ಅಂಕಣಗಳು

ಟ್ರಂಪ್, ಮೋದಿ, ಹಾಗೂ ಭಾರತ-ಅಮೆರಿಕಾ ಬಾಂಧವ್ಯದ ಭವಿಷ್ಯ (ಜಾಗತಿಕ ಜಗಲಿ)

ಕಳೆದ ಒಂದು ದಶಕದ ಅವಧಿಯಲ್ಲಿ, ಭಾರತ ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದಿದ್ದ ಅಲಿಪ್ತ ನೀತಿ ಆಧಾರಿತ ವಿದೇಶಾಂಗ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮರು ರೂಪಿಸುತ್ತಿರುವಂತೆ ಕಂಡುಬರುತ್ತಿದೆ. ಅಲಿಪ್ತ ನೀತಿ ಭಾರತವನ್ನು ಜಾಗತಿಕ ವಿಚಾರಗಳಲ್ಲಿ ಯಾವುದೇ ಪಕ್ಷವನ್ನು ವಹಿಸದಂತೆ ನೋಡಿಕೊಂಡಿತ್ತು. ಆದರೆ ನರೇಂದ್ರ ಮೋದಿಯವರು ಅಲಿಪ್ತ ನೀತಿಯ ಬದಲಿಗೆ, ಬಹುಪಕ್ಷೀಯ (ಮಲ್ಟಿ ಅಲೈನ್ಮೆಂಟ್) ನೀತಿಯನ್ನು ಅನುಸರಿಸುತ್ತಿದ್ದು, ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವ ಬದಲಿಗೆ, ತನ್ನ ಸ್ವಹಿತಾಸಕ್ತಿಗೆ ಅನುಕೂಲವಾಗುವ ರೀತಿಯಲ್ಲಿ ಹಲವು ರಾಷ್ಟ್ರಗಳೊಡನೆ ವ್ಯವಹರಿಸುತ್ತಿದೆ. ಈ ಕಾರ್ಯತಂತ್ರ ಭಾರತಕ್ಕೆ ವಿವಿಧ ಜಾಗತಿಕ ಶಕ್ತಿಗಳೊಡನೆ ಬಲವಾದ ಬಾಂಧವ್ಯ ಸ್ಥಾಪಿಸಿ, ವ್ಯಾಪಾರ, ಭದ್ರತೆ, ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ವ್ಯವಹಾರ ನಡೆಸಿ, ಸ್ವತಂತ್ರ ನಿರ್ಧಾರಗಳ ಮೂಲಕ ಭಾರತಕ್ಕೆ ಲಾಭವಾಗುವಂತೆ ಮಾಡಲು ಪೂರಕವಾಗಿದೆ. ಈ ಕ್ರಮಗಳ ಮೂಲಕ, ಭಾರತ ಜಾಗತಿಕ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗಿದ್ದು, ತನ್ನ ಕಾರ್ಯತಂತ್ರ ಮತ್ತು ಆರ್ಥಿಕ ಆದ್ಯತೆಗಳನ್ನು ರಕ್ಷಿಸಿಕೊಳ್ಳುತ್ತಿದೆ.

ಕಳೆದ ವಾರ ವಾಷಿಂಗ್ಟನ್ ಭೇಟಿಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಧಿಸಿದ ಪ್ರಧಾನಿ ಮೋದಿಯವರು ಟ್ರಂಪ್ ಸಹ ಹೇಗೆ ಈ ಬಹುಪಕ್ಷೀಯ ವಿಧಾನದ ತನ್ನದೇ ಆವೃತ್ತಿಯನ್ನು ಅನುಸರಿಸುತ್ತಿದ್ದಾರೆ ಎನ್ನುವುದನ್ನು ಸ್ವತಃ ಗಮನಿಸಿದ್ದಾರೆ. ಹಿಂದಿನ ಅಮೆರಿಕಾ ಅಧ್ಯಕ್ಷರುಗಳು ಯುರೋಪ್ ಜೊತೆಗೆ ಸಾಂಪ್ರದಾಯಿಕವಾದ ಬಲವಾದ ಬಾಂಧವ್ಯವನ್ನು ಕಾಯ್ದುಕೊಳ್ಳಲು ಆದ್ಯತೆ ನೀಡಿದ್ದರೆ, ಟ್ರಂಪ್ ವಿಭಿನ್ನವಾದ ವಿಧಾನವನ್ನು ಅನುಸರಿಸುತ್ತಿದ್ದಾರೆ.

ಟ್ರಂಪ್ ಯುರೋಪ್ ಜೊತೆಗಿನ ಅಮೆರಿಕಾದ ಬಾಧ್ಯತೆಗಳನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಬಾಂಧವ್ಯ ಸುಧಾರಿಸಲು ಪ್ರಯತ್ನ ನಡೆಸುತ್ತಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಬಹಿರಂಗವಾಗಿ ಮಾತನಾಡಲು ಪ್ರಯತ್ನಿಸಿದ್ದಾರೆ. ಹಿಂದೆಲ್ಲ ಅಮೆರಿಕಾ ತನ್ನ ಪಾಶ್ಚಾತ್ಯ ಸಹಯೋಗಿಗಳೊಡನೆ ಸೇರಿ, ಅಂತಾರಾಷ್ಟ್ರೀಯ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಎತ್ತಿಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಆದರೆ ಅಮೆರಿಕಾದ ಈಗಿನ ನಡೆ ಅದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಟ್ರಂಪ್ ಈಗ ಹೆಚ್ಚು ಹೊಂದಿಕೊಳ್ಳಬಲ್ಲ ಮತ್ತು ಊಹಿಸಲಸಾಧ್ಯವಾದ ಕಾರ್ಯತಂತ್ರದತ್ತ ಅಮೆರಿಕಾವನ್ನು ನಡೆಸುತ್ತಿದ್ದು, ಭೌಗೋಳಿಕ ರಾಜಕಾರಣದಲ್ಲಿ ಅದರ ಪಾತ್ರವನ್ನು ಮರು ರೂಪಿಸುತ್ತಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ 'ಅಮೆರಿಕಾ ಫಸ್ಟ್' ನೀತಿ ಅಮೆರಿಕಾದ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಇತರ ದೇಶಗಳೊಡನೆ ನೇರ ಒಪ್ಪಂದಗಳನ್ನು ಮಾಡಿಕೊಳ್ಳುವತ್ತ ಗಮನಹರಿಸುತ್ತದೆ. ಒಂದು ವೇಳೆ ಟ್ರಂಪ್ ಏನಾದರೂ ಯಶಸ್ಸು ಕಂಡರೆ, ಬಹಳಷ್ಟು ಜಾಗತಿಕ ಶಕ್ತಿಗಳು ಸಾಂಪ್ರದಾಯಿಕ ಸಹಭಾಗಿತ್ವವನ್ನು ಬದಿಗೊತ್ತಿ, ಈ ನೂತನ ವಿದೇಶಾಂಗ ನೀತಿಯನ್ನು ಅನುಸರಿಸುವ ಸಾಧ್ಯತೆಗಳಿವೆ.

