ನಿತೀಶ್ ಕುಮಾರ್  online desk
ಅಂಕಣಗಳು

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಪುನರುಚ್ಛರಿಸಿತು. ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಜಯ ಸಾಧಿಸಿತು.

ದೇಶವು ಬಿಹಾರವನ್ನು ಗಮನಿಸುತ್ತಿದೆ. ಬಿಹಾರ ಬದಲಾವಣೆ ಬಯಸುತ್ತಿದೆ.
ರಾಜಸ್ತಾನದ ಮಾಜಿ ಮುಖ್ಯಮಂತ್ರಿ, ಬಿಹಾರದಲ್ಲಿ ಕಾಂಗ್ರೆಸ್‌ ಚುನಾವಣಾ ಹಿರಿಯ ವೀಕ್ಷಕ ಅಶೋಕ ಗೆಹ್ಲೋಟ್‌ ಪಾಟ್ನಾದಲ್ಲಿ ಚುನಾವಣಾ ಪ್ರಚಾರದ ವೇಳೆ ಪತ್ರಿಕಾಗೋಷ್ಠಿಯಲ್ಲಿ ಆಡಿದ್ದ ಮಾತಿದು.

ದೇಶವೇನೋ ಬಿಹಾರ ವಿಧಾನಸಭಾ ಚುನಾವಣೆಯನ್ನು ಗಮನಿಸಿತು. ಆದರೆ, ಬಿಹಾರದ ಜನರು ಬದಲಾವಣೆ ಬಯಸಲಿಲ್ಲ. ಮುಖ್ಯಮಂತ್ರಿ ನಿತೀಶ್‌ಕುಮಾರ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಂಬಿಕೆ ಪುನರುಚ್ಛರಿಸಿತು. ಎನ್‌ಡಿಎ ಮೈತ್ರಿಕೂಟ ಪ್ರಚಂಡ ಬಹುಮತದೊಂದಿಗೆ ಜಯ ಸಾಧಿಸಿತು. ಎದುರಾಳಿ ಮಹಾಘಟಬಂಧನ್‌ ನೆಲಕಚ್ಚಿತು. ಕಾಂಗ್ರೆಸ್‌ ಒಂದಂಕಿ ದಾಟಲಿಲ್ಲ. ಅಶೋಕ್‌ ಗೆಹ್ಲೋಟ್‌ ಈಗೇನು ಹೇಳುತ್ತಾರೆ ನೋಡಬೇಕು.

ಬಿಹಾರದಲ್ಲಿ 25 ಸೆ 30 ಪೀರ್‌ ಸೇ ನಿತೀಶ್‌ (2025 ರಿಂದ 2030ರ ವರೆಗೆ ಮತ್ತೆ ನಿತೀಶ್‌ ಕುಮಾರ್ ಸರಕಾರ). ಇದು ಚುನಾವಣೆಗೆ ಘೋಷಣೆಗೂ ಮುನ್ನ ಕಂಡು ಬಂದ ಭಿತ್ತಿಪತ್ರ. ಫಲಿತಾಂಶ ಮುನ್ನಾ ದಿನ ಪಾಟ್ನಾದಲ್ಲಿ ಕಂಡು ಬಂದ ಮತ್ತೊಂದು ಭಿತ್ತಿಪತ್ರ ಟೈಗರ್‌ ಅಬಿ ಜಿಂದಾ ಹೈ (ಹುಲಿ ಇನ್ನೂ ಜೀವಂತವಾಗಿದೆ). ಈ ಎರಡೂ ಭಿತ್ತಿಪತ್ರಗಳು ನಿಜವಾಗಿದೆ.

ನಿತೀಶ್‌ಕುಮಾರ್ ಮುಖ್ಯಮಂತ್ರಿಯಾಗಿ ಹತ್ತನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಗಿದ್ದಾರೆ. ಬಿಹಾರದ ರಾಜಕಾರಣದಲ್ಲಿ ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ಭಲೇಜೋಡಿಗೆ ಡೆಡ್ಲಿ ಕಾಂಬೋ ಎಂದೇ ಹೆಸರು.

