ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ನಾಲ್ಕು ತಂಡದ ನಾಯಕರ ಸ್ಥಾನಕ್ಕೆ ಕುತ್ತು ತಂದ ಕೊಹ್ಲಿ?

ಭಾರತ ತಂಡದ ನೂತನ ನಾಯಕ ವಿರಾಟ್ ಕೊಹ್ಲಿಯಿಂದಾಗಿ ನಾಲ್ಕು ಕ್ರಿಕೆಟಿಗರ ನಾಯಕತ್ವಕ್ಕೆ ಕುತ್ತು ಬಂದಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕೂಡ ಬಲಿಯಾಗುತ್ತಾರೆಯೇ..?

ಸಂಗ್ರಹ ಚಿತ್ರ
Srinivasa Murthy VN
Updated On : 8 Feb 2017, 8:55 am

ನವದೆಹಲಿ: ಭಾರತ ತಂಡದ ನೂತನ ನಾಯಕ ವಿರಾಟ್ ಕೊಹ್ಲಿಯಿಂದಾಗಿ ನಾಲ್ಕು ಕ್ರಿಕೆಟಿಗರ ನಾಯಕತ್ವಕ್ಕೆ ಕುತ್ತು ಬಂದಿದ್ದು, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕೂಡ ಈ ಪಟ್ಟಿಗೆ ಸೇರುತ್ತಾರೆಯೇ..?

ಹೌದು..ಭಾರತ ತಂಡದ ಸ್ಪೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಅವರ ಅದ್ಬುತ ಬ್ಯಾಟಿಂಗ್ ಹಾಗೂ ನಾಯಕತ್ವ ಪ್ರದರ್ಶನದಿಂದಾಗಿ ಈ ವರೆಗೂ ಬೇರೆ ತಂಡಗಳ ಕ್ರಿಕೆಟಿಗರು ತಮ್ಮ ನಾಯಕತ್ವವನ್ನು ತ್ಯಜಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ನಾಯಕತ್ವ ತ್ಯಜಿಸಿದ್ದರೆ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ಹಾಗೂ ನ್ಯೂಜಿಲೆಂಡ್ ತಂಡದ ವಿಲಿಮ್ಸನ್ ಭಾರತದ ವಿರುದ್ಧದ ಸರಣಿ ಬಳಿಕ ನಾಯಕತ್ವ ತ್ಯಜಿಸುವ ಮನಸ್ಸು ಮಾಡಿದ್ದರು.

ಈ ನಾಲ್ಕೂ ಆಟಗಾರರ ನಾಯತ್ವಕ್ಕೆ ಕುತ್ತು ತಂದಿದ್ದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತ ತಂಡ.. ಈ ನಾಯಕರು ನಾಯಕತ್ವಕ್ಕೆ ಗುಡ್ ಬೈ ಹೇಳುವ ಮುನ್ನ ಭಾರತದ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಭಾರತ ತಂಡದ ವಿರುದ್ಧ ಸೋಲೇ ಅವರು ನಾಯಕತ್ವ ತ್ಯಜಿಸುವಂತೆ ಮಾಡಿದೆ.

ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ
ಕೊಹ್ಲಿ ನಾಯಕತ್ವಕ್ಕೆ ಮೊದಲ ಬಲಿಯಾಗಿದ್ದು ದಕ್ಷಿಣ ಆಫ್ರಿಕಾದ ನಾಯಕ ಹಶೀಮ್ ಆಮ್ಲಾ. 2015ರ ನವೆಂಬರ್ ನಲ್ಲಿ ಭಾರತದಲ್ಲಿ ಆರಂಭಗೊಂಡ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ದಿಗ್ವಿಜಯ ಸಾಧಿಸಿತ್ತು.  ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 108 ರನ್ ಗಳ ಜಯಸಾಧಿಸಿದರೆ, ಬಳಿಕ ಬೆಂಗಳೂರಿನಲ್ಲಿ ನಡೆದ 2ನೇ ಪಂದ್ಯ ಡ್ರಾ ಆಗಿತ್ತು. ನಂತರ ನಾಗ್ಪುರ ಮತ್ತು ದೆಹಲಿ ಟೆಸ್ಟ್ ಪಂದ್ಯಗಳನ್ನು ಭಾರತ ಕ್ರಮವಾಗಿ 124  ಮತ್ತು 337 ರನ್ ಗಳ ಅಂತರದಿಂದ ಜಯಿಸಿತ್ತು. ಇದಕ್ಕೂ ಮೊದಲು ದುರ್ಬಲ ಬಾಂಗ್ಲಾದೇಶ ತಂಡದ ವಿರುದ್ಧ ಟೆಸ್ಟ್ ಸರಣಿ ಕೂಡ ಮಳೆಯಿಂದಾಗಿ ಡ್ರಾ ಆಗಿತ್ತು. ಹೀಗಾಗಿ ಬ್ಯಾಟಿಂಗ್ ನತ್ತ ಗಮನ ಹರಿಸುವ ಸಲುವಾಗಿ ಆಮ್ಲಾ ನಾಯಕತ್ವ ತೊರೆದಿದ್ದರು.

ಶ್ರೀಲಂಕಾದ ಏಂಜಲೋ ಮಥ್ಯೂಸ್
2016 ಮಾರ್ಚ್ ತಿಂಗಳಲ್ಲಿ ಲಂಕಾದ ಲಸಿತ್ ಮಾಲಿಂಗ ನಾಯಕತ್ವ ತೊರೆದಾಗ ನಾಯಕತ್ವ ಪಟ್ಟಕ್ಕೇರಿದ್ದ ಲಂಕಾದ ಮಧ್ಯಮ ಕ್ರಮಾಂಕದ ಆಟಗಾರ ಏಂಜಲೋ ಮ್ಯಾಥ್ಯೂಸ್ ನಾಯಕತ್ವ ಪಟ್ಟಕೇರಿದರು. ಬಳಿಕ 2015ರ ಆಗಸ್ಟ್  ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಮಥ್ಯೂಸ್ ಪಡೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಸೋತಿತ್ತು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲೂ 3-0 ಅಂತರದಲ್ಲೂ ಸೋಲುವ ಮೂಲಕ ಲಂಕಾ ವೈಟ್  ವಾಶ್ ಆಗಿತ್ತು. ಈ ಎರಡು ಸರಣಿಗಳು ಮ್ಯಾಥ್ಯೂಸ್ ನಾಯಕತ್ವಕ್ಕೆ ಕುತ್ತು ತಂದಿತ್ತು. ಈ ಬಗ್ಗೆ ಸ್ವತಃ ಮ್ಯಾಥ್ಯೂಸ್ ಅವರು, ಲಂಕಾ ಆಯ್ಕೆ ಸಮಿತಿ ಬೇರೊಬ್ಬ ನಾಯಕನನ್ನು ಆರಿಸಿದರೆ ನನಗೇನೂ ಚಿಂತೆಯಿಲ್ಲ. ಮತ್ತಷ್ಟು ಉತ್ತಮ ಕ್ರಿಕೆಟ್ ನತ್ತ ಚಿತ್ತ ಹರಿಸುತ್ತೇನೆ ಎಂದು ಹೇಳಿದ್ದರು.

ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್
2016ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡ, 5 ಏಕದಿನ, 3 ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಈ ಪೈಕಿ ಏಕದಿನ ಸರಣಿಯನ್ನು ಭಾರತ 3-2ರ ಅಂತರದಲ್ಲಿ ಕೈವಶ ಮಾಡಿಕೊಂಡರೆ, ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಜಯಿಸಿತ್ತು. ಈ ಸರಣಿಗಳ ಬಳಿಕ ಕೇನ್ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿಯುತ್ತಾರೆ ಎಂಬ ಬಲವಾದ ವಾದ ಕೇಳಿ ಬಂದಿತ್ತು.

ಇಂಗ್ಲೆಂಡ್ ನ ಆಲಿಸ್ಟರ್ ಕುಕ್
32 ವರ್ಷ ಪ್ರಾಯದ ಅಲಿಸ್ಟರ್ ಕುಕ್ ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್ ಚಂಡದ ಸಾರಥ್ಯ ವಹಿಸಿದ್ದರು. ಇಂಗ್ಲೆಂಡ್ ತಂಡದ ನಾಯಕರಾದ ಬಳಿಕ ಕುಕ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡ ಸಾಕಷ್ಟು ಸರಣಿಗಳನ್ನು ಜಯಿಸಿತ್ತು. ಸತತ  ಎರಡು ಬಾರಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿಯುವ ಮೂಲಕ ಪ್ರತಿಷ್ಟಿತ ಆ್ಯಶಸ್ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇದಲ್ಲದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಸರಣಿಗಳನ್ನು  ನಿರಾಯಾಸವಾಗಿ ಜಯಿಸಿತ್ತು. ಆದರೆ ಕಳೆದ ನವೆಂಬರ್ ನಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಸ್ಸಿ ಕುಕ್ ಪಡೆ ಕೊಹ್ಲಿ ಪಡೆ ವಿರುದ್ಧ 4-0 ಅಂತರದಲ್ಲಿ ಹೀನಾಯವಾಗಿ ಸೋತಿತ್ತು. ಇದಲ್ಲದೆ ಬಳಿಕ ನಡೆದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಲ್ಲೂ ಇಂಗ್ಲೆಂಡ್ ತಂಡ 2-1 ಅಂತರದಲ್ಲಿ ಸೋತಿತ್ತು. ಹೀಗಾಗಿ ಸತತ ಸೋಲಿನ ಜವಾಬ್ದಾರಿ ಹೊತ್ತ ಕುಕ್ ನಾಯಕತ್ವ ತ್ಯಜಿಸಿದ್ದರು.

ಆಸಿಸ್ ನಾಯಕ ಸ್ಟೀವ್ ಸ್ಮಿತ್ ?
ಇನ್ನು ಇದೇ ಫೆಬ್ರವರಿ 23ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದ್ದು, ಈಗಾಗಲೇ ಸತತ ಮೂರು ಸರಣಿಗಳನ್ನು ಗೆದ್ದು ಆತ್ಮ ವಿಶ್ವಾಸದಿಂದಿರುವ ಕೊಹ್ಲಿ ಪಡೆ, ಆಸಿಸ್ ಪಡೆಯನ್ನೂ ಸೋಲಿಸುವ  ವಿಶ್ವಾಸದಲ್ಲಿದೆ. ಇದೇ ಕಾರಣಕ್ಕೆ ನ್ಯೂಜಿಲೆಂಡ್ ತಂಡದ ಆಟಗಾರ ವಿಲಿಯಮ್ಸನ್ ಆಸಿಸ್ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಭಾರತೀಯ ಆಟಗಾರರನ್ನು ಹಾಗೂ ಪಿಚ್ ಗಳನ್ನು ಲಘುವಾಗಿ ಪರಿಗಣಿಸದಿರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಅಂಕಿಅಂಶಗಳ ಪ್ರಕಾರ ಈ ನಾಲ್ಕು ನಾಯಕರ ನಾಯಕತ್ವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಭಾರತ ತಂಡ ಹಾಗೂ ನಾಯಕ ಕೊಹ್ಲಿ ಕುತ್ತು ತಂದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement