ಅಮೇರಿಕ ಹೆಚ್1 ಬಿ ವೀಸಾ (ಸಾಂಕೇತಿಕ ಚಿತ್ರ)  online desk
ಅಂಕಣಗಳು

H1B Visa: ಅಮೆರಿಕ ಬಾಗಿಲು ಮುಚ್ಚುತ್ತಿದೆಯೋ ಅಥವಾ ಇನ್ನಷ್ಟು ದೊಡ್ಡದಾಗಿ ತೆರೆಯಹೊರಟಿದೆಯೋ? (ತೆರೆದ ಕಿಟಕಿ)

ಎಲಾನ್ ಮಸ್ಕ್ ಮತ್ತು ವಿವೇಕ ರಾಮಸ್ವಾಮಿ ಇಂಥವರ ವಾದ ಹೇಗಿದೆಯೆಂದರೆ, ಅವರು ಕೇವಲ ಎಚ್1ಬಿ ವೀಸಾದ ಸುಸೂತ್ರ ಮುಂದುವರಿಕೆಗೆ ಒತ್ತಾಯಿಸುತ್ತಿಲ್ಲ. ಬದಲಿಗೆ, ವೀಸಾ-ಗ್ರೀನ್ ಕಾರ್ಡ್ ನೀಡಿಕೆಗಳಲ್ಲಿ ಇನ್ನಷ್ಟು ನಿಯಮಗಳು ತಗ್ಗಬೇಕು ಎಂಬ ಪ್ರತಿಪಾದನೆ ಮಾಡುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ದೊಡ್ಡ ನಗರಗಳಲ್ಲಿ ದರ್ಶಿನಿ-ಹೋಟೆಲ್ ಗಳಲ್ಲಿ ಕೆಲವೊಮ್ಮೆ ಆರ್ಡರ್ ಕೊಡಬೇಕಿದ್ದರೂ ಹಿಂದಿ ನೆನಪಿಸಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ಏಕೆಂದರೆ, ತಿನಿಸುಗಳ ಸರಬರಾಜು ಸೇವೆಯಲ್ಲಿ ತೊಡಗಿಸಿಕೊಂಡವ ಹಿಂದಿ ಭಾಷಿಕನಾಗಿರುವ ಸಂದರ್ಭಗಳು ಹೆಚ್ಚು. ಇನ್ನು, ಯಾವುದಾದರೂ ಕಚೇರಿ ಇಲ್ಲವೇ ಅಪಾರ್ಟ್ಮೆಂಟ್ ಹೊರಗಡೆ ನಿಂತು ಮಾಹಿತಿ ಕೇಳಿದರೆ ಅಲ್ಲಿನ ಬಾಗಿಲು ಕಾಯುವವ “ಸಮಜಾ ನಹೀಂ” ಎನ್ನುತ್ತ ಹಿಂದಿಯಲ್ಲಿ ಮಾತಿಗೆಳೆಯಬಹುದು. ಇವೆಲ್ಲ ಕನ್ನಡಿಗರಿಗೆ ಸಹಜವಾಗಿಯೇ ಕಿರಿಕಿರಿ ಎನ್ನಿಸುತ್ತದೆಯಾದ್ದರಿಂದ, “ನೋಡಿ, ಎಲ್ಲ ಕಡೆ ಇವರು ಬಂದು ಕುಳಿತುಬಿಟ್ಟಿದ್ದಾರೆ” ಎಂಬ ಅಸಮಾಧಾನದ ಮಾತೊಂದು ಬಂದುಬಿಡುತ್ತದೆ.

ಆದರೆ, ನೀವು ಆ ಹೊಟೇಲಿನ ಮಾಲೀಕನನ್ನೋ ಇಲ್ಲವೇ ಆ ಅಪಾರ್ಟ್ಮೆಂಟಿನ ನಿರ್ವಹಣಾ ವ್ಯವಸ್ಥೆ ಪ್ರಮುಖರನ್ನೋ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿಸಿ, ನಂತರ ಇಂಥದೊಂದು ಕಳವಳವನ್ನು ಹೊರಹಾಕಿದರೆ ಅಲ್ಲಿ ಸಿಗುವ ಉತ್ತರದಲ್ಲಿ ಇನ್ನೊಂದು ಮುಖ ಅನಾವರಣವಾಗುತ್ತದೆ. “ನಮಗೇನು ನಮ್ಮವರಿಗೆ ಕೆಲಸ ಕೊಡಬಾರದು ಅಂತಿರುತ್ತಾ ಸ್ವಾಮೀ…ಬೇಕಾದ ಜನ ಸಿಗಲ್ಲ. ನಮ್ಮ ಕೆಲಸ ಇನ್ಯಾರೋ ಕಸೀತಿದ್ದಾರೆ ಅಂತೆಲ್ಲ ಹೇಳುವವರಿಗೆ ಇದೇ ಕೆಲಸ ಕೊಟ್ಟರೆ ಆಗ ಅದರಿಂದ ತಪ್ಪಿಸಿಕೊಳ್ಳುವ ನೆಪಗಳೇ ಹೆಚ್ಚಾಗಿ ಬಿಡುತ್ತವೆ. ಉತ್ತರದವರಾದರೆ ತಮ್ಮ ಹಳ್ಳಿಗಳಲ್ಲಿ ಇದಕ್ಕಿಂತ ಕಠಿಣ ಪರಿಸ್ಥಿತಿ ನೋಡಿರುತ್ತಾರೆ. ಹೀಗಾಗಿ, ಇಲ್ಲಿ ಬೇಡಿಕೆಗೆ ತಕ್ಕಂತೆ ಮೈಮುರಿದು ಕೆಲಸ ಮಾಡುವವವರು ಸಿಗುತ್ತಾರೆ.” - ಈ ಧಾಟಿಯಲ್ಲೊಂದು ಉತ್ತರ ಬರುತ್ತದೆ. 

ಇವೆಲ್ಲದರ ಸರಿ-ತಪ್ಪುಗಳ ತೀರ್ಮಾನವೇನೂ ಮಾಡುವುದು ಬೇಕಿಲ್ಲ. ಆದರೆ, ಜನವರಿ 20ಕ್ಕೆ ಅಮೆರಿಕದ ಆಡಳಿತ ಸೂತ್ರ ವಹಿಸಿಕೊಳ್ಳಲಿರುವ ಟ್ರಂಪ್ ಜಮಾನಾದಲ್ಲಿ ಎಚ್ 1 ಬಿ ವೀಸಾ ವ್ಯವಸ್ಥೆ ಹೇಗಿರಬಹುದೆಂದು ಎದ್ದಿರುವ ಚರ್ಚೆಯ ಮಾದರಿ ಸಹ ತೀರ ಭಿನ್ನವೇನಲ್ಲ. ಅದರ ಹಂತ ಬೇರೆಯದ್ದೇ ಆದರೂ, ಕರುನಾಡಿನ ಹಿಂದಿ ಭಯ್ಯಾಗಳ ಕುರಿತ ಚರ್ಚೆಯ ಚೌಕಟ್ಟೇ ಇಲ್ಲಿನದ್ದು ಸಹ. 

ಎಚ್ 1 ಬಿ ವೀಸಾ ವಿರೋಧಿಯಾಗಿದ್ದ ಟ್ರಂಪ್ ಪಾಳೆಯದಲ್ಲೇಕೆ ಈಗ ಬೇರೆ ಧ್ವನಿಗಳು?

ತೀರ ಹೆಚ್ಚುವರಿ ವಿವರಗಳಿಗೆ ಹೋಗದೇ ಎಚ್ 1 ಬಿ ವೀಸಾವನ್ನು ಅರ್ಥ ಮಾಡಿಕೊಳ್ಳುವುದಾದರೆ ಅದು ವಿದೇಶಿ ಕೆಲಸಗಾರನೊಬ್ಬನಿಗೆ ಅಮೆರಿಕದಲ್ಲಿ ತಾತ್ಕಾಲಿಕ ಅವಧಿಯೊಂದಕ್ಕೆ ವಾಸವಾಗಿರುವುದಕ್ಕೆ ಅನುಕೂಲ ಕಲ್ಪಿಸುವ ಸಾಧನ. ಟಿ ಸಿ ಎಸ್, ವಿಪ್ರೊ, ಇನ್ಫೊಸಿಸ್ ಸೇರಿದಂತೆ ಹೆಚ್ಚಿನ ಐಟಿ ಕಂಪನಿಗಳು ಆ ನೆಲದಲ್ಲಿ ಭಾರತೀಯರನ್ನು ನೌಕರರನ್ನಾಗಿ ಹೊಂದುವುದಕ್ಕೆ ಇದೇ ಮಾರ್ಗ ಅನುಸರಿಸುತ್ತಿದ್ದವು. ಕೇವಲ ಭಾರತೀಯ ಕಂಪನಿಗಳು ಅಂತಲ್ಲ, ಅಮೆರಿಕದ ಟೆಕ್ ಕಂಪನಿಗಳಿಗೆ ಭಾರತೀಯ ಪ್ರತಿಭೆ ಬೇಕಿದ್ದರೂ ಅದೇ ಮಾರ್ಗ. ಏಕೆಂದರೆ ಗ್ರೀನ್ ಕಾರ್ಡ್ ಪಡೆದು ಶಾಶ್ವತವಾಗಿ ಅಮೆರಿಕದ ಪ್ರಜೆ ಆಗುವ ಮಾರ್ಗ ಬಹಳ ದುಸ್ತರ.

ಈ ಎಚ್ 1 ಬಿ ವೀಸಾವನ್ನು ಯಾರೆಂದರೆ ಅವರಿಗೆ ಕೊಡುವಂತೇನೂ ಇಲ್ಲ ಬಿಡಿ. ಯಾವ ಕೆಲಸವು ವಿಶಿಷ್ಟ ತಾಂತ್ರಿಕ ಪರಿಣತಿ ಬೇಡುವುದೋ ಅಂಥವಕ್ಕೆ ಮಾತ್ರ, ನಿರ್ದಿಷ್ಟ ಡಿಗ್ರಿ ಆಧಾರದ ಮೇಲಷ್ಟೇ ಆ ಉದ್ಯೋಗಕ್ಕೆ ಅಮೆರಿಕದಲ್ಲಿರುವ ಕಂಪನಿಗಳು ಎಚ್ 1 ಬಿ ವೀಸಾ ಅಡಿಯಲ್ಲಿ ಬೇರೆ ದೇಶದ ಪ್ರತಿಭೆಗಳನ್ನು ಕರೆಸಿಕೊಳ್ಳಬಹುದು. ಆದರೆ, ಇಲ್ಲೂ ಪ್ರತಿ ದೇಶಕ್ಕೂ ಅದರದ್ದೇ ಆದ ವೀಸಾದ ಕೋಟಾ ಇದೆ. 1990ರಲ್ಲಿ ಜಾರ್ಜ್ ಬುಶ್ ಕಾಲಕ್ಕೆ ಅನುಷ್ಠಾನವಾಗಿದ್ದ ಈ ವೀಸಾ ವ್ಯವಸ್ಥೆಯನ್ನು ತಮ್ಮ ಈ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲಿ ವಿರೋಧಿಸಿದ್ದವರು ಡೊನಾಲ್ಡ್ ಟ್ರಂಪ್. ಆ ನಿಟ್ಟಿನಲ್ಲಿ ನಿಯಮ-ನಿಬಂಧನೆಗಳನ್ನು ಅವರು ಬಿಗಿಗೊಳಿಸಿದ್ದರು ಸಹ. ಅಮೆರಿಕನ್ನರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ಎಂಬ ನಿಲವು ಈ ಬಾರಿಯ ಟ್ರಂಪ್ ಪ್ರಚಾರಾಂದೋಲನದಲ್ಲೂ ಪ್ರಮುಖ ಸಂಗತಿಯೇ ಆಗಿತ್ತು. ಹಾಗೆಂದೇ, ಟ್ರಂಪ್ ಆರಿಸಿಬಂದರೆ ಭಾರತೀಯ ಐಟಿ ಪ್ರತಿಭೆಗಳಿಗೆ ವೀಸಾ ಕಷ್ಟವಾಗಬಹುದೆಂಬ ಆತಂಕದ ಮಾತು ಮತ್ತು ವಿಶ್ಲೇಷಣೆಗಳು ಬಹಳ ಹಿಂದೆಯೇ ಭಾರತದ ಮಾಧ್ಯಮ ವೇದಿಕೆಗಳಲ್ಲಿ ವ್ಯಕ್ತವಾಗಿದ್ದವು. 

ಆದರೆ, ಇದೀಗ ಜನವರಿ 20ರ ವೇಳೆಗೆ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಅವರಲ್ಲಿ ಧ್ವನಿ ಸ್ವಲ್ಪ ಬದಲಾಗಿದೆ. ಒಂದೊಮ್ಮೆ ಯಾವ ಟ್ರಂಪ್ ಪ್ರಚಾರಾಂದೋಲನವು ಎಚ್ 1 ಬಿ ವೀಸಾವನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿ, ಅದು ಸ್ಥಳೀಯ ಅಮೆರಿಕನ್ನರ ಉದ್ಯೋಗಗಳಿಗೆ ಕುತ್ತು ತರುತ್ತಿದೆ ಎಂಬುದನ್ನು ಬಿಂಬಿಸಿತ್ತೋ ಅದೇ ವ್ಯವಸ್ಥೆಯೀಗ ಪ್ರತಿಭೆಯ ಅನಿವಾರ್ಯತೆ ಬಗ್ಗೆ ಮಾತನಾಡುತ್ತಿದೆ. 

ಈಗ ಕೆಲ ದಿನಗಳ ಹಿಂದೆ ಟ್ರಂಪ್ ಆಡಳಿತವು ತನ್ನ ನಿಯೋಜಿತ ಸರ್ಕಾರದಲ್ಲಿ ಕೃತಕ ಬುದ್ಧಿಮತ್ತೆ ವಿಭಾಗದ ಸಲಹೆಗಾರನನ್ನಾಗಿ ಶ್ರೀರಾಮ ಕೃಷ್ಣನ್ ಅವರನ್ನು ಹೆಸರಿಸಿತು. ಇವರು ಚೆನ್ನೈ ಸಂಜಾತ ಅಮೆರಿಕನ್ ಟೆಕಿ. ಆಗ ಟ್ರಂಪ್ ಅವರ ರಿಪಬ್ಲಿಕನ್ ಪಾಳೆಯದಲ್ಲೇ ಟೀಕೆಗಳು ಶುರುವಾದವು. ಅಲ್ಲಿನ ಬಲಪಂಥೀಯರು, “ಇಂಥವರೇ ನೋಡಿ ಮೂಲ ಅಮೆರಿಕನ್ನರಿಂದ ಕೆಲಸ ಕಸಿಯುತ್ತಿರುವ ಇಂಡಿಯನ್ -ಅಮೆರಿಕನ್ನರು” ಎಂದೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಮತ್ತು ಟೀಕೆಗಳ ಮಳೆ ಸುರಿಸಿದರು. ಆಗ ಅದೇ ಟ್ರಂಪ್ ಪಾಳೆಯದ ಒಂದು ಗುಂಪು ಬಂದು ಶ್ರೀರಾಮ ಕೃಷ್ಣನ್ ಅಷ್ಟೇ ಅಲ್ಲದೇ ವಲಸಿಗ ಪ್ರತಿಭಾವಂತರನ್ನೆಲ್ಲ ಸಮರ್ಥಿಸಿಕೊಂಡಿತು. ಈ ಪಾಳೆಯದ ಅಗ್ರಗಣಿಗಳ ಪೈಕಿ ಪ್ರಮುಖರಾದವರು ಟ್ರಂಪ್ ಆಡಳಿತದಲ್ಲಿ ಮುಖ್ಯ ಚಾಲನಾ ಶಕ್ತಿ ಎಂದೇ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಮತ್ತು ವಿವೇಕ ರಾಮಸ್ವಾಮಿ ಎಂಬುದಿಲ್ಲಿ ಗಮನಾರ್ಹ.

ಕೊನೆಗೂ ನಿರ್ಧರಿಸುವುದು ಮಾರುಕಟ್ಟೆ ಶಕ್ತಿ

ಎಲಾನ್ ಮಸ್ಕ್ ಮತ್ತು ವಿವೇಕ ರಾಮಸ್ವಾಮಿ ಇಂಥವರ ವಾದ ಹೇಗಿದೆಯೆಂದರೆ, ಅವರು ಕೇವಲ ಎಚ್ 1 ಬಿ ವೀಸಾದ ಸುಸೂತ್ರ ಮುಂದುವರಿಕೆಗೆ ಒತ್ತಾಯಿಸುತ್ತಿಲ್ಲ. ಬದಲಿಗೆ, ವೀಸಾ-ಗ್ರೀನ್ ಕಾರ್ಡ್ ನೀಡಿಕೆಗಳಲ್ಲಿ ಇನ್ನಷ್ಟು ನಿಯಮಗಳು ತಗ್ಗಬೇಕು ಎಂಬ ಪ್ರತಿಪಾದನೆ ಮಾಡುತ್ತಿರುವವವರು! ಈಗಿರುವ ವ್ಯವಸ್ಥೆಯಲ್ಲಿ ಎಚ್ 1 ಬಿ ವೀಸಾ ಪಡೆಯುವುದಕ್ಕೆ ಪ್ರತಿ ದೇಶಕ್ಕೂ ಒಂದು ಮಿತಿ ಇದೆ.

ಅಂದರೆ ಪ್ರತಿವರ್ಷ ಲಭ್ಯವಿರುವ ವೀಸಾಗಳಲ್ಲಿ ಇಂತಿಷ್ಟು ಶೇಕಡ ಮಾತ್ರ ಭಾರತಕ್ಕೆ, ಮತ್ತೊಂದಿಷ್ಟು ಶೇಕಡ ಚೀನಾಕ್ಕೆ, ಇನ್ನೊಂದು ನಿರ್ದಿಷ್ಟ ಶೇ. ಯುರೋಪಿಯನ್ನರಿಗೆ ಇತ್ಯಾದಿ ವಿಭಾಗಗಳಿವೆ. ಆದರೆ ಟ್ರಂಪ್ ಪಾಳೆಯದಲ್ಲಿರುವ ಮಸ್ಕ್ ಮೊದಲಾದವರು ಹೇಳುತ್ತಿರುವುದು ಈ ಮಿತಿಯನ್ನೇ ತೆಗೆಯಬೇಕು ಅನ್ನೋದು. ಅಂದರೆ, ಲಭ್ಯ ಸ್ಥಾನಗಳನ್ನು ತುಂಬುವ ಅರ್ಹತೆಯ ಪ್ರತಿಭೆಗಳು ಮುಕ್ಕಾಲು ಪಾಲು ಭಾರತದಲ್ಲೇ ಸಿಗುತ್ತಾರೆ ಎಂದಾದರೆ ಅಲ್ಲಿನವರಿಗೇ ಈ ಉದ್ಯೋಗದ ವೀಸಾ ಸಿಗುವಂತಿರಬೇಕು, ಏಕೆಂದರೆ ಅಮೆರಿಕವನ್ನು ಬೆಳಗುವುದಕ್ಕೆ ಪ್ರತಿಭೆಗಳು ಮುಖ್ಯವೇ ಹೊರತು ಎಲ್ಲಿಂದ ಬರುತ್ತಿದ್ದಾರೆ ಎಂಬ ಸಂಗತಿ ಅಲ್ಲ ಎಂಬ ವಾದ ಅವರದ್ದು.

ಸದ್ಯಕ್ಕೆ ಅಮೆರಿಕವು ವಾರ್ಷಿಕವಾಗಿ 65,000 ಎಚ್ 1 ಬಿ ವೀಸಾಗಳನ್ನು ಕೊಡುತ್ತದೆ. ಇನ್ನೊಂದು 20,000 ಮೀಸಲು ಸ್ಥಾನಗಳಿವೆ. ಅವುಗಳನ್ನು ಪಡೆಯುವುದಕ್ಕೆ ಅಮೆರಿಕದ ಸಂಸ್ಥೆಗಳಲ್ಲೇ ಮಾಸ್ಟರ್ಸ್ ಇಲ್ಲವೇ ಡಾಕ್ಟರೇಟ್ ಮಾಡಿರಬೇಕಾದದ್ದು ಕಡ್ಡಾಯ. ಮೊದಲನೆಯದರಲ್ಲಿ ಆಯಾ ದೇಶಗಳಿಗೊಂದು ಮಿತಿ ನಿಗದಿಯಾಗಿದ್ದರೆ, ಎರಡನೇ ವಿಧಾನವು ಮುಕ್ತ. ಆದರೆ ಈ ಮಾಸ್ಟರ್ಸ್-ಡಾಕ್ಟರೇಟ್ ವಿಭಾಗದಲ್ಲಿ ಸಹ ಲಭ್ಯ ಸ್ಥಾನಗಳಿಗಿಂತ ದೊಡ್ಡಮಟ್ಟದಲ್ಲಿ ಅರ್ಜಿಗಳು ಬರುತ್ತಾವಾದ್ದರಿಂದ ಅಲ್ಲಿ ಲಾಟರಿ ವ್ಯವಸ್ಥೆ ಅನುಸರಿಸುತ್ತಾರೆ. ಅಂದರೆ, ಅರ್ಹ ಅರ್ಜಿದಾರರ ಪೈಕಿ ಅದೃಷ್ಟ ಇದ್ದವರಿಗೆ ಸಿಗುತ್ತದೆ. ಇದುವರಿಗಿನ ಅಂಕಿ-ಅಂಶಗಳನ್ನು ಗಣಿಸಿದಾಗ ಈ ಉದ್ಯೋಗ ವೀಸಾ ಪಡೆದವರಲ್ಲಿ ಶೇ. 70 ಪಾಲು ಭಾರತೀಯರು. ಶೇ. 12-13 ಪಾಲು ಚೀನಿಯರು. ಇನ್ನುಳಿದ ಭಾಗವನ್ನು ಮೆಕ್ಸಿಕೊ, ಕೆನಡಾ, ಪಿಲಿಪ್ಪೀನ್ಸ್, ತೈವಾನ್, ಕೊರಿಯಾ ದೇಶಗಳೆಲ್ಲ ತುಂಬುತ್ತಿವೆ. 

“ಸಿಲಿಕಾನ್ ವ್ಯಾಲಿಯಲ್ಲಿ ಎಂಜಿನಿಯರಿಂಗ್ ಪ್ರತಿಭೆಗಳು ಯಾವತ್ತೂ ಅಗತ್ಯವಿದ್ದಾರೆ. ಒಂದೊಮ್ಮೆ ನಾನು ಅಮೆರಿಕಕ್ಕೆ ಕಾಲಿರಿಸಿದ್ದೇ ಉದ್ಯೋಗ ವೀಸಾದ ಆಧಾರದಲ್ಲಿ. ಹೀಗಾಗಿ ಅಮೆರಿಕವು ನಿರಂತರ ಅನ್ವೇಷಣೆಗಳನ್ನು ಮಾಡುತ್ತ ತಂತ್ರಜ್ಞಾನ ಉದ್ದಿಮೆ ಕ್ಷೇತ್ರದಲ್ಲಿ ಪಾರಮ್ಯ ಮೆರೆಯಬೇಕೆಂದರೆ ಅದಕ್ಕೆ ಟೆಕ್ ಪ್ರತಿಭೆಗಳು ಬೇರೆ ದೇಶಗಳಿಂದ ಇಲ್ಲಿ ಬರುವುದಕ್ಕೆ ಸುಗಮವಾದ ಉದ್ಯೋಗ ವೀಸಾ ಹಾಗೂ ಶಾಶ್ವತ ವಾಸ್ತವ್ಯ ನೀಡಿಕೆ ನಿಯಮಗಳಿರಬೇಕು” ಎಂದು ಪ್ರತಿಪಾದಿಸುತ್ತಿರುವ ಎಲಾನ್ ಮಸ್ಕ್ ಪ್ರಾರಂಭದಿಂದಲೂ ಮಾಡುತ್ತಿರುವ ಪ್ರತಿಪಾದನೆ ಇಷ್ಟು- ಅಮೆರಿಕಕ್ಕೆ ಮೆಕ್ಸಿಕೊ ಮುಂತಾದ ಕಡೆಗಳಿಂದ ಒಳನುಗ್ಗುತ್ತಿರುವ ಕೌಶಲರಹಿತ ಜನಸಂಖ್ಯೆಯ ವಲಸೆಯನ್ನು ತಡೆಗಟ್ಟಬೇಕು. ಆದರೆ, ಪದವಿ ಮತ್ತು ಕೌಶಲಗಳನ್ನಿರಿಸಿಕೊಂಡಿರುವವರು ಯಾವುದೇ ದೇಶದವರಾಗಿದ್ದರೂ ಅವರು ಅಮೆರಿಕಕ್ಕೆ ಬಂದು ಯೋಗದಾನ ಮಾಡಿ ಈ ದೇಶವನ್ನು ಎತ್ತರದಲ್ಲಿರಿಸುವುದಕ್ಕೆ ಎಲ್ಲ ಬಗೆಯ ಅವಕಾಶಗಳಿರಬೇಕು ಎನ್ನುವುದು.

ಆದರೆ ಅಮೆರಿಕದ ರಾಜಕೀಯ ಚಿಂತನೆಗೆ ಬೇರೆಯದೇ ಆತಂಕಗಳಿವೆ. ಹೀಗೆಲ್ಲ ಆದರೆ ಮೂಲ ಅಮೆರಿಕನ್ನರಿಗೆ ಉದ್ಯೋಗ ನಷ್ಟವಾಗುತ್ತದೆ ಹಾಗೂ ಅವಕಾಶಗಳು ಕಡಿಮೆ ಆಗುತ್ತವೆ ಎಂದು ಟ್ರಂಪ್ ಪಾಳೆಯದಲ್ಲೇ ಇರುವ ಬಲಪಂಥೀಯ ನಾಯಕರ ಇನ್ನೊಂದು ವರ್ಗ ವಾದಿಸುತ್ತಿದೆ. ಸಹಜವಾಗಿಯೇ ಈ ವಾದ ಅಲ್ಲಿನ ಮತದಾರ ವರ್ಗಕ್ಕೆ ಆಪ್ತವೆನಿಸುತ್ತದೆ. ಕೊನೆಗೆ ಮತ ಹಾಕಿ ಸರ್ಕಾರವನ್ನು ಆರಿಸುವವರು ಅವರೇ ಆದ್ದರಿಂದ ಆ ಅಭಿಪ್ರಾಯಕ್ಕೊಂದು ತೂಕ ಇದ್ದೇ ಇದೆ.

ಈಗ ನಿಧಾನಕ್ಕೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತಿದೆ ಎಂದರೆ, ಅಮೆರಿಕದ ಬಲಪಂಥೀಯರಲ್ಲೇ ಪ್ರತಿಭಾನ್ವಿತರ ವಲಸೆ ಸಮರ್ಥನೆಯ ಹಲವು ವ್ಯಾಖ್ಯಾನಗಳು ಹುಟ್ಟುತ್ತಿವೆ. ಮೊದಲನೆಯದಾಗಿ, ಎಚ್ 1 ಬಿ ವೀಸಾವು ಭಾರತದಂತಹ ದೇಶಗಳಿಂದ ‘ಕಡಿಮೆ ದರದ ಕೆಲಸಗಾರ’ರನ್ನು ತಂದು ಅಮೆರಿಕನ್ನರಿಗೆ ಹೆಚ್ಚಿನ ಸಂಬಳ ಕೊಡುವುದರಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತಿದೆ ಎಂಬ ಗ್ರಹಿಕೆ ತಪ್ಪೆಂದು ಟೆಕ್ ವಲಯ ಪ್ರತಿಪಾದಿಸುವುದಕ್ಕೆ ಶುರು ಮಾಡಿದೆ. ಉದ್ಯೋಗ ವೀಸಾದಲ್ಲಿ ತೆಗೆದುಕೊಳ್ಳುವುದು ವಿಶೇಷ ಕೌಶಲವಿರುವವರನ್ನು ಮಾತ್ರ. ಹೀಗಾಗಿ, ಅಮೆರಿಕದ ಸಾಮಾನ್ಯ ಟೆಕ್ ಉದ್ಯೋಗಿಯೊಬ್ಬನಿಗೆ ಕೊಡುವ ಸಂಬಳಕ್ಕಿಂತ ಹೆಚ್ಚಿನ ಮೊತ್ತವನ್ನೇ ಕಂಪನಿಯು ಆತನಿಗೆ ವ್ಯಯಿಸಬೇಕಿರುತ್ತದೆ. ಹೀಗಾಗಿ ಉದ್ಯೋಗ ವೀಸಾವನ್ನು ಕಂಪನಿಗಳು ಕೇವಲ ಹಣ ಉಳಿಸುವುದಕ್ಕೆ ಬಳಸುವ ಸ್ಥಿತಿ ಈಗ ಇಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ.

ಉದ್ಯೋಗ ವೀಸಾದಲ್ಲಿ ಬರುವವರು ವಿಶೇಷ ಪ್ರತಿಭಾನ್ವಿತರು. ಅಂಥವರು ಅಮೆರಿಕದಲ್ಲಿದ್ದಷ್ಟು ಕಾಲ ತಮ್ಮ ದುಡಿಮೆಯನ್ನು ಇಲ್ಲಿಯೇ ಖರ್ಚು ಮಾಡುವುದರಿಂದ ಅದು ಅರ್ಥವ್ಯವಸ್ಥೆಗೂ ಪೂರಕವೇ ಎಂಬ ಇನ್ನೊಂದು ವಾದವೂ ಮುಂದೆ ಬಂದಿದೆ. 

ಅಲ್ಲದೇ, ಸ್ಟೆಮ್ಸ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್,ಗಣಿತ) ವಿಭಾಗದಲ್ಲಿ ಪದವೀಧರರಾಗುತ್ತಿರುವವರ ಪ್ರಮಾಣ ಭಾರತದಂಥ ದೇಶಗಳಲ್ಲಿ ಹೆಚ್ಚಿದೆ. ಭಾರತದ ಪದವೀಧರರ ಪೈಕಿ ಶೇ. 34ರಷ್ಟು ಸ್ಟೆಮ್ಸ್ ವಿಭಾಗದಿಂದ ಬಂದಿರುವವರಾಗಿದ್ದರೆ ಇದೇ ಸಂಖ್ಯೆ ಅಮೆರಿಕದಲ್ಲಿ ಶೇ. 19.6 ಮಾತ್ರವಿದೆ. ಯುಕೆ ಶೇ. 26, ಫ್ರಾನ್ಸ್ ಶೇ. 25, ಸ್ಪೇನ್ ಶೇ. 23 ಹೀಗೆಲ್ಲ ಅಂಕಿಅಂಶಗಳು ತೆರೆದುಕೊಳ್ಳುತ್ತವೆ. ಹೀಗಾಗಿ ಸ್ಟೆಮ್ಸ್ ಸಂಬಂಧದ ಉದ್ಯೋಗಗಳನ್ನು ತುಂಬುವಾಗ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರತದಂಥ ದೇಶಗಳಿಗೆ ಹೆಚ್ಚಿನಮಟ್ಟದ ಉದ್ಯೋಗ ವೀಸಾಗಳು ಸಿಗುವುದು ಸಹಜವೇ ಆಗಿದೆ ಎಂಬ ಆಯಾಮವನ್ನೂ ಹಲವು ವಿಶ್ಲೇಷಕರು ಎತ್ತಿ ತೋರಿಸುತ್ತಿದ್ದಾರೆ. 

ಕೊನೆಯಲ್ಲಿ, ಅಮೆರಿಕದ ರಾಜಕೀಯ ಧ್ವನಿ ಗೆಲ್ಲುತ್ತದೆಯೋ ಅಥವಾ ಮಾರುಕಟ್ಟೆಯ ಶಕ್ತಿಯೇ ಉದ್ಯೋಗ ವೀಸಾದ ಮಾರ್ಗವನ್ನು ನಿರ್ಧರಿಸುತ್ತದೆಯೋ ಎಂಬುದು ಉಳಿದಿರುವ ಪ್ರಶ್ನೆ. ಈ ಹಿಂದೆ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ, ಎಚ್ 1 ಬಿ ವೀಸಾವು ಅಮೆರಿಕನ್ನರಿಗೆ ಮಾರಕ ಎನ್ನುತ್ತ “ಬೈ ಅಮೆರಿಕನ್, ಹೈರ್ ಅಮೆರಿಕನ್” (ಅಮೆರಿಕದ್ದನ್ನೇ ಖರೀದಿಸಿ, ಅಮೆರಿಕದವರಿಗೇ ಉದ್ಯೋಗ ನೀಡಿ) ಎಂಬ ಆದೇಶ ಹೊರಡಿಸಿದ್ದರು ಡೊನಾಲ್ಡ್ ಟ್ರಂಪ್. ಈ ಬಾರಿ ಡಿಸೆಂಬರಿನಲ್ಲಿ ನೀಡಿರುವ ಸಂದರ್ಶನದಲ್ಲಿ ಧ್ವನಿಯೇ ಬೇರೆಯಾಗಿದೆ. “ಉದ್ಯೋಗ ವೀಸಾ ವ್ಯವಸ್ಥೆ ಒಂದು ಒಳ್ಳೆ ಯೋಜನೆ. ನಾನು ಸಹ ನನ್ನ ಉದ್ಯಮದಲ್ಲಿ ಎಚ್ 1 ಬಿ ವೀಸಾವನ್ನು ಸಾಕಷ್ಟು ಉಪಯೋಗಿಸಿದ್ದೇನೆ” ಎಂದಿರುವುದು ಬದಲಾಗುತ್ತಿರುವ ಸಮಯಕ್ಕೆ ಹಿಡಿದ ಕನ್ನಡಿಯಂತಿದೆ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT