ಮೋದಿ-ಟ್ರಂಪ್ ಸಭೆ  online desk
ಅಂಕಣಗಳು

ದ್ವಿಪಕ್ಷೀಯ ಸಂಬಂಧ ವೃದ್ಧಿ: ಮೋದಿ-ಟ್ರಂಪ್ ಭೇಟಿಯ ಪರಿಣಾಮಗಳೇನು? (ಜಾಗತಿಕ ಜಗಲಿ)

ಈ ಮಾತುಕತೆಯ ಇನ್ನೊಂದು ಮುಖ್ಯ ಅಂಶವೆಂದರೆ, ಇಂಧನ ಸಹಕಾರ. ಅದರಲ್ಲೂ, ತೈಲ ಮತ್ತು ಅನಿಲ ರಫ್ತಿನ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ಫೆಬ್ರವರಿ 13ರಂದು ಶ್ವೇತ ಭವನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ನಡೆದ ಸಭೆ ಭಾರತ ಮತ್ತು ಅಮೆರಿಕಾಗಳ ನಡುವೆ ವೃದ್ಧಿಸುತ್ತಿರುವ ದ್ವಿಪಕ್ಷೀಯ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲಾಗಿತ್ತು. ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಭೇಟಿಯಾದ ನಾಲ್ಕನೇ ಜಾಗತಿಕ ನಾಯಕ ನರೇಂದ್ರ ಮೋದಿ. ಇದು ಅಮೆರಿಕಾದ ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ಪ್ರಾಧಾನ್ಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಭೇಟಿ ವ್ಯಾಪಾರ, ರಕ್ಷಣೆ, ಇಂಧನ ಮತ್ತು ಬಾಹ್ಯಾಕಾಶ ಅನ್ವೇಷಣೆಯಂತಹ ಮಹತ್ವದ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಸಾಧಿಸುವಲ್ಲಿ ಉಭಯ ರಾಷ್ಟ್ರಗಳ ಬದ್ಧತೆಯನ್ನು ಮತ್ತೊಮ್ಮೆ ಖಾತ್ರಿಪಡಿಸಿದೆ.

ವ್ಯಾಪಾರ ಮತ್ತು ಆರ್ಥಿಕ ಅಭಿವೃದ್ಧಿ: 500 ಬಿಲಿಯನ್ ಡಾಲರ್ ಗುರಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಭೇಟಿಯ ಮುಖ್ಯ ವಿಚಾರಗಳಲ್ಲಿ ಆರ್ಥಿಕ ಬಾಂಧವ್ಯ ವೃದ್ಧಿಯತ್ತ ಗಮನ ಹರಿಸುವುದೂ ಮುಖ್ಯವಾಗಿತ್ತು. ವರದಿಗಳ ಪ್ರಕಾರ, ಉಭಯ ನಾಯಕರು 2030ರ ವೇಳೆಗೆ ಭಾರತ - ಅಮೆರಿಕಾ ದ್ವಿಪಕ್ಷೀಯ ವ್ಯಾಪಾರ 500 ಬಿಲಿಯನ್ ಡಾಲರ್‌ಗಳಷ್ಟು ಮೌಲ್ಯವನ್ನು ತಲುಪಬೇಕೆಂಬ ಮಹತ್ವಾಕಾಂಕ್ಷಿ ಗುರಿಯನ್ನು ವ್ಯಕ್ತಪಡಿಸಿದ್ದಾರೆ. ಈ ಮಾತುಕತೆ ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ತಂತ್ರಜ್ಞಾನದ ಪ್ರಗತಿ ಮತ್ತು ಔದ್ಯಮಿಕ ಅಭಿವೃದ್ಧಿಗೆ ಅವಶ್ಯಕವಾದ ಮುಖ್ಯ ಖನಿಜಗಳಂತಹ ವಿಚಾರಗಳನ್ನು ಒಳಗೊಂಡಿತ್ತು.

