ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಐಪಿಎಲ್ ಇತಿಹಾಸದಲ್ಲೇ ವೇಗದ ಅರ್ಧಶತಕ ಭಾನುವಾರ ದಾಖಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಸುನಿಲ್ ನರೇನ್ ತಮ್ಮ ಸ್ಫೋಟಕ ಆಟದ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 15 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ನರಿನ್ ದಾಖಲೆ ಬರೆದಿದ್ದಾರೆ. ತಮ್ಮ ಇನ್ನಿಂಗ್ಸ್ ನಾಲ್ಕು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್ ಗಳ ಮೂಲಕ ನರಿನ್ ಈ ಸಾಧನೆ ಮಾಡಿದ್ದಾರೆ. ಆ ಮೂಲಕ ಈ ಹಿಂದೆ ಇದೇ ತಂಡದ ಯೂಸುಫ್ ಫಠಾಣ್ ನಿರ್ಮಿಸಿದ್ದ ವೇಗದ ಅರ್ಧಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ.
2014ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಯೂಸುಫ್ ಪಠಾಣ್ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.
ಇಂದಿನ ಪಂದ್ಯದಲ್ಲಿ ಕ್ರಿಸ್ ಲಿನ್ ಜೊತೆಗೂಡಿ ನರಿನ್ ಬರೊಬ್ಬರಿ 105 ರನ್ ಗಳ ಗೆಲುವಿನ ಜೊತೆಯಾಟ ನೀಡಿದ್ದರು. ಕೋಲ್ಕತಾ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿ ಮಿಂಚುತ್ತಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಸುನಿಲ್ ನರಿನ್ ಇದೀಗ ಕೋಲ್ಕತಾ ತಂಡದ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿದ್ದಾರೆ.