ಅನುಮಾನವೇ ಬೇಡ. ಇದು ವ್ಯಕ್ತಿ ಪ್ರತಿಷ್ಠೆಗಳ ಕಾಳಗ. ಒಕ್ಕಲಿಗ ಸಮುದಾಯ ಬಾಹುಳ್ಯದ ಪ್ರದೇಶಗಳಲ್ಲಿ ಮೇಲುಗೈ ಸಾಧಿಸಲು ಜಿದ್ದು. ಆ ಬಾರಿ ಇದಕ್ಕೆ ನೆಪವಾಗಿ ಒದಗಿ ಬಂದಿರುವುದು ಬಿಡದಿ ಟೌನ್‌ಶಿಪ್ ನಿರ್ಮಾಣ ಎಂಬ ಯೋಜನೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವೆ ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಈಗ ಸಂಘರ್ಷ. ಸೇರಿಗೆ ಸವ್ವಾಸೇರು. ಸಾಂವಿಧಾನಿಕ ಹುದ್ದೆಯಲ್ಲಿರುವ ಇಬ್ಬರ ಮಧ್ಯೆ ವ್ಯಕ್ತಿಗತ ಆರೋಪ- ಪ್ರತ್ಯಾರೋಪಗಳು. ಪರಸ್ಪರ ರಿಯಲ್ ಎಸ್ಟೇಟ್ ದಂಧೆಯ ದೂಷಣೆ. ಪರಸ್ಪರ ಅಕ್ರಮಗಳನ್ನು ಬಯಲು ಮಾಡುವ ಎಚ್ಚರಿಕೆಗಳು. ಅಭಿವೃದ್ಧಿ ಹೆಸರಿನಲ್ಲಿ ಕಿಕ್ ಬ್ಯಾಕ್‌ನ ಆರೋಪಗಳು. ವೇಗವಾಗಿ ಸಾಗುತ್ತಿದ್ದ ಶಿವಕುಮಾರ್ ಸರಕಾರಕ್ಕೆ ಒಂದು ರೀತಿಯ ಬ್ರೇಕ್.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವಿನ ರಾಜಕೀಯ ವೈರತ್ವ ಇದೇನೂ ಹೊಸದಲ್ಲ. ಅದಕ್ಕೆ ಸುದೀರ್ಘ ಇತಿಹಾಸವೇ ಇದೆ. ಮೊದಲು ಶಿವಕುಮಾರ್ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಸಡ್ಡು ಹೊಡೆದರು. ನಂತರ ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವೆ ಜಿದ್ದಾಜಿದ್ದಿಗೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಅಖಾಡ ಸಜ್ಜಾಯಿತು. ಚುನಾವಣೆಗಳಲ್ಲಿ ಮುಖಾಮುಖಿ ಆದರು.
ಹಾಸನದ ದೇವೇಗೌಡರು 1985ರಲ್ಲಿ ಕನಕಪುರ ತಾಲೂಕಿನ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿದಾಗ ರಾಜ್ಯದಲ್ಲಿ ಜನತಾಪಕ್ಷದ ಹವಾ. ಸ್ಥಳೀಯ ಬಿಸಿರಕ್ತದ ಆಗಿನ ಯುವಕ ಶಿವಕುಮಾರ್ ಕಾಂಗ್ರೆಸ್‌ನಿಂದ ಅಖಾಡಕ್ಕೆ ಧುಮುಕಿದರು. ನಿಜ, ಶಿವಕುಮಾರ್ ಆ ಚುನಾವಣೆಯಲ್ಲಿ ಸೋತರು. ಆದರೆ, ಕ್ಷೇತ್ರಾದ್ಯಂತ ಪರಿಚಿತರಾದರು. ನಂತರ ಅವರದ್ದೇ ಇಲ್ಲಿ ವಿಜಯ. ಇದೇ ಕ್ಷೇತ್ರದಲ್ಲಿ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರನ್ನು 1999ರ ವಿಧಾನಸಭಾ ಚುನಾವಣೆಯಲ್ಲಿ ಮಣಿಸಿದರು. ಆದರೆ, ದೇವೇಗೌಡರ ವಿರುದ್ಧ ಎರಡು ಬಾರಿ ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಾಗಲಿಲ್ಲ.
ಕನಕಪುರ ಲೋಕಸಭಾ ಉಪ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಶಿವಕುಮಾರ್ ಮುಖಾಮುಖಿಯಾದರು. ಶಿವಕುಮಾರ್ ಆಗ ಎಸ್.ಎಂ.ಕೃಷ್ಣ ಸರಕಾರದಲ್ಲಿ ನಗರಾಭಿವೃದ್ಧಿ ಸಚಿವರು. ಚುನಾವಣೆಯಲ್ಲಿ ಸೋತರು. ಆದರೆ, 2004ರಲ್ಲಿ ಕಾಂಗ್ರೆಸ್‌ನಿಂದ ತೇಜಸ್ವಿನಿ ಶ್ರೀರಮೇಶ್ ಅವರನ್ನು ಕಣಕ್ಕಿಳಿಸಿ ದೇವೇಗೌಡರನ್ನು ಸೋಲಿಸಿದರು. ದೇವೇಗೌಡರ ಸೋಲಿಗೆ ಶಿವಕುಮಾರ್ ಪ್ರಮುಖ ಕಾರಣರಾದರು. ರಾಜಕೀಯ ವೈರತ್ವ ಮತ್ತಷ್ಟು ಬೆಳೆಯಿತು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2013ರ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಹಾಗೂ ಡಿ.ಕೆ.ಸುರೇಶ್ ನಡುವೆ ನೇರ ಸ್ಪರ್ಧೆ ನಡೆಯಿತು. ಸುರೇಶ್ ಗೆದ್ದರು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಭಾವ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಅವರನ್ನು ಮಣಿಸಿದರು. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬ ಹಾಗೂ ಶಿವಕುಮಾರ್ ಸಹೋದರರ ನಡುವಿನ ಕಾಳಗಕ್ಕೆ ಹೀಗೆ ಇತಿಹಾಸವೇ ಇದೆ. ಈ ಜಿಲ್ಲೆಯಲ್ಲಿ ಯಾವುದೇ ವಿವಾದ ಮುನ್ನೆಲೆಗೆ ಬಂದರೆ ರಾಜಕೀಯ ಬಣ್ಣ ಬಳಿದುಕೊಂಡು ಈ ಇಬ್ಬರ ನಡುವಿನ ಸಂಘರ್ಷಕ್ಕೆ ನೆಪವಾಗುತ್ತದೆ. ಈಗ ಬಿಡದಿ ಟೌನ್ ಶಿಪ್ ಸರದಿ. ಸಮರ ಕಣದ ಕುದಿ ಬಿಂದು.
ಕಾವೇರಿ ಕಣಿವೆ ಪ್ರದೇಶದಲ್ಲಿ ಒಕ್ಕಲಿಗ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ಗೆ ಇಲ್ಲಿಯೇ ನೆಲೆ. ಇದರ ರಾಜಕೀಯ ಭವಿಷ್ಯವೂ ಈ ನೆಲದಲ್ಲೇ. ಶಿವಕುಮಾರ್ ಅವರೂ ಇದೇ ಪ್ರದೇಶದವರು. ಬೆಂಗಳೂರು ದಕ್ಷಿಣ ಜಿಲ್ಲೆ ಅವರ ರಾಜಕೀಯ ಕರ್ಮಭೂಮಿ.
ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಒಕ್ಕಲಿಗ ಸಮಾಜದ ಪ್ರಬಲ ನಾಯಕರಾಗಿ ಹೊರಹೊಮ್ಮುವ ಲಕ್ಷಣಗಳು ಗೋಚರಿಸುತ್ತಿವೆ. ಅವರ ಸರಕಾರದ ಕೆಲವು ನಿರ್ಧಾರಗಳು ಮೆಚ್ಚುಗೆ ಪಡೆಯುತ್ತಿವೆ. ಇದು ನೇರವಾಗಿ ಕುಮಾರಸ್ವಾಮಿ ಅವರ ನಾಯಕತ್ವ ಹಾಗೂ ಅವರ ಪಕ್ಷಕ್ಕೆ ಸವಾಲು. ಹೀಗಾಗಿಯೇ ಕುಮಾರಸ್ವಾಮಿ ಬಿಡದಿ ಟೌನ್ ಶಿಪ್ ಎಂಬ ಅಸ್ತ್ರವನ್ನು ಕೈಯಲ್ಲಿ ಹಿಡಿದು ಶಿವಕುಮಾರ್ ವಿರುದ್ಧ ಝಳಪಿಸುತ್ತಿದ್ದಾರೆ. ಶಿವಕುಮಾರ್ ಅವರೂ ಈ ಯೋಜನೆಯ ಇತಿಹಾಸವನ್ನೇ ಕೆದಕುತ್ತಾ ಕುಮಾರಸ್ವಾಮಿ ಅವರೇ ಇದರ ಪಿತಾಮಹ ಎನ್ನುತ್ತಾ ಸಮರ ಕಣಕ್ಕೆ ಧುಮುಕಿದ್ದಾರೆ.
ಸುಮಾರು 20 ವರ್ಷಗಳ ಹಿಂದಿನ ಮಾತು. ಇಂಥದ್ದೇ ಒಂದು ಪ್ರಸಂಗ. ಆಗ ಕುಮಾರಸ್ವಾಮಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ. ಶಿವಕುಮಾರ್ ಸಾತನೂರಿನ ಶಾಸಕ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಶಿವಕುಮಾರ್ ಅವರ ಬಗ್ಗೆ ವೈಯಕ್ತಿಕವಾಗಿ ಆಡಿದ್ದರೆನ್ನಲಾದ ಮಾತು ಶಿವಕುಮಾರ್ ಅವರನ್ನು ಕೆರಳಿಸಿತ್ತು.
ಅದು 2007ನೇ ಇಸವಿಯ ಒಂದು ದಿನ. ಶಿವಕುಮಾರ್ ಅವರ ಸ್ವಕ್ಷೇತ್ರ ಸಾತನೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯ ಸಮಾರಂಭ. ಕನಕಪುರ ತಾಲೂಕಿನಲ್ಲಿಯೇ ಉದ್ವಿಗ್ನ ಸ್ಥಿತಿ. ವೇದಿಕೆ ಮೇಲೆ ಕುಮಾರಸ್ವಾಮಿ, ಶಿವಕುಮಾರ್, ಆಗ ಸಚಿವರಾಗಿದ್ದ ಎಚ್.ಡಿ.ರೇವಣ್ಣ, ಚಲುವರಾಯಸ್ವಾಮಿ ಹೀಗೆ ಕೆಲವು ನಾಯಕರ ಉಪಸ್ಥಿತಿ. ಯಾವ ಘಳಿಗೆಯಲ್ಲಿ ಪರಿಸ್ಥಿತಿ ಕೈಮೀರುತ್ತದೆಯೋ ಎಂಬ ಆತಂಕ. ಪರಿಸ್ಥಿತಿ ನಿಯಂತ್ರಿಸಲು ಆಗ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ ಬಿದರಿ ಅವರೇ ಸ್ವತಃ ವೇದಿಕೆ ಮೇಲೆ ಮುಖ್ಯಮಂತ್ರಿ ಹಿಂಭಾಗದಲ್ಲಿ ಬಂದೋಬಸ್ತ್‌ಗೆ ನಿಂತಿದ್ದರು. ಸುತ್ತಲೂ ಶಸ್ತ್ರಸಜ್ಜಿತ ಪೊಲೀಸ್ ಪಡೆ. ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಅಪಾರ ದಂಡು. ಶಿವಕುಮಾರ್ ಭಾವನಾತ್ಮಕವಾಗಿಯೇ ಮಾತಾಡಿದರು. ಕುಮಾರಸ್ವಾಮಿ ತಾಳ್ಮೆಯ ಮಾತುಗಳನ್ನು ಆಡಿದರು. ಉಭಯ ಪಕ್ಷಗಳ ಕಾರ್ಯಕರ್ತರು ಸಹನೆ ತೋರಿದರು. ಪರಿಸ್ಥಿತಿ ಕೈಮೀರಲಿಲ್ಲ. ಸಮಾರಂಭ ಮುಗಿದ ನಂತರ ನಿಟ್ಟುಸಿರು ಬಿಟ್ಟಿದ್ದು ಮಾತ್ರ ಪೊಲೀಸರು. ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವಿನ ರಾಜಕೀಯ ಸಂಘರ್ಷ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲೂ ಸೂಕ್ಷ್ಮ ಸಂಗತಿ. ಟೌನ್‌ಶಿಪ್ ಬಗ್ಗೆ ಬಹಿರಂಗ ಚರ್ಚೆಗೆ ಬಿಡದಿಗೆ ಬರುವಂತೆ ಮೊನ್ನೆ ಕುಮಾರಸ್ವಾಮಿ ಅವರು ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು. ಶಿವಕುಮಾರ್ ಅಲ್ಲಿಗೆ ತೆರಳದಿರುವ ಹಿಂದೆ ಕಾನೂನು ಮತ್ತು ಸುವ್ಯವಸ್ಥೆಯ ಪ್ರಶ್ನೆಯೂ ಅಡಗಿತ್ತು.
ಬಿಡದಿ ಟೌನ್ ಶಿಪ್ ವಿವಾದ ಕುಮಾರಸ್ವಾಮಿ – ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿವಾದ ಭುಗಿಲೆದ್ದಿದೆ. ಆಗ ಮುಖ್ಯಮಂತ್ರಿಯಾಗಿ ಯೋಜನೆ ಶುರು ಮಾಡಿದ ಕುಮಾರಸ್ವಾಮಿ ಈಗ ವಿರೋಧಿಸುತ್ತಿದ್ದಾರೆ. ಆಗ ಯೋಜನೆ ವಿರೋಧಿಸಿದ ಶಿವಕುಮಾರ್ ಈಗ ಮುಖ್ಯಮಂತ್ರಿ. ಪಾತ್ರ ಅದಲು ಬದಲು. ಬಡ ರೈತ ಕಂಗಾಲು.
ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆ ಸಂಪೂರ್ಣ ರಾಜಕೀಯ ಸ್ವರೂಪ ಪಡೆದಿದೆ. ಯೋಜನೆ ರದ್ದುಪಡಿಸದಿದ್ದರೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಎಚ್ಚರಿಸಿರುವುದು ವಿವಾದದ ಕಾವು ಮತ್ತಷ್ಟು ಹೆಚ್ಚಿಸಿದೆ. ಕಾಂಗ್ರೆಸ್‌ಗಿಂತಲೂ ಹೆಚ್ಚಾಗಿ ಈ ಯೋಜನೆ ಶಿವಕುಮಾರ್ ಅವರಿಗೆ ಪ್ರತಿಷ್ಠೆ. ತಮ್ಮ ತವರು ಜಿಲ್ಲೆ ಬೆಂಗಳೂರು ದಕ್ಷಿಣದಲ್ಲಿ ಈ ಯೋಜನೆ ಕಾರ್ಯಗತಗೊಂಡರೆ ತಮಗೆ ಕ್ರೆಡಿಟ್ಟು. ಬೆಂಗಳೂರಿನ ಮೇಲಿನ ಒತ್ತಡ ತಗ್ಗುತ್ತದೆ ಎಂಬುದು ಅವರ ಭಾವನೆ. ಸುತ್ತಮುತ್ತಲ ಭೂಮಿಯ ಬೆಲೆಯೂ ಗಗನಕ್ಕೆ ಏರುತ್ತದೆ ಎಂಬ ದೂರದೃಷ್ಟಿ. ಆದರೆ, ಈ ವಿವಾದದಲ್ಲಿ ಇಡೀ ಸರಕಾರ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅವರ ಬೆಂಬಲಕ್ಕೆ ನಿಂತಿದೆ ಎಂಬುದು ಗೋಚರಿಸುವುದಿಲ್ಲ.
ಜಾತ್ಯತೀತ ಜನತಾದಳಕ್ಕೆ ಈಗ ಸಂಕಷ್ಟದ ಕಾಲ. ಅದರಲ್ಲೂ ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ನಂತರ ಜೆಡಿಎಸ್‌ಗೆ ತನ್ನ ನೆಲೆ ದುರ್ಬಲಗೊಳ್ಳುವ ಭೀತಿ. ಈ ವಿವಾದದ ಬೆನ್ನೇರಿ ಸಡಿಲಗೊಂಡಿರುವ ತನ್ನ ಪಕ್ಷದ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಬೇಕೆಂಬುದು ಜೆಡಿಎಸ್ ಕಸರತ್ತು. ಇದು ಕಾಂಗ್ರೆಸ್ ಹಾಗೂ ಶಿವಕುಮಾರ್ ಅವರಿಗೂ ಗೊತ್ತು. ಶಿವಕುಮಾರ್ ಅವರ ಗುರಿ 2028ರ ವಿಧಾನಸಭಾ ಚುನಾವಣೆ.
ಗ್ರೇಟರ್ ಬೆಂಗಳೂರು ಇಂಟೆಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಯೋಜನೆಗೆ ಭೂಮಿ ಬಿಟ್ಟು ಕೊಡದ ರೈತರನ್ನು ಸರಕಾರ ಬಲವಂತ ಮಾಡುವುದಿಲ್ಲ. ಭೂಮಿ ಬಿಟ್ಟು ಕೊಡುವ ರೈತರಿಗೆ ಪರಿಹಾರ ನೀಡಿ ಯೋಜನೆ ಮುಂದುವರಿಸುವ ತಂತ್ರ ಶಿವಕುಮಾರ್ ಅವರದು. ಇದೇ ವೇಳೆ ಅಂತಿಮ ಅಧಿಸೂಚನೆಯನ್ನು ಹಿಂಪಡೆಯುವುದಿಲ್ಲ ಎಂಬ ಸ್ಪಷ್ಟನೆ. ಅಂದರೆ ಯೋಜನೆ ಕಾರ್ಯಗತ ಖಚಿತ. ಆದರೆ, ಇಡೀ ಯೋಜನೆಯನ್ನೇ ಕೈಬಿಡಬೇಕೆಂಬುದು ಕುಮಾರಸ್ವಾಮಿ ಆಗ್ರಹ. ಅಲ್ಲಿಗೆ ಸಂಘರ್ಷ ಮುಂದುವರಿಕೆ. ರೈತರಲ್ಲಿಯೂ ಪರ-ವಿರೋಧದ ಬಣಗಳು. ಭೂಮಿ ಬಿಟ್ಟು ಕೊಡದೇ ಜಂಟಿ ಅಳತೆ (ಜೆಎಂಸಿ) ಕಾರ್ಯಕ್ಕೆ ಬಂದ ಅಧಿಕಾರಿಗಳಿಗೆ ಪೊರಕೆಯಲ್ಲಿ ಹೊಡೆದು ಪ್ರತಿಭಟಿಸಿದ ರೈತರು ಹೇಗಿದ್ದಾರೋ ಅದೇ ರೀತಿ ಭೂ ಸ್ವಾಧೀನದ ಅಧಿಸೂಚನೆ ಹೊರ ಬಿದ್ದ ಕೂಡಲೇ ಸಿಹಿ ಹಂಚಿ ಸಂಭ್ರಮ ಪಟ್ಟ ಕೃಷಿಕರೂ ಇದ್ದಾರೆ.
ಬಿಡದಿ ಟೌನ್ ಶಿಪ್ ನಿರ್ಮಾಣ ಈಗ ರಾಜಕೀಯ ಪ್ರೇರಿತ. ಕುಮಾರಸ್ವಾಮಿ ಹಾಗೂ ಶಿವಕುಮಾರ್ ನಡುವಿನ ಜಟಾಪಟಿಯೂ ತೀವ್ರ. ಸಂಘರ್ಷಕ್ಕೆ ವಿಷಯಗಳೂ ಸಾಲುಸಾಲು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com