ಎರಡು ವರ್ಷಗಳ ಸುದೀರ್ಘ ಯುದ್ಧದ ಬಳಿಕ, ಗಾಜಾ ಕೊನೆಗೂ ಮೌನವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದದಡಿ, 2023ರ ಅಕ್ಟೋಬರ್ ತಿಂಗಳಲ್ಲಿ ಹಮಾಸ್ ಒತ್ತೆಯಾಳುಗಳಾಗಿ ಸೆರೆಯಾಗಿದ್ದ ಇಸ್ರೇಲಿಗರು ಕೊನೆಗೂ ಬಿಡುಗಡೆಯಾಗಿದ್ದಾರೆ. ಪ್ರೀತಿಪಾತ್ರರಿಂದ ದೂರಾಗಿದ್ದ ಕುಟುಂಬಗಳು ಕಣ್ಣೀರಿಡುತ್ತಾ ಅವರನ್ನು ಮತ್ತೆ ಅಪ್ಪಿಕೊಂಡಿವೆ. ಪ್ರತಿ ವಾರವೂ ಹಳದಿ ರಿಬ್ಬನ್ ಕಟ್ಟಿಕೊಂಡು ಪ್ರತಿಭಟಿಸುತ್ತಿದ್ದ ಇಸ್ರೇಲಿಗರ ಪಾಲಿಗೆ ಇದೊಂದು ಮಹತ್ವದ ಗೆಲುವಿನ ಕ್ಷಣವಾಗಿದೆ. ಇಸ್ರೇಲ್ ಗಡಿಯಾಚೆಗೆ, ಪ್ಯಾಲೆಸ್ತೀನಿಯನ್ನರು ಈಗ ಇಸ್ರೇಲಿನಲ್ಲಿ ಬಂಧಿಗಳಾಗಿರುವ, ಅವರಲ್ಲಿ ಇನ್ನೂ ವಿಚಾರಣೆಗೂ ಒಳಗಾಗಿರದ ನೂರಾರು ಖೈದಿಗಳ ಬಿಡುಗಡೆಗೆ ಕಾತರದಿಂದ ಎದುರು ನೋಡುತ್ತಿದ್ದಾರೆ. ಇಷ್ಟಾದರೂ ಒಂದು ದೊಡ್ಡ ಪ್ರಶ್ನೆ ಇನ್ನೂ ಕಾಡುತ್ತಲೇ ಇದೆ. ಅದೇನೆಂದರೆ: ಈ ದುರ್ಬಲವಾದ ಕದನ ವಿರಾಮ ದೀರ್ಘಕಾಲೀನ ಶಾಂತಿಗೆ ಹಾದಿ ಮಾಡಿಕೊಡಬಹುದೇ? ಅಥವಾ ಇನ್ನೊಂದು ಸುತ್ತಿನ ಹಿಂಸಾಚಾರಕ್ಕೆ ಹಾದಿ ಮಾಡಿಕೊಟ್ಟೀತೇ?
ಎರಡು ಹಂತಗಳಲ್ಲಿ 20 ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು, ಇದೊಂದು ಭಾವನಾತ್ಮಕ ಕ್ಷಣವಾಗಿದೆ. ರೆಡ್ ಕ್ರಾಸ್ ಸಂಸ್ಥೆ ಬಿಡುಗಡೆಯಾದ ಒತ್ತೆಯಾಳುಗಳನ್ನು ಅವರ ಕುಟುಂಬಸ್ಥರ ಭೇಟಿಗೂ ಮುನ್ನ ಆಸ್ಪತ್ರೆಗಳಿಗೆ ಸಾಗಿಸಿದಾಗ ಇಸ್ರೇಲಿಗರು ಸಂಭ್ರಮಾಚರಣೆ ಮಾಡಿದರು. ಒತ್ತೆಯಾಳುಗಳು 730 ದಿನಗಳನ್ನು ಬಂಧನದಲ್ಲಿ ಕಳೆದ ಬಳಿಕ, ಇಸ್ರೇಲಿನ ಯುದ್ಧದ ಗುರಿ ಪೂರ್ಣಗೊಂಡಂತೆ ಕಾಣುತ್ತಿದೆ. ಆದರೆ, ಪರಿಹಾರ ಮತ್ತು ಶಾಂತಿ ಎರಡೂ ಒಂದೇ ಅಲ್ಲವಲ್ಲ?
ಗಾಜಾದಲ್ಲಿನ ಚಿತ್ರಣ ಬಹಳ ಕಠಿಣವಾಗಿಯೇ ಮುಂದುವರಿದಿದೆ. 67,000ಕ್ಕೂ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದು, ಸಮಸ್ತ ಗಾಜಾ ಭೂ ಪ್ರದೇಶ ಅವಶೇಷದಂತಾಗಿದೆ. ಅಕ್ಟೋಬರ್ 2023ಕ್ಕೂ ಮುನ್ನ, ನಿರುದ್ಯೋಗ ದರ ಬಹುತೇಕ 46% ಇದ್ದು, 2007ರಿಂದಲೂ ಚಾಲ್ತಿಯಲ್ಲಿದ್ದ ನಿರ್ಬಂಧದ ಕಾರಣದಿಂದ ಬಹಳಷ್ಟು ಕುಟುಂಬಗಳು ಆಹಾರ ಪೂರೈಕೆಯ ಮೇಲೆ ಅವಲಂಬಿತವಾಗಿದ್ದವು. ಈಗ ಗಾಜಾದಲ್ಲಿ ಆಹಾರ, ಔಷಧ, ಮತ್ತು ಆಶ್ರಯದಂತಹ ಬಹುತೇಕ ಮೂಲಭೂತ ಸೌಕರ್ಯಗಳು ಅಪರೂಪವಾಗಿವೆ. ಕೆಲವು ಮಾನವೀಯ ನೆರವಿನ ಪೂರೈಕೆಗಳು ಮತ್ತೆ ಆರಂಭಗೊಂಡಿದ್ದು, ಹಲವು ತಿಂಗಳುಗಳ ಬಳಿಕ ಅಡುಗೆ ಅನಿಲ ಪೂರೈಕೆಯೂ ಆರಂಭಗೊಂಡಿದೆ. ಆದರೆ, ಗಾಜಾದ ಪೂರ್ಣ ಪುನಶ್ಚೇತನ ಇನ್ನೂ ಸಾಕಷ್ಟು ದೂರದಲ್ಲಿದೆ. ಇನ್ನೂ ಗಾಜಾದ ಭೂ, ಸಮುದ್ರ ಮತ್ತು ವಾಯು ದಿಗ್ಬಂಧನಗಳು ಮುಂದುವರಿದರೆ, ಗಾಜಾ ಯುದ್ಧಕ್ಕೂ ಮುನ್ನ ಇದ್ದ ಕಠಿಣ ಪರಿಸ್ಥಿತಿಗೆ ಮರಳಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೆಲ್ ಅವೀವ್‌ಗೆ ಹೃತ್ಪೂರ್ವಕವಾಗಿ ಸ್ವಾಗತಿಸಲಾಗಿದೆ. ಪ್ರಸ್ತುತ ಕದನವನ್ನು ನಿಲ್ಲಿಸಲು ನೆರವಾದ ಕಾರಣಕ್ಕಾಗಿ ಟ್ರಂಪ್ ಅವರಿಗೆ ಇಸ್ರೇಲಿನ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಿ, ಗೌರವಿಸಲಾಗುತ್ತಿದೆ. ಟ್ರಂಪ್ 20 ಅಂಶಗಳ ಶಾಂತಿ ಯೋಜನೆ 'ಪ್ಯಾಲೆಸ್ತೀನಿನ ಸ್ವಯಂ ಆಡಳಿತ ಮತ್ತು ರಾಜ್ಯತ್ವಕ್ಕಾಗಿ' ನಂಬಿಕಾರ್ಹ ಮಾರ್ಗವನ್ನು ಪ್ರಸ್ತಾಪಿಸಿದ್ದರೂ, ಅದು ಐತಿಹಾಸಿಕವಾಗಿಯೂ ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿದೆ. ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ಮತ್ತು ಇಸ್ರೇಲ್ ನಡುವೆ 1990ರ ದಶಕದಲ್ಲಿ ಸಹಿ ಹಾಕಲ್ಪಟ್ಟ ಓಸ್ಲೋ ಒಪ್ಪಂದಗಳು ಶಾಂತಿ ಮತ್ತು ಸೀಮಿತವಾದ ಸ್ವಯಂ ಆಡಳಿತದ ಭರವಸೆ ನೀಡಿದ್ದರೂ, ವಸಾಹತು ವಿಸ್ತರಣೆ, ಹಿಂಸಾಚಾರ, ಮತ್ತು ಅಪನಂಬಿಕೆಗಳ ಕಾರಣದಿಂದ ಅದು ಕುಸಿತಗೊಂಡಿತು. ಓಸ್ಲೋ ಒಪ್ಪಂದದ ರೀತಿಯಲ್ಲೇ ಟ್ರಂಪ್ ಪ್ರಸ್ತಾಪಿಸಿರುವ ಕದನ ವಿರಾಮದ ಡೀಲ್ ಪ್ರಕಾರ (ಇದು ಒಪ್ಪಂದವಲ್ಲ!) ಯುದ್ಧವೇನೋ ಸದ್ಯಕ್ಕೆ ನಿಲುಗಡೆಯಾಗಿದೆ. ಆದರೆ, ಆಳವಾದ ಸಮಸ್ಯೆಗಳು ಇಂದಿಗೂ ಹಾಗೇ ಮುಂದುವರಿದಿವೆ.
ಈಗ ನಮ್ಮ ಮುಂದಿರುವ ಪ್ರಮುಖ ಪ್ರಶ್ನೆ ಎಂದರೆ, ಇನ್ನು ಗಾಜಾದ ಆಡಳಿತ ನಡೆಸುವುದು ಯಾರು? ಹಮಾಸ್ ಈಗ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದು, ಮಾತುಕತೆಯಲ್ಲಿ ಅದು ಮೇಲುಗೈ ಹೊಂದಿಲ್ಲ. ಟ್ರಂಪ್ ಪ್ರಸ್ತಾಪಿಸಿರುವ ಶಾಂತಿ ಯೋಜನೆ ಒಂದು ಅಂತಾರಾಷ್ಟ್ರೀಯ 'ಶಾಂತಿ ಸಮಿತಿ'ಯನ್ನು ಒಳಗೊಂಡಿದ್ದು, ಇದರ ನೇತೃತ್ವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಕೆ ಮಾಜಿ ಪ್ರಧಾನ ಮಂತ್ರಿ ಟೋನಿ ಬ್ಲೇರ್ ವಹಿಸಲಿದ್ದಾರೆ. ಆದರೆ, ಪ್ಯಾಲೆಸ್ತೀನಿ ಗುಂಪುಗಳು ವಿದೇಶೀ ನಿಯಂತ್ರಣವನ್ನು ತಿರಸ್ಕರಿಸಿದ್ದು, ಗಾಜಾದ ಭವಿಷ್ಯವನ್ನು ಪ್ಯಾಲೆಸ್ತೀನಿಯನ್ನರೇ ನಿರ್ಧರಿಸಬೇಕು ಎಂದಿವೆ. ಸ್ಥಳೀಯ ಧ್ವನಿಗಳನ್ನು ಕಡೆಗಣಿಸಿದರೆ, ಹಿಂದಿನ ವೈಫಲ್ಯಗಳೇ ಪುನರಾವರ್ತನೆಯಾಗುವ ಅಪಾಯಗಳಿವೆ. ನ್ಯಾಯಸಮ್ಮತತೆಯನ್ನು ಹೊರಗಡೆಯಿಂದ ಹೇರಲೂ ಸಾಧ್ಯವಿಲ್ಲ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮೇಲೆ ಬಲ ಪಂಥೀಯ ಮಿತ್ರಪಕ್ಷಗಳು ಸಮಸ್ಯೆಯ ಸಣ್ಣ ಲಕ್ಷಣಗಳು ಕಂಡುಬಂದರೂ ದಾಳಿ ಪುನರಾರಂಭಿಸಬೇಕು ಎಂದು ಒತ್ತಡ ಹೇರಿರುವುದು ಒತ್ತಡ ತಂದಿದೆ. ಈಗ ಒತ್ತೆಯಾಳುಗಳೂ ಬಿಡುಗಡೆಯಾಗಿ, ಸ್ವದೇಶಕ್ಕೆ ಮರಳಿರುವುದರಿಂದ ಇಸ್ರೇಲಿಗೆ ಸಂಯಮ ಕಾಪಾಡಿಕೊಳ್ಳಲು ಒಂದು ಕಾರಣ ನೀಡಿದೆ. ಈಗ ಮುಂದಿರುವ ಸವಾಲೆಂದರೆ, ಇಸ್ರೇಲ್ ಶಾಂತಿಯನ್ನು ದೀರ್ಘಕಾಲೀನ ಗುರಿಯಾಗಿ ಪರಿಗಣಿಸುತ್ತದೋ, ಅಥವಾ ಮುಂದಿನ ಯುದ್ಧಕ್ಕೂ ಮೊದಲಿನ ತಾತ್ಕಾಲಿಕ ನಿಲುಗಡೆಯಾಗಿ ಪರಿಗಣಿಸುತ್ತದೋ ಎನ್ನುವುದಾಗಿದೆ.
ಹಾಗೆಂದು ಪ್ಯಾಲೆಸ್ತೀನಿಯನ್ನರಿಗೂ ಮುಂದಿನ ಹಾದಿ ಅಷ್ಟೇ ಕಷ್ಟಕರವಾಗಿದೆ. ಹಮಾಸ್ ತನ್ನ ಆಯುಧಗಳು ಮತ್ತು ರಾಜಕೀಯ ನಿಯಂತ್ರಣವನ್ನು ಬಿಟ್ಟುಕೊಡುವಂತೆ ಒತ್ತಡ ಹೇರಬಹುದು. ಪ್ಯಾಲೆಸ್ತೀನ್ ಅನ್ನು ಅಧಿಕೃತವಾಗಿ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸಿದರೆ ಮಾತ್ರವೇ ಆಯುಧ ತ್ಯಜಿಸಿ, ರಾಜಕೀಯ ನಿಯಂತ್ರಣ ಬಿಟ್ಟುಕೊಡುವುದಾಗಿ ಹಮಾಸ್ ಮೊದಲೇ ಹೇಳಿತ್ತು. ಇಷ್ಟಾದರೂ ಹಿಂದೆ ಪ್ಯಾಲೆಸ್ತೀನನ್ನು ಅಧಿಕೃತವಾಗಿ ರಾಷ್ಟ್ರವನ್ನಾಗಿಸುವ ಭರವಸೆಗಳು ವಿಫಲವಾಗಿದ್ದು, ಇದಕ್ಕೆ ವಸಾಹತುಗಳ ವಿಸ್ತರಣೆ, ಜೆರುಸಲೇಂ ಕುರಿತ ವಿವಾದಗಳ ಮತ್ತು ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನನ್ನು ಅಧಿಕೃತವಾಗಿ ಗುರುತಿಸುವುದಕ್ಕೆ ಅಮೆರಿಕ ವಿಟೋ ಪ್ರಯೋಗಿಸಿರುವುದು ಕಾರಣಗಳಾಗಿವೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ಜೆರುಸಲೇಂ ಅನ್ನು ತಮ್ಮ ರಾಜಧಾನಿ ಎಂದು ಕರೆದುಕೊಳ್ಳುವುದರಿಂದ, ಇದು ಅತ್ಯಂತ ಸಂಕೀರ್ಣ ವಿಚಾರವಾಗಿದೆ. ಈ ವಾಸ್ತವವನ್ನು ತಪ್ಪಿಸುವ ಯಾವುದೇ ಯೋಜನೆಯೂ ವಿಫಲವಾಗುವ ಸಾಧ್ಯತೆಗಳೇ ಹೆಚ್ಚು.
ನೈಜ ಶಾಂತಿ ಗಾಜಾವನ್ನು ದೊಡ್ಡದಾದ ಇಸ್ರೇಲ್ - ಪ್ಯಾಲೆಸ್ತೀನ್ ವಿವಾದದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ವೆಸ್ಟ್ ಬ್ಯಾಂಕ್ ಅನ್ನು ಕಡೆಗಣಿಸುವುದು ಅಥವಾ ಪ್ಯಾಲೆಸ್ತೀನಿನ ಸ್ವಯಂ ನಿರ್ಣಯವನ್ನು ತಳ್ಳಿಹಾಕುವುದರಿಂದ ಇನ್ನಷ್ಟು ಅಶಾಂತಿಯೇ ತಲೆದೋರಲಿದೆ. ಇಸ್ರೇಲಿನ ಭದ್ರತೆ ಮತ್ತು ಪ್ಯಾಲೆಸ್ತೀನಿನ ಗೌರವಗಳು ಪರಸ್ಪರ ಸಂಪರ್ಕಿತವಾಗಿವೆ ಎನ್ನುವುದನ್ನು ಅರಿತುಕೊಳ್ಳುವುದರ ಮೇಲೆ ದೀರ್ಘ ಶಾಂತಿ ಅವಲಂಬಿತವಾಗಿದೆ.
ಇನ್ನು ಅಂಕಿ ಸಂಖ್ಯೆಗಳಂತೂ ಆಘಾತಕಾರಿಯಾಗಿವೆ. ಬಹುತೇಕ 70,000 ಜನರು ಸಾವನ್ನಪ್ಪಿದ್ದು, ಗಾಜಾದ 11% ಜನಸಂಖ್ಯೆ ಮೃತಪಟ್ಟಿದೆ ಅಥವಾ ಗಾಯಗೊಂಡಿದೆ. ಇಸ್ರೇಲಿನ 465 ಯೋಧರು ಸಾವಿಗೀಡಾಗಿದ್ದಾರೆ. ಈ ದುರಂತದ ನಡುವೆಯೂ ಒಂದು ಸಣ್ಣ ಆಶಾ ಭಾವನೆಯೂ ಇದೆ. ಈಗ ಬಂದೂಕುಗಳು ಮೌನವಾಗಿದ್ದು, ನೆರವು ಹರಿದುಬರುತ್ತಿದೆ. ಕುಟುಂಬಗಳು ಈಗ ಮರಳಿ ಜೊತೆಯಾಗಿವೆ. ಇಷ್ಟೇ ಸಾಲದಿದ್ದರೂ, ಇದು ಉತ್ತಮ ಆರಂಭವಂತೂ ಹೌದು.
ನೈಜ ಶಾಂತಿಗೆ ಕದನ ವಿರಾಮಗಳು ಮತ್ತು ಸಮಾರಂಭಗಳಿಗಿಂತ ಹೆಚ್ಚಿನದು ಬೇಕು. ಸುದೀರ್ಘ ಶಾಂತಿ ಸ್ಥಾಪನೆಗೆ ಪರಸ್ಪರ ನಂಬಿಕೆ, ಪ್ರಾಮಾಣಿಕತೆ ಮತ್ತು ರಾಜಿ ಮಾಡಿಕೊಳ್ಳುವ ಧೈರ್ಯಗಳ ಅವಶ್ಯಕತೆಯಿದೆ. ನಾಯಕರುಗಳು ಆಕ್ರಮಣ ಮತ್ತು ನಿರ್ಬಂಧಗಳು ಹಿಂಸಾಚಾರಕ್ಕೇ ಹಾದಿ ಮಾಡಿಕೊಡುತ್ತವೆ ಎಂಬ ಕಟು ಸತ್ಯಗಳನ್ನು ಅರಿಯಬೇಕು. ಕೇವಲ ಬಲ ಪ್ರಯೋಗದಿಂದಲೇ ಯಾವ ಪಕ್ಷವೂ ಇಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ.
ಟ್ರಂಪ್ "ಯುದ್ಧ ಮುಕ್ತಾಯಗೊಂಡಿದೆ" ಎಂದು ಘೋಷಿಸಿದ್ದಾರೆ. ಆದರೆ, ಯುದ್ಧವನ್ನು ನಿಲ್ಲಿಸುವುದು ಮತ್ತು ಶಾಂತಿ ಸ್ಥಾಪನೆ ಎರಡೂ ಒಂದೇ ಅಲ್ಲ. ಈ ನಂಬಿಕೆಯ ಪರೀಕ್ಷೆ ಮುಂದೆ ನಡೆಯಲಿರುವ ಗಾಜಾದ ಮರುನಿರ್ಮಾಣ, ಮಾತುಕತೆ ಮತ್ತು ಸಮನ್ವಯತೆಯಲ್ಲಿ ನಡೆಯಲಿದೆ. ಒತ್ತೆಯಾಳುಗಳು ಈಗ ಮುಕ್ತರಾಗಿದ್ದಾರೆ. ಆದರೆ ಶಾಂತಿ ಮಾತ್ರ ಇನ್ನೂ ಒತ್ತೆಯಾಳಾಗಿಯೇ ಇದೆ. ಈ ಕ್ಷಣ ಆಶಾ ಭಾವನೆಗೆ ಹಾದಿ ಆಗುತ್ತದೆಯೋ ಅಥವಾ ಮುಂದಿನ ರಕ್ತಪಾತಕ್ಕೆ ಮೊದಲ ಸಣ್ಣ ವಿರಾಮವೋ ಎನ್ನುವುದು ಜಗತ್ತು ಅಥವಾ ಈ ಪ್ರದೇಶ ಏನನ್ನು ಆರಿಸಲಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್ : girishlinganna@gmail.com