ಪ್ರಸ್ತುತ, ಭಾರತ ಮತ್ತು ಅಮೆರಿಕಾಗಳ ನಡುವಿನ ವ್ಯಾಪಾರ ಮೌಲ್ಯ ಅಂದಾಜು 129 ಬಿಲಿಯನ್ ಡಾಲರ್ ಆಗಿದೆ. ಈ ವ್ಯಾಪಾರದಲ್ಲಿ ಭಾರತ 45.7 ಬಿಲಿಯನ್ ವ್ಯಾಪಾರ ಉಳಿಕೆಯನ್ನು ಹೊಂದಿದೆ. ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿರುವ ಅಮೆರಿಕಾ, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಆರ್ಥಿಕ ಪ್ರಗತಿ ಮತ್ತು ಭಾರತ ನಿರ್ವಹಿಸುತ್ತಿರುವ ಮಹತ್ವದ ಪಾತ್ರವನ್ನು ಗುರುತಿಸಿದೆ. ಉಭಯ ನಾಯಕರ ಭೇಟಿಯ ವೇಳೆ ಸುಂಕದ ವಿಚಾರವೂ ಚರ್ಚೆಗೊಳಗಾಗಿದ್ದು, ಕೆಲವು ಆಮದಿನ ಮೇಲೆ ಸುಂಕವನ್ನು ಕಡಿಮೆಗೊಳಿಸುವ ಭಾರತದ ನಿರ್ಧಾರವನ್ನು ಟ್ರಂಪ್ ಶ್ಲಾಘಿಸಿದ್ದಾರೆ. ಆದರೆ, ಟ್ರಂಪ್ ಈ ಭೇಟಿಗೆ ಮುನ್ನ 'ರೆಸಿಪ್ರೋಕಲ್ ಟಾರಿಫ್' ಎನ್ನುವ ಸುಂಕವನ್ನು ಪರಿಚಯಿಸಿದ್ದು, ಭಾರತ ವಿಧಿಸುವಷ್ಟೇ ಪ್ರಮಾಣದ ಸುಂಕವನ್ನು ಅಮೆರಿಕಾ ಸಹ ವಿಧಿಸಿಲಿದೆ ಎಂಬ ಸಂದೇಶ ನೀಡಿದ್ದಾರೆ.

ಈ ಮಾತುಕತೆಯ ಇನ್ನೊಂದು ಮುಖ್ಯ ಅಂಶವೆಂದರೆ, ಇಂಧನ ಸಹಕಾರ. ಅದರಲ್ಲೂ, ತೈಲ ಮತ್ತು ಅನಿಲ ರಫ್ತಿನ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಅಮೆರಿಕಾದ ತೈಲ ಮತ್ತು ಅನಿಲವನ್ನು ಭಾರತಕ್ಕೆ ಮಾರಾಟ ಮಾಡುವುದರಿಂದ ವ್ಯಾಪಾರ ಕೊರತೆಯನ್ನು ಸರಿಪಡಿಸಲು ನೆರವಾಗುತ್ತದೆ ಮತ್ತು ಹೆಚ್ಚು ಸಮತೋಲನದ ಆರ್ಥಿಕ ಸಂಬಂಧ ಹೊಂದಲು ಸಾಧ್ಯವಾಗುತ್ತದೆ ಎಂದು ಟ್ರಂಪ್ ಅಭಿಪ್ರಾಯ ಪಟ್ಟಿದ್ದಾರೆ. ಈ ವಿಧಾನ ಭಾರತದ ದೀರ್ಘಾವಧಿಯ ಇಂಧನ ಭದ್ರತಾ ಗುರಿಗಳಿಗೆ ಪೂರಕವಾಗಿದ್ದು, ಭಾರತ ತನ್ನ ಇಂಧನವನ್ನು ವಿವಿಧ ಸಂಪನ್ಮೂಲಗಳಿಂದ ಸಂಪಾದಿಸಿ, ಆ ಮೂಲಕ ಮಧ್ಯ ಪೂರ್ವದ ಮೇಲಿನ ಇಂಧನ ಅವಲಂಬನೆಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ.

ರಕ್ಷಣಾ ಸಹಯೋಗ: ಕಾರ್ಯತಂತ್ರದ ಸಹಭಾಗಿತ್ವ ವೃದ್ಧಿ

ರಕ್ಷಣಾ ಸಹಯೋಗ ಇಂದಿಗೂ ಅಮೆರಿಕಾ ಮತ್ತು ಭಾರತಗಳ ದ್ವಿಪಕ್ಷೀಯ ಸಂಬಂಧದ ತಳಹದಿಯಾಗಿದೆ. ಉಭಯ ರಾಷ್ಟ್ರಗಳು ಯುಎಸ್ - ಇಂಡಿಯಾ ಮೇಜರ್ ಡಿಫೆನ್ಸ್ ಪಾರ್ಟ್‌ನರ್ಶಿಪ್ ಫ್ರೇಮ್ ವರ್ಕ್ ಅಡಿಯಲ್ಲಿ ನೂತನವಾದ, ಹತ್ತು ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಈ ಬದ್ಧತೆಯನ್ನು ಪುನರುಚ್ಚರಿಸಿವೆ. ಈ ಒಪ್ಪಂದ ಮಿಲಿಟರಿ ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ವ್ಯಾಪಾರ ಮತ್ತು ಜಂಟಿ ಉತ್ಪಾದನಾ ಯೋಜನೆಗಳನ್ನು ಬಲಪಡಿಸುವ ಗುರಿ ಹೊಂದಿದೆ.

ಭಾರತ ತನ್ನ ಮಿಲಿಟರಿ ಸಾಮರ್ಥ್ಯವನ್ನು ಆಧುನೀಕರಿಸುವ ಸಲುವಾಗಿ ಅಮೆರಿಕಾ ನಿರ್ಮಾಣದ ರಕ್ಷಣಾ ಉಪಕರಣಗಳ ಖರೀದಿಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿತ್ತು. ಭಾರತ ಅಮೆರಿಕಾರಿಂದ ಖರೀದಿಸಿರುವ ರಕ್ಷಣಾ ಉಪಕರಣಗಳಲ್ಲಿ ಸಿ-130ಜೆ ಸೂಪರ್ ಹರ್ಕ್ಯುಲಸ್, ಸಿ-17 ಗ್ಲೋಬ್ ಮಾಸ್ಟರ್ 3, ಪಿ-8ಐ ಪೊಸಿಡನ್ ವಿಮಾನ, ಮತ್ತು ಸಿಎಚ್-47ಎಫ್ ಚಿನೂಕ್, ಎಂಎಚ್-60ಆರ್ ಸೀಹಾಕ್, ಮತ್ತು ಎಎಚ್-64ಇ ಅಪಾಚೆಯಂತಹ ಹೆಲಿಕಾಪ್ಟರ್‌ಗಳು ಸೇರಿವೆ. ಅದರೊಡನೆ, ಭಾರತ ತನ್ನ ಬತ್ತಳಿಕೆಗೆ ಹರ್ಪೂನ್ ಆ್ಯಂಟಿ ಶಿಪ್ ಕ್ಷಿಪಣಿಗಳು, ಎಂ777 ಹವಿಟ್ಜರ್‌ಗಳು, ಮತ್ತು ಎಂಕ್ಯು-9ಬಿ ಡ್ರೋನ್‌ಗಳನ್ನು ಸೇರ್ಪಡೆಗೊಳಿಸಿದೆ.

ಭಾರತದ ಜೊತೆಗಿನ ರಕ್ಷಣಾ ಸಹಯೋಗವನ್ನು ಇನ್ನಷ್ಟು ಉತ್ತಮಪಡಿಸುವ ಸಲುವಾಗಿ, ಅಮೆರಿಕಾ ರಕ್ಷಣಾ ವ್ಯಾಪಾರ ಮತ್ತು ಜಂಟಿ ಉತ್ಪಾದನೆಯನ್ನು ಹೆಚ್ಚಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಜ್ಯಾವಲಿನ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳು ಮತ್ತು ಸ್ಟ್ರೈಕರ್ ಯುದ್ಧ ವಾಹನಗಳನ್ನು ಭಾರತದಲ್ಲೇ ನಿರ್ಮಿಸಲು ನಿರ್ಧಿರಿಸಲಾಗಿದೆ. ಇದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅದರೊಡನೆ, ಆರು ಹೆಚ್ಚುವರಿ ಪಿ-8ಐ ಸಮುದ್ರ ಗಸ್ತು ವಿಮಾನಗಳ ಖರೀದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಇದು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಭಾರತದ ಕಣ್ಗಾವಲು ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.

ರಕ್ಷಣಾ ರಫ್ತು ನಿಯಮಗಳ ಸರಳೀಕರಣ: ಐಟಿಎಆರ್ ಮರು ಪರಿಶೀಲನೆ

ಅಮೆರಿಕಾ ಭಾರತವನ್ನು ಪ್ರಮುಖ ರಕ್ಷಣಾ ಸಹಯೋಗಿ ಎಂದು ಪರಿಗಣಿಸಿದ್ದು, ಭಾರತ ಕ್ವಾಡ್ ಒಕ್ಕೂಟದ ಮುಖ್ಯ ಸದಸ್ಯನಾಗಿದೆ. ಇದರಿಂದಾಗಿ ಉಭಯ ರಾಷ್ಟ್ರಗಳು ಯುಎಸ್ ಇಂಟರ್ನ್ಯಾಷನಲ್ ಟ್ರಾಫಿಕ್ ಇನ್ ಆರ್ಮ್ಸ್ ರೆಗ್ಯುಲೇಶನ್ಸ್ (ಐಟಿಎಆರ್) ಅನ್ನು ಪರಿಶೀಲಿಸಲು ಒಪ್ಪಿಗೆ ಸೂಚಿಸಿವೆ. ಈ ನಿಯಮಗಳು ರಕ್ಷಣಾ ಸಂಬಂಧಿ ಉತ್ಪನ್ನಗಳ ಆಮದು ಮತ್ತು ರಫ್ತುಗಳನ್ನು ನಿಯಂತ್ರಿಸಿ, ಮಿಲಿಟರಿ ತಂತ್ರಜ್ಞಾನಗಳು ಕೇವಲ ಅಧಿಕೃತ ಸಹಯೋಗಿಗಳ ನಡುವೆ ಮಾತ್ರವೇ ಹಂಚಿಕೆಯಾಗುವುದನ್ನು ಖಾತ್ರಿಪಡಿಸುತ್ತವೆ. ಈ ನಿಯಮದ ಪರಿಶೀಲನೆಯಿಂದಾಗಿ, ರಕ್ಷಣಾ ಉಪಕರಣಗಳ ವ್ಯಾಪಾರ ಪ್ರಕ್ರಿಯೆ ಸರಳಗೊಂಡು, ತಂತ್ರಜ್ಞಾನ ವರ್ಗಾವಣೆ ಸುಲಭವಾಗಿ, ಉಪಕರಣಗಳ ಬಿಡಿಭಾಗಗಳು ಮತ್ತು ದುರಸ್ತಿ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಅದರೊಡನೆ, ಮೋದಿ ಮತ್ತು ಟ್ರಂಪ್ ರೆಸಿಪ್ರೋಕಲ್ ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್ (ಆರ್‌ಡಿಪಿ) ಒಪ್ಪಂದದ ಕುರಿತು ಮಾತುಕತೆಗಳನ್ನು ಆರಂಭಿಸಿದ್ದು, ಇವುಗಳು ರಕ್ಷಣಾ ಖರೀದಿ ವ್ಯವಸ್ಥೆಗಳಿಗೆ ಪೂರಕವಾಗಿವೆ. ಇದರಿಂದಾಗಿ ಉಭಯ ದೇಶಗಳು ಬಹಳಷ್ಟು ಸುಲಭ ಮತ್ತು ಸರಳವಾಗಿ ಪರಸ್ಪರ ಮಿಲಿಟರಿ ಸರಕು ಮತ್ತು ಸೇವೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ.

ಐತಿಹಾಸಿಕ ಎಫ್-35 ಯುದ್ಧ ವಿಮಾನ ಒಪ್ಪಂದ

ಈ ಭೇಟಿಯ ಸಂದರ್ಭದಲ್ಲಿ ನಡೆದ ಬಹುದೊಡ್ಡ ಘೋಷಣೆ ಎಂದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಎಫ್-35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸುವ ನಿರ್ಧಾರ ಕೈಗೊಂಡಿರುವುದು. ಈ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಅಮೆರಿಕಾ ನ್ಯಾಟೋ ಸಹಯೋಗಿಗಳು, ಇಸ್ರೇಲ್, ಮತ್ತು ಜಪಾನ್‌ಗಳಿಗೆ ಮಾತ್ರವೇ ಒದಗಿಸುತ್ತಿದ್ದು, ಈಗ ಭಾರತವೂ ಈ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಈ ಘೋಷಣೆ ನಡೆಸಲಾಗಿತ್ತು. ಎಫ್-35 ಯುದ್ಧ ವಿಮಾನ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡು, ಬೆಂಗಳೂರಿನ ಆಗಸದಲ್ಲಿ ತನ್ನ ಪ್ರದರ್ಶನ ತೋರಿ, ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಮಿಲಿಟರಿ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.

ಸ್ವಾಯತ್ತ ರಕ್ಷಣಾ ತಂತ್ರಜ್ಞಾನದಲ್ಲಿ ಪ್ರಗತಿ

ಈ ಭೇಟಿಯ ಸಂದರ್ಭದಲ್ಲಿ, ಅಟಾನಮಸ್ ಸಿಸ್ಟಮ್ಸ್ ಇಂಡಸ್ಟ್ರಿ ಅಲಯನ್ಸ್ (ಎಎಸ್ಐಎ) ಸ್ಥಾಪನೆಗೂ ನಾಂದಿ ಹಾಡಲಾಯಿತು. ಇದು ಸ್ವಾಯತ್ತ ರಕ್ಷಣಾ ತಂತ್ರಜ್ಞಾನದಲ್ಲಿ ಜಂಟಿ ನಾವೀನ್ಯತೆಗಳ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ‌. ಇದರಡಿಯಲ್ಲಿ ನಡೆಸುವ ಪ್ರಮುಖ ಸಹಭಾಗಿತ್ವಗಳೆಂದರೆ:

ಅಂದುರಿಲ್ ಗ್ರೂಪ್ ಮತ್ತು ಮಹಿಂದ್ರಾ ಗ್ರೂಪ್ ಸಹಯೋಗ ಸಾಧಿಸಿ, ಎಐ ಆಧಾರಿತ ಡ್ರೋನ್ ನಿರೋಧಕ ವ್ಯವಸ್ಥೆಗಳು ಮತ್ತು ಸಮುದ್ರ ಭದ್ರತಾ ವ್ಯವಸ್ಥೆಗಳ ಅಭಿವೃದ್ಧಿ ನಡೆಸುವುದು.

ಎಲ್3 ಹ್ಯಾರಿಸ್ ಮತ್ತು ಭಾರತ್ ಇಲೆಕ್ಟ್ರಾನಿಕ್ಸ್ ಸಹಭಾಗಿತ್ವದಲ್ಲಿ ನೌಕಾಪಡೆಯ ಭದ್ರತೆಗಾಗಿ ಆಧುನಿಕ ಆ್ಯಕ್ಟಿವ್ ಟೊವ್ಡ್ ಅರೇ ವ್ಯವಸ್ಥೆಗಳ ನಿರ್ಮಾಣ.

ಇಂತಹ ಸಹಭಾಗಿತ್ವಗಳು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರದ ಸ್ಥಾನವನ್ನು ಭದ್ರಪಡಿಸಿ, ಭಾರತದ ರಕ್ಷಣಾ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲಿವೆ.

ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಮಿಲಿಟರಿ ಅಭ್ಯಾಸ ಮತ್ತು ಭದ್ರತಾ ವೃದ್ಧಿ

ಭಾರತ ಮತ್ತು ಅಮೆರಿಕಾಗಳು ಜಂಟಿ ಮಿಲಿಟರಿ ಅಭ್ಯಾಸವನ್ನು ಇನ್ನಷ್ಟು ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದ್ದು, ಆಗಸ, ಭೂಮಿ, ಸಮುದ್ರ, ಬಾಹ್ಯಾಕಾಶ ಮತ್ತು ಸೈಬರ್ ವಲಯದಲ್ಲಿ ಸಹಕಾರ ಹೆಚ್ಚಿಸಲು ಒಪ್ಪಿಗೆ ಸೂಚಿಸಿವೆ. ಅದರೊಡನೆ, 2019ರಲ್ಲಿ ಮೊದಲ ಬಾರಿಗೆ ನಡೆದಿದ್ದ 'ಟೈಗರ್ ಟ್ರಯಂಫ್' ಮೂರೂ ವಿಭಾಗಗಳ ಮಿಲಿಟರಿ ಅಭ್ಯಾಸದ ಮುಂದಿನ ಆವೃತ್ತಿಯನ್ನು ಭಾರತದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ವರ್ಷದ ಮಿಲಿಟರಿ ಅಭ್ಯಾಸ ಬಹಳಷ್ಟು ದೊಡ್ಡ ವ್ಯಾಪ್ತಿಯದಾಗಿರುವ ನಿರೀಕ್ಷೆಗಳಿದ್ದು, ಹೆಚ್ಚು ಆಧುನಿಕವಾಗಿರಲಿದೆ. ಆ ಮೂಲಕ ಅಮೆರಿಕಾ ಮತ್ತು ಭಾರತಗಳ ಮಿಲಿಟರಿ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ.

ಉಭಯ ದೇಶಗಳು ಸಾಗಾಣಿಕಾ ಸಹಕಾರ, ಗುಪ್ತಚರ ಮಾಹಿತಿ ಹಂಚಿಕೆ, ಮತ್ತು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಮಾನವೀಯ ಯೋಜನೆಗಳಲ್ಲಿ ಸಹಕಾರವನ್ನು ವೃದ್ಧಿಸಲು ನಿರ್ಧಾರ ಕೈಗೊಂಡಿವೆ. ಈ ಪ್ರದೇಶದಲ್ಲಿ ಚೀನಾದ ಮಿಲಿಟರಿ ಉಪಸ್ಥಿತಿ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಭಾರತ ಮತ್ತು ಅಮೆರಿಕಾಗಳ ಪ್ರಯತ್ನಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ.

ಇಂಧನ ಮತ್ತು ಬಾಹ್ಯಾಕಾಶ ಸಹಕಾರ

ಭಾರತ - ಅಮೆರಿಕಾ ಇಂಧನ ಭದ್ರತಾ ಸಹಭಾಗಿತ್ವ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಎರಡೂ ದೇಶಗಳು ಯುಎಸ್ - ಇಂಡಿಯಾ 123 ನಾಗರಿಕ ಪರಮಾಣು ಒಪ್ಪಂದವನ್ನು ಜಾರಿಗೊಳಿಸಲು ಸಿದ್ಧವಾಗಿದ್ದು, ಇದರ ಪರಿಣಾಮವಾಗಿ, ಭಾರತದಲ್ಲಿ ಅಮೆರಿಕನ್ ವಿನ್ಯಾಸದ ಪರಮಾಣು ರಿಯಾಕ್ಟರ್‌ಗಳ ನಿರ್ಮಾಣ ಮತ್ತು ಸ್ಥಾಪನೆ ನೆರವೇರಲಿದೆ. ಅದರೊಡನೆ, ಹೆಚ್ಚು ಸುರಕ್ಷಿತವಾದ, ಹೆಚ್ಚು ದಕ್ಷತೆ ಹೊಂದಿರುವ, ಮತ್ತು ಸಾಂಪ್ರದಾಯಿಕ ಪರಮಾಣು ಘಟಕಗಳಿಗೆ ಹೋಲಿಸಿದರೆ ನಿರ್ಮಿಸಲು ಸುಲಭವೂ ಆಗಿರುವ ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳ (ಎಸ್ಎಂಆರ್) ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ‌ನೀಡಲಾಗುತ್ತಿದೆ.

ಇನ್ನು ಬಾಹ್ಯಾಕಾಶ ಸಹಕಾರದ ವಿಚಾರಕ್ಕೆ ಬಂದರೆ, ಉಭಯ ನಾಯಕರು 2025ರಲ್ಲಿ ಪ್ರಥಮ ಭಾರತೀಯ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸುವ ಕುರಿತು ಸಮಾಲೋಚನೆ ನಡೆಸಿದರು. ಭೂಮಿಯ ಮೇಲ್ಮೈ ಮ್ಯಾಪಿಂಗ್ ನಡೆಸಲು ರೇಡಾರ್ ತಂತ್ರಜ್ಞಾನವನ್ನು ಬಳಸುವ ನಿಸಾರ್ ಯೋಜನೆಯ ರೀತಿಯಲ್ಲಿ ನಾಸಾ - ಇಸ್ರೋದ ಜಂಟಿ ಯೋಜನೆಗಳ ಕುರಿತೂ ಮಾತುಕತೆ ನಡೆಸಲಾಯಿತು. ಈ ವಿಚಾರಗಳ ಜೊತೆಗೆ, ಉಪಗ್ರಹ ವ್ಯವಸ್ಥೆಗಳು, ಬಾಹ್ಯಾಕಾಶ ಪ್ರವಾಸೋದ್ಯಮ, ಮತ್ತು ಆಧುನಿಕ ಬಾಹ್ಯಾಕಾಶ ಸಂಶೋಧನೆಗಳಲ್ಲಿನ ಸಹಕಾರದ ಕುರಿತು ಸಮಾಲೋಚನೆ ನಡೆಸಲಾಯಿತು.

ಭಯೋತ್ಪಾದನಾ ನಿಗ್ರಹ: ಮುಂಬೈ ದಾಳಿ ಶಂಕಿತನ ಹಸ್ತಾಂತರಕ್ಕೆ ಅಮೆರಿಕಾ ಸಮ್ಮತಿ

ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಟ್ರಂಪ್ ಆಡಳಿತ 2008ರ ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ತಹಾವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ಸೂಚಿಸಿದ್ದಾರೆ. ಈ ನಿರ್ಧಾರ ಉಭಯ ದೇಶಗಳ ನಡುವೆ ಭದ್ರತಾ ಸಹಕಾರ ಸಹಯೋಗವನ್ನು ವೃದ್ಧಿಸಲು ನೆರವಾಗಲಿದೆ.

ಭಾರತ-ಚೀನಾ ಉದ್ವಿಗ್ನತೆ ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಸಿದ್ಧ

ಭಾರತ - ಚೀನಾ ಗಡಿ ಉದ್ವಿಗ್ನತೆಯ ವಿಚಾರವನ್ನು ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರು, ಹಿಂಸಾತ್ಮಕ ಘರ್ಷಣೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಅದರೊಡನೆ, ಭಾರತ - ಚೀನಾಗಳ ನಡುವೆ ಶಾಂತಿ ಮಾತುಕತೆಗೆ ಅವಶ್ಯಕತೆ ಇದ್ದರೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಮರಳಿ ಉಚ್ಚರಿಸಿದ್ದಾರೆ. ಆದರೆ, ಭಾರತ ಐತಿಹಾಸಿಕವಾಗಿಯೂ ಬಾಹ್ಯ ಮಧ್ಯಸ್ಥಿಕೆಗಳನ್ನು ತಿರಸ್ಕರಿಸುತ್ತಾ ಬಂದಿದ್ದು, ಇಂತಹ ವಿವಾದಗಳನ್ನು ದ್ವಿಪಕ್ಷೀಯ ಮಾತುಕತೆಗಳಿಂದಲೇ ಪರಿಹರಿಸಲು ಸಾಧ್ಯ ಎಂದು ಅಭಿಪ್ರಾಯ ಹೊಂದಿದೆ.