ಅಮೆರಿಕಾದ ಜೊತೆಗೆ ಭಾರತದ ಬಾಂಧವ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ಬಲಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರಗಳಲ್ಲಿ ಅಮೆರಿಕಾವನ್ನು ದೂರವಿಡುತ್ತಿದ್ದ, ಅಲಿಖಿತ ನಿಯಮದಂತಿದ್ದ ತನ್ನ ದೀರ್ಘಕಾಲೀನ ಅಲಿಪ್ತ ನೀತಿಯಿಂದ ದೂರಕ್ಕೆ ಒಯ್ದಿದ್ದಾರೆ.

ಇದೇ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ರಷ್ಯಾದೊಡನೆ ಭಾರತದ ದೀರ್ಘಾವಧಿಯ ಸಹಯೋಗವನ್ನು ಮುಂದುವರಿಸಿದ್ದು, ಚೀನಾದ ಜೊತೆಗೂ ರಾಜತಾಂತ್ರಿಕ ಮಾತುಕತೆಗಳನ್ನು ಮುಕ್ತವಾಗಿ ಇರಿಸಿದ್ದಾರೆ. ಚೀನಾದ ಜೊತೆ ಮುಂದುವರಿದಿರುವ ಗಡಿ ಉದ್ವಿಗ್ನತೆ ಮತ್ತು ಅದರ ಜೊತೆಗಿನ ವ್ಯಾಪಾರ ಅಸಮತೋಲನಗಳ ಕಾರಣದಿಂದ ಚೀನಾದೊಡನೆ ರಾಜತಾಂತ್ರಿಕ ಮಾತುಕತೆ ನಡೆಸುವುದು ಸವಾಲಾಗಿದ್ದರೂ, ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತಾ, ಚೀನಾದ ಜೊತೆಗಿನ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ.

ಭಾರತ ಹಿಂದಿನಿಂದಲೂ ಯುರೋಪ್ ಮೇಲೆ ಕಡಿಮೆ ಗಮನ ಹರಿಸುತ್ತಿತ್ತು. ಆದರೆ ಮೋದಿಯವರ ಆಡಳಿತದಲ್ಲಿ ಈ ಧೋರಣೆ ಬದಲಾಗುತ್ತಿದ್ದು, ಭಾರತ ಫ್ರಾನ್ಸ್, ಜರ್ಮನಿ, ಮತ್ತು ಇಟಲಿಗಳಂತಹ ಪ್ರಮುಖ ಯುರೋಪಿಯನ್ ದೇಶಗಳೊಡನೆ ಮತ್ತು ಬ್ರುಸೆಲ್ಸ್‌ನ ಐರೋಪ್ಯ ಒಕ್ಕೂಟದೊಡನೆ ಸಂಬಂಧ ವೃದ್ಧಿಸಲು ಸಕ್ರಿಯವಾಗಿ ಪ್ರಯತ್ನ ನಡೆಸುತ್ತಾ ಬಂದಿದೆ.

ಭಾರತದ ಬಹುಪಕ್ಷೀಯ ಸ್ನೇಹದ ನೀತಿಯಲ್ಲಿ ಅಮೆರಿಕಾ ಬಹುದೊಡ್ಡ ಪಾತ್ರ ವಹಿಸುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಭಾರತದ ಆರ್ಥಿಕತೆ, ತಂತ್ರಜ್ಞಾನ, ಮತ್ತು ಮಿಲಿಟರಿ ಅಭಿವೃದ್ಧಿಯನ್ನು ಸಾಧಿಸಲು ಅಮೆರಿಕಾದ ಜೊತೆಗಿನ ಸಹಯೋಗ ಅತ್ಯವಶ್ಯಕ ಎನ್ನುವುದನ್ನು ಭಾರತೀಯ ನಾಯಕರೂ ಮನಗಂಡಿದ್ದಾರೆ.

ಇದೇ ವೇಳೆ, ಭಾರತ ತನ್ನ ಸ್ವಂತ ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಕಾಪಾಡಿಕೊಳ್ಳುವ ಸಲುವಾಗಿ, ಕೇವಲ ಒಂದು ಪ್ರಮುಖ ಶಕ್ತಿಯ ಮೇಲೆ ಅವಲಂಬಿತವಾಗಿರಬಾರದು ಎನ್ನುವುದು ಭಾರತದ ನಾಯಕತ್ವದ ಆಲೋಚನೆಯಾಗಿದೆ. ಜಾಗತಿಕ ಹಿತಾಸಕ್ತಿಗಳು ಮತ್ತು ಸಹಯೋಗಗಳು ಕಾಲಕ್ರಮೇಣ ಬದಲಾಗುತ್ತಾ ಸಾಗುವುದರಿಂದ, ಯಾವುದಾದರೂ ಒಂದು ದೇಶದೊಡನೆ ಮಾತ್ರ ಭಾರತ ಹೆಚ್ಚು ಆತ್ಮೀಯ ಸಂಬಂಧ ಹೊಂದಿದ್ದರೆ, ಅದರಿಂದ ಸನ್ನಿವೇಶಗಳು ಬದಲಾದಾಗ ಭಾರತಕ್ಕೆ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುವ ಸಾಧ್ಯತೆಗಳಿವೆ.

ಟ್ರಂಪ್ ಈಗ ಬಹಿರಂಗವಾಗಿ ಮೈತ್ರಿಕೂಟಗಳ ಮಹತ್ವವನ್ನು ಪ್ರಶ್ನಿಸುತ್ತಿದ್ದು, ಅಮೆರಿಕಾದ ಹಲವು ದೀರ್ಘಕಾಲೀನ ಸಹಯೋಗಿಗಳನ್ನು ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ಜಾಗರೂಕತೆಯ ವಿಧಾನ ಒಂದು ಉತ್ತಮ ನಡೆಯಾಗಿದೆ. ಯಾವುದೇ ಒಂದು ದೇಶದ ಮೇಲೆ ಸಂಪೂರ್ಣವಾಗಿ ಅವಲಂಬನೆ ಹೊಂದದೆ, ಭಾರತ ಅಮೆರಿಕಾದಲ್ಲಿ ಯಾರೇ ಅಧಿಕಾರದಲ್ಲಿದ್ದರೂ ತಾನು ಬದಲಾಗುತ್ತಿರುವ ಭೌಗೋಳಿಕ ರಾಜಕಾರಣದಲ್ಲಿ ಹೊಂದಿಕೊಂಡು, ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬಲ್ಲೆ ಎಂದು ಖಚಿತಪಡಿಸಿದೆ.

