ಅಂಕಣಗಳು

ಆಳ ಸಮುದ್ರದ ಆಶಾಕಿರಣ: ಐಎನ್ಎಸ್ ನಿಪುಣ್

ನಿಪುಣ್ 119 ಮೀಟರ್ ಉದ್ದ ಮತ್ತು 22.8 ಮೀಟರ್ ಅಗಲವಿದ್ದು, ಅಂದಾಜು 10,500 ಟನ್ ತೂಕ ಹೊಂದಿದೆ. ನೌಕೆಯ ಗರಿಷ್ಠ ವೇಗ ಅಂದಾಜು 18 ನಾಟ್ ಇದೆ. ಆದರೆ, ಈ ನೌಕೆಯ ನೈಜ ಸಾಮರ್ಥ್ಯ ಇರುವುದು ವೇಗದಲ್ಲಲ್ಲ.

ಆಗಸ್ಟ್ 31ರಂದು, ಮುಂಬೈನ ನೌಕಾಪಡೆಯ ಹಡಗುಕಟ್ಟೆಯಲ್ಲಿ (ಡಾಕ್‌ಯಾರ್ಡ್) ಭಾರತೀಯ ನೌಕಾ ಸೇನೆ ಒಂದು ನೂತನ ನೌಕೆಯನ್ನು ತನ್ನ ಬಳಗಕ್ಕೆ ಅಧಿಕೃತವಾಗಿ ಸ್ವಾಗತಿಸಲಿದೆ. ನೌಕೆಯನ್ನು ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ನಿಪುಣ್ ನೌಕಾಪಡೆಯ ಎರಡನೇ ಡೈವಿಂಗ್ ಸಹಾಯಕ ನೌಕೆಯಾಗಿದೆ. ನಿಪುಣ್ ಎನ್ನುವ ಪದ ಸಂಸ್ಕೃತ ಮೂಲದ್ದಾಗಿದ್ದು, ಕಷ್ಟಕರ ಕೆಲಸದಲ್ಲೂ ಕೌಶಲ ಹೊಂದಿ, ನಿಷ್ಣಾತನಾಗಿರುವಾತ ಎನ್ನುವ ಅರ್ಥವನ್ನು ಹೊಂದಿದೆ. ಈ ನೌಕೆ ಮಾಡುವ ಕೆಲಸಗಳೇನು ಎನ್ನುವುದನ್ನು ಅರ್ಥ ಮಾಡಿಕೊಂಡರೆ, ಈ ಹೆಸರು ನೌಕೆಗೆ ಎಷ್ಟು ಸೂಕ್ತವಾಗಿದೆ ಎನ್ನುವುದು ನಮಗೆ ಅರಿವಾಗುತ್ತದೆ.

ನಿಪುಣ್ 119 ಮೀಟರ್ ಉದ್ದ ಮತ್ತು 22.8 ಮೀಟರ್ ಅಗಲವಿದ್ದು, ಅಂದಾಜು 10,500 ಟನ್ ತೂಕ ಹೊಂದಿದೆ. ನೌಕೆಯ ಗರಿಷ್ಠ ವೇಗ ಅಂದಾಜು 18 ನಾಟ್ ಇದೆ. ಆದರೆ, ಈ ನೌಕೆಯ ನೈಜ ಸಾಮರ್ಥ್ಯ ಇರುವುದು ವೇಗದಲ್ಲಲ್ಲ. ನಿಪುಣ್ ನೌಕೆಯ ನೈಜ ಶಕ್ತಿ ಅದರ ತಾಳ್ಮೆ. ನಿಪುಣ್ ಸುದೀರ್ಘ ಕಾಲದ ತನಕ ಸಮುದ್ರದಲ್ಲಿ ಇರಬಲ್ಲದಾಗಿದ್ದು, ನೀರಿನಾಳದಲ್ಲಿ ಅತ್ಯಂತ ವಿಶೇಷವಾದ ಕಾರ್ಯವನ್ನು ಕೈಗೊಳ್ಳುತ್ತದೆ. ಜಗತ್ತಿನಲ್ಲಿ ಈ ಕಾರ್ಯಕ್ಕಾಗಿ ನಿರ್ಮಾಣಗೊಂಡ ನೌಕೆಗಳು ಬಹಳಷ್ಟು ಕನಿಷ್ಠ ಸಂಖ್ಯೆಯಲ್ಲಿವೆ.

ನಿಪುಣ್ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲು ಸಮುದ್ರವನ್ನು ಒಂದು ಗಾಢವಾದ ಪ್ರಪಂಚವಾಗಿದ್ದು, ಇಲ್ಲಿ ನೀರು ಹೆಚ್ಚಿನ ಒತ್ತಡದೊಡನೆ ಎಲ್ಲವನ್ನೂ ಕೆಳ ತಳ್ಳುತ್ತದೆ ಎಂದುಕೊಳ್ಳಿ. ಸಾಮಾನ್ಯವಾಗಿ ಡೈವಿಂಗ್ ನಡೆಸುವುದು ಎಂದರೆ, ಕೆಲ ಕಾಲ ಉಸಿರು ಬಿಗಿ ಹಿಡಿದು, ನೀರಿನಾಳಕ್ಕೆ ಇಳಿಯುವುದಾಗಿದೆ. ಕೆಲ ಸಮಯದ ಬಳಿಕ, ಮುಳುಗಿದಾತ ನೀರಿನ ಮೇಲಕ್ಕೆ ಬಂದು, ಕೊಂಚ ವಿಶ್ರಾಂತಿ ಪಡೆದು, ಮತ್ತೆ ನೀರಿನಾಳಕ್ಕೆ ಇಳಿಯಬೇಕು. ಇದು ಹಲವು ಗಂಟೆಗಳನ್ನು ವ್ಯರ್ಥ ಮಾಡಿ, ದೇಹಕ್ಕೆ ಅಪಾರ ಒತ್ತಡ ಸೃಷ್ಟಿಸುತ್ತದೆ. ಆದರೆ, ಸ್ಯಾಚುರೇಶನ್ ಡೈವಿಂಗ್ ಕೊಂಚ ಭಿನ್ನವಾಗಿ ಕಾರ್ಯಾಚರಿಸುತ್ತದೆ. ನಿಪುಣ್ ನೌಕೆಯಲ್ಲಿ ಡೈವರ್‌ಗಳು ಒಂದು ವಿಶೇಷವಾದ ಒತ್ತಡ ಹೊಂದಿರುವ ಚೇಂಬರ್ ಒಳಗೆ ಇರುತ್ತಾರೆ. ಇದರ ಒಳಗಿರುವ ಗಾಳಿಯ ಒತ್ತಡ ಸಮುದ್ರದ ಒಳಗೆ ಅವರು ಕಾರ್ಯಾಚರಿಸುವ ಪ್ರಮಾಣದ ಒತ್ತಡಕ್ಕೆ ಸಮನಾಗಿರುತ್ತದೆ. ಆದ್ದರಿಂದ ದೇಹವೂ ಆ ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಈ ಒತ್ತಡ ಸಹಿತ ಜಾಗದಿಂದ ಅವರು ಹೊರ ತೆರಳಿ, ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಇದರಿಂದ ಅವರ ಮೇಲೆ ನೀರಿನೊಳಗೆ ಹೊರಗೆ ತೆರಳುವ ಕಷ್ಟ ನಿವಾರಣೆಯಾಗುತ್ತದೆ. ಅವರು ನೀರಿನಾಳದಲ್ಲಿ ನೌಕೆಗಳ ಅವಶೇಷಗಳನ್ನು ಪರಿಶೀಲಿಸಬಹುದು, ನೀರಿನಾಳದ ವ್ಯವಸ್ಥೆಗಳನ್ನು ದುರಸ್ತಿಗೊಳಿಸಬಹುದು. ಕೆಲವೇ ಗಂಟೆಗಳ ಬದಲು, ದಿನಗಳ ಕಾಲ ಕೆಲಸ ನಡೆಸಬಹುದು.

ನಿಪುಣ್ ಸರಳ ಏರ್ ಡೈವಿಂಗ್ ಮತ್ತು ಹೀಲಿಯಕ್ಸ್ ಡೈವಿಂಗ್ ಎಂದು ಕರೆಯಲ್ಪಡುವ ಮಿಶ್ರಿತ ಗ್ಯಾಸ್ ಡೈವಿಂಗ್ ಅನ್ನು ಬೆಂಬಲಿಸುತ್ತದೆ. ಇಲ್ಲಿ ಹೀಲಿಯಂ ಅನಿಲವನ್ನು ಆಮ್ಲಜನಕದೊಡನೆ ಬೆರೆಸಲಾಗುತ್ತದೆ. ಏಕೆಂದರೆ, ಇಂತಹ ಭಾರೀ ಆಳದಲ್ಲಿ ಸಾಮಾನ್ಯ ಗಾಳಿಯನ್ನು ಉಸಿರಾಡುವುದು ಡೈವರ್‌ಗೆ ಗೊಂದಲ ಮೂಡಿಸಿ, ಆತನಿಗೆ ಹಾನಿ ಉಂಟುಮಾಡುತ್ತದೆ. ಆದರೆ ಆಮ್ಲಜನಕದೊಡನೆ ಹೀಲಿಯಂ ಬೆರೆತಾಗ, ಅವರು ಸುರಕ್ಷಿತವಾಗಿ ಆಳಕ್ಕೆ ಇಳಿಯಬಲ್ಲರು. ಈ ವ್ಯವಸ್ಥೆಗಳು ಜೊತೆಯಾಗಿ, ನೌಕಾಪಡೆಗೆ ವಿವಿಧ ಆಳ ಮತ್ತು ಕಾರ್ಯಗಳಿಗೆ ಸೂಕ್ತವಾಗುವಂತೆ ವಿಶಾಲ ಆಯ್ಕೆಯ ಡೈವಿಂಗ್ ಸೌಲಭ್ಯಗಳನ್ನು ಒದಗಿಸುತ್ತವೆ.

