ಅಂಕಣಗಳು

ಮರುಕಳಿಸಿದ ಇತಿಹಾಸ: ನವದೆಹಲಿಯತ್ತ ಸ್ನೇಹ ಹಸ್ತ ಚಾಚಿದ ಕಾಬೂಲ್ (ಜಾಗತಿಕ ಜಗಲಿ)

ಒಂದು ಕಾಲದಲ್ಲಿ ಭಾರತ 'ಒಳ್ಳೆಯ ತಾಲಿಬಾನ್' ಎನ್ನುವುದೇನೂ ಇಲ್ಲ ಎಂದಿತ್ತು. ತಾಲಿಬಾನ್ ಎಂದಿದ್ದರೂ ಪಾಕಿಸ್ತಾನದ ಕಾರ್ಯತಂತ್ರದ ಉಪಕರಣವಾಗಿತ್ತು ಎಂದೇ ಭಾರತ ಭಾವಿಸಿತ್ತು.

ಒಂದು ವೇಳೆ, ಭೌಗೋಳಿಕತೆಯೇ ವಿಧಿಯನ್ನೂ ನಿರ್ಧರಿಸುತ್ತದೆ ಎನ್ನುವ ಮಾತನ್ನು ನಂಬುತ್ತೀರಾದರೆ, ಇದು ಭಾರತದ ವಾಯುವ್ಯ ಗಡಿಯಲ್ಲಿ (ಅಫ್ಘಾನಿಸ್ತಾನ - ಪಾಕಿಸ್ತಾನ ಬದಿಯಲ್ಲಿ) ನಿಜವೇ ಆಗುತ್ತಿದೆ. 1947ರ ಬಳಿಕ, ಎರಡು ವಿಚಾರಗಳು ಸ್ಪಷ್ಟವಾಗಿದ್ದವು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವೆ ಎಂದಿಗೂ ಒಂದು ಉತ್ತಮ ಸ್ನೇಹ ಸಂಬಂಧ ಇರಲೇ ಇಲ್ಲ. ಆದರೆ, ಇದೇ ವೇಳೆ ಭಾರತ ಅಫ್ಘಾನಿಸ್ತಾನದೊಡನೆ ಸದಾ ಒಂದು ಆತ್ಮೀಯ ಸ್ನೇಹ, ಬಾಂಧವ್ಯ ಹೊಂದಿತ್ತು.

ಕಾಬೂಲನ್ನು ಕಾಲ ಕಾಲಕ್ಕೆ ರಾಜರು, ಕಮ್ಯುನಿಸ್ಟರು, ಅಥವಾ ವಿವಿಧ ರೀತಿಯ ಇಸ್ಲಾಮಿಸ್ಟ್ ಗುಂಪುಗಳು ನಿಯಂತ್ರಿಸುತ್ತಿದ್ದರೂ, ಹಿಂದಿನಿಂದಲೂ ಇದೇ ಮಾದರಿ ಮುಂದುವರಿದು ಬಂದಿದೆಯೇ ಹೊರತು, ಇದರಲ್ಲಿ ಯಾವುದೇ ಬದಲಾವಣೆ ಉಂಟಾಗಿರಲಿಲ್ಲ.

ಈ ಹಳೆಯ ಮಾದರಿಯನ್ನು ಶಾಶ್ವತವಾಗಿ ಬದಲಾಯಿಸುವ ಉದ್ದೇಶದಿಂದಲೇ ಪಾಕಿಸ್ತಾನ ತಾಲಿಬಾನನ್ನು ನಿರ್ಮಿಸಿ, ಅದನ್ನು ಬೆಂಬಲಿಸಿತ್ತು. ಆದರೆ ಇಂದು, ತಾಲಿಬಾನ್ ಪಾಕಿಸ್ತಾನದೊಡನೆಯೇ ಕದನಕ್ಕೆ ಇಳಿದಿದ್ದು, ಪರಿಸ್ಥಿತಿಯನ್ನು ಸಮತೋಲನಗೊಳಿಸಲು ಭಾರತದತ್ತ ಕೈ ಚಾಚಿದೆ.

ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಯಲ್ಲಿ ನಡೆದ ಕದನಗಳು ಮತ್ತೆ ಮತ್ತೆ ಪುನರಾವರ್ತಿತವಾಗುವ ಇದೇ ಹಳೆಯ ಐತಿಹಾಸಿಕ ಮಾದರಿಗೆ ಸರಿಯಾಗಿ ಹೊಂದಿಕೊಂಡಿವೆ.

ಇಲ್ಲಿನ ವ್ಯಂಗ್ಯ ಅತ್ಯಂತ ಸ್ಪಷ್ಟ. ಪಾಕಿಸ್ತಾನವೇ ತಾಲಿಬಾನ್ ಸಂಘಟನೆಯನ್ನು ಅಧಿಕಾರಕ್ಕೆ ತರಲು ನೆರವಾಗಿತ್ತು. ಆದರೆ, ಇಂದು ಅದೇ ಪಾಕಿಸ್ತಾನ ಅದೇ ತಾಲಿಬಾನ್ ಜೊತೆಗೆ ಕದನದಲ್ಲಿ ವ್ಯಸ್ತವಾಗಿದೆ. ಇಂದು ಪಾಕಿಸ್ತಾನ ತಾಲಿಬಾನ್ ಜೊತೆಗೆ ನೇರವಾಗಿ ಮಾತನಾಡಲು ಸಾಧ್ಯವಿಲ್ಲದೆ, ಯಾವುದಾದರೂ ಮೂರನೇ ರಾಷ್ಟ್ರದ ಮೂಲಕವೇ ಸಂಪರ್ಕಿಸುವ ಅನಿವಾರ್ಯತೆ ಎದುರಾಗಿದೆ.

