ಅಂಕಣಗಳು

ಕೊನೆಯಾದ ಆತಂಕ, ಅಪ್ಪಳಿಸಿದ ವಾಸ್ತವ,: ಹೊಸಬರ ಅಮೆರಿಕಾ ಕನಸು ಕಮರಿಸಿದ ಟ್ರಂಪ್ ಎಚ್-1ಬಿ ಶುಲ್ಕ (ಜಾಗತಿಕ ಜಗಲಿ)

ಟ್ರಂಪ್ ವಿಧಿಸಲು ಹೊರಟಿರುವ ಎಚ್-1ಬಿ ವೀಸಾ ಶುಲ್ಕಕ್ಕೆ ಕಾನೂನು ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ.

ಅಮೆರಿಕಾ ಸರ್ಕಾರ ಜಾರಿಗೆ ತಂದಿರುವ ನೂತನ ನಿಯಮದಡಿ, ಅಮೆರಿಕನ್ ಕಂಪನಿಗಳು ಎಚ್1-ಬಿ ವೀಸಾ ಅಡಿಯಲ್ಲಿ ವಿದೇಶೀ ಉದ್ಯೋಗಿಗಳ ನೇಮಕಾತಿಗೆ ಅಮೆರಿಕಾ ಸರ್ಕಾರಕ್ಕೆ ತಲಾ 1 ಲಕ್ಷ ಡಾಲರ್ (88 ಲಕ್ಷ ರೂಪಾಯಿ) ಪಾವತಿಸಬೇಕಾಗುತ್ತದೆ. ಈ ಹಣ ಅಮೆರಿಕಾ ಸರ್ಕಾರಕ್ಕೆ ಪಾವತಿಸುವ ವೀಸಾ ಮೊತ್ತವಾಗಿದ್ದು, ಉದ್ಯೋಗಿಗಳ ಸಂಬಳವಲ್ಲ. ಇದನ್ನು ಮೀರಿ ಕಂಪನಿಗಳು ಉದ್ಯೋಗಿಗಳಿಗೆ ಸಂಬಳ ಪಾವತಿಸಬೇಕಾಗುತ್ತದೆ. ಅಮೆರಿಕಾದಲ್ಲಿರುವ ಎಲ್ಲ ಎಚ್-1ಬಿ ವೀಸಾ ಹೊಂದಿರುವವರ ಪೈಕಿ 70% ಭಾರತೀಯರೇ ಆಗಿದ್ದು, ಸರ್ಕಾರದ ನಿರ್ಧಾರದಿಂದ ಭಾರತೀಯರ ಮೇಲೇ ಅತಿದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ.

1 ಲಕ್ಷ ಡಾಲರ್ (88 ಲಕ್ಷ ರೂಪಾಯಿ) ಶುಲ್ಕದ ಕುರಿತು ಶ್ವೇತ ಭವನ ಸ್ಪಷ್ಟನೆ ನೀಡಿದ್ದು, ಈ ನಿಯಮ ಸೆಪ್ಟೆಂಬರ್ 21ರ ಬಳಿಕ ಅರ್ಜಿ ಸಲ್ಲಿಸುವ ನೂತನ ಅರ್ಜಿದಾರರಿಗೆ ಅನ್ವಯವಾಗುತ್ತದೆ ಎಂದಿದೆ. ಇದು ಈಗಾಗಲೇ ಆತಂಕಕ್ಕೆ ಒಳಗಾಗಿದ್ದ ವಿದೇಶೀ ಉದ್ಯೋಗಿಗಳಿಗೆ, ಅದರಲ್ಲೂ ವಿಶೇಷವಾಗಿ ಭಾರತೀಯರಿಗೆ ನೆಮ್ಮದಿ ನೀಡಿದೆ.

ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈಗಾಗಲೇ ಎಚ್-1ಬಿ ವೀಸಾ ಹೊಂದಿದ್ದು, ಅಮೆರಿಕಾದಿಂದ ಹೊರಗಿರುವವರು ಅಮೆರಿಕಾಗೆ ಮರಳುವಾಗ 1 ಲಕ್ಷ ಡಾಲರ್ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ವಾರ್ಷಿಕ ಶುಲ್ಕವಲ್ಲ ಎಂದು ಸ್ಪಷ್ಟಪಡಿಸಿರುವ ಲೀವಿಟ್, ಇದು ಅರ್ಜಿಯೊಡನೆ ಪಾವತಿಸುವ ಒಂದು ಬಾರಿಯ ಶುಲ್ಕವಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಎಚ್-1ಬಿ ವೀಸಾ ಹೊಂದಿರುವವರು ಯಾವುದೇ ಬದಲಾವಣೆ ಇಲ್ಲದೆ ಮೊದಲಿನಂತೆ ಅಮೆರಿಕಾದ ಒಳಗೆ ಮತ್ತು ಹೊರಗೆ ಸಂಚರಿಸಬಹುದು ಎಂದು ಅವರು ವಿವರಿಸಿದ್ದಾರೆ.

ಈ ನಿಯಮ ಹೊಸ ವೀಸಾಗಳಿಗೆ ಮಾತ್ರವೇ ಅನ್ವಯವಾಗಲಿದ್ದು, ವೀಸಾ ನವೀಕರಣಕ್ಕೆ ಅಥವಾ ಈಗಾಗಲೇ ವೀಸಾ ಹೊಂದಿರುವವರಿಗೆ ಅನ್ವಯವಾಗುವುದಿಲ್ಲ. ಇದು ನೂತನ ಎಚ್-1ಬಿ ಲಾಟರಿ ಸೈಕಲ್‌ನಿಂದ ಆರಂಭಗೊಳ್ಳಲಿದೆ

ಟ್ರಂಪ್ ಎಚ್-1ಬಿ ವೀಸಾ ಮೇಲೆ ಭಾರೀ ಶುಲ್ಕ ವಿಧಿಸುವ ಆದೇಶಕ್ಕೆ ಸಹಿ ಹಾಕಿದ ಬಳಿಕ ಈ ಸ್ಪಷ್ಟೀಕರಣ ಹೊರಬಂದಿದೆ. ಈ ಶುಲ್ಕ ಸೆಪ್ಟೆಂಬರ್ 21ರ ಮಧ್ಯರಾತ್ರಿ 12 ಗಂಟೆಯ ಬಳಿಕ ಅರ್ಜಿ ಸಲ್ಲಿಸುವವರಿಗೆ ಅನ್ವಯವಾಗಲಿದೆಯೇ ಹೊರತು ಈಗಾಗಲೇ ವೀಸಾ ಹೊಂದಿರುವವರಿಗಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಟ್ರಂಪ್ ವಿಧಿಸಲು ಹೊರಟಿರುವ ಎಚ್-1ಬಿ ವೀಸಾ ಶುಲ್ಕಕ್ಕೆ ಕಾನೂನು ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ. ಆದರೆ, ಒಂದು ವೇಳೆ ಈ ಶುಲ್ಕ ಏನಾದರೂ ಮುಂದುವರಿದರೆ, ಕುಶಲ ವಿದೇಶೀ ಉದ್ಯೋಗಿಗಳನ್ನು ನೇಮಕಗೊಳಿಸುವ ಅಮೆರಿಕನ್ ಕಂಪನಿಗಳು ಆರು ವರ್ಷಗಳ ಕಾಲ 1 ಲಕ್ಷ ಡಾಲರ್ (88 ಲಕ್ಷ ರೂಪಾಯಿ) ಪಾವತಿಸಬೇಕಾಗಬಹುದು ಎಂದು ಅಮೆರಿಕನ್ ಮಾಧ್ಯಮಗಳು ವರದಿ ಮಾಡಿವೆ.

ಈಗ ಅಮೆರಿಕಾದ ತಂತ್ರಜ್ಞಾನ ಕಂಪನಿಗಳು ಮತ್ತು ಇನ್ಫೋಸಿಸ್ ಮತ್ತು ಟಿಸಿಎಸ್‌ನಂತಹ ಭಾರತೀಯ ಕಂಪನಿಗಳಿಗೂ ಎಚ್-1ಬಿ ವೀಸಾ ಅಡಿಯಲ್ಲಿ ಉದ್ಯೋಗಿಗಳ ನೇಮಕಾತಿ ನಡೆಸುವುದು ಸವಾಲಾಗಲಿದೆ.

ಡೊನಾಲ್ಡ್ ಟ್ರಂಪ್ ಆಡಳಿತ ಕೈಗೊಂಡಿರುವ ಹೊಸ ನಿರ್ಧಾರ ಅನಿರೀಕ್ಷಿತ ಅಥವಾ ಆಶ್ಚರ್ಯಕರವೇನಲ್ಲ. ಒಂದು ತಿಂಗಳ ಹಿಂದೆ, ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಹೋವಾರ್ಡ್ ಲುಟ್ನಿಕ್ ಅವರು ಎಚ್-1ಬಿ ವೀಸಾ ಕಾರ್ಯಕ್ರಮವೇ ಒಂದು ಹಗರಣ ಎಂದಿದ್ದು, ಕಂಪನಿಗಳು ಅಮೆರಿಕನ್ನರನ್ನು ಉದ್ಯೋಗಕ್ಕೆ ನೇಮಿಸಬೇಕೇ ಹೊರತು ವಿದೇಶೀಯರನ್ನಲ್ಲ ಎಂದಿದ್ದರು.

ಲುಟ್ನಿಕ್ ಅವರ ವಾದವನ್ನು ಡೊನಾಲ್ಡ್ ಟ್ರಂಪ್ ಸುತ್ತಲಿನ ಹಲವಾರು ಪ್ರಮುಖ ವ್ಯಕ್ತಿಗಳು ಬೆಂಬಲಿಸಿದ್ದು, ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯ ಯೋಜಕರಾದ ಸ್ಟೀಫನ್ ಮಿಲ್ಲರ್ ಸಹ ಪ್ರತಿಪಾದಿಸಿದ್ದರು.

ಎಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಸೇರಿದಂತೆ ಕೆಲವರು ಎಚ್-1ಬಿ ವೀಸಾ ಯೋಜನೆಯನ್ನು ಶ್ಲಾಘಿಸಿದ್ದು, ಇದು ಜಗತ್ತಿನ ಅತ್ಯುತ್ತಮ ಪ್ರತಿಭೆಗಳನ್ನು ಅಮೆರಿಕಾಗೆ ತರುತ್ತಿದೆ ಎಂದಿದ್ದಾರೆ. ಆದರೆ, ಸೆಪ್ಟೆಂಬರ್ 21ರಂದು ಜಾರಿಗೆ ಬರುವ ಹೊಸ ನಿಯಮಗಳು ಭಾರತೀಯ ಉದ್ಯೋಗಿಗಳ ಮೇಲೆ ಬಹುದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಭಾರತೀಯರು ಪಡೆಯಬಹುದಾದ ಅಮೆರಿಕನ್ ವೀಸಾ ವಿಧಗಳು

ಎಚ್-1ಬಿ ವೀಸಾ: ಕುಶಲ ವೃತ್ತಿಪರರು, ಅದರಲ್ಲೂ ತಂತ್ರಜ್ಞಾನ, ಇಂಜಿನಿಯರಿಂಗ್, ಅಥವಾ ವಿಶೇಷ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ ಈ ವೀಸಾ ಸೂಕ್ತವಾಗಿದೆ. ಸ್ನಾತಕೋತ್ತರ ಪದವಿಯನ್ನು (ಪಿಜಿ) ಪೂರೈಸುವ ಬಹಳಷ್ಟು ವಿದ್ಯಾರ್ಥಿಗಳು ಒಪಿಟಿ (ಆಪ್ಷನಲ್ ಪ್ರ್ಯಾಕ್ಟಿಕಲ್ ಟ್ರೈನಿಂಗ್) ಗಾಗಿ ಅರ್ಜಿ ಸಲ್ಲಿಸುತ್ತಾರೆ. ಬಳಿಕ ಉದ್ಯೋಗದಾತ ಸಂಸ್ಥೆಗಳು ಒದಗಿಸಿದರೆ ಎಚ್-1ಬಿ ವೀಸಾಗೆ ಸಾಗುತ್ತಾರೆ.

ಎಲ್-1 ವೀಸಾ: ಬಹುರಾಷ್ಟ್ರೀಯ ಕಂಪನಿಗಳ ಭಾರತೀಯ ಕಚೇರಿಯಿಂದ ಅಮೆರಿಕಾದ ಕಚೇರಿಗೆ ವರ್ಗಾವಣೆ ಆಗುವ ಉದ್ಯೋಗಿಗಳಿಗೆ ನೀಡುವ ವೀಸಾ.

ಎಫ್-1 ವೀಸಾ: ಅಮೆರಿಕಾದ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಅಥವಾ ತರಬೇತಿ ಕಾರ್ಯಕ್ರಮಗಳಲ್ಲಿ ಪೂರ್ಣಾವಧಿ ವ್ಯಾಸಂಗ ನಡೆಸುವ ವಿದ್ಯಾರ್ಥಿಗಳಿಗೆ ಎಫ್-1 ವೀಸಾ ನೀಡಲಾಗುತ್ತದೆ.

ಜೆ-1 ವೀಸಾ: ಸಂಶೋಧಕರು, ಉಪನ್ಯಾಸಕರು, ಇಂಟರ್ನ್‌ಗಳು, ಅಥವಾ ಸಾಂಸ್ಕೃತಿಕ ವರ್ಗಾವಣೆಯಂತಹ ಅತಿಥಿಗಳಿಗೆ ಜೆ-1 ವೀಸಾ ನೀಡಲಾಗುತ್ತದೆ.

ಬಿ-1/ಬಿ-2 ವೀಸಾ: ಔದ್ಯಮಿಕ ಭೇಟಿಗೆ ಅಮೆರಿಕಾಗೆ ತೆರಳುವವರಿಗೆ ಬಿ-1 ಹಾಗೂ ಪ್ರವಾಸ ಅಥವಾ ವೈದ್ಯಕೀಯ ಉದ್ದೇಶಕ್ಕಾಗಿ ತೆರಳುವವರಿಗೆ ಬಿ-2 ವೀಸಾ ನೀಡಲಾಗುತ್ತದೆ.

ಒ-1 ವೀಸಾ: ವಿಜ್ಞಾನ, ಕಲೆ, ಕ್ರೀಡೆ, ಉದ್ಯಮ ಅಥವಾ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ಹೊಂದಿರುವವರಿಗೆ ನೀಡುವ ವೀಸಾ.

ಇಬಿ-5 ವೀಸಾ: ಉದ್ಯೋಗಗಳನ್ನು ಸೃಷ್ಟಿಸುವ ಅಮೆರಿಕನ್ ಉದ್ಯಮಗಳಲ್ಲಿ ಅಪಾರ ಪ್ರಮಾಣದ ಹಣ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಈ ವೀಸಾ ನೀಡಲಾಗುತ್ತದೆ.

ಎಚ್-4 ವೀಸಾ: ಎಚ್-1ಬಿ ವೀಸಾ ಹೊಂದಿರುವವರ ಮೇಲೆ ಅವಲಂಬಿತರಾಗಿರುವವರಿಗೆ (ಪತಿ/ಪತ್ಜಿ/ಮಕ್ಕಳು) ಅಮೆರಿಕಾದಲ್ಲಿ ವಾಸಿಸಲು ಎಚ್-4 ವೀಸಾ ನೀಡಲಾಗುತ್ತದೆ.

ಅಮೆರಿಕಾದಲ್ಲಿ ವಲಸೆಯ ಕುರಿತ ಚರ್ಚೆ

ಎಚ್-1ಬಿ ವೀಸಾ ಕುರಿತ ಟೀಕೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಅಮೆರಿಕಾದಲ್ಲಿ ನಡೆಯುತ್ತಿರುವ ವಲಸೆ ಕುರಿತ ಚರ್ಚೆಗಳನ್ನು ಗಮನಿಸಬೇಕು.

ಅಮೆರಿಕನ್ ರಾಜಕೀಯದಲ್ಲಿ ವಲಸೆ ಎನ್ನುವುದು ಅತ್ಯಂತ ವಿಭಜನಕಾರಿ ವಿಚಾರವಾಗಿದೆ. ಅಂದರೆ, ವಲಸೆಯ ಕುರಿತು ಜನರು ಅತ್ಯಂತ ಗಂಭೀರವಾದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ, 14.6% ಮತದಾರರು ಚುನಾವಣೆಯಲ್ಲಿ ವಲಸೆ ಅತ್ಯಂತ ಮಹತ್ತರವಾದ ವಿಚಾರ ಎಂದು ಅಭಿಪ್ರಾಯ ಪಟ್ಟಿದ್ದರು. 2012ರಲ್ಲಿ ಕೇವಲ 2.1% ಜನರು ಈ ಭಾವನೆ ಹೊಂದಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ವಲಸೆಯ ಕುರಿತು ಜನರ ಕಳವಳ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎನ್ನುವುದನ್ನು ತೋರಿಸುತ್ತದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ವಲಸೆಯ ವಿರುದ್ಧ ನಡೆಸಿದ ಭಾಷಣಗಳು ಬಹುತೇಕ ಅಮೆರಿಕಾಗೆ ಬರುವ ಕೌಶಲ್ಯ ರಹಿತ ಕಾರ್ಮಿಕರತ್ತ ಗಮನ ಹರಿಸಿದ್ದವು.

ವರ್ಣಭೇದ ಮಾತ್ರವಲ್ಲದೆ, ಬಹಳಷ್ಟು ಅಮೆರಿಕನ್ನರು ವಲಸಿಗರು ಅಮೆರಿಕನ್ನರ ಉದ್ಯೋಗಗಳನ್ನು ಕಸಿದುಕೊಂಡು, ಅವರ ಸಂಬಳವನ್ನು ಅತ್ಯಂತ ಕಡಿಮೆಗೊಳಿಸುತ್ತದೆ ಎಂದು ನಂಬಿದ್ದಾರೆ. ಅಮೆರಿಕನ್ನರ ಈ ಗುಂಪು ಈಗಾಗಲೇ ನಿರುದ್ಯೋಗ, ಕನಿಷ್ಠ ಆದಾಯ, ಹಣದುಬ್ಬರ (ಹೆಚ್ಚುತ್ತಿರುವ ಬೆಲೆಗಳು), ಮನೆಗಳ ಕೊರತೆ ಮತ್ತು ಇತರ ಆರ್ಥಿಕ ಸಮಸ್ಯೆಗಳ ಸುಳಿಗೆ ಸಿಲುಕಿದೆ.

ಅಮೆರಿಕನ್ನರಲ್ಲಿದ್ದ ಈ ಭಾವನೆಗಳನ್ನು ಟ್ರಂಪ್ ತನಗೆ ಬೆಂಬಲವಾಗಿ ಮಾರ್ಪಡಿಸಿಕೊಂಡರು. ವಲಸೆಯ ಪ್ರಮಾಣವನ್ನು ಕಡಿಮೆಗೊಳಿಸಿ, ಅದರಿಂದ ಅಮೆರಿಕನ್ ಉದ್ಯೋಗಿಗಳ ಜೀವನ ಮಟ್ಟವನ್ನು ಸುಧಾರಿಸುವುದಾಗಿ ಟ್ರಂಪ್ ಭರವಸೆ ನೀಡಿದ್ದರು.

ಡೊನಾಲ್ಡ್ ಟ್ರಂಪ್ ಅವರ ತಂಡ ಎಚ್-1ಬಿ ವೀಸಾವನ್ನು ಟೀಕಿಸುತ್ತಿದ್ದು, ಹಿಂದೆ ಮೆಕ್ಸಿಕನ್ನರು ಇದೇ ರೀತಿ ಅಮೆರಿಕನ್ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಈ ಬಾರಿ ಇವರ ಆಕ್ರೋಶಕ್ಕೆ ಗುರಿಯಾಗಿರುವುದು ಅಮೆರಿಕಾದಲ್ಲಿರುವ ಕುಶಲ ವಿದೇಶೀ ಉದ್ಯೋಗಿಗಳಾಗಿದ್ದು, ಅವರು ಹೆಚ್ಚಿನ ಸಂಬಳ ನೀಡುವ ಕೆಲಸಗಳಿಗಾಗಿ ಅಮೆರಿಕಾಗೆ ಆಗಮಿಸಿರುತ್ತಾರೆ.

ಭಾರತೀಯರು ಮತ್ತು ಎಚ್-1ಬಿ ವೀಸಾ

ಭಾರತೀಯರು ಎಚ್-1ಬಿ ವೀಸಾದ ಅತಿದೊಡ್ಡ ಬಳಕೆದಾರರಾಗಿದ್ದು, 2015ರ ಬಳಿಕ ನೀಡಲಾದ ಎಚ್-1ಬಿ ವೀಸಾದ 70% ವೀಸಾಗಳನ್ನು ಭಾರತೀಯರೇ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಚೀನಾ 2018ರ ವೇಳೆ ಕೇವಲ 12-13% ಎಚ್-1ಬಿ ವೀಸಾಗಳನ್ನು ಹೊಂದಿತ್ತು.

ಅಮೆರಿಕಾದ ತಂತ್ರಜ್ಞಾನ ಉದ್ಯೋಗಗಳಲ್ಲಿ ಭಾರತೀಯರ ಹೆಚ್ಚಿನ ಉಪಸ್ಥಿತಿಯನ್ನು ಮಾಗಾ ರಿಪಬ್ಲಿಕನ್ನರು (ಡೊನಾಲ್ಡ್ ಟ್ರಂಪ್ ಅವರ 'ಮೇಕ್ ಅಮೆರಿಕಾ ಗ್ರೇಟ್ ಅಗೇನ್' ಚಳವಳಿಯ ಬೆಂಬಲಿಗರು) ಬಲವಾಗಿ ಟೀಕಿಸುತ್ತಿದ್ದು, ಭಾರತೀಯರು ಅಮೆರಿಕನ್ನರ ಉದ್ಯೋಗಗಳನ್ನು ಕದ್ದು, ಅಮೆರಿಕನ್ನರ ಸಂಬಳಗಳನ್ನು ಕಡಿಮೆಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಚ್-1ಬಿ ವೀಸಾ ಕಾರ್ಯಕ್ರಮ ದುರ್ಬಳಕೆಯಾಗುತ್ತಿದೆ ಎಂದು ಟೀಕಾಕಾರರು ವಾದಿಸುತ್ತಿದ್ದು, ತಂತ್ರಜ್ಞಾನ ಕಂಪನಿಗಳು ಅಮೆರಿಕನ್ನರಿಗಿಂತ ಕಡಿಮೆ ಸಂಬಳಕ್ಕೆ ಕೆಳ ಮತ್ತು ಮಧ್ಯಮ ಹಂತದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದನ್ನು ಬಳಸುತ್ತಿವೆ ಎಂದಿದ್ದಾರೆ. ಎಲಾನ್ ಮಸ್ಕ್ ಅವರಂತಹ ಎಚ್-1ಬಿ ವೀಸಾ ಬೆಂಬಲಿಗರು ಅಮೆರಿಕಾದಲ್ಲಿ ಅತ್ಯುನ್ನತ ಗುಣಮಟ್ಟದ ಇಂಜಿನಿಯರ್‌ಗಳ ಕೊರತೆ ಇದೆ ಎಂದಿದ್ದರೆ, ಟೀಕಾಕಾರರು ಮಸ್ಕ್ ಅಮೆರಿಕನ್ ಉದ್ಯೋಗಿಗಳು ದುಬಾರಿಯಾಗಿದ್ದಾರೆ ಎನ್ನುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

ಈ ಕುರಿತು ಲುಟ್ನಿಕ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರಾಸರಿ ಅಮೆರಿಕನ್ ಉದ್ಯೋಗಿ ವರ್ಷಕ್ಕೆ 75,000 ಡಾಲರ್ (66 ಲಕ್ಷ ರೂಪಾಯಿ) ಸಂಬಳ ಹೊಂದಿದರೆ, ಗ್ರೀನ್ ಕಾರ್ಡ್ ಉದ್ಯೋಗಿಗಳು ಸರಾಸರಿ 66,000 ಡಾಲರ್ (ಅಂದಾಜು 58 ಲಕ್ಷ ರೂಪಾಯಿ) ಸಂಪಾದಿಸುತ್ತಾರೆ. ಲುಟ್ನಿಕ್ ಈ ಅಂತರವನ್ನು ಪ್ರಶ್ನಿಸಿದ್ದು, "ನಾವು ಯಾಕೆ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳನ್ನು ಅಮೆರಿಕಾಗೆ ಕರೆತರುತ್ತಿದ್ದೇವೆ? ಇದು ಒಂದು ರೀತಿಯಲ್ಲಿ ಕೆಳ ಹಂತದಿಂದ ಉದ್ಯೋಗಿಗಳನ್ನು ಆಯ್ಕೆ ಮಾಡಿದಂತಾಗುತ್ತದೆ" ಎಂದಿದ್ದಾರೆ.

ಲುಟ್ನಿಕ್ ಹೇಳಿಕೆಯಲ್ಲೂ ಒಂದಷ್ಟು ಸತ್ಯಾಂಶಗಳಿವೆ. ಯುಸಿಕ್ಸ್ ಮಾಹಿತಿಯ ಪ್ರಕಾರ, 2023ರ ವೇಳೆಗೆ ಎಚ್-1ಬಿ ವೀಸಾ ಹೊಂದಿರುವ ಭಾರತೀಯರ ಪೈಕಿ ಅಂದಾಜು 70% ಜನರು ವಾರ್ಷಿಕ 1 ಲಕ್ಷ ಡಾಲರ್‌ಗೂ (88 ಲಕ್ಷ ರೂಪಾಯಿ) ಕಡಿಮೆ ಸಂಬಳ ಹೊಂದಿದ್ದರು. ಮೇ 2023ರ ವೇಳೆಗೆ ಅಮೆರಿಕನ್ ಐಟಿ ಉದ್ಯೋಗಿಗಳ ಸರಾಸರಿ ಸಂಬಳ 104,420 ಡಾಲರ್ (91.8 ಲಕ್ಷ ರೂಪಾಯಿ) ಆಗಿತ್ತು ಎಂದು ಯುಎಸ್ ಬ್ಯೂರೋ ಆಫ್ ಲೇಬರ್ ಸ್ಟಾಟಿಸ್ಟಿಕ್ಸ್ ಹೇಳಿದೆ.

ಅಂದಾಜು 25% ಎಚ್-1ಬಿ ವೀಸಾ ಹೊಂದಿರುವವರ ಸಂಬಳ 1 ಲಕ್ಷದಿಂದ 1.5 ಲಕ್ಷ ಡಾಲರ್ (88 ಲಕ್ಷದಿಂದ 1.32 ಕೋಟಿ ರೂಪಾಯಿ) ನಡುವೆ ಇದೆ. ಕೇವಲ 5% ಜನರ ಸಂಬಳ ಮಾತ್ರ ವಾರ್ಷಿಕವಾಗಿ 1.5 ಲಕ್ಷ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ಯುನಿಕ್ಸ್ (ಯುಎಸ್ ಸಿಟಿಜನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವಿಸಸ್) ಮಾಹಿತಿ ನೀಡಿದೆ.

ಉದ್ಯಮ ತಜ್ಞರ ಪ್ರಕಾರ, ಅಮೆರಿಕಾದಲ್ಲಿರುವ ಕೌಶಲಗಳ ಕೊರತೆಯನ್ನು ನೀಗಿಸಲು ಎಚ್-1ಬಿ ವೀಸಾ ಅತ್ಯಂತ ಮುಖ್ಯವಾಗಿದ್ದು, ಅವರ ಸಂಬಳ ಮಾರುಕಟ್ಟೆಯನ್ನು ಅವಲಂಬಿಸಿದೆ. ಚೀನಾ ಮತ್ತು ಭಾರತೀಯರು ಜಗತ್ತಿನಾದ್ಯಂತ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಇಂಜಿನಿಯರಿಂಗ್ ಮತ್ತು ಮ್ಯಾತಮ್ಯಾಟಿಕ್ಸ್) ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ತಜ್ಞರ ಪ್ರಕಾರ, ಅಮೆರಿಕಾ ಎದುರಿಸುತ್ತಿರುವ ಕುಶಲ ಉದ್ಯೋಗಿಗಳ ಕೊರತೆಯನ್ನು ನಿಭಾಯಿಸಲು ಎಚ್-1ಬಿ ವೀಸಾ ವ್ಯವಸ್ಥೆ ಬಹಳ ಮುಖ್ಯವಾಗಿದೆ. ಅವರ ಸಂಬಳವನ್ನು ಮಾರುಕಟ್ಟೆಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇನ್ನು ಶಿಕ್ಷಣದ ವಿಚಾರಕ್ಕೆ ಬಂದರೆ, ಚೀನಾ 3.57 ಮಿಲಿಯನ್ ಸ್ಟೆಮ್ ಪದವೀಧರರನ್ನು ಹೊಂದಿದ್ದರೆ, ಭಾರತ 2.55 ಮಿಲಿಯನ್ ಸ್ಟೆಮ್ ಪದವೀಧರರನ್ನು ಪಡೆದಿದೆ. ಆದರೆ, ಅಮೆರಿಕಾ ಕೇವಲ 8.2 ಲಕ್ಷ ಸ್ಟೆಮ್ ಪದವೀಧರರನ್ನು ಪಡೆದಿದೆ. ಇದು ಜಾಗತಿಕವಾಗಿ ಭಾರತ ಮತ್ತು ಚೀನಾದ ಪ್ರತಿಭೆಗಳು ಮೇಲುಗೈ ಸಾಧಿಸುವುದಕ್ಕೆ ಕಾರಣವಾಗಿದೆ.

ಟ್ರಂಪ್ ವಿಭಿನ್ನ ಕಾರ್ಯ ವಿಧಾನ

ಟ್ರಂಪ್ ಆಡಳಿತದ ಬಹಳಷ್ಟು ಜನರು ಎಚ್-1ಬಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ತರುವ ಕುರಿತು ಮಾತನಾಡುತ್ತಾರೆ. ಆದರೆ, ಆ ಬದಲಾವಣೆಗಳೇನು ಎಂಬ ಕುರಿತು ಸಣ್ಣ ಪುಟ್ಟ ಮಾಹಿತಿಗಳಷ್ಟೇ ಲಭ್ಯವಿದೆ.

ಜನವರಿ 8, 2021ರಂದು, ಡೊನಾಲ್ಡ್ ಟ್ರಂಪ್ ಎಚ್-1ಬಿ ವೀಸಾ ಅನುಮತಿಗೆ ಒಂದು ಹೊಸ ನಿಯಮ ಜಾರಿಗೆ ತಂದು, ವಾರ್ಷಿಕ 85,000 ಡಾಲರ್‌ಗಿಂತ ಹೆಚ್ಚಿನ ಸಂಬಳ ಹೊಂದಿರುವವರನ್ನು ಆಯ್ಕೆ ಮಾಡಲು ಯೋಚಿಸಿದ್ದರು. ಆದರೆ, ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಈ ನಿಯಮ ಜಾರಿಗೆ ಬರಲಿಲ್ಲ.

ಸರಳವಾಗಿ ಹೇಳುವುದಾದರೆ, ಈ ನಿಯಮ ಕಡಿಮೆ ಸಂಬಳ ಹೊಂದಿರುವವರಿಗೆ ಎಚ್-1ಬಿ ವೀಸಾ ನಿರಾಕರಿಸುವ ಗುರಿ ಹೊಂದಿತ್ತು. ಯುಸಿಕ್ಸ್ ಹೆಚ್ಚಿನ ಸಂಬಳ ಹೊಂದಿರುವವರಿಗೆ ಆದ್ಯತೆ ನೀಡಿ, ಅವರ ಅರ್ಜಿಯನ್ನು ಮಾನ್ಯಗೊಳಿಸುವ ಯೋಜನೆ ಹೊಂದಿತ್ತು. ಇದು ಮೊದಲು ಅತ್ಯಧಿಕ ಸಂಬಳ ಹಂತದಿಂದ (ನಾಲ್ಕನೇ ಹಂತ) ಆರಂಭಿಸಿ, ಬಳಿಕ ಮೂರು, ಎರಡು ಹಾಗೂ ಕೊನೆಗೆ ಒಂದನೇ ಹಂತದ ಅರ್ಜಿದಾರರನ್ನು ಆಯ್ಕೆ ಮಾಡುತ್ತಿತ್ತು. ಅಂದರೆ, ಹೆಚ್ಚಿನ ಸಂಬಳದ ಆಯ್ಕೆ ಹೊಂದಿರುವವರಿಗೆ ವೀಸಾ ಲಭಿಸುವ ಸಾಧ್ಯತೆಗಳು ಹೆಚ್ಚಿದ್ದವು. ಇದೇ ವೇಳೆ, ಕಡಿಮೆ ಸಂಬಳ ಹೊಂದಿದ್ದವರು ಆಯ್ಕೆಯಾಗುವ ಸಾಧ್ಯತೆಗಳು ಕಡಿಮೆ ಇದ್ದವು.

ಫೋರ್ಬ್ಸ್ ವರದಿಯ ಪ್ರಕಾರ, ಕಂಪನಿಗಳು ಸಾಮಾನ್ಯವಾಗಿ ಮೂರನೇ ಹಂತ (ಅನುಭವಿಗಳು) ಮತ್ತು ನಾಲ್ಕನೇ ಹಂತದ (ಸಂಪೂರ್ಣ ಕೌಶಲ ಹೊಂದಿದವರು) ಉದ್ಯೋಗಿಗಳಿಗೆ ಹೆಚ್ಚಿನ ವೇತನ ಪಾವತಿಸುತ್ತವೆ. ಹೊಸ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ನೂತನ ಉದ್ಯೋಗಿಗಳು ಇನ್ನೂ ಒಂದನೇ ಮತ್ತು ಎರಡನೇ ಹಂತದ ಸಂಬಳ ಪಡೆಯುತ್ತಾರೆ.

2021ರಲ್ಲಿ ನೀಡಲಾದ ಒಂದು ಪ್ರಸ್ತಾವನೆ ಮೊದಲನೇ ಹಂತದ (ಅತ್ಯಂತ ಕನಿಷ್ಠ ಸಂಬಳ) ಉದ್ಯೋಗಿಗಳಿಗೆ ಎಚ್-1ಬಿ ವೀಸಾ ನಿರಾಕರಿಸಬಹುದು ಎಂದಿತ್ತು. ಎರಡನೇ ಹಂತದ ಉದ್ಯೋಗಿಗಳಲ್ಲಿ ಕೇವಲ 20% ಜನರನ್ನು (20,000 ವೀಸಾಗಳು) ಆಧುನಿಕ ಡಿಗ್ರಿ ಕೋಟಾದಡಿ ಆಯ್ಕೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿತ್ತು. ಇನ್ನು ಅಂದಾಜು 75% ಸಾಮಾನ್ಯ ಕೋಟಾ (65,000 ವೀಸಾಗಳು) ಉದ್ಯೋಗಿಗಳನ್ನು ಆರಿಸಬಹುದು ಎಂದಿತ್ತು. ಒಟ್ಟಾರೆಯಾಗಿ, ಇದು ಎರಡನೇ ಹಂತದ ಉದ್ಯೋಗಿಗಳು ಆಯ್ಕೆಯಾಗುವ ಸಾಧ್ಯತೆಯನ್ನು 50%ಗೆ ಇಳಿಸಿತ್ತು.

ಈಗಿನ ಹೊಸ ನಿಯಮಗಳು 2021ರ ಟ್ರಂಪ್ ಯೋಜನೆಯಂತೆ ಇರಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೂ ಇಂತಹ ಯಾವುದೇ ಕ್ರಮಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ನೂತನ ಉದ್ಯೋಗಿಗಳಿಗೆ, ಕಡಿಮೆ ಸಂಬಳದ ಉದ್ಯೋಗಿಗಳಿಗೆ ತೊಂದರೆ ಉಂಟುಮಾಡಲಿದೆ.

ಟ್ರಂಪ್ ಈಗ 'ಗೋಲ್ಡನ್ ಕಾರ್ಡ್' ಎಂಬ ನೂತನ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದು ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಅಂದಾಜು 1 ಮಿಲಿಯನ್ ಡಾಲರ್ (8.8 ಕೋಟಿ ರೂಪಾಯಿ) ಅಥವಾ ಗ್ರಾಮೀಣ, ಬಡ ಪ್ರದೇಶಗಳಲ್ಲಿ 8 ಲಕ್ಷ ಡಾಲರ್ (8 ಕೋಟಿ ರೂಪಾಯಿ) ಹೂಡಿಕೆ ಮಾಡುವ ಶ್ರೀಮಂತ ಜನರಿಗೆ ಅಮೆರಿಕಾದಲ್ಲಿ ವಾಸ ಮತ್ತು ಪೌರತ್ವ ನೀಡುವ ಗುರಿ ಹೊಂದಿದೆ. ಇಂತಹ ಕ್ರಮ ಅಮೆರಿಕಾಗೆ ಅತ್ಯುತ್ತಮ ಜನರನ್ನು ಆರಿಸುವ ಅವಕಾಶ ನೀಡಲಿದೆ ಎಂದು ಲುಟ್ನಿಕ್ ಟ್ರಂಪ್ ಪ್ರಸ್ತಾವನೆಯನ್ನು ಸಮರ್ಥಸಿದ್ದಾರೆ.

ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ಈ ಗೋಲ್ಡನ್ ಕಾರ್ಡಿಗೆ ಅಪಾರ ಬೇಡಿಕೆ ಇದ್ದು, ಈಗಾಗಲೇ 2.5 ಲಕ್ಷ ಜನರು ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ. ಇದರಿಂದ ಅಮೆರಿಕಾಗೆ 1.25 ಟ್ರಿಲಿಯನ್ ಡಾಲರ್ (110 ಲಕ್ಷ ಕೋಟಿ ರೂಪಾಯಿ) ಭಾರೀ ಹೂಡಿಕೆ ಲಭಿಸಲಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಿಹಾರ ಆಯ್ತು, ಈಗ ದೇಶಾದ್ಯಂತ SIR: ಸೆ. 30ರೊಳಗೆ ಸನ್ನದ್ದರಾಗಿ, ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗದ ಸೂಚನೆ

Nobel Prize: ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ ಕೆಲಸ ಮಾಡಿದ್ದೀನಿ, ನನಗೆ 'ನೊಬೆಲ್ ಶಾಂತಿ' ಪ್ರಶಸ್ತಿ ಬರಲೇಬೇಕು: ಡೊನಾಲ್ಡ್ ಟ್ರಂಪ್!

PM Modi address: ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಭಾರತದಲ್ಲಿ ನಿರರ್ಗಳವಾಗಿ 'ಫ್ರೆಂಚ್' ಮಾತನಾಡುವ ಆಟೋ ಡ್ರೈವರ್; ದಂಗಾದ ಅಮೆರಿಕ ಪ್ರಜೆ! VIDEO ವೈರಲ್

ಕರಾವಳಿ-ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆಯಾದವರೆಲ್ಲಾ ಹಿಂದುಳಿದ ಜಾತಿಯವರೇ: ಸಿಎಂ ಸಿದ್ದರಾಮಯ್ಯ

SCROLL FOR NEXT