ಪೌಷ್ಟಿಕ ಆಹಾರ 
ಅಂಕಣಗಳು

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವೇ ಅಡಿಪಾಯ (ಕುಶಲವೇ ಕ್ಷೇಮವೇ)

ಮಕ್ಕಳು ಬೆಳೆಯುತ್ತಿದ್ದಂತೆ ಅವರ ಆಹಾರದಲ್ಲಿ ವಿವಿಧ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಅಕ್ಕಿ, ಗೋಧಿ, ರಾಗಿ, ಜೋಳ ಮತ್ತು ಸಜ್ಜೆಯಂತಹ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುತ್ತವೆ.

ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಆಹಾರ ಮಹತ್ವದ ಪಾತ್ರ ವಹಿಸುತ್ತದೆ. ಬಾಲ್ಯದಿಂದಲೇ ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ. ಮಕ್ಕಳ ವಯಸ್ಸು ಮತ್ತು ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ ಪೌಷ್ಟಿಕ ಆಹಾರ ನೀಡುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ.

ನವಜಾತ ಶಿಶುಗಳಿಗೆ ತಾಯಿಯ ಹಾಲೇ ಅತ್ಯುತ್ತಮ ಆಹಾರ. ಹುಟ್ಟಿನಿಂದ ಆರು ತಿಂಗಳವರೆಗೆ ಮಗುವಿಗೆ ತಾಯಿಯ ಹಾಲನ್ನು ಮಾತ್ರ ನೀಡಬೇಕು. ಇದು ಮಗುವಿನ ಬೆಳವಣಿಗೆಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆರು ತಿಂಗಳ ನಂತರ ಪೂರಕ ಆಹಾರವನ್ನು ಆರಂಭಿಸಿದರೂ ತಾಯಿಯ ಹಾಲುಣಿಸುವುದನ್ನು ಮುಂದುವರಿಸಬೇಕು. ಕನಿಷ್ಠ ಎರಡು ವರ್ಷಗಳವರೆಗೆ ಸ್ತನ್ಯಪಾನ ಮಾಡಿಸುವುದು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿ.

ಆರು ತಿಂಗಳ ಬಳಿಕ ಮಗುವಿಗೆ ನಿಧಾನವಾಗಿ ಘನ ಆಹಾರವನ್ನು ಪರಿಚಯಿಸಬಹುದು. ಮಗು ಸಹಾಯದಿಂದ ಕುಳಿತುಕೊಳ್ಳುವುದು, ತಲೆಯನ್ನು ನೇರವಾಗಿ ಹಿಡಿದುಕೊಳ್ಳುವುದು, ಆಹಾರದ ಬಗ್ಗೆ ಆಸಕ್ತಿ ತೋರಿಸುವುದು ಮತ್ತು ಕೈಯಿಂದ ಆಹಾರವನ್ನು ಬಾಯಿಗೆ ತೆಗೆದುಕೊಳ್ಳಲು ಪ್ರಯತ್ನಿಸುವುದು ಪೂರಕ ಆಹಾರಕ್ಕೆ ಸಿದ್ಧವಾಗಿರುವುದರ ಸೂಚನೆಗಳಾಗಿವೆ.

ಆರಂಭದಲ್ಲಿ ಚೆನ್ನಾಗಿ ಬೇಯಿಸಿದ ತರಕಾರಿಗಳು, ಅನ್ನ, ರಾಗಿ ಗಂಜಿ ಮತ್ತು ಹಿಸುಕಿದ ಹಣ್ಣುಗಳಂತಹ ಮೃದುವಾದ ಆಹಾರಗಳನ್ನು ನೀಡಬಹುದು. ಮಗು ಬೆಳೆಯುತ್ತಿದ್ದಂತೆ ಇಡ್ಲಿ, ದೋಸೆ, ಚಪಾತಿ, ಅನ್ನ, ಬೇಳೆ, ತರಕಾರಿಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬಹುದು. ಆಹಾರವನ್ನು ಮಗುವಿನ ವಯಸ್ಸಿಗೆ ಅನುಗುಣವಾಗಿ ಮೃದುವಾಗಿ ತಯಾರಿಸಬೇಕು.

ಬೆಳೆಯುವ ಮಕ್ಕಳಿಗೆ ಪೌಷ್ಟಿಕಾಂಶದ ಅಗತ್ಯ

ಮಕ್ಕಳು ಬೆಳೆಯುತ್ತಿದ್ದಂತೆ ಅವರ ಆಹಾರದಲ್ಲಿ ವಿವಿಧ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಅಕ್ಕಿ, ಗೋಧಿ, ರಾಗಿ, ಜೋಳ ಮತ್ತು ಸಜ್ಜೆಯಂತಹ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಬೇಳೆಕಾಳುಗಳು, ಮೊಟ್ಟೆ, ಮತ್ತು ಪನ್ನೀರ್ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಒದಗಿಸುತ್ತವೆ. ತರಕಾರಿಗಳು ಮತ್ತು ಹಣ್ಣುಗಳು ಜೀವಸತ್ವ, ಖನಿಜಾಂಶ ಹಾಗೂ ನಾರಿನ ಅಂಶವನ್ನು ಒದಗಿಸುತ್ತವೆ. ಹಾಲು, ಮೊಸರು ಮತ್ತು ಮಜ್ಜಿಗೆಯನ್ನೂ ಆಹಾರದಲ್ಲಿ ಸೇರಿಸಬಹುದು.

ಒಣದ್ರಾಕ್ಷಿ, ಖರ್ಜೂರ ಮತ್ತು ಇತರ ಒಣಹಣ್ಣುಗಳನ್ನು ವಯಸ್ಸಿಗೆ ಅನುಗುಣವಾಗಿ ನೀಡಬಹುದು. ಚಿಕ್ಕ ಮಕ್ಕಳಿಗೆ ಇಡೀ ಗೋಡಂಬಿ, ಬಾದಾಮಿಯಂತಹ ಗಟ್ಟಿಯಾದ ಪದಾರ್ಥಗಳನ್ನು ನೀಡುವ ಬದಲು ಪುಡಿ ಮಾಡಿ ಅಥವಾ ಸೂಕ್ತ ರೀತಿಯಲ್ಲಿ ಮೃದುಗೊಳಿಸಿ ಕೊಡಬೇಕು. ಆಯಾ ಋತುಮಾನದಲ್ಲಿ ದೊರೆಯುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ. ದುಬಾರಿ ಬೆಲೆಯ ಮಾರುಕಟ್ಟೆ ಆಹಾರಗಳಿಗಿಂತ ಮನೆಯಲ್ಲೇ ತಯಾರಿಸಿದ ವಿವಿಧ ಬಗೆಯ ಪೌಷ್ಟಿಕ ಆಹಾರಗಳಿಗೆ ಆದ್ಯತೆ ನೀಡಬೇಕು.

ಮಕ್ಕಳ ಆಹಾರದಲ್ಲಿ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಹೆಚ್ಚು ಮಹತ್ವ ನೀಡಬೇಕು. ಮಗು ದಷ್ಟಪುಷ್ಟವಾಗಿರಬೇಕು ಎಂಬುದೇ ಆರೋಗ್ಯದ ಮಾನದಂಡವಲ್ಲ. ಮಗು ಚಟುವಟಿಕೆಯಿಂದಿರುವುದು, ಲವಲವಿಕೆಯಿಂದ ಆಟವಾಡುವುದು ಮತ್ತು ವಯಸ್ಸಿಗೆ ತಕ್ಕಂತೆ ಬೆಳವಣಿಗೆ ಹೊಂದುವುದು ಮುಖ್ಯ. ಮಕ್ಕಳನ್ನು ಬಲವಂತವಾಗಿ ಹೆಚ್ಚು ಆಹಾರ ತಿನ್ನಿಸಬಾರದು. ಅವರ ಹಸಿವು ಮತ್ತು ಹೊಟ್ಟೆ ತುಂಬಿದ ಸೂಚನೆಗಳನ್ನು ಪೋಷಕರು ಗಮನಿಸಬೇಕು. ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ರಾಗಿ ಸರಿಯನ್ನು ಮಕ್ಕಳಿಗ ಕೊಡಬಹುದು.

ಆಹಾರ ಸೇವನೆಯ ಉತ್ತಮ ಅಭ್ಯಾಸಗಳ ರೂಢಿ

ಆಹಾರ ಸೇವನೆಯ ಉತ್ತಮ ಅಭ್ಯಾಸಗಳನ್ನು ಬಾಲ್ಯದಿಂದಲೇ ರೂಢಿಸಬೇಕು. ಮಕ್ಕಳು ನಿಧಾನವಾಗಿ ಆಹಾರವನ್ನು ಅಗಿದು ತಿನ್ನುವಂತೆ ಪ್ರೋತ್ಸಾಹಿಸಬೇಕು. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ನಿಯಮಿತ ಸಮಯಕ್ಕೆ ನೀಡಬೇಕು. ಊಟದ ನಡುವೆ ಹಣ್ಣುಗಳು, ಬೇಯಿಸಿದ ತರಕಾರಿಗಳು ಮತ್ತು ಮನೆಯಲ್ಲೇ ತಯಾರಿಸಿದ ಆರೋಗ್ಯಕರ ತಿಂಡಿಗಳನ್ನು ನೀಡಬಹುದು. ಮಕ್ಕಳು ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನೂ ಬೆಳೆಸಬೇಕು.

ಚಾಕೋಲೇಟ್, ಕ್ಯಾಂಡಿ, ಬಬಲ್‌ಗಮ್, ಚಿಪ್ಸ್, ಐಸ್‌ಕ್ರೀಮ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು. ಸಕ್ಕರೆ ಹೆಚ್ಚಿರುವ ಪಾನೀಯಗಳು ಮತ್ತು ಪ್ಯಾಕೆಟ್ ಜ್ಯೂಸ್‌ಗಳ ಬದಲಿಗೆ ನೀರು ಮತ್ತು ತಾಜಾ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಬೆಳೆಸಬೇಕು.

ಮಕ್ಕಳಿಗೆ ಆಹಾರ ನೀಡುವಾಗ ಅವರು ನೇರವಾಗಿ ಕುಳಿತಿರುವಂತೆ ನೋಡಿಕೊಳ್ಳಬೇಕು. ತಿನ್ನುವಾಗ ಮಕ್ಕಳನ್ನು ಒಂಟಿಯಾಗಿ ಬಿಡಬಾರದು. ಆಹಾರ ತಯಾರಿಸುವ ಪಾತ್ರೆಗಳು ಸ್ವಚ್ಛವಾಗಿರಬೇಕು. ಹೊಸ ಆಹಾರಗಳನ್ನು ಒಂದೊಂದಾಗಿ ಪರಿಚಯಿಸಿ, ಯಾವುದೇ ಅಲರ್ಜಿ ಲಕ್ಷಣಗಳು ಕಂಡುಬರುತ್ತವೆಯೇ ಎಂಬುದನ್ನು ಗಮನಿಸಬೇಕು. ಯಾವುದೇ ಆಹಾರವನ್ನು ಮಗು ನಿರಾಕರಿಸಿದರೆ ಬಲವಂತ ಮಾಡದೆ ಕೆಲವು ದಿನಗಳ ನಂತರ ಮತ್ತೆ ನೀಡಬಹುದು.

ಪ್ರತಿಯೊಂದು ಮಗುವಿನ ಬೆಳವಣಿಗೆ ಮತ್ತು ಆಹಾರದ ಅಗತ್ಯಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಮಗುವಿನ ವಯಸ್ಸು ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಪದ್ಧತಿಯನ್ನು ರೂಪಿಸಿಕೊಳ್ಳಲು ಮಕ್ಕಳ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಒಟ್ಟಿನಲ್ಲಿ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಹೆಚ್ಚು ಆಹಾರ ನೀಡುವುದಕ್ಕಿಂತ ಸರಿಯಾದ ಆಹಾರ ನೀಡುವುದು ಮುಖ್ಯ. ಸಮತೋಲಿತ ಆಹಾರ, ನಿಯಮಿತ ಆಹಾರ ಪದ್ಧತಿ ಮತ್ತು ಉತ್ತಮ ಆಹಾರ ಅಭ್ಯಾಸಗಳು ಮಕ್ಕಳನ್ನು ಆರೋಗ್ಯವಂಚಿತ ಮತ್ತು ಚಟುವಟಿಕೆಯುಳ್ಳ ವ್ಯಕ್ತಿಗಳನ್ನಾಗಿ ಬೆಳೆಸಲು ನೆರವಾಗುತ್ತವೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು: 37 ಜಿಲ್ಲೆಗಳ ಪೈಕಿ 33ರಲ್ಲಿ ಮುನ್ನಡೆ; BJPಗೆ ತೀವ್ರ ಮುಖಭಂಗ!

ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಜತೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ?

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್: ಕೃಪಾ ಆಳ್ವಾ, ರಾಕೇಶ್ ಶೆಟ್ಟಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!

ತಾಯಿ ನಿಧನ: ದುಃಖದಲ್ಲೂ ಕರ್ತವ್ಯ ಪೂರ್ಣಗೊಳಿಸಿದ CM ಯೋಗಿ ಆದಿತ್ಯನಾಥ್; ಪ್ರಧಾನಿ ಮೋದಿ ಸಾಂತ್ವನ!