ಒಂದು ದಿನದ ಮಟ್ಟಿಗೆ ಸಿಇಒ ಆದ ಎಂಎಸ್ ಧೋನಿ!
ಭಾರತ ತಂಡದ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ದಿನದ ಮಟ್ಟಿಗೆ ಪ್ರಮುಖ ಸಂಸ್ಥೆಯೊಂದರ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಮುಂಬೈ: ಭಾರತ ತಂಡದ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ದಿನದ ಮಟ್ಟಿಗೆ ಪ್ರಮುಖ ಸಂಸ್ಥೆಯೊಂದರ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ತಮಿಳಿನ ಖ್ಯಾತ ಚಿತ್ರ ಮುದಲ್ವಾನ್ ಚಿತ್ರ ನೆನಪಿದ್ದರೆ ಅದರಲ್ಲಿ ನಟ ಅರ್ಜುನ್ ಸರ್ಜಾ ಒಂದು ದಿನದ ಮಟ್ಟಿಗೆ ತಮಿಳುನಾಡು ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ. ಅದೇ ಮಾದರಿಯಲ್ಲಿ ಇದೀಗ ಭಾರತ ತಂಡದ ಕ್ರಿಕೆಟ್ ಆಟಗಾರ ಮತ್ತು ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಸಂಸ್ಥೆಯೊಂದರ ಸಿಇಒ ಆಗಿ ಒಂದು ದಿನದ ಮಟ್ಟಿಗೆ ಕಾರ್ಯ ನಿರ್ವಹಿಸಿದ್ದಾರೆ.
ಧೋನಿ ತಾವು ರಾಯಭಾರಿಯಾಗಿರುವ ಗಲ್ಫ್ ಆಯಿಲ್ ಇಂಡಿಯಾ ಸಂಸ್ಥೆಗೆ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದು, ಸೋಮವಾರ ಒಂದು ದಿನದ ಮಟ್ಟಿಗೆ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಆಗಿ ಅಧಿಕಾರ ಸ್ವೀಕರಿಸಿದರು. ಮುಂಬೈನಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಗೆ ನೀಲಿ ಸೂಟ್‌ನಲ್ಲಿ ಭೇಟಿ ನೀಡಿದ ಅವರು, ಸಂಸ್ಥೆಯ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಅಲ್ಲದೇ, ಹಲವು ಸಭೆಗಳಲ್ಲೂ ಪಾಲ್ಗೊಂಡು ಕೆಲ ನಿರ್ಣಯಗಳನ್ನೂ ತೆಗೆದುಕೊಂಡರು.
ಒಂದು ಸಂಸ್ಥೆಯ ಸಿಇಓ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬ ಕುತೂಹಲ ಧೋನಿಗಿತ್ತು. ಅದೀಗ ಸಾಕಾರಗೊಂಡಿದೆ'' ಎಂದು ಧೋನಿಯ ವಾಣಿಜ್ಯ ವ್ಯವಹಾರಗಳ ಮೇಲ್ವಿಚಾರಕ ಅರುಣ್ ಪಾಂಡೆ ಹೇಳಿದರು.