ಲಾಹೋರ್: ಪಾಕಿಸ್ತಾನ ಮತ್ತು ಟೀಂ ಇಂಡಿಯಾ ನಡುವಿನ ದ್ವಿಪಕ್ಷೀಯ ಸರಣಿಗಳು ನಡೆದು ಹಲವು ವರ್ಷಗಳೆ ಕಳೆದು ಹೋಗಿದ್ದು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸರಣಿಯನ್ನು ಆಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೇಲೆ ಒತ್ತಡ ಹೇರುವ ಶಕ್ತಿ ಐಸಿಸಿಗೆ ಇಲ್ಲ ಎಂದು ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಂ ಬೇಸರ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ಯುವ ಕ್ರಿಕೆಟಿಗರು ಪರಸ್ಪರ ಆಡಲು ಸಾಧ್ಯವಾಗಿಲ್ಲ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು ಎಂದು ಸ್ವಿಂಗ್ ಆಫ್ ಸುಲ್ತಾನ್ ಖ್ಯಾತಿಯ ವಾಸೀಂ ಅಕ್ರಂ ಹೇಳಿದ್ದಾರೆ.
ಬಿಸಿಸಿಐ ಮೇಲೆ ಒತ್ತಡ ಹೇರುವ ಶಕ್ತಿ ಐಸಿಸಿಗೆ ಇಲ್ಲ ಎಂದು ನಾನು ಭಾವಿಸುತ್ತೇನೆ. ಜನರಿಂದ ಜನರಿಗೆ ಸಂಪರ್ಕ ಅಗತ್ಯ ಎಂದು ಮತ್ತೆ ನಾನು ಹೇಳುತ್ತಿದ್ದೇನೆ ಎಂದು 51 ವರ್ಷದ ಮಾಜಿ ಕ್ರಿಕೆಟಿಗ ಅಕ್ರಂ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಷಸ್ ಸರಣಿಗಿಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಹೆಚ್ಚು ರೋಮಾಂಚನಕಾರಿಯಾಗಿರುತ್ತದೆ. ಆ್ಯಷಸ್ ಸರಣಿಯನ್ನು ಇಪ್ಪತ್ತು ಮಿಲಿಯನ್ ಮಂದಿ ವೀಕ್ಷಿಸಿದರೇ ಅದೇ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯವನ್ನು ಬಿಲಿಯನ್ ಮಂದಿ ವೀಕ್ಷಿಸುತ್ತಾರೆ ಎಂದು ವಾಸೀಂ ಅಕ್ರಂ ಹೇಳಿದ್ದಾರೆ.