ ಗೂಡು ಕಟ್ಟಿದೆ. ಶಿಗ್ಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಲ್ಲೂ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಲಿಂಗಾಯಿತರ ಒಳ ಪಂಗಡಗಳ ಅದರಲ್ಲೂ ಪ್ರಮುಖವಾಗಿ ಪಂಚಮಸಾಲಿ ಗಳ ವಿರೋಧವನ್ನು ಅವರು ಎದುರಿಸುತ್ತಿದ್ದಾರೆ. ಆದರೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವೇಶ ಭಿನ್ನಮತವನ್ನು ತಣ್ಣಗೆ ಮಾಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ನಲ್ಲೂ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. ಮುಸ್ಲಿಮ್ ಮತಗಳ ಜತೆಗೆ ಹಿಂದುಳಿದ ವರ್ಗದ ಮತಗಳು ಹೆಚ್ಚುಪಾಲು ಕಾಂಗ್ರೆಸ್ ಗೆ ಬಂದರೆ ಚುನಾವಣೆ ನಿರ್ಣಾಯಕವಾಗಲಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಮೂರೂ ಕ್ಷೇತ್ರಗಳ ಗ್ರಾಮಾಂತರ ಪ್ರದೇಶಗಳಲ್ಲಿ ಆ ಪಕ್ಷದ ಕೈಹಿಡಿಯಬಹುದು ಎಂಬ ನಿರೀಕ್ಷೆಯೂ ಇದೆ.

100%

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

SCROLL FOR NEXT