ಸಂಗ್ರಹ ಚಿತ್ರ 
ಅಂಕಣಗಳು

ಸಾಲವಿಲ್ಲದೆ ಬದುಕಲು ಸಾಧ್ಯವಿದೆಯೇ..?

ಇಂದಿನ ದಿನಗಳಲ್ಲಿ ಅನೇಕರು ಸಾಲ ಮಾಡುವುದು ಸಮಾಜಕ್ಕೆ ಅಥವಾ ನೆರೆಹೊರೆಯವರಿಗೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು. "ಅವರು ದೊಡ್ಡ ಕಾರು ಕೊಂಡರು, ನಾನು ಕೊಳ್ಳಬೇಕು", "ಅವರು ಐಷಾರಾಮಿ ಮದುವೆ ಮಾಡಿದರು, ನಾನು ಮಾಡಬೇಕು" ಎನ್ನುವ ಸ್ಪರ್ಧೆಯೇ ಸಾಲದ ಕೂಪಕ್ಕೆ ತಳ್ಳುತ್ತದೆ.

ಸಾಲ ಮಾಡದೆ ಬದುಕಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವುದು ಸಹಜ. ಏಕೆಂದರೆ ಇಂದಿನ ಆರ್ಥಿಕ ವ್ಯವಸ್ಥೆ, ಜಾಹೀರಾತುಗಳು ಮತ್ತು ಬ್ಯಾಂಕುಗಳ ಆಫರ್‌ಗಳು ನಮ್ಮನ್ನು ಸಾಲ ಮಾಡುವಂತೆ ಪ್ರೇರೇಪಿಸುತ್ತವೆ. ಆದರೆ, ಸಾಲ ಮಾಡದೆ ಅತ್ಯಂತ ನೆಮ್ಮದಿಯಿಂದ ಮತ್ತು ಗೌರವಯುತವಾಗಿ ಬದುಕಲು ಖಂಡಿತವಾಗಿಯೂ ಸಾಧ್ಯವಿದೆ. ಇದಕ್ಕಾಗಿ ನಮಗೆ ಬೇಕಾಗಿರುವುದು ಕಟ್ಟುನಿಟ್ಟಾದ ಹಣಕಾಸಿನ ಶಿಸ್ತು, ಸಂಯಮ ಮತ್ತು ಸರಿಯಾದ ಯೋಜನೆ.

ಸಾಲ ಮುಕ್ತ ಜೀವನ ನಡೆಸುವುದು ಹೇಗೆ, ಅದರ ಸವಾಲುಗಳು ಮತ್ತು ಅದರಿಂದ ಹೇಗೆ ಹೊರಬರುವುದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

೧. ಮಾನಸಿಕ ಸಿದ್ಧತೆ ಮತ್ತು ಆಲೋಚನಾ ಶೈಲಿಯ ಬದಲಾವಣೆ:

ಸಾಲ ಮುಕ್ತ ಜೀವನದ ಮೊದಲ ಹೆಜ್ಜೆ ನಮ್ಮ ಆಲೋಚನೆಗಳನ್ನು ಬದಲಾಯಿಸುವುದು.ಆಸೆ ಮತ್ತು ಅಗತ್ಯಗಳ ನಡುವಿನ ವ್ಯತ್ಯಾಸ (Needs vs Wants) ಸರಿಯಾಗಿ ತಿಳಿದುಕೊಳ್ಳಬೇಕು . ನಮಗೆ ಬದುಕಲು ಅನ್ನ, ಬಟ್ಟೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ಅತ್ಯಗತ್ಯ (Needs). ಆದರೆ ದುಬಾರಿ ಕಾರು, ಬ್ರ್ಯಾಂಡೆಡ್ ಬಟ್ಟೆಗಳು, ಪ್ರತಿ ವರ್ಷ ಹೊಸ ಮೊಬೈಲ್ ಫೋನ್ ಕೊಳ್ಳುವುದು ನಮ್ಮ ಆಸೆಗಳು (Wants). ಅಗತ್ಯಗಳಿಗೆ ಹಣ ಖರ್ಚು ಮಾಡಿ, ಆಸೆಗಳನ್ನು ನಮ್ಮ ಆದಾಯಕ್ಕೆ ತಕ್ಕಂತೆ ನಿಯಂತ್ರಿಸಬೇಕು.

೨. ಪ್ರದರ್ಶನದ ಬದುಕಿಗೆ ವಿದಾಯ (No Show-off):

ಇಂದಿನ ದಿನಗಳಲ್ಲಿ ಅನೇಕರು ಸಾಲ ಮಾಡುವುದು ಸಮಾಜಕ್ಕೆ ಅಥವಾ ನೆರೆಹೊರೆಯವರಿಗೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು. "ಅವರು ದೊಡ್ಡ ಕಾರು ಕೊಂಡರು, ನಾನು ಕೊಳ್ಳಬೇಕು", "ಅವರು ಐಷಾರಾಮಿ ಮದುವೆ ಮಾಡಿದರು, ನಾನು ಮಾಡಬೇಕು" ಎನ್ನುವ ಸ್ಪರ್ಧೆಯೇ ಸಾಲದ ಕೂಪಕ್ಕೆ ತಳ್ಳುತ್ತದೆ. ಇತರರನ್ನು ಮೆಚ್ಚಿಸಲು ನಿಮ್ಮ ಆರ್ಥಿಕ ನೆಮ್ಮದಿಯನ್ನು ಬಲಿ ಕೊಡಬೇಡಿ.ಇವತ್ತಿನ ಸೋಶಿಯಲ್ ಮೀಡಿಯಾ ಇಂತಹ ಹಪಹಪಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.ನಮ್ಮನ್ನು ಹೊಗಳಿದವರು , ಸೂಪರ್ ಎಂದು ಕೊಂಡಾಡಿದವರು ನಮ್ಮ ಸಾಲ ಕಟ್ಟಲು ಬರುವುದಿಲ್ಲ ಎನ್ನುವುದು ನೆನಪಿರಲಿ.

೩. ಆದಾಯಕ್ಕೆ ತಕ್ಕ ಬಜೆಟ್ ಸೂತ್ರ (The 50/30/20 Rule):

ಸಾಲ ಮಾಡದಿರಲು ಹಣದ ಹರಿವನ್ನು ನಿರ್ವಹಿಸುವುದು ಮುಖ್ಯ. ಇದಕ್ಕಾಗಿ ಪ್ರಸಿದ್ಧವಾದ 50/30/20 ಆರ್ಥಿಕ ಸೂತ್ರವನ್ನು ಅಳವಡಿಸಿಕೊಳ್ಳಬೇಕು.

೫೦% ಅತ್ಯಗತ್ಯ ಖರ್ಚುಗಳು (Needs): ನಿಮ್ಮ ಒಟ್ಟು ಸಂಬಳ ಅಥವಾ ಆದಾಯದ ಅರ್ಧದಷ್ಟು ಭಾಗವನ್ನು ಮನೆ ಬಾಡಿಗೆ, ರೇಷನ್, ಕರೆಂಟ್ ಬಿಲ್, ಮಕ್ಕಳ ಶಾಲಾ ಫೀಸ್ ಮತ್ತು ವೈದ್ಯಕೀಯ ಖರ್ಚುಗಳಿಗೆ ಮೀಸಲಿಡಿ.

೩೦% ವೈಯಕ್ತಿಕ ಆಸೆಗಳು (Wants): ನಿಮ್ಮ ಆದಾಯದ ಶೇಕಡಾ ೩೦ ರಷ್ಟನ್ನು ಹಬ್ಬಗಳು, ಪ್ರವಾಸ, ಸಿನಿಮಾ ಅಥವಾ ಹೋಟೆಲ್ ಊಟದಂತಹ ಮನರಂಜನೆಗೆ ಬಳಸಬಹುದು. ಒಂದು ವೇಳೆ ಹಣದ ಕೊರತೆಯಿದ್ದರೆ ಈ ವಿಭಾಗದ ಖರ್ಚನ್ನು ತಕ್ಷಣ ಕಡಿತಗೊಳಿಸಬಹುದು.

೨೦% ಕಡ್ಡಾಯ ಉಳಿತಾಯ (Savings): ಸಂಬಳ ಬಂದ ತಕ್ಷಣ ಕನಿಷ್ಠ ಶೇಕಡಾ ೨೦ ರಷ್ಟು ಹಣವನ್ನು ಕಣ್ಣಿಗೆ ಕಾಣದಂತೆ ಉಳಿತಾಯ ಖಾತೆಗೆ ಅಥವಾ ಹೂಡಿಕೆಗೆ ವರ್ಗಾಯಿಸಬೇಕು. ಉಳಿದ ಹಣದಲ್ಲೇ ತಿಂಗಳ ಖರ್ಚು ನಿಭಾಯಿಸಬೇಕು.

೪. ತುರ್ತು ನಿಧಿಯ ಪ್ರಾಮುಖ್ಯತೆ (The Emergency Fund):

ಮನುಷ್ಯ ಸಾಲದ ಮೊರೆ ಹೋಗುವುದು ಹೆಚ್ಚಾಗಿ ಹಠಾತ್ ಸಂಕಷ್ಟಗಳು ಎದುರಾದಾಗ. ಉದಾಹರಣೆಗೆ, ಕೆಲಸ ಕಳೆದುಕೊಳ್ಳುವುದು, ವ್ಯಾಪಾರದಲ್ಲಿ ನಷ್ಟ, ಅಥವಾ ಹಠಾತ್ ಅನಾರೋಗ್ಯ. ಇಂತಹ ಸಮಯದಲ್ಲಿ ಸಾಲ ಮಾಡದಂತೆ ತಡೆಯಲು 'ತುರ್ತು ನಿಧಿ' ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ.ಎಷ್ಟು ಹಣ ಇರಬೇಕು? ನಿಮ್ಮ ತಿಂಗಳ ಒಟ್ಟು ಖರ್ಚು ೨೫,೦೦೦ ರೂಪಾಯಿ ಆಗಿದ್ದರೆ, ಕನಿಷ್ಠ ೬ ತಿಂಗಳ ಖರ್ಚಿಗೆ ಆಗುವಷ್ಟು ಅಂದರೆ ೧,೫೦,೦೦೦ ರೂಪಾಯಿಗಳನ್ನು ಪ್ರತ್ಯೇಕವಾಗಿ ಎಫ್‌ಡಿ (FD) ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ಇಡಬೇಕು. ಈ ಹಣವನ್ನು ಕೇವಲ ಅತ್ಯಂತ ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಮದುವೆ, ಹಬ್ಬ ಅಥವಾ ಪ್ರವಾಸಗಳಿಗೆ ಈ ಹಣವನ್ನು ಮುಟ್ಟಬಾರದು. ಈ ನಿಧಿ ನಿಮ್ಮ ಕೈಲಿದ್ದರೆ, ಯಾವುದೇ ಸಂಕಷ್ಟ ಬಂದರೂ ನೀವು ಧೈರ್ಯವಾಗಿ ಎದುರಿಸಬಹುದು, ಸಾಲದ ಅಗತ್ಯವಿರುವುದಿಲ್ಲ. ತುರ್ತು ನಿಧಿ ಎಲ್ಲರಿಗೂ ಆರು ತಿಂಗಳ ಖರ್ಚಿನ ಮೊತ್ತ ಸಾಕಾಗುವುದಿಲ್ಲ. ಸನ್ನಿವೇಶದ ಪ್ರಕಾರ ಇದನ್ನು ೧೨ ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸೃಷ್ಟಿಸಬೇಕಾಗುತ್ತದೆ.

