ಇಂದಿನ ವೇಗದ ಬದುಕಿನಲ್ಲಿ ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಸಂಗೀತವು ಕೇವಲ ಮನರಂಜನೆಯ ಸಾಧನವಾಗಿಯೇ ಉಳಿಯದೇ ಚಿಕಿತ್ಸೆಯ ಪರಿಣಾಮಕಾರಿ ಮಾಧ್ಯಮವಾಗಿಯೂ ಗಮನ ಸೆಳೆಯುತ್ತಿದೆ. ಜನರ ಮನಸ್ಸು, ಭಾವನೆಗಳು ಮತ್ತು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಂಗೀತ ಚಿಕಿತ್ಸೆಯನ್ನು (ಮ್ಯೂಸಿಕ್ ಥೆರಪಿ) ಇಂದು ವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಪೂರಕ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ. ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಿದ ಸಂಗೀತವು ಒತ್ತಡವನ್ನು ಕಡಿಮೆ ಮಾಡುವುದು, ಮನಸ್ಸನ್ನು ಶಾಂತಗೊಳಿಸುವುದು, ನೋವು ನಿವಾರಣೆಗೆ ನೆರವಾಗುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸಂಗೀತ ಚಿಕಿತ್ಸೆ ಅಥವಾ ‘ಮ್ಯೂಸಿಕ್ ಥೆರಪಿ’ ಎಂಬುದು ಕೇವಲ ಸಂಗೀತವನ್ನು ಆಲಿಸುವುದಲ್ಲ; ಅದೊಂದು ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ಚಿಕಿತ್ಸಾ ಪದ್ಧತಿ. ಮಾನವನ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಗೀತವನ್ನು ಒಂದು ಪ್ರಬಲ ಸಾಧನವಾಗಿ ಇಲ್ಲಿ ಬಳಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ರಾಗಗಳಿಗೆ ರೋಗವನ್ನು ಗುಣಪಡಿಸುವ ಶಕ್ತಿ ಇದೆ ಎಂದು ನಂಬಲಾಗಿತ್ತು. ಇಂದು ಅದೇ ನಂಬಿಕೆಯನ್ನು ಆಧುನಿಕ ವೈದ್ಯಕೀಯ ವಿಜ್ಞಾನವು ದೃಢಪಡಿಸುತ್ತಿದೆ.
ಸಂಗೀತ ಚಿಕಿತ್ಸೆಯ ಮಹತ್ವವು ನಮ್ಮ ಮೆದುಳಿನ ಕಾರ್ಯವೈಖರಿಯಲ್ಲಿದೆ. ನಾವು ಸಂಗೀತವನ್ನು ಕೇಳಿದಾಗ ನಮ್ಮ ಮೆದುಳು ಡೋಪಮೈನ್‌ನಂತಹ ‘ಸಂತೋಷದ ಹಾರ್ಮೋನುಗಳನ್ನು’ ಬಿಡುಗಡೆ ಮಾಡುತ್ತದೆ. ಇದು ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವವರಿಗೆ ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ವಿಶೇಷವಾಗಿ ಇಂದಿನ ವೇಗದ ಜೀವನಶೈಲಿಯಲ್ಲಿ, ಮಾನಸಿಕ ಒತ್ತಡವು ಅನೇಕ ದೈಹಿಕ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಸಂಗೀತವು ಮನಸ್ಸನ್ನು ಶಾಂತಗೊಳಿಸಿ, ನರಮಂಡಲದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಿಗೆ, ನಿದ್ರಾಹೀನತೆಯಿಂದ ಬಳಲುವವರಿಗೆ ಮತ್ತು ದೀರ್ಘಕಾಲದ ನೋವುಗಳನ್ನು ಅನುಭವಿಸುವವರಿಗೆ ಸಂಗೀತ ಚಿಕಿತ್ಸೆಯು ನೆರವಾಗುತ್ತದೆ.
ಸಂಗೀತ ಚಿಕಿತ್ಸೆಯನ್ನು ಬಳಸುವ ಕ್ರಮವು ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಪ್ರಮಾಣೀಕೃತ ಸಂಗೀತ ಚಿಕಿತ್ಸಕರು ರೋಗಿಯ ಮಾನಸಿಕ ಸ್ಥಿತಿಯನ್ನು ಗಮನಿಸಿ ಶಾಂತಿಯುತ ರಾಗಗಳನ್ನು ಆಯ್ಕೆ ಮಾಡುತ್ತಾರೆ. ಕೇವಲ ಸಂಗೀತವನ್ನು ಕೇಳಿಸುವುದು ಮಾತ್ರವಲ್ಲದೆ, ರೋಗಿಗಳನ್ನು ಹಾಡಲು ಅಥವಾ ಸಂಗೀತ ವಾದ್ಯಗಳನ್ನು ನುಡಿಸಲು ಪ್ರೇರೇಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಚಲನಾ ಕೌಶಲ್ಯಗಳು ಸುಧಾರಿಸುತ್ತವೆ. ಉದಾಹರಣೆಗೆ ಪಾರ್ಕಿನ್ಸನ್ ಅಥವಾ ಆಲ್ಝೈಮರ್ಸ್ ರೋಗಿಗಳಲ್ಲಿ ನೆನಪಿನ ಶಕ್ತಿಯನ್ನು ಮರುಕಳಿಸಲು ಹಳೆಯ ನೆನಪಿನ ಹಾಡುಗಳು ಒಂದು ಸೇತುವೆಯಂತೆ ಕೆಲಸ ಮಾಡುತ್ತವೆ. ಮಾತನಾಡಲು ಕಷ್ಟಪಡುವ ಮಕ್ಕಳಿಗೆ ಸಂಗೀತದ ಮೂಲಕ ಸಂವಹನ ನಡೆಸುವುದನ್ನು ಕಲಿಸಲಾಗುತ್ತದೆ.
ಸಂಗೀತ ಚಿಕಿತ್ಸೆಯು ಯಾವುದೇ ಅಡ್ಡಪರಿಣಾಮಗಳಿಲ್ಲದ ಒಂದು ನೈಸರ್ಗಿಕ ಚಿಕಿತ್ಸಾ ವಿಧಾನವಾಗಿದೆ. ಯಾವುದೇ ಮಾತ್ರೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ವ್ಯಕ್ತಿಯ ಆಂತರಿಕ ಲಯವನ್ನು ಸರಿಪಡಿಸುವ ಶಕ್ತಿ ಇದಕ್ಕಿದೆ. ಇದು ನಮ್ಮ ಹೃದಯ ಬಡಿತವನ್ನು ಸ್ಥಿರಗೊಳಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಸಂಗೀತವು ದೇಹದ ನೋವನ್ನು ಕಡಿಮೆ ಮಾಡುವ ಮದ್ದು ಮಾತ್ರವಲ್ಲ, ಅದು ಆತ್ಮಕ್ಕೆ ಸಿಗುವ ಸಾಂತ್ವನವೂ ಹೌದು. ಆಧುನಿಕ ವೈದ್ಯಕೀಯ ವಿಜ್ಞಾನ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವಾಗ ಸಂಗೀತ ಚಿಕಿತ್ಸೆಯು ಮಾನವೀಯ ಸ್ಪರ್ಶದೊಂದಿಗೆ ಗುಣಪಡಿಸುವ ಕಲೆಗೆ ಮತ್ತೊಮ್ಮೆ ಒತ್ತು ನೀಡುತ್ತಿದೆ.
ನಮ್ಮ ಜೀವನದಲ್ಲಿ ಸಂಗೀತವು ಒಂದು ಅವಿಭಾಜ್ಯ ಅಂಗವಾಗಬೇಕು. ಅಸ್ವಸ್ಥರಾದಾಗ ಮಾತ್ರವಲ್ಲದೆ, ದಿನನಿತ್ಯದ ಒತ್ತಡಗಳನ್ನು ನಿಭಾಯಿಸಲು ಸಂಗೀತವನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದು. ಮನಸ್ಸನ್ನು ಶಾಂತಗೊಳಿಸಲು ಸಂಗೀತ ಒಂದು ಉತ್ತಮ ದಾರಿ. ಸಂಗೀತದ ಪ್ರತಿಯೊಂದು ಶ್ರುತಿಯೂ ರೋಗಿಯ ಮನಸ್ಸಿನ ನೋವನ್ನು ದೂರಮಾಡಿ ಬದುಕಿನ ಕಡೆಗೆ ಹೊಸ ಭರವಸೆಯನ್ನು ಮೂಡಿಸುತ್ತದೆ. ನಾವು ಸಂಗೀತವನ್ನು ಕೇವಲ ಆಲಿಸುವುದಷ್ಟೇ ಅಲ್ಲ, ಅದನ್ನು ಅನುಭವಿಸಿ, ಆರೋಗ್ಯದ ಭಾಗವನ್ನಾಗಿ ಮಾಡಿಕೊಂಡಾಗ, ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಆರೋಗ್ಯವಂತರಾಗಲು ಸಾಧ್ಯ. ಸಂಗೀತದ ಲಯದಲ್ಲಿ ಬದುಕಿನ ಲಯವನ್ನು ಹುಡುಕುವುದೇ ಈ ಚಿಕಿತ್ಸೆಯ ನಿಜವಾದ ಉದ್ದೇಶ ಮತ್ತು ಯಶಸ್ಸು.
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪ್ರತಿಯೊಂದು ರಾಗವೂ ವಿಶಿಷ್ಟ ಭಾವನೆಗಳನ್ನು ಮೂಡಿಸುವ ಸಾಮರ್ಥ್ಯ ಹೊಂದಿದೆ. ಸಂಗೀತ ಚಿಕಿತ್ಸೆಯಲ್ಲಿ ರಾಗ ಭೈರವಿಯನ್ನು ಮನಸ್ಸಿಗೆ ಶಾಂತಿ ನೀಡಲು, ಯಮನ (ಕಲ್ಯಾಣಿ) ರಾಗವನ್ನು ಏಕಾಗ್ರತೆ ಮತ್ತು ಮಾನಸಿಕ ಸಮತೋಲನಕ್ಕಾಗಿ, ದರ್ಬಾರಿ ಕಾನಡವನ್ನು ಒತ್ತಡ ನಿವಾರಣೆ ಮತ್ತು ವಿಶ್ರಾಂತಿಗಾಗಿ, ಹಂಸಧ್ವನಿಯನ್ನು ಉತ್ಸಾಹ ಮತ್ತು ಸಕಾರಾತ್ಮಕತೆ ಹೆಚ್ಚಿಸಲು, ಮೋಹನಂ (ಭೂಪಾಳಿ) ರಾಗವನ್ನು ಮನಸ್ಸನ್ನು ಹಗುರಗೊಳಿಸಲು ಹಾಗೂ ಶಿವರಂಜನಿಯನ್ನು ಭಾವನಾತ್ಮಕ ಸಮತೋಲನಕ್ಕಾಗಿ ಬಳಸಲಾಗುತ್ತದೆ.
ಆಯುರ್ವೇದದ ದೃಷ್ಟಿಯಿಂದ ಸಂಗೀತವು ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಪಾಡುವ ಸಾಧನವಾಗಿದೆ. ಮಧುರ ಮತ್ತು ಶಾಂತ ಸಂಗೀತವು ಮನಸ್ಸಿನಲ್ಲಿ ಸತ್ವಗುಣವನ್ನು ವೃದ್ಧಿಸಿ, ವಾತ ಮತ್ತು ಪಿತ್ತ ದೋಷಗಳನ್ನು ಸಮತೋಲನಗೊಳಿಸಲು ನೆರವಾಗುತ್ತದೆ ಎಂದು ಪರಿಗಣಿಸಲಾಗಿದೆ. ಧ್ಯಾನ, ಯೋಗ ಮತ್ತು ಪ್ರಾಣಾಯಾಮದೊಂದಿಗೆ ಸಂಗೀತವನ್ನು ಸಂಯೋಜಿಸಿದರೆ ಮಾನಸಿಕ ನೆಮ್ಮದಿ, ಭಾವನಾತ್ಮಕ ಸ್ಥಿರತೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವ ಪೂರಕ ಚಿಕಿತ್ಸೆಯಾಗಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಸಂಗೀತ ಚಿಕಿತ್ಸೆಯು ಔಷಧಗಳಿಗೆ ಪರ್ಯಾಯವಲ್ಲ. ಮಾನಸಿಕ ನೆಮ್ಮದಿ, ಒತ್ತಡ ನಿರ್ವಹಣೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಉಪಯುಕ್ತ ಪೂರಕ ಚಿಕಿತ್ಸೆಯಾಗಿ ಪರಿಗಣಿಸಲ್ಪಟ್ಟಿದ್ದರೂ ಸಂಗೀತ ಚಿಕಿತ್ಸೆಯ ಬಗ್ಗೆ ಸಮತೋಲನದ ದೃಷ್ಟಿಕೋನ ಅಗತ್ಯ. ಅನೇಕ ಅಧ್ಯಯನಗಳು ಸಂಗೀತವು ಆತಂಕ, ಒತ್ತಡ, ನೋವಿನ ಅನುಭವ ಮತ್ತು ಖಿನ್ನತೆಯ ಕೆಲವು ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ಸೂಚಿಸಿವೆ. ಆದರೆ ನಿರ್ದಿಷ್ಟ ರಾಗ ಅಥವಾ ಸಂಗೀತವು ನಿರ್ದಿಷ್ಟ ಕಾಯಿಲೆಯನ್ನು ಗುಣಪಡಿಸುತ್ತದೆ ಎಂಬುದಕ್ಕೆ ದೃಢವಾದ ಪುರಾವೆಗಳು ಲಭ್ಯವಿಲ್ಲ. ಆದ್ದರಿಂದ ಸಂಗೀತ ಚಿಕಿತ್ಸೆಯನ್ನು ಔಷಧಿ ಅಥವಾ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ನೋಡಬಾರದು.
ತರಬೇತಿ ಪಡೆದ ಸಂಗೀತ ಚಿಕಿತ್ಸಕರ ಮಾರ್ಗದರ್ಶನದಲ್ಲಿ ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆಯೊಂದಿಗೆ ಪೂರಕವಾಗಿ ಬಳಸಿದಾಗ ಮಾತ್ರ ಇದರ ಪ್ರಯೋಜನ ಹೆಚ್ಚು. ವ್ಯಕ್ತಿಯ ಸಂಗೀತದ ಅಭಿರುಚಿ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸಂಗೀತದ ಪರಿಣಾಮ ಬದಲಾಗುವುದರಿಂದ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com