ಸಾಂಕೇತಿಕ ಚಿತ್ರ online desk
ಅಂಕಣಗಳು

100% ಸುಂಕ ಸಮರ: ಪ್ರಚೋದಿಸಿದ ಟ್ರಂಪ್, ಪ್ರತಿಕ್ರಿಯಿಸಿದ ಚೀನಾ! (ಜಾಗತಿಕ ಜಗಲಿ)

ಚೀನಾ ತನ್ನ ಅಪರೂಪದ ಖನಿಜಗಳು (ರೇರ್ ಅರ್ತ್ ಮೆಟೀರಿಯಲ್ಸ್) ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮೇಲೆ ಕಟ್ಟುನಿಟ್ಟಿನ ರಫ್ತು ಮಿತಿ ಹೇರಿದ ಬೆನ್ನಲ್ಲೇ ಅಮೆರಿಕಾ ಈ ಕ್ರಮ ಕೈಗೊಂಡಿದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಕ್ಟೋಬರ್ 10, ಶುಕ್ರವಾರದಂದು ಚೀನಾದಿಂದ ನಡೆಸುವ ಆಮದಿನ ಮೇಲೆ ಈಗಾಗಲೇ ಇರುವ ಸುಂಕದ ಜೊತೆಗೆ ಹೆಚ್ಚುವರಿ 100% ಸುಂಕ ಘೋಷಿಸಿದ್ದಾರೆ. ಈ ನೂತನ ಸುಂಕ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಪ್ರಮುಖ ಸಾಫ್ಟ್‌ವೇರ್‌ಗಳ ರಫ್ತನ್ನೂ ಟ್ರಂಪ್ ನಿಷೇಧಿಸಿದ್ದು, ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಏಷ್ಯಾ - ಪೆಸಿಫಿಕ್ ಎಕನಾಮಿಕ್ ಎಕನಾಮಿಕ್ ಕೋಆಪರೇಷನ್ ಶೃಂಗದಲ್ಲಿ ಕ್ಸಿ ಜಿನ್‌ಪಿಂಗ್ ಜೊತೆಗಿನ ಸಭೆಯನ್ನೂ ರದ್ದುಗೊಳಿಸಿದ್ದಾರೆ.

ಚೀನಾ ತನ್ನ ಅಪರೂಪದ ಖನಿಜಗಳು (ರೇರ್ ಅರ್ತ್ ಮೆಟೀರಿಯಲ್ಸ್) ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮೇಲೆ ಕಟ್ಟುನಿಟ್ಟಿನ ರಫ್ತು ಮಿತಿ ಹೇರಿದ ಬೆನ್ನಲ್ಲೇ ಅಮೆರಿಕಾ ಈ ಕ್ರಮ ಕೈಗೊಂಡಿದೆ.

ಏನು ಈ ರೇರ್ ಅರ್ತ್ ಉತ್ಪನ್ನಗಳು?

ರೇರ್ ಅರ್ಥ್ ಎಲಿಮೆಂಟ್ಸ್ (ಆರ್‌ಇಇ) ಎನ್ನುವುದು ಆವರ್ತಕ ಕೋಷ್ಟಕದಲ್ಲಿ (ಪೀರಿಯಾಡಿಕ್ ಟೇಬಲ್) ಕಾಣಿಸಿಕೊಳ್ಳುವ 17 ಲೋಹಗಳ ಗುಂಪು. ವಾಸ್ತವವಾಗಿ ಅವು ಅಷ್ಟೊಂದು ಅಪರೂಪದ ಲೋಹಗಳು ಅಲ್ಲದಿದ್ದರೂ, ಅವುಗಳನ್ನು ಗಣಿಗಾರಿಕೆ ನಡೆಸುವಷ್ಟು ಪ್ರಮಾಣದಲ್ಲಿ ಒಂದೆಡೆ ಪಡೆಯುವುದು ಕಷ್ಟಕರವಾಗಿದೆ. ಈ ಬೆಳ್ಳಿಯ ಬಣ್ಣದ ಖನಿಜಗಳು ಮೊಬೈಲ್ ಫೋನ್‌ಗಳು, ವಿದ್ಯುತ್ ವಾಹನಗಳು, ಗಾಳಿ ಯಂತ್ರಗಳು, ಕ್ಷಿಪಣಿಗಳು ಮತ್ತು ಇತರ ಇಲೆಕ್ಟ್ರಾನಿಕ್ ವಸ್ತುಗಳಿಗೆ ಅತ್ಯವಶ್ಯಕವಾಗಿವೆ.