೫. ಸಾಲದ ಬಲೆಗಳು:

ಕ್ರೆಡಿಟ್ ಕಾರ್ಡ್ ಮತ್ತು ಇಎಂಐ (EMI)ಇಂದಿನ ತಂತ್ರಜ್ಞಾನ ನಮಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಿದೆ. "ಇಂದೇ ಖರೀದಿಸಿ, ಮುಂದಿನ ತಿಂಗಳು ಪಾವತಿಸಿ" (Buy Now Pay Later) ಅಥವಾ "ನೋ ಕಾಸ್ಟ್ ಇಎಂಐ" (No Cost EMI) ಎನ್ನುವ ಆಫರ್‌ಗಳು ನಮ್ಮ ಜೇಬಿಗೆ ಕತ್ತರಿ ಹಾಕುವ ತಂತ್ರಗಳು.ನೆನಪಿರಲಿ ಕ್ರೆಡಿಟ್ ಕಾರ್ಡ್ ಕೆಟ್ಟದ್ದಲ್ಲ, ಆದರೆ ಅದನ್ನು ಬಳಸುವ ಶಿಸ್ತು ನಮಗಿರಬೇಕು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದ್ದರೆ ಮಾತ್ರ ಕಾರ್ಡ್ ಬಳಸಿ ಮತ್ತು ಮುಂದಿನ ತಿಂಗಳು ಬಿಲ್ ಬಂದ ತಕ್ಷಣ ಪೂರ್ಣ ಮೊತ್ತವನ್ನು ಪಾವತಿಸಿ. ಕೇವಲ 'ಮಿನಿಮಮ್ ಅಮೌಂಟ್' ಪಾವತಿಸಿದರೆ ಶೇಕಡಾ ೩೫ ರಿಂದ ೪೦ ರಷ್ಟು ಭಾರಿ ಬಡ್ಡಿ ಬೀಳುತ್ತದೆ.

ಇಎಂಐ ಮೋಹ ಬೇಡ: ಕೈಯಲ್ಲಿ ಹಣವಿಲ್ಲದಿದ್ದರೂ ಕೇವಲ ೨,೦೦೦ ರೂಪಾಯಿ ಇಎಂಐ ಇದೆ ಎಂದು ೫೦,೦೦೦ ರೂಪಾಯಿಯ ಮೊಬೈಲ್ ಕೊಳ್ಳುವುದು ತಪ್ಪು. ವಸ್ತುವಿನ ಪೂರ್ಣ ನಗದು ಹಣ ಕೊಟ್ಟು ಕೊಳ್ಳುವ ಶಕ್ತಿ ಬರುವವರೆಗೂ ಕಾಯುವುದೇ ಬುದ್ಧಿವಂತಿಕೆ. ಕಾಯುವಿಕೆಯಲ್ಲಿ ಸಿಗುವ ಆನಂದ ಸಾಲದ ಇಎಂಐನಲ್ಲಿ ಸಿಗುವುದಿಲ್ಲ.ಇದೆ ರೀತಿ ಇವತ್ತಿಗೆ ನೂರಾರು ಖೆಡ್ಡಾಗಳು ಸಿದ್ಧವಿದೆ. ಹೀಗಾಗಿ ಎಚ್ಚರ.

ಆರ್ಥಿಕ ಶಿಸ್ತು ನಮ್ಮದಾಗಿದ್ದರೆ ಸಾಲವಿಲ್ಲದೆ ಕೂಡ ಒಂದೊಳ್ಳೆ ಜೀವನವನ್ನು ಕಟ್ಟಿಕೊಳ್ಳಬಹುದು. ಆದರೆ ಇವತ್ತು ನಮ್ಮ ಸಮಾಜ ಸಮೂಹಸನ್ನಿಗೆ ಸಿಲುಕಿದೆ. ಐವತ್ತು ಲಕ್ಷ ಸಾಲ ಮಾಡಿ ಸೈಟು ಕೊಂಡರು. ಕೇವಲ ಎರಡು ವರ್ಷದಲ್ಲಿ ಅದನ್ನು ಕೋಟಿಗೆ ಮಾರಿದರು. ಬಡ್ಡಿ , ಅಸಲು ತೀರಿಸಿ ಎರದ್ದು ವರ್ಷದಲ್ಲಿ ೩೫/೪೦ ಲಕ್ಷ ಲಾಭ ಮಾಡಿದರು ಎನ್ನುವ ಕಥೆಗಳು , ಫ್ಲಾಟ್ ಬುಕ್ ಮಾಡಿ ಅದನ್ನು ರಿಜಿಸ್ಟರ್ ಕೂಡ ಮಾಡಿಸಿಕೊಳ್ಳದೆ ಬೇರೆಯವರಿಗೆ ಮಾರಿ ಹಣ ಗಳಿಸಿದರು , ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ದುಪ್ಪಟ್ಟು ಮಾಡಿಕೊಂಡರು.

ಹೀಗೆ ಇಂತಹ ಕಥೆಗಳು ಸಮಾಜದಲ್ಲಿ ನಿತ್ಯವೂ ಕೇಳುತ್ತಿರುತೇವೆ. ಅವರಿಗೆ ಲಾಭವಾಗಿದ್ದು ಸುಳ್ಳಾಗಿರಬೇಕು ಎಂದಿಲ್ಲ. ಆದರೆ. ಅದೇ ಸನ್ನಿವೇಶ ಇರುತ್ತದೆ , ಮತ್ತು ನಮಗೂ ಹಾಗೆ ಲಾಭವಾಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ ಎನ್ನುವ ಸಾಮಾನ್ಯ ಜ್ಞಾನ ನಮಗಿರಬೇಕು. ಆದರೆ ನಾವು ಈ ಸಾಮಾನ್ಯ ಜ್ಞಾನ ಮರೆತು ಬಿಡುತ್ತೇವೆ. ನಮ್ಮನ್ನು fomo - ಫಿಯರ್ ಆಫ್ ಮಿಸ್ಸಿಂಗ್ ಔಟ್ ಆವರಿಸಿಬಿಡುತ್ತದೆ. ನಮ್ಮ ಕಣ್ಣೆದುರೆ ಬಂಧು -ಮಿತ್ರರು ಸಾಲ ಮಾಡಿ ಅದನ್ನು ಲಿವರೇಜ್ ಮಾಡಿಕೊಳ್ಳುತ್ತಿದ್ದಾರೆ , ನಾನು ಸುಮ್ಮನೆ ಕುಳಿತರೆ ಒಂದೊಳ್ಳೆ ಅವಕಾಶ ಕಳೆದುಕೊಳ್ಳುತ್ತೇನೆ ಎನ್ನುವ ಭಯಕ್ಕೆ ನಾವು ಫೋಮಾ ಎನ್ನುತ್ತೇವೆ. ಈ ಭಯ ನಮ್ಮ ಸಾಮಾನ್ಯಜ್ಞಾನವನ್ನು ನುಂಗಿ ನೀರು ಕುಡಿದು ಬಿಡುತ್ತದೆ. ಸಾಲವನ್ನು ಪ್ರಜ್ಞಾಪೂರ್ವಕವಾಗಿ ಮಾಡುವುದು ತಪ್ಪಲ್ಲ. ಅದನ್ನು ಹೇಗೆ ದುಡಿಸಿಕೊಳ್ಳಬೇಕು ಎನ್ನುವುದು ಗೊತ್ತಿದ್ದರೂ ಮಾಡುವುದು ತಪ್ಪಲ್ಲ.

“ಸಾಲ ಮಾಡುವುದು ತಪ್ಪಲ್ಲ,ಆದರೆ ತೀರಿಸಲು ಸಾಧ್ಯವಾಗುವಷ್ಟು ಮಾತ್ರ ಸಾಲ ಮಾಡುವುದು ಜಾಣತನ.” ಸಾಲವನ್ನು ನಮ್ಮ ಒಳಿತಿಗೆ ದುಡಿಸಿ ಕೊಳ್ಳುವ ತಾಕತ್ತು ಇದ್ದವರು ಮಾಡುವುದು ಒಳ್ಳೆಯದು. ಯಾರೋ ಮಾಡಿದರೂ ಎಂದು ಮಾಡುವುದು ತಪ್ಪು. ಪ್ರಮಾಣ ಮಾಡಿ ಹೇಳುತ್ತೇನೆ , ಸಾಲ ಮಾಡುವ ೯೦ ಪ್ರತಿಶತ ಜನಕ್ಕೂ ಹೆಚ್ಚಿನ ಜನಕ್ಕೆ ಲಿವರೇಜ್ ಎಂದರೇನು ಎನ್ನುವುದೇ ಗೊತ್ತಿರುವುದಿಲ್ಲ. ಲಿವರೇಜ್ ಬಗ್ಗೆ ಗೊತ್ತಿಲ್ಲದೇ ಇದ್ದರೆ ಮತ್ತು ಲಿವರೇಜ್ ಮಾಡಿಕೊಳ್ಳುವ ಕ್ಷಮತೆ ಇಲ್ಲದಿದ್ದರೆ ಅದು ಡೆಟ್ ಟ್ರ್ಯಾಪ್. ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ನೀವು ಎಲ್ಲಾ ಅಧ್ಯಾಯಗಳನ್ನು ಓದಿ ಈ ಸಾಲುಗಳನ್ನು ಓದುತ್ತಿದ್ದಿರಾ ಎಂದರೆ ನಿಮಗೆ ಲಿವರೇಜ್ ಬಗ್ಗೆ ಗೊತ್ತಾಗಿದೆ ಎಂದರ್ಥ.

ಹೀಗಾಗಿ ಸಾಲ ಮಾಡುವ ಮುನ್ನ ಸಾಲದ ಮೇಲೆ ಕಟ್ಟುವ ಬಡ್ಡಿಗಿಂತ , ಒಟ್ಟಾರೆ ಸಾಲದ ಖರ್ಚಿಗಿಂತ ಹೆಚ್ಚಿನ ಮೌಲ್ಯ ಸೃಷ್ಟಿ ಮಾಡುವುದು ಸಾಧ್ಯವೇ ? ಎನ್ನುವುದನ್ನು ಗಮನಿಸದೆ ಸಾಲ ಮಾಡಬಾರದು ಎನ್ನುವ ಸಾಮಾನ್ಯ ಜ್ಞಾನ ನಿಮ್ಮದಾಗಿರುತ್ತದೆ. ಅದನ್ನು ಬಳಸಿಕೊಂಡು ಮುಂದೆ ಹೆಜ್ಜೆಯಿಡಿ. ಹೆಚ್ಚಿನ ನಿಖರತೆ , ಸಂಶಯ ನಿವಾರಣೆಗೆ ವೃತ್ತಿಪರರ ಸಹಾಯ ಪಡೆದುಕೊಳ್ಳುವುದು ಉತ್ತಮ.

ಒಳ್ಳೆಯ ಸಾಲ , ಕೆಟ್ಟ ಸಾಲ ಎನ್ನುವುದು ವ್ಯಕ್ತಿಯ , ಸಂಸ್ಥೆಯ ಮೇಲೆ , ಸನ್ನಿವೇಶದ ಮೇಲೆ ಡಿಪೆಂಡ್ ಆಗುತ್ತೆ. ಸಾಲ ಮಾಡಿ ಸಾಮ್ರಾಜ್ಯ ಸೃಷ್ಷ್ಟಿಸಿದವರ ಕಥೆ ಸಾವಿರಾರು ನಮಗೆ ಸಿಗುತ್ತದೆ. ಹೀಗಾಗಿ ಸಾಲ ಎನ್ನುವುದು ವರದಾನ. ಬಂಡವಾಳದ ಕೊರತೆಯಿದ್ದು ನಿಜಕ್ಕೂ ಸಾಧಿಸುವರಿಗೆ , ಅಂತಹ ಕ್ಷಮತೆ ಉಳ್ಳವರಿಗೆ ಇದು ನಿಜಕ್ಕೂ ಕೊಡುಗೆ. ಅದೇ ಸಮಯದಲ್ಲಿ ಇದ್ದ ಸಾಮ್ರಾಜ್ಯವನ್ನೂ ಕಳೀದುಕೊಂಡು ಬೀದಿಗೆ ಬಂದಿರುವ ಲಕ್ಷಾಂತರ ಕಥೆಗಳು ನಮಗೆ ಸಿಗುತ್ತವೆ. ಗೆದ್ದವರ ಕಥೆ , ಸೋತವರ ಕಥೆಗಿಂತ ಹೆಚ್ಚು ಮನ್ನಣೆ ಪಡೆದುಕೊಳ್ಳುತ್ತವೆ. ಸ್ಪೂರ್ತಿಯಾಗುತ್ತವೆ. ಇದು ತಪ್ಪು ಅಂತಲ್ಲ. ಆ ಕ್ಷಣದ ಉದ್ವೇಗಕ್ಕೂ , ನಿಜವಾದ ಹಂಬಲಕ್ಕೂ ಬಹಳಷ್ಟು ವ್ಯತ್ಯಾಸವಿದೆ.

ನಮ್ಮದು ಆ ಕ್ಷಣದ ಉದ್ವೇಗವೋ ಅಥವಾ ನಿಜವಾದ ಪ್ಯಾಶನ್ ಇದೆಯೋ ಎಂದು ನಾವೇ ತಿಳಿದುಕೊಳ್ಳಬೇಕು. ಸಾಲ ಮಾಡುವುದು ಸುಲಭ. ಆದರೆ ಅದನ್ನು ತೀರಿಸುವುದು ಕಷ್ಟ ಎನ್ನುವ ಮಾತು ನಾವೆಲ್ಲಾ ಕೇಳುತ್ತ ಬೆಳೆದಿದ್ದೇವೆ. ಇವತ್ತಿನ ಜನರೇಷನ್ ಉನ್ಮಾದದಲ್ಲಿ ಸಾಲ ಮಾಡುತ್ತಿದೆ. ಯಾರಿಗೂ ಕಷ್ಟ ಪಡೆಬೇಕು ಎನ್ನುವ ಮನಸ್ಸಿಲ್ಲ , ಎಲ್ಲರೂ ಉದ್ದಿಮೆಯ ಮಾಲೀಕರಾದ ಹಾಗೆ ಕನಸು ಕಾಣುತ್ತಾರೆ. ಮಾರುಕಟ್ಟೆಯಲ್ಲಿ ಸುಲಭವಾಗಿ ಇಂದು 'ಡೆಟ್ ' ಸಿಗುತ್ತಿದೆ. ಹಿಂದೆ ಮುಂದೆ ನೋಡದೆ ಪೋಷಕರ ಹತ್ತಾರು ವರ್ಷದ ಉಳಿತಾಯದಿಂದ ಸೃಷ್ಟಿಯಾದ ಮನೆಯನ್ನು ಅಡವಿಡುವುದು ಸಾಮಾನ್ಯವಾಗುತ್ತಿದೆ. ವಿದ್ಯಾಭ್ಯಾಸಕ್ಕೆ ಎಂದು ಮನೆ ಅಡವಿಟ್ಟು ವಿದೇಶಕ್ಕೆ ಕಳಿಸುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.ಅರಗಿಸಿಕೊಳ್ಳುವಷ್ಟು ಮಾತ್ರ ಊಟ ಮಾಡಬೇಕು. ಹೆಚ್ಚಾದರೆ ಅಜೀರ್ಣವಾಗುತ್ತದೆ. ಥೇಟ್ ಹಾಗೆ ಕೈಮೀರಿದ ಸಾಲಗಳು ಕೊರಳಿಗೆ ಉರಳಾಗುತ್ತವೆ.

ಮೆಜಾರಿಟಿ ಲೆಕ್ಕಾಚಾರದ ಪ್ರಕಾರ ನೋಡಿ ಹೇಳುವುದಾದರೆ ಇವತ್ತಿನ ಪ್ರಪಂಚದಲ್ಲಿ ಸಾಲವಿಲ್ಲದವನೇ ಸರದಾರ ! ಹತ್ತು ಪ್ರತಿಶತ ಜನರ ದೃಷ್ಟಿಯಲ್ಲಿ ನೋಡಿದಾಗ ಸಾಲ ಮಾಡಿದವನೇ ಸರದಾರ ! ಬೇರೆಯವರ ದುಡ್ಡಿನಲ್ಲಿ ಸಾಮ್ರಾಜ್ಯ ಕಟ್ಟುವ ಶಕ್ತಿ ಇದ್ದವರು ಸಾಲ ಮಾಡಬೇಕು. ಯಾರೋ ಮಾಡಿದರೂ ಎನ್ನುವ ಕಾರಣಕ್ಕೆ ವೃತ್ತಿಪರರ ಸಲಹೆ ಕೇಳದೆ ಸಾಲ ಮಾಡುವುದು ಕೊರಳಿಗೆ ಉರುಳಾಗುತ್ತದೆ. ಎಚ್ಚರ!

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP

Trumpಗೆ Iran ಬಿಗ್ ಶಾಕ್: ಅಮೆರಿಕಾ ಹಡಗು ಸೇರಿ 20ಕ್ಕೂ ಹೆಚ್ಚು ನೌಕೆಗಳ ಮೇಲೆ ದಾಳಿ, Hormuz ಜಲಸಂಧಿ ಹೊರಗೂ 'No-go zone' ವಿಸ್ತರಣೆ..!

7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಯುದ್ಧ ಅಂತ್ಯಕ್ಕೆ ಕೌಂಟ್‌ಡೌನ್; ಇನ್ನು ಅವರ ಆಟ ನಡೆಯಲ್ಲ, ಅಮೆರಿಕ ಎಲೆಕ್ಷನ್ ಬೆನ್ನಲ್ಲೇ ಇರಾನ್'ಗೆ ಖೆಡ್ಡಾ ಎಂದ ಟ್ರಂಪ್..!

ಪತ್ನಿ ಒಪ್ಪಿಗೆಯಿಲ್ಲದ ಲೈಂಗಿಕ ಸಂಪರ್ಕ ಅತ್ಯಾಚಾರವೇ? ಕಾನೂನಿನಲ್ಲೇ ವಿನಾಯಿತಿ ಇರುವಾಗ ಪತಿ ವಿರುದ್ಧ ವಿಚಾರಣೆ ಹೇಗೆ ಸಾಧ್ಯ?: ದೇಶದ ಗಮನ ಸೆಳೆದ ಸುಪ್ರೀಂ ಕೋರ್ಟ್ ಪ್ರಶ್ನೆ..!

ಬೆಂಗಳೂರಿಗರಿಗೆ Good News: ಸಿದ್ಧವಾಯ್ತು ಸಹಾಯ 3.0 ಪೋರ್ಟಲ್‌: ಇನ್ಮುಂದೆ Typing ಕಿರಿಕಿರಿ ಇರಲ್ಲ, Voice Note ಮೂಲಕವೇ ದೂರು ಸಲ್ಲಿಸಲು ಅವಕಾಶ..!