ವಾಷಿಂಗ್ಟನ್‌ ನಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಭೌಗೋಳಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ನವದೆಹಲಿ ಕ್ಷಿಪ್ರವಾಗಿ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ನಡುವೆ ಭೇಟಿಯನ್ನು ಏರ್ಪಡಿಸಿತು. ಇದರ ಗುರಿ ಅಮೆರಿಕಾದೊಡನೆ ಭಾರತದ ಸಂಬಂಧವನ್ನು ಬಲಪಡಿಸಿ, ಬದಲಾಗುತ್ತಿರುವ ರಾಜಕೀಯ ಚಿತ್ರಣದ ನಡುವೆಯೂ ಭಾರತದ ಬಹುಮುಖ್ಯ ಅಂತಾರಾಷ್ಟ್ರೀಯ ಬಾಂಧವ್ಯ ಸ್ಥಿರವಾಗಿರುವಂತೆ ಕಾಯ್ದುಕೊಳ್ಳುವುದಾಗಿತ್ತು.

ಅಕ್ರಮ ವಲಸೆ ಮತ್ತು ಸುಂಕಗಳು ಅಮೆರಿಕಾದ ನೂತನ ಸರ್ಕಾರದ ಬಹುದೊಡ್ಡ ಕಳವಳ ಎನ್ನುವುದನ್ನು ಅರಿತ ಮೋದಿ ಸರ್ಕಾರ, ತಕ್ಷಣವೇ ಅವುಗಳನ್ನು ಪರಿಹರಿಸಲು ಕ್ರಮ ಕೈಗೊಂಡಿತು.

ಭಾರತ ಸರ್ಕಾರ ಅಮೆರಿಕಾದಲ್ಲಿದ್ದ ಅಕ್ರಮ ಭಾರತೀಯ ವಲಸಿಗರನ್ನು ಹಿಂಪಡೆಯಲು ಒಪ್ಪಿಗೆ ಸೂಚಿಸಿ, ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ವೇಗಗೊಳಿಸಿತು. ಇದಕ್ಕೂ ಮುನ್ನ, ಫೆಬ್ರವರಿಯಲ್ಲಿ ಭಾರತ ಒಂದಷ್ಟು ಕಾರುಗಳು ಮತ್ತು ಐಷಾರಾಮಿ ಬೈಕುಗಳು ಸೇರಿದಂತೆ, ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿಮೆಗೊಳಿಸಲು ಒಪ್ಪಿಗೆ ಸೂಚಿಸಿದ್ದು, ಇದು ಅಮೆರಿಕನ್ ಉತ್ಪಾದಕರಿಗೆ ನೆರವಾಗಲಿದೆ. ಅಮೆರಿಕಾದ ಜೊತೆಗಿನ ವ್ಯಾಪಾರ ಸಂಬಂಧವನ್ನು ಬಲಪಡಿಸಲು ಮತ್ತು ವಾಷಿಂಗ್ಟನ್‌ಗೆ ಮುಖ್ಯವಾದ ವಿಚಾರಗಳನ್ನು ಸರಿಪಡಿಸಲು ಭಾರತ ಈ ಹೆಜ್ಜೆಗಳನ್ನಿಟ್ಟಿತು.

ಭಾರತ ಅಮೆರಿಕಾದಿಂದ ತೈಲ, ನೈಸರ್ಗಿಕ ಅನಿಲ, ಮತ್ತು ನಾಗರಿಕ ಪರಮಾಣು ರಿಯಾಕ್ಟರ್‌ಗಳು ಸೇರಿದಂತೆ, ಹೆಚ್ಚಿನ ಪ್ರಮಾಣದ ಇಂಧನವನ್ನು ಖರೀದಿಸಲು ಸಿದ್ಧವಾಗುತ್ತಿದ್ದು, ಇದರಿಂದ ಭಾರತದ ಇಂಧನ ಪೂರೈಕೆ ಬಲಗೊಂಡು, ವಾಷಿಂಗ್ಟನ್ ಜೊತೆಗಿನ ವ್ಯಾಪಾರ ಸಂಬಂಧವೂ ಉತ್ತಮಗೊಳ್ಳಲಿದೆ.

ಟ್ರಂಪ್ ಭಾರತ ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕಾ ನಿರ್ಮಿತ ಆಯುಧಗಳನ್ನು ಖರೀದಿಸಬೇಕೆಂದು ಬಯಸಿದ್ದು, ಮೋದಿ ಪ್ರಸ್ತುತ ಮಾತುಕತೆಯ ಹಂತದಲ್ಲಿರುವ ಒಂದಷ್ಟು ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಲು ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಡೊನಾಲ್ಡ್ ಟ್ರಂಪ್ ಅವರು ರಕ್ಷಣಾ ಸಹಕಾರ ಮತ್ತು ಭಾರತಕ್ಕೆ ರಫ್ತು ನಡೆಸುವ ಕುರಿತು ಇರುವ ನಿಬಂಧನೆಗಳನ್ನು ಮರು ಪರಿಶೀಲಿಸುವ ಭರವಸೆ ನೀಡಿದ್ದಾರೆ.

ರಕ್ಷಣೆಯ ಹೊರತಾಗಿ, ಉಭಯ ನಾಯಕರು ಆಧುನಿಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳ ಕುರಿತ ಸಹಭಾಗಿತ್ವವನ್ನು ವೃದ್ಧಿಸಲು ಒಪ್ಪಿಗೆ ಸೂಚಿಸಿದ್ದು, ಬೈಡನ್ ಆಡಳಿತದಲ್ಲಿದ್ದ ಪ್ರಗತಿ ಈ ಬಾರಿಯೂ ಮುಂದುವರಿಯಲಿದೆ.

ಹಿಂದೆ ಭಾರತ ಮತ್ತು ಅಮೆರಿಕಾಗಳ ನಡುವೆ ಮಾತುಕತೆ ಮತ್ತು ವಾಸ್ತವ ಫಲಿತಾಂಶಗಳ ನಡುವೆ ವ್ಯತ್ಯಾಸ ಇದ್ದುದರಿಂದ, ಉಭಯ ದೇಶಗಳೂ ಈ ವರ್ಷ ಕ್ವಾಡ್ರಿಲ್ಯಾಟರಲ್ ಭದ್ರತಾ ಸಮಾವೇಶಕ್ಕಾಗಿ ಟ್ರಂಪ್ ಭಾರತಕ್ಕೆ ಆಗಮಿಸುವ ಮುನ್ನ ನೈಜ ಪ್ರಗತಿ ಸಾಧಿಸುವ ಗುರಿ ಹೊಂದಿವೆ. ಕೇವಲ ಮಾತುಕತೆಗೆ ಸೀಮಿತವಾಗಿರದೆ, ವಾಸ್ತವ ಅಭಿವೃದ್ಧಿಯನ್ನು ಸಾಧಿಸಿ ತೋರಿಸುವುದು ಭಾರತ - ಅಮೆರಿಕಾ ಬದ್ಧತೆಯಾಗಿದೆ.

ಮಾತುಕತೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರಿಗೆ ಬಹಿರಂಗವಾಗಿ ಇರುಸುಮುರುಸಾಗುವಂತಹ ವಿಚಾರವನ್ನೇನಾದರೂ ಟ್ರಂಪ್ ಮಾತನಾಡಬಹುದು ಎಂದು ಬಹಳಷ್ಟು ಭಾರತೀಯರು ಆತಂಕ ಹೊಂದಿದ್ದರು. ಆದರೆ, ಟ್ರಂಪ್ ಮೋದಿಯವರೊಡನೆ ಸ್ನೇಹಮಯ ಭಾವನೆ ಪ್ರದರ್ಶಿಸಿದ್ದು, ಭಾರತದ ಕುರಿತ ಸದ್ಭಾವನೆಯನ್ನು ತೋರಿದ್ದಾರೆ.

ಆಸಕ್ತಿಕರ ವಿಚಾರವೆಂದರೆ, ಭಾರತ ಅಮೆರಿಕಾಗೆ ಅಧಿಕೃತ ಸಹಯೋಗಿ ಅಥವಾ ಅಮೆರಿಕಾದ ಬೆಂಬಲದ ಮೇಲೆ ಅತಿಯಾಗಿ ಅವಲಂಬನೆ ಹೊಂದಿರುವ ರಾಷ್ಟ್ರವಲ್ಲ. ಬದಲಿಗೆ, ಭಾರತ ಅಮೆರಿಕಾಗೆ ಒಂದು ಸ್ವತಂತ್ರ ಮತ್ತು ಬಲವಾದ ಸಹಯೋಗಿ. ಅಮೆರಿಕಾದ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳಿಗೆ ಹೋಲಿಸಿದರೆ, ಈ ಅಂಶ ಅಮೆರಿಕಾದೊಡನೆ ವ್ಯವಹಾರ ನಡೆಸುವಾಗ ಭಾರತಕ್ಕೆ ಅನುಕೂಲ ಕಲ್ಪಿಸುತ್ತದೆ.

ಡೊನಾಲ್ಡ್ ಟ್ರಂಪ್ ಅವರು ತನ್ನ ಎದುರಾಳಿಯೇ ಆಗಿದ್ದರೂ ಪ್ರಬಲ ನಾಯಕರನ್ನು ಗೌರವಿಸುವ ಗುಣ ಹೊಂದಿರುವುದೂ ಇದಕ್ಕೆ ಒಂದು ಕಾರಣವಾಗಿರಬಹುದು. ಟ್ರಂಪ್ ತನ್ನ ಐರೋಪ್ಯ ಮತ್ತು ಏಷ್ಯನ್ ಸಹಯೋಗಿಗಳಿಗಿಂತಲೂ ಹೆಚ್ಚಾಗಿ ಪ್ರಬಲ ನಾಯಕರನ್ನು ಗೌರವಿಸುತ್ತಾರೆ. ಟ್ರಂಪ್ ಅಂತಹ ಮಿತ್ರ ರಾಷ್ಟ್ರಗಳನ್ನು ದುರ್ಬಲ ಹಾಗೂ ಅಮೆರಿಕಾದ ಮೇಲೆ ಅತಿಯಾದ ಅವಲಂಬನೆ ಹೊಂದಿರುವ ರಾಷ್ಟ್ರಗಳೆಂದು ಪರಿಗಣಿಸುತ್ತಿದ್ದು, ಸಾಮರ್ಥ್ಯ ಮತ್ತು ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸುವ ನಾಯಕರೊಡನೆ ವ್ಯವಹರಿಸುವುದನ್ನು ಆರಿಸುತ್ತಾರೆ.

1945ರ ಕಾಲದಿಂದಲೂ ಜಾರಿಯಲ್ಲಿದ್ದ ಜಾಗತಿಕ ವ್ಯವಸ್ಥೆಯನ್ನು ಡೊನಾಲ್ಡ್ ಟ್ರಂಪ್ ಬದಲಾಯಿಸುವಂತೆ ಕಂಡುಬರುತ್ತಿದ್ದು, ಬೇರೆಲ್ಲ ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅದಕ್ಕೆ ಹೆಚ್ಚು ಸಿದ್ಧವಾಗಿರುವಂತೆ ಕಂಡುಬರುತ್ತಿದೆ. ಇದಕ್ಕೆ ಭಾರತ ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಲಿಸುತ್ತಿರುವುದು ಮತ್ತು ಬದಲಾಗುತ್ತಿರುವ ಜಾಗತಿಕ ಆಯಾಮಗಳಿಗೆ ಸುಲಭವಾಗಿ ಹೊಂದಿಕೊಳ್ಳುವುದು ಪ್ರಮುಖ ಕಾರಣವಾಗಿದೆ.

ಉದಾಹರಣೆಗೆ, ಡೊನಾಲ್ಡ್ ಟ್ರಂಪ್ ರಷ್ಯಾ - ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ, ಪುಟಿನ್ ಜೊತೆಗೆ ಉತ್ತಮ ಬಾಂಧವ್ಯ ಸಾಧಿಸುವ ಗುರಿಯನ್ನು ಹೊಂದಿದ್ದಾರೆ. ಒಂದು ವೇಳೆ ಅದು ಸಾಧ್ಯವಾದರೆ, ಭಾರತ ರಷ್ಯಾ ಮತ್ತು ಪಾಶ್ಚಾತ್ಯ ದೇಶಗಳೊಂದಿಗೂ ಉತ್ತಮ ಸಂಬಂಧ ಹೊಂದಿರುವುದರಿಂದ, ಭಾರತಕ್ಕೆ ಹೆಚ್ಚಿನ ಪ್ರಯೋಜನ ಲಭಿಸಲಿದೆ. ಉಕ್ರೇನಿನಲ್ಲಿ ಶಾಂತಿ ಸ್ಥಾಪನೆ ಭಾರತದ ಹಿತಾಸಕ್ತಿಗೂ ಪೂರಕವಾಗಿರುವುದರಿಂದ, ಟ್ರಂಪ್ ಪ್ರಯತ್ನಗಳನ್ನು ಮೋದಿ ಬೆಂಬಲಿಸಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಉಕ್ರೇನ್ ಯುದ್ಧ ಭಾರತಕ್ಕೂ ಸಾಕಷ್ಟು ಆರ್ಥಿಕ ಮತ್ತು ಭೌಗೋಳಿಕ ರಾಜಕಾರಣದ ಸವಾಲುಗಳನ್ನು ಸೃಷ್ಟಿಸಿದ್ದು, ಜಾಗತಿಕ ವ್ಯಾಪಾರ ಮತ್ತು ರಾಜತಾಂತ್ರಿಕತೆಯಲ್ಲಿ ಮುಂದೆ ಸಾಗುವುದು ಕಷ್ಟಕರವಾಗಿಸಿದೆ. ಯುದ್ಧದಲ್ಲಿ ಏನಾದರೂ ಇಳಿಕೆ ಕಂಡುಬಂದರೆ, ಅದರಿಂದ ಇಂಧನ ಬೆಲೆ, ವ್ಯಾಪಾರ ಸಂಬಂಧಗಳು, ಮತ್ತು ಅಂತಾರಾಷ್ಟ್ರೀಯ ನೀತಿಗಳಲ್ಲಿ ಬದಲಾವಣೆ ಉಂಟಾಗಿ, ದೀರ್ಘಾವಧಿಯಲ್ಲಿ ಭಾರತಕ್ಕೆ ಪ್ರಯೋಜನ ಲಭಿಸಲಿದೆ.

ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ, ಅಮೆರಿಕಾ ಮತ್ತು ರಷ್ಯಾಗಳು ಒಂದು ಒಪ್ಪಂದಕ್ಕೆ ಬಂದು, ನಿರ್ಬಂಧಗಳು ಸಡಿಲವಾದರೆ, ಅದರಿಂದ ಭಾರತಕ್ಕೆ ಹೆಚ್ಚಿನ ಪ್ರಯೋಜನ ಲಭಿಸಲಿದೆ. ಇಂತಹ ಕ್ರಮದ ಪರಿಣಾಮವಾಗಿ ತೈಲ ದರ ಇಳಿಕೆಯಾಗಲಿದ್ದು, ತನ್ನ ಇಂಧನ ಮತ್ತು ಅನಿಲ ಅವಶ್ಯಕತೆಗಳಿಗೆ ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಭಾರತಕ್ಕೆ ಇದರಿಂದ ಅನುಕೂಲವಾಗಲಿದೆ. ದರ ಕಡಿಮೆಯಾಗುವುದರಿಂದ ಖರ್ಚೂ ಕಡಿಮೆಯಾಗಿ, ಭಾರತದ ಆರ್ಥಿಕತೆ ಬಲಗೊಳ್ಳಲಿದೆ.

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದ್ದನ್ನು ಭಾರತ ಬಹಿರಂಗವಾಗಿ ಖಂಡಿಸಿಲ್ಲ ಎಂದು ಪಾಶ್ಚಾತ್ಯ ದೇಶಗಳು ಭಾರತವನ್ನು ಟೀಕಿಸಿದ್ದವು. 2022ರ ಬಳಿಕ, ಮಾಸ್ಕೋದಿಂದ ಭಾರತದ ತೈಲ ಖರೀದಿಯಲ್ಲಿ ಅಪಾರ ಏರಿಕೆ ಕಂಡುಬಂದಿದ್ದೂ ಹೆಚ್ಚಿನ ಟೀಕೆಗಳಿಗೆ ಕಾರಣವಾಯಿತು.

ಪ್ರಸ್ತುತ ಯುದ್ಧ ಕೊನೆಯಾದರೆ, ಅದರಿಂದ ಪಾಶ್ಚಾತ್ಯ ದೇಶಗಳೊಡನೆ ಭಾರತದ ಸಂಬಂಧ ಬಲಗೊಳ್ಳುವುದು ಮಾತ್ರವಲ್ಲದೆ, ಚೀನಾದ ಪ್ರಭಾವ ಹೆಚ್ಚಿರುವ ಏಷ್ಯಾದಲ್ಲಿ ಹೆಚ್ಚಿನ ಸಮತೋಲನ ಸಾಧಿಸಲು ಸಾಧ್ಯವಾಗಲಿದೆ.

ಒಂದು ವೇಳೆ ಯುರೋಪಿನ ಭದ್ರತೆಗೆ ಸಂಬಂಧಿಸಿದಂತೆ, ಅಮೆರಿಕಾ ಮತ್ತು ರಷ್ಯಾಗಳು ದೀರ್ಘಾವಧಿಯ ಒಪ್ಪಂದಕ್ಕೆ ಬಂದರೆ, ಅದರ ಪರಿಣಾಮವಾಗಿ ಅವೆರಡರ ನಡುವಿನ ಉದ್ವಿಗ್ನತೆಗಳು ಕಡಿಮೆಯಾಗಬಹುದು. ಆ ಮೂಲಕ ವಾಷಿಂಗ್ಟನ್ ತನ್ನ ಹೆಚ್ಚಿನ ಗಮನ ಮತ್ತು ಸಂಪನ್ಮೂಲಗಳನ್ನು ಏಷ್ಯಾದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ವಿನಿಯೋಗಿಸಬಹುದು. ಏಷ್ಯಾದಲ್ಲಿ ಈಗ ವಿಶೇಷವಾಗಿ ಚೀನಾದಿಂದ ಹೆಚ್ಚುತ್ತಿರುವ ಸವಾಲುಗಳಿಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.

ಒಂದಷ್ಟು ರಿಪಬ್ಲಿಕನ್ ಪಕ್ಷದ ಬೆಂಬಲಿಗರೂ ಅಮೆರಿಕಾ ತನ್ನ ಗಮನವನ್ನು ಯುರೋಪ್ ಬದಲು ಇತರ ಜಾಗತಿಕ ಆದ್ಯತೆಗಳತ್ತ ಹರಿಸಬೇಕೆಂದು ಕರೆ ನೀಡಿದ್ದಾರೆ. ಒಂದು ವೇಳೆ ಟ್ರಂಪ್ ಅಧಿಕಾರಕ್ಕೆ ಬಂದರೆ, ಅವರು ಪುಟಿನ್‌ರನ್ನು ಕೇವಲ ಚೀನಾ ಜೊತೆ ಕೈ ಜೋಡಿಸಿ, ಕ್ಸಿ ಜಿನ್‌ಪಿಂಗ್ ತೋರಿದ ಹಾದಿಯಲ್ಲಿ ಹೆಜ್ಜೆ ಇಡದೆ, ಏಷ್ಯಾದಲ್ಲಿ ಹೆಚ್ಚು ಸ್ವತಂತ್ರ ನಿಲುವು ತಳೆಯುವಂತೆ ಪ್ರೇರೇಪಿಸಬಲ್ಲರು ಎಂದು ಭಾರತ ನಿರೀಕ್ಷೆ ಇಟ್ಟಿತ್ತು. ಇದರ ಪರಿಣಾಮವಾಗಿ, ಈ ಪ್ರದೇಶದಲ್ಲಿ ಶಕ್ತಿಯ ಸಮತೋಲನದ ಸಾಧಿತವಾಗಬಹುದು.

ಯುರೋಪ್ ತನ್ನ ರಕ್ಷಣೆಯ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡು, ಪ್ರಬಲ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದರೆ ಅದರ ಪ್ರಯೋಜನ ಭಾರತಕ್ಕೂ ಲಭಿಸಲಿದೆ. ಯುರೋಪಿನ ದೇಶಗಳು ತಮ್ಮ ರಕ್ಷಣೆಗಾಗಿ ಅಮೆರಿಕಾ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡರೆ, ಅದು ಅಮೆರಿಕಾದ ಸಂಪನ್ಮೂಲಗಳನ್ನು ಏಷ್ಯಾದೆಡೆ ಗಮನ ಹರಿಸಲು ಮುಕ್ತವಾಗಿಸುತ್ತದೆ. ಯುರೋಪ್ ಪ್ರಬಲವಾದರೆ, ಅದರಿಂದ ಭಾರತಕ್ಕೆ ವ್ಯಾಪಾರ, ರಾಜತಾಂತ್ರಿಕತೆ ಮತ್ತು ಭದ್ರತಾ ಸಹಭಾಗಿತ್ವದಲ್ಲಿ ಹೊಸ ಅವಕಾಶಗಳು ಲಭಿಸಲಿವೆ.

ಭಾರತ ಮತ್ತು ಯುರೋಪ್‌ಗಳು ಸಮಾನ ಹಿತಾಸಕ್ತಿ ಹೊಂದಿರುವ ಪ್ರದೇಶಗಳಲ್ಲಿ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ಜೊತೆಯಾಗಿ ಕಾರ್ಯಾಚರಿಸಬಹುದು. ಇದರಲ್ಲಿ ಮೆಡಿಟರೇನಿಯನ್ ನಿಂದ, ಮಧ್ಯ ಪೂರ್ವದ ಮೂಲಕ, ಹಿಂದೂ ಮಹಾಸಾಗರದ ತನಕದ ಪ್ರದೇಶಗಳು ಸೇರಿವೆ. ಈ ಪ್ರದೇಶಗಳಿಗೆ ಸಂಬಂಧಿಸಿದಂತೆ, ಭಾರತ ಮತ್ತು ಯುರೋಪ್ ನಡುವೆ ಸಹಕಾರ ಸಾಧಿತವಾದರೆ, ಅದರಿಂದ ಸ್ಥಿರತೆ ಸಾಧಿಸಿ, ವ್ಯಾಪಾರ ಭದ್ರತೆಯನ್ನು ಹೆಚ್ಚಿಸಿ, ಅದರೊಡನೆ ಭಯೋತ್ಪಾದನೆ, ಕಡಲ್ಗಳ್ಳತನ, ಮತ್ತು ಕದನಗಳಂತಹ ಸಮಾನ ಸಮಸ್ಯೆಗಳನ್ನು ಎದುರಿಸಲು ಸಾಧ್ಯ. ಭಾರತ ಮತ್ತು ಯುರೋಪ್ ಜೊತೆಯಾಗಿ ಕಾರ್ಯ ನಿರ್ವಹಿಸಿದರೆ, ಅದರಿಂದ ಈ ಪ್ರಮುಖ ಕ್ಷೇತ್ರಗಳ ಭವಿಷ್ಯವನ್ನು ರೂಪಿಸುವಲ್ಲಿ ಅವುಗಳು ಹೆಚ್ಚಿನ ಪಾತ್ರ ವಹಿಸಲಿವೆ.

ಈಗಾಗಲೇ ಟ್ರಂಪ್ ಅಧಿಕಾರದಲ್ಲಿ ಇರುವುದರಿಂದ, ಭಾರತ ಮತ್ತು ಯುರೋಪ್‌ಗಳು ಟ್ರಂಪ್ ನಾಯಕತ್ವದೊಡನೆ ಬರುವ ಭೌಗೋಳಿಕ ರಾಜಕಾರಣದ ಬದಲಾವಣೆಗಳಿಗೆ ಹೊಂದಿಕೊಳ್ಳುವ ಅವಶ್ಯಕತೆಯಿದೆ. ಟ್ರಂಪ್ ನೀತಿಗಳು ಅಂತಾರಾಷ್ಟ್ರೀಯ ಮೈತ್ರಿಕೂಟಗಳು ಮತ್ತು ಭದ್ರತಾ ಆದ್ಯತೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ದೇಶಗಳು ಸಹಕರಿಸುವ ರೀತಿಯ ಮೇಲೆ ಪ್ರಭಾವ ಬೀರಲಿವೆ. ಮುಂದಿನ ತಿಂಗಳು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೆಯೆನ್ ಮತ್ತು 27 ಇಯು ಕಮಿಷನರ್‌ಗಳು ನವದೆಹಲಿಗೆ ಭೇಟಿ ನೀಡಲಿದ್ದು, ಆಗ ಈ ವಿಚಾರ ಚರ್ಚೆಗೆ ಒಳಗಾಗುವ ಸಾಧ್ಯತೆಗಳಿವೆ. ಅವರ ಭೇಟಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಸುದೀರ್ಘವಾದ, ಆದರೆ ಸುಪ್ತವಾದ ಕಾರ್ಯತಂತ್ರದ ಸಹಯೋಗವನ್ನು ಬಲಪಡಿಸಬಹುದು. ಆ ಮೂಲಕ ಉಭಯ ಪಕ್ಷಗಳೂ ಜೊತೆಯಾಗಿ, ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಬಹುದು.

ಮೇಲ್ನೋಟಕ್ಕೆ ಅಮೆರಿಕಾ ತನ್ನ ಗಮನವನ್ನು ಏಷ್ಯಾದೆಡೆಗೆ ಹರಿಸುವುದನ್ನು ಭಾರತ ಸ್ವಾಗತಿಸುವಂತೆ ಕಾಣುತ್ತದೆ. ಆದರೆ, ಟ್ರಂಪ್ ಅಧಿಕಾರದಲ್ಲಿರುವುದರಿಂದ, ಅಮೆರಿಕಾ ಚೀನಾದೊಡನೆ ವ್ಯವಹರಿಸುವ ರೀತಿಯಲ್ಲಿ ಒಂದಷ್ಟು ಬದಲಾವಣೆಗಳು ತಲೆದೋರಲಿವೆ. ಚೀನಾ ಕುರಿತ ಟ್ರಂಪ್ ಕಾರ್ಯವಿಧಾನ ಹಿಂದಿನ ನೀತಿಗಳಿಗಿಂತ ಭಿನ್ನವಾಗಿದ್ದು, ಜಾಗತಿಕ ರಾಜಕಾರಣದಲ್ಲಿ ಹೊಸ ಸವಾಲುಗಳು ಮತ್ತು ಅನಿಶ್ಚಿತತೆಗಳನ್ನು ತಂದಿದೆ. ಇವು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರಲಿದ್ದು, ಈ ಬದಲಾವಣೆಗಳು ಹೇಗೆ ಪ್ರಾದೇಶಿಕ ಸ್ಥಿರತೆ ಮತ್ತು ಸಹಭಾಗಿತ್ವಗಳ ಮೇಲೆ ಪ್ರಭಾವ ಬೀರಬಹುದು ಎಂದು ಸೂಕ್ಷ್ಮವಾಗಿ ಗಮನಿಸುವುದು ಮುಖ್ಯವಾಗಿದೆ.