ಬಿಹಾರದಲ್ಲಿ ಬಿಜೆಪಿ 89, ಜೆಡಿಯು 85, ಆರ್‌ಜೆಡಿ 25, ಎಲ್‌ಜೆಪಿ (ರಾಮ್‌ ವಿಲಾಸ್‌)19 , ಕಾಂಗ್ರೆಸ್‌ 6, ಎಐಎಂಐಎಂ 5, ಎಚ್‌ಎಎಂಎಸ್ 5, ರಾಷ್ಟ್ರೀಯ ಲೋಕಮೋರ್ಚಾ 4, ಸಿಪಿಐ (ಎಂ.ಎಲ್) 2, ಇಂಡಿಯನ್‌ ಇನ್‌ಕ್ಲೂಸಿವ್‌ ಪಾರ್ಟಿ 1, ಸಿಪಿಐ (ಎಂ) 1, ಬಿಎಸ್‌ಪಿ 1 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ಎನ್‌ಡಿಎ 202, ಮಹಾಘಟಬಂಧನ್‌ 35 ಸ್ಥಾನಗಳನ್ನು ಪಡೆದಿವೆ. ಆರು ಸ್ಥಾನಗಳು ಇತರರ ಪಾಲು.

ಬಿಜೆಪಿ ತಾನು ಸ್ಪರ್ಧಿಸಿದ ಪ್ರತಿ ಹತ್ತು ಕ್ಷೇತ್ರಗಳಲ್ಲಿ 9 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಗೆಲುವಿನ ಸರಾಸರಿ ಶೇ.89.1. , ಜೆಡಿಯು ಶೇ. 83.2, ಎಲ್‌ಜಿಪಿ ಶೇ.67.9 ಸರಾಸರಿ ಗೆಲುವಾಗಿದೆ. ಶೇಕಡವಾರು ಮತಗಳಿಕೆ ಬಿಜೆಪಿ ಶೇ.20.6, ಜೆಡಿಯು ಶೇ.20.3, ಲೋಕಜನಶಕ್ತಿ ಪಕ್ಷ (ರಾಮ್‌ ವಿಲಾಸ್‌) ಶೇ.19, ಎನ್‌ಡಿಎ ಇತರ ಪಕ್ಷಗಳು ಶೇ.1.2. ಎನ್‌ಡಿಎ ಒಟ್ಟು ಶೇಕಡ ಮತಗಳಿಕೆ 46.7.

ಮಹಾಘಟ ಬಂಧನ್‌ 35 ಸ್ಥಾನಗಳನ್ನು ಪಡೆದಿದೆ. ರಾಷ್ಟ್ರೀಯ ಜನತಾದಳ 25 (ಶೇಕಡವಾರು ಮತಗಳಿಕೆ ಶೇ. 22), ಕಾಂಗ್ರೆಸ್‌ 6 (ಶೇ.8.9), ಸಿಪಿಐ (ಎಂ.ಎಲ್) 2 (ಶೇ.3.2), ಮಹಾಘಟಬಂಧನದ ಇತರ ಪಕ್ಷಗಳು 2 (ಶೇ.3.4). ಮಹಾಘಟಬಂಧನ್‌ ಶೇಕಡಾವಾರು ಮತಗಳಿಕೆ 37.5.

ಬಿಹಾರದ ಅಂಗ, ಭಾಗಲಪುರ, ಕೋಸಿ, ಮಗಧ, ಮಿಥಿಲಾಂಚಲ, ಪಾಟ್ನಾ, ಸರನ್‌, ಸೀಮಾಂಚಲ ಈ ಎಲ್ಲ ಪ್ರಾಂತ್ಯಗಳಲ್ಲಿಯೂ ಎನ್‌ಡಿಎ ಮೈತ್ರಿಕೂಟ ಜಯಭೇರಿ ಬಾರಿಸಿದೆ.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲ್ಲಲು ಅನೇಕ ಕಾರಣಗಳಿವೆ. ಮಹಿಳೆಯರು, ಯುವ ಸಮುದಾಯ ಎನ್ ಡಿಎ ಪರ ಒಲವು ತೋರಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಎನ್‌ಡಿಎ ಗೆಲುವಿಗೆ ಪ್ರಮುಖ ಕಾರಣ.

