ರಾಜ್ಯದ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ಡಿಎ ವಿಜಯ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಈ ಫಲಿತಾಂಶವನ್ನು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಕರೆಯಲು ಖಂಡಿತ ಸಾಧ್ಯವಿಲ್ಲ. ಆದರೆ, ಗೆದ್ದವರಿಗೆ ಸ್ವಲ್ಪಮಟ್ಟಿಗೆ ಚೇತರಿಕೆ ನೀಡಿದೆ. ಸೋತವರಿಗೆ ಮುಜುಗರ. ಕೆಲವು ಪಾಠಗಳು. ಅಷ್ಟರಮಟ್ಟಿಗೆ ಇದರ ಪ್ರಭಾವ.
ಪಶ್ಚಿಮ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳು, ಈಶಾನ್ಯ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23 ರಂದು ಮತದಾನ ನಡೆದಿತ್ತು. ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಕೂಟಗಳ ನಡುವೆ ನೇರ ಪೈಪೋಟಿ ಇತ್ತು. ಕಾಂಗ್ರೆಸ್ ನಾಲ್ಕೂ ಕ್ಷೇತ್ರಗಳಲ್ಲಿ ಸೋತಿದೆ. ಬಿಜೆಪಿ ಮೂರು, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಬಿಜೆಪಿ ತನ್ನ ಮೂರು ಕ್ಷೇತ್ರಗಳನ್ನು ಉಳಿಸಿಕೊಂಡಿದ್ದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಜೆಡಿಎಸ್ ಕಸಿದುಕೊಂಡಿದೆ. ಬಿಜೆಪಿಗೆ ಕ್ಷೇತ್ರ ಉಳಿಸಿಕೊಂಡಿದ್ದೇ ಚೇತರಿಕೆಯಂತಾಗಿದೆ. ಗೆಲುವಿನಿಂದ ಬೀಗುತ್ತಿದ್ದ ಕಾಂಗ್ರೆಸ್ಸಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಕಳೆದುಕೊಂಡಿದ್ದು ಗರ್ವಭಂಗವಾಗಿದೆ.
ವಿಧಾನಪರಿಷತ್ ಚುನಾವಣೆ ನಡೆದ ವ್ಯಾಪ್ತಿಯಲ್ಲಿ 19 ಜಿಲ್ಲೆಗಳಿದ್ದವು. ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 133. ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೂ, ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಸಾಧ್ಯವಾಗಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕಾಂಗ್ರೆಸ್ಸಿಗೆ ಇಲ್ಲಿ ಸವಾಲಾಗಿ ನಿಂತಿದೆ. ಈ ಎರಡು ಪಕ್ಷಗಳು ಒಗ್ಗೂಡಿದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸಿಗೆ ಅಪಾಯವಿದೆ ಎಂಬುದನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರಸ್ತಾಪಿಸಿದ್ದಾರೆ. ಹರಿಪ್ರಸಾದ್ ಅವರ ಲೆಕ್ಕಾಚಾರ ಸರಿಯಾಗಿಯೇ ಇದೆ. ಆದರೆ, ಬಿಜೆಪಿ ತನ್ನ ಆಂತರಿಕ ಕಲಹವನ್ನು ಸರಿಪಡಿಸಿಕೊಂಡರೆ ಮಾತ್ರ ಇದು ಸಾಧ್ಯ. ರಾಜ್ಯದಲ್ಲಿ ಬಿಜೆಪಿಗೆ ಮತದಾರರಿದ್ದಾರೆ. ಬದ್ಧತೆಯ ಕಾರ್ಯಕರ್ತರಿದ್ದಾರೆ. ಆದರೆ, ನಾಯಕರು ಹಾಗೂ ನಾಯಕತ್ವದ್ದೇ ಸಮಸ್ಯೆ. ಹೈಕಮಾಂಡ್ ಕೂಡ ಮೌನ.
ವಿಧಾನಪರಿಷತ್ ಚುನಾವಣೆ ಫಲಿತಾಂಶ ಎನ್ಡಿಎ ಮೈತ್ರಿಕೂಟದ ಕಾರ್ಯಕರ್ತರಿಗೆ ಹೊಸ ಹುರುಪು ಮೂಡಿಸಿದೆ. ಜೆಡಿಎಸ್ ಹಾಗೂ ಬಿಜೆಪಿ ವೋಟುಗಳು ಪರಸ್ಪರ ವರ್ಗವಾಗಿರುವುದನ್ನು ಫಲಿತಾಂಶ ತೋರಿಸಿದೆ. ಲೋಕಸಭಾ ಚುನಾವಣೆಯಲ್ಲಿ ಹೀಗೆ ವೋಟುಗಳು ಟ್ರಾನ್ಸ್ಫರ್ ಆಗಿದ್ದವು. ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಇದು ಮುಂದುವರಿದಿದೆ. ವಿಧಾನಸಭಾ ಚುನಾವಣೆಯಲ್ಲಿಯೂ ಇದು ಸಾಧ್ಯವಾಗಬೇಕಾದರೆ ಮೈತ್ರಿಕೂಟ ವಿಶ್ವಾಸ ಉಳಿಸಿಕೊಳ್ಳಬೇಕು. ಆ ಹೊಣೆಗಾರಿಕೆ ಉಭಯ ಪಕ್ಷಗಳ ನಾಯಕರ ಮೇಲೆಯೇ ಇದೆ. ಕೆಲವು ವಿಚಾರಗಳಲ್ಲಿ ಈ ಹಿಂದೆ ಬಿಜೆಪಿ-ಜೆಡಿಎಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಉಭಯ ಪಕ್ಷಗಳ ನಾಯಕರು ಮುಂಬರುವ ದಿನಗಳಲ್ಲಿ ಪರಸ್ಪರ ಹೇಗೆ ಸಮನ್ವಯ ಸಾಧಿಸುತ್ತಾರೆ ಎಂಬುದು ಬಹಳ ಮುಖ್ಯ. ಬಿಜೆಪಿ-ಜೆಡಿಎಸ್ ಮಧ್ಯೆ ಸಮನ್ವಯಕ್ಕಿಂತ ಮುನ್ನ ಬಿಜೆಪಿಯಲ್ಲಿಯೇ ಆಂತರಿಕವಾಗಿ ಮೊದಲು ಸಮನ್ವಯ ಸಾಧ್ಯವಾಗಬೇಕಿದೆ.
ಈ ಚುನಾವಣಾ ಫಲಿತಾಂಶವು ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟದ ಸಂಘಟನಾ ಶಕ್ತಿ ಹೆಚ್ಚುತ್ತಿದೆ ಎಂಬ ಸಂದೇಶವನ್ನು ರವಾನಿಸಿರುವುದಾಗಿ ವಿಶ್ಲೇಷಣೆ ನಡೆದಿದೆ. ಇಲ್ಲಿ ಪದವೀಧರರು ಹಾಗೂ ಶಿಕ್ಷಕರು ಮತ ಚಲಾಯಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ಖಂಡಿತವಾಗಿಯೂ ದಿಕ್ಸೂಚಿ ಆಗಲಾರದು. ವಿಧಾನಸಭಾ ಚುನಾವಣೆಯಲ್ಲಿ ಚರ್ಚೆಯಾಗುವ ವಿಷಯಗಳೇ ಬೇರೆ. ಮತದಾರರ ಸಂಖ್ಯೆಯೂ ಅಪಾರ. ಭೌಗೋಳಿಕ ವ್ಯಾಪ್ತಿಯೂ ವಿಶಾಲವಾದದ್ದು. ಸ್ಥಳೀಯ ವಿಚಾರಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಜಾತಿ, ಹಣಬಲವೂ ಮುಖ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಸರಕಾರದ ಕಾರ್ಯನಿರ್ವಹಣೆಯನ್ನು ಮತದಾರ ಪ್ರಬಲವಾಗಿ ಒರಗೆ ಹಚ್ಚಿರುತ್ತಾನೆ.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದ ನಂತರ ಪದವೀಧರರು ಹಾಗಾ ಶಿಕ್ಷಕರ ಕ್ಷೇತ್ರದಿಂದ ಇದು ಮೊದಲ ಚುನಾವಣೆ ಆಗಿತ್ತು. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಹಿನ್ನೆಲೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್ನಿಂದ ದೂರ ಸರಿಯುತ್ತಿವೆಯೇ ಎಂಬ ಸಂದೇಹವನ್ನು ಈ ಫಲಿತಾಂಶ ಮೂಡಿಸಿದೆ. ಸಿದ್ದರಾಮಯ್ಯ ಜನಸಮೂಹದ ನಾಯಕರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಜೊತೆಯಲ್ಲಿ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಕಾರ್ಯತಂತ್ರಗಳು ಬಲ ನೀಡಿತ್ತು. ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಕಾಂಗ್ರೆಸ್ ಮೇಲೆ ಇದರ ಪ್ರತಿಕೂಲ ಪರಿಣಾಮ ಖಚಿತ. ಇದು ಕಾಂಗ್ರೆಸ್ಸಿಗೂ ಚೆನ್ನಾಗಿ ಗೊತ್ತಿದೆ.
ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದ ನಂತರ ಅವರ ವಿರುದ್ಧ ಈ ಹಿಂದೆ ನಡೆಸಿರುವ ಸ್ಟಿಂಗ್ ಆಪರೇಷನ್ ಬಯಲಾಗಿರುವುದು ರಾಜಕೀಯವಾಗಿ ಪರಿಣಾಮ ಬೀರಿದೆ. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಕುಂದು ತರುವ ಕೆಲಸ ನಡೆದಿದೆ. ಇದೊಂದು ಷಡ್ಯಂತ್ರ ಎಂಬ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಪೊಲೀಸರಿಗೆ ದೂರು ನೀಡಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಈ ಷಡ್ಯಂತ್ರದಲ್ಲಿ ಕಾಂಗ್ರೆಸ್ಸಿಗರೇ ಭಾಗಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಅವರ ಪುತ್ರ, ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ. ತನಿಖೆ ನಡೆಸಿರುವ ಬೆಂಗಳೂರು ಪೊಲೀಸರು ಗುರುವಾರ ಪತ್ರಿಕಾ ಪ್ರಕಟಣೆ ನೀಡಿ, ವಿಡಿಯೊದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪಗಳು ಕಟ್ಟುಕಥೆಯ ಭಾಗವಾಗಿದೆ. ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ನಿರೂಪಣೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಡಿಯೊದಲ್ಲಿ ಚಿತ್ರಿಸಿರುವ ರೀತಿಯಲ್ಲಿ ಯಾವುದೇ ಘಟನೆ ನಡೆದಿರುವ ಬಗ್ಗೆ ಈವರೆಗಿನ ತನಿಖೆಯಲ್ಲಿ ದಾಖಲಿಸಲಾದ ಹೇಳಿಕೆಗಳು ಹಾಗೂ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಧೃಡಪಡಿಸುವುದಿಲ್ಲ ಎಂದಿದ್ದಾರೆ. ತನಿಖೆ ಮುಂದುವರಿದಿದೆ. ಆದರೆ, ಷಡ್ಯಂತ್ರ ನಡೆಸಿರುವವರು ಯಾರು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಾಗಬೇಕಿದೆ. ಸ್ಟಿಂಗ್ ಆಪರೇಷನ್ ವಿವಾದ, ಚರ್ಚೆಗಳು ಕಾಂಗ್ರೆಸ್ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸರಕಾರದ ಸಾಧನೆಗಳು ಬದಿಗೆ ಸರಿದಿವೆ. ಒಂದು ಸರಕಾರಕ್ಕೆ ಯಾವ ವಿಚಾರಗಳನ್ನು ಚರ್ಚೆಯ ಕೇಂದ್ರ ಸ್ಥಾನದಲ್ಲಿರಿಸಬೇಕೆಂಬುದು ಬಹಳ ಮುಖ್ಯ.
ವಿಧಾನಪರಿಷತ್ತಿನ ಈ ಚುನಾವಣೆ ಎರಡು ಕಾರಣಕ್ಕೆ ಮುಖ್ಯವಾಗಿತ್ತು. ಒಂದು- ಬಿಜೆಪಿ-ಜೆಡಿಎಸ್ ಒಗ್ಗೂಡಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಮತದಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿತ್ತು. ಮತ್ತೊಂದು- ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ, ಬಿ.ಕೆ.ಹರಿಪ್ರಸಾದ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನಂತರ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆದ ಮೊದಲ ಚುನಾವಣೆ ಇದಾಗಿತ್ತು. ಹೀಗಾಗಿ, ಆಸಕ್ತಿ ಹೆಚ್ಚಾಗಿತ್ತು. ಈ ಚುನಾವಣಾ ಫಲಿತಾಂಶ ಶಿವಕುಮಾರ್ ಹಾಗೂ ಹರಿಪ್ರಸಾದ್ ಅವರಿಗೆ ಮುಜುಗರ ತಂದಿದೆ. ಫಲಿತಾಂಶಕ್ಕೆ ಇಬ್ಬರೂ ನಾಯಕರು ಎಚ್ಚರಿಕೆಯಿಂದಲೇ ಪ್ರತಿಕ್ರಿಯಿಸಿದ್ದಾರೆ. ಆತ್ಮಾವಲೋಕನದ ಮಾತುಗಳನ್ನು ಆಡಿದ್ದಾರೆ. “ಮತದಾರರ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳುತ್ತೇವೆ’’ ಎಂಬ ಮುಖ್ಯಮಂತ್ರಿಗಳ ಮಾತು ಸಕಾರಾತ್ಮತಕ ನಡೆಯಾಗಿದೆ.
ಇನ್ನು ಒಂದೂವರೆ ವರ್ಷಕ್ಕೆ ವಿಧಾನನಸಭಾ ಚುನಾವಣೆ ಎದುರಾಗಲಿದೆ. ರಾಜ್ಯ ಸರಕಾರ ತನ್ನ ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂಬಂತೆ ಬಿಂಬಿಸಿಕೊಂಡು ಬಂದಿದೆ. ಆದರೆ, ಲೋಕಸಭಾ ಚುನಾವಣೆ ಅಥವಾ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾರ ಇದಕ್ಕೆ ಒಲಿದಿಲ್ಲ. ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಂದ ಆಚೆಗೆ ಧೃಡವಾದ ಹೆಜ್ಜೆಗಳನ್ನು ಇರಿಸಬೇಕಿದೆ. ಸಂಪನ್ಮೂಲ ಕ್ರೂಢೀಕರಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ತಾಲೂಕು ಮಟ್ಟದಲ್ಲಿ ಆಡಳಿತ ಬಿಗಿಗೊಳ್ಳಬೇಕಿದೆ. ಜನಸಾಮಾನ್ಯರ ಅಹವಾಲುಗಳಿಗೆ ತಕ್ಷಣವೇ ಪರಿಹಾರ ಸಿಗಬೇಕಿದೆ.
ಮುಖ್ಯಮಂತ್ರಿ ಶಿವಕುಮಾರ್ ಅವರು ಕ್ರಿಯಾಶೀಲರಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನದ ವಿಷಯವಿರಲಿ, ಯೋಜನೆಗಳಿಗೆ ಅನುಮತಿ ಪಡೆಯುವ ವಿಷಯವೇ ಆಗಿರಲಿ ದೆಹಲಿಗೆ ತೆರಳಿ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿಗೆ ಆಗಬೇಕಿರುವ ಕಾರ್ಯಗಳ ಪಟ್ಟಿಯನ್ನೇ ನೀಡುತ್ತಾರೆ. ರಾಜ್ಯಕ್ಕೆ ನ್ಯಾಯಯುತವಾಗಿ ದೊರೆಯಬೇಕಿರುವ ಅನುದಾನದ ಬಿಡುಗಡೆಗೆ ಒತ್ತಡ ಹೇರುತ್ತಾರೆ. ಶಿವಕುಮಾರ್ ಅವರದು ಕೇಂದ್ರ ಸರಕಾರದ ಜೊತೆ ಸಂಘರ್ಷದ ಮನೋಭಾವವಲ್ಲ. ಅವರ ಕ್ರಿಯಾಶೀಲತೆಯನ್ನು ಇತರ ಸಚಿವರೂ ಅಳವಡಿಸಿಕೊಂಡರೆ ಆಡಳಿತಕ್ಕೆ ವೇಗ ಸಿಗಬಹುದು. ಅನಾವಶ್ಯಕ ವಾಗ್ದಾಳಿಗಳಿಗೆ ಪ್ರತಿಕ್ರಿಯಿಸುತ್ತಾ ಹೋದರೆ ಆಡಳಿತದ ಮೇಲೆ ಗಮನ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಜನರು ಕೂಡ ನಾಡಿನ ಹಿತ ಚಿಂತನೆ ಬಿಟ್ಟು ಇತರ ವಿಚಾರಗಳ ಚರ್ಚೆಯನ್ನು ಇಷ್ಟಪಡುವುದಿಲ್ಲ. ಇದನ್ನು ಮೊದಲು ಪ್ರತಿಪಕ್ಷಗಳು ಹಾಗೂ ಸರಕಾರ ಅರಿಯಬೇಕು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com