ಭಾರತದ ಆರ್ಥಿಕತೆಯ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಕೈಗಾರಿಕೆ, ಕೃಷಿ ಮತ್ತು ಸೇವಾ ವಲಯ ಎಂಬ ಮೂರು ಪ್ರಮುಖ ಕ್ಷೇತ್ರಗಳನ್ನು ಉಲ್ಲೇಖಿಸಲಾಗುತ್ತದೆ. ಈ ಮೂರರಲ್ಲಿ ಕಳೆದ ಮೂರು ದಶಕಗಳಲ್ಲಿ ಅತ್ಯಂತ ವೇಗವಾಗಿ ಬೆಳೆದಿರುವುದು ಸೇವಾ ವಲಯ. ಇಂದು ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಸಾರಿಗೆ, ವಿಮೆ, ಹಣಕಾಸು ಸೇವೆಗಳು, ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್, ಇ-ಕಾಮರ್ಸ್ ಸೇರಿದಂತೆ ಅನೇಕ ಕ್ಷೇತ್ರಗಳು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಆಧಾರವಾಗಿವೆ.
ಇಷ್ಟೊಂದು ಮಹತ್ವದ ವಲಯವಾಗಿದ್ದರೂ, ಅದರ ಮಾಸಿಕ ಉತ್ಪಾದನಾ ಚಟುವಟಿಕೆಯನ್ನು ಅಳೆಯಲು ಭಾರತದಲ್ಲಿ ಯಾವುದೇ ಅಧಿಕೃತ ಸೂಚ್ಯಂಕ ಇರಲಿಲ್ಲ. ಈ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಮೊದಲ ಬಾರಿಗೆ ಸೇವಾ ಉತ್ಪಾದನಾ ಸೂಚ್ಯಂಕವನ್ನು (Index of Services Production – ISP) ಪ್ರಾಯೋಗಿಕವಾಗಿ ಪರಿಚಯಿಸಿದೆ.
ಈ ಹೊಸ ಸೂಚ್ಯಂಕ ಭಾರತದ ಆರ್ಥಿಕ ಅಂಕಿ-ಅಂಶ ವ್ಯವಸ್ಥೆಯಲ್ಲಿ ಒಂದು ಮಹತ್ವದ ಬದಲಾವಣೆಯಾಗಿದ್ದು, ನೀತಿ ರೂಪಿಸುವವರಿಂದ ಹಿಡಿದು ಹೂಡಿಕೆದಾರರು, ಕೈಗಾರಿಕೆಗಳು ಹಾಗೂ ಸಾಮಾನ್ಯ ನಾಗರಿಕರಿಗೂ ಉಪಯುಕ್ತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.
ನಿಮಗೆಲ್ಲಾ ಗೊತ್ತಿರುವಂತೆ 1991 ರ ಆರ್ಥಿಕ ಉದಾರೀಕರಣದ ನಂತರ ಭಾರತದಲ್ಲಿ ಸೇವಾ ವಲಯದ ಬೆಳವಣಿಗೆ ವೇಗ ಪಡೆದುಕೊಂಡಿತು. ವಿದೇಶಿ ಹೂಡಿಕೆ, ಖಾಸಗಿ ವಲಯದ ವಿಸ್ತರಣೆ, ಐಟಿ ಕ್ರಾಂತಿ, ದೂರಸಂಪರ್ಕದ ಬೆಳವಣಿಗೆ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಭಾರತದ ಸಂಪರ್ಕ ಹೆಚ್ಚಾದ ಪರಿಣಾಮ ಸೇವಾ ವಲಯ ದೇಶದ ಆರ್ಥಿಕತೆಯ ಪ್ರಮುಖ ಎಂಜಿನ್ ಆಗಿ ರೂಪುಗೊಂಡಿತು. ಇದಕ್ಕಾಗಿ ನಾವು ಎಂದೆದಿಗೂ ಅಂದಿನ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಋಣಿಯಾಗಿರಬೇಕು.
ಇಂದು ಭಾರತದ ಒಟ್ಟು Gross Value Added (GVA) ಯಲ್ಲಿ ಸುಮಾರು 55 ಪ್ರತಿಶತ ಪಾಲು ಸೇವಾ ವಲಯದ್ದಾಗಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಅತಿದೊಡ್ಡ ಕೊಡುಗೆ ನೀಡುವ ಕ್ಷೇತ್ರವೂ ಇದೇ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿರುವ ಈ ವಲಯವು ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (IT), ಬಿಸಿನೆಸ್ ಪ್ರೊಸೆಸ್ ಔಟ್ಸೋರ್ಸಿಂಗ್ (BPO), ಬ್ಯಾಂಕಿಂಗ್, ವಿಮೆ, ಹಣಕಾಸು ಸೇವೆಗಳು, ಡಿಜಿಟಲ್ ಪಾವತಿಗಳು, ಇ-ಕಾಮರ್ಸ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿವೆ.
ಕೈಗಾರಿಕಾ ವಲಯದ ಬೆಳವಣಿಗೆಯನ್ನು ಹಲವು ದಶಕಗಳಿಂದ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (Index of Industrial Production – IIP) ಮೂಲಕ ಅಳೆಯಲಾಗುತ್ತಿದೆ. ಉಕ್ಕು, ಸಿಮೆಂಟ್, ವಿದ್ಯುತ್, ಕಲ್ಲಿದ್ದಲು, ಉತ್ಪಾದನಾ ಕೈಗಾರಿಕೆಗಳು ಮತ್ತು ಗಣಿಗಾರಿಕೆಯಂತಹ ಕ್ಷೇತ್ರಗಳ ಮಾಸಿಕ ಉತ್ಪಾದನಾ ಮಾಹಿತಿ IIP ಮೂಲಕ ಲಭ್ಯವಾಗುತ್ತದೆ. ಆದರೆ ಸೇವಾ ವಲಯಕ್ಕೆ ಅಂತಹ ವ್ಯವಸ್ಥೆಯೇ ಇರಲಿಲ್ಲ. ಸೇವಾ ವಲಯದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸರ್ಕಾರ ತ್ರೈಮಾಸಿಕ ಅಥವಾ ವಾರ್ಷಿಕ ಅಂಕಿ-ಅಂಶಗಳನ್ನು ಅವಲಂಬಿಸಬೇಕಾಗುತ್ತಿತ್ತು.
ಇದರಿಂದ ಆರ್ಥಿಕತೆಯಲ್ಲಿ ಆಗುವ ತ್ವರಿತ ಬದಲಾವಣೆಗಳನ್ನು ಗುರುತಿಸುವುದು ಕಷ್ಟವಾಗುತ್ತಿತ್ತು. ಉದಾಹರಣೆಗೆ, ಬ್ಯಾಂಕಿಂಗ್ ವಹಿವಾಟು ಏಕಾಏಕಿ ಹೆಚ್ಚಾದರೆ ಅಥವಾ ಪ್ರವಾಸೋದ್ಯಮ ಕುಸಿದರೆ ಅದರ ಪರಿಣಾಮವನ್ನು ತಕ್ಷಣವೇ ಅಳೆಯುವ ಸಾಧನ ಸರ್ಕಾರದ ಬಳಿ ಇರಲಿಲ್ಲ. ನಂಬುವುದಕ್ಕೆ ಕಷ್ಟ ಎನ್ನಿಸುತ್ತೆ ಅಲ್ವಾ? ಆದರೆ ಭಾರತದಂತಹ ಅತಿ ದೊಡ್ಡ ದೇಶದಲ್ಲಿ, ಅದರಲ್ಲೂ ಸೇವಾ ವಲಯ ಭಾರತದ ಜಿಡಿಪಿಗೆ 55 ಪ್ರತಿಶತ ದೇಣಿಗೆ ನೀಡುತ್ತಿರುವ ಈ ಕಾಲಘಟ್ಟದಲ್ಲಿ ಕೂಡ ಇದರಲ್ಲಾಗುವ ಉತ್ಪಾದನೆ , ಬದಲಾವಣೆ ಅಳೆಯಲು ಸೂಚ್ಯಂಕ ಇರಲಿಲ್ಲ ಎನ್ನುವುದು ನಿಜಕ್ಕೂ ಭಾರತದ ಅರ್ಥ ವ್ಯವಸ್ಥೆಯ ವಿಪರ್ಯಾಸ.
ಈ ಕೊರತೆಯನ್ನು ಮನಗಂಡು MoSPI ಹಲವು ವರ್ಷಗಳ ಅಧ್ಯಯನ ನಡೆಸಿತು. ವಿವಿಧ ಸಚಿವಾಲಯಗಳು, ನಿಯಂತ್ರಣ ಸಂಸ್ಥೆಗಳು ಹಾಗೂ ಉದ್ಯಮ ವಲಯಗಳ ಸಹಯೋಗದೊಂದಿಗೆ ಹೊಸ ವಿಧಾನವನ್ನು ಕೊನೆಗೂ ರೂಪಿಸಲಾಗಿದೆ. 2024/25 ನ್ನು ಆಧಾರ ವರ್ಷವಾಗಿ (Base Year) ಆಯ್ಕೆ ಮಾಡಲಾಯಿತು. ವಿವಿಧ ಸೇವಾ ಕ್ಷೇತ್ರಗಳಿಂದ ಡೇಟಾ ಸಂಗ್ರಹಿಸುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. 2026ರ ಏಪ್ರಿಲ್ನಿಂದ ಮೊದಲ ಮಾಸಿಕ ಮಾಹಿತಿಯನ್ನು ಸಂಗ್ರಹಿಸಿ, ಜುಲೈ 2026ರಲ್ಲಿ ಮೊದಲ ಪ್ರಾಯೋಗಿಕ ISP ಬಿಡುಗಡೆ ಮಾಡಲಾಗಿದೆ.
ಇದು ಸರಿಯಾದ ಮತ್ತು ನಿಖರವಾದ ಸೂಚ್ಯಂಕ ಎಂದು ಹೇಳಲಾಗುವುದಿಲ್ಲ. ಆದರೆ ಇದು ಆರಂಭ, ಮುಂದಿನ ದಿನಗಳಲ್ಲಿ ಅನುಭವದ ಆಧಾರದ ಮೇಲೆ ಇದರ ವಿಧಾನವನ್ನು ಇನ್ನಷ್ಟು ಸುಧಾರಿಸಲಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ತಪ್ಪು ಸರಿ ಮತ್ತು ನಿಖರತೆ, ಪರ್ಫೆಕ್ಷನ್ ಇವುಗಳ ಬಗ್ಗೆ ಚರ್ಚಿಸಲು ಮತ್ತು ಸುಧಾರಿಸಿಕೊಳ್ಳಲು ಆರಂಭ ಬೇಕಾಗಿತ್ತು. ಅದು ಆಗಿದೆ.
ಸದ್ಯದ ಪ್ರಾಯೋಗಿಕ ಸೂಚ್ಯಂಕವು ಸುಮಾರು 19 ಪ್ರಮುಖ ಸೇವಾ ಉಪವಲಯಗಳನ್ನು ಒಳಗೊಂಡಿದೆ. ಇವು ಒಟ್ಟಾಗಿ ಭಾರತದ ಅಧಿಕೃತ ಸೇವಾ ಆರ್ಥಿಕತೆಯ ಸುಮಾರು ಅರವತ್ತು ಪ್ರತಿಶತ ಭಾಗವನ್ನು ಪ್ರತಿನಿಧಿಸುತ್ತವೆ.
ಇವುಗಳಲ್ಲಿ ಪ್ರಮುಖವಾಗಿ:
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು
ಮಾಹಿತಿ ತಂತ್ರಜ್ಞಾನ
ದೂರಸಂಪರ್ಕ
ಸಾರಿಗೆ ಮತ್ತು ಲಾಜಿಸ್ಟಿಕ್ಸ್
ಗೋದಾಮು ಸೇವೆಗಳು
ವ್ಯಾಪಾರ
ಹೋಟೆಲ್ ಮತ್ತು ಆತಿಥ್ಯ ಸೇವೆಗಳು
ರಿಯಲ್ ಎಸ್ಟೇಟ್
ವೃತ್ತಿಪರ ಸೇವೆಗಳು
ಆಡಳಿತಾತ್ಮಕ ಸೇವೆಗಳು
ಮುಂದಿನ ಹಂತಗಳಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಸೇರಿಸುವ ಯೋಜನೆ ಇದೆ. ಗಮನಿಸಿ ನಮ್ಮಲ್ಲಿ ಬಹಳಷ್ಟು ಸೇವಾ ವಲಯಗಳು ಅಸಂಘಟಿಯವಾಗಿವೆ. ಹೀಗಾಗಿ ಮೊದಲು ಅವುಗಳನ್ನು ಸಂಘಟಿತ ರೂಪಕ್ಕೆ ತರುವ ಕೆಲಸ ಕೂಡ ಆಗಬೇಕಿದೆ. ಇವೆಲ್ಲವೂ ತಕ್ಷಣದಲ್ಲಿ ಆಗುವುದಲ್ಲ ಎನ್ನುವುದು ಕೂಡ ಗೊತ್ತಿದೆ. ಹೀಗಿದ್ದೂ ಕೆಲಸ ಶುರುವಾಗಿದೆ ಎನ್ನುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಮುಂದಿನ ಹತ್ತು ವರ್ಷದಲ್ಲಿ ಭಾರತದ ಸೇವಾ ವಲಯದ ನೂರು ಪ್ರತಿಶತ ಉತ್ಪಾದನೆ, ಬದಲಾವಣೆಗಳನ್ನು ನಾವು ನಿಖರವಾಗಿ ಹೇಳುವ ಮಟ್ಟವನ್ನು ಮುಟ್ಟಿದರೆ ಅದು ಭಾರತದ ಆರ್ಥಿಕತೆಗೆ ಬಹುದೊಡ್ಡ ಅನುಕೂಲವಾಗುತ್ತದೆ. ಭಾರತ ಜಾಗತಿಕವಾಗಿ ಚೀನಾದ ನಂತರ ಎರಡನೇ ಸ್ಥಾನದಲ್ಲಿ ನಿಲ್ಲುವುದು ಖಚಿತ.
ಸೇವಾ ವಲಯದ ಬೆಳವಣಿಗೆಯನ್ನು ಪ್ರತಿಮಾಸ ಅಳೆಯುವ ಅವಕಾಶ ದೊರೆಯುವುದರಿಂದ ಸರ್ಕಾರಕ್ಕೆ ಆರ್ಥಿಕತೆಯ ನೈಜ ಸ್ಥಿತಿಯನ್ನು ಶೀಘ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಬ್ಯಾಂಕಿಂಗ್ ವ್ಯವಹಾರಗಳು ಕುಸಿದರೆ ಅಥವಾ ಪ್ರವಾಸೋದ್ಯಮದಲ್ಲಿ ಏರಿಳಿತ ಕಂಡುಬಂದರೆ, ಅದರ ಪರಿಣಾಮವನ್ನು ಆರಂಭದಲ್ಲಿಯೇ ಗುರುತಿಸಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದು.ಆರ್ಥಿಕ ವಾಗ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಇದು ಪ್ರಮುಖ ಆಧಾರವಾಗುತ್ತದೆ.
ಹೂಡಿಕೆದಾರರು ದೇಶದ ಆರ್ಥಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ವಿವಿಧ ಸೂಚ್ಯಂಕಗಳನ್ನು ಗಮನಿಸುತ್ತಾರೆ. IIP, ದರ ಏರಿಕೆ (Inflation), ಜಿಡಿಪಿ, ಉದ್ಯೋಗ ಅಂಕಿ-ಅಂಶಗಳ ಜೊತೆಗೆ ಈಗ ISP ಕೂಡ ಪ್ರಮುಖ ಸೂಚ್ಯಂಕವಾಗಲಿದೆ. ಒಂದು ವೇಳೆ ಸೇವಾ ವಲಯ ನಿರಂತರವಾಗಿ ಬೆಳೆಯುತ್ತಿದ್ದರೆ ಬ್ಯಾಂಕಿಂಗ್, ಐಟಿ, ಪ್ರವಾಸೋದ್ಯಮ, ವಿಮೆ ಮತ್ತು ಹಣಕಾಸು ಕ್ಷೇತ್ರಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇದು ಹೂಡಿಕೆದಾರ ಯೋಜಿತ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಅಂದಹಾಗೆ ವಿದೇಶಿ ಹೂಡಿಕೆದಾರರಿಗೂ ಇದು ಭಾರತದ ಆರ್ಥಿಕತೆಯ ಬಗ್ಗೆ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುತ್ತದೆ. ಹೀಗಾಗಿ ವಿದೇಶಿ ಬಂಡವಾಳದ ಹರಿವಿಗೂ ಕಾರಣವಾಗುತ್ತದೆ.
ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ನಿಗದಿಪಡಿಸುವಾಗ ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರ ಎರಡನ್ನೂ ಪರಿಗಣಿಸುತ್ತದೆ. ಸೇವಾ ವಲಯದಲ್ಲಿ ವೇಗವಾಗಿ ಬೆಳವಣಿಗೆ ಕಂಡುಬಂದರೆ ಆರ್ಥಿಕ ಚಟುವಟಿಕೆ ಹೆಚ್ಚುತ್ತಿದೆ ಎಂಬ ಸಂಕೇತ ಸಿಗುತ್ತದೆ. ಮತ್ತೊಂದೆಡೆ ಸೇವಾ ಚಟುವಟಿಕೆ ನಿಧಾನಗೊಂಡರೆ ಬೆಳವಣಿಗೆ ಕುಂಠಿತವಾಗುತ್ತಿರುವ ಸೂಚನೆಯಾಗಿರುತ್ತದೆ. ಹೀಗಾಗಿ ಇನ್ನು ಮುಂದೆ ಈ ಹೊಸ ಮಾಹಿತಿಯ ಆಧಾರದ ಮೇಲೆ RBI ತನ್ನ ಹಣಕಾಸು ನೀತಿಯಲ್ಲಿ ಬದಲಾವಣೆಗಳನ್ನು ಮಾಡುವಾಗ ಉಪಯೋಗಿಸಿಕೊಳ್ಳಬಹುದು. ಇದರಿಂದ ಅದು ತರುವ ಬದಲಾವಣೆಗಳಲ್ಲಿ ಹೆಚ್ಚಿನ ನಿಖರತೆ ಇರುತ್ತದೆ. ಇದರ ಜೊತೆಗೆ ಜಿಡಿಪಿ ಲೆಕ್ಕಾಚಾರಕ್ಕೆ ಕೂಡ ನೆರವು ಸಿಗುತ್ತದೆ. ಭಾರತದಲ್ಲಿ ಜಿಡಿಪಿಯ ಅಂದಾಜುಗಳನ್ನು ತಯಾರಿಸುವಾಗ ವಿವಿಧ ವಲಯಗಳ ಉತ್ಪಾದನಾ ಮಾಹಿತಿಯನ್ನು ಬಳಸಲಾಗುತ್ತದೆ. ಕೈಗಾರಿಕಾ ವಲಯಕ್ಕೆ IIP ಇದ್ದರೂ ಸೇವಾ ವಲಯಕ್ಕೆ ಅಂಥ ಮಾಸಿಕ ಮಾಹಿತಿ ಇರಲಿಲ್ಲ. ISP ಜಾರಿಗೆ ಬಂದ ನಂತರ ಜಿಡಿಪಿ ಅಂದಾಜುಗಳು ಇನ್ನಷ್ಟು ನಿಖರವಾಗುವ ಸಾಧ್ಯತೆ ಇದೆ.
ಅಮೆರಿಕ, ಯುರೋಪ್ ಹಾಗೂ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೇವಾ ವಲಯದ ಚಟುವಟಿಕೆಯನ್ನು ಅಳೆಯಲು ವಿವಿಧ ಸೂಚ್ಯಂಕಗಳನ್ನು ಬಳಸಲಾಗುತ್ತಿದೆ. ಭಾರತವೂ ಈಗ ಇದೇ ದಾರಿಯಲ್ಲಿ ಸಾಗುತ್ತಿರುವುದು ದೇಶದ ಅಂಕಿ-ಅಂಶ ವ್ಯವಸ್ಥೆಯ ಪರಿಪಕ್ವತೆಯನ್ನು ತೋರಿಸುತ್ತದೆ. ವಿದೇಶಿ ಹೂಡಿಕೆದಾರರು ಭಾರತದ ಸೇವಾ ಆರ್ಥಿಕತೆಯನ್ನು ಹೆಚ್ಚು ವಿಶ್ವಾಸದಿಂದ ಮೌಲ್ಯಮಾಪನ ಮಾಡಲು ಇದು ನೆರವಾಗುತ್ತದೆ. ಸದ್ಯಕ್ಕೆ ಈ ಸೂಚ್ಯಂಕ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.ಇದರಲ್ಲಿ ಇನ್ನೂ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಕೆಲವು ಭಾಗಗಳು ಇನ್ನೂ ಸೇರಿಲ್ಲ. ಅನೌಪಚಾರಿಕ ಸೇವಾ ವಲಯದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿಲ್ಲ. ಗ್ರಾಮೀಣ ಸೇವಾ ಚಟುವಟಿಕೆಗಳ ಅಳತೆ ಇನ್ನಷ್ಟು ಸುಧಾರಿಸಬೇಕಿದೆ. ಹಾಗೆ ಡೇಟಾ ಸಂಗ್ರಹಣೆಯ ಗುಣಮಟ್ಟವನ್ನು ನಿರಂತರವಾಗಿ ಉತ್ತಮಗೊಳಿಸಬೇಕಾಗಿದೆ. ಹೀಗಾಗಿ ಇದು ಸದ್ಯಕ್ಕೆ ಬಹಳಷ್ಟು ನೂನ್ಯತೆಗಳನ್ನು ಹೊಂದಿರುವ ಮಾಹಿತಿ ಆಗಿರಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಸೇರಿಸುವ ಮೂಲಕ ISP ಇನ್ನಷ್ಟು ಸಮಗ್ರವಾಗುವ ನಿರೀಕ್ಷೆಯಿದೆ. ಇದು ಭಾರತದ ಆರ್ಥಿಕತೆಗೆ ಹೊಸ ದಿಕ್ಕು ನೀಡುವುದರಲ್ಲಿ ಸಂದೇಹವಿಲ್ಲ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯತ್ತ ಸಾಗುತ್ತಿದೆ. ಈ ಪ್ರಯಾಣದಲ್ಲಿ ನಿಖರ ಅಂಕಿ-ಅಂಶಗಳು ಅತ್ಯಂತ ಮುಖ್ಯ. ಕೃಷಿಗೆ ಕೃಷಿ ಸೂಚ್ಯಂಕ, ಕೈಗಾರಿಕೆಗೆ IIP ಇದ್ದಂತೆ ಈಗ ಸೇವಾ ವಲಯಕ್ಕೂ ISP ದೊರೆತಿರುವುದು ದೇಶದ ಆರ್ಥಿಕ ನೀತಿಗೆ ಹೊಸ ಬಲ ನೀಡಲಿದೆ.
ಕೊನೆಮಾತು: ಸೇವಾ ಉತ್ಪಾದನಾ ಸೂಚ್ಯಂಕ (ISP) ಮತ್ತೊಂದು ಮಹತ್ತರ ಅಂಕಿ-ಅಂಶ. ಇದು ಭಾರತದ ಆರ್ಥಿಕತೆಯ ನೈಜ ರೂಪವನ್ನು ಜಗತ್ತಿಗೆ ತೋರಿಸುವ ಹೊಸ ಕಿಟಕಿಯಾಗಿದೆ. ಸೇವಾ ವಲಯ ದೇಶದ ಬೆಳವಣಿಗೆಯ ಪ್ರಮುಖ ಆಧಾರವಾಗಿರುವ ಈ ಸಂದರ್ಭದಲ್ಲಿ, ಅದರ ಮಾಸಿಕ ಕಾರ್ಯಕ್ಷಮತೆಯನ್ನು ಅಳೆಯುವ ಈ ವ್ಯವಸ್ಥೆ ಸರ್ಕಾರ, ರಿಸರ್ವ್ ಬ್ಯಾಂಕ್, ಹೂಡಿಕೆದಾರರು, ಉದ್ಯಮಿಗಳು ಹಾಗೂ ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಲಿದೆ.
ಮುಂದಿನ ವರ್ಷಗಳಲ್ಲಿ ISP ಇನ್ನಷ್ಟು ವ್ಯಾಪಕವಾಗಿ ಅಭಿವೃದ್ಧಿಗೊಂಡರೆ, ಭಾರತದ ಆರ್ಥಿಕ ನೀತಿಗಳು ಹೆಚ್ಚು ವೈಜ್ಞಾನಿಕ, ಡೇಟಾ ಆಧಾರಿತ ಹಾಗೂ ಪರಿಣಾಮಕಾರಿಯಾಗಲಿದ್ದು, ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರವಾಗುವ ಭಾರತದ ಪ್ರಯಾಣಕ್ಕೆ ಇದು ಮತ್ತೊಂದು ಬಲಿಷ್ಠ ಹೆಜ್ಜೆಯಾಗಲಿದೆ. ಈ ನಿಟ್ಟಿನಲ್ಲಿ ಮಹತ್ತರ ನಿರ್ಧಾರ ಕೈಗೊಂಡಿರುವ ಕೇಂದ್ರ ಸರಕಾರದ ನಡೆ ನಿಜಕ್ಕೂ ಅಭಿನಂದನಾರ್ಹ.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com