ಒಟ್ಟಾರೆ, ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಭೇಟಿ ಭಾರತ - ಅಮೆರಿಕಾಗಳ ನಡುವಿನ ಕಾರ್ಯತಂತ್ರದ ಸಹಯೋಗವನ್ನು ಇನ್ನಷ್ಟು ವೃದ್ಧಿಸುವುದರ ಸಾಧ್ಯತೆಗೆ ಬೆಳಕು ಚೆಲ್ಲಿದ್ದು, ವ್ಯಾಪಾರ, ಭದ್ರತೆ, ಇಂಧನ, ಬಾಹ್ಯಾಕಾಶ, ಮತ್ತು ರಕ್ಷಣಾ ಕ್ಷೇತ್ರಗಳಂತಹ ಮುಖ್ಯ ವಿಚಾರಗಳನ್ನು ಒಳಗೊಂಡಿದೆ. ದ್ವಿಪಕ್ಷೀಯ ವ್ಯಾಪಾರವನ್ನು ದುಪ್ಪಟ್ಟುಗೊಳಿಸಲು ನಾಯಕರು ಚರ್ಚಿಸಿದ್ದು, ರಕ್ಷಣಾ ಸಹಕಾರವನ್ನು ಸರಳಗೊಳಿಸುವ ಮಾತುಗಳನ್ನಾಡಿದ್ದಾರೆ. ಅದರೊಡನೆ, ಮಿಲಿಟರಿ ಉತ್ಪಾದನೆಗೆ ಉತ್ತೇಜನ ನೀಡಲಿದ್ದು, ಇಂಡೋ - ಪೆಸಿಫಿಕ್ ಪ್ರದೇಶದ ಭದ್ರತೆಯನ್ನು ವೃದ್ಧಿಸಲಿದ್ದಾರೆ. ಉಭಯ ನಾಯಕರು ಸುದೀರ್ಘ ಸಹಯೋಗಕ್ಕಾಗಿ ಸುಭದ್ರ ತಳಹದಿಯನ್ನು ನಿರ್ಮಿಸಿದ್ದಾರೆ.

ಪ್ರಸ್ತುತ ಭೌಗೋಳಿಕ ರಾಜಕಾರಣದ ಉದ್ವಿಗ್ನತೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಬಾರಿಯ ಭೇಟಿ ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದಕ್ಕೆ ಮತ್ತು ಅಮೆರಿಕಾಗೆ ಭಾರತದ ಕಾರ್ಯತಂತ್ರದ ಮಹತ್ವ ಹೆಚ್ಚಾಗಿರುವುದಕ್ಕೆ ಸಾಕ್ಷಿಯಾಗಿದೆ. ಈ ಭೇಟಿಯ ವೇಳೆ ಕೈಗೊಂಡಿರುವ ಒಪ್ಪಂದಗಳು ಆರ್ಥಿಕ ಪ್ರಗತಿ, ಭದ್ರತೆ, ಮತ್ತು ತಾಂತ್ರಿಕ ಪ್ರಗತಿಗಳ ಕುರಿತು ಉಭಯ ದೇಶಗಳ ಸಮಾನ ದೃಷ್ಟಿಕೋನವನ್ನು ಪ್ರದರ್ಶಿಸಿದ್ದು, ಭಾರತ - ಅಮೆರಿಕಾ ಸಹಯೋಗ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮಗೊಳ್ಳಲಿವೆ ಎಂಬ ಸಂದೇಶ ನೀಡಿವೆ.

- ಗಿರೀಶ್ ಲಿಂಗಣ್ಣ

ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್ ವಿಳಾಸ: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT