ಜೋಹನ್ಸ್ ಬರ್ಗ್: ನ್ಯೂವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾಗೆ ಗೆಲ್ಲಲು 290 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು. ಆರಂಭದಲ್ಲಿ ರೋಹಿತ್ ಶರ್ಮಾ ಕೇವಲ 5 ರನ್ ಗೆ ಔಟ್ ಆದಾಗ ಭಾರತ ತಂಡ ಆರಂಭಿಕ ಆಘಾತ ಎದುರಿಸಿತಾದರೂ, ಬಳಿಕ ಕೊಹ್ಲಿ ಜೊತೆ ಗೂಡಿದ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಧವನ್ ಶತಕ ಗಳಿಸಿದರೆ, ಕೊಹ್ಲಿ ಅರ್ಧಶತಕ ಗಳಿಸಿದರು. 174 ರನ್ ಗಳ ಭರ್ಜರಿ ಜೊತೆಯಾಟ ವಾಡಿದ ಈ ಜೋಡಿಯನ್ನು ಕ್ರಿಸ್ ಮಾರಿಸ್ ಬೇರ್ಪಡಿಸಿದರು. 75 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿ ಮಾರಿಸ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಧವನ್ ಕೂಡ 109 ರನ್ ಗಳಿಸಿ ಔಟ್ ಆದರು.
ಧವನ್ ಔಟ್ ಆಗುತ್ತಿದ್ದಂತೆಯೇ ಭಾರತ ತಂಡದ ಮಧ್ಯಮ ಕ್ರಮಾಂಕ ಕುಸಿಯ ತೊಡಗಿತು. ರಹಾನೆ 8 ರನ್ ಗೆ ಔಟ್ ಆದರೆ, ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಹಾರ್ದಿಕ್ ಪಾಂಡ್ಯಾ ಉತ್ತಮ ಹೊಡೆತಗಳಿಂದ ಭರವಸೆ ಮೂಡಿಸಿದ್ದರಾದರೂ ಆಫ್ರಿಕಾ ನಾಯಕ ಮರ್ಕಾಮ್ ಹಿಡಿದ ಅದ್ಬುತ ಕ್ಯಾಚ್ ಗೆ ಪಾಂಡ್ಯಾ ಬಲಿಯಾದರು. ಈ ಹಂತದಲ್ಲಿ ಧೋನಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂತಿಮ ಓವರ್ ನಲ್ಲಿ ಭುವಿ ರನೌಟ್ ಆದರು. ಆ ಮೂಲಕ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 289 ರನ್ ಕಲೆ ಹಾಕಿತು. 42 ರನ್ ಗಳಿಸಿದ ಧೋನಿ ಅಜೇಯರಾಗಿ ಉಳಿದಿದ್ದರು.
ಆಫ್ರಿಕಾ ಪರ ರಬಾಡಾ ಮತ್ತು ನ್ಗಿಡಿ ತಲಾ 2 ವಿಕೆಟ್ ಪಡೆದರೆ, ಮಾರ್ಕೆಲ್ ಮತ್ತು ಮಾರಿಸ್ ತಲಾ ಒಂದು ವಿಕೆಟ್ ಪಡೆದರು.
6 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ ತಂಡ 3-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು,ಈ ಪಂದ್ಯವನ್ನೂ ಗೆದ್ದರೆ ಸರಣಿ ಭಾರತದ ಕೈವಶವಾಗಲಿದೆ. ಆಫ್ರಿಕಾ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು, ಸರಣಿ ಜೀವಂತವಾಗಿರಿಸಿಕೊಳ್ಳಲು ಉಳಿದ ಮೂರೂ ಪಂದ್ಯಗಳನ್ನೂ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.