ಬಿಹಾರದಲ್ಲಿ ನಿತೀಶ್‌ಕುಮಾರ್‌ ಕಳೆದ 20 ವರ್ಷಗಳಿಂದ ನಡುವೆ ಒಂಬತ್ತು ತಿಂಗಳು ಹೊರತುಪಡಿಸಿದರೆ ಮುಖ್ಯಮಂತ್ರಿ. ಸಹಜವಾಗಿ ಅವರ ಆಡಳಿತದ ವಿರೋಧಿ ಭಾವನೆ ಕೆಲವೆಡೆ ಇತ್ತು. ಆದರೆ, ಎನ್‌ಡಿಎ ಮೈತ್ರಿಕೂಟದಲ್ಲಿ ಜಾತಿ ಸಮೀಕರಣದ ನೆಲೆಯನ್ನು ವಿಸ್ತರಿಸಿದ್ದು, ನಿತೀಶ್ ಕುಮಾರ್‌ ಅವರ ಆಳ್ವಿಕೆಯಲ್ಲಿ ಆಗಿರುವ ಮಹಿಳಾ ಸಬಲೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಆರ್‌ಜೆಡಿ ಆಡಳಿತದ ಜಂಗಲ್‌ ರಾಜ್‌ನ ಕರಾಳ ನೆನಪು ಎನ್‌ಡಿಎ ಅನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದೆ.

ಎನ್‌ಡಿಎ ಅಂಗಪಕ್ಷಗಳ ಕಾರ್ಯಕರ್ತರು ಸಮನ್ವಯದಿಂದ ಕಾರ್ಯ ನಿರ್ವಹಿಸಿದ್ದು ಈ ಚುನಾವಣೆಯ ಮತ್ತೊಂದು ಹೈಲೈಟ್ಸ್‌. ತಾನು ಸ್ಪರ್ಧಿಸಿಲ್ಲದ ಕಡೆಗಳಲ್ಲಿ ಮಿತ್ರ ಪಕ್ಷಗಳಿಗೆ ವೋಟುಗಳನ್ನು ಟ್ರಾನ್ಸ್‌ಫರ್‌ ಮಾಡಲು ಇದು ಸಹಕಾರಿಯಾಯಿತು. ಎಲ್ಲ ಸಮುದಾಯದವರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಯಾವಾಗ ಮಹಾಘಟಬಂಧನ್‌ ಆರ್‌ಜೆಡಿಯ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತೋ ಆ ಕ್ಷಣದಿಂದಲೇ ನಿತೀಶ್‌ಕುಮಾರ್ ಹಾಗೂ ತೇಜಸ್ವಿ ಯಾದವ್‌ ಅವರ ಮಧ್ಯೆ ಹೋಲಿಕೆ ಆರಂಭವಾಯಿತು.

ಬಿಹಾರದ ರಾಜಕಾರಣದಲ್ಲಿ ನಿತೀಶ್‌ಕುಮಾರ್ ಸ್ಥಿರ, ವಿಶ್ವಾಸಾರ್ಹ, ಸ್ವೀಕಾರಾರ್ಹ ನಾಯಕರು. ಕಳಂಕರಹಿತ ಇಮೇಜು. ಅನುಭವಿ. ಅನೇಕ ಬಾರಿ ದೋಸ್ತಿಗಳನ್ನು ಬದಲಿಸಿರಬಹುದು. ವಯೋಸಹಜವಾಗಿ ದಣಿದಿರಬಹುದು. ಆದರೆ, ಅವರ ಬ್ರ್ಯಾಂಡ್‌ ಹಾಗೇ ಉಳಿದಿದೆ. ಮುಕ್ಕಾಗಿಲ್ಲ. ಈ ಚುನಾವಣೆಯಲ್ಲಿ ಇವು ಸ್ಪಷ್ಟ.

