ಬೆನ್ನುಮೂಳೆಯ ಕ್ಷಯ online desk
ಅಂಕಣಗಳು

Pott’s Disease ಅಥವಾ ಬೆನ್ನುಮೂಳೆಯ ಕ್ಷಯ (ಕುಶಲವೇ ಕ್ಷೇಮವೇ)

ಪಾಟ್ಸ್ ಕಾಯಿಲೆಯ ಲಕ್ಷಣಗಳು ಕಾಲಕ್ರಮೇಣ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತಗಳಲ್ಲಿ ಇವುಗಳನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಆದರೂ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ

ಪಾಟ್ಸ್ ಕಾಯಿಲೆ ಎಂದು ಬೆನ್ನುಮೂಳೆಯ ಕ್ಷಯರೋಗಕ್ಕೆ (Spinal tuberculosis) ಹೆಸರಾಗಿದೆ. ಇದು ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುವ ಒಂದು ಗಂಭೀರ ಸೋಂಕು. ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಉಂಟಾಗುತ್ತದೆ. ಶ್ವಾಸಕೋಶದ ಕ್ಷಯರೋಗಕ್ಕೆ (ಟಿಬಿ) ಕಾರಣವಾದ ಸೂಕ್ಷ್ಮಜೀವಿಯು ಮೂಳೆಗಳಿಗೆ ಹರಡಿ ಅದಕ್ಕೂ ಈ ಸೋಂಕು ತಗುಲುತ್ತದೆ. ಇದರ ಪರಿಣಾಮವಾಗಿ ಬೆನ್ನುಮೂಳೆಯ ನೋವು, ವಿರೂಪತೆ ಮತ್ತು ಚಲನೆಯಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಈ ರೋಗವನ್ನು 18ನೇ ಶತಮಾನದಲ್ಲಿ ಬ್ರಿಟಿಷ್ ಶಸ್ತ್ರಚಿಕಿತ್ಸಕ ಸರ್ ಪರ್ಸಿವಲ್ ಪಾಟ್ ಮೊದಲ ಬಾರಿಗೆ ಸ್ಪಷ್ಟವಾಗಿ ವಿವರಿಸಿದರು. ಆದ್ದರಿಂದಲೇ ಈ ರೋಗಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಮುಖ್ಯವಾಗಿ ಕಶೇರುಖಂಡಗಳ ಮೇಲೆ ಅಂದರೆ ಬೆನ್ನಿನ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಅವುಗಳ ನಿಧಾನ ನಾಶಕ್ಕೆ ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಈ ಸೋಂಕು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

ಪಾಟ್ಸ್ ಕಾಯಿಲೆಯ ಲಕ್ಷಣಗಳು

ಪಾಟ್ಸ್ ಕಾಯಿಲೆಯ ಲಕ್ಷಣಗಳು ಕಾಲಕ್ರಮೇಣ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತಗಳಲ್ಲಿ ಇವುಗಳನ್ನು ಗುರುತಿಸುವುದು ಕಷ್ಟಕರವಾಗಿರುತ್ತದೆ. ಆದರೂ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ:

  1. ಬೆನ್ನು ನೋವು: ಇದು ಸಾಮಾನ್ಯ ಲಕ್ಷಣ. ನೋವು ಸಾಮಾನ್ಯವಾಗಿ ಸೌಮ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಮತ್ತು ಕಾಲಕಳೆದಂತೆ ಹದಗೆಡುತ್ತದೆ.

  2. ಬೆನ್ನುಮೂಳೆಯಲ್ಲಿ ಬಿಗಿತ: ರೋಗಪೀಡಿತ ವ್ಯಕ್ತಿ ಬೆನ್ನನ್ನು ಬಾಗಿಸಲು ಅಥವಾ ಚಲಿಸಲು ಕಷ್ಟಪಡಬಹುದು.

  3. ಊತ ಅಥವಾ ವಿರೂಪ: ರೋಗ ಹೆಚ್ಚಾದ ಸಂದರ್ಭಗಳಲ್ಲಿ ಬೆನ್ನುಮೂಳೆಯು ವಕ್ರವಾಗಬಹುದು ಅಥವಾ ಬಾಗಬಹುದು (ಇದನ್ನು ಕೈಫೋಸಿಸ್ ಅಥವಾ ಗೂನು ಬೆನ್ನು ಎಂದು ಕರೆಯಲಾಗುತ್ತದೆ).

  4. ತೂಕ ನಷ್ಟ: ಕ್ಷಯರೋಗವು ದೀರ್ಘಕಾಲದ ಸೋಂಕಾಗಿರುವುದರಿAದ ಹೆಚ್ಚಾಗಿ ಅನಿರೀಕ್ಷಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

  5. ಜ್ವರ ಮತ್ತು ರಾತ್ರಿ ಬೆವರು: ಈ ರೋಗ ಬಂದವರಿಗೆ ಕಡಿಮೆ ಜ್ವರ ಕಾಣಿಸಿಕೊಳ್ಳಬಹುದು. ವಿಶೇಷವಾಗಿ, ಅತಿಯಾದ ಬೆವರುವಿಕೆಯೊಂದಿಗೆ ಸ್ವಲ್ಪ ಮಟ್ಟಿಗೆ ಮೈ ಸುಡುವ ಅನುಭವವಾಗುತ್ತದೆ.

  6. ದೌರ್ಬಲ್ಯ ಮತ್ತು ಆಯಾಸ: ಸೋಂಕಿನಿಂದಾಗಿ ದೇಹ ದಣಿವು ಮತ್ತು ದುರ್ಬಲತೆಯನ್ನು ಅನುಭವಿಸಬಹುದು.

  7. ನರ ಸಮಸ್ಯೆಗಳು: ತೀವ್ರತರವಾದ ಸಂದರ್ಭಗಳಲ್ಲಿ ಸೋಂಕಿತ ಬೆನ್ನುಮೂಳೆಯು ನರಗಳ ಮೇಲೆ ಒತ್ತಡ ಹೇರಬಹುದು. ಇದು ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು.

ಚಿಕಿತ್ಸೆ ನೀಡದೆ ಬಿಟ್ಟರೆ ಈ ರೋಗವು ಬೆನ್ನುಹುರಿಗೆ ಹಾನಿಯಾಗುವ ಮೂಲಕ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು.

ಪಾಟ್ಸ್ ಕಾಯಿಲೆಗೆ ಚಿಕಿತ್ಸೆ

ಈ ರೋಗದ ಚಿಕಿತ್ಸೆಯು ಕ್ಷಯರೋಗದ ಚಿಕಿತ್ಸೆಯಂತೆಯೇ ಇರುತ್ತದೆ. ಇಲ್ಲಿ ಚಿಕಿತ್ಸೆಯ ಮುಖ್ಯ ಗುರಿ ರೋಗಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುವುದು, ನೋವನ್ನು ನಿವಾರಿಸುವುದು ಮತ್ತು ಬೆನ್ನುಮೂಳೆಯ ವಿರೂಪತೆಯನ್ನು ತಡೆಯುವುದಾಗಿರುತ್ತದೆ. ಈ ಉದ್ದೇಶಕ್ಕಾಗಿ ಮೊದಲಿಗೆ ಕ್ಷಯ ವಿರೋಧಿ ಔಷಧಿಗಳನ್ನು ರೋಗಿಗೆ ನೀಡಲಾಗುತ್ತದೆ. ಈ ಚಿಕಿತ್ಸೆ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ಹಿಡಿಯುತ್ತದೆ. ಇದರಲ್ಲಿ ನೀಡಲಾಗುವ ಔಷಧಿಗಳು ಟಿಬಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಸಹಾಯ ಮಾಡುತ್ತವೆ, ರೋಗಿಯ ಪ್ರತಿಕ್ರಿಯೆಯನ್ನು ಆಧರಿಸಿ ವೈದ್ಯರು ಔಷಧಿಯ ಡೋಸೇಜುಗಳನ್ನು ಸರಿಹೊಂದಿಸಬಹುದು.

ಈ ಕಾಯಿಲೆಯು ತೀವ್ರವಾದ ಬೆನ್ನುನೋವನ್ನು ಉಂಟುಮಾಡುವುದರಿಂದ, ನೋವು ನಿವಾರಕಗಳನ್ನು ವೈದ್ಯರು ಶಿಫಾರಸು ಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಬೆನ್ನುಮೂಳೆಗೆ ಹೆಚ್ಚಿನ ಹಾನಿಯಾಗದಂತೆ ರೋಗಿಯು ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಬಹುದು. ಬೆನ್ನಿನ ಮೂಳೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಬೆನ್ನುಮೂಳೆಯ ಬ್ರೇಸ್ ಅಥವಾ ಸಪೋರ್ಟ್ ಬೆಲ್ಟ್ ನೀಡಬಹುದು.

ರೋಗವು ತೀರಾ ಗಂಭೀರವಾಗಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಆಗ ಶಸ್ತ್ರಚಿಕಿತ್ಸಕರು ಹಾನಿಗೊಳಗಾದ ಮೂಳೆ ಅಂಗಾಂಶವನ್ನು ತೆಗೆದುಹಾಕಬಹುದು, ಬಾವುಗಳನ್ನು ಹೋಗಿಸಬಹುದು ಅಥವಾ ಲೋಹದ ರಾಡ್ಗಳನ್ನು ಬಳಸಿ ಬೆನ್ನುಮೂಳೆಯನ್ನು ಸ್ಥಿರಗೊಳಿಸಬಹುದು.

ಪಾಟ್ಸ್ ಕಾಯಿಲೆ ತಡೆಗಟ್ಟುವ ವಿಧಾನಗಳು

ಬೆನ್ನುಮೂಳೆಯ ಕ್ಷಯರೋಗದ ಅಪಾಯವನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳು ಇಲ್ಲಿವೆ:

  • ಬಿಸಿಜಿ ಲಸಿಕೆ: ಕ್ಷಯರೋಗದಿಂದ ರಕ್ಷಿಸಲು ಬ್ಯಾಸಿಲಸ್ ಕ್ಯಾಲ್ಮೆಟ್-ಗುಯೆರಿನ್ (ಬಿಸಿಜಿ) ಲಸಿಕೆಯನ್ನು ಶಿಶುಗಳಿಗೆ ನೀಡಲಾಗುತ್ತದೆ.

  • ಕ್ಷಯರೋಗದ ಆರಂಭಿಕ ಚಿಕಿತ್ಸೆ: ಯಾರಿಗಾದರೂ ಶ್ವಾಸಕೋಶದ ಕ್ಷಯರೋಗವಿದ್ದರೆ, ಬ್ಯಾಕ್ಟೀರಿಯಾ ಮೂಳೆಗಳಿಗೆ ಹರಡುವುದನ್ನು ತಡೆಯಲು ತಕ್ಷಣವೇ ಚಿಕಿತ್ಸೆ ನೀಡಬೇಕು.

  • ಉತ್ತಮ ನೈರ್ಮಲ್ಯ ಪಾಲನೆ: ಸ್ವಚ್ಛ ಮತ್ತು ಚೆನ್ನಾಗಿ ಗಾಳಿ ಇರುವ ವಾತಾವರಣದಲ್ಲಿ ವಾಸಿಸುವುದರಿಂದ ಕ್ಷಯರೋಗದ ಸೋಂಕನ್ನು ಆದಷ್ಟೂ ತಡೆಗಟ್ಟಬಹುದು.

  • ಪ್ರಬಲವಾದ ರೋಗನಿರೋಧಕ ಶಕ್ತಿ: ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಧೂಮಪಾನ ಅಥವಾ ಮದ್ಯಪಾನವನ್ನು ತಪ್ಪಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು.

  • ಕ್ಷಯರೋಗ ರೋಗಿಗಳೊಂದಿಗೆ ನಿಕಟ ಸಂಪರ್ಕ ಬೇಡ: ಸಕ್ರಿಯ ಕ್ಷಯರೋಗ ಹೊಂದಿರುವ ಜನರು ಯಾರಾದರೂ ಸುತ್ತಲೂ ಇದ್ದರೆ ಹುಷಾರಾಗಿರಬೇಕು. ಮಾಸ್ಕ್ ಧರಿಸಬೇಕು ಮತ್ತು ಯಾವುದೇ ರೀತಿಯ ಅನಾರೋಗ್ಯಕರ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯಕೀಯ ಸಲಹೆಯನ್ನು ತಡಮಾಡದೇ ಪಡೆಯಬೇಕು. ಕ್ಷಯರೋಗಿಗಳಿಗೆ ಆರೈಕೆ ಮಾಡುವವರೂ ಈ ಬಗ್ಗೆ ಬಹಳ ಎಚ್ಚರದಿಂದ ಇರಬೇಕು.

ಸಾರಾಂಶ

ಒಟ್ಟಾರೆ ಹೇಳುವುದಾದರೆ ಪಾಟ್ಸ್ ಕಾಯಿಲೆಯು ಕ್ಷಯರೋಗದ ಸೋಂಕಿಂದ ಬೆನ್ನುಮೂಳೆಯ ಮೇಲೆ ಪರಿಣಾಮ ಬೀರುವ ಗಂಭೀರ ಆದರೆ ಚಿಕಿತ್ಸೆ ನೀಡಬಹುದಾದ ಕಾಯಿಲೆಯಾಗಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇದು ತೀವ್ರ ಬೆನ್ನು ನೋವು, ಬೆನ್ನುಮೂಳೆಯ ವಿರೂಪ ಮತ್ತು ನರಗಳ ಹಾನಿಗೆ ಕಾರಣವಾಗಬಹುದು. ಆದ್ದರಿಂದ ಆರಂಭಿಕ ರೋಗನಿರ್ಣಯ ಮತ್ತು ಟಿಬಿ ವಿರೋಧಿ ಔಷಧಿಗಳೊಂದಿಗೆ ಸರಿಯಾದ ಚಿಕಿತ್ಸೆಯು ಪೂರ್ಣ ಚೇತರಿಕೆಗೆ ಸಹಾಯ ಮಾಡುತ್ತದೆ. ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಟಿಬಿ ಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದರಿಂದ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT