ಬೆಂಗಳೂರು: ಸುದೀರ್ಘ ಟೆಸ್ಟ್ ಸರಣಿ ಗಳಿಗೆ ಸಜ್ಜಾಗಿ ವಿಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾಗೆ ಏಕದಿನ ಮತ್ತು ಟಿ20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಶುಭಕೋರಿದ್ದು, ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ ಧೋನಿ ಸಹ ಆಟಗಾರರಿದೆ ಕೆಲ ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.
ನೂತನ ಕೋಚ್ ಅನಿಲ್ ಕುಂಬ್ಳೆ ಆಯೋಜಿಸಿದ್ದ ವಿಶೇಷ ಸಂಗೀತ ಸಹಿತ ತರಬೇತಿಯಲ್ಲಿ ಪಾಲ್ಗೊಂಡು ಬಳಿಕ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ಆಟದಲ್ಲಿ ಗಂಭೀರತೆ ಇರಬೇಕು ನಿಜ. ಹಾಗೆಯೇ ಮೋಜು ಮತ್ತು ಹಾಸ್ಯ ಕೂಡ ಇರಬೇಕು. ಆಟವನ್ನು ನೀವು ನಿಜಕ್ಕೂ ಆನಂದಿಸಿ ಆಡಿದರೆ ಖಂಡಿತ ಯಶಸ್ಸು ನಮ್ಮ ಪಾಲಾಗುತ್ತದೆ ಎಂದು ಹೇಳಿದರು.
"ಕ್ರಿಕೆಟ್ ಅನ್ನು ನಾವು ಕಷ್ಟಪಟ್ಟು ಆಡುವುದಕ್ಕಿಂತ ಇಷ್ಟಪಟ್ಟು ಮತ್ತು ಸಂತೋಷದಿಂದ ಆಡಬೇಕು. ಆಗಷ್ಟೇ ಯಶಸ್ಸು ನಮಗೊಲಿಯುತ್ತದೆ. ಸಂಗೀತವೇ ಗೊತ್ತಿಲ್ಲದ ನಾವು ಇಲ್ಲಿ ಸಂಗೀತವಾದ್ಯಗಳನ್ನು ಬಾರಿಸಿ ಆನಂದಪಟ್ಟೆವು. ಅಂತೆಯೇ ಕ್ರಿಕೆಟ್ ಅನ್ನು ಕೂಡ ಆನಂದಿಸಿ ಆಡಿದರೆ ಗೆಲುವು ಸಿಗುತ್ತದೆ. ಹಿಂದೆಲ್ಲಾ ಭಾರತ ತಂಡ ಕೇವಲ ಐದರಿಂದ ಆರು ಬ್ಯಾಟ್ಸಮನ್ ಗಳನ್ನೇ ನೆಚ್ಚಿಕೊಂಡಿತ್ತು. ಈಗ ಕಾಲ ಬದಲಾಗಿದ್ದು, ಭಾರತೀಯ ಕ್ರಿಕೆಟ್ ಮುಂದವರೆದಿದೆ. ಯುವ ಕ್ರಿಕೆಟಿಗರ ಆಗಮನದೊಂದಿಗೆ ಭಾರತೀಯ ಕ್ರಿಕೆಟ್ ಸಾಮರ್ಥ್ಯ ಹೆಚ್ಚಿದೆ. 10ನೇ ವಿಕೆಟ್ ನಲ್ಲೂ ನಾವು ಉತ್ತಮ ರನ್ ಕಲೆಹಾಕಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದೇವೆ.
ನಮ್ಮಲ್ಲಿ ಇದೀಗ ಬ್ಯಾಟ್ಸಮನ್ ಮತ್ತು ಬೌಲರ್ ಗಳ ಸಮೂಹವೇ ಇದ್ದು, ನಮ್ಮಲ್ಲಿ ಸಾಕಷ್ಟು ಆಯ್ಕೆಗಳಿವೆ. ನಾವೆಲ್ಲರೂ ಒಂದು ತಂಡವಾಗಿ ಆಡಬೇಕು. ನಿಮ್ಮನ್ನು ಯಾವುದಾದರೂ ಒಂದು ವಿಷಯ ತಡೆಯಲೆತ್ನಿಸಬಹುದು ಎಂದು ಚಿಂತಿಸಬೇಡಿ. ಈ ಚಿಂತೆಯೇ ನಿಮ್ಮ ಮೇಲೆ ಒತ್ತಡ ಹೇರಿ ನಿಮ್ಮ ನೈಜ ಆಟಕ್ಕೆ ತಡೆಯಾಗಬಲ್ಲದು ಎಂದು ಧೋನಿ ಹೇಳಿದರು.
ಅಂತೆಯೇ ಸುದೀರ್ಘ ಟೆಸ್ಚ್ ಸರಣಿ ವೇಳೆ ಖಂಡಿತಾ ನಾನು ತಂಡವನ್ನು ಮಿಸ್ ಮಾಡಿಕೊಳ್ಳಲ್ಲಿದ್ದೇನೆ ಎಂದು ಧೋನಿ ಭಾವುಕರಾಗಿ ಹೇಳಿದರು.
ಸತತ 17 ಟೆಸ್ಟ್ ಪಂದ್ಯಗಳ ಸುಧೀರ್ಘ ಟೆಸ್ಟ್ ಸರಣಿಗಳಿಗೆ ಟೀಂ ಇಂಡಿಯಾ ಸಜ್ಜಾಗಿದ್ದು, ಇದರ ಮೊದಲ ಭಾಗವಾಗಿ ವಿಂಡೀಸ್ ಪ್ರವಾಸದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