ಅಣ್ಣಾಡಿಎಂಕೆ ಪಕ್ಷದ ಚಿಹ್ನೆ 
ಅಂಕಣಗಳು

ಅಣ್ಣಾಡಿಎಂಕೆಯಲ್ಲಿ ಮತ್ತೆ ವಿಭಜನೆಯ ಅಧ್ಯಾಯ ಆರಂಭ (ನೇರ ನೋಟ)

ತಮಿಳುನಾಡಿನ ಈ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಕಳೆದುಕೊಂಡು ಪ್ರತಿಪಕ್ಷವಾಗಿದೆ. ಆದರೆ, ಹೆಚ್ಚು ಹಿನ್ನಡೆ ಆಗಿರುವುದು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆಗೆ. ಈ ಪಕ್ಷ ಇವತ್ತು ತನ್ನನ್ನು ಉಳಿಸಿಕೊಳ್ಳಲು ತಿಣುಕಾಡಬೇಕಾದ ಸ್ಥಿತಿ ತಲುಪಿದೆ.

ಸ್ಪರ್ಧೆ ರೋಚಕ. ಫಲಿತಾಂಶ ಅಚ್ಚರಿ. ಪರಿಣಾಮಗಳು ಕುತೂಹಲಕಾರಿ!

ತಮಿಳುನಾಡಿನ ಈ ಬಾರಿಯ ವಿಧಾನಸಭಾ ಚುನಾವಣೆಗೆ ಇದು ಅನ್ವಯ. ಚುನಾವಣಾ ಕಣ ರೋಚಕವಾಗಿತ್ತು. ನಟ ಸಿ.ಜೋಸೆಫ್‌ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಹುತೇಕರು ಇದನ್ನು ನಿರೀಕ್ಷಿಸಿರಲಿಲ್ಲ. ಫಲಿತಾಂಶದ ನಂತರದ ರಾಜಕೀಯ ಸ್ಥಿತಿಗತಿಗಳು ಹಲವು ತಿರುವುಗಳಿಗೆ ಸಾಕ್ಷಿ.

ಮುಖ್ಯಮಂತ್ರಿ ಜೋಸೆಫ್ ವಿಜಯ್‌ ವಿಧಾನಸಭೆಯಲ್ಲಿ ನಿರೀಕ್ಷೆಯಂತೆ ಬಹುಮತ ಸಾಬೀತುಪಡಿಸಿದ್ದಾರೆ. ಏಕೈಕ ದೊಡ್ಡಪಕ್ಷವಾಗಿದ್ದ ಟಿವಿಕೆ ಈಗ ಬಹುಮತದ ಸರಕಾರ. ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ತಮಗಿರುವ ಸರಳ ಬಹುಮತವನ್ನು ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದ್ದರು. ವಿಧಾನಸಭೆಯಲ್ಲಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಶಾಸಕರ (144) ಬೆಂಬಲ ಪಡೆಯುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಸರಳ ಬಹುಮತಕ್ಕೆ ನಾಲ್ಕೈದು ದಿನಗಳ ಕಾಲ ತಿಣುಕಾಡಿದ ವಿಜಯ್‌ ಈಗ ಬಹುಮತದ ಸರಕಾರದ ದಳಪತಿ. ಅವರ ನಿರೀಕ್ಷೆಗೆ ಮೀರಿ ಶಾಸಕರ ಬೆಂಬಲ. ಸರಕಾರ ಸುಭದ್ರ. ಸರಕಾರ ಉಳಿಸಿಕೊಳ್ಳಲು ವಿಜಯ್‌ ಈಗ ಸರ್ಕಸ್‌ ಮಾಡಬೇಕಿಲ್ಲ. ಆದರೆ, ಮತದಾರರ ವಿಶ್ವಾಸ ಉಳಿಸಿಕೊಳ್ಳಲು ಸರ್ಕಸ್‌ ಮಾಡಲೇಬೇಕಿದೆ. ಚುನಾವಣಾ ಭರವಸೆಗಳನ್ನು ಈಡೇರಿಸಲು ಸಂಪನ್ಮೂಲ ಕ್ರೂಢೀಕರಣ ಹೇಗೆ? ಆಡಳಿತ ಸುಧಾರಣೆಗೆ ಕ್ರಮ ಏನು? ಕಾದು ನೋಡಬೇಕಿದೆ.

ಮುಖ್ಯಮಂತ್ರಿ ವಿಜಯ್‌ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದರೆ ಮತ್ತೊಂದೆಡೆ ಇದೇ ಪ್ರಕ್ರಿಯೆಯಲ್ಲಿ ಅಣ್ಣಾಡಿಎಂಕೆ ಶಾಸಕಾಂಗ ಪಕ್ಷ ಹೋಳಾಗಿದೆ. ಅಣ್ಣಾಡಿಎಂಕೆ ಭಿನ್ನಮತೀಯ ಬಣದ 25 ಶಾಸಕರು ವಿಜಯ್‌ ಸರಕಾರವನ್ನು ಬೆಂಬಲಿಸುವುದರೊಂದಿಗೆ ಆ ಪಕ್ಷ ಒಡೆದಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌) ನೇತೃತ್ವದ ಇನ್ನು 22 ಶಾಸಕರು ವಿಜಯ್‌ ಸರಕಾರವನ್ನು ವಿರೋಧಿಸಿ ಮತ ಚಲಾಯಿಸಿದ್ದಾರೆ. ಅಣ್ಣಾಡಿಎಂಕೆಯ 47 ಶಾಸಕರಲ್ಲಿ 25 ಶಾಸಕರು ಭಿನ್ನಮತೀಯರು. ಅವರ ನಾಯಕ ಎಸ್‌.ಪಿ.ವೇಲುಮಣಿ. ಈ ಎಲ್ಲ 25 ಶಾಸಕರನ್ನು ಅಣ್ಣಾಡಿಎಂಕೆಯಿಂದ ಉಚ್ಛಾಟಿಸಲಾಗಿದೆ. ಅಷ್ಟೇ ಅಲ್ಲ, ಪಕ್ಷದ 26 ಜಿಲ್ಲಾ ಕಾರ್ಯದರ್ಶಿಗಳನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಅಲ್ಲಿಗೆ ಅಣ್ಣಾಡಿಎಂಕೆಯ ವಿಭಜನೆಯ ರಾಜಕೀಯ ಇತಿಹಾಸಕ್ಕೆ ಈಗ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ.

ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರದಿದ್ದಾಗ ಪಕ್ಷದ ತತ್ವ, ಸಿದ್ದಾಂತಗಳನ್ನು ಬದಿಗೊತ್ತಿ ರಾಜಕೀಯ ಎದುರಾಳಿ ಡಿಎಂಕೆ ಜೊತೆಗೂಡಿ ಸರಕಾರ ರಚನೆಗೆ ಪಳನಿಸ್ವಾಮಿ ಮುಂದಾಗಿದ್ದರು ಎಂಬುದು ಭಿನ್ನಮತೀಯ ನಾಯಕರ ಆರೋಪ. ಡಿಎಂಕೆಯಿಂದ ಕಾಂಗ್ರೆಸ್‌ ದೂರ ಸರಿದು ಟಿವಿಕೆಗೆ ಬೆಂಬಲ ಘೋಷಿಸಲು ಇದು ಒಂದು ಕಾರಣ ಎಂಬ ಮಾತುಗಳಿವೆ. ಭಿನ್ನಮತೀಯ ಶಾಸಕರಿಗೆ ಈಗ ವಿಧಾನಸಭಾ ಸದಸ್ಯತ್ವದಿಂದ ಅನರ್ಹತೆಯ ಭೀತಿ ಕಾಡಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವ ರದ್ದಾಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

ತಮಿಳುನಾಡಿನ ಈ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಕಳೆದುಕೊಂಡು ಪ್ರತಿಪಕ್ಷವಾಗಿದೆ. ಆದರೆ, ಹೆಚ್ಚು ಹಿನ್ನಡೆ ಆಗಿರುವುದು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆಗೆ. ಈ ಪಕ್ಷ ಇವತ್ತು ತನ್ನನ್ನು ಉಳಿಸಿಕೊಳ್ಳಲು ತಿಣುಕಾಡಬೇಕಾದ ಸ್ಥಿತಿ ತಲುಪಿದೆ. ‘ವಿಷಲ್‌ (ಟಿವಿಕೆ ಚಿಹ್ನೆ) ಕ್ರಾಂತಿ’ ಎದುರಾಳಿಗಳನ್ನು ನಡುಗಿಸಿದೆ.

ಚುನಾವಣೆಗೆ ಮುನ್ನವೂ ಅಣ್ಣಾಡಿಎಂಕೆಯಲ್ಲಿ ಬಣಗಳಿದ್ದವು. ಈ ಬಣಗಳು ಒಗ್ಗೂಡಬೇಕೆಂದು ಆ ಪಕ್ಷಗಳ ಕೆಲವು ನಾಯಕರು ಇಚ್ಛಿಸಿದ್ದರು. ಬಿಜೆಪಿ ನಾಯಕರೂ ಇದನ್ನೇ ಬಯಸಿದ್ದರು. ಅಣ್ಣಾಡಿಎಂಕೆ ಬಣಗಳು ಒಗ್ಗೂಡಿದರೆ ಮತಗಳ ವಿಭಜನೆ ತಡೆಯಬಹುದು. ಇದರಿಂದ ತಾನು ನೆಲೆ ಕಂಡುಕೊಳ್ಳಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಆದರೆ, ಎಡಪ್ಪಾಡಿ ಪಳನಿಸ್ವಾಮಿ ವಿಲೀನವನ್ನು ಬಿಲ್‌ಕುಲ್‌ ಒಪ್ಪಲಿಲ್ಲ.

ಮಾಜಿ ಮುಖ್ಯಮಂತ್ರಿ ಓ. ಪನ್ನೀರ್‌ ಸೆಲ್ವಂ (ಓಪಿಎಸ್‌) ಹಾಗೂ ಇತರ ನಾಯಕರು ಅಣ್ಣಾಡಿಎಂಕೆಗೆ ವಾಪಸ್‌ ಬರಲು ಪ್ರಯತ್ನಿಸಿದರೂ ಇಪಿಎಸ್ ಒಪ್ಪಲೇ ಇಲ್ಲ. ಓಪಿಎಸ್‌ ಕೊನೆಗೆ ಸೇರಿದ್ದು ತಮ್ಮ ರಾಜಕೀಯ ಎದುರಾಳಿಯಾಗಿದ್ದ ಡಿಎಂಕೆಯನ್ನು. ಈ ಬಾರಿ ಆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದಾರೆ. ಪನ್ನೀರ್‌ ಸೆಲ್ವಂ ಅಣ್ಣಾಡಿಎಂಕೆಯಿಂದ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು.

ಅಣ್ಣಾಡಿಎಂಕೆ ವಿಭಜನೆಗೆ ಬಹುದೊಡ್ಡ ಇತಿಹಾಸವೇ ಇದೆ. ಎಂಜಿಆರ್‌, ಜಯಲಲಿತಾ ನಿಧನದ ನಂತರ ಅಣ್ಣಾಡಿಎಂಕೆ ಒಡೆದಿವೆ. ನಂತರದ ದಿನಗಳಲ್ಲಿ ಮತ್ತೆ ಒಗ್ಗೂಡಿವೆ. ಪಕ್ಷದ ಎರಡು ಎಲೆ ಚಿಹ್ನೆ ಚುನಾವಣಾ ಆಯೋಗ ಸ್ಥಗಿತಗೊಳಿಸಿದೆ. ನಂತರ ಮತ್ತೆ ನೀಡಿದೆ. ಆ ಪಕ್ಷದ ಇತಿಹಾಸದ ಉದ್ದಕ್ಕೂ ವಿಭಜನೆ ಹಾಗೂ ವಿಲೀನದ ನಡೆಗಳು.

ಡಿಎಂಕೆಯಲ್ಲಿ ಖಜಾಂಚಿಯಾಗಿದ್ದ ಚಲನಚಿತ್ರ ನಟ ಎಂ.ಜಿ.ರಾಮಚಂದ್ರನ್‌ ಪಕ್ಷದಿಂದ ಹೊರ ಬಂದು 1972ರಲ್ಲಿ ಅಣ್ಣಾಡಿಎಂಕೆ ಸ್ಥಾಪಿಸಿದರು. ಎಂಜಿಆರ್‌ ಐದು ವರ್ಷಗಳ ನಂತರ 1977ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದರು. ಎಂಜಿಆರ್‌ 1982ರಲ್ಲಿ ನಟಿ ಜಯಲಲಿತಾ ಅವರನ್ನು ಪಕ್ಷಕ್ಕೆ ಕರೆತಂದರು. ಪಕ್ಷದ ಪ್ರಚಾರ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು.

ಎಂ.ಜಿ.ರಾಮಚಂದ್ರನ್‌ ಡಿಸೆಂಬರ್‌ 1987ರಲ್ಲಿ ತೀರಿಕೊಂಡ ನಂತರ ಅಣ್ಣಾಡಿಎಂಕೆಯಲ್ಲಿ ಬಣ ರಾಜಕಾರಣ ಮೇಲುಗೈ ಸಾಧಿಸಿತು. ಆಗ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದ ವಿ.ಆರ್.ನೆಡುನ್‌ಚೆಳಿಯನ್‌ ಮುಖ್ಯಮಂತ್ರಿಯಾಗಬೇಕೆಂದು ಜಯಲಲಿತಾ ಅವರ ಬೆಂಬಲಕ್ಕೆ ನಿಂತಿದ್ದರು. ಅಂದಿನ ರಾಜ್ಯಪಾಲರು ಎಂ.ಜಿ.ರಾಮಚಂದ್ರನ್ ಅವರ ಪತ್ನಿ ಜಾನಕಿ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ ಆಹ್ವಾನಿಸಿದ್ದರು. ಜಾನಕಿ ರಾಮಚಂದ್ರನ್‌ 7 ಜನವರಿ 1988ರಲ್ಲಿ ಮುಖ್ಯಮಂತ್ರಿಯಾದರು. ಜನವರಿ 28ರಂದು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಜಾನಕಿ ಹಾಗೂ ಜಯಲಲಿತಾ ಬಣಗಳ ಶಾಸಕರ ಮಧ್ಯೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಯಿತು. ಭದ್ರತಾ ಸಿಬ್ಬಂದಿ ಸದನ ಪ್ರವೇಶಿಸಬೇಕಾಯಿತು. ಎಂಜಿಆರ್‌ ಉತ್ತರಾಧಿಕಾರಿ ಪಟ್ಟದ ವಿವಾದ ಅದಾಗಿತ್ತು. ಜಾನಕಿ ಸರಕಾರವನ್ನು ವಜಾಗೊಳಿಸಿ ಜನವರಿ 30 ರಂದು ರಾಷ್ಟ್ರಪತಿ ಆಳ್ವಿಕೆ ವಿಧಿಸಲಾಯಿತು. ಅಣ್ಣಾಡಿಎಂಕೆ ಜಾನಕಿ ಹಾಗೂ ಜಯಲಲಿತಾ ಬಣಗಳಾಗಿ ಹೋಳಾಯಿತು. ಜಾನಕಿ 23 ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು.

ಎಂಜಿಆರ್‌ ಉತ್ತರಾಧಿಕಾರಿಯಾಗಿ ಜಯಲಲಿತಾ ತಮ್ಮನ್ನು ಬಿಂಬಿಸಿಕೊಂಡರು. ಜಾನಕಿ ಹಾಗೂ ಜಯಲಲಿತಾ ನಡುವಿನ ಸಂಘರ್ಷದಲ್ಲಿ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಯನ್ನು ಚುನಾವಣಾ ಆಯೋಗ ತಡೆ ಹಿಡಿದಿತ್ತು. ಜಯಲಲಿತಾ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಕಟ್ಟಿದರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದರು. ವಿಧಾನಸಭೆಗೆ 1989ರಲ್ಲಿ ನಡೆದ ಚುನಾವಣೆಯಲ್ಲಿ ಅಣ್ಣಾಡಿಎಂಕೆಯ ಎರಡೂ ಬಣಗಳು ಸೋತು ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಅಧಿಕಾರಕ್ಕೆ ಏರಿತು. ಆಗ ಜಯಲಲಿತಾ ನೇತೃತ್ವದ ಅಣ್ಣಾಡಿಎಂಕೆ ಪಡೆದ ಸೀಟುಗಳು 27. ಜಾನಕಿ ಅವರ ನೇತೃತ್ವದ ಎಐಎಡಿಎಂಕೆಯನ್ನು ಮತದಾರರು ತಿರಸ್ಕರಿಸಿದ್ದರು. ಜಾನಕಿ ರಾಮಚಂದ್ರನ್‌ ರಾಜಕಾರಣದಿಂದ ನಿವೃತ್ತಿ ಘೋಷಿಸಿದರು. ನೇಪಥ್ಯಕ್ಕೆ ಸೇರಿದರು. ಅಣ್ಣಾಡಿಎಂಕೆ ಎರಡೂ ಬಣಗಳು ಜಯಲಲಿತಾ ನೇತೃತ್ವದಲ್ಲಿ ಫೆಬ್ರುವರಿ 1989ರಲ್ಲಿ ಒಗ್ಗೂಡಿದವು. ಅಲ್ಲಿಂದ ಮುಂದಕ್ಕೆ ಅಣ್ಣಾಡಿಎಂಕೆಯಲ್ಲಿ ಜಯಲಲಿತಾ ಅವರ ದರ್ಬಾರು ಆರಂಭವಾಯಿತು. ಪಕ್ಷದ ಎರಡು ಎಲೆ ಚಿಹ್ನೆ ಲಭ್ಯವಾಯಿತು. ಜಯಲಲಿತಾ ಪಕ್ಷದಲ್ಲಿ ಪ್ರಶ್ನಾತೀತ ನಾಯಕರಾಗಿ ತಮ್ಮ ಜೀವಿತದ ಕೊನೆಯವರೆಗೂ ಮುಂದುವರಿದರು. ಪಕ್ಷದ ಉಳಿದ ನಾಯಕರು ಅವರ ಅಡಿಯಾಳಾಗಿ ನಡೆದುಕೊಂಡರು.

