ಚೀನಾ ಅರುಣಾಚಲ ಪ್ರದೇಶದ ಗಡಿಗೆ ಸನಿಹವಾಗಿ, ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅತ್ಯಂತ ಬೃಹತ್ತಾದ ಅಣೆಕಟ್ಟು ನಿರ್ಮಾಣ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿದೆ. ಅಣೆಕಟ್ಟು ನಿರ್ಮಾಣದ ಶಂಕುಸ್ಥಾಪನೆ ಕಳೆದ ವಾರ ನಡೆದಿದ್ದು, ಈ ಸಮಾರಂಭದಲ್ಲಿ ಚೀನಾದ ಪ್ರೀಮಿಯರ್ (ಪ್ರಧಾನ ಮಂತ್ರಿ) ಲಿ ಕಿಯಾಂಗ್ ಭಾಗವಹಿಸಿದ್ದರು ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ.
ಜಲ ವಿದ್ಯುತ್ ಯೋಜನೆಗಾಗಿ ಈ ಬೃಹತ್ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಅಂದಾಜು 167.8 ಬಿಲಿಯನ್ ಡಾಲರ್ (ಅಂದಾಜು 14 ಲಕ್ಷ ಕೋಟಿ ರೂಪಾಯಿ) ವೆಚ್ಚ ತಗಲುವ ನಿರೀಕ್ಷೆಗಳಿವೆ. ಈ ಅಣೆಕಟ್ಟು ಪೂರ್ಣಗೊಂಡಾಗ, ಇದು ಜಗತ್ತಿನ ಅತಿದೊಡ್ಡ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಲಿದೆ. ಈ ಅಣೆಕಟ್ಟಿನ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದಲೂ ಚೀನಾ ಯೋಜನೆ ರೂಪಿಸುತ್ತಾ ಬಂದಿದ್ದು, ನದಿಯ ಹರಿವಿನ ಮೇಲೆ ಅಣೆಕಟ್ಟು ಎಂತಹ ಪರಿಣಾಮ ಬೀರಬಹುದು ಎಂದು ಭಾರತ ಮತ್ತು ಬಾಂಗ್ಲಾದೇಶಗಳು ಸಹಜವಾಗಿಯೇ ಆತಂಕಕ್ಕೆ ಒಳಗಾಗಿವೆ.
ಪ್ರಸ್ತುತ ಅಣೆಕಟ್ಟನ್ನು ಟಿಬೆಟ್ಟಿನ ಯಾರ್ಲಂಗ್ ತ್ಸಾಂಗ್‌ಪೊ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದು, ಇದೇ ನದಿಯನ್ನು ಭಾರತದಲ್ಲಿ ಬ್ರಹ್ಮಪುತ್ರಾ ನದಿ ಎನ್ನಲಾಗುತ್ತದೆ. ಅಣೆಕಟ್ಟು ನಿರ್ಮಾಣವಾಗುವ ಸ್ಥಳವನ್ನು 'ಗ್ರೇಟ್ ಬೆಂಡ್' ಎಂದು ಕರೆಯಲಾಗುತ್ತದೆ. ಮೆಡಾಗ್ ಕೌಂಟಿಯ ಈ ಪ್ರದೇಶದಲ್ಲಿ 'ಯು ಟರ್ನ್ ' ತೆಗೆದುಕೊಳ್ಳುವ ನದಿ, ಅದರ ತಕ್ಷಣವೇ ಅರುಣಾಚಲ ಪ್ರದೇಶದ ಗೆಲ್ಲಿಂಗ್ ಪ್ರದೇಶದ ಮೂಲಕ ಭಾರತದೊಳಗೆ ಪ್ರವೇಶಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ ನದಿಯನ್ನು ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ.
ಚೀನಾ ತನ್ನ ಬೃಹತ್ ಅಣೆಕಟ್ಟು ಯೋಜನೆಯನ್ನು ಮೊದಲ ಬಾರಿಗೆ 2021ರಲ್ಲಿ ಘೋಷಿಸಿತ್ತು. ಇದು ಪೂರ್ಣಗೊಂಡಾಗ 60,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದ್ದು, ಇದು ಪ್ರಸ್ತುತ ಜಗತ್ತಿನ ಅತಿದೊಡ್ಡ ಜಲ ವಿದ್ಯುತ್ ಯೋಜನೆಯಾದ, ಯಾಂಗ್‌ತ್ಸೆ ನದಿಗೆ ಚೀನಾ ನಿರ್ಮಿಸಿರುವ ತ್ರೀ ಗಾರ್ಜಸ್ ಅಣೆಕಟ್ಟಿಗಿಂತಲೂ ಮೂರು ಪಟ್ಟು ಹೆಚ್ಚಾಗಿರಲಿದೆ.