ಅಮೆರಿಕಾ, ಭಾರತ, ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲೂ ನಿಕ್ಷೇಪಗಳಿವೆ. ಆದರೆ, ಚೀನಾ ಜಾಗತಿಕವಾಗಿ ಅವುಗಳ ಸಂಸ್ಕರಣೆ ಮತ್ತು ಶುದ್ಧೀಕರಣದಲ್ಲಿ ಪಾರಮ್ಯ ಸಾಧಿಸಿದ್ದು, ಇದು ಚೀನಾಗೆ ಪ್ರಮುಖ ಮೇಲುಗೈ ಒದಗಿಸಿದೆ.

ಚೀನಾದ ನೂತನ ನಿರ್ಬಂಧಗಳು

ಅಕ್ಟೋಬರ್ 9ರಂದು, ಚೀನಾ ಚೀನಾದ ರೇರ್ ಅರ್ಥ್‌ಗಳ ಲಕ್ಷಣಗಳನ್ನು ಹೊಂದಿರುವ ಅಥವಾ ಚೀನಾದ ಗಣಿಗಾರಿಕೆ ಅಥವಾ ಅಯಸ್ಕಾಂತ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಮಾಡಿರುವ ಅಯಸ್ಕಾಂತಗಳ ರಫ್ತನ್ನೂ ಮಿತಿಗೊಳಿಸಿತು.

ಸರಳವಾಗಿ ಹೇಳುವುದಾದರೆ, ಚೀನಾದ ಸಂಪನ್ಮೂಲಗಳಿಗೆ ಸಂಬಂಧಿಸಿರುವ ಯಾವುದೇ ಉತ್ಪನ್ನವಾದರೂ ಈಗ ಕಟ್ಟುನಿಟ್ಟಿನ ರಫ್ತು ನಿಯಮಗಳಿಗೆ ಒಳಪಡುತ್ತದೆ. ಇಂತಹ ಅಯಸ್ಕಾಂತಗಳನ್ನು ಚೀನಾದ ಹೊರಗೆ ಉತ್ಪಾದಿಸುವ ಮಾರಾಟಗಾರರೂ ಸಹ ಅವುಗಳು ಚೀನೀ ಉತ್ಪನ್ನಗಳು ಅಥವಾ ತಂತ್ರಜ್ಞಾನವನ್ನು ಬಳಸಿಕೊಂಡಿದ್ದರೆ ಅವುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ.

ಇದು ಬೀಜಿಂಗ್‌ಗೆ ತನ್ನ ರೇರ್ ಅರ್ಥ್ ಅಯಸ್ಕಾಂತಗಳ ಮೇಲೆ ಅವಲಂಬಿತವಾಗಿರುವ ವಿದ್ಯುತ್ ಚಾಲಿತ ವಾಹನಗಳು, ಸ್ಮಾರ್ಟ್‌ಫೋನ್‌ಗಳು, ಗಾಳಿ ಯಂತ್ರಗಳು ಮತ್ತು ಕ್ಷಿಪಣಿಗಳ ಪೂರೈಕೆ ಸರಪಳಿಯ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸಿದೆ. ಈ ಕಠಿಣ ನಿಯಮ ಚೀನಾದ ಅಪರೂಪದ ಖನಿಜಗಳ 0.1% ಪ್ರಮಾಣವನ್ನು ಹೊಂದಿರುವ ವಿದೇಶೀ ನಿರ್ಮಾಣದ ಅಯಸ್ಕಾಂತಗಳು ಅಥವಾ ಸೆಮಿಕಂಡಕ್ಟರ್ ಉತ್ಪನ್ನಗಳಿಗೂ ಅನ್ವಯವಾಗುತ್ತದೆ.

ಚೀನಾದ ವಾಣಿಜ್ಯ ಸಚಿವಾಲಯದ ಪ್ರಕಾರ, ನೂತನ ನಿಯಮಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ. ಮಿಲಿಟರಿ ಖರೀದಿದಾರರಿಗೆ ಪರವಾನಗಿ ನಿರಾಕರಿಸಲಾಗುತ್ತದೆ. ಇನ್ನು ಸೆಮಿಕಂಡಕ್ಟರ್ ಕಂಪನಿಗಳು ಚೀನಾದಿಂದ ಪ್ರತಿ ಬಾರಿಯೂ ಅನುಮತಿ ಪಡೆಯಬೇಕಾಗುತ್ತದೆ. ಇದು ಚೀನಾಗೆ ತನ್ನ ಉತ್ಪನ್ನಗಳು ಮತ್ತು ತಂತ್ರಜ್ಞಾನವನ್ನು ಯಾರು ಬಳಸಬಹುದು ಎನ್ನುವುದರ ಮೇಲೆ ಸಂಪೂರ್ಣ ನಿಯಂತ್ರಣ ಒದಗಿಸುತ್ತದೆ.

ವಿಶ್ಲೇಷಕರು ಇದನ್ನು ಅಮೆರಿಕಾದ ನೇರ ವಿದೇಶೀ ಉತ್ಪನ್ನಗಳ ನಿಯಮದ ಚೀನೀ ಆವೃತ್ತಿ ಎಂದು ಕರೆದಿದ್ದು, ಅಮೆರಿಕಾದ ನಿಯಮವೂ ಸಹ ವಿದೇಶೀ ಸಂಸ್ಥೆಗಳು ಅಮೆರಿಕನ್ ತಂತ್ರಜ್ಞಾನ ಅಥವಾ ಸಾಫ್ಟ್‌ವೇರ್ ಅನ್ನು ಬಳಸುವ ಉಪಕರಣಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಿದೆ. ಈಗ ಚೀನಾ ಸಹ ಅದೇ ನಿಯಮವನ್ನು ತಾನೂ ಜಾರಿಗೆ ತಂದಿದ್ದು, ಚೀನಾದ ಉತ್ಪನ್ನಗಳು ಅಥವಾ ಯಂತ್ರಗಳನ್ನು ಬಳಸಿಕೊಂಡು ತಯಾರಿಸುವ ವಸ್ತುಗಳ ರಫ್ತನ್ನು ನಿರ್ಬಂಧಿಸಿದೆ.

ಬೀಜಿಂಗ್ ತಾನು ರಾಷ್ಟ್ರೀಯ ಭದ್ರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಮತ್ತು ಅಪರೂಪದ ಲೋಹಗಳನ್ನು ಮಿಲಿಟರಿ ಅಥವಾ ಸೂಕ್ಷ್ಮ ಕ್ಷೇತ್ರಗಳಲ್ಲಿ ದುರ್ಬಳಕೆಯಾಗದಂತೆ ತಡೆಯಲು ಈ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದೆ.

ಭಾರತ ಮತ್ತು ಜಾಗತಿಕ ಪರಿಣಾಮ

ಮೇ ತಿಂಗಳಲ್ಲಿ, ಚೀನಾ ಭಾರತೀಯ ವಾಹನ ನಿರ್ಮಾಣ ಸಂಸ್ಥೆಗಳಿಗೂ ಇದೇ ರೀತಿಯ ನಿಯಮ ಹೇರಿತ್ತು. ಅವುಗಳು ಚೀನೀ ಅಯಸ್ಕಾಂತಗಳನ್ನು ಕೇವಲ ವಾಹನದಲ್ಲಿ ಬಳಸುತ್ತೇವೆಯೇ ಹೊರತು ರಕ್ಷಣಾ ಕ್ಷೇತ್ರದಲ್ಲಲ್ಲ ಎಂದು ಚೀನಾಗೆ ಲಿಖಿತ ರೂಪದಲ್ಲಿ ಭರವಸೆ ನೀಡಬೇಕಿತ್ತು. ಚೀನಾದ ವಾಣಿಜ್ಯ ಸಚಿವಾಲಯ ಸಹ ವಿದೇಶೀ ಸಂಸ್ಥೆಗಳು ಚೀನೀ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಮಿಲಿಟರಿ ಬಳಕೆಗೆ ಉಪಯೋಗಿಸಿ, ಚೀನಾದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿವೆ ಎಂದು ಆರೋಪಿಸಿತ್ತು.

ಇದು ಯಾಕೆ ಮುಖ್ಯವಾಗಿದೆ?

1990ರ ದಶಕದಿಂದ, ಚೀನಾ ಜಾಗತಿಕ ರೇರ್ ಅರ್ಥ್ ಪೂರೈಕೆಯಲ್ಲಿ 85 - 95% ಪಾಲು ಹೊಂದಿದ್ದು, ಅವುಗಳ ಗಣಿಗಾರಿಕೆಯಲ್ಲಿ 70%, ಸಂಸ್ಕರಣೆಯಲ್ಲಿ 90% ಮತ್ತು ಅಯಸ್ಕಾಂತ ಉತ್ಪಾದನೆಯಲ್ಲಿ 93% ಪಾಲು ಹೊಂದಿದೆ.

ಅದೇ ದಶಕದಲ್ಲಿ, ಚೀನಾ ಅಪರೂಪದ ಖನಿಜಗಳನ್ನು 'ಸಂರಕ್ಷಿತ ಮತ್ತು ಕಾರ್ಯತಂತ್ರದ ಖನಿಜ' ಎಂದು ಘೋಷಿಸಿತು. ಅಂದಿನಿಂದ ಇದನ್ನು ವ್ಯಾಪಾರ ವಿವಾದಗಳಲ್ಲಿ ಚೀನಾ ತನ್ನ ಲಾಭಕ್ಕೆ ಬಳಸಿಕೊಂಡಿದೆ. 2010ರಲ್ಲಿ, ಚೀನಾ ಜಪಾನ್ ಜೊತೆಗಿನ ಮೀನುಗಾರಿಕಾ ಬೋಟ್ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಜಪಾನಿಗೆ ಈ ಖನಿಜಗಳ ರಫ್ತನ್ನು ಕಡಿತಗೊಳಿಸಿತ್ತು. 2023 - 2025ರ ನಡುವೆ ಅಮೆರಿಕಗೆ ಅವುಗಳ ಪೂರೈಕೆಯನ್ನು ನಿರ್ಬಂಧಿಸಿತ್ತು. ಆ ಮೂಲಕ ತಾನು ಈ ಖನಿಜಗಳನ್ನು ರಾಜಕೀಯ ಒತ್ತಡಕ್ಕೆ ಬಳಸಿಕೊಳ್ಳುವುದಾಗಿ ಸ್ಪಷ್ಟಪಡಿಸಿತು.

