ಲಂಡನ್: ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ರೊಂದಿಗಿನ ಸೆಲ್ಫಿಯಿಂದಾ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಾಕಿಸ್ತಾನದ ಟಿವಿ ನಿರೂಪಕಿ ಝನೈಬ್ ಅಬ್ಬಾಸ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಶ್ರೀಲಂಕಾ ನಾಯಕ ಮ್ಯಾಥ್ಯೂಸ್ ರೊಂದಿಗೆ ಸೆಲ್ಫಿ ತೆಗಿಸಿಕೊಂಡು ಅವರ ಸೋಲಿಗೆ ಕಾರಣರಾಗಿದ್ದಾರೆ ಎಂಬ ವ್ಯಾಪಕ ಚರ್ಚೆ ನಡೆಯುತ್ತಿದೆ.
ನಿನ್ನೆ ಕಾರ್ಡಿಫ್ ನಲ್ಲಿ ನಡೆದ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 3 ವಿಕೆಟ್ ಗಳಿಂದ ಗೆದ್ದು ಸೆಮೀ ಫೈನಲ್ ಗೆ ಲಗ್ಗೆ ಹಾಕಿತ್ತು. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ವಿವಾದಿತ ನಿರೂಪಕಿ ಝನೈಬ್ ಅಬ್ಬಾಸ್ ಶ್ರೀಲಂಕಾ ತಂಡದ ನಾಯಕ ಮ್ಯಾಥ್ಯೂಸ್ ರೊಂದಿಗೆ ಸೆಲ್ಫಿ ತೆಗಿಸಿಕೊಂಡಿದ್ದಾರೆ. ಅಲ್ಲದೆ ಈ ಸೆಲ್ಫಿಯನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ನನ್ನ ಕೆಲಸ ಮುಗಿದಿದೆ. ಇದೀಗ ನಿಮ್ಮ ಕೆಲಸ ಮಾಡಿ ಎಂದು ಪಾಕಿಸ್ತಾನ ಕ್ರಿಕೆಟಿಗರಿಗೆ ಹೇಳಿದ್ದಾರೆ.
ಈ ಹಿಂದೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್ ರೊಂದಿಗೆ ಝನೈಬ್ ಅಬ್ಬಾಸ್ ಸೆಲ್ಫಿ ತೆಗಿಸಿಕೊಂಡಿದ್ದರು, ಸೆಲ್ಭಿ ತೆಗಿಸಿಕೊಂಡ ಪಂದ್ಯಗಳಲ್ಲಿ ವಿರಾಟ್ ಮತ್ತು ಎಬಿಡಿ ಶೂನ್ಯಕ್ಕೆ ಔಟ್ ಆಗುವುದಷ್ಟೇ ಅಲ್ಲದೇ ಅವರ ತಂಡ ಸೋತಿತ್ತು. ಈ ಪ್ರಕರಣದ ಬಳಿಕ ಝನೈಬ್ ಅಬ್ಬಾಸ್ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಮತ್ತೆ ಮ್ಯಾಥ್ಯೂಸ್ ರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವು ಝನೈಬ್ ಅಬ್ಬಾಸ್ ಲಂಕಾ ಸೋಲಿಗೆ ಕಾರಣ ಎಂಬ ಚರ್ಚೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆದರೆ ಈ ಬಾರಿ ಸೆಲ್ಫಿ ತೆಗೆಸಿಕೊಂಡ ಮ್ಯಾಥ್ಯೂಸ್ ಶೂನ್ಯಕ್ಕೇನೂ ಔಟ್ ಆಗಿಲ್ಲವಾದರೂ ಅವರ ತಂಡ ಮಾತ್ರ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಅಂದಹಾಗೆ ನಿರೂಪಕಿ ಝನೈಬ್ ಅಬ್ಬಾಸ್ ಪಾಕಿಸ್ತಾನದ ದುನಿಯಾ ನ್ಯೂಸ್ ಸುದ್ದಿ ವಾಹಿನಿಯ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.