ಕ್ಸಿ ಜಿನ್‌ಪಿಂಗ್ ಅವರೊಡನೆ ಸ್ನೇಹ ಸಂಬಂಧವನ್ನು ಬೆಳೆಸುವ ಟ್ರಂಪ್ ಆಸಕ್ತಿ ಏಷ್ಯಾದಾದ್ಯಂತ ಗೊಂದಲ ಸೃಷ್ಟಿಸಿದೆ. ಟ್ರಂಪ್ ಚೀನಾದೊಡನೆ ಕಾರ್ಯಾಚರಿಸುವ ಕುರಿತು ಮಾತನಾಡುವಾಗ, ಪ್ರಮುಖ ರಿಪಬ್ಲಿಕನ್ ನಾಯಕರನ್ನು ಒಳಗೊಂಡ ಅವರ ರಾಷ್ಟ್ರೀಯ ಭದ್ರತಾ ತಂಡ ಚೀನಾ ವಿರುದ್ಧ ಕಠಿಣ ನಿಲುವು ತಳೆದಿದೆ. ಇಂತಹ ಮಿಶ್ರಿತ ವಿಧಾ‌ನ ಚೀನಾ - ಅಮೆರಿಕಾ ಸಂಬಂಧ ಹೇಗೆ ಬೆಳೆಯಬಹುದು ಎನ್ನುವುದನ್ನು ಅಸ್ಪಷ್ಟವಾಗಿಸಿದೆ. ಇದರ ಪರಿಣಾಮವಾಗಿ, ಏಷ್ಯಾದ ಹಲವು ರಾಷ್ಟ್ರಗಳು ಏನನ್ನು ನಿರೀಕ್ಷಿಸಬೇಕು ಎನ್ನುವುದೇ ತಿಳಿಯದಂತಾಗಿವೆ.

ಇತ್ತೀಚಿನ ವಾರಗಳಲ್ಲಿ, ಅಮೆರಿಕಾ ಸರ್ಕಾರ ಪ್ರಧಾನಿ ಮೋದಿ ಮತ್ತು ಏಷ್ಯಾದ ನಾಯಕರೊಡನೆ ಸಮಾಲೋಚನೆ ನಡೆಸಿದ್ದು, ಇಂಡೋ - ಪೆಸಿಫಿಕ್ ಪ್ರದೇಶ ಮತ್ತು ಅದರ ಕುರಿತು ಚೀನಾದ ಕ್ರಮಗಳತ್ತ ಕಠಿಣ ನಿಲುವು ತಳೆದಿದೆ. ಈ ಬದಲಾವಣೆ ಅಮೆರಿಕಾ ತನ್ನ ನೀತಿಗಳಲ್ಲಿ ಹೆಚ್ಚು ಸ್ಥಿರವಾಗುತ್ತಿರುವುದನ್ನು ಪ್ರದರ್ಶಿಸುತ್ತಾ, ಚೀನಾದ ಪ್ರಭಾವವನ್ನು ತಡೆಗಟ್ಟಿ, ಭಾರತದಂತಹ ಪ್ರಮುಖ ಸಹಯೋಗಿಗಳೊಡನೆ ಬಾಂಧವ್ಯ ವೃದ್ಧಿಸಲು ಸಿದ್ಧವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇದೇ ಸಮಯದಲ್ಲಿ, ಕ್ಸಿ ಜಿನ್‌ಪಿಂಗ್ ಅವರೊಡನೆ ದೊಡ್ಡ ಒಪ್ಪಂದಕ್ಕೆ ಟ್ರಂಪ್ ಮುಕ್ತವಾಗಿರುವಂತೆ ತೋರುತ್ತಿದ್ದಾರೆ. ಇದರಿಂದಾಗಿ ಟ್ರಂಪ್ ಯುರೋಪ್‌ನಲ್ಲಿ ರಷ್ಯಾದೊಡನೆ ಒಪ್ಪಂದಕ್ಕೆ ಪ್ರಯತ್ನಿಸುತ್ತಿರುವಂತೆ, ಏಷ್ಯಾದಲ್ಲಿ ಚೀನಾದೊಡನೆ ವಿಶಾಲವಾದ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆಯೇ ಎಂಬ ಭಾವನೆ ಮೂಡಿದೆ. ಚೀನಾದ ಕುರಿತು ಅಮೆರಿಕಾದ ನೀತಿಗಳಲ್ಲಿ ಬದಲಾವಣೆ ಉಂಟಾದರೆ ಅದರ ನೇರ ಪರಿಣಾಮ ಜಪಾನ್, ದಕ್ಷಿಣ ಕೊರಿಯಾ, ಅಥವಾ ತೈವಾನ್ ಮೇಲೆ ಉಂಟಾಗುವಂತೆ ಭಾರತದ ಮೇಲೆ ಕಾಣಿಸಿಕೊಳ್ಳುವುದಿಲ್ಲ. ಆದರೆ, ಇಂತಹ ಬದಲಾವಣೆ ಭಾರತಕ್ಕೆ ದೊಡ್ಡ ಆರ್ಥಿಕ ಮತ್ತು ಭದ್ರತಾ ಸವಾಲುಗಳನ್ನಂತೂ ಒಡ್ಡಲಿವೆ. ಆದ್ದರಿಂದ ಭಾರತ ಪ್ರಾದೇಶಿಕವಾಗಿ ಭಾರತ ಜಾಗರೂಕ ಹೆಜ್ಜೆ ಇಡುತ್ತಾ, ತನ್ನ ಸ್ವಂತ ಕಾರ್ಯತಂತ್ರಗಳನ್ನು ಬಲಪಡಿಸಿ, ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.