ನೂತನ ಪೂರೈಕೆ ಆಘಾತ

ಡೊನಾಲ್ಡ್ ಟ್ರಂಪ್ ಅವರ ಎಪ್ರಿಲ್ 4ರ ಸುಂಕ ಏರಿಕೆಯ ಬಳಿಕ, ಚೀನಾ ತನ್ನ ಅಪರೂಪದ ಖನಿಜಗಳ ರಫ್ತನ್ನು ಮಿತಿಗೊಳಿಸುವ ಮೂಲಕ ಪ್ರತಿಕ್ರಿಯೆ ನೀಡಿತು. ಈ ನಿರ್ಬಂಧಗಳು ಅಯಸ್ಕಾಂತಗಳಂತಹ ಸಿದ್ಧ ವಸ್ತುಗಳ ಮೇಲೂ ಪರಿಣಾಮ ಬೀರಿದ್ದು, ಜಾಗತಿಕವಾಗಿ ಕೆಲವು ಸಂಸ್ಥೆಗಳು ಮಾತ್ರವೇ ಅವುಗಳನ್ನು ಉತ್ಪಾದಿಸುತ್ತಿವೆ.

ಇವೆರಡೂ ನಡೆಗಳು ಜೊತೆಯಾಗಿ, ಆ ಕ್ಷಣವೇ ಜಾಗತಿಕ ಪೂರೈಕೆ ಸರಪಳಿಯನ್ನು ಅಸ್ತವ್ಯಸ್ತಗೊಳಿಸಿದವು. ಎಪ್ರಿಲ್ ತಿಂಗಳಲ್ಲೇ ರೇರ್ ಅರ್ಥ್ ರಫ್ತು ಅರ್ಧದಷ್ಟು ಕುಸಿತ ಕಂಡವು. ಇದಕ್ಕೆ ವಿವಿಧ ಕಂಪನಿಗಳು ಎದುರಿಸಿದ ನಿಧಾನವಾದ, ಮತ್ತು ಗೊಂದಲಮಯವಾದ ಪರವಾನಗಿ ನಿಯಮಗಳೂ ಕಾರಣವಾಗಿದ್ದವು. ಅಮೆರಿಕಾದ ವಾಹನ ಉತ್ಪಾದಕ ಸಂಸ್ಥೆಗಳು ಅತಿದೊಡ್ಡ ಹೊಡೆತ ತಿಂದಿದ್ದು, ರಫ್ತು ಪುನರಾರಂಭಕ್ಕೆ ವಾಷಿಂಗ್ಟನ್ ಬೀಜಿಂಗ್ ಜೊತೆಗೆ ಮಾತುಕತೆ ನಡೆಸುವ ತನಕ ವಾಹನ ಉತ್ಪಾದನೆ ಸ್ಥಗಿತಗೊಳಿಸಿದ್ದವು.

ಭಾರತದಲ್ಲೂ ಸಹ ಸರ್ಕಾರ ಮಧ್ಯ ಪ್ರವೇಶ ನಡೆಸದಿದ್ದರೆ ವಾಹನ ಉತ್ಪಾದಕರು ಉತ್ಪಾದನೆ ಸ್ಥಗಿತಗೊಳಿಸುವ ಅಪಾಯಗಳಿದ್ದವು.

ಹೆಚ್ಚುತ್ತಿರುವ ವ್ಯಾಪಾರ ಸಮರದ ಭೀತಿ

ಜನವರಿ ತಿಂಗಳಲ್ಲಿ ಅಧಿಕಾರಕ್ಕೆ ಮರಳಿದ ತಕ್ಷಣವೇ ಚೀನಾದ ಜೊತೆಗೆ ಮತ್ತೆ ಉದ್ವಿಗ್ನತೆ ಆರಂಭಿಸಿದರು. ಟ್ರಂಪ್ ಮೊದಲಿಗೆ ಫೆಂಟಾನಿಲ್ ಮೇಲೆ 10% ಸುಂಕ ವಿಧಿಸಿದರೆ, ಬಳಿಕ ಅದನ್ನು 20%ಗೆ ಹೆಚ್ಚಿಸಿದರು. ಆ ಬಳಿಕ ಎಪ್ರಿಲ್ ತಿಂಗಳಲ್ಲಿ ಚೀನೀ ಆಮದಿನ ಮೇಲೆ 145% ಸುಂಕ ವಿಧಿಸಿದರು.

ಚೀನಾ ಅಮೆರಿಕಾದ ಸುಂಕದ ವಿರುದ್ಧ 125% ಪ್ರತಿ ಸುಂಕ ಮತ್ತು ಅಪರೂಪದ ಖನಿಜಗಳ ರಫ್ತಿನ ಮೇಲೆ ಮಿತಿ ಹೇರಿ, ಅಮೆರಿಕಾದ ಕಲ್ಲಿದ್ದಲು ಮತ್ತು ಎಲ್ಎನ್‌ಜಿ ಮೇಲೆ ಹೊಸ ಸುಂಕಗಳನ್ನು ಹೇರಿ ಪ್ರತಿಕ್ರಿಯಿಸಿತು. ಇದಕ್ಕೆ ಚೀನಾ ರಾಷ್ಟ್ರೀಯ ಭದ್ರತೆಯ ಅಪಾಯಗಳ ಕಾರಣ ನೀಡಿತ್ತು.

ಮೇ ತಿಂಗಳ ವೇಳೆಗೆ, ಉಭಯ ಪಕ್ಷಗಳೂ ಒಂದು ದುರ್ಬಲ ಒಪ್ಪಂದಕ್ಕೆ ಬಂದವು. ಆ ಮೂಲಕ ಒಂದಷ್ಟು ತೀವ್ರ ಸುಂಕಗಳನ್ನು ಹಿಂಪಡೆಯಲಾಯಿತು. ಆದರೆ, ಸುಂಕಗಳು ಇಂದಿಗೂ ಹಿಂದಿಗಿಂತಲೂ ಹೆಚ್ಚಾಗಿದ್ದು, ಚೀನೀ ಉತ್ಪನ್ನಗಳು 30% ಹೆಚ್ಚುವರಿ ಸುಂಕ ಎದುರಿಸುತ್ತಿವೆ. ಇದೇ ವೇಳೆ ಚೀನಾಗೆ ಅಮೆರಿಕಾದ ಆಮದಿನ ಮೇಲೂ 10% ಹೆಚ್ಚುವರಿ ಸುಂಕ ವಿಧಿಸಲಾಗಿದೆ.

ಮಾತುಕತೆಗಳು ಮತ್ತು ತಂತ್ರಜ್ಞಾನ ಆತಂಕಗಳು

ಆ ಬಳಿಕ, ಉಭಯ ದೇಶಗಳು ಕೃಷಿ ಉತ್ಪನ್ನಗಳು, ಟಿಕ್‌ಟಾಪ್ ಆ್ಯಪ್ ಮಾರಾಟ, ಅಪರೂಪದ ಖನಿಜಗಳು ಮತ್ತು ಸೆಮಿಕಂಡಕ್ಟರ್‌ಗಳ ಕುರಿತು ವ್ಯಾಪಾರ ಮಾತುಕತೆಗಳನ್ನು ನಡೆಸಿವೆ.

ಟ್ರಂಪ್ ವಿಧಿಸಿರುವ ನೂತನ ನಿಷೇಧಗಳು ಯಾವುವು 'ಮಹತ್ವದ ಸಾಫ್ಟ್‌ವೇರ್' ಎಂದು ನಿರ್ದಿಷ್ಟವಾಗಿ ಹೇಳದಿದ್ದರೂ, ತಜ್ಞರು ಈ ನಿಷೇಧ ಮುಖ್ಯವಾಗಿ ಸೆಮಿಕಂಡಕ್ಟರ್ ಚಿಪ್‌ಗಳನ್ನು ಗುರಿಯಾಗಿಸುವ ಸಾಧ್ಯತೆಗಳಿವೆ ಎಂದಿದ್ದಾರೆ. ಜುಲೈ ತಿಂಗಳಲ್ಲಿ ಚೀನಾ ಒಂದು ಒಪ್ಪಂದದ ಅಂಗವಾಗಿ ಚಿಪ್ ನಿಯಮಗಳನ್ನು ಕೊಂಚ ಸಡಿಲಿಸಿ, ಅಮೆರಿಕಾಗೆ ರೇರ್ ಅರ್ಥ್ ಖನಿಜಗಳನ್ನು ಹೊಂದುವುದನ್ನು ಕೊಂಚ ಸುಲಭವಾಗಿಸಿತ್ತು. ಆದರೆ, ಆ ಒಪ್ಪಂದವೂ ಈಗ ಅಪಾಯಕ್ಕೆ ಸಿಲುಕಿರುವಂತೆ ತೋರುತ್ತಿದೆ.

ಅಮೆರಿಕಾ ವಿಧಿಸಿರುವ 100% ಸುಂಕ ಮತ್ತು ಚೀನಾದ ರೇರ್ ಅರ್ಥ್ ಮಿತಿಗಳ ಪರಿಣಾಮವಾಗಿ, ಜಗತ್ತಿನ ಎರಡು ಬೃಹತ್ ಆರ್ಥಿಕತೆಗಳು ಈಗ ಮತ್ತೊಮ್ಮೆ ವ್ಯಾಪಾರ ಸಮರಕ್ಕೆ ಇಳಿದಿವೆ. ಈ ಸಮರದ ಮೂಲ ಇರುವುದು ಸ್ಮಾರ್ಟ್ ಫೋನ್‌ಗಳಿಂದ ಯುದ್ಧ ವಿಮಾನಗಳ ತನಕ ಆಧುನಿಕ ಜಗತ್ತನ್ನು ನಡೆಸುವ ಅಪರೂಪದ ಖನಿಜಗಳು ಮತ್ತು ತಂತ್ರಜ್ಞಾನಗಳ ಮೇಲೆ ನಿಯಂತ್ರಣ ಸಾಧಿಸುವುದರಲ್ಲಿ!

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ಮುಗಿದಿದೆ: 2 ವರ್ಷಗಳ ಬಳಿಕ ಎಲ್ಲಾ ಜೀವಂತ 20 ಒತ್ತೆಯಾಳುಗಳನ್ನು ಹಸ್ತಾಂತರಿಸಿದ ಹಮಾಸ್; ಇಸ್ರೇಲ್ ಸೆನೆಟ್‌ನಲ್ಲಿ ಟ್ರಂಪ್ ಭಾಷಣ

RSS ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಸಾವಿಗೆ ಶರಣಾದ ಕೇರಳದ ಸಾಫ್ಟ್‌ವೇರ್ ಎಂಜಿನಿಯರ್; ಪ್ರಿಯಾಂಕಾ ಆಕ್ರೋಶ!

ಮನೆ ಬಾಡಿಗೆ 1.25 ಲಕ್ಷ, ಮನೆ ಕೆಲಸದಾಕೆ ಸಂಬಳವೇ 45 ಸಾವಿರ ರೂ: ರಷ್ಯಾ ಮಹಿಳೆಯ ಬೆಂಗಳೂರು ಲೈಫ್, ವೈರಲ್ ಲೆಕ್ಕಾಚಾರ!

'Toxic' ದೃಶ್ಯಗಳು ಸೋರಿಕೆ: ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ Yash ಶರ್ಟ್‌ಲೆಸ್ ಲುಕ್; Video Viral

ನಾನು ಸಿಎಂ ಆಗಿದ್ರೆ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದ ಆರ್‌ವಿ ದೇಶಪಾಂಡೆ; ಸ್ಪಷ್ಟನೆ ಕೋರಿದ ಸಿದ್ದರಾಮಯ್ಯ

SCROLL FOR NEXT