ನಿಪುಣ್ ಕಾರ್ಯಗಳು ಕೇವಲ ಮಾನವ ಡೈವರ್‌ಗಳಿಗೆ ಮಾತ್ರವೇ ಸೀಮಿತವಲ್ಲ. ನಿಪುಣ್ ರಿಮೋಟ್ ಚಾಲಿತ ವಾಹನಗಳು ಅಥವಾ ಆರ್‌ಒವಿಗಳನ್ನು ಹೊಂದಿದೆ. ಇವು ನೌಕೆಯಿಂದ ನಿಯಂತ್ರಿಸಬಹುದಾದ ನೀರಿನಾಳದಲ್ಲಿ ಕಾರ್ಯಾಚರಿಸುವ ರೋಬಾಟ್‌ಗಳಾಗಿದ್ದು, ಕ್ಯಾಮರಾ ಮತ್ತು ಉಪಕರಣಗಳನ್ನು ಹೊಂದಿವೆ. ಎಲ್ಲಿ ನೀರು ಅತ್ಯಂತ ಗಾಢ, ಅತ್ಯಂತ ತಂಪು ಅಥವಾ ಅತ್ಯಂತ ಅಪಾಯಕಾರಿಯಾಗಿದೆಯೋ, ಅಲ್ಲಿಗೆ ಮೊದಲು ಆರ್‌ಒವಿಯನ್ನು ಕಳುಹಿಸಲಾಗುತ್ತದೆ. ಅದು ಡೈವರ್‌ಗಳಿಗೆ ಬಹಳ ಸನಿಹದಲ್ಲಿ ಉಳಿದು, ನೇರ ಪ್ರಸಾರದ ಚಿತ್ರಣವನ್ನು ರವಾನಿಸಿ, ರಕ್ಷಣೆಗೆ ನೆರವಾಗುತ್ತದೆ. ನೌಕೆಯಲ್ಲಿರುವ ಅಧಿಕಾರಿಗಳು ವಿವರಿಸುವಂತೆ, ಆರ್‌ಒವಿ ಡೈವರ್‌ಗಳ ಜೊತೆಗೂ ಕಾರ್ಯಾಚರಿಸಬಲ್ಲದು, ಅಥವಾ ಸುಮ್ಮನೆ ಅವರ ಮೇಲೆ ಕಣ್ಣಿಟ್ಟಿರಬಲ್ಲದು. ಈ ಹೆಚ್ಚುವರಿ ಕಣ್ಣುಗಳು ಒಟ್ಟಾರೆ ಕಾರ್ಯಾಚರಣೆಯನ್ನು ಹೆಚ್ಚು ಸುರಕ್ಷಿತವಾಗಿಸುತ್ತವೆ.

ನಿಪುಣ್ ಅನ್ನು ಡೀಪ್ ಸಬ್‌ಮರ್ಜನ್ಸ್ ರೆಸ್ಕ್ಯೂ ವೆಹಿಕಲ್‌ಗೆ ಮಾತೃ ಹಡಗಿನಂತೆ ನಿರ್ಮಿಸಲಾಗಿದೆ. ಯಾವುದಾದರೂ ಸಬ್‌ಮರೀನ್ ಎಂದಾದರೂ ಸಮುದ್ರದ ತಳದಲ್ಲಿ ಸಮಸ್ಯೆಗೆ ಸಿಲುಕಿದರೆ, ಈ ಸಣ್ಣದಾದ ರಕ್ಷಣಾ ನೌಕೆಯನ್ನು ನಿಪುಣ್‌ನಿಂದ ಕೆಳಗಿಳಿಸಿ, ನಾವಿಕರನ್ನು ರಕ್ಷಿಸಿ ಹೊರತರಲಾಗುತ್ತದೆ. ಇಂತಹ ಸಾಮರ್ಥ್ಯ ಅತ್ಯಂತ ಅಪರೂಪ ಮತ್ತು ಮಹತ್ತರವಾಗಿದೆ. ಈ ಕಾರಣದಿಂದಲೇ ನಿಪುಣ್ ವರ್ಗದ ನೌಕೆಯ ಖರೀದಿಗೆ ಆದೇಶ ನೀಡಲಾಗಿತ್ತು.

ನೀರಿನ ಮೇಲ್ಭಾಗದಲ್ಲಿ, ನಿಪುಣ್ ಒಂದು ಹೆಲಿಕಾಪ್ಟರ್ ಡೆಕ್ ಹೊಂದಿದೆ. ಸೂಕ್ತವಾದ ನೌಕಾಪಡೆಯ ಹೆಲಿಕಾಪ್ಟರ್‌ಗಳು ಅದರ ಮೇಲೆ ಲ್ಯಾಂಡಿಂಗ್ ನಡೆಸಿ, ಜನರನ್ನು ಸಾಗಿಸಬಹುದು, ವಸ್ತುಗಳನ್ನು ತರಬಹುದು, ಅಥವಾ ಗಾಯಗೊಂಡ ವ್ಯಕ್ತಿಗಳನ್ನು ಕ್ಷಿಪ್ರವಾಗಿ ದಡಕ್ಕೆ ಒಯ್ಯಬಹುದು. ನೌಕೆಯಲ್ಲಿ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇದು ಎಂಟು ಹಾಸಿಗೆಗಳ ಆರೋಗ್ಯ ವಿಭಾಗ ಹೊಂದಿದ್ದು, ಭೂಮಿಯಲ್ಲಿರುವ ವೈದ್ಯರು ಸಮುದ್ರದಲ್ಲಿರುವ ತಂಡಕ್ಕೆ ಮಾರ್ಗದರ್ಶನ ನೀಡುವ ಸಲುವಾಗಿ ಟೆಲಿಮೆಡಿಸಿನ್ ಲಿಂಕ್‌ಗಳನ್ನು ಹೊಂದಿದೆ. ಇದು ಒಂದು ಶಸ್ತ್ರಚಿಕಿತ್ಸಾ ಕೊಠಡಿಯನ್ನೂ ಒಳಗೊಂಡಿದೆ. ಆಳ ಸಮುದ್ರದ ಕಾರ್ಯಗಳು ಯಾವ ಕ್ಷಣದಲ್ಲಿ ಬೇಕಾದರೂ ತಪ್ಪಾಗಬಹುದು. ನೌಕೆಯ ಮೇಲೆ ಕಾರ್ಯಾಚರಿಸುವ ಆಸ್ಪತ್ರೆಯನ್ನು ಹೊಂದುವುದರಿಂದ ಜೀವ ರಕ್ಷಣೆಗೆ ಸುಲಭವಾಗುತ್ತದೆ.

ನಿಪುಣ್ ಕೇವಲ ಇನ್ನೊಂದು ನೌಕಾಪಡೆಯ ಹಡಗು ಮಾತ್ರವಲ್ಲ. ಇದು ಮುಳುಗುಗಾರರು, ರೋಬಾಟ್‌ಗಳು, ಕ್ಯಾಮರಾಗಳು, ವೈದ್ಯಕೀಯ ಸೇವೆ, ಮತ್ತು ರಕ್ಷಣಾ ವ್ಯವಸ್ಥೆಗಳು ಎಲ್ಲವನ್ನೂ ಒಂದೇ ಭಾರತೀಯ ನಿರ್ಮಾಣದ ನೌಕೆಗೆ ಒದಗಿಸುತ್ತದೆ. ನಿಪುಣ್ ಬಹುತೇಕ ಮುಕ್ಕಾಲು ಭಾಗ ದೇಶೀಯ ನಿರ್ಮಾಣದ ಭಾಗಗಳನ್ನೇ ಹೊಂದಿದೆ. ಇದು ನೌಕಾಪಡೆಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಭಾರತೀಯ ಯಾರ್ಡ್‌ಗಳು ಈಗ ಕೆಲವೇ ದೇಶಗಳ ಬಳಿ ಇರುವ ಅತ್ಯಂತ ವಿಶಿಷ್ಟವಾದ ನೌಕೆಗಳನ್ನೂ ದೇಶೀಯವಾಗಿ ವಿನ್ಯಾಸಗೊಳಿಸಿ, ನಿರ್ಮಿಸಬಲ್ಲವು ಎನ್ನುವುದನ್ನು ತೋರಿಸಿದೆ. ಈ ನೌಕೆ ಪರಿಶೀಲನೆ, ದುರಸ್ತಿ ನಡೆಸಿ, ಎಲ್ಲವನ್ನೂ ಗಮನಿಸಿ, ಅವಶ್ಯಕತೆ ಬಿದ್ದರೆ ತೊಂದರೆಗೊಳಗಾದವರನ್ನು ರಕ್ಷಿಸುತ್ತದೆ. ಈ ಕಾರಣದಿಂದ ನೌಕೆಯ ಹೆಸರು ನಿಜಕ್ಕೂ ಅನ್ವರ್ಥವಾಗಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?

Hit And Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