ಜಯಲಲಿತಾ ಅವರು ಡಿಸೆಂಬರ್‌ 2016ರಲ್ಲಿ ತೀರಿಕೊಂಡ ನಂತರ ಅಣ್ಣಾಡಿಎಂಕೆಯಲ್ಲಿ ಎಡಪ್ಪಾಡಿ ಪಳನಿಸ್ವಾಮಿ, ಪನ್ನೀರ್‌ ಸೆಲ್ವಂ, ಜಯಲಲಿತಾ ಅವರ ನಿಕಟವರ್ತಿಯಾಗಿದ್ದ ವಿ.ಕೆ.ಶಶಿಕಲಾ ಅವರ ಮಧ್ಯೆ ಅಧಿಕಾರಕ್ಕಾಗಿ ಸಂಘರ್ಷ ಆರಂಭವಾಯಿತು. ಪನ್ನೀರ್‌ ಸೆಲ್ವಂ ಮುಖ್ಯಮಂತ್ರಿಯಾದರು. ಕೆಲವು ದಿನಗಳ ನಂತರ ಶಶಿಕಲಾ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಪನ್ನೀರ್‌ ಸೆಲ್ವಂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪನ್ನೀರ್‌ ಸೆಲ್ವಂ ತಮ್ಮನ್ನು ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಯಿತು ಅಂದರು. ಶಶಿಕಲಾ ಆಕ್ರೋಶಗೊಂಡರು. ಪನ್ನೀರ್‌ ಸೆಲ್ವಂ ಅವರನ್ನು ಪಕ್ಷದ ಖಜಾಂಚಿ ಸ್ಥಾನದಿಂದ ಉಚ್ಛಾಟಿಸಿದರು.

ಕೆಲವು ದಿನಗಳ ನಂತರ ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದರು. ಹೀಗಾಗಿ, ಮುಖ್ಯಮಂತ್ರಿ ಆಗಲಿಲ್ಲ. ಜೈಲು ಸೇರುವ ಮುನ್ನ ಶಾಸಕಾಂಗ ಪಕ್ಷದ ಸಭೆ ಕರೆದು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆಯಾಗುವಂತೆ ನೋಡಿಕೊಂಡರು. ಪಳನಿಸ್ವಾಮಿ ಮುಖ್ಯಮಂತ್ರಿಯಾದರು. ಪನ್ನೀರ್‌ ಸೆಲ್ವಂ ಬಂಡೆದ್ದರು. ಚುನಾವಣಾ ಆಯೋಗ ಪಕ್ಷದ ಎರಡು ಎಲೆ ಚಿಹ್ನೆಯನ್ನು ಮತ್ತೊಮ್ಮೆ ಸ್ಥಗಿತಗೊಳಿಸಿತು.

ಆಗ ಪನ್ನೀರ್‌ ಸೆಲ್ವಂ ನೇತೃತ್ವದ ಪಕ್ಷದ ಹೆಸರು ಎಐಎಡಿಎಂಕೆ (ಪುರಚ್ಚಿ ತಲೈವಿ ಅಮ್ಮ), ಪಳನಿಸ್ವಾಮಿ ನಾಯಕತ್ವದ ಎಐಎಡಿಎಂಕೆ (ಅಮ್ಮ) ಎಂದು ಹೆಸರಾಯಿತು. ಕೆಲವು ತಿಂಗಳ ನಂತರ ಆಗಸ್ಟ್‌ 2017ರಲ್ಲಿ ಈ ಎರಡು ಬಣಗಳು ಒಗ್ಗೂಡಿದವು. ಶಶಿಕಲಾ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿದರು. ಪನ್ನೀರ್‌ ಸೆಲ್ವಂ ಉಪಮುಖ್ಯಮಂತ್ರಿಯಾದರು.

ವಿಧಾನಸಭೆಗೆ 2021ರಲ್ಲಿ ಚುನಾವಣೆಯಲ್ಲಿ ಡಿಎಂಕೆ ಗೆದ್ದು ಅಣ್ಣಾಡಿಎಂಕೆ ಅಧಿಕಾರ ಕಳೆದುಕೊಂಡಿತು. ಆದರೆ, ಪ್ರಮುಖ ಪ್ರತಿಪಕ್ಷವಾಯಿತು. ಪಳನಿಸ್ವಾಮಿ ಪ್ರತಿಪಕ್ಷ ನಾಯಕರಾದರು. ಪನ್ನೀರ್ ಸೆಲ್ವಂ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜುಲೈ 2022ರಲ್ಲಿ ಹೊರ ಹಾಕಿದರು. ಪಳನಿಸ್ವಾಮಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡರು. ಚುನಾವಣಾ ಆಯೋಗ ಪಳನಿಸ್ವಾಮಿ ಅವರ ಪಕ್ಷವೇ ನೈಜ ಎಐಎಡಿಎಂಕೆ ಎಂದು 2023ರಲ್ಲಿ ಮಾನ್ಯತೆ ನೀಡಿತು. ಎರಡು ಎಲೆ ಚಿಹ್ನೆ ಪಕ್ಷಕ್ಕೆ ಮತ್ತೆ ದೊರೆಯಿತು. ಪನ್ನೀರ್‌ ಸೆಲ್ವಂ ಏಕತೆಯ ಮಾತಾಡಿದರೂ ಪಳನಿಸ್ವಾಮಿ ಮಣಿಯಲಿಲ್ಲ. ಈ ಬಾರಿಯ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಪನ್ನೀರ್‌ ಸೆಲ್ವಂ ಡಿಎಂಕೆ ಸೇರಿದರು.

ವಿಧಾನಸಭೆಗೆ ಈಗ ಚುನಾವಣೆ ನಡೆದು ಅಣ್ಣಾಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಕ್ಷದಲ್ಲಿ ಪಳನಿಸ್ವಾಮಿ ವಿರುದ್ಧ ಬಂಡಾಯ ಭುಗಿಲೆದ್ದಿದೆ. ಶಾಸಕಾಂಗ ಪಕ್ಷ ಹೋಳಾಗಿದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ ರೂ.3 ಏರಿಕೆ, 4 ವರ್ಷಗಳ ಬಳಿಕ ಇಂಧನ ದರ ಪರಿಷ್ಕರಣೆ..!

ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್: ಪೆಟ್ರೋಲ್-ಡೀಸೆಲ್ ಬಳಿಕ CNG ದರವೂ ಹೆಚ್ಚಳ..!

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್: ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ

ಹಿಜಾಬ್ ನಿಷೇಧ ಹಿಂಪಡೆದ ಸರ್ಕಾರ: ನ್ಯಾಯಾಂಗಕ್ಕೆ ಮಾಡಿದ ಅವಮಾನ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಕರೆಯದ ಕಾರ್ಯಕ್ರಮಕ್ಕೆ ಹೆಂಗಪ್ಪ ಬರಲಿ: ಪಿತೂರಿ ಮಾಡುವುದನ್ನು ಬಿಟ್ಟು ಬೆಳೆಯುವವರನ್ನು ಪ್ರೋತ್ಸಾಹಿಸಿ; ಜೆಸಿ ಮಾಧುಸ್ವಾಮಿ

SCROLL FOR NEXT