ನೇಪಾಳದಿಂದ ಬಂದ ಚಿತ್ರಗಳು ಅತ್ಯಂತ ಶಕ್ತಿಶಾಲಿಯಾಗಿದ್ದವು: ಒಂದು ಮನೆಗೆ ಬೆಂಕಿ ಬಿದ್ದಿತ್ತು, ರಾಜಕೀಯ ವೃತ್ತಿಜೀವನ ನಾಶವಾಗಿತ್ತು, ತಮ್ಮ ಧ್ವನಿಯನ್ನು ಹುಡುಕುತ್ತಾ, ಹೋರಾಟ ನಡೆಸಿ ಸಾಗಿದ್ದ ಯುವಕರಿಂದ ದೇಶದ ರಾಜಧಾನಿ ತುಂಬಿ ಹೋಗಿತ್ತು. ನೇಪಾಳದ ಪ್ರಧಾನ ಮಂತ್ರಿ ಕೆಪಿ ಶರ್ಮಾ ಓಲಿ ಅವರ ರಾಜೀನಾಮೆ ಒಂದು ಪ್ರತ್ಯೇಕ ಘಟನೆಯಾಗಿರದೆ, ಭಾರತದ ನೆರೆ ರಾಷ್ಟಗಳಲ್ಲಿ ನಡೆದ ಸರಣಿ ಘಟನೆಗಳ, ಬೆಳವಣಿಗೆಗಳ ಭಾಗವಾಗಿತ್ತು. ಕಾಬೂಲಿನಿಂದ ಕೊಲಂಬೊ ತನಕ, ಢಾಕಾದಿಂದ ಕಠ್ಮಂಡುವಿನ ತನಕ, ನಡೆದು ಬಂದ ವಿದ್ಯಮಾನಗಳ ವಿಧಾನ ಒಂದೇ ರೀತಿಯಾಗಿದೆ. ಹೆಚ್ಚುತ್ತಿರುವ ಕೋಪ, ಆಕ್ರೋಶ ಸರ್ಕಾರಗಳನ್ನೇ ಉರುಳಿಸಿದ್ದು, ನಾಯಕರನ್ನು ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿದೆ. ಭಾರತದ ಪಾಲಿಗಂತೂ ಇದೊಂದು ಭೌಗೋಳಿಕ ರಾಜಕಾರಣದ ಸವಾಲಾಗಿದ್ದು, ಭಾರತ ಇದಕ್ಕಾಗಿ ದಕ್ಷಿಣ ಏಷ್ಯಾದಲ್ಲಿ ಒಂದು ಹೊಸದಾದ ಪಾತ್ರ ಮತ್ತು ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ.
ಆಗಸ್ಟ್ 2021ರಲ್ಲಿ, ಅಮೆರಿಕಾ ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಗಳನ್ನು ಹಿಂದೆ ಪಡೆಯುವ ಮೂಲಕ ಈ ಸರಣಿ ಪ್ರಕ್ರಿಯೆಗಳು ಆರಂಭಗೊಂಡವು. ಅಮೆರಿಕಾ ತೆರಳಿದ ಕೆಲ ದಿನಗಳ ಒಳಗಾಗಿ ಅಫ್ಘಾನಿಸ್ತಾನದ ಸರ್ಕಾರ ಪತನಗೊಂಡು, ತಾಲಿಬಾನ್ ಅಧಿಕಾರ ಹಿಡಿಯಿತು. ಈ ವಿದ್ಯಮಾನ ಕಲಿಸಿದ ಪಾಠ ಸ್ಪಷ್ಟವಾಗಿತ್ತು: ಜನರ ನಂಬಿಕೆಯನ್ನು ಕಳೆದುಕೊಂಡ ಸರ್ಕಾರವನ್ನು ಯಾವುದೇ ಬಾಹ್ಯ ಶಕ್ತಿಯೂ ಕಾಪಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ಮತ್ತು ಅಸಡ್ಡೆಯಿಂದ ನಿರ್ಮಿಸಿರುವ ರಾಷ್ಟ್ರಗಳು, ಸರ್ಕಾರಗಳು ಎಷ್ಟು ದುರ್ಬಲವಾಗಿವೆ ಮತ್ತು ಎಷ್ಟು ಸುಲಭವಾಗಿ ಪತನ ಹೊಂದಬಹುದು ಎನ್ನುವುದನ್ನೂ ಇದು ತೋರಿಸಿತು.
ಅದಾದ ಬಳಿಕ, ಜುಲೈ 2022ರಲ್ಲಿ ಬಿಕ್ಕಟ್ಟು ಶ್ರೀಲಂಕಾದ ಕಡೆ ತೆರಳಿತು. ಸುದೀರ್ಘ ಅವಧಿಯ ಹಣಕಾಸಿನ ತಪ್ಪು ನಿರ್ವಹಣೆ ಮತ್ತು ಸಾಲಗಳಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ರಾಜಕೀಯ ಪತನಕ್ಕೆ ನಾಂದಿ ಹಾಡಿತು. ಆಹಾರ, ಇಂಧನ, ಔಷಧಗಳ ಕೊರತೆ ಅನುಭವಿಸಿದ ಸಾರ್ವಜನಿಕರು ಅಧ್ಯಕ್ಷರ ಅರಮನೆಗೇ ದಾಳಿ ಇಟ್ಟರು. ಸಾರ್ವಜನಿಕರು ಅಧಿಕಾರದ ಅರಮನೆಯ ಒಳಗೆ ನುಗ್ಗಿ, ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಿ, ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿದರು. ಇದರಿಂದ ಆರ್ಥಿಕ ಹತಾಶ ಪರಿಸ್ಥಿತಿಯೂ ರಾಜಕೀಯ ಕ್ರಾಂತಿಗೆ ಕಾರಣವಾಗಬಹುದು ಎಂಬುದು ಸಾಬೀತಾಯಿತು.
ಈ ಸರಣಿ ಪ್ರಕ್ರಿಯೆಗಳ ಬಿಸಿ ಆಗಸ್ಟ್ 2024ರಲ್ಲಿ ಬಾಂಗ್ಲಾದೇಶಕ್ಕೆ ವ್ಯಾಪಿಸಿತು. ಸರ್ಕಾರಿ ಉದ್ಯೋಗಗಳಿಗೆ ಇದ್ದ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಆರಂಭಗೊಂಡ ಪ್ರತಿಭಟನೆಗಳು ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತದ ವಿರುದ್ಧದ ಸಾಮೂಹಿಕ ಚಳುವಳಿಯ ರೂಪ ಪಡೆದುಕೊಂಡಿತು. ಸಾವಿರಾರು ಜನರು ಪ್ರಧಾನಿ ನಿವಾಸಕ್ಕೆ ದಾಳಿ ಇಟ್ಟಾಗ, ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಭಾರತದಲ್ಲಿ ಆಶ್ರಯ ಪಡೆಯುವಂತಾಯಿತು. ಸಾರ್ವಜನಿಕರ ಆಕ್ರೋಶ ತುತ್ತತುದಿಗೆ ತಲುಪಿದಾಗ, ವಿರೋಧಗಳನ್ನು ದೀರ್ಘಕಾಲ ನಿಗ್ರಹಿಸಿದ ಶಕ್ತಿಶಾಲಿ ಸರ್ಕಾರಕ್ಕೂ ಜನಾಕ್ರೋಶವನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಯಿತು.
ಈಗ ಹೋರಾಟದ ಸರದಿ ನೆರೆಯ ನೇಪಾಳದ್ದು. ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದಾಗ ಪ್ರತಿಭಟನೆ ಆರಂಭಗೊಂಡಿತು. ಆದರೆ, ನೇಪಾಳದ ಸಾರ್ವಜನಿಕರ ನಿಜವಾದ ಆಕ್ರೋಶಕ್ಕೆ ಕಾರಣ ಅಲ್ಲಿನ ಭ್ರಷ್ಟ ಮತ್ತು ಜನರಿಂದ ದೂರವಿದ್ದ ರಾಜಕಾರಣಿಗಳಾಗಿದ್ದರು. ಯುವ ಜನತೆ, ಅಥವಾ ಜೆನ್ (Gen Z) ಅವೇ ಸಾಮಾಜಿಕ ಜಾಲತಾಣಗಳನ್ನು ಪ್ರತಿಭಟನೆಗಳನ್ನು ಆಯೋಜಿಸಲು ಬಳಸಿಕೊಂಡು, ಕೇವಲ ಆಡಳಿತ ನೀತಿಗಳ ಬದಲಾವಣೆ ಮಾತ್ರವಲ್ಲದೆ, ಹೊಸ ರಾಜಕೀಯ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು. ಪ್ರಧಾನಿ ಓಲಿ ನಿವಾಸಕ್ಕೆ ಮತ್ತು ಇತರ ಕಟ್ಟಡಗಳಿಗೆ ಬೆಂಕಿ ಹಚ್ಚಿರುವುದು ಹಳೆಯ ವ್ಯವಸ್ಥೆಯನ್ನು ವಿರೋಧಿಸುವುದರ ಪ್ರತೀಕವಾಗಿದೆ.
ಈ ಬೆಳವಣಿಗೆಗಳು ಭಾರತದ ಪಾಲಿಗೆ ವಿಭಿನ್ನವಾದ ಮತ್ತು ಸಂಕೀರ್ಣವಾದ ಸವಾಲುಗಳನ್ನು ತಂದೊಡ್ಡಿವೆ. ನಮ್ಮ ವಿದೇಶಾಂಗ ನೀತಿ ಇಲ್ಲಿಯ ತನಕ ಇತಿಹಾಸ, ವ್ಯಾಪಾರ ಮತ್ತು ಚೀನಾದ ಪ್ರಭಾವವನ್ನು ಹತ್ತಿಕ್ಕುವುದರ ಮೇಲೆ ಆಧಾರಿತವಾಗಿತ್ತು. ಆದರೆ, ಈಗಿನ ಬಿಕ್ಕಟ್ಟಿನ ನಿರ್ವಹಣೆಗೆ ಹೊಸ ವಿಧಾನದ ಅಗತ್ಯವಿದೆ.
ಮೊದಲನೆಯದಾಗಿ, ಸ್ಥಿರ ನೆರೆಹೊರೆ ಎಂಬ ಪರಿಕಲ್ಪನೆಯೇ ಈಗ ಕುಸಿದು ಹೋಗಿದ್ದು, ನಾವು ನಮ್ಮ ನೆರೆಯ ರಾಜಕಾರಣ ಸುರಕ್ಷಿತವಾಗಿದೆ ಎಂದು ಭಾವಿಸಲು ಸಾಧ್ಯವೇ ಇಲ್ಲವೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಯುವ ಜನರ ನೇತೃತ್ವದಲ್ಲಿ, ಡಿಜಿಟಲ್ ಚಳುವಳಿಗಳು ಕ್ಷಿಪ್ರವಾಗಿ ಸರ್ಕಾರಗಳನ್ನು ಉರುಳಿಸಬಲ್ಲವು. ಇವುಗಳು ಹಳೆಯ ರಾಜಕೀಯ ಹೋರಾಟಗಳ ರೀತಿಯಾಗಿಲ್ಲ. ಬದಲಿಗೆ, ಜನರ ಪ್ರತಿಭಟನೆಗಳಿಗೆ ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳು ತೈಲ ಸುರಿಯುತ್ತಿವೆ. ಇವು ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಬೈಪಾಸ್ ಮಾಡಿ, ಅಧಿಕಾರದ ಬೇರನ್ನೇ ಅಲ್ಲಾಡಿಸಬಲ್ಲವು.
ಎರಡನೆಯದಾಗಿ, ಈ ಬಿಕ್ಕಟ್ಟುಗಳು ನಮ್ಮ ಭೂ ಪ್ರದೇಶ ಆರ್ಥಿಕ ಆಘಾತಗಳು ಮತ್ತು ಕೆಟ್ಟ ಆಡಳಿತದೆದುರು ಎಷ್ಟು ದುರ್ಬಲವಾಗಿವೆ ಎನ್ನುವುದಕ್ಕೆ ಸಾಕ್ಷಿಯೂ ಹೌದು. ಶ್ರೀಲಂಕಾದ ಪತನ ಅಸಮರ್ಥ ಆರ್ಥಿಕ ನಿರ್ವಹಣೆಗಳು ಗಂಭೀರ ಭೌಗೋಳಿಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದನ್ನು ತೋರಿಸಿದರೆ, ಬಾಂಗ್ಲಾದೇಶ ಮತ್ತು ನೇಪಾಳದ ಪ್ರತಿಭಟನೆಗಳು ಭ್ರಷ್ಟಾಚಾರ ಮತ್ತು ನಿರುದ್ಯೋಗಗಳಿಂದ ಹೊರಹೊಮ್ಮಿದ ಆಕ್ರೋಶದ ಪರಿಣಾಮವಾಗಿವೆ. ಭಾರತ ಬೆಳೆಯುತ್ತಿರುವ ಹಾಗೇ, ಅದರ ಯಶಸ್ಸು ಸುರಕ್ಷಿತ ವ್ಯಾಪಾರ ಮಾರ್ಗಗಳು, ಸುಗಮ ಪೂರೈಕೆ ಸರಪಳಿಗಳು, ಮತ್ತು ಪ್ರಾದೇಶಿಕ ಅಭಿವೃದ್ಧಿಯ ಮೇಲೆ ಅವಲಂಬಿಸಿದೆ. ಆದ್ದರಿಂದ, ನೆರೆಹೊರೆಯಲ್ಲಿ ಕಾಣಿಸಿಕೊಳ್ಳುವ ಅಸ್ಥಿರತೆಗಳು ಭಾರತದ ಮಹತ್ವಾಕಾಂಕ್ಷೆಗಳಿಗೆ ನೇರ ಅಪಾಯಗಳಾಗಿವೆ.
ಮೂರನೆಯದಾಗಿ, ಈ ಬೆಳವಣಿಗೆಗಳು ಚೀನಾದ ಜೊತೆಗಿನ ಭಾರತದ ವೈರತ್ವವನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಚೀನಾ ಹಲವಾರು ವರ್ಷಗಳಿಂದ ಈ ದೇಶಗಳಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದು, ತನ್ನ ಪ್ರಭಾವ ಹೆಚ್ಚಿಸುತ್ತಾ ಬಂದಿದೆ. ಇಂತಹ ರಾಜಕೀಯ ಬಿಕ್ಕಟ್ಟುಗಳು ಚೀನಾಗೆ ತನ್ನ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಲು ಅವಕಾಶ ಮಾಡಿಕೊಡಬಹುದು. ಆದರೆ, ಇವುಗಳು ಜನರ ನೇತೃತ್ವದ ಹೋರಾಟಗಳಾಗಿದ್ದು, ಹೊಸ ಸರ್ಕಾರಗಳು ಚೀನಾದ ಜೊತೆಗಿನ ಹಿಂದಿನ ಒಪ್ಪಂದಗಳಂತೆ ಅಪಾರ ಪ್ರಮಾಣದ ಸಾಲದ ಯೋಜನೆಗಳನ್ನು ದೂರ ತಳ್ಳಬಹುದು.
ಭಾರತದ ಪ್ರತಿಕ್ರಿಯೆ ಹಿಂದೆಂದಿಗಿಂತಲೂ ಹೆಚ್ಚು ಸಮತೋಲನ ಹೊಂದಿರಬೇಕು. ಭಾರತ ಈಗ ಯಾವುದೋ ಒಂದು ಪಕ್ಷ ಅಥವಾ ಕುಟುಂಬದ ಪರವಾಗಿರುವಂತೆ ಕಾಣಲು ಸಾಧ್ಯವಿಲ್ಲ. ಭಾರತದ ಗಮನ ಪ್ರಜಾಪ್ರಭುತ್ವ, ಉತ್ತಮ ಆಡಳಿತ, ಮತ್ತು ಆರ್ಥಿಕ ಸ್ಥಿರತೆಗೆ ಬೆಂಬಲ ನೀಡುವಂತೆ ಇರಬೇಕು. ಅದರೊಡನೆ, ಹೊಸ ತಲೆಮಾರಿನ ನಾಯಕರು ಮತ್ತು ಹೋರಾಟಗಾರರೊಡನೆ ಸಂಪರ್ಕ ಸಾಧಿಸಿ, ಈ ದೇಶಗಳ ಭವಿಷ್ಯವನ್ನು ರೂಪಿಸಲು ನೆರವಾಗಬೇಕು. ಅಂದರೆ, ಸರ್ಕಾರದಿಂದ ಸರ್ಕಾರದ ಹಂತದಲ್ಲಿದ್ದ ರಾಜತಾಂತ್ರಿಕತೆಯನ್ನು ಈಗ 'ಜನರಿಂದ ಜನರಿಗೆ' ಎಂಬ ಹಂತದಲ್ಲಿ ಜಾರಿಗೆ ತರುವ ಅವಶ್ಯಕತೆ ಇದೆ. ಅಂದರೆ, ಭಾರತ ಈಗ ರಾಜಕೀಯ ಷರತ್ತುಗಳಿಲ್ಲದೆ ಮಾನವೀಯ ಸಹಾಯ, ಆರ್ಥಿಕ ನೆರವನ್ನು ನೀಡಿ, ಬಿಕ್ಕಟ್ಟಿನ ಸಮಯದಲ್ಲಿ ನಂಬಿಕಾರ್ಹ ಸಹಯೋಗಿ ಎಂಬ ವಿಶ್ವಾಸ ಗಳಿಸಬೇಕು. ಅದರೊಡನೆ, ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದಾಗ ಪ್ರಜಾಪ್ರಭುತ್ವದ ರಕ್ಷಕನ ಪಾತ್ರವನ್ನೂ ಭಾರತ ನಿರ್ವಹಿಸುವ ಅಗತ್ಯವಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com