ಧೋನಿ ಮಾಡಿದ್ದ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲ!
ಟೀಂ ಇಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ವಿಶಿಷ್ಟ ದಾಖಲೆಗಳನ್ನು ಹೊಂದಿದ್ದಾರೆ. ಈ ಪೈಕಿ ಒಂದು ದಾಖಲೆಯನ್ನು ಹಾಲಿ ನಾಯಕ ವಿರಾಟ್ ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲ..
ನವದೆಹಲಿ: ಟೀಂ ಇಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಹಲವು ವಿಶಿಷ್ಟ ದಾಖಲೆಗಳನ್ನು ಹೊಂದಿದ್ದಾರೆ. ಈ ಪೈಕಿ ಒಂದು ದಾಖಲೆಯನ್ನು ಹಾಲಿ ನಾಯಕ ವಿರಾಟ್ ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲ..
ಹಾಗಾದರೆ ಯಾವುದು ಆ ವಿಶಿಷ್ಟ ದಾಖಲೆ ಎಂದು ಹೇಳುವುದಾದರೆ, ತವರಿನಲ್ಲಿ ಧೋನಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ ಸೋತಿಲ್ಲ. ಆದರೆ ವಿರಾಟ್ ಕೊಹ್ಲಿ ನೇತೃತ್ವದ ತಂಡ ಒಂದು ಪಂದ್ಯವನ್ನು ಸೋತಿದೆ. ಹೀಗಾಗಿ ಈ ವಿಶಿಷ್ಟ ದಾಖಲೆಯನ್ನು ಕೊಹ್ಲಿ ಮುರಿಯಲು ಸಾಧ್ಯವೇ ಇಲ್ಲ. ತವರಿನಲ್ಲಿ ನಡೆದ ಸತತ 19 ಟೆಸ್ಟ್ ಪಂದ್ಯಗಳ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ 333 ರನ್ ಗಳ ಹೀನಾಯ ಸೋಲು ಅನುಭವಿಸಿತ್ತು.
ಈ ವರೆಗೂ ಧೋನಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ಪಂದ್ಯಗಳನ್ನು ಗೆದ್ದಿದ್ದಾರೆ. 2008/09ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡವನ್ನು ಭಾರತ 2-0 ಅಂತರದಲ್ಲಿ ಮಣಿಸಿತ್ತು. ಬಳಿಕ 2010/11 ರಲ್ಲಿ ಮತ್ತೆ 2-0 ಅಂತರದಲ್ಲಿ ಮಣಿಸಿ ಸರಣಿ ತನ್ನದಾಗಿಸಿಕೊಂಡಿತ್ತು. ಇನ್ನು 2012/13 ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಂ ಇಂಡಿಯಾ ಬರೊಬ್ಬರಿ 4-0 ಅಂತರದಲ್ಲಿ ಹೀನಾಯವಾಗಿ ಮಣಿಸಿತ್ತು. ಇದೇ ಸರಣಿಯಲ್ಲೇ ಧೋನಿ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.
ಪ್ರಸ್ತುತ ಭಾರತ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡ 4 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರಬಹುದು. ಆದರೆ ಕೊಹ್ಲಿ ಪಡೆಯೇ ಸರಣಿ ಗೆಲ್ಲುವ ಫೇವರಿಟ್ ಆಗಿದ್ದು, ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಪಡೆ ಸ್ಮಿತ್ ಪಡೆಗೆ ದಿಟ್ಟ ತಿರುಗೇಟು ನೀಡಲಿದೆ. ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಬೆಂಗಳೂರು ಐಪಿಎಲ್ ಮೂಲಕ ಕೊಹ್ಲಿಯ ಎರಡನೇ ತವರಾಗಿದೆ. ಇಲ್ಲಿ ಕೊಹ್ಲಿ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.