ಈ ತಿಂಗಳ ಕೊನೆಯಲ್ಲಿ ಚೀನಾದಲ್ಲಿ ನಡೆಯಲಿರುವ ಶಾಂಘೈ ಕೋ-ಆಪರೇಶನ್ ಶೃಂಗದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವ ಸಾಧ್ಯತೆ ಬಹಳ ಹೆಚ್ಚಾಗಿದೆ. ಅವರು ಚೀನಾಗೆ ಹೋಗುತ್ತಾರೆ ಎನ್ನುವುದು ಸುದ್ದಿಯಾಗಿದೆ. ಆದರೆ ಅದಕ್ಕೆ ಪೂರಕವಾದ ಅಧಿಕೃತ ಹೇಳಿಕೆ ಇನ್ನೂ ಪ್ರಧಾನಿ ಕಚೇರಿಯಿಂದ ಹೊರಬಿದ್ದಿಲ್ಲ. ನೀವು ಇತ್ತೀಚಿನ ದಿನಗಳಲ್ಲಿ ಟ್ರಂಪ್ ಮಾತುಗಳನ್ನು ಗಮನಿಸುತ್ತಿದ್ದರೆ ಒಂದು ಅಂಶ ನಿಮಗೆ ಚನ್ನಾಗಿ ಗೊತ್ತಾಗಿರುತ್ತದೆ. ಆತ ಆಡುತ್ತಿರುವುದು ಮೈಂಡ್ ಗೇಮ್ , ಸೈಕಲಾಜಿಕಲ್ ಗೇಮ್. ಅಮೆರಿಕಾ ಇಂದಿಗೂ ಬಲಿಷ್ಠ , ನಾವು ಹೇಳಿದಂತೆ ಜಗತ್ತು ಕೇಳಬೇಕು. ಕೇಳುತ್ತದೆ ಎನ್ನುವ ಸುಪ್ರಿಮೆಸಿಯನ್ನು ಸ್ಥಾಪಿಸುವ ಹುನ್ನಾರ ಆತನದು. ಜಗತ್ತಿನಲ್ಲಿ ಅಮೆರಿಕಾದ ಕುಸಿಯುತ್ತಿರುವ ಶಕ್ತಿಯ ಬಗ್ಗೆ ಮಾತಾಡುತ್ತಿರುವಾಗ ಈ ರೀತಿ ಮಾಡುವುದು ಆತನ ಕರ್ತವ್ಯ. ಆದರೆ ಭಾರತದ ವಿದೇಶಾಂಗ ಮಂತ್ರಿ ಜೈ ಶಂಕರ್ ಅವರು ಅಮೆರಿಕಾವನ್ನು ಕಂಡು ಬಹಳಷ್ಟು ದೇಶಗಳು ಇಂದಿಗೂ ಹೆದರಿಕೊಳ್ಳಬಹುದು. ಆದರೆ ಭಾರತವಲ್ಲ ಎನ್ನುವ ದಿಟ್ಟ ಮಾತುಗಳನ್ನು ಆಡಿದ್ದಾರೆ. ಟ್ರಂಪ್ ಒಂದು ದಿನದ ಹಿಂದೆ ಭಾರತದ ಮೇಲೆ ಇನ್ನಷ್ಟು ಸುಂಕ ಹೇರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಹಿನ್ನಲೆಯಲ್ಲಿ ಮೋದಿಯವರ ಚೀನಾ ಭೇಟಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಮೋದಿಯವರು ಚೀನಾಕ್ಕೆ ಭೇಟಿ ನೀಡಬಹುದು ಅಥವಾ ನೀಡದೆ ಇರಬಹುದು. ಆದರೆ ಸೈಕಲಾಜಿಕಲ್ ಗೇಮ್ ನಮಗೂ ಆಡಲು ಬರುತ್ತದೆ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ.
ಗಮನಿಸಿ ನೋಡಿ, ಅಮೇರಿಕಾಗೆ ಚೆನ್ನಾಗಿ ಗೊತ್ತಿದೆ ಭಾರತ ರಷ್ಯಾದ ತೈಲವನ್ನು ಖರೀದಿ ಮಾಡುವುದು ನಿಲ್ಲಿಸುವುದಿಲ್ಲವೆಂದು ಮತ್ತು ಭಾರತ ಮತ್ತು ರಷ್ಯಾದ ನಂಟು ಗಟ್ಟಿಯಾಗಿದೆ ಎನ್ನುವುದೂ ಅದಕ್ಕೆ ಗೊತ್ತಿದೆ. ಅದೇ ಸಮಯದಲ್ಲಿ ಭಾರತ ಚೀನಾದ ಜೊತೆ ಉತ್ತಮ ಸಂಬಂಧ ಹೊಂದಿಲ್ಲ ಎನ್ನುವುದು ಕೂಡ ಅದಕ್ಕೆ ಗೊತ್ತಿದೆ. ಈ ಕಾರಣವನ್ನು ಹಿಡಿದು ಕೊಂಡು ಅದು ತನ್ನ ಗೇಮ್ ಸಿದ್ದ ಪಡಿಸಿಕೊಳ್ಳುತ್ತಿದೆ. ಈಗ ಮೋದಿಯವರು ಚೀನಾ ದೇಶಕ್ಕೆ ಭೇಟಿ ನೀಡಿದರೆ ಆಗ ಅದು ಅಮೆರಿಕಾದ ಗೇಮ್ ಪ್ಲಾನಿನನ್ನು ನುಚ್ಚುನೂರು ಮಾಡುತ್ತದೆ. ಏಕೆಂದರೆ ಅವರ ಲೆಕ್ಕಾಚಾರದ ಪ್ರಕಾರ ಬ್ರಿಕ್ಸ್ ಹೆಸರಿಗಷ್ಟೇ ಒಕ್ಕೊಟ, ಅಲ್ಲಿ ಭಾರತ ಮತ್ತು ಚೀನಾ ಎರಡೂ ಒಂದು ವಿಷಯದ ಬಗ್ಗೆ ಸಮ್ಮತ್ತಿಸುವುದು ಸಾಧ್ಯವಿಲ್ಲ ಎನ್ನುವುದು. ಅಮೆರಿಕಾದ ಉಳಿವಿಗೆ ಮತ್ತು ಅದರ ಡಾಮಿನೇನ್ಸ್ ಉಳಿದುಕೊಳ್ಳಲು ಇರುವ ಸಣ್ಣ ಆಸರೆ ಇದೊಂದೇ!
ರಷ್ಯಾ ಅಮೇರಿಕಾ ದೇಶದ ಬಹಳ ಹಳೆಯ ಶತ್ರು. ಹೌದು ಎಲ್ಲಾ ವಲಯದಲ್ಲೂ ಅದು ಅಮೆರಿಕಕ್ಕೆ ಶತ್ರು ದೇಶ. ಚೀನಾ ಶತ್ರು ಅಲ್ಲದಿದ್ದರೂ ಇಂದಿಗೆ ಅದು ಅಮೇರಿಕಾ ದೇಶಕ್ಕೆ ಠಕ್ಕರ್ ಕೊಡುವ ಮಟ್ಟಕ್ಕೆ ಬೆಳೆದ ಕಾರಣ ಅದು ಕೂಡ ಶತ್ರುವಾಗಿ ಮಾರ್ಪಾಟಾಗಿದೆ. ಇನ್ನು ಭಾರತ ಅಮೆರಿಕಾದ ತಾಳಕ್ಕೆ ಕುಣಿಯುವುದನ್ನು ನಿಲ್ಲಿಸಿರುವ ಕಾರಣ ಶತ್ರುವಾಗಿ ಮಾರ್ಪಾಟಾಗಿದೆ. ಅಮೇರಿಕಾ ತನ್ನ ಸುಪ್ರಿಮೆಸಿ ಉಳಿಸಿಕೊಳ್ಳುವ ಕೊನೆಯ ಅವಕಾಶ ಇರುವುದು ಭಾರತದ ಕೈಯಲ್ಲಿ . ಹೌದು ಭಾರತ ,ಚೀನಾ ಮತ್ತು ರಷ್ಯಾ ಹಲವಾರು ವಿಷಯಗಳಲ್ಲಿ ಕುಳಿತು ಮಾತುಕತೆಯಾಡಿ ಸಮ್ಮತಕ್ಕೆ ಬಂದರೆ ಅಲ್ಲಿಗೆ ಅದು ಅಮೆರಿಕಾದ ಕುಸಿತಕ್ಕೆ ಹೊಡೆಯುವ ಕೊನೆಯ ಮೊಳೆಯಾಗುತ್ತದೆ.
ನ್ಯೂ ವರ್ಲ್ಡ್ ಆರ್ಡರ್ ರಿಸೆಟ್ ಬಟನ್ ಭಾರತದ ಕೈಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಕೈಲಿದೆ. ಈ ತಿಂಗಳ ಕೊನೆಯಲ್ಲಿ ಅವರು ಚೀನಾಕ್ಕೆ ಹೋಗುವ ಸುದ್ದಿ ಅಮೆರಿಕಾದ ಸ್ಟಾರ್ಟಾರ್ಜಿಸ್ಟ್ ಗಳ ನಿದ್ದೆಯನ್ನು ಕದ್ದಿರುತ್ತದೆ. ಅವರು ಅಲ್ಲಿಗೆ ಹೋಗದಂತೆ ತಡೆಯಲು ಏನು ಮಾಡಬೇಕು ಎನ್ನುವ ತಂತ್ರವನ್ನು ಅವರು ಹಣಿಯುತ್ತಿರುತ್ತಾರೆ. ಹಾಗೊಮ್ಮೆ ಮೋದಿಯವರರು ಚೀನಾಕ್ಕೆ ಹೋದರೆ ಮತ್ತು ಚೀನಾ ಮತ್ತು ಭಾರತ ಒಂದಾಗಿ ಬ್ರಿಕ್ಸ್ ಕರೆನ್ಸಿಗೆ ಹಸಿರು ನಿಶಾನೆ ತೋರಿಸಿದರೆ ಅಲ್ಲಿಗೆ ಡಾಲರ್ ಕುಸಿತ ಶುರು ಎಂದರ್ಥ. ಇದರ ಜೊತೆಗೆ ಟ್ರಂಪ್ ಮಹಾಶಯನ ತೆರಿಗೆ ಕೂಗಾಟ ಅರ್ಥವನ್ನು ಕಳೆದುಕೊಳ್ಳುತ್ತದೆ. ಇಂದಿಗೆ ಜಗತ್ತು ಅಮೇರಿಕಾ ಹೊರತುಪಡಿಸಿ ಬದುಕುವ ತಾಕತ್ತು ಪಡೆದುಕೊಂಡಿವೆ. ಆದರೆ ಅಮೇರಿಕಾ ಜಗತ್ತಿನ ದೇಶಗಳನ್ನು ಬಿಟ್ಟು ಬದುಕಲಾರದ ಸ್ಥಿತಿಯನ್ನು ತಲುಪಿದೆ. ಟ್ರಂಪ್ ತೆರಿಗೆ ಯುದ್ದದಿಂದ ಬೇಸತ್ತಿರುವ ಎಲ್ಲಾ ದೇಶಗಳೂ ಬ್ರಿಕ್ಸ್ ನೊಂದಿಗೆ ವ್ಯಾಪಾರ ಮಾಡಲು ಶುರು ಮಾಡಿದರೆ ಅಮೇರಿಕಾ ಕುಸಿತ ಶತಸಿದ್ಧ. ಒಂದಷ್ಟು ವರ್ಷದಲ್ಲಿ ಅಮೇರಿಕದ ರಾಜ್ಯಭಾರ ಚರಿತ್ರೆಯ ಪುಟಗಳನ್ನು ಸೇರಿಕೊಳ್ಳುತ್ತದೆ.
ಸದ್ಯದ ಮಟ್ಟಿಗೆ ಅಮೆರಿಕಾದ ಬಲವಿರುವುದು ರಷ್ಯಾ -ಭಾರತ ಮತ್ತು ಚೀನಾ ಸಂಘಟಿತರಾಗಿಲ್ಲದೆ ಇರುವುದರಲ್ಲಿದೆ. ಈ ಕಾರಣವೊಂದೇ ಅಮೆರಿಕಾವನ್ನು ಕುಸಿತದಿಂದ ಕೂಡ ಪಾರುಮಾಡಬಲ್ಲದು. ಆಕಸ್ಮಾತ್ ಭಾರತ ಮನಸ್ಸು ಮಾಡಿ ಚೀನಾದ ಜೊತೆಗೆ ಒಪ್ಪಂದಗಳನ್ನು ಮಾಡಿಕೊಂಡರೆ ಅದು ಹೊಸ ಜಾಗತಿಕ ಶಕ್ತಿಯ ಉದಯಕ್ಕೆ ಕಾರಣವಾಗುತ್ತದೆ. ಭಾರತದ ಪ್ರಧಾನಿಯವರ ಚೀನಾ ಪ್ರವಾಸ ಅದೇಕೆ ಮುಖ್ಯವಾಗುತ್ತದೆ ಎನ್ನುವುದನ್ನು ನೋಡೋಣ
ಏಳು ವರ್ಷಗಳ ನಂತರ ಪ್ರಥಮ ಬಾರಿಗೆ ಚೀನಾ ಪ್ರವಾಸ ಕೈಗೊಂಡಿರುವುದು ಜಾಲಿ ಟ್ರಿಪ್ ಅಂತೂ ಆಗಿರುವುದಿಲ್ಲ. 2020 ರಲ್ಲಿ ಆದ ಗಾಲ್ವಾನ್ ಘರ್ಷಣೆಯ ನಂತರದ ಮೊದಲ ಭೇಟಿ ಕೂಡ ಹೌದು. ಚೀನಾ ಭಾರತದೊಂದಿಗೆ ತೆಗೆಯುವ ಗಡಿ ತಗಾದೆಯನ್ನು ನಿಲ್ಲಿಸುವಂತೆ ಭಾರತ ಹೇಳಬಹುದು. ಗಡಿ ತಗಾದೆ ತಕ್ಷಣ ನಿಲ್ಲದಿದ್ದರೂ ಮಾತುಕತೆಯ ಕಾರಣ ಅದರ ತೀಕ್ಷಣತೆ ಕಡಿಯಾಗುತ್ತದೆ.
ಪಾಶ್ಚಾತ್ಯ ದೇಶಗಳು ಅದರಲ್ಲೂ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ್ದ ಯೂರೋಪಿಯನ್ ಯೂನಿಯನ್ ಮತ್ತು ಅಮೇರಿಕಾ ಸದ್ಯದ ಮಟ್ಟಿಗೆ ಮತ್ತೆ ಮಿತ್ರರಾಗಿದ್ದರೆ. ಅದು ಒಮ್ಮುಖ ಲಾಭದಲ್ಲಿರುವ ಕಾರಣ ಅವರ ಸಂಬಂಧದಲ್ಲಿ ಯಾವಾಗ ಬೇಕಾದರೂ ಬಿರುಕು ಮೂಡಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರೆಲ್ಲರ ಒಗ್ಗಟ್ಟಿನ ಮೂಲಕ ಭಾರತದ ಮೇಲೆ ಹೇರುತ್ತಿರುವ ಒತ್ತಡಕ್ಕೆ ಭಾರತದ ಉತ್ತರ ಚೀನಾ ಪ್ರವಾಸ. ಭಾರತ ನೀವೆಂದು ಕೊಂಡಂತೆ ಚೀನಾದ ಜೊತೆ ಕೈ ಜೋಡಿಸುವುದಿಲ್ಲ ಎನ್ನುವುದು ಸುಳ್ಳು. ತನ್ನ ದೇಶದ , ಜನರ ಹಿತ ರಕ್ಷಣೆಗೆ , ಭಾರತದ ಲಾಭಕ್ಕೆ ಚೀನಾದ ಜೊತೆ ಕೈ ಜೋಡಿಸಬೇಕಾದರೆ ಅದಕ್ಕೂ ಸೈ ಎನ್ನುವ ಸಂದೇಶವನ್ನು ಭಾರತ ಸರಕಾರ ಪಾಶ್ಚಾತ್ಯ ದೇಶಗಳಿಗೆ ನೀಡುತ್ತಿದೆ. ಇದೇನಾದರೂ ನಿಜವಾದರೆ , ಈ ನೆಡೆ ಗೇಮ್ ಚೇಂಜರ್ ಆಗುವುದರಲ್ಲಿ ಸಂಶಯವಿಲ್ಲ.
ಬ್ರಿಕ್ಸ್ ಕರೆನ್ಸಿ ಉಗಮಕ್ಕೆ ಸಿದ್ಧತೆ ಕೂಡ ಆಗಬಲ್ಲದು. 2026ರ ಬ್ರಿಕ್ಸ್ ಸಮಾವೇಶಕ್ಕೆ ಇದು ರಂಗಸ್ಥಳವನ್ನು ಸಿದ್ಧಪಡಿಸುವ ನಡೆ ಕೂಡ ಆಗಿರಲಿದೆ. ಚೀನಾ ಈಗಾಗಲೇ ಸಾವಿರಾರು ಕೋಟಿ ಹಣವನ್ನು ವ್ಯಯಿಸಿ ಬ್ರಿಕ್ಸ್ ಕರೆನ್ಸಿ ಉಪಯೋಗಿಸಲು ಬೇಕಾಗುವ ಗೇಟ್ ವೇ ಯನ್ನು ಸಿದ್ಧಪಡಿಸಿದೆ. ಭಾರತ ಕೂಡ ಡಿಜಿಟಲ್ ಪೇಮೆಂಟ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಹೀಗಾಗಿ ಈ ಭೇಟಿ ಬ್ರಿಕ್ಸ್ ಕರೆನ್ಸಿ ಉಗಮಕ್ಕೆ ಮುನ್ನಡಿಯನ್ನು ಹಾಕಲಿದೆ. ಅದು ಜಗತ್ತು ವ್ಯಾಪಾರ ಮಾಡುವ ರೀತಿಯನ್ನು ಸಂಪೂರ್ಣ ಬದಲಿಸಲಿದೆ.
ಪಾಕಿಸ್ತಾವನ್ನು ಸದ್ಯದ ಮಟ್ಟಿಗೆ ಚೀನಾ ಮತ್ತು ಅಮೇರಿಕಾ ಏಜೆಂಟ್ಗಳು ನಡೆಸುತ್ತಿದ್ದಾರೆ. ಪಾಕಿಸ್ತಾನದ ಮೂಲಕ ಭಾರತವನ್ನು ಪ್ರವೇಶಿಸುವ ಭಯೋತ್ಪಾದನೆ ಬಗ್ಗೆ ಕೂಡ ಪ್ರಸ್ತಾಪ ಅನಿವಾರ್ಯವಾಗುತ್ತದೆ. ಪಾಕಿಸ್ತಾನದಲ್ಲಿ ಒಳ್ಳೆಯ ಶಕ್ತಿಶಾಲಿ ನಾಯಕನಿಲ್ಲದ ಕಾರಣ ಮತ್ತು ಅಲ್ಲಿನ ಶಕ್ತಿ ವಿಕೇಂದ್ರೀಕರಣವಾಗಿರುವ ಕಾರಣ ಅಲ್ಲಿ ಭಾರತ , ಅಮೇರಿಕಾ ಮತ್ತು ಚೀನಾ ದೇಶದ ಏಜೆಂಟ್ ಗಳು ತುಂಬಿದ್ದಾರೆ. ಆ ನೆಲವನ್ನು ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಹೊಸ ಜಾಗತಿಕ ವ್ಯವಸ್ಥೆ ಜಾರಿಗೆ ಬಂದ ತಕ್ಷಣ ಪಾಕಿಸ್ತಾನ ಎನ್ನುವುದು ಛಿದ್ರವಾಗುತ್ತದೆ. ಅದೊಂದು ದೇಶವಾಗಿ ಉಳಿದುಕೊಳ್ಳುವ ಸಾಧ್ಯತೆ ಕಡಿಮೆ. ಚೀನಾದ ಜೊತೆಗಿನ ಒಪ್ಪಂದ ಬಹಳಷ್ಟು ಭಯೋತ್ಪಾದನೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಚೀನಾ ಮತ್ತು ಭಾರತ ಒಂದಾಗಿ ಜಂಟಿ ಕಾರ್ಯಾಚರಣೆ ಮಾಡಿದರೆ ಅಮೇರಿಕಾ ಪಾಕಿಸ್ತಾನದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತದೆ.
ಭಾರತ ಸದ್ಯದ ಮಟ್ಟಿಗೆ ಅಮೇರಿಕಾ, ಚೀನಾ ಮತ್ತು ಜಪಾನ್ ದೇಶಗಳ ನಂತರ ಆರ್ಥಿಕ ಶಕ್ತಿಯಾಗಿದೆ. ಜಪಾನ್ ದೇಶವನ್ನು ಹಿಂದಿಕ್ಕುವುದು ಬಹಳ ದೊಡ್ಡ ವಿಷಯವಲ್ಲ ಅದನ್ನು ಭಾರತ ಇನ್ನೊಂದೆರೆಡು ವರ್ಷದಲ್ಲಿ ಸಾಧಿಸಿಬಿಡುತ್ತದೆ. ಆಗ ಜಗತ್ತಿನ ಮೂರು ಅತೀ ದೊಡ್ಡ ಆರ್ಥಿಕ ಶಕ್ತಿಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಮತ್ತು ಚೀನಾ ಎರಡನೇ ಸ್ಥಾನದಲ್ಲಿ ಇರುತ್ತದೆ. ಇವೆರೆಡೂ ದೇಶಗಳು ಸಮ್ಮತದಿಂದ ಇದ್ದರೆ ಚೀನಾ ಜಗತ್ತಿನ ಪ್ರಥಮ ಸ್ಥಾನವನ್ನು ಮತ್ತು ಭಾರತ ಎರಡನೇ ಸ್ಥಾನವನ್ನು ಇನ್ನೊಂದು ದಶಕದಲ್ಲಿ ಪಡೆದುಕೊಳ್ಳಬಲ್ಲವು. ಇವತ್ತಿಗೆ ಇವತ್ತೇ ಅಮೇರಿಕಾ ಓಟಕ್ಕೆ ಬ್ರೇಕ್ ಹಾಕುವ ಶಕ್ತಿ ಇರುವುದು ಕೇವಲ ಚೀನಾ ಮತ್ತು ಭಾರತಕ್ಕೆ ಮಾತ್ರ. ಅದರಲ್ಲೂ ರಿಸೆಟ್ ಬಟನ್ ರಿಮೋಟ್ ಇರುವುದು ಭಾರತದ ಕೈಯಲ್ಲಿ! ಭಾರತ ಮನಸ್ಸು ಮಾಡಿ ಒಂದೆಜ್ಜೆ ಮುಂದೆ ಹೋಗಿ ಚೀನಾದ ಕೈ ಕುಲುಕಬೇಕಿದೆ.
ನಿಮಗೆಲ್ಲ ಗೊತ್ತಿರುತ್ತದೆ, ಕಳೆದ ತಿಂಗಳು ಜೈಶಂಕರ್ ಚೀನಾದ ಅಧ್ಯಕ್ಷ ಜಿ ಪಿಂಗ್ ಅವರನ್ನು ಭೇಟಿ ಮಾಡಿದ್ದರು. ಆ ಭೇಟಿ ಸುಮ್ಮನೆ ಕುಳಿತು ಬರುವುದಕ್ಕೆ ಆದದ್ದಲ್ಲ. ಆಗಸ್ಟ್ ತಿಂಗಳ ಕೊನೆಗೆ ಮೋದಿಯವರ ಚೀನಾ ಭೇಟಿಯ ಅಡಿಪಾಯವನ್ನು ಅವರು ಹಾಕಿ ಬಂದಿದ್ದಾರೆ. ಟೇಬಲ್ ಮುಂದೆ ಕುಳಿತಾಗ ಮಾತುಕತೆಯಲ್ಲಿ ನೀವೆಷ್ಟು ಬಿಟ್ಟು ಕೊಡಲು ಸಿದ್ದ ಎನ್ನುವುದನ್ನು ಚೀನಾದಿಂದ ತಿಳಿದು ಕೊಂಡ ನಂತರವಷ್ಟೇ ಈ ವೇದಿಕೆ ಸಿದ್ಧವಾಗಿದೆ. ಮಾತುಕತೆಯಲ್ಲಿ ಭಾರತಕ್ಕೂ ಲಾಭವಾಗುವಂತಿರಬೇಕು. ಇವತ್ತು ಕೇವಲ ಅಮೆರಿಕಾವನ್ನು ಮಟ್ಟ ಹಾಕಬೇಕು ಎನ್ನುವ ಕಾರಣದಿಂದ ಚೀನಾದ ಜೊತೆ ಬೇಷರತ್ತು ಕೈ ಜೋಡಿಸಿದರೆ ಏನಾಗುತ್ತದೆ ಎನ್ನುವುದರ ಅರಿವು ಈಗಿನ ಸರಕಾರಕ್ಕಿದೆ. ಹೀಗಾಗಿ ಅದು ನೆಗೋಷಿಯೇಷನ್ಗೆ ಇಳಿದಿದೆ. ಒಮ್ಮೆ ಬ್ರಿಕ್ಸ್ ಕರೆನ್ಸಿ ಬೇಡ ಎನ್ನುವುದರ ಮೂಲಕ ಚೀನಾಗೆ ಚುರುಕು ಮುಟ್ಟಿಸಿದೆ. ಏಕಮುಖ ನಿಲುವುಗಳಿಗೆ , ನಿರ್ಧಾರಗಳಿಗೆ ನಾನು ಬಗ್ಗುವುದಿಲ್ಲ ಎನ್ನುವುದನ್ನು ಭಾರತ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಈ ಬಾರಿ ಚೀನಾ ಕೂಡ ಮೆತ್ತಗಾಗಿದೆ.
ಹೋಗುವ ಮುನ್ನ: ಇವತ್ತಿನ ಕಾಲಘಟ್ಟದಲ್ಲಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತವನ್ನು ಬಿಟ್ಟು ಯಾರೊಬ್ಬರೂ ವ್ಯಾಪಾರವನ್ನು ಮಾಡಲಾಗದು. ಅಮೆರಿಕಕ್ಕೆ ಭಾರತದ ಸಹಕಾರದ ಅವಶ್ಯಕತೆ ಬಹಳವಿದೆ. ಆದರೆ ಟ್ರಂಪ್ ತಮ್ಮ ಉದ್ದಟತನದ ಮಾತುಗಳಿಂದ ಮತ್ತು ಜಗತ್ತಿಗೆ ನಾನೇ ಇಂದಿಗೂ ದೊಡ್ಡಣ್ಣ ಎನ್ನುವ ಕೆಟ್ಟ ಮನೋಭಾವದಿಂದ ಭಾರತವನ್ನು ಕಳೆದುಕೊಂಡಿದ್ದಾರೆ. ಭಾರತ ಸರಕಾರ ಟ್ರಂಪ್ ಹೇಳಿದ್ದಕ್ಕೆಲ್ಲಾ ಸೊಪ್ಪು ಹಾಕುವ ಸ್ಥಿತಿಯಿಂದ ಬಹುದೂರ ಸಾಗಿ ಬಂದಿದೆ. ಇತ್ತ ಚೀನಾಕ್ಕೆ ಕೂಡ ಅಮೆರಿಕಾದ ಮೇಲೆ ಕೊನೆಯ ಮತ್ತು ಅಂತಿಮ ಪ್ರಹಾರ ನಡೆಸಲು ಭಾರತ ಬೇಕೇಬೇಕು. ಭಾರತದ ಇಂದಿನ ನಡೆ ಮುಂದಿನ ಅದರ ಭವಿಷ್ಯವನ್ನು ಬರೆಯಲಿದೆ.ಹೀಗಾಗಿ ಮುಂದಿನ ಒಂದೆರೆಡು ವರ್ಷ ಈ ತಿಕ್ಕಾಟವನ್ನು , ಅಸ್ಥಿರತೆಯನ್ನು ಜಗತ್ತು ಸಹಿಸಿಕೊಳ್ಳದೆ ಬೇರೆ ದಾರಿಯಿಲ್ಲ.