ಅಕ್ಟೋಬರ್‌ನಲ್ಲಿ ಪಾಕಿಸ್ತಾನದ ಜೊತೆಗಿನ ಗಡಿ ಚಕಮಕಿಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಒಂದು ವಾರದ ಅವಧಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನ ಭಾರತದೊಡನೆ ಘನಿಷ್ಠ ಸಂಬಂಧ ಹೊಂದುವುದನ್ನು ಎದುರು ನೋಡುತ್ತಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು.

ಒಂದು ಕಾಲದಲ್ಲಿ ಭಾರತ 'ಒಳ್ಳೆಯ ತಾಲಿಬಾನ್' ಎನ್ನುವುದೇನೂ ಇಲ್ಲ ಎಂದಿತ್ತು. ತಾಲಿಬಾನ್ ಎಂದಿದ್ದರೂ ಪಾಕಿಸ್ತಾನದ ಕಾರ್ಯತಂತ್ರದ ಉಪಕರಣವಾಗಿತ್ತು ಎಂದೇ ಭಾರತ ಭಾವಿಸಿತ್ತು. ಆದ್ದರಿಂದ, ಈಗ ತಾಲಿಬಾನ್ ಪಾಕಿಸ್ತಾನದಿಂದ ದೂರ ಸರಿಯುವುದನ್ನು ನೋಡುತ್ತಾ, ಭಾರತಕ್ಕೆ ನಿಜಕ್ಕೂ ಸಂತಸವಾಗುತ್ತಿದೆ.

ಈ ಭೇಟಿಯ ಕೆಲವು ದಿನಗಳ ನಂತರ, ಭಾರತ ಕಾಬೂಲ್‌ನಲ್ಲಿನ ತನ್ನ ಸಣ್ಣದಾದ, ತಾಂತ್ರಿಕ ಕಚೇರಿಯನ್ನು ಪೂರ್ಣ ಪ್ರಮಾಣದ ರಾಯಭಾರ ಕಚೇರಿಯಾಗಿ ಪರಿವರ್ತಿಸಿತು. ಆ ಮೂಲಕ, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದೊಡನೆ ಸಹಜ ಸಂಬಂಧ ಆರಂಭಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಯಿತು.

ಈ ಹೊಸದಾದ ಆತ್ಮೀಯತೆಗೆ ದೊಡ್ಡ ರಾಜತಾಂತ್ರಿಕ ಪ್ರಯತ್ನ ಅಗತ್ಯವಿರಲಿಲ್ಲ. ಇತಿಹಾಸ ಮತ್ತು ಭೌಗೋಳಿಕತೆಯೇ ಕಾಬೂಲ್ ಮತ್ತು ನವದೆಹಲಿಗಳನ್ನು ಸಹಜವಾಗಿಯೇ ಪರಸ್ಪರ ಸನಿಹಕ್ಕೆ ತಂದಿವೆ. ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ಹಳೆಯ ಸಹಜ ಬಾಂಧವ್ಯವೇ ಈಗ ಮರಳಿದ್ದು, ಆಳುವವರು ಮಾತ್ರವೇ ಬದಲಾಗಿದ್ದಾರೆ.

ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ತ್ರಿಕೋನ ಸಂಬಂಧ ಪಾಕಿಸ್ತಾನದ ನಿರ್ಮಾಣದಷ್ಡೇ ಹಳೆಯದು. ಅಫ್ಘಾನಿಸ್ತಾನದಲ್ಲಿನ ಎಲ್ಲ ಸರ್ಕಾರಗಳೂ, ಅವುಗಳ ಸಿದ್ಧಾಂತ ಏನೇ ಆಗಿದ್ದರೂ, ಅಂತಿಮವಾಗಿ ಅವು ಪಾಕಿಸ್ತಾನದೊಡನೆ ಯುದ್ಧವನ್ನೇ ಮಾಡಿದ್ದವು.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ಸಮಸ್ಯೆಯ ಮೂಲ ಇರುವುದು ಡ್ಯುರಾಂಡ್ ರೇಖೆಯಲ್ಲಿ. ಡ್ಯುರಾಂಡ್ ರೇಖೆ ಎನ್ನುವುದು 1893ರಲ್ಲಿ ಬ್ರಿಟಿಷ್ ಇಂಡಿಯಾ ಮತ್ತು ಅಫ್ಘಾನ್ ಆಡಳಿತಗಾರ ಅಬ್ದುರ್ ರೆಹಮಾನ್ ಖಾನ್ ನಡುವೆ ನಡೆದ ಗಡಿ ಒಪ್ಪಂದವಾಗಿತ್ತು. ಈ ರೇಖೆ ಪಶ್ತೂನ್ ಮತ್ತು ಬಲೂಚ್ ಪ್ರದೇಶಗಳ ಮೂಲಕ ಹಾದುಹೋಗಿ, ಅಲ್ಲಿನ ಸಮುದಾಯಗಳನ್ನು ಗಡಿಯ ಎರಡೂ ಬದಿಗೆ ಹಂಚಿತ್ತು.

1947ರಲ್ಲಿ, ಪಾಕಿಸ್ತಾನ ಒಂದು ನೂತನ ದೇಶವಾಗಿ ಸ್ಥಾಪನೆಯಾದಾಗ, ಅದು ಬ್ರಿಟಿಷ್ ಆಡಳಿತಗಾರರು ಹಾಕಿದ್ದ ಡ್ಯುರಾಂಡ್ ರೇಖೆಯನ್ನು ಗಡಿಯಾಗಿ ಹೊಂದಿತ್ತು. ಅಫ್ಘಾನಿಸ್ತಾನ ಈ ಗಡಿಯನ್ನು ನ್ಯಾಯಯುತ ಎಂದು ಒಪ್ಪಿಕೊಳ್ಳಲು ಸದಾ ನಿರಾಕರಿಸಿತ್ತು. ವಿಶ್ವಸಂಸ್ಥೆಯ ಸದಸ್ಯನಾಗಿ ಪಾಕಿಸ್ತಾನದ ಸೇರ್ಪಡೆಯನ್ನು ವಿರೋಧಿಸಿದ್ದ ಏಕೈಕ ದೇಶ ಅಫ್ಘಾನಿಸ್ತಾನವಾಗಿತ್ತು.

ಬ್ರಿಟಿಷ್ ಸಾಮ್ರಾಜ್ಯ ಅತ್ಯಂತ ಶಕ್ತಿಶಾಲಿ ಆಡಳಿತಗಾರನಾದ ಕಾರಣ, ಅದು ಎಳೆದ ಗಡಿಯನ್ನು ಒಪ್ಪಿಕೊಳ್ಳುವುದು ಅಫ್ಘಾನಿಸ್ತಾನಕ್ಕೆ ಸುಲಭವಾಗಿತ್ತು. ಆದರೆ, ಅಫ್ಘಾನಿಸ್ತಾನ ಪಾಕಿಸ್ತಾನದೊಡನೆ ಅದೇ ಗಡಿಯನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಯಾಕೆಂದರೆ, ಅಫ್ಘಾನಿಸ್ತಾನ ಪಾಕಿಸ್ತಾನವನ್ನು ಭಾರತದ ವಿಭಜನೆಯ ಬಳಿಕ, ಬ್ರಿಟಿಷ್ ಭಾರತದ ಒಂದು ಸಣ್ಣ ತುಣುಕಾಗಿ ಪರಿಗಣಿಸಿತ್ತೇ ಹೊರತು ಗಡಿಯನ್ನು ನಿರ್ಧರಿಸುವ ಶಕ್ತಿಶಾಲಿ ದೇಶ ಎಂದು ಭಾವಿಸಿರಲಿಲ್ಲ.

ಸತತವಾಗಿ ಅಫ್ಘಾನ್ ಸರ್ಕಾರಗಳು ಒಂದು ಪ್ರತ್ಯೇಕ ಪಶ್ತೂನಿಸ್ತಾನ ಎಂಬ ಹೊಸ ದೇಶವನ್ನು ನಿರ್ಮಿಸುವ ಯೋಚನೆ ಹೊಂದಿದ್ದವು. ಇದು ಅಫ್ಘಾನ್ - ಪಾಕಿಸ್ತಾನ ಗಡಿಯ ಎರಡೂ ಬದಿಗಳಲ್ಲಿರುವ ಪಶ್ತೂನಿಗರನ್ನು ಜೊತೆಯಾಗಿಸುವ ಗುರಿ ಹೊಂದಿತ್ತು. ಈ ಆಲೋಚನೆ ಇಂದಿಗೂ ಪಾಕಿಸ್ತಾನಕ್ಕೆ ಬಹುದೊಡ್ಡ ಭಯ ಮತ್ತು ರಾಜಕೀಯ ತಲೆನೋವು ತಂದೊಡ್ಡುತ್ತಿದೆ.

ಪಾಕಿಸ್ತಾನ ಅಫ್ಘಾನಿಸ್ತಾನದ ಜೊತೆಗಿನ ತನ್ನ ಗಡಿ ವಿವಾದವನ್ನು ಕೇವಲ ನಕ್ಷೆಯಲ್ಲಿ ಎಳೆದ ಸಣ್ಣ ಗೆರೆ ಎಂಬಂತೆ ಪರಿಗಣಿಸುತ್ತಿಲ್ಲ. ಪಾಕಿಸ್ತಾನಕ್ಕೆ ಈ ವಿಚಾರ ಅತ್ಯಂತ ಅಪಾಯಕಾರಿಯಾಗಿದ್ದು, ಈ ಗಡಿಯನ್ನು ಪ್ರಶ್ನಿಸುವುದು ಒಂದು ದೇಶವಾಗಿ ಪಾಕಿಸ್ತಾನದ ಗುರುತು ಮತ್ತು ಸ್ಥಿರತೆಯನ್ನೇ ಇಲ್ಲವಾಗಿಸಬಲ್ಲದು. ಈ ಭಯದ ಕಾರಣದಿಂದಲೇ ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಏಕಕಾಲದಲ್ಲಿ ತಾವು ಎರಡು ಗಡಿಗಳಲ್ಲಿ ಎರಡು ಶತ್ರುಗಳನ್ನು, ಅಂದರೆ ಒಂದು ಬದಿಯಲ್ಲಿ ಭಾರತ ಮತ್ತು ಇನ್ನೊಂದು ಬದಿಯಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿ ಬರಬಹುದು ಎಂದು ನಿರಂತರ ಆತಂಕ ಹೊಂದಿದ್ದವು. ಇದು ಪಾಕಿಸ್ತಾನದ ಭದ್ರತಾ ವ್ಯವಸ್ಥೆಗೆ ಅಪಾರ ಒತ್ತಡ ಸೃಷ್ಟಿಸಿತ್ತು.

ಪಾಕಿಸ್ತಾನಿ ಸೇನೆ 'ಸ್ಟ್ರಾಟೆಜಿಕ್ ಡೆಪ್ತ್' (ಯುದ್ಧದ ಸಂದರ್ಭದಲ್ಲಿ ಹೆಚ್ಚುವರಿ ಸುರಕ್ಷಿತ ಜಾಗ) ಎನ್ನುವ ಹಳೆಯ ಬ್ರಿಟಿಷ್ ಯೋಚನೆಯನ್ನು ಪರಿಗಣಿಸಿತ್ತು. ಹಿಂದೆ ಬ್ರಿಟಿಷರು ಬಯಸಿದ್ದಂತೆ, ಪಾಕಿಸ್ತಾನವೂ ಅಫ್ಘಾನಿಸ್ತಾನ ಒಂದು ಬಫರ್ ಆಗಿರಬೇಕು, ಅಂದರೆ, ತನ್ನ ಮಿತ್ರ ಸರ್ಕಾರದ ಆಡಳಿತದಲ್ಲಿರುವ, ತನ್ನ ಹಿತಾಸಕ್ತಿಗೆ ಪೂರಕವಾಗಿ ವರ್ತಿಸುವ ಸ್ಥಳವಾಗಿರಬೇಕು ಎಂದು ಬಯಸಿತ್ತು.

ಅಯೂಬ್ ಖಾನ್‌ನಿಂದ ಜಿಯಾ ಉಲ್ ಹಕ್ ತನಕ ಪಾಕಿಸ್ತಾನಿ ನಾಯಕರು ಅಫ್ಘಾನಿಸ್ತಾನದ ಬುಡಕಟ್ಟು ಹೋರಾಟಗಾರರು ಮತ್ತು ಇಸ್ಲಾಮಿಸ್ಟ್ ಗುಂಪುಗಳಿಗೆ ಬೆಂಬಲ ನೀಡಿ, ಕಾಬೂಲಿನ ರಾಜಕೀಯವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ, ಪ್ರತಿಬಾರಿಯೂ ಈ ವಿಧಾನ ವಿಫಲವಾಗಿ, ಪಾಕಿಸ್ತಾನಕ್ಕೆ ನೆರವಾಗುವ ಬದಲು ತೊಂದರೆ ಉಂಟುಮಾಡುತ್ತಿತ್ತು.

1970ರ ದಶಕದ ಕೊನೆಯ ವೇಳೆಗೆ, ಪಾಕಿಸ್ತಾನಕ್ಕೆ ಹೊಸದೊಂದು ಮಾರ್ಗ ಸಿಕ್ಕಿತ್ತು. ಅದೇ ಜಿಹಾದಿ ಉಗ್ರವಾದ. 1979ರಲ್ಲಿ ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನದ ಮೇಲೆ‌ ಆಕ್ರಮಣ ನಡೆಸಿದಾಗ, ಅಮೆರಿಕಾ, ಸೌದಿ ಅರೇಬಿಯಾ, ಮತ್ತು ಪಾಕಿಸ್ತಾನಗಳು ಜೊತೆಯಾಗಿ ಮಾಸ್ಕೋ ವಿರುದ್ಧ ಸೆಣಸುವ ಯೋಧರಿಗೆ ಬೆಂಬಲ ನೀಡಿದ್ದವು. ಈ ಪರಿಸ್ಥಿತಿ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ರಾಜಕೀಯದ ಮೇಲೆ ಭಾರೀ ಪ್ರಭಾವ ಮತ್ತು ಹೆಚ್ಚಿನ ಅಧಿಕಾರ ಒದಗಿಸಿತು.

ಅಮೆರಿಕಾಗೆ ಅಫ್ಘಾನಿಸ್ತಾನದ ಒಳಗೆ ಸೋವಿಯತ್ ಒಕ್ಕೂಟವನ್ನು ದುರ್ಬಲಗೊಳಿಸುವುದು ಗುರಿಯಾಗಿದ್ದರೆ, ಪಾಕಿಸ್ತಾನಕ್ಕೆ ಅಫ್ಘಾನ್ ಪಶ್ತೂನ್ ಗುರುತಿನಲ್ಲಿ ಪ್ರತ್ಯೇಕ ಪಶ್ತೂನಿಸ್ತಾನದ ಸ್ಥಾಪನೆಯ ಯೋಚನೆ ಶಾಶ್ವತವಾಗಿ ಕೊನೆಯಾಗಬೇಕಿತ್ತು. ಪಾಕಿಸ್ತಾನಕ್ಕೆ ಗಡಿಯ ಎರಡೂ ಬದಿಗಳಲ್ಲಿದ್ದ ಪಶ್ತೂನಿಗರು ತಾವು ಪ್ರತ್ಯೇಕ ದೇಶಕ್ಕೆ ಸೇರಿದವರು ಎಂಬ ಭಾವನೆ ಬರುವುದು ಬೇಡವಾಗಿತ್ತು.

1992ರಲ್ಲಿ, ಸೋವಿಯತ್ ಬೆಂಬಲಿತ ನಜೀಬುಲ್ಲಾ ಸರ್ಕಾರ ಪತನಗೊಂಡಾಗ, ಪಾಕಿಸ್ತಾನ ತರಬೇತಿ ನೀಡಿದ್ದ ಅಫ್ಘಾನ್ ಮುಜಾಹಿದೀನರು ಅಧಿಕಾರಕ್ಕೆ ಬಂದರು. ಅವರು ಆಡಳಿತಗಾರರಾದ ಬಳಿಕ, ಹಿಂದೆ ಭಾರತದ ವಿರುದ್ಧ ವಾಗ್ದಾಳಿ ನಡೆಸಿದ್ದ ಇದೇ ಇಸ್ಲಾಮಸ್ಟ್ ನಾಯಕರು ಕಾಬೂಲ್ ರಾಜಕೀಯದಲ್ಲಿ ಪಾಕಿಸ್ತಾನದ ಹಸ್ತಕ್ಷೇಪದಿಂದ ತಮ್ಮನ್ನು ತಾವು ರಕ್ಷಿಸಲು ಭಾರತದ ನೆರವು ಕೇಳಲಾರಂಭಿಸಿದರು.

ಅಫ್ಘಾನಿಸ್ತಾನದ ಒಳಗೆ ಮುಜಾಹಿದೀನ್ ಗುಂಪುಗಳು ಪರಸ್ಪರ ತಮ್ಮೊಳಗೆ ಹೊಡೆದಾಡಲು ಆರಂಭಿಸಿದಾಗ, ಪಾಕಿಸ್ತಾನ ಮರಳಿ ತನ್ನ ನಿಯಂತ್ರಣ ಮತ್ತು ಸ್ಥಿರತೆಯನ್ನು ತರುವ ಸಲುವಾಗಿ 1990ರ ದಶಕದ ಆರಂಭದಲ್ಲಿ ತಾಲಿಬಾನ್‌ಗೆ ಬೆಂಬಲ ನೀಡಿತು. 1996ರ ವೇಳೆಗೆ, ತಾಲಿಬಾನ್ ಕಾಬೂಲನ್ನು ವಶಪಡಿಸಿಕೊಂಡಿತು. ಆಗ ಪಾಕಿಸ್ತಾನ ಅಂತಿಮವಾಗಿ ಅದು ಯಾವಾಗಲೂ ಬಯಸಿದ್ದ, ಅದರ ಉದ್ದೇಶವಾದ ಸ್ಟ್ರಾಟೆಜಿಕ್ ಡೆಪ್ತ್ ಸಂಪಾದಿಸಿದಂತೆ ಕಂಡಿತ್ತು.

ಪಾಕಿಸ್ತಾನ ಸಂಪೂರ್ಣವಾಗಿ ತಾಲಿಬಾನ್‌ಗೆ ಬೆಂಬಲ ನೀಡುತ್ತಿದ್ದಾಗಲೂ, ತಾಲಿಬಾನ್ ಮಾತ್ರ ತಾನು ಪಾಕಿಸ್ತಾನದ ಸಂಪೂರ್ಣ ನಿಯಂತ್ರಣದಲ್ಲಿ ಇರುವಂತೆ ಎಂದಿಗೂ ನಡೆದುಕೊಳ್ಳಲಿಲ್ಲ. ತಾಲಿಬಾನ್ ನಿರಂತರವಾಗಿ ತಾನು ಸ್ವತಂತ್ರವಾಗಿ ಕಾರ್ಯಾಚರಿಸುವ ಉದ್ದೇಶ ಹೊಂದಿರುವುದನ್ನು ಪ್ರದರ್ಶಿಸಿತ್ತು. ಅದರೊಡನೆ, ಭಾರತದೊಡನೆ ಉತ್ತಮ ಬಾಂಧವ್ಯ ಹೊಂದುವ ಇಚ್ಛೆಯನ್ನು ತಾಲಿಬಾನ್ ಬಹಿರಂಗವಾಗಿ ವ್ಯಕ್ತಪಡಿಸಿತ್ತು.

ಮುಜಾಹಿದೀನ್ ಅಥವಾ ತಾಲಿಬಾನ್‌ನಂತಹ ಇಸ್ಲಾಮಿಸ್ಟ್ ಗುಂಪುಗಳಾದರೂ ಪಶ್ತೂನಿಸ್ತಾನದ ಕಲ್ಪನೆಯನ್ನು ತ್ಯಜಿಸಿ, ಡ್ಯುರಾಂಡ್ ರೇಖೆಯನ್ನು ವಾಸ್ತವ ಗಡಿ ಎಂದು ಒಪ್ಪಿಕೊಳ್ಳಬಹುದು ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು. ಆದರೆ, ಅವರಾರೂ ಡ್ಯುರಾಂಡ್ ರೇಖೆಯನ್ನು ಸಂಪೂರ್ಣವಾಗಿ ಒಪ್ಪದ್ದರಿಂದ, ಪಾಕಿಸ್ತಾನಕ್ಕೆ ಮತ್ತು ನಿರಾಸೆಯೇ ಆಗಿತ್ತು.

2021ರಲ್ಲಿ ತಾಲಿಬಾನ್ ಮರಳಿ ಅಧಿಕಾರಕ್ಕೆ ಬಂದ ಬಳಿಕ, ಅವರು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಮತ್ತು ಸ್ವತಂತ್ರವಾಗಿ ಕಾರ್ಯಾಚರಿಸುವುದನ್ನು ಬಲವಾಗಿ ತೋರಿಸತೊಡಗಿದರು. ಈ ವರ್ತನೆಯ ಕಾರಣದಿಂದಾಗಿ, ಪಾಕಿಸ್ತಾನದ ಜೊತೆಗಿನ ತಾಲಿಬಾನ್ ಸಂಬಂಧ ಅತ್ಯಂತ ಕೆಟ್ಟದಾಗಿದ್ದು, ಕ್ಷಿಪ್ರವಾಗಿ ಹದಗೆಡುತ್ತಿದೆ.

ಗಡಿಯಾಚೆಗಿನ ದಾಳಿಗಳು, ಡ್ಯುರಾಂಡ್ ರೇಖೆಯಲ್ಲಿ ಪಾಕಿಸ್ತಾನ ಗಡಿ ಬೇಲಿ ನಿರ್ಮಿಸುತ್ತಿರುವುದು ಮತ್ತು ಪಾಕಿಸ್ತಾನಿ ತಾಲಿಬಾನ್ ಎಂದು ಪ್ರಸಿದ್ಧವಾಗಿರುವ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗುಂಪಿಗೆ ಅಫ್ಘಾನಿಸ್ತಾನ ಆಶ್ರಯ ನೀಡಿದೆ ಎಂದು ಪಾಕಿಸ್ತಾನ ಆರೋಪಿಸಿರುವುದು ಉಭಯ ದೇಶಗಳನ್ನು ಬಹಿರಂಗ ಚಕಮಕಿಗೆ ತಳ್ಳಿವೆ.

ಪಾಕಿಸ್ತಾನ ಅಫ್ಘಾನ್ ನಿರಾಶ್ರಿತರನ್ನು ಬಲವಂತವಾಗಿ ತೆರಳುವಂತೆ ಮಾಡಿರುವುದು ಮತ್ತು ಅಫ್ಘಾನಿಸ್ತಾನದಲ್ಲಿ ಏನು ನಡೆಯಬೇಕು ಎನ್ನುವುದನ್ನು ತಾನು ಆಗ್ರಹಿಸಲು ಪ್ರಯತ್ನಿಸುತ್ತಿರುವುದು ತಾಲಿಬಾನ್ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪರಿಸ್ಥಿತಿಯಲ್ಲಿ, ತಾಲಿಬಾನ್ ಭಾರತದೊಡನೆ ಮಾತುಕತೆ ಆರಂಭಿಸಲು ಪ್ರಯತ್ನ ನಡೆಸಿರುವುದು ಆಶ್ಚರ್ಯಕರ ಬೆಳವಣಿಗೆ ಏನಲ್ಲ. 2021ರಿಂದ, ಭಾರತ ಕಾಬೂಲ್ ಜೊತೆ ಅತ್ಯಂತ ಜಾಗರೂಕವಾಗಿ, ಬುದ್ಧಿವಂತಿಕೆಯಿಂದ, ಮತ್ತು ಮೌನವಾದ ರಾಜತಾಂತ್ರಿಕತೆಯಿಂದ ಸಂಪರ್ಕ ಹೊಂದುತ್ತಿತ್ತು.

ಭಾರತ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವಿನ ಪೂರೈಕೆ ಪುನರಾರಂಭಿಸಿ, ತಾನೂ ಮಾತುಕತೆಗೆ ಸಿದ್ಧವಿರುವುದಾಗಿ ಸಂದೇಶ ನೀಡಿತ್ತು. ಆದರೆ, ಅಫ್ಘಾನಿಸ್ತಾನ ಯಾವ ಕಾರಣಕ್ಕೂ ಭಾರತದ ಮೇಲೆ ದಾಳಿ ನಡೆಸಲು ಬಯಸುವ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಅಥವಾ ತರಬೇತಿ ಕೇಂದ್ರ ಆಗಬಾರದು ಎನ್ನುವುದು ಭಾರತದ ಏಕೈಕ ಷರತ್ತಾಗಿತ್ತು.

ತಾಲಿಬಾನ್ ಭಾರತದ ಷರತ್ತಿಗೆ ಒಪ್ಪಿಗೆ ಸೂಚಿಸಿತ್ತು. ಇದರಿಂದ ಭಾರತವೂ ಅಫ್ಘಾನಿಸ್ತಾನಕ್ಕೆ ಅದರ ಸಾರ್ವಭೌಮತ್ವ ರಕ್ಷಣೆ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳಲು ನೆರವಾಗಲು ಒಪ್ಪಿಕೊಂಡಿತ್ತು. ಅಂದರೆ, ತನ್ನ ನೆಲವನ್ನು ಸಂಪೂರ್ಣವಾಗಿ ತಾನೇ ನಿಯಂತ್ರಿಸಬೇಕು ಎನ್ನುವ ಅಫ್ಘಾನಿಸ್ತಾನದ ಹಕ್ಕನ್ನು ಭಾರತ ಬೆಂಬಲಿಸಿತ್ತು.

ಹಿಂದೂ ಮಹಾಸಾಗರ ಮತ್ತು ಭೂಮಿಯ ಮೂಲಕ ಭಾರತಕ್ಕೆ ಸಾಗುವ ಅಫ್ಘಾನಿಸ್ತಾನದ ಸುಲಭ ಮಾರ್ಗಗಳನ್ನು ಪಾಕಿಸ್ತಾನ ತಡೆಗಟ್ಟಿರುವುದರಿಂದ, ಭಾರತ ಇರಾನ್ ಮೂಲಕ ಇತರ ಮಾರ್ಗಗಳನ್ನು ನಿರ್ಮಿಸಿ, ಅಫ್ಘಾನಿಸ್ತಾನಕ್ಕೆ ಬೆಂಬಲ ನೀಡಲು ಪ್ರಯತ್ನಿಸಿದೆ. ಇದರೊಡನೆ, ಭಾರತ ಇಂಡಿಯಾ - ಅಫ್ಘಾನಿಸ್ತಾನ ಏರ್ ಬ್ರಿಜ್ (ವಾಯು ಸಾಗಾಣಿಕೆಯ ಮೂಲಕ ನೇರ ವ್ಯಾಪಾರ) ಸಹ ಆರಂಭಿಸಿದ್ದು, ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಉದ್ಯಮ ಬೆಳೆಯಲು ನೆರವಾಗಿದೆ.

ಮುತ್ತಾಕಿ ಭಾರತ ಭೇಟಿಯ ಇನ್ನೊಂದು ಮುಖ್ಯ ಅಂಶವೆಂದರೆ, ನವದೆಹಲಿ ಬಳಿ ಇರುವ, ಉತ್ತರ ಪ್ರದೇಶದ ದಿಯೋಬಂದ್ ಪಟ್ಟಣಕ್ಕೆ ಭೇಟಿ ನೀಡಿರುವುದು. ದಾರುಲ್ ಉಲೂಮ್ ದಿಯೋಬಂದ್ ಎನ್ನುವುದು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಮುಖ್ಯ ಇಸ್ಲಾಮಿಕ್ ಬೋಧನಾ ಕೇಂದ್ರಗಳಲ್ಲಿ ಒಂದಾಗಿದ್ದು, ಈ ಪ್ರದೇಶದಾದ್ಯಂತ ಇಸ್ಲಾಮಿಕ್ ಚಿಂತನೆಗಳ ಮೇಲೆ ಗಂಭೀರ ಪ್ರಭಾವ ಬೀರಿದೆ.

ತಾಲಿಬಾನಿನ ನಂಬಿಕೆಗಳನ್ನು ರೂಪಿಸುವಲ್ಲಿ ದಿಯೋಬಂದಿ ಸ್ಕೂಲ್ ಆಫ್ ಇಸ್ಲಾಂ ಪ್ರಮುಖ ಪಾತ್ರ ನಿರ್ವಹಿಸಿದೆ. ಬಳಿಕ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಈ ಚಿಂತನೆ ತನ್ನ ಮೂಲಕ್ಕೆ ಹೋಲಿಸಿದರೆ ಅತ್ಯಂತ ತೀವ್ರ ಮತ್ತು ಆಕ್ರಮಣಕಾರಿ ರೂಪು ತಳೆಯಿತು.

ಈ ಭೇಟಿಯ ಸಂದರ್ಭದಲ್ಲಿ, ಮುತ್ತಾಕಿ ಅವರಿಗೆ ಹದೀತ್ ಬೋಧಿಸುವ ಪ್ರಮಾಣಪತ್ರ ನೀಡಿ, 'ಕಾಸ್ಮಿ' ಎಂಬ ಉಪಾಧಿಯನ್ನು ಬಳಸಲು ಅವಕಾಶ ನೀಡಲಾಯಿತು. ತಾಲಿಬಾನಿನ ಬಹುತೇಕ ಧಾರ್ಮಿಕ ಪಂಡಿತರು ಪಾಕಿಸ್ತಾನದಲ್ಲಿ, ಅದರಲ್ಲೂ ಅಕೋರಾ ಖಟ್ಟಾಕ್‌ನಲ್ಲಿರುವ ದಾರುಲ್ ಉಲೂಮ್ ಹಕ್ಕಾನಿಯಾದಲ್ಲಿ ಅಧ್ಯಯನ ಮಾಡಿರುವುದರಿಂದ, ಈ ಬೆಳವಣಿಗೆ ತಾಲಿಬಾನ್ ಪಾಲಿಗೆ ಬಹಳ ದೊಡ್ಡದಾಗಿತ್ತು.

ದಿಯೋಬಂದ್ ಜೊತೆ ಮರಳಿ ಸಂಪರ್ಕ ಹೊಂದುವ ಮೂಲಕ ಮುತ್ತಾಕಿ ಒಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅದೇನೆಂದರೆ, ತಾಲಿಬಾನ್ ಈಗ ಧಾರ್ಮಿಕ ಸ್ವಾತಂತ್ರ್ಯ ಬಯಸುತ್ತಿದ್ದು, ಪಾಕಿಸ್ತಾನದ ನಿಯಂತ್ರಣದಲ್ಲಿರಲು ಇಚ್ಛಿಸುವುದಿಲ್ಲ ಎನ್ನುವುದಾಗಿದೆ.

ಅಫ್ಘಾನಿಸ್ತಾನದ ಮೇಲೆ ಪ್ರಭಾವ ಬೀರಲು ಭಾರತ ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕಿಲ್ಲ. ಅಫ್ಘಾನಿಸ್ತಾನದ ಜೊತೆಗೆ ಭಾರತದ ಸಹಜ ಸಂಪರ್ಕಗಳು ತಾಳ್ಮೆ, ಬೆಳವಣಿಗೆಗೆ ನೆರವು, ಮತ್ತು ಅಫ್ಘಾನಿಸ್ತಾನದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕೆ ಗೌರವ ನೀಡುವದರ ಮೂಲಕ ಸ್ಥಾಪಿತವಾಗಿವೆ.

ಈಗ ಅಫ್ಘಾನಿಸ್ತಾನವನ್ನು ಕಳೆದುಕೊಳ್ಳುವುದು ಪಾಕಿಸ್ತಾನದ ಸರದಿ. ಪಾಕಿಸ್ತಾನ ಏನಾದರೂ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ವಹಿಸಿದರೆ, ಅಫ್ಘಾನಿಸ್ತಾನ ಸಹಜವಾಗಿಯೇ ಪಾಕಿಸ್ತಾನದಿಂದ ದೂರ ಸರಿಯಲಿದೆ. ಭಾರತ ಹೆಚ್ಚೇನೂ ಮಾಡುವ ಅವಶ್ಯಕತೆ ಇಲ್ಲ. ಕೇವಲ ಗೌರವಪೂರ್ಣ ಸ್ನೇಹವನ್ನು ಮುಂದುವರಿಸಿದರೂ ಅಫ್ಘಾನಿಸ್ತಾನ ಭಾರತದೊಡನೆ ನಿಕಟವಾಗಿ ಇರಲಿದೆ.

ಪಾಕಿಸ್ತಾನದ ಕಾರ್ಯತಂತ್ರ ಸರಳ. ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿನ ಅತಿದೊಡ್ಡ ಬಾಹ್ಯ ಪ್ರಭಾವವಾಗಿದ್ದು, ಅದು ಅಫ್ಘಾನಿಸ್ತಾನದಲ್ಲಿನ ಯಾವುದೇ ಸರ್ಕಾರಕ್ಕೆ ತೊಂದರೆ ನೀಡುವ, ಸರ್ಕಾರವನ್ನು ಅಸ್ಥಿರಗೊಳಿಸುವ ಸಾಮರ್ಥ್ಯ ಹೊಂದಿದೆ.

ಆದರೆ, ಬ್ರಿಟಿಷ್ ಸರ್ಕಾರದ ರೀತಿಯಲ್ಲದೆ, ಪಾಕಿಸ್ತಾನದ ಬಳಿ ಅಫ್ಘಾನಿಸ್ತಾನದ ಮೇಲೆ ದೀರ್ಘಕಾಲೀನ ಸ್ನೇಹದ ಪ್ರಭಾವ ಬೀರಲು ಬೇಕಾದಷ್ಟು ಸಾಮರ್ಥ್ಯವಾಗಲಿ ಅಥವಾ ಸಂಪನ್ಮೂಲವಾಗಲಿ ಇಲ್ಲ. ಅಫ್ಘಾನಿಸ್ತಾನವನ್ನು ನಿಯಂತ್ರಿಸಬೇಕೆನ್ನುವ ಪಾಕಿಸ್ತಾನದ ಬಯಕೆ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ‌ಇಷ್ಟಾದರೂ ಪಾಕಿಸ್ತಾನ ತನ್ನ ಪ್ರಯತ್ನ ಮುಂದುವರಿಸುವುದನ್ನು ಮಾತ್ರ ನಿಲ್ಲಿಸಲು ಸಿದ್ಧವಿಲ್ಲ.

ಕಾಬೂಲ್‌ನಲ್ಲಿ ಸರ್ಕಾರವನ್ನು ಬದಲಿಸುವ ಸಲುವಾಗಿ ಪಾಕಿಸ್ತಾನ ತಾಲಿಬಾನ್ ಅನ್ನು ವಿವಿಧ ಗುಂಪುಗಳಾಗಿ ಒಡೆಯುವ ಪ್ರಯತ್ನವನ್ನೂ ನಡೆಸಬಹುದು. ಆದರೆ, ಪಾಕಿಸ್ತಾನ ಏನೇ ಪ್ರಯತ್ನ ನಡೆಸಿದರೂ, ಅದರಲ್ಲಿ ವಿಫಲವಾದರೂ, ಯಶಸ್ವಿಯಾದರೂ, ಅಫ್ಘಾನಿಸ್ತಾನದ ಗಡಿಯಲ್ಲಿ ದೀರ್ಘಕಾಲಿಕವಾಗಿ ಭೌಗೋಳಿಕ ರಾಜಕಾರಣದ ವಾಸ್ತವವನ್ನು ಬದಲಾಯಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ 'ರಾಜಾತಿಥ್ಯ': ಇಬ್ಬರು ಅಧಿಕಾರಿಗಳು ಅಮಾನತು; ಮುಖ್ಯ ಅಧೀಕ್ಷಕ ಎತ್ತಂಗಡಿ; ತನಿಖೆಗೆ ಸಮಿತಿ ರಚನೆ; Video

ವೈಟ್-ಕಾಲರ್ ಭಯೋತ್ಪಾದಕ ಪರಿಸರ ಅನಾವರಣ; 350 ಕೆಜಿ ಸ್ಫೋಟಕಗಳ ಪತ್ತೆ ಬೆನ್ನಲ್ಲೆ ವೈದ್ಯರ ಮನೆಯಿಂದ 2,563 ಕೆಜಿ ಸ್ಫೋಟಕಗಳು ವಶಕ್ಕೆ!

ಕಾರಿನಲ್ಲಿ ಎಕೆ-47 ರೈಫಲ್ ಇಟ್ಟುಕೊಂಡಿದ್ದ ಲಖನೌ ವೈದ್ಯೆಯ ಬಂಧನ!

ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡಿನ 14 ಮೀನುಗಾರರ ಬಂಧನ

Hyderabad: ಬ್ಲೈಂಡ್ ಸ್ಪಾಟ್ ಗೆ ಮತ್ತೊಂದು ಬಲಿ, ತಿರುವಿನಲ್ಲಿ ಬಾಲಕನ ಮೇಲೆ ಹರಿದ ಲಾರಿ!, Video

SCROLL FOR NEXT