ತ್ರೀ ಗಾರ್ಜಸ್ ಅಣೆಕಟ್ಟು ಸದ್ಯದ ಮಟ್ಟಿಗೆ ಜಗತ್ತಿನ ಅತಿದೊಡ್ಡ ಅಣೆಕಟ್ಟಾಗಿದ್ದು, ಚೀನಾದ ಯಾಂಗ್‌ತ್ಸೆ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ಅಪಾರ ಪ್ರಮಾಣದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ತ್ರೀ ಗಾರ್ಜಸ್ ಅಣೆಕಟ್ಟು, ಅಂದಾಜು 22,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಅದರೊಡನೆ, ಅಣೆಕಟ್ಟು ನದಿಯ ಪ್ರವಾಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.
ಅಣೆಕಟ್ಟು ನಿರ್ಮಾಣ ಯೋಜನೆ ಆರಂಭಗೊಳ್ಳುವ ಒಂದು ವಾರ ಮೊದಲೇ, ಜುಲೈ 19ರಂದು ಈ ಕುರಿತು ಮಾತನಾಡಿದ್ದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಈ ಅಣೆಕಟ್ಟು ಒಂದು ಜಲ ಬಾಂಬ್ ರೀತಿಯದಾಗಲಿದ್ದು, ಅರುಣಾಚಲ ಪ್ರದೇಶದ ಜನರ ಉಳಿವಿಗೇ ಸಂಚಕಾರ ತಂದೊಡ್ಡಬಲ್ಲ ಅಪಾಯವನ್ನು ಸೃಷ್ಟಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ನಾವು ಚೀನಾದಿಂದ ನಿರಂತರವಾಗಿ ಇರುವ ಮಿಲಿಟರಿ ಆತಂಕವನ್ನು ನಿರ್ಲಕ್ಷಿಸಿದರೂ, ಈ ಅಣೆಕಟ್ಟು ಅದಕ್ಕಿಂತಲೂ ಹೆಚ್ಚಿನ ತೊಂದರೆ ತಂದೊಡ್ಡಬಹುದು ಎಂದು ಪೆಮಾ ಖಂಡು ಅಭಿಪ್ರಾಯ ಪಟ್ಟಿದ್ದಾರೆ. "ಸ್ಥಳೀಯ ಬುಡಕಟ್ಟು ಸಮುದಾಯಗಳ ಜೀವ - ಜೀವನಗಳ ಮೇಲೆ ಈ ಅಣೆಕಟ್ಟು ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅದರೊಡನೆ, ಚೀನಾ ಈ ಅಣೆಕಟ್ಟನ್ನು ಜಲ ಬಾಂಬ್ ರೀತಿಯಲ್ಲಿ ದುರ್ಬಳಕೆ ಮಾಡುವ ಅಪಾಯವಿದೆ. ಇದು ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿಸುತ್ತದೆ" ಎಂದು ಖಂಡು ಹೇಳಿದ್ದಾರೆ.
ಚೀನಾ ಏನು ಮಾಡಬಹುದು ಎಂದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಖಂಡು ಅಭಿಪ್ರಾಯ ಪಟ್ಟಿದ್ದಾರೆ. ಒಂದು ವೇಳೆ ಚೀನಾ ಏನಾದರೂ ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದರೆ, ಅದು ಸಂಪೂರ್ಣ ಸಿಯಾಂಗ್ ಪ್ರಾಂತ್ಯವನ್ನೇ ನಾಶಪಡಿಸಬಹುದು. ಅದರೊಡನೆ, ಕಾಲ ಕಳೆದಂತೆ ಸಿಯಾಂಗ್ ಮತ್ತು ಬ್ರಹ್ಮಪುತ್ರಾ ನದಿಗಳು ಬಹಳಷ್ಟು ನೀರು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಪೆಮಾ ಖಂಡು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾ ಏನಾದರೂ ಟಿಬೆಟ್ಟಿನಲ್ಲಿರುವ ತನ್ನ ಅಣೆಕಟ್ಟುಗಳಿಂದ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಇದ್ದಕ್ಕಿದ್ದ ಹಾಗೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದರೆ, ಅದರಿಂದ ಖಂಡಿತವಾಗಿಯೂ ಪ್ರವಾಹದ ಅಪಾಯ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಅದರೊಡನೆ, ಅಣೆಕಟ್ಟುಗಳ ಒಡೆತ, ಭೂಕುಸಿತ ಅಥವಾ ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳೂ ಗಂಭೀರ ಅಪಾಯ ತಂದೊಡ್ಡಬಹುದು.
ಭೂಮಿಯ ಹೊರಪದರಗಳು 'ಪ್ಲೇಟ್ಸ್' ಎಂದು ಕರೆಯಲಾಗುವ ಬೃಹತ್ ತುಂಡುಗಳಿಂದ ನಿರ್ಮಿತವಾಗಿವೆ. ಈ ಪ್ಲೇಟ್‌ಗಳು ಒಂದಕ್ಕೊಂದು ಒಗಟಿನಂತೆ ಜೋಡಿಸಿಕೊಂಡಿವೆ. ಟಿಬೆಟ್ಟಿನಲ್ಲಿ, ಇವುಗಳ ಪೈಕಿ ಎರಡು ಪ್ಲೇಟ್‌ಗಳಾದ ಇಂಡಿಯನ್ ಪ್ಲೇಟ್ ಮತ್ತು ಯುರೇಷ್ಯನ್ ಪ್ಲೇಟ್‌ಗಳು (ಯುರೋಪ್ ಮತ್ತು ಬಹುತೇಕ ಏಷ್ಯಾವನ್ನು ಒಳಗೊಂಡಿದೆ) ನಿರಂತರವಾಗಿ ಒಂದನ್ನೊಂದು ನೆಲದಾಳದಲ್ಲಿ ಒತ್ತುತ್ತಿರುತ್ತವೆ.
ಇಂತಹ ನಿರಂತರ ಒತ್ತಡ ಮತ್ತು ಚಲನೆಗಳು ಭೂಮಿ ನಡುಗುವಂತೆ ಮಾಡಿ, ಆಗಾಗ ಭೂಕಂಪ ಉಂಟಾಗುವಂತೆ ಮಾಡುತ್ತವೆ. ಆದ್ದರಿಂದಲೇ ಟಿಬೆಟ್ ಭೂಕಂಪ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದ್ದು, ಇದು ಭೂಮಿಯ ಮೇಲ್ಮೈ ಪದರ ಒಡೆಯುವ ಅಥವಾ ಬದಲಾಗುವಂತಹ ನೈಸರ್ಗಿಕ ಒತ್ತಡದ ನೆಲವಾಗಿದೆ.
ಚೀನಾ ಈಗ ಅಣೆಕಟ್ಟು ನಿರ್ಮಿಸಲು ಹೊರಟಿರುವ ಸ್ಥಳವೂ ಇಂತಹ ಸೂಕ್ಷ್ಮ ಪ್ರದೇಶದಲ್ಲಿದೆ. ಈ ಪ್ರದೇಶ ಕೇವಲ ಭೂಕಂಪ ಪೀಡಿತ ಪ್ರದೇಶ ಮಾತ್ರವಲ್ಲದೆ, ಅತ್ಯಂತ ಸೂಕ್ಷ್ಮ ಮತ್ತು ದುರ್ಬಲವಾದ ನೈಸರ್ಗಿಕ ವಾತಾವರಣವನ್ನು ಹೊಂದಿದೆ.
ಅಸ್ಸಾಂ ಪಾಲಿಗೆ ಬ್ರಹ್ಮಪುತ್ರಾ ನದಿ ಜೀವನಾಧಾರವಾಗಿದೆ. ಈ ನದಿ ಅಸ್ಸಾಮಿನ ಆರ್ಥಿಕತೆ, ಸಂಸ್ಕೃತಿ, ಇತಿಹಾಸ ಮತ್ತು ವಾತಾವರಣದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ಒಂದು ವೇಳೆ ಬ್ರಹ್ಮಪುತ್ರಾ ನದಿಯ ಹರಿವಿನಲ್ಲಿ ಏನಾದರೂ ದೊಡ್ಡ ಬದಲಾವಣೆ ಉಂಟಾದರೆ, ಅದು ಅಸ್ಸಾಮಿನ ಜನತೆಗೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.
ಜುಲೈ 21ರಂದು ಈ ಕುರಿತು ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅಸ್ಸಾಮಿಗರ ಆತಂಕವನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸಿದ್ದರು. ಬ್ರಹ್ಮಪುತ್ರಾ ನದಿ ಅಸ್ಸಾಮನ್ನು ಪ್ರವೇಶಿಸಿದ ಬಳಿಕವೇ ಬೃಹತ್ ನದಿಯಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ. ಅಸ್ಸಾಮಿನಲ್ಲಿ ಬ್ರಹ್ಮಪುತ್ರಾ ನದಿಗೆ ಬಹಳಷ್ಟು ಉಪನದಿಗಳು, ಮತ್ತು ಮಾನ್ಸೂನ್ ಮಳೆಯ ನೀರು ಸೇರಿಕೊಂಡು, ಬ್ರಹ್ಮಪುತ್ರಾ ನದಿ ಅತ್ಯಂತ ದೊಡ್ಡದಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಬ್ರಹ್ಮಪುತ್ರಾ ನದಿ ತನ್ನ ಹರಿವಿಗಾಗಿ ಕೇವಲ ಒಂದು ನೀರಿನ ಮೂಲವನ್ನು ಅವಲಂಬಿಸಿರದ ಕಾರಣ ತನಗೆ ಹೆಚ್ಚಿನ ಆತಂಕವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಬ್ರಹ್ಮಪುತ್ರಾ ನದಿಯ ಬಹಳಷ್ಟು ನೀರು ಭೂತಾನ್, ಅರುಣಾಚಲ ಪ್ರದೇಶ, ಮತ್ತು ಅಸ್ಸಾಮಿನ ನದಿಗಳು, ಮಳೆಯ ಪ್ರಮಾಣ ಮತ್ತು ಇತರ ನೀರಿನ ಸಂಪನ್ಮೂಲಗಳಿಂದ ಬರುತ್ತದೆ ಎಂದು ಅವರು ವಿವರಿಸಿದ್ದಾರೆ.
ಇದಕ್ಕೂ ಮುನ್ನ, ಜೂನ್ 2ರಂದು, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಹಿಂದೆ ಟ್ವಿಟರ್) ಶರ್ಮಾ ಈ ಕುರಿತು ಬರೆದಿದ್ದರು. ಭಾರತ ಮುಖ್ಯವಾಗಿ ಬ್ರಹ್ಮಪುತ್ರಾ ನದಿಯ ಮೇಲಿನ ಭಾಗದ ಮೇಲೆ ಅವಲಂಬಿತವಾಗಿಲ್ಲ ಎಂದು ಅವರು ಹೇಳಿದ್ದರು. ಇಲ್ಲಿ ನದಿಯ ಮೇಲಿನ ಭಾಗ ಎಂದರೆ, ನದಿ ಕೆಳ ಪ್ರದೇಶಗಳಿಗೆ ಹರಿಯುವ ಮುನ್ನ ಸಾಗಿ ಬರುವ ಪರ್ವತಗಳಂತಹ ಎತ್ತರದ ಪ್ರದೇಶಗಳಾಗಿವೆ. ಬ್ರಹ್ಮಪುತ್ರಾ ನದಿಗೆ ಚೀನಾದ ಕೊಡುಗೆ ಕೇವಲ 30-35% ಆಗಿದ್ದು, ಇದರಲ್ಲಿ ಬಹುತೇಕ ನೀರು ಹಿಮಗಡ್ಡೆಗಳ ಕರಗುವಿಕೆಯಿಂದ ಮತ್ತು ಒಂದಷ್ಟು ನೀರು ಟಿಬೆಟ್ಟಿನಲ್ಲಿ ಬೀಳುವ ಮಳೆಯಿಂದ ಬರುತ್ತದೆ ಎಂದು ಅವರು ವಿವರಿಸಿದ್ದಾರೆ.
ಚೀನಾ ನೀರಿನ ಹರಿವನ್ನು ಕಡಿಮೆಗೊಳಿಸುವ ಸಾಧ್ಯತೆಗಳಿಲ್ಲ. ಒಂದು ವೇಳೆ ಹಾಗೇನಾದರೂ ಸಂಭವಿಸಿದರೂ, ಅದರಿಂದ ಭಾರತಕ್ಕೆ ಸಹಾಯವೇ ಆಗಲಿದೆ ಎಂದು ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ. ಅದರಿಂದ ಅಸ್ಸಾಮಿನಲ್ಲಿ ಪ್ರತಿವರ್ಷವೂ ತಲೆದೋರುವ, ಜನರನ್ನು ಸ್ಥಳಾಂತರಗೊಳಿಸಿ, ಅವರ ಮನೆ ಮಠ, ಉದ್ಯೋಗ, ಜೀವನಕ್ಕೆ ಹಾನಿ ಉಂಟುಮಾಡುವ ಪ್ರವಾಹ ಪರಿಸ್ಥಿತಿ ಕಡಿಮೆಯಾಗಬಹುದು ಎಂದು ಶರ್ಮಾ ಹೇಳಿದ್ದಾರೆ.
ಜುಲೈ 21ರಂದು ಮತ್ತೆ ಅಣೆಕಟ್ಟೆಯ ಕುರಿತು ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಅಣೆಕಟ್ಟು ಎಂತಹ ಪರಿಣಾಮ ಬೀರಬಹುದು ಎಂಬ ಕುರಿತು ವಿಭಿನ್ನ ಅಭಿಪ್ರಾಯಗಳಿವೆ ಎಂದಿದ್ದಾರೆ. ಭಾರತ ಸರ್ಕಾರ ಒಂದೋ ಈಗಾಗಲೇ ಈ ಕುರಿತು ಚೀನಾದೊಡನೆ ಮಾತುಕತೆ ಆರಂಭಿಸಿದೆ. ಇಲ್ಲವಾದರೆ ಶೀಘ್ರದಲ್ಲೇ ಮಾತುಕತೆ ನಡೆಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜುಲೈ 19ರಂದು ನಡೆದ ಸಮಾರಂಭದ ಬಳಿಕ, ಭಾರತ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿಲ್ಲ. ಆದರೆ, ನದಿಗೆ ಅಡ್ಡಲಾಗಿ ಚೀನಾ ನಡೆಸುತ್ತಿರುವ ನಿರ್ಮಾಣ ಕಾಮಗಾರಿಯನ್ನು ತಾನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಸರ್ಕಾರ ಹೇಳಿದೆ.
ಜನವರಿ ತಿಂಗಳಲ್ಲಿ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು ಭಾರತ ನದಿಯ ಕೆಳ ಪಾತ್ರದಲ್ಲಿ ಇರುವ ದೇಶವಾಗಿದ್ದು, ನದಿ ನೀರನ್ನು ಬಳಸಿಕೊಳ್ಳುವ ಎಲ್ಲ ಹಕ್ಕನ್ನೂ ಹೊಂದಿದೆ ಎಂದಿದ್ದಾರೆ. ಈ ನದಿಗಳಲ್ಲಿ ಚೀನಾ ಕೈಗೊಳ್ಳುವ ಬೃಹತ್ ಯೋಜನೆಗಳ ಕುರಿತು ಭಾರತ ನಿರಂತರವಾಗಿ ತನ್ನ ಕಳವಳಗಳನ್ನು ಆ ದೇಶದೊಡನೆ ಹಂಚಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ಮೆಡಾಗ್ ಕೌಂಟಿಯ ಬೃಹತ್ ಯೋಜನೆ ಬೆಳಕಿಗೆ ಬಂದ ಬಳಿಕ, ಭಾರತ ಮತ್ತೊಮ್ಮೆ ನದಿಯ ಕೆಳ ಪಾತ್ರದ ದೇಶಗಳ ಜೊತೆಗೆ ಮುಕ್ತವಾಗಿ ಮಾತುಕತೆ ನಡೆಸುವ ಅಗತ್ಯವನ್ನು ಮರಳಿ ಪ್ರತಿಪಾದಿಸಿದೆ. ಬ್ರಹ್ಮಪುತ್ರಾ ನದಿಯ ಮೇಲ್ಭಾಗದಲ್ಲಿ ಚೀನಾ ನಡೆಸುವ ಚಟುವಟಿಕೆಗಳು ನದಿಯ ಕೆಳ ಪಾತ್ರದಲ್ಲಿರುವ ದೇಶಗಳಿಗೆ ತೊಂದರೆ ಉಂಟುಮಾಡದಂತೆ ಖಾತ್ರಿ ಪಡಿಸಬೇಕು ಎಂದು ಭಾರತ ಚೀನಾವನ್ನು ಆಗ್ರಹಿಸಿದೆ.
ಜುಲೈ 23ರಂದು, ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರರಾದ ಗುವೊ ಜಿಯಾಕಿನ್ ಅವರು ಈ ಅಣೆಕಟ್ಟು ನಿರ್ಮಾಣ ಯೋಜನೆ ಸಂಪೂರ್ಣವಾಗಿ ಚೀನಾದ ಕೈಯಲ್ಲಿದ್ದು, ಇದು ಚೀನಾದ ಆಂತರಿಕ ವಿಚಾರದ ಭಾಗ ಎಂದಿದ್ದಾರೆ.
ಚೀನಾ ನದಿಯ ಹರಿವಿನ ಕೆಳ ಭಾಗದಲ್ಲಿರುವ ದೇಶಗಳೊಡನೆ ಕಾರ್ಯಾಚರಿಸುತ್ತಿದ್ದು, ಅವುಗಳೊಡನೆ ನೀರಿನ ಮಾಹಿತಿ ಹಂಚಿಕೊಳ್ಳುತ್ತಾ, ಪ್ರವಾಹವನ್ನು ನಿಯಂತ್ರಿಸಿ, ದುರಂತಗಳನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿದೆ ಎಂದು ಜಿಯಾಕಿನ್ ಹೇಳಿದ್ದಾರೆ. ಚೀನಾ ಈ ಕುರಿತು ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳೊಡನೆ ಸಮಾಲೋಚಿಸಿದೆ ಎಂದು ಅವರು ಹೇಳಿದ್ದಾರೆ.
ಚೀನಾದಲ್ಲಿ ಭಾರತದ ರಾಯಭಾರಿಯಾಗಿದ್ದ ಅಶೋಕ್ ಕಾಂತಾ ಅವರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ಚೀನಾ ನಿರ್ಮಿಸಲು ಮುಂದಾಗಿರುವ ಬೃಹತ್ ಅಣೆಕಟ್ಟು ಕಷ್ಟಕರವಾದ, ಮತ್ತು ಅತ್ಯಂತ ಸೂಕ್ಷ್ಮವಾದ ಪ್ರದೇಶದಲ್ಲಿದ್ದು, ಅಪಾಯಕಾರಿ ಮತ್ತು ಅಸುರಕ್ಷಿತ ಯೋಜನೆಯಾಗಿದೆ ಎಂದಿದ್ದಾರೆ. ಈ ಯೋಜನೆಯ ಕುರಿತು ಭಾರತ ಚೀನಾದೊಡನೆ ತೀವ್ರವಾಗಿ ತನ್ನ ಆತಂಕವನ್ನು ಹಂಚಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಚೀನಾ ಮತ್ತು ಭಾರತಗಳು ಈಗ ಪರಸ್ಪರರ ನಡುವೆ ನಂಬಿಕೆ ಹೆಚ್ಚಿಸುವ ಕುರಿತು ಪ್ರಯತ್ನ ಆರಂಭಿಸಿವೆ. ಕಳೆದ ಅಕ್ಟೋಬರ್ ತಿಂಗಳಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಎರಡೂ ದೇಶಗಳು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಆದ್ಯಂತ ತಮ್ಮ ಸೈನಿಕರು ಹೇಗೆ ಗಸ್ತು ನಡೆಸುತ್ತಾರೆ ಎಂಬ ಕುರಿತು ಒಪ್ಪಿಗೆ ಸೂಚಿಸಿವೆ ಎಂದಿದ್ದರು. ಈ ಒಪ್ಪಂದ ಪರಸ್ಪರ ಉದ್ವಿಗ್ನತೆಗಳನ್ನು ಕಡಿಮೆಗೊಳಿಸಿ, 2020ರಿಂದ ಆರಂಭಗೊಂಡಿರುವ ಒಂದಷ್ಟು ಸಮಸ್ಯೆಗಳನ್ನು ಕಡಿಮೆಗೊಳಿಸಲು ನೆರವಾಗಿದೆ.
ಮಾರ್ಚ್ ತಿಂಗಳಲ್ಲಿ ಬೀಜಿಂಗ್‌ನಲ್ಲಿ ನಡೆದ ಮಾತುಕತೆಗಳ ವೇಳೆ, ಭಾರತ ಮತ್ತು ಚೀನಾ ಎರಡೂ ಗಡಿಯಾಚೆಗಿನ ಸಹಕಾರವನ್ನು ಮರಳಿ ಆರಂಭಿಸುವ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿವೆ. ಇದರಲ್ಲಿ ಉಭಯ ದೇಶಗಳ ನಡುವೆ ಹರಿಯುವ ನದಿಗಳ ಕುರಿತು ಕಾರ್ಯಾಚರಿಸುವುದೂ ಸೇರಿದೆ ಎಂದು ಅಧಿಕೃತ ಹೇಳಿಕೆ ವಿವರಿಸಿದೆ.
ಜುಲೈ 23ರಂದು, ಭಾರತ ತಾನು ಐದು ವರ್ಷಗಳ ದೀರ್ಘ ಅವಧಿಯ ಬಳಿಕ ಚೀನೀ ನಾಗರಿಕರಿಗೆ ಪ್ರವಾಸಿ ವೀಸಾ ನೀಡುವುದನ್ನು ಮರಳಿ ಆರಂಭಿಸುವುದಾಗಿ ಘೋಷಿಸಿತ್ತು. ಅದರೊಡನೆ, ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ 30ರಂದು ಪುನರಾರಂಭಗೊಂಡಿದೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ವಿವರಿಸಿರುವ ರೀತಿಯಲ್ಲಿ, ಚೀನಾ ಭವಿಷ್ಯದಲ್ಲಿ ಈ ಅಣೆಕಟ್ಟನ್ನು ಭಾರತದ ವಿರುದ್ಧ ಆಯುಧವಾಗಿ ಬಳಸುವ ಸಾಧ್ಯತೆಯ ಕುರಿತು ಭಾರತ ಆತಂಕ ಹೊಂದಿದೆ. ಎಪ್ರಿಲ್ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ನೀರಿನ ಒಪ್ಪಂದವನ್ನು ಅಮಾನತ್ತಿನಲ್ಲಿ ಇರಿಸಿದೆ. ಈಗ ಚೀನಾ ತನ್ನ ನೂತನ ಯೋಜನೆಯ ಮೂಲಕ ಪಾಕಿಸ್ತಾನಕ್ಕೆ ನೆರವಾಗಲು ಮುಂದಾಗುವ ಕುರಿತೂ ಆತಂಕಗಳಿವೆ.
ನವದೆಹಲಿಯ ಮನೋಹರ್ ಪರಿಕರ್ ಸಂಸ್ಥೆಯ ಉತ್ತಮ್ ಸಿನ್ಹಾ ಅವರು ಭಾರತ ಚೀನಾದ ಕ್ರಮಗಳ ಕುರಿತು ಸೂಕ್ಷ್ಮವಾಗಿ ಕಣ್ಣಿಡಬೇಕಾದರೂ, ತಕ್ಷಣವೇ ಆತಂಕಕ್ಕೆ ಒಳಗಾಗುವ, ಅಥವಾ ವಿಪರೀತ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಜಲ ತಜ್ಞರಾದ ನರೇಶ್ ಕೆ ಮಾಥುರ್ ಮತ್ತು ದೇಬಶ್ರೀ ದಾಸ್‌ಗುಪ್ತಾ ಅವರು ಹಿಂದೆಯೇ ಭಾರತ ಭವಿಷ್ಯದಲ್ಲಿ ಎದುರಾಗುವ ಅಪಾಯಗಳನ್ನು ತಗ್ಗಿಸುವ ಸಲುವಾಗಿ, ಬ್ರಹ್ಮಪುತ್ರಾ ನದಿ ಜಲಾನಯನ ಪ್ರದೇಶದಲ್ಲಿ ನೀರು ಸಂಗ್ರಹಣಾ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಬಹುದು ಎಂದು ಸಲಹೆ ನೀಡಿದ್ದರು. ಇಂತಹ ವ್ಯವಸ್ಥೆಗಳು ಪ್ರವಾಹ ಮತ್ತು ಬರದಂತಹ ಅನಿರೀಕ್ಷಿತ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿರ್ವಹಿಸಲು ಭಾರತಕ್ಕೆ ನೆರವಾಗಲಿವೆ.
ಅರುಣಾಚಲ ಪ್ರದೇಶದಲ್ಲಿರುವ ಅಪ್ಪರ್ ಸಿಯಾಂಗ್ ಪ್ರಾಜೆಕ್ಟ್ 300 ಮೀಟರ್‌ಗಳಷ್ಟು ಎತ್ತರದ ಅಣೆಕಟ್ಟು ಹೊಂದಿದೆ. ಇದು ಅಪಾರ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವುದಕ್ಕೆ ಮಾತ್ರ ಮುಖ್ಯವಾಗಿಲ್ಲ. ಬದಲಿಗೆ, ಟಿಬೆಟ್ಟಿನಲ್ಲಿ ಚೀನಾದ ಅಣೆಕಟ್ಟು ಯೋಜನೆಗಳ ಕಾರಣದಿಂದಲೂ ಕಾರ್ಯತಂತ್ರದ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಅಣೆಕಟ್ಟಿನಲ್ಲಿ ಸಂಗ್ರಹಿಸುವ ನೀರು ನದಿಯ ಹರಿವಿನಲ್ಲಿ ಉಂಟಾಗುವ ತಕ್ಷಣದ ಬದಲಾವಣೆಗಳನ್ನು ನಿರ್ವಹಿಸಲು ನೆರವಾಗಲಿದೆ.
ಆದರೆ, ಈ ಯೋಜನೆ ಜಾರಿಗೆ ಬಂದರೆ, ಪರಿಸರಕ್ಕೆ ಹಾನಿ ಉಂಟಾಗಬಹುದು ಎಂದು ಸ್ಥಳೀಯ ಜನರು ಆತಂಕ ಹೊಂದಿದ್ದು, ಯೋಜನೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ, ಯೋಜನೆ ವಿಳಂಬಗೊಂಡಿದೆ.
ಭವಿಷ್ಯದಲ್ಲಿ ಹೆಚ್ಚಿನ ನೀರನ್ನು ನಿಯಂತ್ರಿಸುವ ಸಲುವಾಗಿ ಭಾರತ ಒಳಭೂಮಿಯಲ್ಲಿ ಕಾಲುವೆಗಳನ್ನು ನಿರ್ಮಿಸಬೇಕು ಎಂದು ಸಿನ್ಹಾ ಹೇಳಿದ್ದಾರೆ. ಈ ಉದ್ದೇಶಕ್ಕೆ ನೆರವಾಗುವ ಸಲುವಾಗಿ, ನ್ಯಾಷನಲ್ ವಾಟರ್ ಡೆವಲಪ್‌ಮೆಂಟ್ ಅಥಾರಿಟಿ ಬ್ರಹ್ಮಪುತ್ರಾ ನದಿಯನ್ನು ಗಂಗಾ ನದಿ ಜಲಾನಯನ ಪ್ರದೇಶದ ಸಣ್ಣ ನದಿಗಳೊಡನೆ ಸಂಪರ್ಕಿಸುವ ಸಲುವಾಗಿ ಎರಡು ಯೋಜನೆಗಳನ್ನು ಪ್ರಸ್ತಾಪಿಸಿದೆ. ಈ ಯೋಜನೆಗಳು ಪ್ರವಾಹ ಬಾಧಿತ ಸ್ಥಳಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬರಪೀಡಿತ ಪ್ರದೇಶಗಳಿಗೆ ಸಾಗಿಸುವ ಗುರಿ ಹೊಂದಿವೆ.
ನೀರಿನ ಹರಿವು ಮತ್ತು ಅಣೆಕಟ್ಟು ಯೋಜನೆಗಳ ಕುರಿತ ಮಾಹಿತಿಗಳನ್ನು ಪಡೆದುಕೊಳ್ಳುವ ಸಲುವಾಗಿ ಭಾರತ ನಿರಂತರವಾಗಿ ಚೀನಾದೊಡನೆ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದು ಭಾರತಕ್ಕೆ ನದಿಯ ಹರಿವಿನ ಕೆಳ ಪ್ರದೇಶಗಳ ಮೇಲೆ ಅಣೆಕಟ್ಟಿನ ಪರಿಣಾಮ ಹೇಗಿರಬಹುದು ಎಂದು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ಭಾರತ ಬ್ರಹ್ಮಪುತ್ರಾ ನದಿಯ ಕೆಳ ಹರಿವಿನ ಪ್ರದೇಶದಲ್ಲಿರುವ ದೇಶಗಳಾದ ಭೂತಾನ್, ಬಾಂಗ್ಲಾದೇಶ, ಮತ್ತು ಮಯನ್ಮಾರ್ ಜೊತೆಗೂ ಮಾತುಕತೆ ನಡೆಸಿ, ಕ್ಷಿಪ್ರ ಮುನ್ನೆಚ್ಚರಿಕೆ ಮತ್ತು ಪ್ರವಾಹ ನಿರ್ವಹಣಾ ಸಿದ್ಧತೆಗಾಗಿ ಜಂಟಿ ಯೋಜನೆ ರೂಪಿಸಬೇಕು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com