ನಿತೀಶ್‌ಕುಮಾರ್‌ ಮೊದಲ ಬಾರಿಗೆ 2005ರಲ್ಲಿ ಮುಖ್ಯಮಂತ್ರಿಯಾದಾಗಿನಿಂದ ಈವರೆಗೂ ಮಹಿಳೆಯರ ಸಬಲೀಕರಣಕ್ಕಾಗಿ ನಿರಂತರವಾಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದಾರೆ. ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಿದರು. ಪಾನ ನಿಷೇಧ ಜಾರಿಗೊಳಿಸಿದರು. ಈ ಕಾರಣದಿಂದ ಕಳೆದ 20 ವರ್ಷಗಳಿಂದ ಮಹಿಳೆಯರು ನಿತೀಶ್‌ ಕುಮಾರ್ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಮುಖ್ಯಮಂತ್ರಿ ಮಹಿಳಾ ರೋಜ್ಗಾರ್‌ ಯೋಜನೆಯಲ್ಲಿ ಸೆಪ್ಟೆಂಬರ್‌ ನಲ್ಲಿ ಮಹಿಳೆಯರ ಖಾತೆಗಳಲ್ಲಿ ತಲಾ ಹತ್ತು ಸಾವಿರ ರೂಪಾಯಿಯನ್ನು ಠೇವಣಿ ಇಟ್ಟಿದ್ದು ಈ ಬಾರಿಯ ಬೋನಸ್‌ ಆಗಿತ್ತು.

ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲಿ ಈ ಬಾರಿ ಶೇ.67ರಷ್ಟು ಮತದಾನವಾಗಿತ್ತು. ಇದು ಕಳೆದ 2020ರ ಅಸೆಂಬ್ಲಿ ಚುನಾವಣೆಗಿಂತ ಶೇ.9.6ರಷ್ಟು ಹೆಚ್ಚಳವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ಪ್ರಮಾಣದ ಮತದಾನ ಬಿಹಾರದಲ್ಲಿ ಆಗಿರಲಿಲ್ಲ. ಪುರುಷರು ಶೇ.62.8, ಮಹಿಳೆಯರು 71.6 ರಷ್ಟು ಮತದಾನವಾಗಿತ್ತು. 2.51 ಕೋಟಿ ಮಹಿಳೆಯರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಮತದಾನ ಪ್ರಮಾಣದಲ್ಲಿ ಹೆಚ್ಚಳ ಎನ್‌ಡಿಎಗೆ ವರವಾಯಿತು.

ಬಿಹಾರದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸ್ಪರ್ಧಿಸಿದ 101 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಮಾತ್ರ ಅದು ಸೋತಿದೆ. ಸೀಟು ಹಂಚಿಕೆಯಲ್ಲಿ ಬಿಜೆಪಿ ತೋರಿದ ಚಾಣಾಕ್ಷ್ಯತನ ಫಲ ನೀಡಿದೆ. ಬಿಹಾರದಲ್ಲಿ ಹಾಗೇ ನೋಡಿದರೆ ಬಿಜೆಪಿಯಲ್ಲಿ ಯಾರೂ ಮಾಸ್‌ ಲೀಡರ್ ಗಳು ಇಲ್ಲ.

ಇನ್ನು ಎನ್‌ಡಿಎ ಮೈತ್ರಿಕೂಟವನ್ನು 200ರ ಗಡಿ ದಾಟಿಸಲು ನೆರವಾದವರು ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್. ಈ ಪಕ್ಷ 29ರಲ್ಲಿ ಸ್ಪರ್ಧಿಸಿ 19 ಸ್ಥಾನಗಳನ್ನು ಗಳಿಸಿದೆ. ಇದರಲ್ಲಿ 17 ಸ್ಥಾನಗಳನ್ನು ಕಳೆದ ಬಾರಿ ಮಹಾಘಟಬಂಧನ್‌ ಪ್ರತಿನಿಧಿಸಿತ್ತು ಎಂಬುದು ಗಮನಾರ್ಹ. ಜೆಡಿಯು ಹಾಗೂ ಎಲ್‌ಜೆಪಿ (ರಾಮ್‌ ವಿಲಾಸ್‌) ಬಿಹಾರದ ರಾಜಕಾರಣದಲ್ಲಿ ಮೊದಲ ಬಾರಿಗೆ ದೋಸ್ತಿ ಮಾಡಿ ಕಣಕ್ಕೆ ಇಳಿದಿದ್ದು ಫಲ ಕೊಟ್ಟಿದೆ.

ಬಿಹಾರದ ಜನರು ಆರ್‌ಜೆಡಿ ಆಳ್ವಿಕೆಯ ಜಂಗಲ್‌ರಾಜ್‌ ನ ಕರಾಳ ದಿನಗಳನ್ನು ಮರೆತಿಲ್ಲ. ತಮ್ಮ ತಂದೆ ಲಾಲೂಪ್ರಸಾದ್‌ ಯಾದವ್ ಅವರ ಕಾಲದ 15 ವರ್ಷಗಳ ದುರಾಡಳಿತ ಪುತ್ರ ತೇಜಸ್ವಿ ಅವರಿಗೆ ಹಿನ್ನಡೆ. ಲಾಲೂಪ್ರಸಾದ್ ಯಾದವ್ ಅವರ ಪರಿವಾರವಾದದ ಕೂಸು ತೇಜಸ್ವಿ. ರಾಜಕೀಯವಾಗಿ ಇದರ ಲಾಭ ಮತ್ತು ನಷ್ಟ ಎರಡೂ ಅವರಿಗೆ ಇದೆ. ಜಂಗಲ್‌ ರಾಜ್‌ ಹಾಗೂ ಭ್ರಷ್ಟಾಚಾರದ ಮಾತುಗಳನ್ನು 36 ವರ್ಷದ ತೇಜಸ್ವಿ ಯಾದವ್‌ ಕೇಳಲೇಬೇಕು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಜಂಗಲ್‌ ರಾಜ್‌ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿ ಮತದಾರರನ್ನು ಎಚ್ಚರಿಸಿದ್ದರು. ತೇಜಸ್ವಿ ಯಾದವ್ ಅವರನ್ನು ಜಂಗಲ್‌ ರಾಜ್‌ ನ ಯುವರಾಜ ಎಂದು ಹೀಯಾಳಿಸಿದ್ದರು.

ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ನಲ್ಲಿ ಒಡಕಿದ್ದವು. ಕೆಲವು ಕ್ಷೇತ್ರಗಳಲ್ಲಿ ಪರಸ್ಪರರೇ ಸೆಣಸಾಡಿದರು. ಮಿತ್ರಪಕ್ಷಗಳಿಗೆ ವೋಟು ವರ್ಗಾವಣೆ ಕುರಿತು ತಳಮಟ್ಟದಲ್ಲಿ ಸ್ಪಷ್ಟತೆ ಇರಲಿಲ್ಲ. ಆರ್‌ಜೆಡಿ ಸಾಂಪ್ರದಾಯಿಕ ಮತ ಬ್ಯಾಂಕು ಯಾದವ ಮತ್ತು ಮುಸ್ಲಿಂಮರ ಸಮೀಕರಣ ಈ ಬಾರಿ ನಿರೀಕ್ಷಿಸಿದಷ್ಟು ಆಗಲಿಲ್ಲ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಸ್ಟ್‌ ನಲ್ಲಿ ಮತದಾರರ ಅಧಿಕಾರ ಯಾತ್ರೆ ನಡೆಸಿದ ಕ್ಷೇತ್ರಗಳಲ್ಲಿ ಮಹಾಘಟಬಂಧನ್‌ ಮುಗ್ಗರಿಸಿದೆ. ಮಹಾಘಟಬಂಧನ್‌ ಈ ಕ್ಷೇತ್ರಗಳಲ್ಲಿ ಗೆದ್ದಿರುವುದು ಕೇವಲ ಒಂದು ಸ್ಥಾನದಲ್ಲಿ ಮಾತ್ರ.

ಸೀಮಾಂಚಲ ಪ್ರದೇಶದಲ್ಲಿ ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ ಮುಸ್ಲಿಮರ ಮತಗಳನ್ನು ವಿಭಜಿಸಿತು. ಇದು ಮಹಾಘಟಬಂಧನ್‌ ಅನ್ನು ಈ ಪ್ರಾಂತ್ಯದಲ್ಲಿ ದುರ್ಬಲಗೊಳಿಸಿತು. ಎಐಎಂಐಎಂ ಐದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಮುಖೇಶ್‌ ಸಹಾನಿ ಅವರ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷ ಮಹಾಘಟಬಂಧನದಲ್ಲಿತ್ತು. ಮುಖೇಶ್‌ ಸಹಾನಿ ಅವರನ್ನು ಉಪ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಅವರ ಪಕ್ಷ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಒಂದು ಕ್ಷೇತ್ರದಲ್ಲಿಯೂ ಗೆಲ್ಲಲಿಲ್ಲ. ಮುಖೇಶ್‌ ಸಹಾನಿ ಅವರ ಬಗ್ಗೆ ಮಹಾಘಟಬಂಧನ್‌ ನಾಯಕರಿಗೆ ನಿರೀಕ್ಷೆ ಹೆಚ್ಚಾಗಿತ್ತು.

ಮಹಾಘಟಬಂಧನ್‌ ನಲ್ಲಿರುವ ಸಿಪಿಐ (ಎಂಎಲ್‌) ಕಳೆದ ಬಾರಿ 19 ಕ್ಷೇತ್ರಗಳಲ್ಲಿ ಕಣಕ್ಕಿಳಿದು 12 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದೆ.

ಚುನಾವಣಾ ತಂತ್ರಗಳ ನಿಪುಣ ಪ್ರಶಾಂತ ಕಿಶೋರ್‌ ನೇತೃತ್ವದ ಜನ್‌ಸುರಾಜ್‌ ಪಕ್ಷ ಶೂನ್ಯ ಸಂಪಾದನೆ ಮಾಡಿದೆ. ಆ ಪಕ್ಷ 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಶೇ. 3.44 ಮತಗಳನ್ನು ಪಡೆದಿದೆ. ಪ್ರಶಾಂತ ಕಿಶೋರ್ ಅಬ್ಬರದ ಪ್ರಚಾರ ನಡೆಸಿದ್ದರು.

ಬಿಹಾರ ಚುನಾವಣೆ ಮುಗಿದಿದೆ. ನಿರುದ್ಯೋಗ, ವಲಸೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಹೊಸ ಸರಕಾರ ಆದ್ಯತೆ ನೀಡಬೇಕಿದೆ. ಪ್ರಣಾಳಿಕೆಯಲ್ಲಿ ನೀಡಿದ್ದ ವಚನಗಳನ್ನು ಪಾಲಿಸಬೇಕಿದೆ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರ ಚುನಾವಣೆ: 3 ಲಕ್ಷ ಮತಗಳ ಏರಿಕೆ ಬಗ್ಗೆ ಕಾಂಗ್ರೆಸ್ ನಿಂದ ಮತ್ತೆ ಕಿರಿಕ್; ಚುನಾವಣಾ ಆಯೋಗ ಹೇಳಿದ್ದೇನು?

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

ಬಿಜೆಪಿಗೆ ಬಿಸಿ ತುಪ್ಪವಾದ ಚಿರಾಗ್ ಪಾಸ್ವಾನ್: ನಿತೀಶ್ ಅವರೇ ನಮ್ಮ ಸಿಎಂ; ನೂತನ ಸರ್ಕಾರ ಸೇರುತ್ತೇವೆ ಎಂದ ಕೇಂದ್ರ ಸಚಿವ! Video

SCROLL FOR NEXT