ಗೆಲುವಿನ ಸಂಭ್ರಮದಲ್ಲಿ ಆಫ್ರಿಕ
ಜೋಹನ್ಸ್ ಬರ್ಗ್: ನ್ಯೂವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ 5 ವಿಕೆಟ್ ಗಳ ಅಂತರದ ಜಯ ದಾಖಲಿಸಿದೆ.
ಮಳೆಯಿಂದಾಗಿ ಕೇವಲ 28 ಓವರ್ ಗಳಿಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ಆಫ್ರಿಕಾಗೆ ಗೆಲ್ಲಲು 28 ಓವರ್ ಗಳಲ್ಲಿ 202 ರನ್ ಗಳ ಗುರಿಯನ್ನು ನೀಡಲಾಗಿತ್ತು, ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಆಫ್ರಿಕಾ 25.3 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿ ಸರಣಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು, ಆಫ್ರಿಕಾ ಪರ ಹೆನ್ರಿಕ್ ಕ್ಲಾಸನ್ ಅಜೇಯ 43 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇನ್ನು ಭಾರತದ ಪರ ಕುಲದೀಪ್ ಯಾದವ್ 2 ವಿಕೆಟ್, ಚಾಹಲ್, ಪಾಂಡ್ಯಾ ಮತ್ತು ಬುಮ್ರಾ ತಲಾ 1 ವಿಕೆಟ್ ಪಡೆದರು.
6 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ ತಂಡ 3-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಮುಂದಿನ 2 ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಸರಣಿ ಭಾರತದ ಕೈವಶವಾಗಲಿದೆ. ಹೀಗಾಗಿ ಸರಣಿ ಜೀವಂತವಾಗಿರಿಸಿಕೊಳ್ಳಲು ಉಳಿದ ಎರಡೂ ಪಂದ್ಯಗಳನ್ನೂ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಆಫ್ರಿಕಾ ಸಿಲುಕಿದೆ.