ಬೆಂಗಳೂರು: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ನಿಮಿತ್ತ ನೂತನ ಕೋಚ್ ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶಿಷ್ಟ ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೋತಿದ್ದು, ಇಡೀ ತಂಡಗಳ ಪೈಕಿ ಅಂಜಿಕ್ಯ ರಹಾನೆ ಮಾತ್ರ ಕುಂಬ್ಳೆ ನೀಡಿದ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಎನ್‌ಸಿಎ ಆವರಣದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸ ನಡೆಸಿದ ಬಳಿಕ ಭಾನುವಾರ ನಗರದ ಹೊರವಲಯದ ಆಲೂರಿನಲ್ಲಿರುವ ಕೆಎಸ್‌ಸಿಎ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಆಟಗಾರರ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೋಚ್ ಅನಿಲ್ ಕುಂಬ್ಳೆ ರಚಿಸಿದ್ದ ವಿಶಿಷ್ಟ ನಿಯಮಾವಳಿಗಳನ್ನು ಈ ಅಭ್ಯಾಸ ಪಂದ್ಯ ಹೊಂದಿತ್ತು. ಆಲೂರು ಮೈದಾನ ಸಂಖ್ಯೆ 3ರಲ್ಲಿ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡುವ ಮೂಲಕ ಭರ್ಜರಿ ತಾಲೀಮು ನಡೆಸಲಾಯಿತು. ಭಾರತ ತಂಡದ ಆಟಗಾರರ ಜೊತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡ ಹಾಗೂ ಕರ್ನಾಟಕ ರಣಜಿ ತಂಡದ ಕೆಲ ಸದಸ್ಯರು ಅಭ್ಯಾಸ ಪಂದ್ಯವಾಡಿದರು.
ಸ್ಥಳೀಯ ಆಟಗಾರರು ಸೇರಿದಂತೆ 11 ಫೀಲ್ಡರ್‌ಗಳು ಮೈದಾನದಲ್ಲಿದ್ದರೆ, ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೆ ಒಂದು ಗಂಟೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿ, 2 ಬಾರಿ ಬ್ಯಾಟಿಂಗ್ ಅವಕಾಶ ಮಾಡಿಕೊಡಲಾಗಿತ್ತು. ಸ್ಥಳೀಯ ಅಂಪೈರ್‌ಗಳು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಎಂದಿನಂತೆ ಆರಂಭಿಕರಾಗಿ ಬ್ಯಾಟಿಂಗ್ ಬಂದರು. ವೇಗಿಗಳಾದ ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಓವರ್‌ಗೆ ತಲಾ 2 ಎಸೆತಗಳಂತೆ ಸುಮಾರು ಅರ್ಧಗಂಟೆ ಬೌಲಿಂಗ್ ಮಾಡಿದರೆ, ಮತ್ತೊಂದು ತುದಿಯಲ್ಲಿ ಸ್ಪಿನ್ ಬೌಲರ್‌ಗಳಾದ ಆರ್.ಅಶ್ವಿನ್, ಅಮಿತ್ ಮಿಶ್ರಾ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ಮಾಡಿದರು.
ಬ್ಯಾಟ್ಸಮನ್ ಗಳಲ್ಲಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲುವ ಸಾಮರ್ಥ್ಯ ಹೆಚ್ಚಬೇಕು ಮತ್ತು ಬೌಲರ್ ಗಳು ಬೇಗನೆ ವಿಕೆಟ್ ಪಡೆಯಬೇಕು ಎನ್ನುವ ಸಲುವಾಗಿ ಈ ವಿಶಿಷ್ಟ ನಿಯಮಗಳ ಪಂದ್ಯವನ್ನಾಡಿಸಲಾಗಿತ್ತು. ಕುಂಬ್ಳೆ ಪರೀಕ್ಷೆಯಲ್ಲಿ ಭಾರತೀಯ ಬೌಲರ್ ಗಳು ಯಶಸ್ವಿಯಾದರೆ, ಅಜಿಂಕ್ಯಾ ರಹಾನೆ ಒಬ್ಬರನ್ನು ಹೊರತು ಪಡಿಸಿ ಉಳಿದೆಲ್ಲಾ ಬ್ಯಾಟ್ಸಮನ್ ಗಳು ವಿಫಲರಾದರು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಡಿದ ಎರಡೂ ಬಾರಿಯೂ ಔಟ್ ಆದರೆ, ತಂಡದ ಪ್ರಮುಖ ಬ್ಯಾಟ್ಸಮನ್ ಗಳಾದ ಶಿಖರ್ ಧವನ್, ಮುರಳಿ ವಿಜಯ್ ನಾಯಕನನ್ನು ಹಿಂಬಾಲಿಸಿದರು.
ಆದರೆ ಅಜಿಂಕ್ಯ ರಹಾನೆ ಮಾತ್ರ ಔಟಾಗದೆ ಒಂದು ಗಂಟೆ ಪೂರ್ತಿ ಬ್ಯಾಟಿಂಗ್ ಮಾಡುವ ಮೂಲಕ ಕುಂಬ್ಳೆ ನೀಡಿದ ಟೆಸ್ಟ್ ನಲ್ಲಿ ಪಾಸ್ ಆದರು.