ಪ್ರಧಾನಿ ನರೇಂದ್ರ ಮೋದಿಯವರೊಡನೆ ಜಂಟಿ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ, ಓರ್ವ ಭಾರತೀಯ ಪತ್ರಕರ್ತ ಚೀನಾ ಕುರಿತು ಟ್ರಂಪ್ ಕಠಿಣ ನಿಲುವು ವ್ಯಕ್ತಪಡಿಸುವಂತೆ ಮಾಡಲು ಪ್ರಯತ್ನಿಸಿದ್ದರು. ಆದರೆ, ಟ್ರಂಪ್ ಯಾವುದೇ ಕಠಿಣ ಮಾತುಗಳನ್ನಾಡದೆ, ತಾನು ಕ್ಸಿ ಜಿನ್‌ಪಿಂಗ್ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸುವುದಾಗಿ ಹೇಳಿದ್ದರು. ಟ್ರಂಪ್ ಭಾರತ ಮತ್ತು ಚೀನಾ ನಡುವಿನ ಗಡಿ ಚಕಮಕಿಯನ್ನೂ ಪ್ರಸ್ತಾಪಿಸಿ, ಒಂದು ವೇಳೆ ಭಾರತ ತನ್ನ ನೆರವು ಅಪೇಕ್ಷಿಸಿದರೆ ತಾನು ಬಿಕ್ಕಟ್ಟು ಪರಿಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು.

ಬೀಜಿಂಗ್ ಜೊತೆ ಶಾಂತಿಯುತ ಒಪ್ಪಂದ ಈಗ ಭಾರತದ ಕೈಯಳತೆಯಲ್ಲಿದ್ದು, ನವದೆಹಲಿ ಆ ಕುರಿತು ಪ್ರಯತ್ನ ಮುಂದುವರಿಸಬೇಕೆಂದು ಭಾರತೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಧಾನ ಹಲವು ದೇಶಗಳೊಡನೆ ಸಂಬಂಧದಲ್ಲಿ ಸಮತೋಲನ ಸಾಧಿಸುವ ಕಾರ್ಯತಂತ್ರದ ಭಾಗವಾಗಿದ್ದರೂ, ಅದು ಪ್ರಸ್ತುತ ಸನ್ನಿವೇಶದಲ್ಲಿ ಪ್ರಾಯೋಗಿಕವಲ್ಲ. ಭಾರತ ಮತ್ತು ಚೀನಾ ನಡುವಿನ ಶಕ್ತಿಯ ಅಂತರ ಅಗಾಧವಾಗಿದ್ದು, ಚೀನಾಗೆ ಹೆಚ್ಚಿನ ಮೇಲುಗೈ ಒದಗಿಸುತ್ತದೆ. ಆದ್ದರಿಂದ, ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಯುತ ಒಪ್ಪಂದ ಏರ್ಪಡುವಂತೆ ಮಾಡುವುದು ಭಾರತಕ್ಕೂ ಸವಾಲಾಗಿದೆ.

ಭಾರತಕ್ಕೆ ಸಂಬಂಧಿಸಿದ ತನ್ನ ನಿಲುವುಗಳಲ್ಲಿ ಚೀನಾ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ, ಭಾರತದ‌ ಸವಾಲುಗಳನ್ನು ಪರಿಹರಿಸಲು ಚೀನಾಗೆ ಯಾವುದೇ ಕಾರಣಗಳಿಲ್ಲ. ಎರಡೂ ದೇಶಗಳ ನಡುವಿನ ಶಕ್ತಿಯ ಅಂತರವನ್ನು ಗಮನಿಸಿದರೆ, ಪ್ರಸ್ತುತ ಇರುವ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅದರಿಂದ ಚೀನಾಗೆ ಪ್ರಯೋಜನವಾಗಲಿದೆ. ಭಾರತ - ಚೀನಾಗಳ ನಡುವಿನ ಸ್ಥಿತಿ ಸದ್ಯಕ್ಕೆ ಬದಲಾಗುವ ಸಾಧ್ಯತೆಗಳಿಲ್ಲ.

ಅಂದರೆ, ಭಾರತ ಹಲವು ರಾಷ್ಟ್ರಗಳೊಡನೆ ತನ್ನ ಸಂಬಂಧವನ್ನು ಸಮತೋಲನಗೊಳಿಸುವ ಕಾರ್ಯತಂತ್ರದ ಜೊತೆಗೆ, ಅಮೆರಿಕಾದೊಡನೆಯೂ ತನ್ನ ಸಂಬಂಧವನ್ನು ಬಲಪಡಿಸಬೇಕು. ಅಮೆರಿಕಾ - ಭಾರತ ಸಂಬಂಧವನ್ನು ಗಟ್ಟಿಗೊಳಿಸುವುದರಿಂದ, ಭಾರತಕ್ಕೆ ಕಾರ್ಯತಂತ್ರದ ಸವಾಲುಗಳನ್ನು ಸರಿಪಡಿಸಿ, ತನ್ನ ಜಾಗತಿಕ ಸ್ಥಾನವನ್ನು ಭದ್ರಪಡಿಸಲು ಸಾಧ್ಯ.

ಅಮೆರಿಕಾ - ಚೀನಾ ನಡುವೆ ಸ್ನೇಹದ ಕುರಿತು ಭಾರತ ನೀಡುವ ಪ್ರತಿಕ್ರಿಯೆ ವಾಷಿಂಗ್ಟನ್ ಜೊತೆಗಿನ ಅದರ ಸಹಯೋಗವನ್ನು ಇನ್ನಷ್ಟು ಭದ್ರಪಡಿಸುವ ಗುರಿ ಹೊಂದಿದೆ. ಭಾರತದ ಒಟ್ಟಾರೆ ಅಭಿವೃದ್ಧಿ ಮತ್ತು ಸಾಮರ್ಥ್ಯಕ್ಕೆ ಬೆಂಬಲ ನೀಡುವ ಇಚ್ಛೆ ಮತ್ತು ಶಕ್ತಿಯನ್ನು ಹೊಂದಿರುವ ಕೆಲವೇ ರಾಷ್ಟ್ರಗಳ ಪೈಕಿ ಅಮೆರಿಕಾ ಸಹ ಒಂದಾಗಿದೆ. ಮೋದಿ ಮತ್ತು ಟ್ರಂಪ್ ಉಭಯ ರಾಷ್ಟ್ರಗಳ ಸಹಕಾರಕ್ಕೆ ಸೂಕ್ತ ತಳಹದಿಯನ್ನು ನಿರ್ಮಿಸಿದ್ದು, ಭವಿಷ್ಯದಲ್ಲಿ ಭಾರತ ಮತ್ತು ಅಮೆರಿಕಾಗಳು ಜೊತೆಯಾಗಿ ಕಾರ್ಯ ನಿರ್ವಹಿಸಲು ಸೂಕ್ತ ಚೌಕಟ್ಟನ್ನು ಒದಗಿಸಿದ್ದಾರೆ.

ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT