ಸಿಂಧೂ ಜಲ ಒಪ್ಪಂದ (ಸಾಂಕೇತಿಕ ಚಿತ್ರ online desk
ಅಂಕಣಗಳು

ಪಾಕಿಸ್ತಾನವನ್ನು ಹೇಗೆಲ್ಲ ಅಲ್ಲಾಡಿಸಬಲ್ಲುದು ಭಾರತದ 'ವಾಟರ್ ಬಾಂಬ್'! (ತೆರೆದ ಕಿಟಕಿ)

ಭಾರತದ ಪಾಲಿಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಿಗದಿಪಡಿಸಿದ್ದ 3.6 ಮಿಲಿಯನ್ ಎಕರೆ ಫೀಟ್ ಕೋಟಾ ಸಹ ಸಂಪೂರ್ಣ ಉಪಯೋಗವಾಗಿದ್ದಿದ್ದಿಲ್ಲ. ಏಕೆಂದರೆ ದಶಕದ ಹಿಂದಿನ ಸರ್ಕಾರಗಳು ಆ ಬಗ್ಗೆ ಇಚ್ಛಾಶಕ್ತಿ ತೋರಿದ್ದೇ ಇಲ್ಲ.

ಆಪರೇಷನ್ ಸಿಂದೂರದ ಅಂಗವಾಗಿ ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಮಿಲಿಟರಿ ಪ್ರಹಾರಗಳ ತೂಕ, ಮತ್ತದು ಎಬ್ಬಿಸಿರುವ ಚರ್ಚೆಗಳ ಆಯಾಮ ಒಂದು ತೆರನಾಗಿದ್ದಾದರೆ, ಭಾರತವು ಪಾಕಿಸ್ತಾನದೊಂದಿಗೆ ಇದ್ದ ಸಿಂದು ನದಿ ನೀರಿನ ಹಂಚಿಕೆಯ ಒಪ್ಪಂದವನ್ನು ರದ್ದು ಮಾಡಿಕೊಂಡಿರುವುದು ಇನ್ನೊಂದು ವಿರಾಟ್ ಸ್ವರೂಪವೇ ಸರಿ. ಆದರೆ, ನಮಗಿದು ಈ ಕ್ಷಣಕ್ಕೆ ಖುಷಿ ಹುಟ್ಟಿಸುವ ಇಮೇಜ್ ಒಂದನ್ನು ಸೃಷ್ಟಿಸಲಾರದು. ಅಂದರೆ, ಪಾಕಿಸ್ತಾನದ ಯಾವೆಲ್ಲ ವೈಮಾನಿಕ ನೆಲೆಗಳ ಛಿದ್ರ ಸ್ಥಿತಿಯನ್ನು ಉಪಗ್ರಹಾಧರಿತ ಚಿತ್ರಗಳಲ್ಲಿ ನೋಡಿಕೊಂಡು ಭಾರತದ ಪ್ರಹಾರದ ಬಗ್ಗೆ ತಕ್ಷಣಕ್ಕೆ ಹೆಮ್ಮೆ ತಾಳುತ್ತೇವೆಯೋ ಹಾಗೆ ಮಾಡುವ ಅವಕಾಶ ಇಲ್ಲಿಲ್ಲ. ಅಲ್ಲದೇ ಈ ವಿಷಯದಲ್ಲಿ ಬಹಳಷ್ಟು ಅನುಮಾನಗಳೂ ಕಾಡುತ್ತವೆ.

ಭಾರತದ ಅಧೀನದಲ್ಲಿರುವ ಭೂಭಾಗದಲ್ಲಿ ಸ್ವಲ್ಪವೇ ಹರಿವು ಹೊಂದಿರುವ ಸಿಂಧು ನದಿಯನ್ನು ನಿಯಂತ್ರಿಸುವುದಾದರೂ ಹೇಗೆ? ಆಣೆಕಟ್ಟುಗಳ ನಿರ್ಮಾಣಕ್ಕೆ ಸೂಕ್ತವಲ್ಲದ ಭೂಸಂರಚನೆ ಹೊಂದಿರುವ ಹಿಮಾಲಯದ ಕಣಿವೆಗಳಲ್ಲಿ ನೀರು ಶೇಖರಣೆ ಸಾಧ್ಯವಾಗದಲ್ಲ? ಇಷ್ಟಕ್ಕೂ ಸಿಂಧು ಹಾಗೂ ಬ್ರಹ್ಮಪುತ್ರ ನದಿಗಳ ಉಗಮದ ನಿಯಂತ್ರಣವನ್ನು ಹೊಂದಿರುವ ಚೀನಾ ಸಹ ನಮ್ಮ ವಿಚಾರದಲ್ಲಿ ಇದೇ ಧೋರಣೆ ಅನುಸರಿಸಬಹುದಲ್ಲವೇ? ಹೀಗೆಲ್ಲ ಇರುವಾಗ, “ನೀರು ಮತ್ತು ರಕ್ತ ಒಟ್ಟಿಗೆ ಹರಿಯಲಾರವು” ಎಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಮಾತು ಬರೀ ಘೋಷಣೆಯಾಗುತ್ತದೆಯೇ? ಇಂಥ ಎಲ್ಲ ಗೋಜಲುಗಳ ಸಿಕ್ಕು ಬಿಡಿಸುವ ಯತ್ನವನ್ನು ಈ ಅಂಕಣದಲ್ಲಿ ಮಾಡೋಣ. 

ಏನಿದು ಇಂಡಸ್ ವಾಟರ್ ಸಿಸ್ಟಮ್?

ಸಿಂಧು ನದಿ ನೀರಿನ ಹಂಚಿಕೆಯ ಒಪ್ಪಂದ ರದ್ದು ಎಂದಕೂಡಲೇ ಭಾರತವು ಸಿಂಧು ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ನೀರನ್ನೆಲ್ಲ ನಿಲ್ಲಿಸಿಬಿಡುತ್ತದೆ ಎಂಬ ಚಿತ್ರವೊಂದನ್ನು ಕಣ್ಮುಂದೆ ತಂದುಕೊಳ್ಳಬೇಕಾಗಿಯೇ ಇಲ್ಲ. ಅದು ಕಾರ್ಯಸಾಧುವಲ್ಲ ಎಂಬುದು ಸರ್ಕಾರಕ್ಕೂ ಗೊತ್ತು. ಭಾರತದಲ್ಲಿ ಸಿಂಧುವಿನ ಹರಿವೇ ಸಣ್ಣ ವ್ಯಾಪ್ತಿಯದ್ದು. ಅದರಲ್ಲೂ ಬಹುದೊಡ್ಡ ಭಾಗವು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಹರಿಯುತ್ತದೆ. ಅಲ್ಲೀಗ ಪಾಕಿಸ್ತಾನದ ಜತೆಗೆ ಚೀನಾವೂ ಇದೆ. ಇದೇ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದ ಭಾಗದಲ್ಲೇ ಇಂಡಸ್ ಹರಿವಿನ ಪಕ್ಕಪಕ್ಕವೆಂಬಂತೆ ಚೀನಾ ನಿರ್ಮಿತ ಕಾರಾಕೋರಂ ಹೆದ್ದಾರಿ ಸಾಗುತ್ತದೆ. ಇತ್ತೀಚಿನ ದಶಕದಲ್ಲಿ ನಿರ್ಮಾಣವಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರನ್ನು ಬೆಸೆದುಕೊಳ್ಳುವ 1,300 ಕಿಲೊಮೀಟರುಗಳ ಬಹುಮುಖ್ಯ ಬೆಸುಗೆ ಇದು. 

ಆದರೆ, ಇವೆಲ್ಲದರ ನಡುವೆ, ಸಿಂಧು ಒಪ್ಪಂದ ರದ್ದತಿ ಪರಿಣಾಮ ಬೀರುತ್ತಿರುವುದು ಕೇವಲ ಸಿಂಧು ಮೇಲೆ ಮಾತ್ರವಲ್ಲ. ಸಿಂಧು ನದಿ ವ್ಯವಸ್ಥೆ ಎಂಬ ಜಾಲದಲ್ಲಿ ಬರುವ ಜೇಲಂ, ಚೆನಾಬ್, ರಾವಿ, ಸಟ್ಲೆಜ್, ಬಿಯಾಸ್ ಎಲ್ಲವೂ ಇದರಲ್ಲಿ ಬರುತ್ತವೆ. ಈ ಪೈಕಿ ಹೆಚ್ಚಿನವು ಹಿಮಾಚಲ ಪ್ರದೇಶವನ್ನು ದಾಟಿಕೊಂಡು ಪಾಕಿಸ್ತಾನದ ಪಂಜಾಬ್ ಅನ್ನು ಪ್ರವೇಶಿಸುತ್ತವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಮಂಗ್ಲಾ ಆಣೆಕಟ್ಟು ಸದ್ಯಕ್ಕೆ ಆ ದೇಶದ ಎರಡನೇ ದೊಡ್ಡ ಆಣೆಕಟ್ಟು. ಇದೀಗ ಸಿಂಧು ನದಿ ಒಪ್ಪಂದವನ್ನು ಭಾರತವು ಏಕಪಕ್ಷೀಯವಾಗಿ ರದ್ದುಗೊಳಿಸಿಕೊಂಡಿರುವುದರಿಂದ ಆಗಿರುವ ತಕ್ಷಣದ ಪರಿಣಾಮ ಏನೆಂದರೆ ಭಾರತವೀಗ ಸಿಂಧು ನದಿ ವ್ಯವಸ್ಥೆಯ ಯಾವ ನದಿಗಳ ಹರಿವಿನ ಮಾಹಿತಿಗಳನ್ನೂ ಪಾಕಿಸ್ತಾನದ ಜತೆ ಹಂಚಿಕೊಳ್ಳುತ್ತಿಲ್ಲ. ಏಕಾಏಕಿ ನೀರು ಬಿಡುವುದು ಹಾಗೂ ಕೆಲವು ಅವಧಿಗೆ ನೀರು ನಿಲ್ಲಿಸಿಬಿಡುವುದು ಇಂಥ ಆಟವನ್ನು ಭಾರತ ಆಡಿದಾಗಲೆಲ್ಲ ಪಾಕಿಸ್ತಾನಕ್ಕೆ ಅದು ದುಬಾರಿಯಾಗಿ ಪರಿಣಮಿಸುತ್ತದೆ. ಏಕೆಂದರೆ ಪಂಜಾಬ್ ಮತ್ತು ಸಿಂಧ್ ಪ್ರದೇಶಗಳಲ್ಲಿ ಬೆಳೆಯನ್ನು ಯೋಜಿಸಿಕೊಳ್ಳುವುದಕ್ಕೆ ಪಾಕಿಸ್ತಾನಕ್ಕೆ ಆಗುವುದೇ ಇಲ್ಲ.

ಪೈರು ಒಂದು ಹಂತದಲ್ಲಿ ಎದ್ದು ನಿಂತಿದ್ದಾಗ ಏಕಾಏಕಿ ಭಾರತದಿಂದ ಹರಿವು ಹೆಚ್ಚಾದರೆ ಪಾಕಿಸ್ತಾನದ ಕೃಷಿಭೂಮಿಯ ಒಂದು ಭಾಗ ಪ್ರವಾಹ ಇಲ್ಲವೇ ಅತಿ ನೀರಿನ ಹರಿವಿನಿಂದ ಬೆಳೆ ಹಾಳುಮಾಡಿಕೊಳ್ಳುತ್ತದೆ. ಇನ್ನು, ನೀರು ಬೇಕಿರುವಾಗ ಸಮರ್ಪಕ ಹರಿವಿಲ್ಲದಿದ್ದರೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಆಗುವುದಿಲ್ಲ. ಅಲ್ಲದೇ, ಅಗತ್ಯದ ಹರಿವಿಗಿಂತ ಹೆಚ್ಚಿನ ನೀರು ಏಕಾಏಕಿ ಭಾರತದಿಂದ ಹರಿದುಹೋದಾಗಲೆಲ್ಲ ಅದು ಹೊತ್ತೊಯ್ಯುವ ಮಣ್ಣು ಮತ್ತು ತ್ಯಾಜ್ಯಗಳೆಲ್ಲ ಹೋಗಿ ಪಾಕಿಸ್ತಾನದ ಮಂಗ್ಲಾ ಆಣೆಕಟ್ಟಿನ ಅಡಿಯಲ್ಲಿ ಮತ್ತಷ್ಟು ಹೂಳು ಒತ್ತಿ ಅದರ ಒಟ್ಟಾರೆ ನೀರು ಸಂಗ್ರಹಣೆ ಸಾಮರ್ಥ್ಯ ಕುಗ್ಗುತ್ತದೆ. 

ಇವೆಲ್ಲ ಈ ಕ್ಷಣದ ಆಟಗಳು ಎಂದುಕೊಳ್ಳಬಹುದು. ಆದರೆ ದೀರ್ಘಾವಧಿಯಲ್ಲಿ ಭಾರತವು ಈ ಆಟವನ್ನು ಮುಂದುವರಿಸಿದ್ದೇ ಆದರೆ ಪಾಕಿಸ್ತಾನವನ್ನು ನಿಶ್ಶಕ್ತಗೊಳಿಸುವುದಕ್ಕೆ ಈ ವಾಟರ್ ಬಾಂಬ್ ಮಾತ್ರವೇ ಸಾಕಾದೀತು!

ಭಾರತದ್ದೇನು ಪ್ಲಾನ್?

ಸಿಂಧು ಒಪ್ಪಂದದ ಪ್ರಕಾರ ಭಾರತ ಬಳಸಬಹುದಾದ ನೀರಿನ ಸಂಪೂರ್ಣ ಸಾಮರ್ಥ್ಯವನ್ನೇ ಇನ್ನೂ ಬಳಸಿಕೊಳ್ಳುತ್ತಿಲ್ಲ. ಭಾರತದ ಪಾಲಿಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಿಗದಿಪಡಿಸಿದ್ದ 3.6 ಮಿಲಿಯನ್ ಎಕರೆ ಫೀಟ್ ಕೋಟಾ ಸಹ ಸಂಪೂರ್ಣ ಉಪಯೋಗವಾಗಿದ್ದಿದ್ದಿಲ್ಲ. ಏಕೆಂದರೆ ದಶಕದ ಹಿಂದಿನ ಸರ್ಕಾರಗಳು ಆ ಬಗ್ಗೆ ಇಚ್ಛಾಶಕ್ತಿ ತೋರಿದ್ದೇ ಇಲ್ಲ.

ಮೋದಿ ಸರ್ಕಾರವು ಆ ಬಗ್ಗೆ ಮನಸ್ಸು ಮಾಡಿದೆ ಎಂಬುದಷ್ಟೇ ವಿಷಯವಾಗಿದ್ದರೆ ಅದೇನೂ ಆಕರ್ಷಕ ಎನಿಸುತ್ತಿರಲಿಲ್ಲವೇನೋ. ಹೀಗೆ ಮನಸ್ಸು ಮಾಡಿರುವುದಕ್ಕೆ ಪೂರಕವಾಗಿ ನಿರ್ಮಾಣ ಕಾಮಗಾರಿಗಳನ್ನು ಮಾಡಬಹುದಾದ ಎಂಜಿನಿಯರಿಂಗ್ ಶಕ್ತಿಯನ್ನು ಸಹ ಭಾರತವು ಮೈಗೂಡಿಸಿಕೊಂಡಿದೆ ಎಂಬುದಕ್ಕೆ ಈ ಒಂದು ದಶಕದಲ್ಲಾಗಿರುವ ಹಲವು ಕಾರ್ಯಗಳು ಸಾಕ್ಷಿ ಹೇಳುತ್ತಿವೆ. ಉದಾಹರಣೆಗೆ, ಅತಿ ದುರ್ಗಮ ಬೆಟ್ಟ ಮತ್ತು ಕಣಿವೆ ಪ್ರದೇಶಗಳಲ್ಲಿ, ಹವಾಮಾನ ವೈಪರೀತ್ಯಗಳ ನಡುವೆಯೇ ಜಮ್ಮು-ಕಾಶ್ಮೀರದಲ್ಲಿ ಜೊಜಿ ಲಾ ಸುರಂಗ ಮಾರ್ಗ ಹಾಗೂ ಬನಿಹಾಲ್ ಸುರಂಗಮಾರ್ಗಗಳು ನಿರ್ಮಾಣವಾಗಿವೆ. ಅರುಣಾಚಲ ಪ್ರದೇಶದಲ್ಲಿ ಸೇಲಾ ಸುರಂಗ ನಿರ್ಮಾಣವಾಗಿದೆ. ಈ ಸುರಂಗ ಮಾರ್ಗಗಳು ನದಿಗಳ ವಿಚಾರ ಬಂದಾಗ ಪ್ರೇರೇಪಣೆ ಏಕಾಗುತ್ತಿವೆ ಎಂದರೆ, ಪ್ರಸ್ತುತ ಭಾರತಕ್ಕೆ ಸಿಂಧು ನದಿ ವ್ಯವಸ್ಥೆಯಲ್ಲಿ ಬೇಕಿರುವುದು ದೊಡ್ಡ ಅಣೆಕಟ್ಟೇನೂ ಅಲ್ಲ. ಬದಲಿಗೆ, ನದಿ ಹರಿವನ್ನು ಹಲವು ಕೆನಾಲ್ ಅರ್ಥಾತ್ ಮೇಲ್ದಂಡೆ ಯೋಜನೆಗಳ ಮೂಲಕ ತನ್ನದೇ ಭೂಪ್ರದೇಶದ ಬೇರೆ ಬೇರೆ ಕಡೆ ಕೃಷಿ ಮತ್ತು ಕೈಗಾರಿಕೆಗಳಿಗೆ ಲಭ್ಯವಾಗುವಂತೆ ಮಾಡುವುದು. ಅದರ ಸಾಕಾರ ಸಾಮರ್ಥ್ಯ ಭಾರತದ ಎಂಜಿನಿಯರಿಂಗ್ ಶಕ್ತಿಗಿದೆ ಎಂಬುದಂತೂ ಸ್ಪಷ್ಟ.

1911ರ ಸಮಯದಲ್ಲೇ ಮಹಾರಾಜ ಪ್ರತಾಪ್ ಸಿಂಗ್ ಅವಧಿಯಲ್ಲಿ ಜಮ್ಮು, ಆರ್ ಎಸ್ ಪುರ, ಸಂಬಾ ಪ್ರಾತ್ಯಗಳನ್ನೊಳಗೊಂಡಂತೆ ರಣಬೀರ್ ನೀರಾವರಿ ಕೆನಾಲ್ ನಿರ್ಮಾಣವಾಗಿತ್ತು. ಆದರದರ ಸಮರ್ಪಕ ಬಳಕೆ ಆಗುತ್ತಿರಲಿಲ್ಲ. ಇದೀಗ ಭಾರತವು ಈ ಕೆನಾಲಿನ ಸಾಮರ್ಥ್ಯವನ್ನೇ ವೃದ್ಧಿಸುವುದಕ್ಕೆ ಮುಂದಾಗುತ್ತಿದೆ. 60 ಕಿ.ಮೀ ವ್ಯಾಪ್ತಿ ಇದ್ದ ಈ ಕೆನಾಲ್ ಅನ್ನು ದ್ವಿಗುಣ ಸಾಮರ್ಥ್ಯಕ್ಕೆ ಅಂದರೆ 120 ಕಿಲೊಮೀಟರುಗಳಿಗೆ ವೃದ್ಧಿಸಿ, ಕೇವಲ ನೀರಾವರಿಗೆ ಮಾತ್ರವಲ್ಲದೇ ಕಿರು ವಿದ್ಯುತ್ ತಯಾರಿಕೆಗೂ ಬಳಸಿಕೊಳ್ಳುವುದಕ್ಕೆ ಭಾರತ ಕಾರ್ಯಪ್ರವೃತ್ತವಾಗುತ್ತಿದೆ. ಆಗ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಚೆನಾಬ್ ನದಿ ಬಡವಾಗುತ್ತದೆ.

ಪಾಕಿಸ್ತಾನದ ನೀರಿನ ಸಮಸ್ಯೆ ಹೇಗಿದೆ?

ಅಂತರ್ಜಲವನ್ನು ಬರಿದಾಗಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವು ಮುಂಚೂಣಿಯಲ್ಲಿದೆ. ಪಾಕಿಸ್ತಾನದ ಶೇ. 36ರಷ್ಟು ಅಂತರ್ಜಲ ಅದಾಗಲೇ ಮಾಲಿನ್ಯಯುಕ್ತ ವಿಷಕಾರಿಯಾಗಿದೆ. ಅದರ ಇತ್ತೀಚಿಗಿನ ಆಹಾರ ಕೋಲಾಹಲವು ಸಹ ಸಮರ್ಪಕ ನೀರಾವರಿ ವ್ಯವಸ್ಥೆಗಳಿಲ್ಲದೇ ಕೃಷಿಯು ಸೊರಗಿರುವುದರ ಪ್ರತೀಕ. ಭಾರತದಲ್ಲಿ ಕೆಜಿಗೆ 35-40 ರುಪಾಯಿಗಳ ದರದಲ್ಲಿ ಗ್ರಾಹಕರಿಗೆ ದಕ್ಕುವ ಗೋದಿ ಹಿಟ್ಟು ಪಾಕಿಸ್ತಾನದಲ್ಲಿ 120 ರುಪಾಯಿಗಳನ್ನು ಬೇಡುತ್ತದೆ. 

ಪಾಕಿಸ್ತಾನದ ಮುಖ್ಯ ಬೆಳೆಗಳು ಬತ್ತ ಮತ್ತು ಹತ್ತಿ. ಸ್ವಲ್ಪಮಟ್ಟಿಗೆ ಕಬ್ಬು ಸಹ. ಇವೆಲ್ಲವೂ ಅತಿಯಾಗಿ ನೀರನ್ನು ಬೇಡುವ ಬೆಳೆಗಳೇ. 

ದೀರ್ಘಾವಧಿಯಲ್ಲಿ ಭಾರತದ ಜಲಯುದ್ಧವೂ ಸೇರಿಕೊಂಡರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಜನಕ್ಕೆ ಹೊಟ್ಟೆಗಿಲ್ಲದ ಸ್ಥಿತಿ ಬಂದಾಗ ಆಂತರಿಕ ಗಲಭೆಗಳು ಹುಟ್ಟಿಕೊಳ್ಳುತ್ತವೆ. ಬಲೊಚಿಸ್ತಾನದಲ್ಲಿ ಕೇಳಿಬರುತ್ತಿರುವ ಸ್ವಾತಂತ್ರ್ಯ ಹೋರಾಟದ ಘೋಷವು ಬೇರೆ ಪ್ರಾಂತ್ಯಗಳಲ್ಲೂ ಶುರುವಾಗಬಹುದು. 

ಚೀನಾದ ಅಪಾಯವಿಲ್ಲವೇ?

ಹೀಗೆಲ್ಲ ಪಾಕಿಸ್ತಾನವನ್ನು ಹಣಿಯುವ ಸಾಧ್ಯತೆಯ ಚರ್ಚೆಗಳು ಬಿಚ್ಚಿಕೊಂಡಾಗಲೆಲ್ಲ ಪ್ರತಿಯಾಗಿ ತೂರಿಬರುವ ಪ್ರಶ್ನೆ ಎಂದರೆ ಚೀನಾದ್ದು. ಸಿಂಧು ಮತ್ತು ಬ್ರಹ್ಮಪುತ್ರ ನದಿಗಳ ಉಗಮ ಸ್ಥಾನವೇ ಚೀನಾದ ನಿಯಂತ್ರಣದಲ್ಲಿದ್ದಿರುವಾಗ ನಾವು ಪಾಕಿಸ್ತಾನದ ಜತೆಗೆ ಆಡಿರುವ ಆಟವನ್ನು ನಾಳೆ ಅದೂ ನಮ್ಮೊಂದಿಗೆ ಆಡಬಹುದಲ್ಲವೇ? ಇಷ್ಟಕ್ಕೂ ಪಾಕಿಸ್ತಾನವೀಗ ಹೆಚ್ಚೂ-ಕಡಿಮೆ ಚೀನಾದ ವಸಾಹತು ಎಂದಾಗಿಬಿಟ್ಟಿರುವ ಸ್ಥಿತಿ ಇದ್ದಿರುವಾಗ ಅದು ಅಷ್ಟು ಸುಲಭಕ್ಕೆ ಪಾಕಿಸ್ತಾನದಲ್ಲಿ ತನ್ನ ಹೂಡಿಕೆಗಳನ್ನು ಬಿಟ್ಟುಕೊಡುತ್ತದೆಯೇ? ಇವೆಲ್ಲ ಪ್ರಶ್ನೆಗಳೂ ಪ್ರಸ್ತುತವೇ. ಪಾಕ್ ಜತೆಯಲ್ಲೇ ಚೀನಾದ ಜತೆಗೂ ನಮ್ಮ ಪರೋಕ್ಷ ಸಮರ ಅದಾಗಲೇ ಶುರುವಾಗಿದೆ ಎಂಬುದೂ ವಾಸ್ತವವೇ.

ಆದರೆ ಇಲ್ಲಿ ಚೀನಾಕ್ಕೆ ಕೆಲವು ಪರಿಮಿತಿಗಳಿವೆ. ಸಿಂಧುವಿನ ವಿಚಾರವನ್ನೇ ತೆಗೆದುಕೊಂಡರೆ, ಅದು ಚೀನಾ ನಿಯಂತ್ರಣದ ಟಿಬೆಟ್ನಲ್ಲಿ ಹುಟ್ಟುವುದು ಹೌದಾದರೂ ಅದರ ಕ್ಯಾಚ್ಮೆಂಟ್ ಪ್ರದೇಶ ಅರ್ಥಾತ್ ನೀರನ್ನು ತನ್ನೊಳಗೆ ಹೆಚ್ಚಾಗಿ ತುಂಬಿಸಿಕೊಳ್ಳುವ ಪ್ರದೇಶವು ಭಾರತದ ಸಿಯಾಚಿನ್ ನೀರ್ಗಲ್ಲುಗಳ ಭಾಗದಿಂದಲೇ ಆರಂಭವಾಗುತ್ತದೆ. ಮೊದಲನೆಯದಾಗಿ, ಪ್ರಾರಂಭಿಕ ಹರಿವಿನ ಟಿಬೆಟ್ ನೆಲವು ಅಣೆಕಟ್ಟಿನಂಥ ನಿರ್ಮಿತಿಗಳ ಸಾಧ್ಯತೆಯನ್ನೇ ತುಂಬ ಕ್ಷೀಣವಾಗಿರಿಸಿದೆ. ಅಷ್ಟಾಗಿ ನೀರು ತಡೆದರೂ ಭಾರತಕ್ಕೆ ದೊಡ್ಡ ಪರಿಣಾಮ ಆಗದು. ಏಕೆಂದರೆ ಸಿಂಧು ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಸೇರಿಕೊಳ್ಳುವುದು ಸಿಯಾಚಿನ್ ನೀರ್ಗಲ್ಲು ಕರಗುವಿಕೆಯ ನುಬ್ರಾ, ಶಯಾಕ್ ನದಿಗಳ ಆಧಾರದಲ್ಲಿ.

ಇನ್ನು ಬ್ರಹ್ಮಪುತ್ರದ ವಿಚಾರದಲ್ಲಿ ಚೀನಾವು ಭಾರತದೊಂದಿಗೆ ಅಧಿಕೃತ ಒಪ್ಪಂದವನ್ನು ಮಾಡಿಕೊಂಡೇ ಇಲ್ಲ. ಭಾರತದ ಈಶಾನ್ಯ ರಾಜ್ಯಗಳಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಬ್ರಹ್ಮಪುತ್ರ ಪ್ರವಾಹ ಸೃಷ್ಟಿಯನ್ನು ಅದು ಆಗೀಗ ಮಾಡಿಕೊಂಡುಬಂದಿದೆ. ಎಮ್ ಒ ಯು (ಕಾನೂನಾತ್ಮಕವಲ್ಲದ ಒಡಂಬಡಿಕೆ) ಆಧಾರದಲ್ಲಿ ಅದು ಕೆಲವು ಹರಿವಿನ ಮಾಹಿತಿಗಳನ್ನು ಭಾರತದ ಜತೆ ಹಂಚಿಕೊಳ್ಳುತ್ತಿದೆಯಾದರೂ ಅದರಲ್ಲಿ ಮೊದಲಿನಿಂದಲೂ ಪಾರದರ್ಶಕತೆ ಕಡಿಮೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಬ್ರಹ್ಮಪುತ್ರ ಹರಿವಿನ ವಿಚಾರದಲ್ಲಿ ಚೀನಾದ ನಡವಳಿಕೆಯು ನಾವು ಪಾಕಿಸ್ತಾನವನ್ನು ಹೇಗೆ ನಡೆಸಿಕೊಳ್ಳುತ್ತೇವೆಂಬ ಆಧಾರದಲ್ಲಿ ರೂಪುಗೊಂಡೇ ಇಲ್ಲವಾದ್ದರಿಂದ ಈಗದರ ಪಾತ್ರ ಅಪ್ರಸ್ತುತ. 

ಅದೇನೇ ಇದ್ದರೂ, ಸಿಪಿಇಸಿ- ಕಾರಾಕೋರಂ ಹೆದ್ದಾರಿ - ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾದ ಬೃಹತ್ ಹೂಡಿಕೆ ಇವೆಲ್ಲವೂ ಇವತ್ತಲ್ಲ ನಾಳೆ ಭಾರತದೊಂದಿಗಿನ ಯುದ್ಧವನ್ನು ಪಕ್ಕಾ ಮಾಡುತ್ತಿವೆಯಲ್ಲವೇ? ಮೇಲ್ನೋಟಕ್ಕೆ ಈ ಪ್ರಶ್ನೆಗೆ ಉತ್ತರ ಹೌದು ಎನ್ನುವುದೇ ಆಗಿದೆ. ಆದರೆ ಇಲ್ಲೊಂದು ಜನಸಂಖ್ಯೆಯ ವಿಶಿಷ್ಟ ಆಯಾಮವಿದೆ. ಸದ್ಯಕ್ಕೆ ಭಾರತ ಅದರಲ್ಲಿ ಮುಂಚೂಣಿ ಕಾಯ್ದುಕೊಂಡಿದೆ. ಜನಸಂಖ್ಯೆಯ ಸರಾಸರಿ ವಯೋಮಾನ ಎಂಬುದೊಂದು ಲೆಕ್ಕಾಚಾರವಿದೆ. ಆ ಪ್ರಕಾರ ಇವತ್ತಿಗೆ ಚೀನಾದ ಜನಸಂಖ್ಯೆಯ ಸರಾಸರಿ ವಯೋಮಾನ 39 ವರ್ಷಗಳಾದರೆ, ಭಾರತದ್ದು 28. ಇದೇ ಟ್ರೆಂಡ್ ಮುಂದುವರಿದರೆ 2044ರಲ್ಲಿ ಚೀನಾ ಜನಸಂಖ್ಯೆಯ ಸರಾಸರಿ ವಯೋಮಾನ 50 ವರ್ಷಗಳು. ಇದರರ್ಥ ಅದರ ಜನಸಂಖ್ಯೆಯ ಅರ್ಧ ಪ್ರಮಾಣಕ್ಕೆ 50ರ ಪ್ರಾಯವಾಗಿರುತ್ತದೆ ಎಂದರ್ಥ. ಆಗ ಭಾರತವು 38ರ ಸರಾಸರಿ ವಯೋಮಾನದಲ್ಲಿರುತ್ತದೆ. ಸೇನೆಯಲ್ಲಿ ಹೋರಾಡುವುದಕ್ಕೆ, ಅನ್ವೇಷಣೆಗಳಿಗೆ, ಹಿರಿಯರ ಶುಶ್ರೂಷೆ-ಪಿಂಚಣಿ ವ್ಯವಸ್ಥೆಗಳಿಗೆ ಜೀವ ತುಂಬುವುದಕ್ಕೆ ಒಂದು ದೇಶದ ಯುವ ಜನತೆ ಪ್ರಮಾಣ ಬಹುಮುಖ್ಯ ಎನ್ನುವುದು ಒಂದು ಆಯಾಮವಾದರೆ, ಅರ್ಧ ದೇಶವೇ ಐವತ್ತರ ಮುಪ್ಪಿನ ಹೊಸ್ತಿಲಲ್ಲಿ ನಿಂತಾಗ ಅದ್ಯಾವ ಸಮರ ಗೆಲ್ಲುವುದಕ್ಕೆ ಪರುಷಾರ್ಥ ಒದಗಿಬರುತ್ತದೆ ಹೇಳಿ? 

ಹೀಗಾಗಿ ಜಾಗತಿಕ ಕಾರ್ಯತಂತ್ರದ ದೃಷ್ಟಿಯಿಂದ ಭಾರತವು ತನ್ನ ಜನನ ಪ್ರಮಾಣದ ಓಘವನ್ನು ಸರಿಯಾಗಿರಿಸಿಕೊಂಡು ಈ ನಡುವಿನ 10-15 ವರ್ಷಗಳನ್ನು ನಿಭಾಯಿಸಬೇಕಿದೆ ಅಷ್ಟೇ. ಆದರಿದು ಹೇಳಿದಷ್ಟು ಸುಲಭವಲ್ಲ. ಈ ಜನನ ಪ್ರಮಾಣದ ಕದನ ಎನ್ನುವುದು ಕೇವಲ ಭಾರತ-ಚೀನಾಗಳಿಗೆ ಸಂಬಂಧಿಸಿದ್ದಲ್ಲ, ಇಡೀ ಜಗತ್ತಿಗೆ ಸವಾಲು ತಂದಿರುವ ಹಂತವಿದು. ಅದಾಗಲೇ ಬರ್ತ್ ರೇಟ್ ತಿರುಗಿಸಲಾಗದ ರೀತಿಯಲ್ಲಿ ಕಳೆದುಕೊಂಡಿರುವ ದೇಶಗಳು ಭಾರತವನ್ನೂ ಆ ಹಾದಿಗೆಳೆಯುವುದಕ್ಕೆ ಸಾಂಸ್ಕೃತಿಕ-ಮಾನಸಿಕ ಸಮರವೊಂದನ್ನು ಅದಾಗಲೇ ಸಾರಿಬಿಟ್ಟಿವೆ. ಆ ಬಗ್ಗೆ ವಿವರಿಸುವುದಕ್ಕೆ ಇನ್ನೊಂದು ಅಂಕಣವೇ ಬೇಕಾಗುತ್ತದೆ!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT